Tuesday, 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 25: 103-113

 

ಸಂಶ್ರಾವಿತಃ ಕ್ರೂರವಚಃ  ಸ ತೇನ ಚಕ್ರೇ ಸತ್ಯಂ ಮೃತ್ಯುಭಯಂ ವಿಹಾಯ ।

ಶಕ್ತ್ಯಾ  ಹನಿಷ್ಯಾಮಿ ಪರಾನಿತಿ ಸ್ಮ ಚಕ್ರೇ ಚ ತತ್ ಕರ್ಮ್ಮ ತಥಾSಪರೇದ್ಯುಃ  ॥೨೫.೧೦೩॥

 

ಭೀಷ್ಮರು ದುರ್ಯೋಧನ ಆಡಿದ ಕ್ರೂರವಚನ ಕೇಳಿಸಿಕೊಳ್ಳುತ್ತಾರೆ,

ಮೃತ್ಯುಭಯ ಬಿಟ್ಟು ಶಕ್ತಿಪೂರ್ತಿ ವೈರಿಸಂಹಾರದ ಶಪಥಗೈಯ್ಯುತ್ತಾರೆ.

ಮಾರನೇ ದಿನದ ಯುದ್ಧದಲ್ಲಿ ಆ ಪ್ರತಿಜ್ಞೆಯನ್ನು ಸತ್ಯ ಮಾಡುತ್ತಾರೆ.

 

ತಂ ಶಕ್ತಿತೋ ಗುಪುರ್ದ್ಧಾರ್ತ್ತರಾಷ್ಟ್ರಾಸ್ತೇನಾರ್ದ್ದಿತಾಶ್ಚೇದಿಪಾಞ್ಚಾಲಮತ್ಸ್ಯಾಃ ।

ಪರಾದ್ರವನ್ ಭೀಷ್ಮಬಾಣೋರುಭೀತಾಃ ಸಿಂಹಾರ್ದ್ದಿತಾಃ ಕ್ಷುದ್ರಮೃಗಾ ಇವಾSರ್ತ್ತಾಃ ॥ ೨೫.೧೦೪॥

 

ಭೀಷ್ಮರನ್ನು ದುರ್ಯೋಧನಾದಿಗಳು ತಮ್ಮ ಪೂರ್ಣಶಕ್ತಿಯಿಂದ ರಕ್ಷಿಸಿಕೊಳ್ಳುತ್ತಾರೆ,

ಭೀಷ್ಮಪರಾಕ್ರಮದಿಂದ ಪೀಡಿತರಾದ ಚೇದಿ, ಪಾಂಚಾಲ, ಮತ್ಸ್ಯದೇಶದವರು ಓಡುತ್ತಾರೆ.

ಸಿಂಹನ ಆಕ್ರಮಣಕ್ಕೆ ಸಿಲುಕಿದ ಕ್ಷುದ್ರ ಮೃಗಗಳಂತೆ ಅವರು ಪಲಾಯನ ಮಾಡುತ್ತಾರೆ.

 

ಸಂಸ್ಥಾಪ್ಯ ತಾನ್ ಭೀಷ್ಮಮಭಿಪ್ರಯಾನ್ತಮಲಮ್ಬುಸೋSವಾರಯತ್ ಪಾರ್ತ್ಥಸೂನುಮ್ ।

ವಿಜಿತ್ಯ ತಂ ಕೇಶವಭಾಗಿನೇಯೋ ಯಯೌ ಭೀಷ್ಮಂ ಧಾರ್ತ್ತರಾಷ್ಟ್ರೋSಮುಮಾರ ॥೨೫.೧೦೫॥

 

ಅಭಿಮನ್ಯು ಅವರನ್ನು ನಿಲ್ಲಿಸಿ ಹುರಿದುಂಬಿಸುತ್ತಾ ಧೈರ್ಯ ತುಂಬುತ್ತಾನೆ,

ಭೀಷ್ಮರೆದುರು ಯುದ್ಧಕ್ಕೆ ಅಣಿಗೊಳಿಸುವವನನ್ನು ಅಲಂಬುಸ ತಡೆಯುತ್ತಾನೆ.

ಕೇಶವನಳಿಯ ಅಭಿಮನ್ಯು ಅಲಂಬುಸನ ಗೆಲ್ಲುತ್ತಾನೆ,

ಭೀಷ್ಮಾಚಾರ್ಯರೊಡನೆ ಯುದ್ಧಕೆಂದು ಹೊರಡುತ್ತಾನೆ.

ಆಗ ದುರ್ಯೋಧನನು ಅಭಿಮನ್ಯುವಿಗೆ ಎದುರಾಗುತ್ತಾನೆ.

 

 

ತದ್ ಯುದ್ಧಮಾಸೀನ್ನೃಪಪಾರ್ತ್ಥಪುತ್ರಯೋರ್ವಿಚಿತ್ರಮತ್ಯದ್ಭುತಮುಗ್ರರೂಪಮ್ ।

ಸಮಂ ಚಿರಂ ತತ್ರ ಧನುಶ್ಚಕರ್ತ್ತ ಧ್ವಜಂ ಚ ರಾಜಾ ಸಹಸಾSಭಿಮನ್ಯೋಃ ॥ ೨೫.೧೦೬॥

 

ದುರ್ಯೋಧನ ಮತ್ತು ಅಭಿಮನ್ಯು ಮಧ್ಯೆ ವಿಚಿತ್ರ ಅದ್ಭುತವಾದ,

ನಡೆಯುತ್ತದೆ ಅತಿ ಭಯಾನಕವಾದ ಬಹಳ ಕಾಲದ ಯುದ್ಧ.

ಆ ಯುದ್ಧದಿ ಕೌರವ ಅಭಿಮನ್ಯುವಿನ ಧನುಸ್ಸು ಧ್ವಜ ಕತ್ತರಿಸಿದ.

 

ಅಥೈನಮುಗ್ರೈಶ್ಚ ಶರೈರ್ವವರ್ಷ ಸೂತಂ ಚ ತಸ್ಯಾSಶು ಜಘಾನ ವೀರಃ ।

ತದಾSSಸದದ್ ಭೀಮಸೇನೋ ನೃಪಂ ತಂ ಜಘಾನ ಚಾಶ್ವಾನ್ ಧೃತರಾಷ್ಟ್ರಜಸ್ಯ ॥ ೨೫.೧೦೭॥

 

ಬಿಲ್ಲುಹೀನ ಅಭಿಮನ್ಯುವ ಕೌರವ ಬಾಣಗಳಿಂದ ಪೀಡಿಸಿದ,

ಬೇಗನೇ ಅಭಿಮನ್ಯುವಿನ ಸಾರಥಿಯ ಕೂಡಾ ಕೊಂದ್ಹಾಕಿದ.

ಆಗ ಭೀಮ ದುರ್ಯೋಧನನ ಆಕ್ರಮಿಸಿದ,

ದುರ್ಯೋಧನನ ಕುದುರೆಗಳ ಕೊಂದ್ಹಾಕಿದ.

 

ದ್ರೋಣೋ ದ್ರೌಣಿರ್ಭಗದತ್ತಃ ಕೃಪಶ್ಚ ಸಚಿತ್ರಸೇನಾ ಅಭ್ಯಯುರ್ಭೀಮಸೇನಮ್ ।

ಸರ್ವಾಂಶ್ಚ ತಾನ್  ವಿಮುಖೀಕೃತ್ಯ ಭೀಮಃ  ಸ ಚಿತ್ರಸೇನಾಯ ಗದಾಂ ಸಮಾದದೇ ॥ ೨೫.೧೦೮॥

 

ದ್ರೋಣ, ಅಶ್ವತ್ಥಾಮ, ಭಗದತ್ತ, ಕೃಪ, ಚಿತ್ರಸೇನ,

ಇವರೆಲ್ಲರೂ ಆಕ್ರಮಿಸುತ್ತಾರೆ ಭೀಮಸೇನನನ್ನ.

ಅವರೆಲ್ಲರನ್ನೂ ಭೀಮಸೇನನು ತಾನು ಹೊಡೆದು ಓಡಿಸಿದ,

ದುರ್ಯೋಧನಾನುಜ ಚಿತ್ರಸೇನನ ಕೊಲ್ಲಲು ಗದೆ ಹಿಡಿದ.

 

ತಾಮುದ್ಯತಾಂ ವೀಕ್ಷ್ಯ ಪರಾದ್ರವಂಸ್ತೇ ಸ ಚಿತ್ರಸೇನಶ್ಚ ರಥಾದವಪ್ಲುತಃ ।

ಸಞ್ಚೂರ್ಣ್ಣಿತೋ ಗದಯಾ ತದ್ರಥಶ್ಚ ತಜ್ಜೀವನೇನೋದ್ಧೃಷಿತಾಶ್ಚ ಕೌರವಾಃ ॥ ೨೫.೧೦೯॥

 

ಭೀಮಸೇನನೆಸೆದ ಗದೆ ತಮ್ಮೆಡೆ ಬರುವ ನೋಟ,

ಮಾಡಿಸಿತು ಬೆದರಿದ ದ್ರೋಣಾದಿಗಳಿಗೆ ಓಟ.

ಚಿತ್ರಸೇನ ತನ್ನ ರಥದಿಂದ ಕೆಳಗೆ ಹಾರಿಕೊಂಡ,

ರಥ ಪುಡಿಯಾಯ್ತು ಭೀಮನೆಸೆದ ಗದೆಯಿಂದ.

ಚಿತ್ರಸೇನ ಉಳಿದದ್ದಕ್ಕಾಯಿತು ಕೌರವರಿಗಾನಂದ.

 

ಭೀಷ್ಮಸ್ತು ಪಾಞ್ಚಾಲಕರೂಶಚೇದಿಷ್ವಹನ್ ಸಹಸ್ರಾಣಿ ಚತುರ್ದ್ದಶೋಗ್ರಃ ।

ರಥಪ್ರಬರ್ಹಾನತಿತಿಗ್ಮತೇಜಾ ವಿದ್ರಾವಯಾಮಾಸ ಪರಾನವೀನಿವ ॥ ೨೫.೧೧೦॥

 

ಇತ್ತ, ರಣಭೂಮಿಯ ಇನ್ನೊಂದು ಮಗ್ಗಲಲ್ಲಿ,

ಭೀಷ್ಮರಿಂದ ಮಾರಣಹೋಮ ನಡೆದಿತ್ತು ಅಲ್ಲಿ.

ಪಾಂಚಾಲ, ಕರೂಶ, ಚೇದಿ ದೇಶಗಳ ಹದಿನಾಕು ಸಾವಿರ ರಥಿಕರು,

ಭೀಷ್ಮರಿಂದ ಕೊಲ್ಲಲ್ಪಟ್ಟರು, ಶತ್ರುಗಳನ್ನು ಕುರಿಗಳಂತೆ ಓಡಿಸಿದರು.

 

ವಿದ್ರಾಪ್ಯ ಸರ್ವಾಮಪಿ ಪಾಣ್ಡುಸೇನಾಂ ವಿಶ್ರಾವ್ಯ ಲೋಕೇಷು ಚ ಕೀರ್ತ್ತಿಮಾತ್ಮನಃ ।

ಸೇನಾಂ ಸಮಾಹೃತ್ಯ ಯಯೌ ನಿಶಾಗಮೇ ಸಮ್ಪೂಜ್ಯಮಾನೋ ಧೃತರಾಷ್ಟ್ರಪುತ್ರೈಃ ॥ ೨೫.೧೧೧॥

 

ಭೀಷ್ಮಾಚಾರ್ಯರು ಎಲ್ಲಾ ಪಾಂಡವ ಸೇನೆಯನ್ನು ಓಡಿಸುತ್ತಾರೆ,

ಲೋಕದಲ್ಲಿ ತಮ್ಮ ಕೀರ್ತಿ ಸತ್ಯವಾದದ್ದು ಎಂಬುದ ತೋರಿಸುತ್ತಾರೆ.

ತಮ್ಮ ಸೇನೆಯನ್ನು ಹಿಂದಕ್ಕೆ ಬರುವಂತೆ ಕರೆಯುತ್ತಾರೆ,

ಕೌರವಾದಿಗಳಿಂದ ಸ್ತುತಿಸಲ್ಪಟ್ಟು ಶಿಬಿರಕ್ಕೆ ತೆರಳುತ್ತಾರೆ.

 

[ಒಂಬತ್ತನೇ ದಿನದ ಯುದ್ಧದಲ್ಲಿ ಇನ್ನೂ ಕೆಲವು ಘಟನೆ ನಡೆದಿರುವುದನ್ನು ಇಲ್ಲಿ ಹೇಳುತ್ತಾರೆ:]

 

ದ್ರೋಣೋ ವಿರಾಟಸ್ಯ ಪುರೋ ನಿಹತ್ಯ ಶಙ್ಖಂ ಸುತಂ ತಸ್ಯ ವಿಜಿತ್ಯ ತಂ ಚ ।

ವಿದ್ರಾಪ್ಯ ಸೇನಾಮಪಿ ಪಾಣ್ಡವಾನಾಂ ಯಯೌ ನದೀಜೇನ ಸಹೈವ ಹೃಷ್ಟಃ ॥ ೨೫.೧೧೨॥

 

ದ್ರೋಣರು ವಿರಾಟನೆದುರಲ್ಲೇ ಅವನ ಮಗ ಶಂಖನ ಕೊಲ್ಲುತ್ತಾರೆ,

ವಿರಾಟನ ಗೆದ್ದು, ಪಾಂಡವಸೇನೆ ಓಡಿಸಿ ಭೀಷ್ಮರ ಜೊತೆ ನಡೆಯುತ್ತಾರೆ.

 

ಭೀಮಾರ್ಜ್ಜುನಾವಪಿ ಶತ್ರೂನ್ ನಿಹತ್ಯ ವಿದ್ರಾಪ್ಯ ಸರ್ವಾಂಶ್ಚ ಯುಧಿ ಪ್ರವೀರಾನ್ ।

ಯುಧಿಷ್ಠಿರೇಣಾಪಹೃತೇ ಸ್ವಸೈನ್ಯೇ ಭೀತೇನ ಭೀಷ್ಮಾಚ್ಛಿಬಿರಂ ಪ್ರಜಗ್ಮತುಃ ॥ ೨೫.೧೧೩॥

 

ರಣಭೂಮಿಯ ಮತ್ತೊಂದು ಕಡೆ, ಭೀಮರ್ಜುನರಿಂದ ನಾಶ ಶತ್ರುಪಡೆ.

ಧರ್ಮರಾಜ ಭೀಷ್ಮಾಚಾರ್ಯರಿಂದ ಭಯಗೊಂಡು,

ವಾಪಸಾಗುತ್ತಿದ್ದ ತನ್ನ ಸೈನ್ಯವ ಹಿಂದೆ ಕರೆಸಿಕೊಂಡು,

ಭೀಮಾರ್ಜುನರೂ ಸೇರಿದರು ಶಿಬಿರವೆಂಬ ಗೂಡು.

No comments:

Post a Comment

ಗೋ-ಕುಲ Go-Kula