Tuesday, 21 March 2023

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 26: 23-35

 

ವಿಸೃಜ್ಯ ಭೀಮಂ ಸ ಚ ಪಾರ್ತ್ಥಮೇವ ಯಯೌ ಗಜಸ್ಕನ್ಧಗತೋ ಗಜಂ ತಮ್ ।

ಪ್ರಚೋದಯಾಮಾಸ ರಥಾಯ ತಸ್ಯ ಚಕ್ರೇSಪಸವ್ಯಂ ಹರಿರೇನಮಾಶು ॥ ೨೬.೨೩ ॥

 

ಅರ್ಜುನ ಬರುತ್ತಿದ್ದಂತೆಯೇ ಆನೆಯ ಮೇಲಿದ್ದ ಭಗದತ್ತ,

ಭೀಮಸೇನನ ಬಿಟ್ಟು ಏರಿ ಹೋಗುತ್ತಾನೆ  ಅರ್ಜುನನತ್ತ.

ನೀಡಿದ ಅರ್ಜುನನ ರಥ ಭಗ್ನ ಮಾಡಲು ಸುಪ್ರತೀಕ ಆನೆಗೆ ಪ್ರಚೋದನೆ,

ಶೀಘ್ರ ಕೃಷ್ಣ ರಥಪಥ ಬದಲಿಸಿ ಓಡಿಸಿದ ಆನೆಸುತ್ತ ವೇಗದ ಅಪ್ರದಕ್ಷಿಣೆ.

 

ಮನೋಜವೇನೈವ ರಥೇ ಪರೇಣ ಸಮ್ಭ್ರಾಮ್ಯಮಾಣೇ ನತು ತಂ ಗಜಃ ಸಃ ।

ಪ್ರಾಪ್ತುಂ ಶಶಾಕಾಥ ಶರೈಃ ಸುತೀಕ್ಷ್ಣೈರಭ್ಯರ್ದ್ಧಯಾಮಾಸ ನೃಪಂ ಸ ವಾಸವಿಃ ॥ ೨೬.೨೪ ॥

 

ಮನೋವೇಗಕ್ಕೂ ಮೀರಿದ ವೇಗದಿಂದ ಸುತ್ತುತ್ತಿತ್ತು ಕೃಷ್ಣನ ರಥ,

ಸುಪ್ರತೀಕ ಆನೆ ಆಗಲಿಲ್ಲ ಅರ್ಜುನನ ಹಿಡಿಯುವಲ್ಲಿ ಸಮರ್ಥ.

ಆಗ ಅರ್ಜುನನ ತೀಕ್ಷ್ಣಬಾಣಗಳಿಂದ ಪೀಡಿತನಾದ ಭಗದತ್ತ.

 

ಅಸ್ತ್ರೈಶ್ಚ ಶಸ್ತ್ರೈಃ ಸುಚಿರಂ ನೃವೀರಾವಯುದ್ಧ್ಯತಾಂ ತೌ ಬಲಿನಾಂ ಪ್ರಬರ್ಹೌ ।

ಅಥೋ ಚಕರ್ತ್ತಾಸ್ಯ ಧನುಃ ಸ ಪಾರ್ತ್ಥಃ ಸ ವೈಷ್ಣವಾಸ್ತ್ರಂ ಚ ತದಾSಙ್ಕುಶೇSಕರೋತ್ ॥ ೨೬.೨೫ ॥

 

ಮಹಾ ಬಲಿಷ್ಠರಾದ ಇಬ್ಬರಿಂದಲೂ ನಡೆಯಿತಾಗ ಅಸ್ತ್ರ ಶಸ್ತ್ರಗಳ ಬಲು ದೀರ್ಘಕಾಲದ ಯುದ್ಧ,

ಅರ್ಜುನ ಭಗದತ್ತನ ಬಿಲ್ಲು ಕತ್ತರಿಸಲು ಅವನು ಅಂಕುಶದಿ ನಾರಾಯಣಾಸ್ತ್ರವ ಅಭಿಮಂತ್ರಿಸಿದ.

 

ತಸ್ಮಿನ್ನಸ್ತ್ರೇ ತೇನ  ತದಾ ಪ್ರಯುಕ್ತೇ ದಧಾರ ತದ್ ವಾಸುದೇವೋSಮಿತೌಜಾಃ ।

ತದಂಸದೇಶಸ್ಯ ತು ವೈಜಯನ್ತೀ ಬಭೂವ ಮಾಲಾSಖಿಲಲೋಕಭರ್ತ್ತುಃ ॥ ೨೬.೨೬ ॥

 

ಭಗದತ್ತ ಬಿಟ್ಟ ಆ ನಾರಾಯಣಾಸ್ತ್ರ ನುಗ್ಗಿ ಬರುತ್ತಿದ್ದಾಗ,

ಅಮಿತ ಬಲದ ವಾಸುದೇವ ಕೃಷ್ಣ ತನ್ನೆದೆ ಕೊಡುತ್ತಾನಾಗ,

ವೈಷ್ಣವಾಸ್ತ್ರ ವಿಷ್ಣುವಿನ ಹೆಗಲಲ್ಲಿ ಹೂ ಹಾರವಾಯಿತಾಗ .

 

ದೃಷ್ಟ್ವೈವ ತದ್ ಧಾರಿತಮಚ್ಯುತೇನ ಪಾರ್ತ್ಥಃ ಕಿಮರ್ತ್ಥಂ ವಿಧೃತಂ ತ್ವಯೇತಿ ।

ಊಚೇ ತಮಾಹಾSಶು ಜಗನ್ನಿವಾಸೋ ಮಯಾSಖಿಲಂ ಧಾರ್ಯ್ಯತೇ ಸರ್ವದೈವ ॥ ೨೬.೨೭ ॥

 

ಅದನ್ನ ನೋಡಿದ ಅರ್ಜುನ ಕೇಳುತ್ತಾನೆ 'ನೀನೇಕೆ ಧರಿಸಿದೆ ಆ ಅಸ್ತ್ರ ',

ಜಗದಾಧಾರ ಹೇಳುತ್ತಾನೆ ' ನ್ನನ್ನದೇ ಅದು ಸದಾ ಎಲ್ಲ ಧರಿಸುವ ಪಾತ್ರ'.

 

ನ ಮಾದೃಶೋSನ್ಯೋSಸ್ತಿ ಕುತಃ ಪರೋ ಮತ್ ಸೋSಹಂ ಚತುರ್ದ್ಧಾ ಜಗತೋ ಹಿತಾಯ ।

ಸ್ಥಿತೋSಸ್ಮಿ ಮೋಕ್ಷಪ್ರಳಯಸ್ಥಿತೀನಾಂ ಸೃಷ್ಟೇಶ್ಚ ಕರ್ತ್ತಾ ಕ್ರಮಶಃ ಸ್ವಮೂರ್ತ್ತಿಃಭಿಃ ।

ಸ ವಾಸುದೇವಾದಿಚತುಃ ಸ್ವರೂಪಃ ಸ್ಥಿತೋSನಿರುದ್ಧೋ ಹೃದಿ ಚಾಖಿಲಸ್ಯ ॥ ೨೬.೨೮ ॥

 

ನನಗೆ ಯಾರ್ಯಾರೂ ಇಲ್ಲ ಸಮ,

ಇನ್ನು ಹೇಗಿರಲು ಸಾಧ್ಯ ಉತ್ತಮ?

ಜಗತ್ತಿನ ಹಿತಕ್ಕಾಗಿ ನನ್ನವು ನಾಲ್ಕು ರೂಪ,

ನನ್ನಿಂದಲೇ ಮೋಕ್ಷ,ಪ್ರಳಯ,ಸ್ಥಿತಿ,ಸೃಷ್ಟಿ ಪ್ರತಾಪ.

ವಾಸುದೇವ ಮೊದಲಾದ ನಾಕು ರೂಪದ ನಾನೇ,

ಅನಿರುದ್ಧನಾಗಿ ಎಲ್ಲರ ಹೃದಯದಲ್ಲಿ ಇರುತ್ತೇನೆ.

 

ಸ ಏವ ಚ ಕ್ರೋಡತನುಃ ಪುರಾSಹಂ ಭೂಮಿಪ್ರಿಯಾರ್ತ್ಥಂ ನರಕಾಯ ಚಾದಾಮ್ ।

ಅಸ್ತ್ರಂ ಮದೀಯಂ ವರಮಸ್ಯ ಚಾದಾಮವದ್ಧ್ಯತಾಂ ಯಾವದಸ್ತ್ರಂ ಸಸೂನೋಃ  ॥ ೨೬.೨೯ ॥

 

 

ಅಂತಹ ಸಂಕರ್ಷಣ-ಪ್ರದ್ಯುಮ್ನಾದಿ ಸ್ವರೂಪನಾದ ನಿಯಾಮಕನಾದ ನಾನು,

ವರಾಹನಾಗಿ ಹಿಂದೆ ಭೂದೇವಿ ಪ್ರೀತ್ಯರ್ಥ ನರಕಗೆ  ಕೊಟ್ಟಿದ್ದೆ ನನ್ನ ಅಸ್ತ್ರವನ್ನು.

ನರಕಾಸುರ ಮತ್ತವನ ಮಗನಾದ ಭಗದತ್ತನಲ್ಲಿ ಎಲ್ಲಿಯ ತನಕವಿರುತ್ತದೋ ಆ ಅಸ್ತ್ರ,

ಅಲ್ಲಿಯ ತನಕ ಅವರಿಬ್ಬರೂ ಅವಧ್ಯರು ಎಂಬುದು ನಾನೇ ಅವರಿಗೆ ಕೊಟ್ಟಿರುವ ವರ.

 

ಅಸ್ತ್ರಸ್ಯ ಚಾನ್ಯೋ ನತು ಕಶ್ಚಿದಸ್ತಿ ಯೋSವದ್ಧ್ಯ ಏತಸ್ಯ ಕುತಶ್ಚ ಮತ್ತಃ ।

ಇತಿ ಸ್ಮ ತೇನೈವ ಮಯಾ ಧೃತಂ ತದಸ್ತ್ರಂ ತದೇನಂ ಜಹಿ ಚಾಸ್ತ್ರಹೀನಮ್ ॥ ೨೬.೩೦ ॥

 

ಈ ಅಸ್ತ್ರಕ್ಕೆ ನಾನೊಬ್ಬ ಮಾತ್ರನೇ ಅವಧ್ಯ,

ಹೀಗಾಗಿ ಅದನ್ನು ಧರಿಸಲು ನಾನಾದೆ ಬಾಧ್ಯ.      

ಅದರಿಂದ ಈಗವನು ಆಗಿದ್ದಾನೆ ಅಸ್ತ್ರರಹಿತ,

ಅರ್ಜುನಾ ಕೊಲ್ಲವನ ಸಾಯುತ್ತಾನೀಗ ಭಗದತ್ತ.

 

ಇತ್ಯುಕ್ತಮಾಕರ್ಣ್ಯ ಸ ಕೇಶವೇನ ಸಮ್ಮನ್ತ್ರ್ಯ ಬಾಣಂ ಹೃದಯೇ ಮುಮೋಚ ।

ಪ್ರಾಗ್ಜ್ಯೋತಿಷಸ್ಯಾಪರಮುತ್ತಮಂ ಶರಂ ಗಜೇನ್ದ್ರಕುಮ್ಭಸ್ಥಲ ಆಶ್ವಮಜ್ಜಯತ್ ॥ ೨೬.೩೧ ॥

 

ಈರೀತಿಯಾಗಿ ಅರ್ಜುನ ಶ್ರೀಕೃಷ್ಣನಿಂದ ಹೇಳಲ್ಪಟ್ಟ,

ಬಾಣವನ್ನು ಅಭಿಮಂತ್ರಿಸಿ ಭಗದತ್ತನ ಎದೆಗೆ  ಬಿಟ್ಟ.

ಇನ್ನೊಂದು ತೀಕ್ಷ್ಣ ಬಾಣವ ಆನೆಯ ಕುಂಭಸ್ಥಳದಿ ನೆಟ್ಟ.

 

ಉಭೌ ಚ ತೌ ಪೇತತುರದ್ರಿಸನ್ನಿಭೌ ಮಹೇನ್ದ್ರವಜ್ರಾಭಿಹತಾವಿವಾSಶು ।

ನಿಹತ್ಯ ತೌ ವಾಸವಿರುಗ್ರಪೌರುಷೋ ಮುಮೋದ ಸಾಧು ಸ್ವಜನಾಭಿಪೂಜಿತಃ ॥ ೨೬.೩೨ ॥

 

ದೊಡ್ಡ ಆಕಾರವುಳ್ಳ ಸುಪ್ರತೀಕ ಆನೆ ಮತ್ತು ಭಗದತ್ತ ಇಬ್ಬರೂ,

ವಜ್ರಾಯುಧದ ಹೊಡೆತ ತಿಂದ ಬೆಟ್ಟಗಳಂತೆ ಉರುಳಿ ಬಿದ್ದರು.

ವೀರ ಅರ್ಜುನ ಅವರಿಬ್ಬರನ್ನೂ ಕೊಂದ,

ತನ್ನವರಿಂದ ಪೂಜಿತನಾಗಿ ಪಟ್ಟ ಆನಂದ.

 

ಅಥಾಚಲಂ ವೃಷಕಂ ಚೈವ ಹತ್ವಾ ಕನೀಯಸೌ ಶಕುನೇಸ್ತಂ ಚ ಬಾಣೈಃ ।

ವಿವ್ಯಾಧ ಮಾಯಾಮಸೃಜತ್ ಸ ತಾಂ ಚ ವಿಜ್ಞಾನಾಸ್ತ್ರೇಣಾSಶು ನಾಶಾಯ ಚಕ್ರೇ ॥ ೨೬.೩೩ ॥

 

ನಂತರ ಅರ್ಜುನ ಶಕುನಿ ಅನುಜರಾದ ವೃಷಕ ಅಚಲರ ಕೊಂದ,

ಶಕುನಿಗೂ ಬಾಣ ಹೊಡೆದ;ಶಕುನಿ ಮಾಯೆಯನ್ನ ಸೃಷ್ಟಿ ಮಾಡಿದ.

ಆಗ ವಿಜ್ಞಾನಾಸ್ತ್ರದಿಂದ ಅರ್ಜುನ ಮಾಯೆಯನ್ನು ನಾಶ ಮಾಡಿದ.

 

ಸ ನಷ್ಟಮಾಯಃ ಪ್ರಾದ್ರವತ್ ಪಾಪಕರ್ಮ್ಮಾ ತತಃ ಪಾರ್ತ್ಥಃ ಶರಪೂಗೈಶ್ಚಮೂಂ ತಾಮ್ ।

ವಿದ್ರಾವಯಾಮಾಸ ತದಾ ಗುರೋಃ ಸುತೋ ಮಾಹಿಷ್ಮತೀಪತಿಮಾಜೌ ಜಘಾನ ॥ ೨೬.೩೪ ॥

 

ನಡೆಯದಿದ್ದಾಗ ಪಾಪಿಷ್ಟ ಶಕುನಿಯ ಕಣ್ಕಟ್ಟು ಆಟ,

ಪ್ರಭಾವಹೀನ ಶಕುನಿ ಮಾಡಿದ ರಣರಂಗದಿಂದ ಓಟ.

ತದನಂತರ ಅರ್ಜುನ ಬಾಣಸಮೂಹದಿಂದ  ಸೇನೆಯನ್ನು ಓಡಿಸಿದ.

ಆಗಲೇ ಅಶ್ವತ್ಥಾಮ ಮಾಹಿಷ್ಮತೀಪತಿಯಾದ ನೀಲನನ್ನು ಸಂಹರಿಸಿದ.

 

ತದಾ ಭೀಮಸ್ತಸ್ಯ ನಿಹತ್ಯ ವಾಹಾನ್ ವ್ಯದ್ರಾವಯದ್ ಧಾರ್ತ್ತರಾಷ್ಟ್ರೀಂ ಚಮೂಂ ಚ ।

ಭೀಮಾರ್ಜ್ಜುನಾಭ್ಯಾಂ ಹನ್ಯಮಾನಾಂ ಚಮೂಂ ತಾಂ ದೃಷ್ಟ್ವಾ ದ್ರೋಣಃ ಕ್ಷಿಪ್ರಮಪಾಜಹಾರ ॥ ೨೬.೩೫ ॥

 

ಆಗ ಭೀಮಸೇನನು ಅಶ್ವತ್ಥಾಮನ ಕುದುರೆಗಳನ್ನು ಕೊಂದ,

ಅವನ ಆರ್ಭಟ ತಗ್ಗಿಸಿ, ದುರ್ಯೋಧನ ಸೇನೆಯ ಓಡಿಸಿದ.

ಸಂಹರಿಸುತ್ತಿರಲು ಕೌರವ ಸೇನೆಯ ಅರ್ಜುನ ಭೀಮ,

ದ್ರೋಣರು ಘೋಷಣೆ ಮಾಡುತ್ತಾರೆ ಯುದ್ಧ ವಿರಾಮ.

No comments:

Post a Comment

ಗೋ-ಕುಲ Go-Kula