Sunday, 10 September 2017

Bhava Spandana - 14

ಭಾವ ಸ್ಪಂದನ by “ತ್ರಿವೇಣಿ ತನಯ

ಕಂದಾಯ -ಸಂದಾಯ -ಅಪಾಯ

ಇರುವ ಮನೆಗೆ ಬಾಡಿಗೆ ಕರ ಕಂದಾಯ,
ನೀರು ವಿದ್ಯುತ್ ಇಂಧನಕೆ ಹಣ ಸಂದಾಯ,
ಕರ್ಮ ನೀಗಲು ಕಳಿಸಿದವನ ನೆನಪೇ ಇಲ್ಲ,
ಹೆಂಡತಿ ಮಕ್ಕಳು ಮನೆ ಧನ ವ್ಯಾಪಾರವೇ ಎಲ್ಲ.

ಅಂದ -ಚೆಂದ-ಆನಂದ

ಹೆಂಡತಿ ಮಕ್ಕಳು ಚೆಂದ ಮಹಡಿಮನೆ ಅಂದ,
ಒಬ್ಬೊಬ್ಬರಿಗೊಂದರಿಂದ ಅಮಿತ ಆನಂದ,
ಆಗಬೇಕಾಗಿರುವುದ ಬಿಟ್ಟು ನಡೆದಿರುವುದೇ ಬೇರೆ!
ಏನಿದೆಯೋ ಅವನಿಚ್ಛ ಅವನದೇ ಪ್ರೇರಣಾಧಾರೆ!!

ಕತ್ತಲು ಬೆತ್ತಲು

ಸಾಕು ಸಾಕಾಗಿದೆ ಮುಖವಾಡದ ಬದುಕು,
ತನ್ನತನ ಮುಚ್ಚಿಟ್ಟುಕೊಳ್ಳುವುದ್ಯಾರಿಗೆ ಬೇಕು ,
ಕತ್ತಲು ಕಳೆಯಲು ಬೆತ್ತಲಾಗುವುದು ಅನಿವಾರ್ಯ,
ಕತ್ತಲೇ ಅಭ್ಯಾಸವಾದವರಿಗೆಲ್ಲಿದೆ ಬೆಳಕ ನೋಡುವ ಧೈರ್ಯ?

ಮುಗಿವ ಸಂತೆ -ಬೇಡ ಚಿಂತೆ

ಸಂತೆಯೊಳಗಿದ್ದೇ ಚಿಂತೆ ಮರೆಯಬೇಕು,
ನಿಶ್ಚಿಂತನಾಗಿ ಚಿನ್ಮಯನ ನೆನೆಯಬೇಕು,
ಭ್ರಾಂತನಾಗದೇ ಹರಿವ್ಯಾಪಾರದ ತಂತು ಹಿಡಿಯಬೇಕು,
ಸಂತೆ ವ್ಯಾಪಾರವೆಲ್ಲವ ಕಂತುಪಿತಗೆ ಅರ್ಪಿಸಬೇಕು .

ಸುಭಾಷಿತ -ಸಜ್ಜನ ಹಿತ

ಪ್ರಾಪಂಚಿಕ ಸುಖದಲ್ಲೇನಿದೆ ಮಣ್ಣು,
ಅಲ್ಲಿರುವುದು ಎರಡೇ ಸಿಹಿ ಹಣ್ಣು,
ಒಂದು ಸುಭಾಷಿತದ ಮಧುರ ಸಾರ,
ಇನ್ನೊಂದು ಸಜ್ಜನರ ಜ್ಞಾನ ಧಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula