Wednesday 22 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 112-128

 

ಶಿನಿಪ್ರವೀರೇ ತು ಗತೇ ಯುಧಿಷ್ಠಿರಃ ಪುನಶ್ಚ ಚಿನ್ತಾಕುಲಿತೋ ಬಭೂವ ಹ ।

ಜಗಾದ ಭೀಮಂ ಚ ನ ಗಾಣ್ಡಿವಧ್ವನಿಃ ಸಂ ಶ್ರೂಯತೇ ಪಾಞ್ಚಜನ್ಯಸ್ಯ ರಾವಃ ॥ ೨೬.೧೧೨ ॥

 

ಅತ್ತ ಸಾತ್ಯಕಿ ತೆರಳಿದ ಮೇಲೆ ಯುಧಿಷ್ಠಿರನು ಮತ್ತೆ ಚಿಂತಾಕ್ರಾಂತನಾದ,

ಗಾಂಡೀವದ ಧ್ವನಿ ಕೇಳುತ್ತಿಲ್ಲ, ಕೇವಲ ಪಾಂಚಜನ್ಯದ ಧ್ವನಿ ಕೇಳಿಸುತ್ತಿದೆ ಭೀಮ ಎಂದ.

 

ಮಯಾ ನಿಯುಕ್ತಶ್ಚ ಗತಃ ಸ ಸಾತ್ಯಕಿರ್ಭಾರಂ ಚ ತಸ್ಯಾಧಿಕಮೇವ ಮನ್ಯೇ ।

ತತ್ ಪಾಹಿ ಪಾರ್ತ್ಥಂ ಯುಯುಧಾನಮೇವ ಚ ತ್ವಂ ಭೀಮ ಗತ್ವಾ ಯದಿ ಜೀವತಸ್ತೌ ॥ ೨೬.೧೧೩ ॥

 

‘ನನ್ನಿಂದ ನಿಯೋಜಿಸಲ್ಪಟ್ಟ ಸಾತ್ಯಕಿಯು ಇಲ್ಲಿಂದ ಹೋಗಿದ್ದಾನೆ,

ಅವನಿಗೆ ಹೆಚ್ಚಿನ ಭಾರ ಹಾಕಿದೆನೋ ಏನೋ ಎಂದು ನನ್ನ ಭಾವನೆ.

ಆದ ಕಾರಣ ಭೀಮ ನೀನು ಹೋಗಿ ನೋಡು, ಅರ್ಜುನ-ಸಾತ್ಯಕಿ ಬದುಕಿದ್ದರೆ ಅವರ ಕಾಪಾಡು.

 

ಇತೀರಿತಃ ಪ್ರಾಹ ವೃಕೋದರಸ್ತಂ ನ ರಕ್ಷಿತಂ ವಾಸುದೇವೇನ ಪಾರ್ತ್ಥಮ್ ।

ಬ್ರಹ್ಮೇಶಾನಾವಪಿ ಜೇತುಂ ಸಮರ್ತ್ಥೌ ಕಿಂ ದ್ರೌಣಿಕರ್ಣ್ಣಾದಿಧನುರ್ಭೃತೋSತ್ರ ॥ ೨೬.೧೧೪ ॥

 

ಈರೀತಿಯಾಗಿ ಯುಧಿಷ್ಠಿರ ಹೇಳಲು ಭೀಮನೆಂದ,

ಅರ್ಜುನ ರಕ್ಷಿತನಾಗಿದ್ದಾನೆ ಆ ವಾಸುದೇವನಿಂದ.

ಬ್ರಹ್ಮ-ರುದ್ರಾದಿಗಳೂ ಕೂಡಾ ಅವನ ಗೆಲ್ಲಲು ಸಮರ್ಥರಲ್ಲ.

ಇನ್ನು ಅಶ್ವತ್ಥಾಮ, ಕರ್ಣಾದಿಗಳಿಂದ ಭಯವಿಲ್ಲ ಎಂದ್ಹೇಳಬೇಕಿಲ್ಲ.

 

ಅತೋ ಭಯಂ ನಾಸ್ತಿ ಧನಞ್ಚಯಸ್ಯ ನ ಸಾತ್ಯಕೇಶ್ಚೈವ ಹರೇಃ ಪ್ರಸಾದಾತ್ ।

ರಕ್ಷ್ಯಸ್ತ್ವಮೇವಾತ್ರ ಮತೋ ಮಮಾದ್ಯ ದ್ರೋಣೋ ಹ್ಯಯಂ ಯತತೇ ತ್ವಾಂ ಗೃಹೀತುಮ್ ॥ ೨೬.೧೧೫ ॥

 

ದೈವಾನುಗ್ರಹದಿಂದ ಅರ್ಜುನನಿಗಾಗಲೀ, ಸಾತ್ಯಕಿಗಾಗಲೀ ಭಯವಿಲ್ಲ,

ಆದರೆ ಇಲ್ಲಿ  ದ್ರೋಣ ಹಾಕಿದ್ದಾನೆ ನಿನ್ನನ್ನು ಹಿಡಿಯಬೇಕೆನ್ನುವ ಜಾಲ.

ಹೀಗಾಗಿಯೇ ಈಗ ನಾನು ಇಲ್ಲಿದ್ದು ನಿನ್ನನ್ನು ರಕ್ಷಣೆ ಮಾಡುವ ಕಾಲ.

 

ಇತೀರಿತಃ ಪ್ರಾಹ ಯುಧಿಷ್ಠಿರಸ್ತಂ ನ ಜೀವಮಾನೇ ಯುಧಿ ಮಾಂ ಘಟೋತ್ಕಚೇ ।

ಧೃಷ್ಟದ್ಯುಮ್ನೇ ಚಾಸ್ತ್ರವಿದಾಂ ವರಿಷ್ಠೇ ದ್ರೋಣೋ ವಶಂ ನೇತುಮಿಹ ಪ್ರಭುಃ ಕ್ವಚಿತ್ ॥ ೨೬.೧೧೬ ॥

 

ಭೀಮಸೇನನನ್ನು ಕುರಿತು ಹೇಳುತ್ತಾನೆ-ಇದನ್ನೆಲ್ಲಾ ಕೇಳಿಸಿಕೊಂಡ ಯುಧಿಷ್ಠಿರ,

ಘಟೋತ್ಕಚ, ಅಸ್ತ್ರಶ್ರೇಷ್ಠ ಧೃಷ್ಟದ್ಯುಮ್ನರಿದ್ದಾಗ ದ್ರೋಣ ನನ್ನನ್ನು ಹಿಡಿಯಲಾರ.

 

ಯದಿ ಪ್ರಿಯಂ ಕರ್ತ್ತುಮಿಹೇಚ್ಛಸಿ ತ್ವಂ ಮಮ ಪ್ರಯಾಹ್ಯಾಶು ಚ ಪಾರ್ತ್ಥಸಾತ್ಯಕೀ ।

ರಕ್ಷಸ್ವ ಸಙ್ಜ್ಞಾಮಪಿ ಸಿಂಹನಾದಾತ್ ಕುರುಷ್ವ ಮೇ ಪಾರ್ತ್ಥಶೈನೇಯದೃಷ್ಟೌ ॥ ೨೬.೧೧೭ ॥

 

ನನಗೆ ಇಷ್ಟ ಪೂರೈಸಬೇಕೆಂದಿದ್ದರೆ ನಿನ್ನ ಯೋಚನೆ,

ಶೀಘ್ರದಲ್ಲಿ ಮಾಡು ಅರ್ಜುನ-ಸಾತ್ಯಕಿಯರ ರಕ್ಷಣೆ,

ನೀಡು ಅವರನ್ನು ಕಂಡ ಮೇಲೆ ಸಿಂಹನಾದದ ಸೂಚನೆ.

 

ತಥಾ ಹತೇ ಚೈವ ಜಯದ್ರಥೇ ಮೇ ಕುರುಷ್ವ ಸಙ್ಜ್ಞಾಮಿತಿ ತೇನ ಭೀಮಃ ।

ಉಕ್ತಸ್ತು ಹೈಡಿಮ್ಬಮಮುಷ್ಯ ರಕ್ಷಣೇ ವ್ಯಧಾಚ್ಚ ಸೇನಾಪತಿಮೇವ ಸಮ್ಯಕ್ ॥ ೨೬.೧೧೮ ॥

 

ಹಾಗೆಯೇ ಜಯದ್ರಥ ಹತನಾದಾಗಲೂ ನನಗೆ ಸೂಚನೆಯನ್ನು ಮಾಡು ಎಂದು ಹೇಳಿದ.

ಆಗ ಭೀಮ ಯುಧಿಷ್ಠಿರನ ರಕ್ಷಣೆಗಾಗಿ ಘಟೋತ್ಕಚ - ಧೃಷ್ಟದ್ಯುಮ್ನರ ನೇಮಿಸಿದ.

 

ಸ ಚಾSಹ ಸೇನಾಪತಿರತ್ರ ಭೀಮಂ ಪ್ರಯಾಹಿ ತೌ ಯತ್ರ ಚ ಕೇಶವಾರ್ಜ್ಜುನೌ ।

ನ ಜೀವಮಾನೇ ಮಯಿ ಧರ್ಷಿತುಂ ಕ್ಷಮೋ ದ್ರೋಣೋ ನೃಪಂ ಮೃತ್ಯುರಹಂ ಚ ತಸ್ಯ ॥ ೨೬.೧೧೯ ॥

 

ಆಗ ಸೇನಾಧಿಪತಿಯಾದ ಧೃಷ್ಟದ್ಯುಮ್ನ ಭೀಮಗೆ, ಹೋಗಲು ಹೇಳುವ ಕೃಷ್ಣಾರ್ಜುನರಿರುವಲ್ಲಿಗೆ. ನಾನು ಬದುಕಿರಬೇಕಾದರೆ ಆ ದ್ರೋಣ, ಅವನಿಗಿಲ್ಲ ಧರ್ಮಜನ ಹಿಡಿಯುವ ತ್ರಾಣ,

ನಾನೇ ಆಗಿದ್ದೇನೆ ದ್ರೋಣನ ಪಾಲಿನ ಮರಣ.

 

ಇತಿ ಬ್ರುವಾಣೇ ಪ್ರಣಿಧಾಯ ಭೀಮಃ ಪುನಃ ಪುನಸ್ತಂ ನೃಪತಿಂ ಗದಾಧರಃ ।

ಯಯೌ ಪರಾನೀಕಮಧಿಜ್ಯಧನ್ವಾ ನಿರನ್ತರಂ ಪ್ರವಪನ್ ಬಾಣಪೂಗಾನ್ ॥ ೨೬.೧೨೦ ॥

 

ಈರೀತಿಯಾಗಿ ಅವರಿಂದ ಪುನಃ ಹೇಳಲ್ಪಟ್ಟ ಭೀಮಸೇನ,

ಧರ್ಮರಾಜನ ರಕ್ಷಣೆಗೆ ಸ್ಥಾಪಿಸುತ್ತಾನೆ ಧೃಷ್ಟದ್ಯುಮ್ನನನ್ನ.

ಗದೆ ಹಿಡಿದು, ಬಿಲ್ಲಿನಿಂದ ಶತ್ರುಸೈನ್ಯದ ಮೇಲೆ,

ಸುರಿಸುತ್ತ ಸಾಗಿದ ಬಾಣಗಳ ನಿರಂತರ ಮಳೆ.

 

ನ್ಯವಾರಯತ್ ತಂ ಶರವರ್ಷಧಾರೋ ದ್ರೋಣೋ ವಚಶ್ಚೇದಮುವಾಚ ಭೀಮಮ್ ।

ಶಿಷ್ಯಸ್ನೇಹಾದ್ ವಾಸವಿಃ ಸಾತ್ಯಕಿಶ್ಚ ಮಯಾ ಪ್ರಮುಕ್ತೌ ಭೃಶಮಾನತೌ ಮಯಿ ॥ ೨೬.೧೨೧ ॥

 

ಹೀಗೆ ಮುನ್ನುಗ್ಗುತ್ತಿದ್ದ ಭೀಮಸೇನನಿಗೆ ಬಾಣಗಳ ಮಳೆಗರೆಯುತ್ತಿರುವ ದ್ರೋಣಾಚಾರ್ಯ,

ತಡೆದು ಹೇಳಿದ-ಅರ್ಜುನ ಸಾತ್ಯಕಿಯರನ್ನು ಬಿಟ್ಟು ಉಳಿಸಿದೆ ‘ಶಿಷ್ಯ ಪ್ರೀತಿಯ ಔದಾರ್ಯ'.

 

ಸ್ವೀಯಾ ಪ್ರತಿಜ್ಞಾSಪಿ ಹಿ ಸೈನ್ಧವಸ್ಯ ಗುಪ್ತೌ ಮಯಾ ಪಾರ್ತ್ಥಕೃತೇ ವಿಸೃಷ್ಟಾ

ದಾಸ್ಯೇ ನ ತೇ ಮಾರ್ಗ್ಗಮಹಂ ಕಥಞ್ಚಿದ್ ಪಶ್ಯಾಸ್ತ್ರವೀರ್ಯಂ ಮಮ ದಿವ್ಯಮದ್ಭುತಮ್ ॥ ೨೬.೧೨೨ ॥

 

ಜಯದ್ರಥನ ರಕ್ಷಣೆಗಾಗಿ ನಾನು ಮಾಡಿದ ಪ್ರತಿಜ್ಞೆ, ಅದನ್ನು ಕೂಡಾ ಅರ್ಜುನನಿಗೋಸ್ಕರ ಬಿಟ್ಟಿದ್ದೇನೆ. ಆದರೆ ನಿನಗೆ ಮಾತ್ರ ಯಾವುದೇ ಕಾರಣಕ್ಕೂ ನಾನು ದಾರಿ ಕೊಡುವುದಿಲ್ಲ,

ನೋಡು ನನ್ನ ಅಲೌಕಿಕವಾದ ಅದ್ಭುತವಾದ ಅಸ್ತ್ರ ಸಾಮರ್ಥ್ಯದ ಬಲ.

 

ಇತ್ಯುಕ್ತವಾಕ್ಯಃ  ಸ ಗದಾಂ ಸಮಾದದೇ ಚಿಕ್ಷೇಪ ತಾಂ ದ್ರೋಣರಥಾಯ ಭೀಮಃ ।

ಉವಾಚ ಚಾಹಂ ಪಿತೃವನ್ಮಾನಯೇ ತ್ವಾಂ ಸದಾ ಮೃದುಸ್ತ್ವಾಂ ಪ್ರತಿ ನಾನ್ಯಥಾ ಕ್ವಚಿತ್ ॥ ೨೬.೧೨೩ ॥

 

ಈರೀತಿ ದ್ರೋಣರು ಹೇಳಲು ಭೀಮ ತನ್ನ ಗದೆಯನ್ನು ದ್ರೋಣರಥದತ್ತ ಎಸೆದ,

ನೀನು ನನ್ನ ತಂದೆ ಸಮಾನ ಗೌರವಪಾತ್ರ ಹಾಗಾಗಿಯೇ ನನ್ನ ಮೃದುತ್ವ ಎಂದ.

ಪ್ರೀತಿ ಗೌರವ ಮೃದುತ್ವದ ಹೂರಣ, ಅದನ್ನ ಬಿಟ್ಟು ಮತ್ತೇನಿಲ್ಲ ಕಾರಣ.

 

ಅಮಾರ್ದ್ದವೇ ಪಶ್ಯ ಚ ಯಾದೃಶಂ ಬಲಂ ಮಮೇತಿ ತಸ್ಯಾSಶು ವಿಚೂರ್ಣ್ಣಿತೋ ರಥಃ ।

ಗದಾಭಿಪಾತೇನ ವೃಕೋದರಸ್ಯ ಸಸೂತವಾಜಿಧ್ವಜಯನ್ತ್ರಕೂಬರಃ ॥ ೨೬.೧೨೪ ॥

 

‘ನಾನು ಸಿಡಿದರೆ ನನ್ನ ಬಲ ಯಾವ ರೀತಿ ಇರುತ್ತದೆ ಎನ್ನುವುದನ್ನು ನೀನು  ನೋಡು’  ಎಂದ ಭೀಮ ತನ್ನ ಗದೆಯನ್ನು ಎಸೆದ,

ಸೂತ, ಕುದುರೆ, ಧ್ವಜ, ನೊಗ, ಎಲ್ಲದರೊಂದಿಗೆ ದ್ರೋಣಾಚಾರ್ಯರ ರಥ ಪುಡಿ-ಪುಡಿಯಾಯಿತು ಭೀಮಗದಾಪ್ರಹಾರದಿಂದ.

 

ದ್ರೋಣೋ ಗದಾಮಾಪತತೀಂ ನಿರೀಕ್ಷ್ಯ ತ್ವವಪ್ಲುತೋ ಲಾಘವತೋ ಧರಾತಳೇ ।

ತದೈವ ದುರ್ಯ್ಯೋಧನಯಾಪಿತಂ ರಥಂ ಪರಂ ಸಮಾಸ್ಥಾಯ ಶರಾನ್ ವವರ್ಷ ಹ ॥ ೨೬.೧೨೫ ॥

 

ಬರುತ್ತಿದ್ದ ಗದೆಯ ನೋಡಿದ ದ್ರೋಣರು , ವೇಗವಾಗಿ ಭೂಮಿಗೆ ಹಾರಿಕೊಂಡರು.

ಕೌರವ ಕಳಿಸಿದ ಇನ್ನೊಂದು ರಥವೇರಿದರು, ಏರಿದ ಮೇಲೆ ಮತ್ತೆ ಬಾಣಗಳ ಮಳೆಗೈದರು.

 

ಶರೈಸ್ತದೀಯೈಃ ಪರಮಾಸ್ತ್ರಮನ್ತ್ರಿತೈಃ ಪ್ರವೃಷ್ಯಮಾಣೋ ಜಗದೀರಣಾತ್ಮಜಃ ।

ಶಿರೋ ನಿಧಾಯಾSಶು ಪುರೋ ವೃಷೋ ಯಥಾ ತಮಭ್ಯಯಾದೇವ ರಥಾದವಪ್ಲುತಃ ॥ ೨೬.೧೨೬ ॥

 

ಅತ್ಯಂತ ಮಂತ್ರಪೂತವಾಗಿರುವ ಆ ಬಾಣಗಳ ಎದುರುಗೊಂಡ,

ಮುಖ್ಯಪ್ರಾಣಪುತ್ರ ಭೀಮ, ಗೂಳಿಯಂತೆ ತಲೆ ಮುಂದೆ ಮಾಡಿಕೊಂಡ.

ರಥದಿಂದಿಳಿದವನೇ ಗೂಳಿಯಂತೆ ದ್ರೋಣರತ್ತ ವೇಗವಾಗಿ ನುಗ್ಗಿಬಂದ.

 

ಯಾವರೀತಿ ಮುನ್ನುಗ್ಗುತ್ತಿರುವ ಗೂಳಿ,

ಜೋರಾಗಿ ಸುರಿವ ಮಳೆಯನ್ನು ತಾಳಿ, ತಡೆದುಕೊಳ್ಳುವಂತೆ ವಾಯುಪುತ್ರ;

ತನ್ನ ತೋಳ ಮುಂದೆ ಮಾಡಿ, ತಲೆ ಬಗ್ಗಿಸಿ ಮುನ್ನುಗ್ಗುತ್ತಿದ್ದ ನರವ್ಯಾಘ್ರ ಭೀಮ ಮಾಡಿದ ದ್ರೋಣರ ಶರಮಳೆಯ ಸ್ವೀಕಾರ.

 

ಮನೋಜವಾದೇವ ತಮಾಪ್ಯ ಭೀಮೋ ರಥಂ ಗೃಹೀತ್ವಾSಮ್ಬರ ಅಕ್ಷಿಪತ್ ಕ್ಷಣಾತ್ ।

ಶಕ್ತೋSಪ್ಯಹಂ ತ್ವಾಂ ನ ನಿಹನ್ಮಿ ಗೌರವಾದಿತ್ಯೇವ ಸುಜ್ಞಾಪಯಿತುಂ ತದಸ್ಯ ॥ ೨೬.೧೨೭ ॥

 

‘ನನಗೆ ಶಕ್ತಿ ಇದ್ದರೂ ಕೂಡಾ ನಿಮ್ಮ ಮೇಲಿನ ಗೌರವ ಭಾವನೆಯಿಂದ ನಿಮ್ಮನ್ನು ಕೊಲ್ಲುವುದಿಲ್ಲ’ ಎಂದು ದ್ರೋಣರಿಗೆ ತನ್ನ ಬಲವ ತೋರುವುದಕ್ಕೆ; ಭೀಮಸೇನನು ಮನಸ್ಸಿಗೆ ಮೀರಿದ ವೇಗದಿಂದ ದ್ರೋಣಾಚಾರ್ಯರ ಬಳಿಗೆ ಸಾಗಿ ಬಂದವನು ಅವರ ರಥವನ್ನು ಹಿಡಿದು ಎಸೆದ ಆಕಾಶಕ್ಕೆ. 

 

ಸವಾಜಿಸೂತಃ ಸ ರಥಃ ಕ್ಷಿತೌ ಪತನ್ ವಿಚೂರ್ಣ್ಣಿತೋSಸ್ಮಾದ್ ಗುರುರಪ್ಯವಪ್ಲುತಃ ।

ತದಾ ವಿಶೋಕೋSಸ್ಯ ರಥಂ ಸಮಾನಯತ್ ತಮಾರುಹದ್ ಭೀಮ ಉದಾರವಿಕ್ರಮಃ ॥ ೨೬.೧೨೮ ॥

 

ಕುದುರೆ, ಸೂತ, ಮೊದಲಾದವರಿಂದ ಕೂಡಿದ ಆ ರಥ ನೆಲಕ್ಕೆ ಬಿದ್ದು ಪುಡಿ-ಪುಡಿಯಾದಾಗ,

ಆ ರಥದಿಂದ ಗುರುದ್ರೋಣರೂ ಕೆಳಗೆ ಹಾರಲು  ಭೀಮಸಾರಥಿ ವಿಶೋಕನು ರಥವ ತಂದಾಗ, ಉತ್ಕೃಷ್ಟವಾದಂಥ ಪರಾಕ್ರಮವುಳ್ಳವನಾದ ಭೀಮಸೇನನು ತನ್ನ ರಥವನ್ನೇರಿಕೊಳ್ಳುವನಾಗ .

 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 101-111

 

ಕೃನ್ತನ್ ಶರೈಸ್ತಂ ಜಲಸನ್ಧ ಆಗಮದ್ ರಣೇ ಗಜಸ್ಕನ್ಧಗತೋSಭಿಯೋದ್ಧುಮ್ ।

ನಿವಾರಯನ್ತಂ ತಮಸ̐ಹ್ಯವಿಕ್ರಮಂ ನಿಹತ್ಯ ಬಾಣೈಃ ಸಮರೇ ಸಾತ್ಯಕಿಃ ೨೬.೧೦೧

 

ವಿಲೋಳಯಾಮಾಸ ಬಲಂ ಕುರೂಣಾಂ ನಿಘ್ನನ್ ಗಜಸ್ಯನ್ದನವಾಜಿಪತ್ತಿನಃ ।

ಸ ಪಾರ್ವತೀಯಾಂಶ್ಚ ಶಿಲಾಪ್ರವರ್ಷಿಣೋ ನಿಹತ್ಯ ವಿದ್ರಾಪ್ಯ ಚ ಸರ್ವಸೈನಿಕಾನ್ ॥ ೨೬.೧೦೨ ॥

 

ಸಮಾಸದತ್ ಕೇಶವಫಲ್ಗುನೌ ಚ ಬಲೀ ತಮಾರಾSಶು ಚ ಯೂಪಕೇತುಃ ।

ತಯೋರಭೂದ್ ಯುದ್ಧಮತೀವ ಘೋರಂ ಚಿರಂ ವಿಚಿತ್ರಂ ಚ ಮಹದ್ ವಿಭೀಷಣಮ್ ॥ ೨೬.೧೦೩ ॥

 

 

ಆನೆಯೇರಿ ಜಲಸಂಧ ಎನ್ನುವವನು ಯುದ್ಧಮಾಡಲು ಸಾತ್ಯಕಿಗೆ ಎದುರಾದ,

ಪರಾಕ್ರಮಿ ಜಲಸಂಧನನ್ನು ಸಾತ್ಯಕಿ ಬಾಣಗಳಿಂದ ಹೊಡೆದು ಕೊಂದ.

ಅಷ್ಟಲ್ಲದೇ ಕೌರವರ ಸೇನೆಯನ್ನು ಅವನು ಅಲ್ಲೋಲಕಲ್ಲೋಲ ಮಾಡಿದ.

ಹೀಗೆ ಕೌರವರ ಆನೆ,ಕುದುರೆ,ರಥ,ಕಾಲಾಳುಗಳ ಅವನು ನಿಗ್ರಹಿಸುತ್ತಾ ಸಾಗಿದ,

ಕಲ್ಲು ಹೊಡೆಯುತ್ತಾ ಯುದ್ಧಗೈವ ಪರ್ವತವಾಸಿ ಪಾರ್ವತೇಯ ಗಣಗಳ ಕೊಂದ.

ಎಲ್ಲಾ ಸೈನಿಕರನ್ನು ಓಡಿಸಿ, ದೂರದಲ್ಲಿದ್ದ ಕೃಷ್ಣಾರ್ಜುನರನ್ನು ಸೇರಿದ,

ಆಗ ಯೂಪಕೇತು(ಭೂರಿಶ್ರವಸ್ಸು) ಅವನನ್ನು ಎದುರಿಸಲು ಬಂದ.

ಅವರಿಬ್ಬರ ನಡುವೆ ನಡೆಯಿತು ಘೋರ ವಿಚಿತ್ರ ಭಯಂಕರ ಯುದ್ಧ . 

 

ಪರಸ್ಪರಂ ತೌ ತುರಗಾನ್ ನಿಹತ್ಯ ವಿಪಾತ್ಯ ಸೂತೌ ಧನುಷೀ ನಿಕೃತ್ಯ ।

ಸಮೀಯತುಶ್ಚರ್ಮ್ಮಮಹಾಸಿಧಾರಿಣೌ ವಿಚಿತ್ರಮಾರ್ಗ್ಗಾನ್ ಯುಧಿ ಸಞ್ಚರನ್ತೌ ॥ ೨೬.೧೦೪ ॥

 

ಅವರಿಬ್ಬರೂ ಪರಸ್ಪರರ ಕುದುರೆಗಳನ್ನು ಕೊಂದುಕೊಂಡರು ,

ಸಾರಥಿಗಳ ಕೊಂದು, ಬಿಲ್ಲುಗಳನ್ನೂ ಮುರಿದುಕೊಂಡರು.

ಕತ್ತಿ ಗುರಾಣಿಗಳ ಹಿಡಿದು ನೆಲದಲ್ಲಿ ನಿಂತರು, ಚಿತ್ರವಿಚಿತ್ರವಾದ ಯುದ್ಧಮಾಡತೊಡದರು.

 

ಸ ಸೌಮದತ್ತಿರ್ಬ್ಭುವಿ ಸಾತ್ಯಕಿಂ ರಣೇ ನಿಪಾತ್ಯ ಕೇಶೇಷು ಚ ಸಮ್ಪ್ರಗೃಹ್ಯ ।

ಪದಾSಸ್ಯ ವಕ್ಷಸ್ಯಧಿರುಹ್ಯ ಖಡ್ಗಮುದಗ್ರಹೀದಾಶು ಶಿರೋSಪಹರ್ತ್ತುಮ್ ॥ ೨೬.೧೦೫ ॥

 

ಆ ಭೂರೀಶ್ರವಸ್ಸು ಸಾತ್ಯಕಿಯನ್ನು ಭೂಮಿಯಲ್ಲಿ ಬೀಳಿಸಿದ ,

ಅವನ ಕೂದಲನ್ನು ಹಿಡಿದು, ಕಾಲಿನಿಂದ ಎದೆಯ ಮೆಟ್ಟಿದ,

ಅವನ ತಲೆಯನ್ನು ಕತ್ತರಿಸಲೆಂದು ತನ್ನ ಕೈಯನ್ನು ಮೇಲೆತ್ತಿದ.

 

ತದ್ ವಾಸುದೇವಸ್ತು ನಿರೀಕ್ಷ್ಯ ವಿಶ್ವತಶ್ಚಕ್ಷುರ್ಜ್ಜುಗಾದಾSಶು ಧನಞ್ಜಯಂ ರಣೇ ।

ತ್ರಾಯಸ್ವ ಶೈನೇಯಮಿತಿ ಸ್ಮ ಸೋSಪಿ ಭಲ್ಲೇನ ಚಿಚ್ಛೇದ ಭುಜಂ ಪರಸ್ಯ ॥ ೨೬.೧೦೬ ॥

 

ಆಗ ಎಲ್ಲೆಡೆ ಕಣ್ಗಳುಳ್ಳ ಕೃಷ್ಣ ಅದನ್ನು ನೋಡಿದ ,

ಧನಂಜಯನಿಗೆ- ‘ಸಾತ್ಯಕಿಯನ್ನು ರಕ್ಷಿಸು’ ಎಂದ. ಅರ್ಜುನ ವೈರಿಭುಜವನ್ನು ಬಾಣದಿಂದ ಕತ್ತರಿಸಿದ.

 

ಸ ತೇನ ಚೋತ್ಕೃತ್ತಸಖಡ್ಗಬಾಹುರ್ವಿನಿನ್ದ್ಯ ಪಾರ್ತ್ಥಂ ನಿಷಸಾದ ಭೂಮೌ ।

ಪ್ರಾಯೋಪವಿಷ್ಟಃ ಶರಸಂಸ್ತರೇ ಹರಿಂ ದ್ಧ್ಯಾಯನ್ ವಿನಿನ್ದನ್ನಸುರಪ್ರವೇಶಾತ್ ॥ ೨೬.೧೦೭ ॥

 

ಗತೇSಸುರಾವೇಶ ಉತಾತಿಭಕ್ತ್ಯಾ ದ್ಧ್ಯಾಯತ್ಯಮುಷ್ಮಿನ್ ಗರುಡಧ್ವಜಂ ತಮ್ ।

ಶೈನೇಯ ಉತ್ಥಾಯ ನಿವಾರ್ಯ್ಯಮಾಣಃ ಕೃಷ್ಣಾರ್ಜ್ಜುನಾದ್ಯೈರಹರಚ್ಛಿರೋSಸ್ಯ ॥ ೨೬.೧೦೮ ॥

 

ಅರ್ಜುನನ ಬಾಣವಿಶೇಷವದು ಹಾಗಿತ್ತು, ಖಡ್ಗ ಸಮೇತ ಅವನ ಕೈ ಕತ್ತರಿಸಿ ಹೋಗಿತ್ತು.

ಆಗ ಭೂರಿಶ್ರವಸ್ಸು ಅರ್ಜುನನನ್ನು ಬಯ್ಯುತ್ತಾನೆ, ಬಾಣಗಳನ್ನು ಚಾಪೆಯಂತೆ ಹಾಸಿಕೊಳ್ಳುತ್ತಾನೆ. ಪ್ರಾಯೋಪವೇಶಕ್ಕೆ ಕುಳಿತು, ಅಸುರಾವೇಶದಿಂದ ಕೃಷ್ಣನನ್ನು ಬಯ್ಯುತ್ತಾ,

ನಂತರ ಅಸುರಾವೇಶ ಕಳೆದುಕೊಂಡು ಕುಳಿತ ಗರುಡಧ್ವಜನನ್ನು ಧ್ಯಾನಿಸುತ್ತ.

ಅದೇ ಸಮಯಕ್ಕೆ ಸಾತ್ಯಕಿಯು ಮೇಲೆದ್ದ, ತಡೆಯಲ್ಪಟ್ಟರೂ ಕೃಷ್ಣಾರ್ಜುನಾದಿಗಳಿಂದ, ಭೂರೀಶ್ರವಸ್ಸಿನ ತಲೆಯನ್ನು ಕತ್ತರಿಸಿ ಹಾಕಿದ.

 

ತದಾ ಸ್ವಕೀಯಂ ರಥಮೇತದರ್ತ್ಥಂ ಕ್ಲ್ ಪ್ತಂ ದದೌ ಸಾತ್ಯಕಯೇ ಸಸೂತಮ್ ।

ಕೃಷ್ಣೋSಥ ಪಾರ್ತ್ಥಸ್ಯ ಹಯಾಸ್ತೃಷಾSರ್ದ್ದಿತಾಸ್ತದಾSಸೃಜದ್ ವಾರುಣಾಸ್ತ್ರಂ ಸ ಪಾರ್ತ್ಥಃ ॥ ೨೬.೧೦೯ ॥

 

ಶ್ರೀಕೃಷ್ಣನು ಸಾತ್ಯಕಿಗಾಗಿ ಸಿದ್ಧಮಾಡಿಟ್ಟ, ಸೂತಸಹಿತವಾದ ತನ್ನ ರಥವನ್ನು ಕೊಟ್ಟ. ಕಾಲಾನಂತರ ಅರ್ಜುನನ ಕುದುರೆಗಳು ಬಾಯಾರಿದಾಗ, ಅರ್ಜುನ ವರುಣಾಸ್ತ್ರವನ್ನು ಪ್ರಯೋಗ ಮಾಡುತ್ತಾನಾಗ.

 

ತೇನೈವ ತೀರ್ತ್ಥಂ ಪರಮಂ ಚಕಾರ ತಥಾSಶ್ವಶಾಲಾಮಪಿ ಬಾಣರೂಪಾಮ್ ।

ತತೋ ವಿಮುಚ್ಯಾತ್ರ ಹಯಾನಪಾಯಯದ್ಧರಿಸ್ತದಾ ವಾಸವಿರಾರ್ದ್ಧಯತ್ ಪರಾನ್ ॥ ೨೬.೧೧೦ ॥

 

ಅರ್ಜುನ ವರುಣಾಸ್ತ್ರದಿಂದ ನಿರ್ಮಿಸುತ್ತಾನೆ ಒಂದು ಜಲಾಶಯ,

ಹಾಗೇ ಬಾಣಗಳಿಂದ ನಿರ್ಮಿಸುತ್ತಾನೆ ಅಲ್ಲೇ ಒಂದು ಅಶ್ವಾಲಯ.

ಅದಾದಮೇಲೆ ಶ್ರೀಕೃಷ್ಣನು ಕುದುರೆಗಳನ್ನು ಬಿಚ್ಚಿ ಅಶ್ವಶಾಲೆಯಲ್ಲಿ  ಕುದುರೆಗಳಿಗೆ ನೀರು ಕುಡಿಸಿದ. ಆಗ ಅರ್ಜುನನು ಭೂಮಿಯಲ್ಲೇ ನಿಂತುಕೊಂಡು ಶತ್ರುಗಳನ್ನು ಎದುರಿಸಿ ಹೋರಾಡುತ್ತಲೇ ಇದ್ದ .

 

ಯುಯೋಜ ಕೃಷ್ಣಸ್ತುರಗಾನ್ ರಥೇ ಪುನರ್ಗ್ಗತಶ್ರಮಾನುದ್ಧೃತಸಾಯಕಾನ್ ಪ್ರಭುಃ ।

ಪ್ರಚೋದಿತೇ ತೇನ ರಥೇ ಸ್ಥಿತಃ ಪುನಸ್ತಥೈವ ಬೀಭತ್ಸುರರೀನಯೋಧಯತ್ ॥ ೨೬.೧೧೧ ॥

 

ಶ್ರೀಕೃಷ್ಣನು ಕುದುರೆಗಳ ಮೈಯಲ್ಲಿ ಚುಚ್ಚಿದ್ದ ಬಾಣಗಳನ್ನು ತೆಗೆದ,

ಅವುಗಳ ಮೈನೇವರಿಸಿ ದಣಿವಾರಿದ ಕುದುರೆಗಳ ರಥಕ್ಕೆ ಕಟ್ಟಿದ.

ಕೃಷ್ಣಪ್ರಚೋದಿತ ರಥದಲ್ಲಿ ನಿಂತ ಅರ್ಜುನ ಮತ್ತೆ ಯುದ್ಧಮಾಡಿದ.