Tuesday, 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 82-95

 

ತತ್ರಾSಸದನ್ನಾಗಸುತಾಸಮುದ್ಭವಃ ಪಾರ್ತ್ಥಾತ್ಮಜಃ ಶಾಕುನೇಯಾನ್ ಷಳೇಕಃ ।

ತೈಃ ಪ್ರಾಸಹಸ್ತೈಃ ಕ್ಷತಕಾಯೋSತಿರೂಢಕೋಪಃ ಸ ಖಡ್ಗೇನ ಚಕರ್ತ್ತ ತೇಷಾಮ್ ॥ ೨೫.೮೨॥

 

ಶಿರಾಂಸಿ ವೀರೋ ಬಲವಾನಿರಾವಾನ್  ಭಯಂ ದಧದ್ ಧಾರ್ತ್ತರಾಷ್ಟ್ರೇಷು ಚೋಗ್ರಮ್ ।

ದೃಷ್ಟ್ವಾ ತಮುಗ್ರಂ ಧೃತರಾಷ್ಟ್ರಪುತ್ರೋ ದಿದೇಶ ರಕ್ಷೋSಲಮ್ಭುಸನಾಮಧೇಯಮ್ ॥ ೨೫.೮೩॥

 

ಜಹ್ಯಾರ್ಜ್ಜುನಿಂ ಕ್ಷಿಪ್ರಮಿತಿ ಸ್ಮ ತಚ್ಚ ಸಮಾಸದನ್ನಾಗಸುತಾತನೂಜಮ್ ।

ತಯೋರಭೂದ್ ಯುದ್ಧಮತೀವ ದಾರುಣಂ ಮಾಯಾಯುಜೋರ್ವೀರ್ಯ್ಯವತೋರ್ಮ್ಮಹಾದ್ಭುತಮ್ ॥೨೫.೮೪॥

 

ಆ ದಿನದ ಯುದ್ಧದಿ ಉಲೂಪಿಕೆಯಲ್ಲಿ ಹುಟ್ಟಿದ ಅರ್ಜುನಪುತ್ರ ಇರಾವಂತ,

ಶಕುನಿಯ ಆರು ಜನ ಮಕ್ಕಳನ್ನು ಯುದ್ಧದಲ್ಲಿ ಎದುರಿಸಲೆಂದು ಬಂದುನಿಂತ.

ಈಟಿ ಹಿಡಿದ ಶಕುನಿ ಪುತ್ರರಿಂದ ಇರಾವಂತ ಗಾಯಗೊಂಡ,

ಕೋಪ ಉಕ್ಕಿದವನಾಗಿ ಕತ್ತಿಯಿಂದ ಕತ್ತರಿಸಿದ ಎಲ್ಲರ ರುಂಡ.

ಮಹಾವೀರ, ಬಲಿಷ್ಠನಾದ ಇರಾವಂತ ದುರ್ಯೋಧನಾದಿಗಳಲ್ಲಿ ಭಯ ಮೂಡಿಸಿದ,

ದುರ್ಯೋಧನ ಅಲಂಬುಸ ರಾಕ್ಷಸಗೆ ಅರ್ಜುನನ ಮಗನ ಕೊಲ್ಲಲು ಆಜ್ಞಾಪಿಸಿದ.

ಅಲಂಬುಸ ಉಲೂಪಿಯ ಮಗನಾದ ಇರಾವಂತಗೆ ಎದುರಾದ,

ಮಾಯಾವಿದ್ಯೆ ಬಲ್ಲವರ ಮಧ್ಯೆ ನಡೆಯಿತು ಭೀಕರ ಅದ್ಭುತ ಯುದ್ಧ.

 

ಸಸಾದಿನೋSಶ್ವಾನ್ ಸ ತು ರಾಕ್ಷಸೋSಸೃಜತ್ ತೇ ಪಾರ್ತ್ಥಪುತ್ರಸ್ಯ ಚ ಸಾದಿನೋSಹನನ್ ।

ತತಸ್ತ್ವನನ್ತಾಕೃತಿಮಾಪ್ತಮಾರ್ಜ್ಜುನಿಂ ಸುಪರ್ಣ್ಣರೂಪೋSಹನದಾಶು ರಾಕ್ಷಸಃ ॥ ೨೫.೮೫॥

 

ಆ ರಾಕ್ಷಸ ಕುದುರೆಗಳನ್ನು ಸವಾರರನ್ನು ತನ್ನ ಮಾಯೆಯಿಂದ ಸೃಷ್ಟಿಸಿದ,

ಅವರು ಇರಾವಂತನ ಸೈನಿಕರ ಕೊಂದನಂತರ ರಕ್ಕಸ ಗರುಡರೂಪನಾದ.

ಸರ್ಪರೂಪಿಯಾದ ಇರಾವಂತನನ್ನು ಗರುಡರೂಪೀ ಅಲಂಬುಸ ಕೊಂದ.

 

ಹತಂ ನಿಶಮ್ಯಾSರ್ಜ್ಜುನಿಮುಗ್ರಪೌರುಷೋ ನನಾದ ಕೋಪೇನ ವೃಕೋದರಾತ್ಮಜಃ ।

ಚಚಾಲ ಭೂರ್ನ್ನಾನದತೋSಸ್ಯ ರಾವತಃ ಸಸಾಗರಾಗೇನ್ದ್ರನಗಾ ಭೃಶಂ ತದಾ ॥ ೨೫.೮೬॥

 

ಉಗ್ರ ಪರಾಕ್ರಮಿ ಘಟೋತ್ಕಚ ಇರಾವಂತನ ಸಾವಿನ ಸುದ್ದಿ ಕೇಳಿದ,

ಸಮುದ್ರ, ಪರ್ವತ, ಮರಗಳಿಂದ ಕೂಡಿದ ಭುವಿ ನಡುಗುವಂತೆ ಗರ್ಜಿಸಿದ.

 

ಅಲಮ್ಬುಸಸ್ತಂ ಪ್ರಸಮೀಕ್ಷ್ಯ ಮಾರುತೇಃ ಸುತಂ ಬಲಾಢ್ಯಂ ಭಯತಃ ಪರಾದ್ರವತ್ ।

ಪರಾದ್ರವನ್ ಧಾರ್ತ್ತರಾಷ್ಟ್ರಸ್ಯ ಸೇನಾಃ ಸರ್ವಾಸ್ತಮಾರಾಥ ಸುಯೋಧನೋ ನೃಪಃ ॥ ೨೫.೮೭॥

 

ಬಲಿಷ್ಠ ಘಟೋತ್ಕಚನ ಕಂಡ ಅಲಂಬುಸ ಹೆದರಿಕೊಂಡು ಓಡಿಹೋದ,

ಕೌರವಪಡೆ ಓಡುತ್ತಿರಲು ದುರ್ಯೋಧನ ಘಟೋತ್ಕಚಗೆ ಎದುರಾದ.

 

ಸ ಭೀಮಪುತ್ರಸ್ಯ ಜಘಾನ ಮನ್ತ್ರಿಣೋ ಮಹಾಬಲಾಂಶ್ಚತುರೋSನ್ಯಾಂಸ್ತಥೈವ ।

ಹತಾವಶೇಷೇಷು ಚ ವಿದ್ರವತ್ಸು ಘಟೋತ್ಕಚೋSಭ್ಯಾಹನದಾಶು ತಂ ನೃಪಮ್ ॥ ೨೫.೮೮॥

 

ದುರ್ಯೋಧನ ಘಟೋತ್ಕಚನ ಬಲಶಾಲೀ ನಾಕು ಮಂತ್ರಿಗಳ ಕೊಂದ,

ಅಷ್ಟು ಮಾತ್ರವಲ್ಲದೇ, ಉಳಿದ ಅನೇಕ ಜನರನ್ನು ಕೂಡಾ ಸಂಹರಿಸಿದ.

ಉಳಿದ ಕಾವಲುಪಡೆ ಓಡಲು ಘಟೋತ್ಕಚ ಕೌರವಗೆ ಜೋರು ಹೊಡೆದ.

 

ಸ ಪೀಡ್ಯಮಾನೋ ಯುಧಿ ತೇನ ರಕ್ಷಸಾ ಪ್ರವೇಶಯಾಮಾಸ ಶರಂ ಘಟೋತ್ಕಚೇ ।

ದೃಢಾಹತಸ್ತೇನ ತದಾ ಬಲೀಯಸಾ ಘಟೋತ್ಕಚಃ ಪ್ರವ್ಯಥಿತೇನ್ದ್ರಿಯೋ ಭೃಶಮ್ ।

ತಸ್ಥೌ ಕಥಞ್ಚಿದ್ ಭುವಿ ಪಾತ್ಯಮಾನಃ ಪುನಃ ಶರಾನಪ್ಯಸೃಜತ್ ಸುಯೋಧನೇ ॥ ೨೫.೮೯॥

 

ದುರ್ಯೋಧನ ಘಟೋತ್ಕಚನಿಂದ ವಿಪರೀತ ಪೀಡೆಗೊಳಗಾದ,

ಘಟೋತ್ಕಚನ ದೇಹದೊಳಗೆ ಕೌರವ ಬಾಣವನ್ನು ತೂರಿಸಿದ.

ನೋವುಂಡ ಘಟೋತ್ಕಚ ರಥದಿಂದ ನೆಲಕ್ಕೆ ಬಿದ್ದ,

ಆದರೂ ದುರ್ಯೋಧನಗೆ ಬಾಣ ಬಿಟ್ಟ ಕಷ್ಟದಿಂದ.

 

ಚಿರಪ್ರಯುದ್ಧೌ ನೃಪರಾಕ್ಷಸಾಧಿಪೌ ಪರಸ್ಪರಾಜೇಯತಮೌ ರಣಾಜಿರೇ ।

ದ್ರೋಣಾದಯೋ ವಿಕ್ಷ್ಯ ರಿರಕ್ಷಿಷನ್ತಃ ಸುಯೋಧನಂ ಪ್ರಾಪುರಮಿತ್ರಸಾಹಾಃ ॥ ೨೫.೯೦॥

 

ಘಟೋತ್ಕಚ ದುರ್ಯೋಧನರು ಯುದ್ಧ ಮಾಡಿದರು ದೀರ್ಘಕಾಲ,

ಆದರೂ ಒಬ್ಬರನ್ನೊಬ್ಬರು ಸೋಲಿಸಲು ಸಾಧ್ಯವಾಗಲೇ ಇಲ್ಲ.

ಇದನ್ನು ವೀಕ್ಷಿಸಿದ ದ್ರೋಣಾದಿಗಳು,

ಬಂದರು ದುರ್ಯೋಧನನ ರಕ್ಷಿಸಲು.

 

ಸ ದ್ರೋಣಶಲ್ಯೌ ಗುರುಪುತ್ರಗೌತಮೌ ಭೂರಿಶ್ರವಃಕೃತವರ್ಮ್ಮಾದಿಕಾಂಶ್ಚ ।

ವವರ್ಷ ಬಾಣೈರ್ಗ್ಗಗನಂ ಸಮಾಶ್ರಿತೋ ಘಟೋತ್ಕಚಃ ಸ್ಥೂಲತಮೈಃ ಸುವೇಗೈಃ ॥ ೨೫.೯೧॥

 

ದ್ರೋಣ, ಶಲ್ಯ, ಅಶ್ವತ್ಥಾಮ, ಕೃಪ, ಭೂರಿಶ್ರವಸ್ಸು, ಕೃತವರ್ಮರ ಮೇಲೆ,

ಆಕಾಶದಲ್ಲಿದ್ದ ಘಟೋತ್ಕಚ ಸುರಿಸುತ್ತಾನೆ ದಪ್ಪ ವೇಗ ಬಾಣಗಳ ಮಳೆ.

 

ತಮೇಕಮಗ್ರ್ಯೈ ರಥಿಭಿಃ ಪರಿಷ್ಕೃತಂ ನಿರೀಕ್ಷ್ಯ ಭೀಮೋSಭ್ಯಗಮತ್ ಸಮಸ್ತಾನ್ ।

ದ್ರೋಣೋSತ್ರ ಭೀಮಪ್ರಹಿತೈಃ ಶರೋತ್ತಮೈಃ ಸುಪೀಡಿತಃ ಪ್ರಾಪ್ತಮೂರ್ಚ್ಛಃ ಪಪಾತ ॥ ೨೫.೯೨॥

 

ಶ್ರೇಷ್ಠ ರಥಿಗಳಿಂದ ಘಟೋತ್ಕಚ ಸುತ್ತುವರೆಯಲ್ಪಟ್ಟಿದ್ದ,

ಅದನ್ನು ಕೇಳಿದ ಭೀಮಸೇನ ತಾನು ಅವರೆಲ್ಲರಿಗೆ ಎದುರಾದ.

ಆ ಯುದ್ಧದಲ್ಲಿ ದ್ರೋಣಚಾರ್ಯರು, ಭೀಮ ಬಾಣಗಳಿಂದ ಮೂರ್ಛೆಬಿದ್ದರು.

 

ದ್ರೌಣಿಂ ಕೃಪಾದ್ಯಾನ್ ಸಸುಯೋಧನಾಂಶ್ಚ ಚಕಾರ ಭೀಮೋ ವಿರಥಾನ್ ಕ್ಷಣೇನ ।

ನಿವಾರ್ಯ್ಯಮಾಣಾಂಸ್ತು ವೃಕೋದರೇಣ ಘಟೋತ್ಕಚಸ್ತಾನ್ ಪ್ರವವರ್ಷ ಸಾಯಕೈಃ ॥ ೨೫.೯೩॥

 

 

ಅಶ್ವತ್ಥಾಮ, ಕೃಪ, ದುರ್ಯೋಧನಾದಿಗಳನ್ನು  ಭೀಮ ರಥಹೀನರ ಮಾಡಿದ.

ವೃಕೋದರನಿಂದ ತಡೆಯಲ್ಪಟ್ಟವರೆಲ್ಲರನ್ನೂ ಘಟೋತ್ಕಚ ಹೊಡೆದ. 

 

ತೇನಾಮ್ಬರಸ್ಥೇನ ತರುಪ್ರಮಾಣೈರಭ್ಯರ್ದ್ದಿತಾಃ ಕುರವಃ ಸಾಯಕೌಘೈಃ ।

ಭೂಮೌ ಚ ಭೀಮೇನ ಶರೌಘಪೀಡಿತಾಃ ಪೇತುರ್ನ್ನೇದುಃ ಪ್ರಾದ್ರವಂಶ್ಚಾತಿಭೀತಾಃ ॥ ೨೫.೯೪॥

 

ಆಕಾಶದಲ್ಲಿದ್ದ ಘಟೋತ್ಕಚನಿಂದ ಕೌರವರಿಗೆ ದೈತ್ಯ ಬಾಣಗಳಿಂದ ಹೊಡೆತ,

ನೆಲದಮೇಲೆ ಅವರು ಭೀಮಸೇನಬಾಣಗಳಿಂದ ಓಡಿದರು ಆಗಿ ಪೀಡಿತ.

 

ಸರ್ವಾಂಶ್ಚ ತಾಞ್ಚಿಬಿರಂ ಪ್ರಾಪಯಿತ್ವಾ ವಿನಾ ಭೀಷ್ಮಂ ಕೌರವಾನ್ ಭೀಮಸೇನಃ ।

ಘಟೋತ್ಕಚಶ್ಚಾನದತಾಂ ಮಹಾಸ್ವನೌ ನಾದೇನ ಲೋಕಾನಭಿಪೂರಯನ್ತೌ ॥ ೨೫.೯೫॥

 

ಭೀಷ್ಮರ ಬಿಟ್ಟು ಉಳಿದವರನ್ನೆಲ್ಲಾ ಶಿಬಿರಕ್ಕಟ್ಟಿದರು ಘಟೋತ್ಕಚ, ಭೀಮಸೇನ,

ರಣಭೂಮಿ ಆವರಿಸಿ ಮಾರ್ದನಿಸಿತು ಅವರಿಬ್ಬರ ಭಾರೀ ಧ್ವನಿಯ ಗರ್ಜನ.

No comments:

Post a Comment

ಗೋ-ಕುಲ Go-Kula