Friday, 8 September 2017

Bhava Spandana - 13

ಭಾವ ಸ್ಪಂದನ by “ತ್ರಿವೇಣಿ ತನಯ

ನೋವು ಕಾವು

ಬಾಳಲಿ ಬರುವ ನೋವಿನ ಬೇವು,
ಜೀವವ ಮಾಗಿಸುವ ಶುದ್ಧ ಕಾವು,
ಅರಳಿಸುವುದು ಅರಿವಿನ ಹೂವು,
ಸೇರಿಸುವುದದು ತಕ್ಕಂಥಾ ಠಾವು.

ಬೇವು ಬೆಲ್ಲ

ಈ ಜೀವನ ಬೇವು ಬೆಲ್ಲ,
ಮಾಡಿದ್ದೇ ಉಣ್ಣೋದೆಲ್ಲ,
ಅರ್ಪಿಸು ಅವನ ಪಾದಕ್ಕೆಲ್ಲ,
ಸಮ ಕರುಣಿಸುವವ ಗೊಲ್ಲ.

ಇಳೆ -ಬೆಳೆ

ಸಜ್ಜನರ ಸಂಗದಲಿ ಮನದ ಇಳೆಯ ಉತ್ತು,
ಸಚ್ಛಾಸ್ತ್ರ ಹರಿನಾಮದ ಬೀಜಗಳನೇ ಬಿತ್ತು,
ಎಚ್ಚರದಿ ಕೀಳುತಲಿರು ಅರಿಷಡ್ವರ್ಗದ ಕಳೆ,
ಹುಲುಸಾಗಿ ಬಂದೀತು ಹರಿಕಾರುಣ್ಯದ ಬೆಳೆ.

ಎದುರಾದದ್ದ ತಿಳಿ -ಕರ್ಮ ಕಳಿ

ಎಚ್ಚತ್ತಿರು ಮನವೇ ಎದುರಾದದ್ದೆಲ್ಲ ತಿರುಳೇ,
ಅರಿಯದಿದ್ದರೆ ಮೂರ್ಖನಾಗುವೆ ಮರುಳೇ,
ಬಾಳ ತಿರುವುಗಳಲ್ಲಿ ಒದಗುವುದೆಲ್ಲಾ ಪಾಠ,
ಸಾರ್ಥಕವಾಗಲಿ ಕರ್ಮ ಕಳೆಯುವ ಆಟ.

ಸತ್ಸಂಗ

ಸತ್ಸಂಗದಿಂದ ಪರಮ ಗತಿ,
ಸಂತೋಷ ಅತಿ ಲಾಭದ ಸ್ಥಿತಿ,
ಸತ್ಯ ವಿಚಾರ -ಉಚ್ಛ ಜ್ಞಾನ,
ಶಾಂತಿ ಶಮ ಗುಣದ ಗಾನ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula