Wednesday, 22 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 49-58

 

ತಸ್ಮಿನ್ ಹತೇ ಶತ್ರುರವಂ ನಿಶಮ್ಯ ಹರ್ಷೋದ್ಭವಂ ಮಾರುತಿರುಗ್ರವಿಕ್ರಮಃ ।

ವಿಜಿತ್ಯ ಸರ್ವಾನಪಿ ಸೈನ್ಧವಾದೀನ್ ಯುಧಿಷ್ಠಿರಸ್ಯಾನುಮತೇ ನ್ಯಷೀದತ್  ॥೨೬.೪೯॥

 

ಅಭಿಮನ್ಯುವಿನ ಸಾವು ಶತ್ರುಗಳಲ್ಲಿ ತಂದಿತ್ತು ಹರ್ಷದ ಧ್ವನಿ,

ಜಯದ್ರಥ ಮೊದಲಾದವರ ಗೆದ್ದ ಭೀಮಸೇನ ವೀರಾಗ್ರಣಿ.

ಯುಧಿಷ್ಠಿರನ ಅನುಮತಿಯಿಂದ, ಭೀಮ ಅವನ ಸಮೀಪದಲ್ಲೇ ನಿಂದ.

 

ವ್ಯಾಸಸ್ತದಾ ತಾನಮಿತಾತ್ಮವೈಭವೋ ಯುಧಿಷ್ಠಿರಾದೀನ್ ಗ್ಲಪಿತಾನಭೋಧಯತ್ ।

ವಿಜಿತ್ಯ ಸಂಶಪ್ತಕಪೂಗಮುಗ್ರೋ ನಿಶಾಗಮೇ ವಾಸವಿರಾಪ ಸಾಚ್ಯುತಃ ॥೨೬.೫೦॥

 

ಆಗ ಸರ್ವಜ್ಞರಾದ ಎಣೆಯಿರದ ಆತ್ಮ ವೈಭವದ ಗುಣಸಾಗರರಾದ ವೇದವ್ಯಾಸರು,

ಅಭಿಮನ್ಯುವಿನ ಸಾವಿನಿಂದ ನೊಂದ ಯುಧಿಷ್ಠಿರಾದಿಗಳಿಗೆ ಬೋಧಿಸಿ ಸಂತೈಸಿದರು.

ಇತ್ತ ಅರ್ಜುನ ಸಂಶಪ್ತಕರ ಸಮೂಹವನ್ನು ಗೆದ್ದ, ರಾತ್ರಿಯಾಗುತ್ತಿರಲು ಕೃಷ್ಣಸಮೇತ ವಾಪಸಾದ.

 

ನಿಶಮ್ಯ ಪುತ್ರಸ್ಯ ವಧಂ ಭೃಶಾರ್ತ್ತಃ ಪ್ರತಿಶ್ರವಂ ಸೋSಥ ಚಕಾರ ವೀರಃ ।

ಜಯದ್ರಥಸ್ಯೈವ ವಧೇ ನಿಶಾಯಾಂ ಸ್ವಪ್ನೇSನಯತ್ ತಂ ಗಿರಿಶಾನ್ತಿಕಂ ಹರಿಃ ॥೨೬.೫೧॥

 

ಮಗನಾದ ಅಭಿಮನ್ಯುವಿನ ಸಾವನ್ನು ಕೇಳಿ ಸಂಕಟಗೊಂಡ ಅರ್ಜುನ,

ಸಂಹಾರ ಮಾಡುವುದಾಗಿ ಪ್ರತಿಜ್ಞೆ ಮಾಡಿದ ಕಾರಣಕರ್ತ ಜಯದ್ರಥನನ್ನ.

ಶ್ರೀಕೃಷ್ಣ ಆ ರಾತ್ರಿ ಕನಸಿನಲ್ಲಿ ರುದ್ರನ ಸಮೀಪ ಕೊಂಡೊಯ್ದ ಅರ್ಜುನನನ್ನ.

 

ಸ್ವಯಮೇವಾಖಿಲಜಗದ್ರಕ್ಷಾದ್ಯಮಿತಶಕ್ತಿಮಾನ್ ।

ಅಪ್ಯಚ್ಯುತೋ ಗುರುದ್ವಾರಾ ಪ್ರಸಾದಕೃದಹಂ ತ್ವಿತಿ ॥೨೬.೫೨॥

 

ಜ್ಞಾಪಯನ್ ಫಲ್ಗುನಸ್ಯಾಸ್ತ್ರಗುರುಂ ಗಿರಿಶಮಞ್ಜಸಾ ।

ಪ್ರಾಪಯಿತ್ವೈನಮೇವೈತತ್ಪ್ರಸಾದಾದಸ್ತ್ರಮುದ್ಬಣಮ್ ।

ಚಕ್ರೇ ತದರ್ಥಮೇವಾಸ್ಯ ರಕ್ಷಾಂ ಚಕ್ರೇ ತದಾತ್ಮಿಕಾಮ್ ॥೨೬.೫೩॥

 

ಎಣೆಯಿರದ ಶಕ್ತಿಯ ಜಗದ್ರಕ್ಷಕ ತಾನೇ ಆಗಿದ್ದರೂ,

ಲೋಕಶಿಕ್ಷಣಕ್ಕಾಗಿ ಇವೆಲ್ಲಾ ಮಾಡುತ್ತಾನೆ ಜಗದ್ಗುರು.

ಸ್ವರೂಪಯೋಗ್ಯ ಗುರುಗಳ ಮೂಲಕವೇ ಆಗಲೆಂದು ಅನುಗ್ರಹ,

ಅರ್ಜುನನ ಕನಸಲಿ ಕರೆದೊಯ್ದ ಅವನ ಗುರು ರುದ್ರರ ಸನಿಹ.

ಕೊಡಿಸಿದ ಶಿವನಿಂದ ಅವನೇ ಕೊಟ್ಟ ಪಾಶುಪತಾಸ್ತ್ರಕ್ಕೆ ಹೆಚ್ಚಿನ ಶಕ್ತಿ,

ರುದ್ರದೇವರ ರಕ್ಷಣೆಯನ್ನೂ ಕೊಡಿಸಿದ್ದು ಜಗನ್ನಿಯಾಮಕನ ಯುಕ್ತಿ.

 

ಸಾನ್ತ್ವಯಿತ್ವಾ ಸುಭದ್ರಾಂ ಚ ಗತ್ವೋಪಪ್ಲಾವ್ಯಮಚ್ಯುತಃ ।

ಯೋಜಯಿತ್ವಾ ರಥಂ ಪ್ರಾತಃ ಸಾರ್ಜ್ಜುನೋ ಯುದ್ಧಮಭ್ಯಯಾತ್ ॥೨೬.೫೪॥

 

ಶ್ರೀಕೃಷ್ಣನು ಉಪಪ್ಲಾವ್ಯಕ್ಕೆ ಹೋದ, ಸುಭದ್ರೆಯನ್ನು ಸಾಂತ್ವನಗೊಳಿಸಿದ.

ಮಾರನೇ ಬೆಳಿಗ್ಗೆ ರಥವನ್ನು ಸಿದ್ಧಮಾಡಿ, ಯುದ್ಧಕೆ ಹೊರಟ ಅರ್ಜುನನೊಡಗೂಡಿ.

 

ಶ್ರುತ್ವಾ ಪ್ರತಿಜ್ಞಾಂ ಪುರುಹೂತಸೂನೋರ್ದ್ದುರ್ಯ್ಯೋಧನೇನಾರ್ತ್ಥಿತಃ ಸಿನ್ಧುರಾಜಮ್ ।

ತ್ರಾತಾಸ್ಮ್ಯಹಂ ಸರ್ವಥೇತಿ ಪ್ರತಿಜ್ಞಾಂ ಕೃತ್ವಾ ದ್ರೋಣೋ ವ್ಯೂಹಮಭೇದ್ಯಮಾತನೋತ್ ॥೨೬.೫೫॥

 

ಅರ್ಜುನನ ಪ್ರತಿಜ್ಞೆಯನ್ನು ಕೇಳಿದ ದುರ್ಯೋಧನನಿಂದ ದ್ರೋಣರಲ್ಲಿ ಪ್ರಾರ್ಥನೆ,

‘ಜಯದ್ರಥನ ಎಲ್ಲ ರೀತಿಯಿಂದ ರಕ್ಷಿಸುತ್ತೇನೆ’ ಎಂದು ದ್ರೋಣಚಾರ್ಯರ ಪ್ರತಿಜ್ಞೆ.

ಅವರಿಂದಲೇ ಮಾಡಲ್ಪಡುತ್ತದೆ ಭೇದಿಸಲಾಗದ ಯುದ್ಧವ್ಯೂಹದ ವಿಶೇಷ ರಚನೆ.

 

ಸ ದಿವ್ಯಮಗ್ರ್ಯಂ ಶಕಟಾಬ್ಜಚಕ್ರಂ ಕೃತ್ವಾ ಸ್ವಯಂ ವ್ಯೂಹಮುಖೇ ವ್ಯವಸ್ಥಿತಃ ।

ಪೃಷ್ಠೇ ಕರ್ಣ್ಣದ್ರೌಣಿಕೃಪೈಃ ಸಶಲ್ಯೈರ್ಜ್ಜಯದ್ರಥಂ ಗುಪ್ತಮಧಾತ್ ಪರೈಶ್ಚ ॥೨೬.೫೬॥

 

ದ್ರೋಣಾಚಾರ್ಯರು ರಚಿಸಿದರು ದಿವ್ಯವಾದ ಶಕಟಾಬ್ಜಚಕ್ರ.

(ಹೊರಗಿನಿಂದ ಅದು ಬಂಡಿಯ ಆಕಾರ,

 ಅದರ ಒಳಗಿನ ವ್ಯೂಹ ಪದ್ಮಾಕಾರ,

 ಮಧ್ಯದಲ್ಲಿನ ವ್ಯೂಹವದು ಚಕ್ರಾಕಾರ.)

ತಾನೇ ವ್ಯೂಹದ ಮುಂಭಾಗದಲ್ಲಿ ನಿಂತರು ದ್ರೋಣಾಚಾರ್ಯ.

ಹಿಂಭಾಗದಲ್ಲಿ ಕರ್ಣ,ಅಶ್ವತ್ಥಾಮ,ಕೃಪಾ,ಶಲ್ಯ, ಮೊದಲಾದವರನ್ನು,

ನಿಯೋಜಿಸಿ ವ್ಯವಸ್ಥೆಯ ಮಾಡುತ್ತಾರೆ ಜಯದ್ರಥನ ರಕ್ಷಣೆಯನ್ನು.

 

ಅಥಾರ್ಜ್ಜುನೋ ದಿವ್ಯರಥೋಪರಿಸ್ಥಿತಃ ಸುರಕ್ಷಿತಃ ಕೇಶವೇನಾವ್ಯಯೇನ ।

ವಿಜಿತ್ಯ ದುರ್ಮ್ಮರ್ಷಣಮಗ್ರತೋSಭ್ಯಯಾದ್ ದ್ರೋಣಂ ಸುಧನ್ವಾ ಗುರುಮುಗ್ರಪೌರುಷಃ ॥೨೬.೫೭॥

 

ಆನಂತರ ಅಲೌಕಿಕ ರಥವೇರಿ ಕುಳಿತಿದ್ದ, ನಾಶವಿರದ ಭಗವಂತನಿಂದ ರಕ್ಷಿತನಾದ, ಧನುರ್ಧಾರಿ ಅರ್ಜುನನು ಮೊದಲು ಎದುರಾದ ದುರ್ಯೋಧನನ ತಮ್ಮ ದುರ್ಮರ್ಷಣನನ್ನು,

 ಸುಲಭವಾಗಿ ಗೆದ್ದು,ಉಗ್ರಪೌರುಷವುಳ್ಳವನಾಗಿ ಎದುರುಗೊಳ್ಳುತ್ತಾನೆ ದ್ರೋಣಾಚಾರ್ಯರನ್ನು.

 

ಪ್ರದಕ್ಷಿಣೀಕೃತ್ಯ ತಮಾಶ್ವಗಾತ್ ತತಃ ಕಾಲಾತ್ಯಯಂ ತ್ವೇವ ವಿಶಙ್ಕಮಾನಃ ।

ರಥಂ ಮನೋವೇಗಮಥಾನಯದ್ಧರಿರ್ಯ್ಯಥಾ ಶರಾಃ ಪೇತುರಮುಷ್ಯ ಪೃಷ್ಠತಃ ॥೨೬.೫೮॥

 

ಅರ್ಜುನ ದ್ರೋಣಾಚಾರ್ಯರೊಂದಿಗೆ ಮಾಡಲಿಲ್ಲ ಯುದ್ಧ,

ಅವರಿಗೆ ತನ್ನ ರಥದಲ್ಲೇ ಪ್ರದಕ್ಷಿಣೆ ಮಾಡಿ ಮುಂದೆ ಹೋದ.

ಶ್ರೀಕೃಷ್ಣ ಪರಮಾತ್ಮ ರಥವನ್ನು ನಡೆಸುತ್ತಾನೆ ಮನೋವೇಗದಲ್ಲಿ,

ಅರ್ಜುನಗೆಂದು ಬಂದ ಬಾಣಗಳು ಅವನ  ಹಿಂದೆ ಬೀಳುವವಲ್ಲಿ.

No comments:

Post a Comment

ಗೋ-ಕುಲ Go-Kula