Showing posts with label ಭಾವ ಸ್ಪಂದನ. Show all posts
Showing posts with label ಭಾವ ಸ್ಪಂದನ. Show all posts

Sunday, 12 November 2017

Bhava Spandana - 30

ಭಾವ ಸ್ಪಂದನ by “ತ್ರಿವೇಣಿ ತನಯ

ಅಸ್ಥಿರ -ಸ್ಥಿರ

ಅಶಾಶ್ವತವಿದು ಲೋಕದಾ ಜೀವನ,
ಅಂತೆಯೇ ಧನ ಮತ್ತು ಯೌವ್ವನ,
ಸತಿ ಸುತ ಬಾಂಧವರು ಸ್ಥಿರವಲ್ಲ,
ಸನ್ಮಾರ್ಗ ಸನ್ನಡತೆ ಕೈ ಬಿಡುವುದಿಲ್ಲ.

ಸಂತೆ -ಚಿಂತೆ

ಎಂದಿದ್ದರೂ ಇದು ಗಂಟು ಕಟ್ಟೇಳುವ ಸಂತೆ,
ಬೆಂಬಿಡದ ತೊಳಲಾಟ ಬಗೆಹರಿಯದ ಚಿಂತೆ,
ಬಂಧನಕ್ಕೆ ಹಾಕುವ ಮರುಳು ನೆಂಟಿನ ಅಂಟು,
ತಪ್ಪದೇ ಕಟ್ಟಿಕೋ ನಿಜ ಅಧ್ಯಾತ್ಮಜ್ಞಾನದ ಗಂಟು.

ಬೇಡ -ಮುಖವಾಡ

ಬಿಡಿಸಿಕೊಳ್ಳಲಾಗದ ಮುಖವಾಡಗಳ ಗಲಿಬಿಲಿ,
ಹಸುಮುಖದೊಳಗೆ ಘರ್ಜಿಸುವ ಕ್ರೂರ ಹುಲಿ,
ಹುಲಿಮುಖದೊಳಗೆ ತ್ರಾಣವಿರದ ಇಲಿ,
ಬೆತ್ತಲಾಗರು ಯಾರೂ ಇಲ್ಲಿ ಕಟುಸತ್ಯ ತಿಳಿ.

ನಾಟಕದಂಕ -ಒಣಬಿಂಕ

ಯಾರ ನೋಡಿದರೂ ಅರ್ಥವಿರದ ಒಣ ಬಿಂಕ,
ಕ್ಷಣ ಕ್ಷಣಕೂ ಹೊಸದೊಂದು ನಾಟಕದ ಅಂಕ,
ಇಷ್ಟೆಲ್ಲಾ ಮಾಡುತ ಜೀವ ಸಾಧಿಸುವದೇನು?
ಕಣ್ಮುಚ್ಚಿ ತನ್ನ ತಾ ಕಂಡುಕೊಳ್ಳಲು ಆಗದವನು!

ವ್ಯಾಪಾರ -ಲೆಕ್ಕಾಚಾರ

ಬೆಳಗಾಯಿತೆಂದರೆ ಶುರು ವ್ಯಾಪಾರ ,
ಕೊಟ್ಟರೆ ಏನು ಬರುವುದೆಂಬ ಲೆಕ್ಕಾಚಾರ,
ಕೊಡಲು ಮೊದಲು ನಿನ್ನದೆಂದೇನಿದೆ?
ತೆಗೆದುಕೊಳ್ಳುವರಲ್ಲಿ ಅವರದೇನಿದೆ?
ಎಲ್ಲರೂ ಇರುವುದೇ ನಮ್ನಮ್ಮ ಜೈಲಲ್ಲಿ!
ಹೊರಡುವುದು ಸರಕಿಡದ ವಿಮಾನದಲ್ಲಿ!
ಅಲ್ಲಿ ಯಾವ ಸಾಮಾನೂ ಸೇರಿಸುವುದಿಲ್ಲ,
ಜಮಾ ಖರ್ಚುಗಳ ಲೆಕ್ಕ ಮೇಲೆ ಇರುತ್ತದೆಯೆಲ್ಲ!
[Contributed by Shri Govind Magal]

Friday, 3 November 2017

Bhava Spandana - 29

ಭಾವ ಸ್ಪಂದನ by “ತ್ರಿವೇಣಿ ತನಯ

ಮಾಲಿನ್ಯ -ಸ್ವಭಾವಜನ್ಯ 

ತಡೆಯಬಹುದು ಶಬ್ಧ ಮಾಲಿನ್ಯ,
ತಗ್ಗಿಸಬಹುದು ವಾಯು ಮಾಲಿನ್ಯ,
ನಿಯಂತ್ರಿಸಬಹುದೇ ಮನದ ಮಾಲಿನ್ಯ?
ಕಷ್ಟವೇನೋ;ಅದಾಗಿದ್ದರೆ ಸ್ವಭಾವಜನ್ಯ!

ಅಧಮ-ಮಧ್ಯಮ-ಉತ್ತಮ

ಹರಿಕಾರುಣ್ಯದಿ ಸೃಷ್ಟಿಗೆ ಬಂದೆಲ್ಲಾ ಜೀವಗಳು-ಪ್ರತಿಬಿಂಬ,
ಎಲ್ಲರೊಳು ನಿಂತಾಡುವ ಒಬ್ಬನೇ ಭಗವಂತ -ತಾ ಬಿಂಬ,
ಅಧಮ ಜೀವನಾದವ ಇದ್ಯಾವುದನೂ ನಂಬ,
ಮಧ್ಯಮನು ಒಳ್ಳೆಯದಕೆ ಮಾತ್ರ ಭಗವಂತನೆಂಬ,
ಉತ್ತಮ ಜೀವನು ಸರ್ವತ್ರ ಸರ್ವರಲಿ ಬಿಂಬನ ಕಾಂಬ,
ಯೋಗ್ಯತಾನುಸಾರ ಅನುಭವ ಕೊಡುವ ಅವ ಬಿಂಬ.

ಸ್ವಭಾವಗಳ ಅನಾವರಣ

ಎನಿತು ಚಂದ ಭಗವಂತ ಮಾಡಿಸುವ ಜೀವಸ್ವಭಾವಗಳ ಅನಾವರಣ,
ಎಲ್ಲರಲ್ಲೂ ಅವರವರ ಸ್ವಭಾವದ ಮೆರೆವಣಿಗೆಯೇ ಮುಖ್ಯ ಹೂರಣ,
ಅಬ್ಬಬ್ಬಾ! ಯಾವ ಪರಿಯದು ಮಡಿ ಮೈಲಿಗೆಯ ಹುಚ್ಚು?
ಬಿಂಬಾನುಸಂಧಾನಕ್ಕಿಂತ ಮಡಿ ಮೈಲಿಗೆಯೇ ಒಂದು ಕೈ ಹೆಚ್ಚು!
ಎಂತಾದರೂ ಮಾಡಿಸು ಸ್ವಾಮೀ ಮನ ನಿನ್ನ ಮರೆಯದಿರಲಿ,
ಯಾರಲ್ಲಿ ಏನೇ ನಡೆದರೂ ನನ್ನ ಏಳಿಗೆಗೆ ಎಂಬ ಜ್ಞಾನ ಮೂಡಲಿ.

ಯಾವುದು ಪ್ರಧಾನ-ಸ್ವಭಾವವೇ ಮಾನ

ಅಧಮ ಜೀವಕೆ ಹಣ ಪ್ರಧಾನ,
ಮಧ್ಯಮಗೆ ಗೌರವ ಮತ್ತು ಧನ,
ಉತ್ತಮ ಬಯಸದಿದ್ದರೂ ಲಭ್ಯ ಗೌರವ,
ಫಲ ಸಿಗುವುದು ತಕ್ಕಂತೆ ಜೀವ ಸ್ವಭಾವ.
[Contributed by Shri Govind Magal]

Sunday, 29 October 2017

Bhava Spandana - 28

ಭಾವ ಸ್ಪಂದನ by “ತ್ರಿವೇಣಿ ತನಯ

ಭೂಷಣ -ಜ್ಞಾನದಾಭರಣ

ಎಲ್ಲಾ ಗೊತ್ತೆನ್ನುವ ಸ್ವಭಾವ ಸಂಕುಚಿತ,
ಗಮ್ಯವದರದು ಖಂಡಿತ ---ಪ್ರಪಾತ,
ಜ್ಞಾನವದು ಎಂದೂ ಮಾಸದ ಆಭರಣ,
ಸೋಸಿ ಕೇಳುವ ಕಿವಿಗಳಿರೆ ಭೂಷಣ.

ಭ್ರಮಾಧೀನರು

ಇಲ್ಲದ್ದನ್ನು ನಂಬುವ ನಾಸ್ತಿಕವಾದಿ ,
ಇರುವುದನ್ನು ಅನುಭವಿಸದ ಆಸ್ತಿಕವಾದಿ,
ಇಬ್ಬರೂ ನಾಟಕದ ಭ್ರಮೆಗೆ ಒಳಗಾದವರೇ,
ಒಳಗಣ್ಣು ತೆರೆಯದೆ ಹರಿಯದು ಭ್ರಮೆಯ ಪೊರೆ.

ಮುಚ್ಚಿಟ್ಟ ದೀಪ

ದೇವರು ಎಲ್ಲರೊಳಗಿರುವ ಮುಚ್ಚಿಟ್ಟ ದೀಪ,
ಅವನಿರದೇ ಜೀವ ಏನು ಮಾಡಬಲ್ಲದು ಪಾಪ,
ದೇಹವೇ ನಾನೆಂಬುವವಗೆ ತನ್ನರಿವೇ ಇಲ್ಲ,
ಅಂಥವಗೆ ಸಿಗಲಾರ ಅವ ಲಕುಮೀನಲ್ಲ.

ಸ್ವಭಾವದನಾವರಣ

ಇನ್ನೊಬ್ಬರ ತಪ್ಪುಗಳ ಹುಡುಕುವ ಬುದ್ಧಿವಂತ,
ತನ್ನ ದೋಷಗಳ ಮುಚ್ಚಿಡುವದೇ ಧಾವಂತ,
ಮುಚ್ಚುವುದು ಬಿಚ್ಚುವುದು ನೀನು ಮಾಡುತ್ತಿಲ್ಲ,
ಸ್ವಭಾವದ ಪ್ರದರ್ಷನ ಆಗುತಿದೆ ತಾನೇ ಎಲ್ಲ.

ಅಪಾತ್ರ ಕೊಡುಗೆ

ಸಾಗರದ ಮೇಲೆ ಸುರಿದ ಮಳೆ,
ತೃಪ್ತನಿಗೆ ಕೊಟ್ಟ ಆಹಾರದ ತೊಳೆ,
ಶ್ರೀಮಂತಗೆ ದೇಣಿಗೆ-ಹಗಲು ದೀವಟಿಗೆ,
ಎಲ್ಲವೂ ಅರ್ಥಹೀನ ಅಪಾತ್ರ ಕೊಡುಗೆ.
[Contributed by Shri Govind Magal]

Sunday, 22 October 2017

Bhava Spandana - 27

ಭಾವ ಸ್ಪಂದನ by “ತ್ರಿವೇಣಿ ತನಯ
ಅಂದು -ಇಂದು

ಅಪ್ಪ ಅಮ್ಮನ ಒಂದು ತೀಕ್ಷ್ಣ ನೋಟ,
ನಿಲ್ಲಿಸುತ್ತಿತ್ತು ನಮ್ಮ ತರ್ಲೆ ಚೇಷ್ಟೆ ಆಟ,
ಬಾಯಿಯೇ ಬಿಡದ ಒಂದು ಕಣ್ಣ ಸನ್ನೆ,
ನಡವಳಿಕೆಯ ರಥ ತಿರುಗಿಸುವ "ಸನ್ನೆ ".

ಮೌನ ನೋಟ -ತಿಳಿಸೋ ಪಾಠ

ಎಲ್ಲಿದೆ ಇಂದು ಮೌನ -ನೋಟಕೆ ಬೆಲೆ?
ಸತ್ತೇಹೋಗಿದೆ ಅರ್ಥಮಾಡ್ಕೊಳ್ಳೋ ಕಲೆ!
ಚಂದವಲ್ಲವೇ ಸೂಕ್ಷ್ಮ ಗ್ರಹಿಕೆ -ಸ್ಪಂದನ?
ನವನಾಗರೀಕತೆ ಕೊಂದಿದೆ ಸಂವಹನ!

ದೇವಯಾಗ -ಜೀವನ ಯೋಗ

ದೇವರ ಪೂಜೆಯೆಂದರೆ ದೇವರ ಕೋಣೆಯಲ್ಲಲ್ಲ,
ಅನುದಿನ ಕ್ಷಣದ ವ್ಯಾಪಾರ ಅವನದೇ ಎಲ್ಲ,
ಆ ಸ್ಮರಣೆ ಬರುತಿರಲು ಅಹಂ ಮಮ ನಾಶ,
ಅನುಭವಕ್ಕೆ ಬಂದಾನು ಮುಂದೊಮ್ಮೆ ಈಶ.

ಪ್ರತಿ ಆಟ -ಜೀವಕ್ಕೆ ಪಾಠ

ಪ್ರತಿ ಘಟನೆ ಪ್ರತಿ ತಿರುವು ಪ್ರತಿಯೊಂದು ಆಟ,
ದೇವ ನಿಂತು ಜೀವದುದ್ಧಾರಕ್ಕೆ ಕೊಡುವ ಪಾಠ,
ಏನೇ ಮಾಡಲು ಯಾವ ಜೀವ ಸ್ವತಂತ್ರ ಹೇಳು?
ನೀನು ಕಟ್ಟಿ ತಂದದ್ದೇ ಉಣಿಸುವ ಅವ ಕೇಳು!

ಗೊತ್ತೆಂಬ ಮತ್ತು -ತರುವುದಾಪತ್ತು

ಯಾರಿಗೇನೇ ಹೇಳು -ನನಗೆಲ್ಲಾ ಗೊತ್ತು,
ಜ್ಞಾನಿಗಳನ್ನೂ ಮೀರಿಸುವ ಭಾರೀ ಗತ್ತು,
ಸ್ವಂತ ಬುದ್ಧಿಯದು ಇಲ್ಲವೇ ಇಲ್ಲ,
ಇನ್ನೊಬ್ಬರ ಮಾತು ಕೇಳೋದೇ ಇಲ್ಲ.
[Contributed by Shri Govind Magal]

Wednesday, 18 October 2017

Bhava Spandana - 26

ಭಾವ ಸ್ಪಂದನ by “ತ್ರಿವೇಣಿ ತನಯ

ನಿತ್ಯಾನುಸಂಧಾನ

ವ್ಯವಹರಿಸೋ ಪ್ರತಿವ್ಯಕ್ತಿಯಲಿ ದೈವಶಕ್ತಿಯ ಕಾಣು,
ಎಲ್ಲಜೀವ ಜಡಗಳಂತೆ ನೀನೂ ಒಂದು ಅಸ್ವತಂತ್ರ ಅಣು,
ನೆನಪಿರಲಿ ಬದುಕಿನ ಎಲ್ಲಾ ನಡೆಗಳು ಪೂರ್ವನಿಯೋಜಿತ,
ಶಾರಣ್ಯದ ನಿರ್ಲಿಪ್ತ ಭಕ್ತಿ ಹರಿದಿರಲದು ಅಬಾಧಿತ.

ಪ್ರಶ್ನೆ ಉತ್ತರ -ಅವನ ಬಿತ್ತರ

ಕೊನೆತನಕ ಪ್ರಶ್ನೆಯಾಗುಳಿವವ ಭಗವಂತ,
ಪ್ರಶ್ನೆಯಾಗಿದ್ದೇ ಉತ್ತರ ಕರುಣಿಸುವ ಅನವರತ,
ಪ್ರಶ್ನೆಯೋ ಉತ್ತರವೋ ಹುಡುಕುವವರಿಗೆ ಲಭ್ಯ,
ಕರೆಯದಲೆ ಬರುವವನಲ್ಲ ಅವ ಭಾರೀ ಸಭ್ಯ!

ಹೊರಗೆ ಕಾಣ -ಒಳಗಿಹ ಜಾಣ

ಬಂದರೂ ಹೊರಗಣ್ಣಿಗೆಂದೂ ಕಾಣ,
ಗೋಚರ ಅನುಭವದ ಚಾಳೀಸಿಗೆ ಜಾಣ,
ಬಗೆಬಗೆಯ ವೇಷ ತೊಡುವ ಮಾಯಗಾ ,
ಮಣ್ಣಿಗೆ ತಕ್ಕಂಥ ಬೊಂಬೆ ಮಾಡುವ ಕುಂಬಾರ.

ಮಡಿ ಮೈಲಿಗೆ -ದೂರಾದ ಸಲಿಗ

ಅರ್ಥವಿರದ ಆಚಾರ ಮಡಿ ಮೈಲಿಗೆ,
ದೂರವಾಗಿದೆ ಮಾನವತ್ವದ ಸಲಿಗೆ,
ಮೈಲಿಗೆಯಾಗುವುದು ಮೈಯಲ್ಲ ಮನ,
ಸ್ವಚ್ಛವಿಡು ಮನ -ಅದು ದೇವಉದ್ಯಾನ.

ಸ್ಥಾನ ಮಾನ -ನೈತಿಕತೆಯ ಅವಸಾನ

ಎಲ್ಲಿ ಹೋಯ್ತು ಪ್ರೀತಿ ವಿಶ್ವಾಸ ಸಂಬಂಧ?
ಮಾಪನ ಯಾವುದದು ಅಳೆಯಲು ಅನುಬಂಧ?
ಮಡಿ ಮೈಲಿಗೆಗೆ ಸಾಮಾಜಿಕ ಸ್ಥಾನ ಮಾನ?
ನಾಟಕದಲ್ಲೇ ಆಗುತಿದೆ ಮಾನವತ್ವದ ಅವಸಾನ!


[Contributed by Shri Govind Magal]

Saturday, 14 October 2017

Bhava Spandana - 25

ಭಾವ ಸ್ಪಂದನ by “ತ್ರಿವೇಣಿ ತನಯ

ಶಾಖ ಪಾಕ -ನಾಕ ನರಕ

ಶಾಖದಿಂದ ಮನವಾಗಬೇಕು ಪಾಕ,
ಅದಾಗದಿದ್ದರೆ ಇಲ್ಲೂ ಮೇಲೂ ನರಕ,
ಎಂತಿದೆಯೋ ಅಂತೇ ಆಗುವುದು ಖಚಿತ,
ಕೃಷ್ಣಾರ್ಪಣವೆನುವ ನಿರ್ಲಿಪ್ತ ನಡೆಯದು ಉಚಿತ.

ಅವನದೇ ವ್ಯಾಪಾರ -ನಂಬಿದರೆ ಇಲ್ಲ ಭಾರ.

ಭಗವಂತನ ಮಾಡದಿರು ಕೆಲವಕ್ಕೆ ಸೀಮಿತ,
ಅವನಾದರೋ ಸರ್ವಕಾಲ ಸರ್ವತ್ರ ವ್ಯಾಪ್ತ,
ಎಲ್ಲ ನಡೆಗಳೂ ಅವನದೇ ವ್ಯಾಪಾರ,
ದೃಢಜ್ಞಾನವಿರೆ ಅವ ಹೊರುವ ಭಾರ.

ಅಳತೆಗೆ ಸಿಗದವ-ಸೆಳೆತಕ್ಕೆ ವಶನವ

ಯಾವ ಮಾಪನದಳತೆಗೂ ಸಿಗದವನು ಭಗವಂತ,
ಎಲ್ಲ ಗುಣಗಳ ಗಡಣ ಆನಂದಮಯ ನಿತ್ಯತೃಪ್ತ,
ಏನು ಮಾಡಬಲ್ಲದು ಜೀವ-ಎಲ್ಲವೂ ಅವನ ಕರುಣೆ,
ಕೊಡಲಿ ಅವನೀಶ ನಾ ದಾಸ ಎಂಬ ನಿಷ್ಠಿತ ಸ್ಮರಣೆ.

ತೆರೆದ ಮನಸ್ಸು -ಸಹಜ ತಪಸ್ಸು

ಹಸಿದವರಿಗೆ ಪ್ರೀತಿಯಲಿ ತಿನ್ನಿಸು,
ನೊಂದವರಿಗೆ ಸ್ನೇಹದಲಿ ನಗಿಸು,
ತೋರದಿರು ಯಾರಲೂ ಮುನಿಸು,
ಇದೊಂದೇ ಅವನೊಪ್ಪುವ ತಪಸ್ಸು.

ಸಹಜ ಯಾಗ -ಶುಭ ಯೋಗ

ಶ್ರೀಗಂಧಲೇಪನವದು ಹಿತ,
ಹುಣ್ಣಿಮೆಯ ಬೆಳಕದು ಹಿತ,
ಸಾಧು ಸಜ್ಜನರ ಸಹಯೋಗ,

ಎಲ್ಲಕ್ಕೂ ಮಿಗಿಲಾದ ಶುಭಯೋಗ.


[Contributed by Shri Govind Magal]

Wednesday, 11 October 2017

Bhava Spandana - 24

ಭಾವ ಸ್ಪಂದನ by “ತ್ರಿವೇಣಿ ತನಯ

ಸ್ವಗತ

ಮನ ನಾಲಿಗೆ ತಪ್ಪಿದರೆ ಸ್ತಿಮಿತ,
ಆಗಬಹುದು ನೋವಿನ ಅನಾಹುತ,
ಹಿಡಿತ ಕೊಡು ಮನ ನಾಲಿಗೆ ಮೇಲೆ,
ಹಿತ ನೀಡುತಿರಲಿ ನೀನಾಡಿಸೋ ಲೀಲೆ.

ಕಾಣದ ಕರ್ಮ -ಜೀವನದ ಮರ್ಮ

ಪಾಪ ಪುಣ್ಯಗಳೂ ಕಣ್ಣಿಗೆ ಕಾಣುವುದಿಲ್ಲ,
ನಿತ್ಯಾನುಭವಗಳೂ ಕಣ್ಣಿಗೆ ಕಾಣುವುದಿಲ್ಲ,
ಅನುಭವಿಸಲೇ ಬೇಕು ಇದ್ದಂತೆ ಕರ್ಮ,
ಕಾಣದಿರುವುದೇ ಹೆಚ್ಚು ಜೀವನದ ಮರ್ಮ.

ಜೀವನದ ಒಡಲು -ಸಮ್ಮಿಶ್ರ ಕಡಲು

ಸಾಧ್ಯವಾದರೆ ನಗುತ ಪ್ರೀತಿಯ ಹಂಚು,
ಆಗದಿರು ಯಾರಿಗೂ ಬಾಣಲೆ ಹೆಂಚು,
ಏನಿದೆ ನಿನದೆಂದು ಇತರರಿಗೆ ಕೊಡಲು,
ಎಲ್ಲವೂ ಅವನಿತ್ತ ಸಮ್ಮಿಶ್ರ ಕಡಲು.

ವಂದನೀಯ -ನಿಂದನೀಯ

ಉದಾತ್ತ ವ್ಯಕ್ತಿಗಳು ಗುಣಗಳ ಗಡಣ,
ಮೂರ್ಖರ ಆಸ್ತಿಯದು ಬರೀ ದುರ್ಗುಣ,
ಒಬ್ಬನಾದರೂ ಸಜ್ಜನ ವಂದನೀಯ,
ಮೂರ್ಖರು ಸಾವಿರಿದ್ದರೂ ಹೇಯ.

ನಗೆಯ ಮಿಂಚು -ಜ್ಞಾನ ಹಂಚು

ಸ್ನೇಹ ಪ್ರೀತಿ ಜ್ಞಾನ ಹಂಚು,
ಆಗುವುದದು ಖಚಿತ ಹೆಚ್ಚು,
ಮುಚ್ಚಿಟ್ಟ ಸುಜ್ಞಾನದ ಪಾಲು,
ನಾಯಿ ಮೊಲೆಯಲ್ಲಿನ ಹಾಲು.
[Contributed by Shri Govind Magal]

Sunday, 8 October 2017

Bhava Spandana - 23

ನಿನ್ನೊಳಗೇ ನೀ ಮಾಣು-ಮನಗಾಣು .

ಕಾಣೋದೆಲ್ಲಾ ಸತ್ಯವಲ್ಲ ,
ಕಾಣದ್ದು ಎಲ್ಲಾ ಅಸತ್ಯವಲ್ಲ ,
ಕಾಣುವುದು ಕಣ್ಣಲ್ಲ ಒಳಮನಸು ,
ಅವಧೂತರಿತ್ತ ಅಧ್ಯಾತ್ಮ ತಿನಿಸು .

ಭಾವ ಸ್ಪಂದನ by “ತ್ರಿವೇಣಿ ತನಯ

ಮನದಾಲಯ -ಆಗಲಿ ಅಜ್ಞಾನದ ಲಯ

ಎಲ್ಲೇ ಸುತ್ತು ಕಾಡು ಮೇಡು ಹಿಮಾಲಯ,
ಎಷ್ಟೇ ಇರಲಿ ನೋಡಿ ಅರ್ಚಿಸಿದ ದೇವಾಲಯ,
ಅಜ್ಞಾನದ ಹಿಮವದು ಆಗಬೇಕು ಲಯ,
ಅನುಭವವಾಗಬೇಕು ಎದೆಯ ದೇವಾಲಯ.

ಬೇಡ ಸೊಕ್ಕು -ಸಜ್ಜನರಲಿ ಮನವಿಕ್ಕು

ಭಗವಂತನಿರುವುದು ಎಲ್ಲದರಲಿ ಹಾಸುಹೊಕ್ಕು,
ಆಗದಿರು ಮೆತ್ತಗೆ ಕಣ್ಮುಚ್ಚಿ ಹಾಲಕುಡಿವ ಬೆಕ್ಕು,
ದೂರಾಗಲಿ ಪೊಳ್ಳು ಅಹಂಕಾರದ ಸುಳ್ಳು ಸೊಕ್ಕು,
ನಿಜ ಜ್ಞಾನ ಸಜ್ಜನರ ಪಾದಗಳಲಿ ಮನವಿಕ್ಕು.

ಗುದ್ದು -ಸದ್ದು -ಮದ್ದು

ಭಗವಂತನ ಗುದ್ದು ಆಗುವುದಿಲ್ಲ ಸದ್ದು ,
ತಿಳಿದು ತಿದ್ದಿಕೊಳ್ಳುವವರಿಗೆ ಅದೇ ಮದ್ದು,
ಅರಿವಾಗದಿರೆ ಜೀವನದಾಟವೇ ರದ್ದು,
ಸ್ವಭಾವಕ್ಕೆ ತಕ್ಕ ಬದುಕು -ಬೇಡ ಜಿದ್ದು .

ಹೆಣ್ಣಾದರೇನು -ಗಂಡಾದರೇನು?

ಭಗವಂತನರ್ಚಿಸಲು ಹೆಣ್ಣಾದರೇನು ಗಂಡಾದರೇನು?
ಎದೆಯೊಳು ತುಂಬಿರಲು ಪ್ರಾಮಾಣಿಕ ಭಕ್ತಿಯ ಜೇನು,
ದುಂಬಿಯಾಗಿ ಬಂದು ಹೀರುವ ಭಕ್ತವತ್ಸಲ ತಾನು,
ಶಬರಿ ಅಹಲ್ಯೆ ಮುಂತಾದವರ ಉದ್ಧರಿಸಿಲ್ಲವೇನು?
[Contributed by Shri Govind Magal]

Thursday, 5 October 2017

Bhava Spandana - 22

ಭಾವ ಸ್ಪಂದನ by “ತ್ರಿವೇಣಿ ತನಯ

ಜ್ಞಾನ -ಭಕ್ತಿ -ವೈರಾಗ್ಯ

ಇರಬೇಕಾದವು ಜ್ಞಾನ ಭಕ್ತಿ ವೈರಾಗ್ಯ ,
ಇವೆ ಎಲ್ಲಾ -ಬದಲಾಗಿದೆ ಕೊಂಚ ಜಾಗ,
ಲೌಕಿಕಬೇಕುಗಳ ಜ್ಞಾನ-ಸಂಸಾರದಿ ಭಕ್ತಿ,
ಪಾರುಗಾಣಿಸುವವನೆಡೆಗೆ ಸತತ ವಿರಕ್ತಿ .

ಸಹಜ ಧರ್ಮ

ಕೃಷಿ ಮಾಡುತಿರು ಧರ್ಮ,
ಬೇಡ ಲೌಕಿಕದ ಕುಕರ್ಮ,
ಹುಡುಕದಿರು ತಪ್ಪ ಬೇರೆಯವರಲ್ಲಿ,
ಮನ ನೆಟ್ಟಿರಲಿ ಸತತ ಹರಿಸ್ಮರಣೆಯಲ್ಲಿ.

ಬಂಧ -ಸಂಬಂಧ

ಯಾತರದು ಈ ಥರದ ದೇಹ ಸಂಬಂಧ,
ಬೇಕುಗಳ ನಿರೀಕ್ಷೆಯಲಿ ಬೆಸೆದ ಬಂಧ,
ಕೇಳದಲೇ ತಕ್ಕದನು ಕೊಡುವವನು ಬಂಧು,
ನಿರೀಕ್ಷೆಯಿರದೆ ಸಮಗತಿ ಕರುಣಿಸುವವ ಆತ್ಮಬಂಧು.

ಬೇಡ ಪ್ರತಿಕ್ರಿಯೆ-ಬೇಕು ನಿವಾರಣಾಪ್ರಕ್ರಿಯೆ

ಘಟನೆಗಳಿಗೆ ಬೇಡ ಆತುರದ ಪ್ರತಿಕ್ರಿಯೆ,
ಬರಲಿ ಸಮಚಿತ್ತದ ನಿವಾರಣಾ ಪ್ರಕ್ರಿಯೆ,
ನಿನ್ನ ಕಂಗೆಡಿಸುವದು ಘಟನೆಗಳಲ್ಲ,
ಅಧೀರ ಅಪಕ್ವ ಅಸ್ಥಿರ ಮನಸ್ಥಿತಿಗಳೆಲ್ಲ.

ಬಂಧನ -ಬಿಡುಗಡೆಯ ಚಂದನ

ಬಂಧನದೊಳಿದ್ದರೂ ಬಾಳಾಗುವುದು ಚಂದ,
ತೇಯ್ದು ಬೀರುತಲಿರು ಸ್ನೇಹ ಪ್ರೀತಿಯ ಗಂಧ,
ಬಂದದನುಭವಿಸುತ ಶರಣಾಗಿ ನೀ ನಡೆ,
ದೈವ ಹಿಡಿವುದು ತಪ್ಪದೆ ರಕ್ಷಣೆಯ ಕೊಡೆ.
[Contributed by Shri Govind Magal]

Tuesday, 3 October 2017

Bhava Spandana - 21


ಭಾವ ಸ್ಪಂದನ by “ತ್ರಿವೇಣಿ ತನಯ

ಅಜ್ಞಾನದ ಬೇಲಿ -ತಲೆ ಖಾಲಿ

ಜ್ಞಾನಿ -ಸಂತರಿಗೂ ಮಠ ಮಠದ ಬೇಲಿ,
ಮಾನವತ್ವದ ನೆಲೆಯಲಿ ಎಲ್ಲ ತಲೆ ಖಾಲಿ,
ವಿವಿಧತೆಯಲಿ ಏಕತೆಯಿರದ ಅದೆಂಥಾ ಭಕ್ತಿ?
ಕೀಳು ಭೇದ ಭಾವಗಳ ಒಪ್ಪೀತೇ ಪರಶಕ್ತಿ?

ಹಣಕ್ಕಿಲ್ಲ ಬೆಲೆ -ಕಂಡುಕೋ ನೆಲೆ

ಎಲ್ಲಿ ನೋಡಿದರೂ ಹಣ ಮಾಡುವ ಗೀಳು,
ಹೆಣವಾಗುವವರೆಗೂ ಹಣಕ್ಕೇ ದುಡಿವ ಬಾಳು,
ಪರಲೋಕದಲ್ಲಿ ನಿನ್ನ ಹಣಕ್ಕಿಲ್ಲ ಕವಡೆಯ ಬೆಲೆ,
ತತ್ವಜ್ಞಾನದ ಹಿಂದೆ ಬಿದ್ದು ಕಂಡುಕೋ ನಿನ್ನ ನೆಲೆ.

ಬೆಂಬಿಡದ ಶಾಖ -ಮನವಾಗಲಿ ಪಾಕ

ತಾಯ ಗರ್ಭದಿ ಭರಿಸಲಾಗದ ಶಾಖ,
ಭೂಮಿಯಲಿ ಪ್ರೇಮ ಕಾಮದ ಶಾಖ,
ಜೀವನದಿ ಬಾಳ-ಕುಲುಮೆಯ ಶಾಖ,
ಕೊನೆಗೆ ನೀ ಬಿಟ್ಟ ದೇಹಕ್ಕೆ ಚಿತೆಯ ಶಾಖ.

ಸಹಿಸದ ದೇಹ -ವಿಚಿತ್ರ ಸ್ವಭಾವ

ಚಳಿಗೆ ತಡೆಯದ ದೇಹ ಮಳೆಗೆ ತಡೆಯದ ದೇಹ,
ಬಿಸಿಲ ತಡೆಯದ ದೇಹ ಮಣ್ಣಿಗೊಗ್ಗದ ದೇಹ,
ಗಾಳಿ ತಡೆಯದ ದೇಹ ಧೂಳು ತಡೆಯದ ದೇಹ,
ಆಕಾಶದೊಳಿದ್ದರೂ ಸದವಕಾಶ ಪಡೆಯದ ದೇಹ,
ಪಂಚ ಭೂತಗಳಿಂದಾದದ್ದೇ ಈ ದೇಹ,
ಪಂಚ ಭೂತಗಳಲ್ಲೇ ಲೀನವಾಗುವ ದೇಹ.

ಜಾಡು -ಪಾಡು -ಬೀಡು

ವಿಚಿತ್ರವೆನಿಸಿದರೂ ಸತ್ಯವಿದು ನೋಡು,
ಒಬ್ಬೊಬ್ಬರದೂ ಒಂದೊಂದು ಬೇರೆ ಜಾಡು,
ಅವರವರ ಮನಶ್ರುತಿಯಂತೆ ಅವರ ಹಾಡು,
ಅದರಂತೇ ಪಾಡು-ಸೇರುವರವರವರ ಬೀಡು.
[Contributed by Shri Govind Magal]

Sunday, 1 October 2017

Bhava Spandana - 20

ಭಾವ ಸ್ಪಂದನ by “ತ್ರಿವೇಣಿ ತನಯ

ಎಚ್ಚರದ ನಡೆ

ಕಂಡ ಕಂಡಲ್ಲಿ ಕೈ ಚಾಚ ಬೇಡ,
ಕಂಡದ್ದೆಲ್ಲಾ ಎತ್ತಿ ಬಾಚ ಬೇಡ,
ದುಡಿದುಕೋ ಎರಡ್ಹೊತ್ತಿನ ಅನ್ನ,
ಪಡೆದುಕೋ ಸಿಕ್ಕಲ್ಲೆಲ್ಲಾ ತತ್ವಜ್ಞಾನ.

ಬಂಧು -ಬಳಗ

ಕೈ ಬಿಟ್ಟವರಿಗಾಗಿ ಕೊರಗಬೇಡ,
ಕೈ ಹಿಡಿದವರನೆಂದೂ ತೊರೆಯಬೇಡ,
ಹಿಡಿಯಲು ತೊರೆಯಲು ಎಷ್ಟರದು ಜೀವ?
ಪಡೆದು ಬಂದದ್ದನ್ನೇ ಭಗವಂತ ಕರುಣಿಸುವ.

ಬಿಚ್ಚಿಕೋ -ನೆಚ್ಚಿ ಕಚ್ಚಿಕೋ

ಮುಚ್ಚಿಡುವುದೇ ಬಿಚ್ಚುವುದಕ್ಕಾಗಿ,
ಬಿಚ್ಚದಿದ್ದರೆ ಮುಚ್ಚಿಡುವುದ್ಯಾತಕ್ಕಾಗಿ?
ತೆರೆದುಕೋ ನಿನ್ನ ನೀನು -ಬಿಚ್ಚಿಕೋ,
ತಕ್ಕಂಥ ಸ್ವಭಾವ ಕಂಡು -ಕಚ್ಚಿಕೋ.

ಪ್ರಭಾವದ ಶಕ್ತಿ-ಸ್ವಭಾವದಿಂದ ಮುಕ್ತಿ

ಮೀರಲೆತ್ನಿಸು ಪ್ರಭಾವ,
ಪ್ರಕಟವಾಗಲಿ ಸ್ವಭಾವ,
ಸ್ವಭಾವ ವಿಕಾಸವೇ ಮುಕ್ತಿ,
ಪ್ರಭಾವ ಅದ ಮುಚ್ಚುವ ದುಶ್ಯಕ್ತಿ.

ಭಯ - ಅಭಯ

ಉಳುವ ಯೋಗಿಗೆ ಬಡತನವಿಲ್ಲ,
ಭಗವದ್ಧ್ಯಾನಿಗೆ ಎಂದೂ ನೋವಿಲ್ಲ,
ಜಗಳ ದೂರವಿಡುವುದು -ಮೌನ,
ಭಯ ದೂರವಿಡುವುದು -ಜ್ಞಾನ.
[Contributed by Shri Govind Magal]

Tuesday, 26 September 2017

Bhava Spandana - 19


ಭಾವ ಸ್ಪಂದನ by “ತ್ರಿವೇಣಿ ತನಯ
ಪರಭಾರೆ
ನೀನಾಗೇ ಬರಲಿಲ್ಲ ನಿನ್ನಿಚ್ಛದಿ ಹೋಗಲಾರೆ,
ಮಧ್ಯದಿ ಎಂಥದು ಅರ್ಥವಿರದ ಪರಭಾರೆ?
ಇರುವ ಮೂರು ದಿನ ಪ್ರೀತಿಸುತ ಬಾಳು,
ಹಾರಾಡಿದವರು ಏನು ಒಯ್ದಿದ್ದಾರೆ ಹೇಳು!
ನಡತೆ -ತಪವಂತೆ!
ಚೂರಿ ಹಿಡಿದು ಚುಚ್ಚಿದರಷ್ಟೇ ಅಲ್ಲ ಕ್ರೌರ್ಯ,
ನಡತೆ ಬಿರುಮಾತುಗಳದೂ ಅದೇ ತಾತ್ಪರ್ಯ,
ಪ್ರೀತಿಸಲಾಗದಿದ್ದರೆ ನೋಯಿಸದಿರು ಯಾರನ್ನ,
ಮಾನವತ್ವವ ಮೆರೆ ಮನುಜ ಕಣ್ಮುಚ್ಚುವ ಮುನ್ನ.
ಕಾಣದ ಸ್ನೇಹಿತ
ಹುಡುಕಿದರೆ ಸಿಗದವನು,
ಜತೆಗಿದ್ದೂ ಕಾಣದವನು,
ಎಲ್ಲರೊಳು ಇರುವವನು,
ಎಲ್ಲರಂತಲ್ಲ ಅವನು.
ಲೋಕದ ಸ್ನೇಹಿತ
ಕಲಿತ ವಿದ್ಯೆ ಬುದ್ಧಿ ಪರದೇಶದಲ್ಲಿ,
ಅನುಕೂಲ ಸತಿಯು ಮನೆಯಲ್ಲಿ,
ತಕ್ಕ ಔಷಧಿಯದು ಅನಾರೋಗ್ಯದಲ್ಲಿ,
ಸತ್ಕರ್ಮಗಳವು ನೋಡು ಮರಣದಲ್ಲಿ.
ನೋಟ -ಅನುಭವದ ಆಟ
ಕಾಣುವುದು ನಾವಲ್ಲ,
ಕರುಣಿಸಬೇಕವ- ನಲ್ಲ,
ಎದೆಯೊಳಗೆ ಹರಿವ ಜೀವ ಝರಿ,
ಅನುಭವ ಕೊಡಬೇಕವನೇ ಹರಿ.
[Contributed by Shri Govind Magal]

Saturday, 23 September 2017

Bhava Spandana - 18

ಭಾವ ಸ್ಪಂದನ by “ತ್ರಿವೇಣಿ ತನಯ

ಸ್ವಗತ

ಚಿತ್ತಕ್ಕೆ ತಂದಿದ್ದು ಅತ್ತಿತ್ತ ಮಾಡದಿರು,
ಒತ್ತಾಗಿ ನಿಂತು ನಿತ್ಯ ಪ್ರಗತಿ ತೋರು,
ಎತ್ತಲೋ ಕಳುಹಿ ಏನೇನೋ ಮಾಡಿಸುವಿ,
ಮತ್ತೆಲ್ಲ ಮಾಡಿದ್ದು ನಿನ್ನಪೂಜೆ ಆಗಲೆಂಬ ಮನವಿ.

ನಿನ್ನೊಳಗೇ ಹುಡುಕು

ಹುಡುಕದಿರು ಅನ್ಯರಲಿ ಕೆಡುಕು,
ದುಡುಕದೇ ನಿನ್ನ ನೀ - ಕೆದಕು,
ಕಂಡೀತು ನಿನ್ನೊಳಗಣ ಹುಳುಕು,
ಕಡಿದು ಕಟ್ಟೆ ಹಾಕಿದ್ದು - ಸಾಕು,
ಹಿಡಿ ಸತ್ಸಂಗದ ತಿಳಿ ಬೆಳಕು,
ಪ್ರೀತಿಯಲಿ ಬಾಳು ದಿನ ನಾಕು.

ಬುದ್ಧಿ - ಸಿದ್ಧಿ

ಮನುಷ್ಯನ ಮನಸ್ಥಿತಿ ಯಾರ ಸ್ವತ್ತು?
ಬದಲಾಗುತ್ತಲೇ ಇರತ್ತೆ ಮೂರ್ಹೊತ್ತು,
ಹಾಲು ಕುಡಿವಷ್ಟರಲ್ಲಿ ಹದಿನಾರು ಬುದ್ಧಿ,
ಇಂತಹಾ ಅವಸ್ಥೆಯಲಿ ಎಲ್ಲಿ ಅದು ಸಿದ್ಧಿ!

ಸನ್ಮಾರ್ಗದ ಬದುಕು

ಬದುಕಿರುವಷ್ಟು ಕಾಲ ಸತ್ಪ್ರಭಾವ ಬೀರುತ ಬಾಳು,
ನೀಡುತಲಿರು ಅನ್ನ ನೀರು ಜ್ಞಾನದಾ ತಂಪು ನೆರಳು,
ಸನ್ಮಾರ್ಗದ ಬದುಕು ಕಳೆವುದು ಭವದ ಬೇಗೆ,
ಬರೀ ಲೌಕಿಕಲೋಭದಿ ಮುಳುಗಿ ಆಗದಿರು ಕಾಗೆ.

ಸ್ವಂತಿಕೆಯ ಬೆಲೆ -ಕಂಡೀತು ನೆಲೆ

ನಾಟಕವ ಬಿಟ್ಟು ನೀನಿರುವಂತೆ ಬಾಳು,
ಪರದೆ ಕಳಚಲು ಒಮ್ಮೆ ಎಲ್ಲವೂ ಬೋಳು,
ನಿನ್ನ ನಾಟಕಕೆ ಇಲ್ಲ ಮೂರು ಕಾಸಿನ ಬೆಲೆ,
ನಿನ್ನತನದಲಿ ಬದುಕಿ ಕಂಡುಕೋ ನಿನ್ನ ನೆಲೆ.
[Contributed by Shri Govind Magal]

Wednesday, 20 September 2017

Bhava Spandana - 17

ಭಾವ ಸ್ಪಂದನ by “ತ್ರಿವೇಣಿ ತನಯ

ಪಕ್ಷಮಾಸವೂ ನೀನೆ-ಪರ್ವಕಾಲವೂ ನೀನೆ

ಹಬ್ಬ ಹರಿದಿನ ಶ್ರಾದ್ಧ ಪಕ್ಷ,
ಎಲ್ಲದರಲಿ ಅವನ ದೀಕ್ಷ,
ಎಲ್ಲ(ದ)ರ ನಿಯಾಮಕ ಅವನು,
ಅಸ್ವತಂತ್ರ ಜೀವ ಮಾಡಲಾರ ಏನೂ.

ಸಾವಿರದವನ ಸಹಸ್ರನಾಮ

ಸಾವಿರದ ವಿಷ್ಣುವಿನ ಸಹಸ್ರನಾಮ,
ಜಪಿಸಲು ಜೀವವದುವೆ ಪವಿತ್ರನೇಮ,
ಆದೀತು ಜೀವನವೇ ಉತ್ಕೃಷ್ಟ ಹೋಮ,
ಶರಣಾಗಲಿ ಜೀವ -ಅವ ಸಾರ್ವಭೌಮ.

ಬೇಡ ದಾಹ -ಬಿಡು ವ್ಯಾಮೋಹ

ತೃಪ್ತಿಯೇ ಇರದ ಅತಿಮೋಹ ದಾಹ,
ಕಪಟಾಚರಣೆ ಮೇಲೆಯೇ ವ್ಯಾಮೋಹ,
ಭ್ರಾಂತ ಮನಸಿನ ವಕ್ರ ನೋಟ,
ಕೆಡುಕಿನುದ್ದೇಶದ ಕೊಳಕು ಆಟ.

ತಿಳಿ ಸ್ವಭಾವ-ಬೇಡ ಪ್ರಭಾವ

ಎನಿತು ನೋಡಿದರೂ ಜೀವಗಳ ಸ್ವಭಾವ ಮೂರು,
ಮಿಶ್ರಣದಿ ಹೊರ ಹೊಮ್ಮೀತು ಬಗೆ ಬಗೆ ಹಲವಾರು,
ಸ್ವಭಾವಗಳ ಪ್ರಶ್ನಿಸಲು ಜೀವ ನೀನ್ಯಾರು?
ಇದ್ದದಿದ್ದಂತೆ ಒಪ್ಪು ಬೇಡ ತಕರಾರು.

ಪ್ರಯತ್ನವಿರಲಿ ಸತತ ತಿಳಿ ನಿನದ್ಯಾವ ಬೇರು?
ಪ್ರಾಮಾಣಿಕ ನಡತೆಯಲಿ ಬೆಳೆಸದನ ಎರೆದು ನೀರು,
ಒಮ್ಮೆ ಅರಿವಾಗಲು ನಿನ್ನದ್ಯಾವ ರೀತಿ,
ರೀತಿ ವಿಕಸಿಸುವುದೇ ನಿಜಬಾಳಿನ ನೀತಿ.
[Contributed by Shri Govind Magal]

Monday, 18 September 2017

Bhava Spandana - 16

ಭಾವ ಸ್ಪಂದನ by “ತ್ರಿವೇಣಿ ತನಯ
ನಿರ್ಲಿಪ್ತ -ಹರಿಚಿತ್ತ

ನೊಣಗಳು ಹುಡುಕುವುದು ದೇಹದ ಗಾಯದ ಭಾಗ,
ದುರ್ಜನರು ಹುಡುಕುವುದು ಲೋಪ ದೋಷದ ಜಾಗ,
ಎಂತಾದರಾಗಲಿ ಮನವಿರಲದು ನಿರ್ಲಿಪ್ತ,
ನಿನ್ನತನ ಹುಡುಕುತ್ತ ಒಪ್ಪುತಿರು ಹರಿಚಿತ್ತ.

ಮಡಿ -ಮನದ ನುಡಿ

ಅಹಂಕಾರವದು ಮಡಿಯಬೇಕು,
ಬಿದ್ದವರನೆತ್ತಲು ಮನ ಮಿಡಿಯಬೇಕು,
ನಾಲಿಗೆಯದು ಸತ್ಯ ಸವಿ ನುಡಿಯಬೇಕು,
ನಾಟಕ ಕಂಪನಿಯ ಸಂಗ ಕಡಿಯಬೇಕು.

ನಡೆ ನುಡಿ ಶುದ್ಧವಿರಲುಬೇಕು,
ಮುಚ್ಚು ಮರೆಯಾಟ ಬಿಟ್ಟಿರಬೇಕು,
ಶುದ್ಧಾಂತಕರಣದಿ ಸೇವೆ ಮಾಡಬೇಕು,
ನಿರಪೇಕ್ಷವಾಗಿ ಕೃಷ್ಣಾರ್ಪಣವೆನಬೇಕು.

ಸ್ವಭಾವ-ಪ್ರಭಾವ

ಸ್ವಭಾವ ಪ್ರಭಾವಗಳ ಹಗ್ಗ ಜಗ್ಗಾಟ,
ಬಹುತೇಕ ಪ್ರಭಾವದ್ದೇ -ಮೇಲಾಟ,
ಸಜ್ಜನರ ಸಂಗದಿಂದ ಸ್ವಭಾವ ಉತ್ಖನನ,
ಸ್ವಭಾವದ ಅರಿವಾಗೆ ಸಾಧನ ಉದ್ದೀಪನ.

ತುಂಬದ ಗಡಿಗೆ -ಅಪೂರ್ಣ ಅಡಿಗೆ

ತುಂಬಿದ ಕೊಡ ತುಳುಕುವುದಿಲ್ಲ,
ಖಾಲಿಯ ಕೊಡದ್ದು ಸದ್ದೇ ಎಲ್ಲ,
ಜಂಬದ ಪಂಡಿತ ತುಂಬದ ಗಡಿಗೆ,
ಅನುಭವಕೆ ಬಾರದ ಅಪೂರ್ಣ ಅಡಿಗೆ.
[Contributed by Shri Govind Magal]

Thursday, 14 September 2017

Bhava Spandana - 15

ಭಾವ ಸ್ಪಂದನ by “ತ್ರಿವೇಣಿ ತನಯ

ಜಾತಿ -ಫಜೀತಿ

ಮೂಲದ್ರವ್ಯ ಮಣ್ಣಿಗ್ಯಾವ ಜಾತಿ?
ಹರಿವ ತೊಳೆವ ನೀರಿಗ್ಯಾವ ಜಾತಿ?
ಉರಿವ ಸುಡುವ ಬೆಂಕಿಗ್ಯಾವ ಜಾತಿ?
ತಂಪು ಬಿಸಿ ಬೀಸುವ ಗಾಳಿಗ್ಯಾವ ಜಾತಿ?
ಎಲ್ಲೆಡೆ ಇರುವ ಆಕಾಶಕ್ಯಾವ ಜಾತಿ?
ಪಂಚಭೂತಗಳಿಂದಾದ ದೇಹಕ್ಯಾವ ಜಾತಿ?
ತ್ರಿಗುಣಗಳಿಂದಾದ ಮೂರರಲ್ಲೊಂದು ಜಾತಿ!
ಅಂತರಾರ್ಥವರಿಯದ ಮನುಜ ಮಾಡಿದ ಫಜೀತಿ!

ಅರಿಯಲೆತ್ನಿಸು ಮೂರರಲ್ಲಿ ನಿಂದ್ಯಾವ ರೀತಿ?
ಅದೇ ಆಗಲಿ ಬಾಳನಡೆಯ ಶಿಸ್ತಿನ ನೀತಿ!
ನೀತಿಯಲಿ ನಡೆದಾಗ ನಿನ್ನ ರೀತಿಯ ವಿಕಾಸ!
ಭೀತಿಯಿಲ್ಲದೆ ಪ್ರೀತಿಯಲಿ ನಡೆದು ಮುಗಿಸು ಪ್ರವಾಸ.

ಶರಣಾಗತಿ -ತಕ್ಕ ಗತಿ

ಜ್ಞಾನಕ್ಕೆ ಸಮನಾದ ಶುದ್ಧ ವಸ್ತುವೊಂದಿಲ್ಲ,
ಶುದ್ಧ ಶರಣಾಗತಿಯ ಕರ್ಮ ಸಿದ್ಧಿಸುವುದೆಲ್ಲಾ,
ಮುಂದೊಮ್ಮೆ ಕಾಣುವೆ ಸತ್ಯ ನಿನ್ನೊಳಗೆ ನೀನು,
ಪಾಳಿ ಬಂದಾಗ ಲಭ್ಯ ಹರಿಕಾರುಣ್ಯದ ಜೇನು.

ನಿಜವೈರಾಗ್ಯ

ಪುರಾಣವೈರಾಗ್ಯ ಪ್ರಸೂತಿವೈರಾಗ್ಯ,
ಶ್ಮಶಾನವೈರಾಗ್ಯ ಅಭಾವವೈರಾಗ್ಯ,
ಕಾಲಕ್ಕೊಂದು ವೈರಾಗ್ಯ ಕ್ಷಣಿಕ,
ನಿಜವೈರಾಗ್ಯ ಮೌನತಪದ ಪಾಕ.
[Contributed by Shri Govind Magal]

Sunday, 10 September 2017

Bhava Spandana - 14

ಭಾವ ಸ್ಪಂದನ by “ತ್ರಿವೇಣಿ ತನಯ

ಕಂದಾಯ -ಸಂದಾಯ -ಅಪಾಯ

ಇರುವ ಮನೆಗೆ ಬಾಡಿಗೆ ಕರ ಕಂದಾಯ,
ನೀರು ವಿದ್ಯುತ್ ಇಂಧನಕೆ ಹಣ ಸಂದಾಯ,
ಕರ್ಮ ನೀಗಲು ಕಳಿಸಿದವನ ನೆನಪೇ ಇಲ್ಲ,
ಹೆಂಡತಿ ಮಕ್ಕಳು ಮನೆ ಧನ ವ್ಯಾಪಾರವೇ ಎಲ್ಲ.

ಅಂದ -ಚೆಂದ-ಆನಂದ

ಹೆಂಡತಿ ಮಕ್ಕಳು ಚೆಂದ ಮಹಡಿಮನೆ ಅಂದ,
ಒಬ್ಬೊಬ್ಬರಿಗೊಂದರಿಂದ ಅಮಿತ ಆನಂದ,
ಆಗಬೇಕಾಗಿರುವುದ ಬಿಟ್ಟು ನಡೆದಿರುವುದೇ ಬೇರೆ!
ಏನಿದೆಯೋ ಅವನಿಚ್ಛ ಅವನದೇ ಪ್ರೇರಣಾಧಾರೆ!!

ಕತ್ತಲು ಬೆತ್ತಲು

ಸಾಕು ಸಾಕಾಗಿದೆ ಮುಖವಾಡದ ಬದುಕು,
ತನ್ನತನ ಮುಚ್ಚಿಟ್ಟುಕೊಳ್ಳುವುದ್ಯಾರಿಗೆ ಬೇಕು ,
ಕತ್ತಲು ಕಳೆಯಲು ಬೆತ್ತಲಾಗುವುದು ಅನಿವಾರ್ಯ,
ಕತ್ತಲೇ ಅಭ್ಯಾಸವಾದವರಿಗೆಲ್ಲಿದೆ ಬೆಳಕ ನೋಡುವ ಧೈರ್ಯ?

ಮುಗಿವ ಸಂತೆ -ಬೇಡ ಚಿಂತೆ

ಸಂತೆಯೊಳಗಿದ್ದೇ ಚಿಂತೆ ಮರೆಯಬೇಕು,
ನಿಶ್ಚಿಂತನಾಗಿ ಚಿನ್ಮಯನ ನೆನೆಯಬೇಕು,
ಭ್ರಾಂತನಾಗದೇ ಹರಿವ್ಯಾಪಾರದ ತಂತು ಹಿಡಿಯಬೇಕು,
ಸಂತೆ ವ್ಯಾಪಾರವೆಲ್ಲವ ಕಂತುಪಿತಗೆ ಅರ್ಪಿಸಬೇಕು .

ಸುಭಾಷಿತ -ಸಜ್ಜನ ಹಿತ

ಪ್ರಾಪಂಚಿಕ ಸುಖದಲ್ಲೇನಿದೆ ಮಣ್ಣು,
ಅಲ್ಲಿರುವುದು ಎರಡೇ ಸಿಹಿ ಹಣ್ಣು,
ಒಂದು ಸುಭಾಷಿತದ ಮಧುರ ಸಾರ,
ಇನ್ನೊಂದು ಸಜ್ಜನರ ಜ್ಞಾನ ಧಾರ.
[Contributed by Shri Govind Magal]

Friday, 8 September 2017

Bhava Spandana - 13

ಭಾವ ಸ್ಪಂದನ by “ತ್ರಿವೇಣಿ ತನಯ

ನೋವು ಕಾವು

ಬಾಳಲಿ ಬರುವ ನೋವಿನ ಬೇವು,
ಜೀವವ ಮಾಗಿಸುವ ಶುದ್ಧ ಕಾವು,
ಅರಳಿಸುವುದು ಅರಿವಿನ ಹೂವು,
ಸೇರಿಸುವುದದು ತಕ್ಕಂಥಾ ಠಾವು.

ಬೇವು ಬೆಲ್ಲ

ಈ ಜೀವನ ಬೇವು ಬೆಲ್ಲ,
ಮಾಡಿದ್ದೇ ಉಣ್ಣೋದೆಲ್ಲ,
ಅರ್ಪಿಸು ಅವನ ಪಾದಕ್ಕೆಲ್ಲ,
ಸಮ ಕರುಣಿಸುವವ ಗೊಲ್ಲ.

ಇಳೆ -ಬೆಳೆ

ಸಜ್ಜನರ ಸಂಗದಲಿ ಮನದ ಇಳೆಯ ಉತ್ತು,
ಸಚ್ಛಾಸ್ತ್ರ ಹರಿನಾಮದ ಬೀಜಗಳನೇ ಬಿತ್ತು,
ಎಚ್ಚರದಿ ಕೀಳುತಲಿರು ಅರಿಷಡ್ವರ್ಗದ ಕಳೆ,
ಹುಲುಸಾಗಿ ಬಂದೀತು ಹರಿಕಾರುಣ್ಯದ ಬೆಳೆ.

ಎದುರಾದದ್ದ ತಿಳಿ -ಕರ್ಮ ಕಳಿ

ಎಚ್ಚತ್ತಿರು ಮನವೇ ಎದುರಾದದ್ದೆಲ್ಲ ತಿರುಳೇ,
ಅರಿಯದಿದ್ದರೆ ಮೂರ್ಖನಾಗುವೆ ಮರುಳೇ,
ಬಾಳ ತಿರುವುಗಳಲ್ಲಿ ಒದಗುವುದೆಲ್ಲಾ ಪಾಠ,
ಸಾರ್ಥಕವಾಗಲಿ ಕರ್ಮ ಕಳೆಯುವ ಆಟ.

ಸತ್ಸಂಗ

ಸತ್ಸಂಗದಿಂದ ಪರಮ ಗತಿ,
ಸಂತೋಷ ಅತಿ ಲಾಭದ ಸ್ಥಿತಿ,
ಸತ್ಯ ವಿಚಾರ -ಉಚ್ಛ ಜ್ಞಾನ,
ಶಾಂತಿ ಶಮ ಗುಣದ ಗಾನ.
[Contributed by Shri Govind Magal]

Monday, 4 September 2017

Bhava Spandana - 12

ಭಾವ ಸ್ಪಂದನ by “ತ್ರಿವೇಣಿ ತನಯ

ಗಣಿತ -ಅಗಣಿತ

ಬೇಕಿಲ್ಲ ನಮಗೆ ಶುದ್ಧ ತತ್ವ ಶುದ್ಧ ಗಣಿತ,
ಎನಿತು ಒಲಿದಾನು ಅವನು ಅಗಣಿತ,
ಇಲ್ಲದ ಶೇಷ್ಠತೆ ಮೆರೆಸುವ ಹುಚ್ಚು ಚಪಲ,
ಹಾಲೆಂದು ಭ್ರಮಿಸಿ ಕುಡಿವ ಹಾಲಾಹಲ.

ಸೃಷ್ಟಿ -ಕಾಣುವುದದಾಗಿ ಸಮಷ್ಟಿ

ಸೃಷ್ಟಿ ಹುಟ್ಟು ಎಂದರೆ ಆಕಾರದ ಸಾಕಾರ,
ತತ್ವವ್ಯಾವೂ ಹೊಸದಾಗಿ ಆಗಲ್ಲ ಆವಿಷ್ಕಾರ,
ನೂಲಿನಿಂದ ಬಟ್ಟೆ ಮಣ್ಣಿನಿಂದ ಮಡಕೆ,
ರೇತಸ್ಸಿಗೆ ತಾಯಗರ್ಭದಿ ಮೂಳೆ ಮಾಂಸದ ತಡಿಕೆ.

ಮನದ ತೆರೆ -ಸ್ವಭಾವದ ಮೇರೆ

ಬರುವ ಸ್ಫುರಣೆಗಳೆಲ್ಲ ಈ ಜೀವಸ್ವಭಾವದ ಸಂಕೇತ,
ಯಾವುವೂ ಸರ್ವತ್ರಸತ್ಯವಲ್ಲ ಹೀಗೆಂದು ಇದಮಿತ್ಥ,
ಭಾವನೆಗಳೆಲ್ಲಾ ಬದಲಾಗುವ ಸಮುದ್ರ ತೆರೆಯೆಂತೆ,
ಅವರವರ ತೀರಕ್ಕೆ ತಳ್ಳುತ್ತಾ ಸೇರಿಸುವುದಂತೆ.

ಅಲ್ಪಮತ -ಬಹುಮತ

ಬಹುಮತವಿರುವಲ್ಲಿ ಸತ್ಯ ತತ್ವ ಇರೊಲ್ಲ,
ತರ್ಕಬದ್ಧ ತತ್ವಕ್ಕೆ ಬಹುಮತವಿರಲಿಕ್ಕಿಲ್ಲ,
ತತ್ವದೊಂದಿಗೆ ಇದ್ದ ಪಾಂಡವರು ಬರೀ ಐದು,
ತತ್ವದಿಂದ ದೂರಿದ್ದ ಕೆಟ್ಟ ಕೌರವರು ನೂರೊಂದು.

ತಪ್ಪು ಒಪ್ಪು -ಸ್ವಭಾವದ ಚಿಪ್ಪು

ಮನ ಒಪ್ಪಿದರೆ ಒಪ್ಪಿ ಅಪ್ಪು,
ಒಪ್ಪದಿರೆ ಅಪ್ಪಿದ್ದೇ ಅದು ಒಪ್ಪು,
ಸ್ವಭಾವದಂತೆಯೇ ತಪ್ಪು ಒಪ್ಪು,
ಅನುಭವಸಿದ್ಧ ವೇದಮಾತಲ್ಲ ತಪ್ಪು.
[Contributed by Shri Govind Magal]

Saturday, 2 September 2017

Bhava Spandana - 11

ಭಾವ ಸ್ಪಂದನ by “ತ್ರಿವೇಣಿ ತನಯ


ವಿಶ್ವಮತ ಕೊಟ್ಟ ವಿಶ್ವಗುರು

ವಿಶ್ವಮತ ಕೊಟ್ಟ ಏಕೈಕ ವಿಶ್ವಗುರು ಮಧ್ವಾಚಾರ್ಯ,
ಧಾರ್ಮಿಕ ವೈಜ್ಞಾನಿಕವಾಗಿ ಸಮ್ಮತ ಸೂತ್ರ ಕೊಟ್ಟ ಆರ್ಯ,
ಸಕಲ ಚೇತನ ಜಡ ಸರ್ವಾಂತರ್ಯಾಮಿ ಭಗವಂತನೆಂದ,
ಸಕಲ ಚರಾಚರ ವಸ್ತು ನಾದ ವೇದಗಳು ಅವನ ನಾಮವೆಂದ,
ದೇವತೆಗಳು ಅನೇಕ ನಿಯಾಮಕ ದೇವ ಒಬ್ಬನೇ ಎಂದ,
ಯಾರನ್ನೇ ಪೂಜಿಸು ಎಲ್ಲರಂತರ್ಯಾಮಿ ಹರಿಯೆಂದ,
ಭಗವದ್ ಹಿರಿಮೆ ನಮ್ಮ ಸೀಮೆ ಅರಿತು ಬಾಳಿದರೆ ಭೂಮಿ ನಾಕ,
ಅಜ್ಞಾನದ ಬೇಲಿ ಕಟ್ಟಿಕೊಂಡು ನಾವು ಮಾಡಿಕೊಂಡಿದ್ದೇವೆ ನರಕ.

ತಾರತಮ್ಯ

ಸೃಷ್ಟಿಯಲಿ ಒಂದರಂತೆ ಇನ್ನೊಂದಿಲ್ಲ,
ಜೀವಸ್ವಭಾವ ಬೇರೆ ಬೇರೆಯೇ ಎಲ್ಲ,
ದೊರೆ ದೊರೆಯೇ ಪ್ರಜೆ ಪ್ರಜೆಯೇ,
ಮುಕುತಿಯೆನೆ ಸ್ವಭಾವ ವಿಕಾಸವೇ.

ಮಾವು ಬೇವಾಗಲ್ಲ ಬೇವು ಮಾವಾಗಲ್ಲ,
ಹಾಲು ಹಾಲಾಹಲವಲ್ಲ ಹಾಲಾಹಲ ಹಾಲಲ್ಲ,
ತ್ರಿವಿಧಗುಣ -ಸ್ವಭಾವಗಳ ಮೂಲ ದ್ರವ್ಯ,
ಅದೇ ಭಗವಂತ ತೋರುತಿಹ ಸೃಷ್ಟಿಕಾವ್ಯ.

ಸಾಧನೆ-ಅನುಕ್ಷಣದ ಚಲನೆ 

ಬದುಕಿನಲ್ಲಿ ಅಲ್ಲ --ಸಾಧನೆ,
ಅನುಕ್ಷಣದ ಬದುಕೇ ಸಾಧನೆ,
ಆಗದಿರಲದು ಬರೀ ವೇದನೆ,
ಸ್ವಚ್ಛವಿರಲಿ ಮನವೆಂಬ ಮನೆ,
ಮನಕ್ಕಿಳಿದರೆ ಸದ್ ಬೋಧನೆ,
ಸರಳಾತಿ ಸರಳವದು ಆಚರಣೆ.
[Contribute by Shri Govind Magal]