Sunday, 5 February 2017

ಶ್ರೀ ಮಧ್ವಾಚಾರ್ಯರು

ಮುಖ್ಯಪ್ರಾಣದೇವರು ತಮ್ಮ ಮೂರನೇಯ ಆವತಾರವಾದ ಮಧ್ವರೂಪದ ಸಮಾಪ್ತಿಯ ದಿನ ಇಂದು ಅದುವೇ "ಮಧ್ವನವಮೀ" ಮಹೋತ್ಸವ.ನಮ್ಮೆಲ್ಲರ ಪಾಲಿಗೆ ಮಹಾ ಸುದಿನ. ಶ್ರೀಮದಾಚಾರ್ಯರ ಅವತಾರ "ವಿಜಯದಶಮೀ" ಆದರೆ, ಅವತಾರದ ಸಮಾಪ್ತಿ ಮಧ್ವ ನವಮೀ.

ಕೆಲವರು ಹುಟ್ಟಿ ಸತ್ತರೂ ಅವರ ಜೊತೆಗೆ ಅವರೂ ಮತ್ತು ಅವರ ಹೆಸರೂ ಎರಡೂ ಸತ್ತು ಹೋಗಿರುತ್ತದೆ. ಮತ್ತೆ ಕೆಲವರು ಸತ್ತಮೇಲೆ ಕಥೆಯಾಗಿ ಉಳಿದಿರುತ್ತಾರೆ. ಆದರೆ ಮಹಾನುಭಾವರು ಹುಟ್ಟುವದಕ್ಕೂ ಮುಂಚೆಯೇ ಕಥೆಯಾಗಿರುತ್ತಾರೆ. ಹುಟ್ಟಿದಮೆಲೆ ಜ್ಞಾನ, ವಾಕ್ಯಾರ್ಥ, ಪರವಾದಿ ನಿಗ್ರಹ, ಸ್ವಮತ ಸ್ಥಾಪನ , ಶಾಸ್ತ್ರರಚನ, ದುಷ್ಟನಿಗ್ರಹ, ದೀನರ ಉದ್ಧಾರ, ಮುಂತಾದ  ಮಾಹಾತ್ಮ್ಯಾತಿಶಯಗಳೊಂದಿಗೆ ಇರುತ್ತಾರೆ. ಅವತಾರ ಮುಗಿದಮೇಲೆಯೂ ತಮ್ಮ ಆದರ್ಶ, ಸಿದ್ಧಾಂತ, ಸನ್ಮಾರ್ಗಪುಣ್ಯವನ್ನುಳಿಸಿ ಅನುಗ್ರಹ ಮಾಡ್ತಾನೇ ಇರುತ್ತಾರೆ.

ಋಷಿ ಮುನಿಗಳ ಪ್ರಾರ್ಥನೆಗೆ ಓಗೊಟ್ಟ ಕರುಣಾಮಯಿ ನಾರಾಯಣ ವಾಯುದೇವರಿಗೆ ಆಜ್ಙಾಪಿಸುತ್ತಾನೆ ನೀವು ಭುವಿಗೆ ಅವತರಿಸಿ ಅನುಗ್ರಹಿಸಿ ಎಂದು. ರುದ್ರೇಂದ್ರಾದಿಗಳೂ ಪ್ರಾರ್ಥಿಸುತ್ತಾರೆ. ದೇವರ ಆಜ್ಞೆ ಹಾಗೂ ದೇವತೆಗಳ ಪ್ರಾರ್ಥನೆಯನ್ನು ಸ್ವೀಕರಿಸಿದ ವಾಯುದೇವರು "ಕೇವಲ ಸ್ವಜನರಾದ ಮುಕ್ತಿಯೋಗ್ಯರಾದ ನಮ್ಮೆಲ್ಲರ ಮೇಲೆ ಅನುಗ್ರಹ ಮಾಡಬೇಕು ಎಂಬ ಉತ್ಕಟ ಅಪೇಕ್ಷೆಯೋಂದಿಗೆ" ಕರ್ಮ ಭೂಮಿಯಾದ ಭಾರತದೇಶದಲ್ಲಿ ,ಪಾಜಕ ಕ್ಷೇತ್ರದಲ್ಲಿ ಅವತರಿಸಿ ಬರುತ್ತಾರೆ.

ವಾಯುದೇವನಾಗಿ ಅವತಾರ ಮಾಡಿದ ತರುವಾಯ ಕೇವಲ ಎಂಟು ವರ್ಷಗಳಿರುವಾಗ ಆಶ್ರಮ ಸ್ವೀಕಾರ ಮಾಡುತ್ತಾರೆ. "ಸರ್ವಮೂಲ" ಎಂದೇ ಪ್ರಸಿದ್ಧವಾದ (ಸೂತ್ರಪ್ರಸ್ಥಾನ, ಗೀತಾ ಪ್ರಸ್ಥಾನ, ಪುರಾಣ ಪ್ರಸ್ಥಾನ, ಉಪನಿಷತ್ಪ್ರಸ್ಥಾನ, ಪ್ರಕರಣಗ್ರಂಥಗಳು, ಸಂಕೀರ್ಣಗ್ರಂಥಗಳು, ಋಗ್ಭಾಷ್ಯ ಕರ್ಮನಿರ್ಣಯ, ತಂತ್ರಸಾರ)  ಸಚ್ಚಾಸ್ತ್ರಗಳನ್ನು ರಚನೆ ಮಾಡುತ್ತಾರೆ.

ಇಪ್ಪತ್ತೊಂದು ಅಪವ್ಯಾಖ್ಯಾನವನ್ನು ನಿರಾಕರಣೆ ಮಾಡಿ ಬ್ರಹ್ಮಸೂತ್ರಗಳ ಸ್ಪಷ್ಟ ಅರ್ಥವನ್ನು ನಿರ್ಣಯಿಸಿ ಕೊಡುವ ಮುಖಾಂತರ ಎಲ್ಲಾ ದುರ್ಮತಗಳನ್ನೂ ಖಂಡನೆ ಮಾಡಿದ್ದಾರೆ. ಈ ಎಲ್ಲ ದುರ್ಮತಗಳೂ ಒಂದಿಲ್ಲ ಒಂದು ಮಾರ್ಗದಲ್ಲಿ ಅನಾದಿ ಇಂದ ಇದ್ದದ್ದೇ. ಅಂತೆಯೇ ಶ್ರೀಮದಾಚಾರ್ಯರೇ ಖಂಡಿಸಲು ಸಮರ್ಥರು. ಆದ ಕಾರಣ ಅವರ ಅವತಾರ ಅನಿವಾರ್ಯವೂ ಆಯಿತು.

ಅನಾದಿಕಾಲದಿಂದಲೂ ಇರುವ ಸತ್ಸಂಪ್ರದಾಯವನ್ನು ಅನೂಚಾನವಾಗಿ ತಿಳಿದವರು ವಾಯುದೇವರು ಮಾತ್ರ. ಆದ್ದರಿಂದಲೇ "ವೈಷ್ಣವ ಸಿದ್ಧಾಂತ, ದ್ವೈತಮತ, ಭೇದ, ತಾರತಮ್ಯ, ವಿಷ್ಣುಸರ್ವೋತ್ತಮತ್ವ, ವಾಯುಜೀವೋತ್ತಮತ್ವ, ಜಗತ್ಸತ್ಯತ್ವ, ಜೀವ ಸೃಷ್ಟಿ ಅನಾದಿ, ಕರ್ಮಸಿದ್ಧಾಂತ, ಮೋಕ್ಷ, ಮೋಕ್ಷದಲ್ಲಿ ಆನಂದ, ತಮಸ್ಸು,ತಮಸ್ಸಿನಲ್ಲಿ ದುಃಖ, ಕೃಮಿ ಕೀಟ ಪಶು ಪಕ್ಷಿಗಳಿಗೂ ಮೋಕ್ಷ,  " ಇವೆ ಮೊದಲಾದ ಅನಂತಾನಂತ ವಿಷಯಗಳನ್ನು ನಿರ್ಣಯಿಸಿಕೊಟ್ಟ ಭದ್ರಮಾರ್ಗವನ್ನು ಹಾಕಿಕೊಟ್ಟ ಮಹಾ ಕರುಣಾಮಯಿ.

ಅಂತೆಯೇ ನಮಗೆ ನಮ್ಮೆಲ್ಲರ ಆದಿಗುರುಗಳೂ ಆದ ಶ್ರೀಮದಾಚಾರ್ಯರು ಮಧ್ವಾಚಾರ್ಯರು ಪೂರ್ಣಪ್ರಜ್ಙರು  ಇತ್ಯಾದಿ ನಾಮಗಳಿಂದ ಪ್ರಸಿದ್ಧಾರಾದ ಶ್ರೀಮದಾಚಾರ್ಯರೇ "ಜನುಮ ಜನುಮಕ್ಕೂ ನಮ್ಮ ಗುರುಗಳಾಗಿಯೇ ದೊರೆಯಲಿ" ಎಂದು ಹನುಮ ಭೀಮ ಮಧ್ವಾಂತರ್ಯಾಮಿ ಅನಂತಗುಣ, ರೂಪ, ಕ್ರಿಯಾತ್ಮಕ ಅನಂತ ದಯಾ ಕ್ಷಮಾ ಕೃಪಾರೂಪ ಶ್ರೀಮನ್ನಾರಾಯಣನಲ್ಲಿ ಪ್ರಾರ್ಥಿಸೋಣ.....

"ಆಚಾರ್ಯಾಃ ಶ್ರೀಮದಾಚಾರ್ಯಾಃ ಸಂತು ಜನ್ಮನಿ ಜನ್ಮನಿ........"..
"ಜಯತಿ ನಾರಾಯಣ ಸೂನುಃ"

(Contributed by Dr Manjunath Gururaja - Bannanje Balaga)

ಶ್ರೀಮಧ್ವಾಚಾರ್ಯರ ನವಮೀ ಯಾತ್ರೆ

ವಿಶ್ವಗುರು ಶ್ರೀ ಮಧ್ವಾಚಾರ್ಯರನ್ನು ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ಮೊದಲ ಬಾರಿ ಕಂಡಾಗ, ಅವರ ದ್ವಾತ್ರಿಂಶತ್ ಲಕ್ಷಣೋಪೇತವಾದ ದೇಹದ ಮೈಕಟ್ಟು, ಮೇರು ಸದೃಶ ವ್ಯಕ್ತಿತ್ವ , ಅಂದರೆ ಸಾವಿರಾರು ಜನರ ಮಧ್ಯದಲ್ಲಿ ಮಧ್ವಾಚಾರ್ಯರು ನಡೆದು ಬರುತ್ತಿದ್ದರೂ ಗುರುತಿಸಬಹುದಾದ, ಅವರ ಎತ್ತರ,(ಏಳೆಂಟು ಅಡಿ ಎತ್ತರದ ದೇಹವನ್ನು ಮಧ್ವಾಚಾರ್ಯರು ಹೊಂದಿದ್ದರು ಅನ್ನುತ್ತಾರೆ ನಾರಾಯಣ ಪಂಡಿತಾಚಾರ್ಯರು) ಆ ದೇಹದಲ್ಲಿ ತುಂಬಿದ ಕಾಂತಿ, ಜ್ಞಾನದ ವರ್ಚಸ್ಸು ಇವುಗಳನ್ನು ಕಂಡು ಶ್ರೀಮಧ್ವಾಚಾರ್ಯರನ್ನು ಕಬೆನಾಡಿಗೆ ಕರೆತಂದ ಮಹಾರಾಜನನ್ನು ಕುರಿತು ಹೇಳುತ್ತಾ ಆಚಾರ್ಯಮಧ್ವರನ್ನು ಸ್ವಾಗತಿಸುವಾಗ ತ್ರಿವಿಕ್ರಮಪಂಡಿತರ ವದನದಿಂದ ತನ್ನಷ್ಟಕ್ಕೇ ಬಂದ ಉದ್ಗಾರ ನಮ್ಮ ಮೈನವಿರೇಳಿಸುತ್ತದೆ. ಯಾರನ್ನೇ ಆದರೂ ಪುಳಕಿತಗೊಳಿಸುತ್ತದೆ :

ಸ್ಚಃಸುಂದರೀಭುಜಲತಾಪರಿರಂಭಣೀ ಧೂಃ
ಪೌರಂದರೀ ಭವತಿ ಯಂ ಭಜತಾಂ ಭುಜಿಷ್ಯಾ|
ಆನಂದತೀರ್ಥಭಗವತ್ ಪದಪದ್ಮರೇಣುಃ
ಸ್ವಾನಂದದೋ ಭವತು ತೇ ಜಯಸಿಂಹ ಭೂಪ || 

"ಅಪ್ಸರೆಯರ ತೋಳ್ಬಳ್ಳಿಯ ಬಿಗಿಯಪ್ಪುಗೆಯ ವೈಭವದ ಇಂದ್ರಪದವಿ ಕೂಡ ಆಚಾರ್ಯರ ಪಾದಧೂಳಿಯನ್ನು ಸೇವಿಸುವವರ ಕಾಲಾಳು. ಆನಂದತೀರ್ಥಭಗವತ್ಪಾದರ ಅಂಥ ಮಹಿಮೆಯ ಪಾದಧೂಳಿ, ಓ ಜಯಸಿಂಹ ದೊರೆಯೆ, ನಿನಗೂ ಹಿರಿದಾದ ಆನಂದವನ್ನೀಯಲಿ"...

ಇಂಥಹ ಮಹಾನ್ ವ್ಯಕ್ತಿತ್ವ  ಎಪ್ಪತ್ತೊಂಭತ್ತು ವರ್ಷಗಳ ಕಾಲ ನಿರಂತರ ಜ್ಞಾನಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿತ್ಯಭಗವಂತನ ಆರಾಧನೆ ನಡೆಯುವಂತೆ ಉಡುಪಿಯಲ್ಲಿ ಕೃಷ್ಣಮೂರ್ತಿಯನ್ನು ಪ್ರತಿಷ್ಟಾಪಿಸಿ, ಪೂಜಾಕೈಂಕರ್ಯಗಳನ್ನು ನಡೆಸಿಕೊಂಡು, ಜ್ಞಾನಪ್ರಸಾರ ಮಾಡಿಕೊಂಡು ಹೋಗುವಂತೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿ, ಅದರ ಜವಾಬ್ದಾರಿಗಳನ್ನು ತಮ್ಮ ಎಂಟುಮಂದಿ ಸನ್ಯಾಸಿ ಶಿಷ್ಯರಿಗೆ ಒಪ್ಪಿಸಿ, ಒಂದು ದಿನ ಯಾರಿಗೂ ಹೇಳದೆ (ಚೀಟಿ ಬರೆದಿಟ್ಟು) ತಾವು ಒಬ್ಬಂಟಿಯಾಗಿ ಬದರಿಗೆ ತೆರಳಿದರು... "ಪಿಂಗಳಾಬ್ದೇ ಮಾಘಶುದ್ಧನವಮ್ಯಾಂ ಬದರೀಂ ಯಯೌ"...

ಹೀಗೆ ಅವರು ನಮ್ಮನ್ನು ಬಿಟ್ಟು ಹೋಗಿ ಇಂದಿಗೆ ಸರಿಯಾಗಿ ಏಳುನೂರು ವರ್ಷಗಳು ಸಂದಿರುವ ದಿನವಿದು... ಒಂದು ರೀತಿಯಿಂದ ದುಃಖದ ಸಂಗತಿಯಾದರೂ ಅವರು ಕೊಟ್ಟು ಹೋಗಿರುವ ಅಪರಂಪಾರವಾದ ಜ್ಞಾನರಾಶಿಯಿಂದ ಅವರು ನಮ್ಮೊಟ್ಟಿಗೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲೂ ಮೂಡುವಂತೆ ಮಾಡಿದೆ...

ಶ್ರೀವಾದಿರಾಜತೀರ್ಥರು ಹೇಳಿದ ಮಾತು ಇದನ್ನು ಸ್ಪಷ್ಟಪಡಿಸುತ್ತದೆ -
"ಅದೃಶ್ಯೋ  ರೂಪ್ಯಪೀಠೇsಸ್ತಿ ದೃಶ್ಯೋsಸ್ತಿ ಬದರೀತಳೇ"...
ಆಚಾರ್ಯಮಧ್ವರು ಉಡುಪಿಯ ಅನಂತೇಶ್ವರದಲ್ಲಿ ಅದೃಶ್ಯರಾಗಿ, ಅಂದರೆ ನಮ್ಮ ಕಣ್ಣಿಗೆ ಕಾಣಿಸದೆ ಇಂದಿಗೂ ಇದ್ದಾರೆ, ಬದರಿಯಲ್ಲಿ ದೃಶ್ಯರಾಗಿ, ಅಂದರೆ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ".... ಆದರೆ ಕಾಣುವ ಕಣ್ಣನ್ನು ಅವರೆ ದಯಪಾಲಿಸಬೇಕಷ್ಟೇ...

(Write up by Shri Harish B.S. - Bannanje Balaga

ವಿಶ್ವಮತ ಕೊಟ್ಟ ವಿಶ್ವಗುರು - “ತ್ರಿವೇಣಿ ತನಯ”

ವಿಶ್ವಮತ ಕೊಟ್ಟ ಏಕೈಕ ವಿಶ್ವಗುರು ಮಧ್ವಾಚಾರ್ಯ,
ಧಾರ್ಮಿಕ ವೈಜ್ಞಾನಿಕ ಸಮ್ಮತ ಸೂತ್ರ ಕೊಟ್ಟ ಆರ್ಯ,
ಸಕಲ ಚೇತನ ಜಡ ಸರ್ವಾಂತರ್ಯಾಮಿ ಭಗವಂತನೆಂದ,
ಸಕಲ ಚರಾಚರ ವಸ್ತು ನಾದ ವೇದಗಳು ಅವನ ನಾಮವೆಂದ,
ದೇವತೆಗಳು ಅನೇಕ ನಿಯಾಮಕ ದೇವ ಒಬ್ಬನೇ ಎಂದ,
ಯಾರನ್ನೇ ಪೂಜಿಸು ಎಲ್ಲರಂತರ್ಯಾಮಿ ನಾರಾಯಣನೆಂದ,
ಭಗವದ್ ಹಿರಿಮೆ ನಮ್ಮ ಸೀಮೆ ಅರಿತು ಬಾಳಿದರೆ ಭೂಮಿ ನಾಕ,
ಅಜ್ಞಾನದ ಬೇಲಿಕಟ್ಟಿಕೊಂಡು ನಾವು ಮಾಡಿಕೊಂಡಿದ್ದೇವೆ ನರಕ.

ಮೊದಲೆರಡು ಅವತಾರಗಳಲ್ಲಿ ಶಕ್ತಿ ಜ್ಞಾನಗಳ ಮೇಳ,
ಮೂರನೆಯದಾದರೋ ಜ್ಞಾನ ಪ್ರಸಾರದ್ದೇ ಆಳ,
ವ್ಯಾಸಪೂಜೆಗೆಂದೇ ಅವತರಿಸಿದ ಶ್ರಿಮದಾಚಾರ್ಯ,
ಇಪ್ಪತ್ತೊಂದು ತರಿದು ತತ್ವವಾದ ಕೊಟ್ಟ ಮಧ್ವಾಚಾರ್ಯ.

ಪಾಜಕದಲಿ ಅವತರಿಸಿದ ದಶಪ್ರಮತಿ,
ಕುಮತಗಳ ಖಂಡಿಸಿದ ಪೂರ್ಣಪ್ರಮತಿ,
ಸಹಜ ಸರ್ವಕಾಲಿಕ ಸಿದ್ಧಾಂತ ಎತ್ತಿ ತೋರಿದ,
ಶಿಸ್ತಿನಿಂದ ವ್ಯಾಸಪೂಜೆ ಸಲ್ಲಿಸಿ ಕೃಷ್ಣಾರ್ಪಣವೆಂದ.

ಪಾಜಕದಲ್ಲಿ ಉದಯಿಸಿತು ನಿಜಜ್ಞಾನ ಸೂರ್ಯ,
ಆಮೇಲೆ ಕರೆಸಿಕೊಂಡಿದ್ದು ಶ್ರೀಮಧ್ವಾಚಾರ್ಯ,
ಹೆತ್ತವರಿಟ್ಟ ಹೆಸರದು  ವಾಸುದೇವ,
ಹನುಮ ಭೀಮರ ನಂತರ ಬಂದ ಪ್ರಾಣದೇವ.

ಬಾಲ್ಯದಿಂದಲೇ ತೋರಿದ ಅನೇಕ ವಿಸ್ಮಯಗಳ,
ತಂದೆ ತಾಯಿಗಳಿಗೆ ಏನೋ ವಿಚಿತ್ರ ಕಳವಳ,
ಆಡಾಡುತಲೇ ನಿವಾರಿಸಿದ ಮಾಯಾವಾದದ ಗೊಂದಲ,
ನೈಜ ಸಾಧಕರಿಗೆ ತಿಳಿಸಿ ತೋರಿದ ನಿಜ ಹಂಬಲ.

ಪಂಚಭೇದಗಳ ಪ್ರಪಂಚದಲಿ ಎಲ್ಲವೂ ಒಂದಲ್ಲವೆಂದ,
ಒಂದರಂತೆ ಒಂದಿಲ್ಲ ಅದೇ ಸೃಷ್ಟಿಯ ನಿಯಮ ನೋಡೆಂದ,
ತತ್ವವಾದದ ತಾರತಮ್ಯವ ತಿಳಿಸಿ ದಾರಿ ತೋರಿದ ಧೀರ,
ಜಗದ ಮಾತಾಪಿತರ ಪ್ರೀತಿಪಾತ್ರ ನಿರವದ್ಯ ಕುಮಾರ.

ಸಮ ಯಾರೋ ಮಧ್ವಮುನಿರಾಯಾ,
ಸಚ್ಛಾಸ್ತ್ರ ತೋರಿದ ಯತಿ ಮಹರಾಯ,
ಸತ್ಯ ಜಗದೊಳಿಹ ನಿತ್ಯಭೇದವ ತೋರಿದೆ,
ಸಮಸ್ತವೂ ಸತ್ಯಸಂಕಲ್ಪನ ಅಧೀನವೆಂದೆ.

ಮಧ್ವರವತಾರದಿಂದ ಪರಕಾಶಿಸಿತು ಬಾನು,
ಸಾಧಕರಿಗೆ ತತ್ವವಾದವಿತ್ತ ಸುರ ಕಾಮಧೇನು,
ಅತಂತ್ರವಾದಗಳ ಕತ್ತಲೆ ಓಡಿಸಿದ ಏಕೈಕ ಧೀರ,
ಲಕ್ಷ್ಮೀನಾರಾಯಣರ ಅಚ್ಚುಮೆಚ್ಚಿನ ಪ್ರಿಯ ಕುವರ.

ಹನುಮನೆತ್ತರಕೆ ಏರಿ ಹಾರಿದವರುಂಟೇ,
ಜೀವೋತ್ತಮನೆಂದು ಭೀಮ ಬಡಿದ ಗಂಟೆ,
ಮಧ್ವರಾಗಿ ಬಂದು ತತ್ವವಾದ ಕೊಟ್ಟದ್ದು ಇತಿಹಾಸ,
ಬೆಂಬಿಡದೆ ಅನುಸರಿಸುತಿರುವ ನಂದಿತೀರ್ಥರ ರಾಯಸ.

ಮಧ್ವನವಮಿಯಸಂಭ್ರಮ,

ಅರ್ಪಿತ ನವ ಪದ್ಯ ಸುಮ.


(Contributed by Shri Govind Magal - Bannanje Balaga)