Wednesday 22 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 36-48

 

ಪ್ರಾಗ್ಜ್ಯೋತಿಷೇ ನಿಹತೇSಥಾಗ್ರಹಾಚ್ಚ ಯುಧಿಷ್ಠಿರಸ್ಯಾತಿವಿಷಣ್ಣರೂಪಃ ।

ದುರ್ಯ್ಯೋಧನೋSಶ್ರಾವಯದ್ ದೀನವಾಕ್ಯಾನ್ಯತ್ರ ದ್ರೋಣಂ ಸೋSಪಿ ನೃಪಂ ಜಗಾದ ॥ ೨೬.೩೬ ॥

 

ಬಲಿಷ್ಠನಾದ ಭಗದತ್ತನು ಕೊಲ್ಲಲ್ಪಡುತ್ತಿರುವಾಗ, ಯುಧಿಷ್ಠಿರನ ಬಂಧನ ಸಾಧ್ಯವಾಗದೇ ಇದ್ದಾಗ, ಇದರಿಂದ ಅತ್ಯಂತ ವಿಷಾದಕ್ಕೆ ಒಳಗಾದ ದುರ್ಯೋಧನ,

ಆ ರಾತ್ರಿ ದೀನ ವಾಕ್ಯಗಳನ್ನಾಡಿದ ಉದ್ದೇಶಿಸಿ ದ್ರೋಣರನ್ನ.

ಆಗ ದ್ರೋಣರು ಹೇಳುತ್ತಾರೆ : ಕೆಳಕಾಣುವ ಮಾತುಗಳನ್ನ.

 

ಪಾರ್ತ್ಥೇ ಗತೇ ಶ್ವೋ ನೃಪತಿಂ ಗ್ರಹೀಷ್ಯೇ ನಿಹನ್ಮಿ ವಾ ತತ್ಸದೃಶಂ ತದೀಯಮ್ ।

ಇತಿ ಪ್ರತಿಜ್ಞಾಂ ಸ ವಿಧಾಯ ಭೂಯಃ  ಪ್ರಾತರ್ಯ್ಯಯೌ ಯುದ್ಧಮಾಕಾಙ್ಕ್ಷಮಾಣಃ ॥ ೨೬.೩೭ ॥

 

‘ನಾಳೆ ಅರ್ಜುನ ಹೋಗುತ್ತಿರಲು ಯುಧಿಷ್ಠಿರನನ್ನು ಹಿಡಿದು ಕೊಡುತ್ತೇನೆ,

ಅಥವಾ ಅವನಿಗೆ ಸಮಾನನಾದ ಪಾಂಡವ ಪಕ್ಷದ ವೀರನ ಕೊಲ್ಲುತ್ತೇನೆ’.

ಎಂದು ಪ್ರತಿಜ್ಞೆ ಮಾಡಿದ ದ್ರೋಣಾಚಾರ್ಯರು, ಮತ್ತೆ ಬೆಳಿಗ್ಗೆ ಯುದ್ಧವನ್ನು ಬಯಸಿ ತೆರಳಿದರು.

 

ಪದ್ಮವ್ಯೂಹಂ ವ್ಯೂಹ್ಯ ಪರೈರಭೇದ್ಯಂ ವರಾದ್ ವಿಷ್ಣೋಸ್ತಸ್ಯ ಮನ್ತ್ರಂ ಹ್ಯಜಪ್ತ್ವಾ।

ಪಾರ್ತ್ಥಾಶ್ಚ ತಂ ಪ್ರಾಪುರ್ಋತೇSರ್ಜ್ಜುನೇನ ಸಂಶಪ್ತಕೈರ್ಯ್ಯುಯುಧೇ ಸೋSಪಿ ವೀರಃ ॥ ೨೬.೩೮ ॥

 

ವಿಷ್ಣು ವರದಿಂದ, ವಿಷ್ಣುಮಂತ್ರವನ್ನು ಜಪಿಸದೇ ಭೇದಿಸಲಾಗದ ಪದ್ಮವ್ಯೂಹವನ್ನು,

ಯುದ್ಧದಿ ಸ್ಥಾಪನೆ ಮಾಡಿದ ದ್ರೋಣಾಚಾರ್ಯ ಆರಂಭಿಸುತ್ತಾರೆ ಯುದ್ಧವನ್ನು. ಸಂಶಪ್ತಕರೊಂದಿಗೆ ಯುದ್ಧಮಾಡುತ್ತಿದ್ದ ಅರ್ಜುನನನ್ನು ಬಿಟ್ಟು, ಪದ್ಮವ್ಯೂಹದ ಬಳಿ ಬರುತ್ತಾರೆ ಉಳಿದ ಪಾಂಡವರೆಲ್ಲಾ ಒಟ್ಟು .

 

ಪಾರ್ತ್ಥಾ ವ್ಯೂಹಂ ತು ತಂ ಪ್ರಾಪ್ಯ ನಾಶಕನ್ ಬೇತ್ತುಮುದ್ಯತಾಃ ।

ಜಾನಂಶ್ಚ ಪ್ರತಿಭಾಯೋಗಾತ್ ಕಾಮ್ಯಂ ನೈವಾಜಪನ್ಮನುಮ್ ॥ ೨೬.೩೯ ॥

 

ಪಾಂಡವರು ಪದ್ಮವ್ಯೂಹವನ್ನು ಹೊಂದಿ, ಅದನ್ನು ಭೇದಿಸಲು ಸಿದ್ಧರಾದರು.

ಆದರೆ  ಆ ಪದ್ಮವ್ಯೂಹವನ್ನು ಒಡೆಯಲು ಅವರು ಅಸಮರ್ಥರಾದರು.

ಭೀಮಸೇನನಲ್ಲಿ ವ್ಯೂಹವನ್ನು ಭೇದಿಸುವ ಶಕ್ತಿ ಇದ್ದರೂ ಕೂಡಾ,

ಅವನು ಅನುಸರಿಸಲಿಲ್ಲ ಕಾಮ್ಯಮಂತ್ರವನ್ನು ಹೇಳುವ ಜಾಡ.

 

ಭೀಮೋ ಯುಧಿಷ್ಠಿರಸ್ತತ್ರ ತಜ್ಜ್ಞಂ ಸೌಭದ್ರಮಬ್ರವೀತ್ ।

ಭಿನ್ಧಿ ವ್ಯೂಹಮಿಮಂ ತಾತ ವಯಂ ತ್ವಾಮನುಯಾಮಹೇ ॥ ೨೬.೪೦ ॥

 

ಆಗ ಯುಧಿಷ್ಠಿರ ವ್ಯೂಹಭೇದ ಮಂತ್ರವನ್ನು ತಿಳಿದಿರುವ ಅಭಿಮನ್ಯುವಿಗೆ ಹೇಳುತ್ತಾನೆ,

'ನೀನು ಈ ಪದ್ಮವ್ಯೂಹವನ್ನು ಭೇದಿಸು, ನಾವು ನಿನ್ನನ್ನು ಅನುಸರಿಸುತ್ತೇವೆ ಮಗನೇ '.

 

ಸ ಏವಮುಕ್ತೋ ರಥಿನಾಂ ಪ್ರಬರ್ಹೋ ವಿವೇಶ ಭಿತ್ತ್ವಾ ಧ್ವಿಷತಾಂ ಚಮೂಂ ತಾಮ್ ।

ಅನ್ವೇವ ತಂ ವಾಯುಸುತಾದಯಶ್ಚ ವಿವಿಕ್ಷವಃ ಸೈನ್ಧವೇನೈವ ರುದ್ಧಾಃ ॥ ೨೬.೪೧ ॥

 

ವರೇಣ ರುದ್ರಸ್ಯ ನಿರುದ್ಧ್ಯಮಾನೋ ಜಯದ್ರಥೇನಾತ್ರ ವೃಕೋದರಸ್ತು ।

ವಿಷ್ಣೋರಭೀಷ್ಟಂ ವಧಮಾರ್ಜ್ಜುನೇಸ್ತದಾ ವಿಜ್ಞಾಯ ಶಕ್ತೋSಪಿ ನಚಾತ್ಯವರ್ತ್ತತ ॥ ೨೬.೪೨ ॥

 

ಆಗ ರಥಿಕವೀರಾಗ್ರಣ್ಯ ಅಭಿಮನ್ಯು ಸೇನೆಯ ಭೇದಿಸಿ ವ್ಯೂಹ ಪ್ರವೇಶಿಸುತ್ತಾನೆ,

ಭೀಮ,ನಕುಲ-ಸಹದೇವ,ಯುಧಿಷ್ಠಿರರು ಅನುಸರಿಸಲು ಜಯದ್ರಥ ತಡೆಯುತ್ತಾನೆ.

 

ರುದ್ರ ವರಬಲದ ಜಯದ್ರಥನಿಂದ ತಡೆಯಲ್ಪಟ್ಟ ಭೀಮಸೇನ,

ಶಕ್ತನಾಗಿದ್ದರೂ ಕೂಡಾ ತಡೆಯಲಿಲ್ಲ ಅಭಿಮನ್ಯುವಿನ ಮರಣ,

ಅದು 'ಕೃಷ್ಣಸಂಕಲ್ಪ' ಎಂದು ತಿಳಿದು ಮೀರಲಿಲ್ಲ ಜಯದ್ರಥನನ್ನ.

 

ಜಯದ್ರಥಸ್ಥೇನ ವೃಷಧ್ವಜೇನ ಪ್ರಯುದ್ಧ್ಯಮಾನೇಷು ವೃಕೋದರಾದಿಷು ।

ಪ್ರವಿಶ್ಯ ವೀರಃ ಸ ಧನಞ್ಜಯಾತ್ಮಜೋ ವಿಲೋಳಯಾಮಾಸ ಪರೋರುಸೇನಾಮ್ ॥ ೨೬.೪೩ ॥

 

ಜಯದ್ರಥನ ಒಳಗಿರುವ ರುದ್ರನ ಜೊತೆಗೆ ಭೀಮಸೇನ ಮೊದಲಾದವರ ಯುದ್ಧ ಸಾಗಿತ್ತು,  ವೀರ,ಅರ್ಜುನಪುತ್ರ ಅಭಿಮನ್ಯುವಿನಿಂದ ಕೌರವಸೇನೆ ಅಲ್ಲೋಲ ಕಲ್ಲೋಲವಾಗಿತ್ತು.

 

ಸ ದ್ರೋಣದುರ್ಯ್ಯೋಧನಕರ್ಣ್ಣಶಲ್ಯೈ ರ್ದ್ದ್ರೌಣ್ಯಗ್ರಣೀಭಿಃ ಕೃತವರ್ಮ್ಮಯುಕ್ತೈಃ ।

ರುದ್ಧಶ್ಚಚಾರಾರಿಬಲೇಷ್ವಭೀತಃ ಶಿರಾಂಸಿ ಕೃನ್ತಂಸ್ತದನುಬ್ರತಾನಾಮ್ ॥ ೨೬.೪೪ ॥

 

ದ್ರೋಣ, ದುರ್ಯೋಧನ, ಕರ್ಣ, ಶಲ್ಯ, ಅಶ್ವತ್ಥಾಮ,

ಅನೇಕ ಮುಂದಾಳುಗಳ ಸೇನೆಯಿಂದ ಕೃತವರ್ಮ,

ಇವರೆಲ್ಲರಿಂದಲೂ ಒಡ್ಡಲ್ಪಟ್ಟಿತ್ತು ವೀರ ಅಭಿಮನ್ಯುವಿಗೆ ತಡೆ,

ಭಯವಿಲ್ಲದೇ ಶತ್ರುತಲೆ ಉರುಳಿಸುತ್ತಾ ಸಾಗಿತ್ತವನ ರಣನಡೆ.

ಮಾಡುತ್ತಿದ್ದ ಅನೇಕ ವೀರರ ಅನುಯಾಯಿಗಳ ಸಂಹಾರ,

ಶತ್ರುಸೈನ್ಯಗಳ ಮಧ್ಯದಲ್ಲಿ ಸಾಗಿತ್ತವನ ನಿರ್ಭೀತ ಸಂಚಾರ.

 

ಸ ಲಕ್ಷಣಂ ರಾಜಸುತಂ ಪ್ರಸಹ್ಯ ಪಿತುಃ ಸಮೀಪೇSನಯದಾಶು ಮೃತ್ಯವೇ ।

ಬೃಹದ್ಬಲಂ ಚೋತ್ತಮವೀರ್ಯ್ಯಕರ್ಮ್ಮಾ ವರಂ ರಥಾನಾಮಯುತಂ ಚ ಪತ್ರಿಭಿಃ ॥ ೨೬.೪೫ ॥

 

ಅಭಿಮನ್ಯುವು ದುರ್ಯೋಧನನ ಮಗನಾಗಿರುವ ಲಕ್ಷಣನನ್ನು,

ತಂದೆ ದುರ್ಯೋಧನನ ಸಮೀಪದಲ್ಲೇ ಆಕ್ರಮಿಸಿ ಕೊಂದನು.

ಬೃಹದ್ಬಲನನ್ನು ಅಭಿಮನ್ಯು ಕೊಂದ,

ಉತ್ಕೃಷ್ಟ ಪರಾಕ್ರಮದ ಶ್ರೇಷ್ಠವಾದ,

ಹತ್ತುಸಾವಿರ ರಥಿಕರನ್ನು ಕೊಂದುಹಾಕಿದ.

 

ದ್ರೋಣಾದಯಸ್ತಂ ಹರಿಕೋಪಭೀತಾಃ ಪ್ರತ್ಯಕ್ಷತೋ ಹನ್ತುಮಶಕ್ನುವನ್ತಃ ।

ಸಮ್ಮನ್ತ್ರ್ಯ ಕರ್ಣ್ಣಂ ಪುರತೋ ನಿಧಾಯ ಚಕ್ರುರ್ವಿಚಾಪಾಶ್ವರಥಂ ಕ್ಷಣೇನ ॥ ೨೬.೪೬ ॥

 

ಇವನನ್ನು ಕೊಂದರೆ ಕೃಷ್ಣನಿಗೆಲ್ಲಿ ಕೋಪ ಬರುತ್ತದೋ ಎಂಬ ಭಯ,

ದ್ರೋಣಾದಿಗಳು ಪ್ರತ್ಯಕ್ಷ ಅಭಿಮನ್ಯುವ

ಕೊಲ್ಲಲು ಅಶಕ್ತರಾದ ಸಮಯ,

ಕರ್ಣನ ಜೊತೆ ಮಾಡುತ್ತಾರೆ ಮಂತ್ರಾಲೋಚನೆ,

ಸಾಗುತ್ತಾರೆ ಮುಂದಿಟ್ಟುಕೊಂಡು ಕರ್ಣನನ್ನೇ,

ನಾಶ ಮಾಡುತ್ತಾರವನ ರಥ ಕುದುರೆ ಬಿಲ್ಲನ್ನೇ.

 

ಕರ್ಣ್ಣೋ ಧನುಸ್ತಸ್ಯ ಕೃಪಶ್ಚ ಸಾರಥೀ ದ್ರೋಣೋ ಹಯಾನಾಶು ವಿಧಮ್ಯ ಸಾಯಕೈಃ ।

ಸಚರ್ಮ್ಮಖಡ್ಗಂ ರಥಚಕ್ರಮಸ್ಯ ಪ್ರಣುದ್ಯ ಹಸ್ತಸ್ಥಿತಮೇವ ತಸ್ಥುಃ ॥ ೨೬.೪೭ ॥

 

ಕರ್ಣ ಮುರಿಯುತ್ತಾನೆ ಅಭಿಮನ್ಯುವಿನ ಬಿಲ್ಲನ್ನು, ಕೃಪರು ಕೊಲ್ಲುತ್ತಾರೆ ಅವನ ಸಾರಥಿಯನ್ನು, ದ್ರೋಣರು ಕೊಲ್ಲುತ್ತಾರವನ ಕುದುರೆಗಳನ್ನು.  ಬಾಣಗಳಿಂದ ಅವನ ಕತ್ತಿಗುರಾಣಿಯನ್ನೂ ನಾಶಮಾಡಿ,

ಅವನ ಕೈಯಲ್ಲಿರುವ ರಥದ ಚಕ್ರವನ್ನೂ ನಾಶಮಾಡಿ,

ನಿಲ್ಲಿಸುತ್ತಾರೆ ಅಭಿಮನ್ಯುವನ್ನು ಬರಿಗೈಯವನನ್ನಾಗಿ ಮಾಡಿ.

 

ಭೀತೇಷು ಕೃಷ್ಣಾದಥ ತದ್ವಧಾಯ ತೇಷ್ವಾಸಸಾದಾSಶು ಗದಾಯುಧಂ ಗದೀ ।

ದೌಃಶಾಸನಿಸ್ತೌ ಯುಗಪಚ್ಚ ಮಮ್ರತುರ್ಗ್ಗದಾಭಿಘಾತೇನ ಮಿಥೋSತಿಪೌರುಷೌ ॥ ೨೬.೪೮ ॥

 

ಅವನನ್ನು ಕೊಲ್ಲಲು ಎಲ್ಲರೂ ಕೃಷ್ಣಭಯದಿಂದ ನಿಂತಿದ್ದಾಗ,

ಗದೆಹಿಡಿದ ದುಶ್ಯಾಸನ ಪುತ್ರ ಅವನಿಗೆ ಎದುರಾಗುತ್ತಾನಾಗ.

ನಡೆಯಿತು ಪೌರುಷದ ಗದಾಪ್ರಹಾರ,

ಸತ್ತರಿಬ್ಬರು ಹೊಡೆದುಕೊಂಡು ಪರಸ್ಪರ.

No comments:

Post a Comment

ಗೋ-ಕುಲ Go-Kula