Sunday 16 September 2018

ಘನಪಾಠಿಗಳಿಗೂ ದಕ್ಕದ ಗಣಪತಿ. ಲೇಖನ : ಡಾ.ಬನ್ನ೦ಜೆ ಗೋವಿ೦ದಾಚಾಯ೯

ಶಿವ-ಪಾರ್ವತಿಯರ ಮಗನೆಂದು ಶೈವರಿಗೆ-ಶಾಕ್ತರಿಗೆ ಗಣಪತಿ ಪ್ರಿಯನಾದ.
ಅಷ್ಟೇ ಅಲ್ಲ, ಇದೇ ಗಣಪತಿ ಕೃಷ್ಣ-ರುಕ್ಮಿಣಿಯರ ಮಗನಾಗಿ ಚಾರುದೇಷ್ಣನಾದ. ಅದರಿಂದ ವೈಷ್ಣವರಿಗೂ ಪ್ರಿಯ.
ಅವನು ಕ್ಷಿಪ್ರಪ್ರಸಾದ.
ಪೂಜಿಸಿದವರಿಗೆ ಉಳಿದ ದೇವತೆಗಳಿಗಿಂತ ಬೇಗ ಫಲಕೊಡುವವನು. ಅದರಿಂದಲೂ ಅವನು ಎಲ್ಲರಿಗೂ ಇಷ್ಟದೇವತೆಯಾದ.


ಋಗ್ವೇದದಲ್ಲಿ ಒಂದು ಗಣಪತಿ ಮಂತ್ರ ಇದೆ -

ನಿಷು ಸೀದ ಗಣಪತೇ ಗಣೇಷು
ತ್ವಾಮಾಹುರ್ವಿಪ್ರತಮಂ ಕವೀನಾಮ್
ನ ಋತೇ ತ್ವತ್ ಕ್ರಿಯತೇ ಕಿಂಚನಾರೇ
ಮಹಾಮರ್ಕಂ ಮಘವನ್ ಚಿತ್ರಮರ್ಚ
(10.112.9)

ಈ ಮಂತ್ರದ ಋಷಿ ವಿರೂಪನ ಮಗ ನಭಃಪ್ರಭೇದನ. ಇದು ಗಣಪತಿಯ ಸ್ತುತಿಯಲ್ಲ. ಇಂದ್ರನ ಸ್ತುತಿ ಎನ್ನುತ್ತಾರೆ ಸಂಪ್ರದಾಯಜ್ಞರು. ಇಲ್ಲಿ ಬಂದ ಗಣಪತಿ ಎಂದರೆ ಆನೆಯ ಮೋರೆಯ, ಸೊಟ್ಟ ಸೊಂಡಿಲಿನ ಗಣಪತಿ ಅಲ್ಲ. ಇಂದ್ರನೆಂದರೆ ಸಗ್ಗದೊಡೆಯ, ಶಚೀಪತಿ ಇಂದ್ರನೂ ಅಲ್ಲ. ವೈದಿಕ ಪರಿಭಾಷೆಯಲ್ಲಿ ಮುಖ್ಯವಾಗಿ ಇಂದ್ರ ಎಂದರೆ ಇಡಿಯ ವಿಶ್ವವನ್ನು ನಿಯಂತ್ರಿಸುವ ಪರತತ್ವ. ಪರಮಪುರುಷ. ಪುರುಷೋತ್ತಮ.

ಈ ಮಂತ್ರದಲ್ಲಿ ನಭಃಪ್ರಭೇದನ ಕಂಡ ಅರ್ಥ- 'ಓ ಜೀವಗಣಗಳ ಒಡೆಯನಾದ ಪರಮಾತ್ಮನೆ, ಪೀಠದಲ್ಲಿ ಬಂದು ಕೂಡು. ಜ್ಞಾನಿಗಳ ತಂಡದಲ್ಲೆ ನೀನು ಎಲ್ಲರಿಗಿಂತ ಮಿಗಿಲಾದ ಜ್ಞಾನಿ, ಸರ್ವಜ್ಞ ಎನ್ನುತ್ತಾರೆ. ನಿನ್ನ ನೆರವಿಲ್ಲದೆ ಎಲ್ಲೂ ಯಾರೂ ಏನೂ ಮಾಡಲಾರರು. ಓ ಯಜ್ಞಾರಾಧ್ಯನೆ, ಪೂಜೆಕೊಳ್ಳುವವರಲ್ಲಿ ಮೊದಲಿಗ ನೀನು. ಜ್ಞಾನಾನಂದಗಳ ಅಚ್ಚರಿಯ ಮೂರ್ತಿ ನೀನು. ನನ್ನ ಮೂಲಕ ನೀನೇ ನಿನ್ನ ಪೂಜೆಯನ್ನು ಮಾಡಿಸಿಕೋ...’
ಇಲ್ಲಿ ಗಜಾನನನ ಸುಳಿವೇ ಇಲ್ಲ. ಜಗನ್ನಿಯಾಮಕನಾದ ಭಗವಂತನ ಪ್ರಾರ್ಥನೆ ಇದು.
                    .***

ಪ್ರಾಯಃ ಈ ಮಂತ್ರದ ಪ್ರಭಾವದಿಂದಲೇ ಒಂದು ಹೊಸ ಪಂಥ ಹುಟ್ಟಿಕೊಂಡಿತು. ಗಣಪತಿಯೇ ಸರ್ವಶಕ್ತ, ಗಣಪತಿಯೇ ಪರತತ್ವ ಎನ್ನುವ ಪಂಥ. ಇದರ ಅನುಯಾಯಿಗಳನ್ನು ಗಾಣಪತ್ಯರು ಅಥವಾ ಗಾಣಪತರು ಎಂದು ಕರೆಯುತ್ತಿದ್ದರು.

ಈಗ ಈ ಪಂಥ ಬಳಕೆಯಲ್ಲಿಲ್ಲ. ಅದು ಶಾಕ್ತರಲ್ಲಿ ಶೈವರಲ್ಲಿ ಅಂತರ್ಭಾವಗೊಂಡಿದೆ. ಪರಿಣಾಮವಾಗಿ ಪಂಚಾಯತನ ಪೂಜೆಯಲ್ಲಿ ಶಿವಪಾರ್ವತಿಯರ ಜತೆಗೆ ಗಣಪತಿಯೂ ಸೇರಿಕೊಂಡ. ಆದರೆ ವಾಸ್ತವವಾಗಿ ಈ ಮಂತ್ರದಲ್ಲಿ ಗಾಣಪತ್ಯರು ಪೂಜಿಸುವ ಗಣಪತಿಯ ಸುದ್ದಿಯೇ ಇಲ್ಲ.

ಬ್ರಹ್ಮಣಸ್ಪತಿಯಾದ ಗಣಪತಿ :
====================

ಋಗ್ವೇದದಲ್ಲಿ ಇನ್ನೊಂದು ಮಂತ್ರವಿದೆ -

ಗಣಾನಾಂ ತ್ವಾ ಗಣಪತಿಂ ಹವಾಮಹೇ...
(2.23.1)
ಈ ಮಂತ್ರದ ಋಷಿ ಗೃತ್ಯಮದ ಅಥವಾ ಶೌನಕ. ಇದರ ದೇವತೆ ಬೃಹಸ್ಪತಿ ಮತ್ತು ಬ್ರಹ್ಮಣಸ್ಪತಿ ಎನ್ನುತ್ತದೆ ಅನುಕ್ರಮಣಿಕೆ. ಇದೂ ಒಂದು ಗೊಂದಲವೆ. ವಾಸ್ತವವಾಗಿ ಬೃಹಸ್ಪತಿ ಮತ್ತು ಬ್ರಹ್ಮಣಸ್ಪತಿ ಬೇರೆ ಬೇರೆ ದೇವತೆಗಳಲ್ಲ. ಅಮುಖ್ಯ ಅರ್ಥದಲ್ಲಿ ದೇವಗುರು ಬೃಹಸ್ಪತಿ. ಮುಖ್ಯ ಅರ್ಥದಲ್ಲಿ ವಾಕ್ಪತಿಗಳಾದ ಪ್ರಾಣ-ನಾರಾಯಣರು.

ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಈ ಮಂತ್ರ ಬಂದಿದೆ (2.3.14.3). ‘ಓ ಜೀವಗಣಗಳ, ಇಂದ್ರಿಯಗಣಗಳ ನೇತಾರನೆ, ಓ ವಾಗ್ದೇವತೆಯ ನಲ್ಲನೆ, ನಿನ್ನನ್ನು ನಾವು ನಮ್ಮತ್ತ ಬರುವಂತೆ ಆಹ್ವಾನಿಸುತ್ತಿದ್ದೇವೆ’ ಎನ್ನುತ್ತದೆ ಈ ಮಂತ್ರ. ಇಲ್ಲೂ ಸೊಟ್ಟ ಸೊಂಡಿಲಿನ ಗಣಪತಿಯ ಸೊಲ್ಲೇ ಇಲ್ಲ.

ಅಥರ್ವವೇದದ ವ್ರಾತ್ಯಕಾಂಡ
=====================
ಅಥರ್ವವೇದದ ಒಂದು ಕಾಂಡದ ಹೆಸರು-"ವ್ರಾತ್ಯಕಾಂಡ". ವೈದಿಕರು ಮತ್ತು ವೇದವ್ಯಾಖ್ಯಾನಕಾರರು ಈ ಅಪೂರ್ವಕಾಂಡವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ವ್ರಾತ್ಯ ಶಬ್ದಕ್ಕೆ ಬಳಕೆಯ ಅರ್ಥ: ಸಾಮಾಜಿಕ ರೀತಿ ರಿವಾಜುಗಳನ್ನು ಧಿಕ್ಕರಿಸಿ ಸ್ವಚ್ಛಂದವಾಗಿ ಬದುಕುವವನು; ಲೋಕಬಾಹ್ಯ. ಅಂಥ ಒಬ್ಬ ಅವಧೂತ ಮುನಿಯಿದ್ದ. ಅವನ ಕುರಿತಾಗಿಯೇ ಈ ಕಾಂಡವಿದೆ ಎನ್ನುತ್ತಾರೆ ಸಾಯಣರು.

ಇವರ ಈ ವಿವರಣೆ ಯಾಕೋ ಇಷ್ಟವಾಗುವುದಿಲ್ಲ. ಸಂಸ್ಕೃತದಲ್ಲಿ ವ್ರಾತ ಎಂದರೆ ಸಮೂಹ-ಗಣ. ವ್ರಾತ್ಯ ಎಂದರೆ ಗುಂಪಿನ ನಾಯಕ-ಗಣಪತಿ. ಅದರಿಂದ ಇಡಿಯ ಕಾಂಡ ಗಣಪತಿಯ ಸ್ತುತಿರೂಪವಾಗಿದೆ. ವೇದಗಳಿಗೆ ಬರಿಯ ಮೇಲುನೋಟದ ಅರ್ಥವನ್ನಷ್ಟೆ ಹೇಳುವ ಕರ್ಮಠರಾದ ಸಾಯಣರಿಗೆ ಗಣಪತಿ ಪರವಾದ ಈ ಸುಂದರವಾದ ಅರ್ಥ ಏಕೆ ಹೊಳೆಯಲಿಲ್ಲ ಎನ್ನುವುದೊಂದು ವಿಸ್ಮಯ.

ಸತ್ಯಕಂಡ ಸಂಪೂರ್ಣಾನಂದರು
=====================

ಡಾ. ಸಂಪೂರ್ಣಾನಂದರು ಉತ್ತರಪ್ರದೇಶದ ಮುಖ್ಯಮಂತ್ರಿಗಳಾಗಿದ್ದವರು. ಅವರು ಸಂಸ್ಕೃತದಲ್ಲಿ ಒಂದು ಗ್ರಂಥವನ್ನು ಬರೆದಿದ್ದರು: "ವ್ರಾತ್ಯಕಾಂಡವಿಮರ್ಶಃ". ಅವರು ಈ ಕಾಂಡವನ್ನು ವಿಸ್ತಾರವಾಗಿ ವಿಮರ್ಶಿಸಿ ಸಾಯಣರ ಅರ್ಥವನ್ನು ಸಕಾರಣವಾಗಿ ನಿರಾಕರಿಸುತ್ತಾರೆ. ವಿಚಿತ್ರ ಅಲ್ಲವೇ?
ಒಬ್ಬ ರಾಜಕಾರಣಿಗೆ ಹೊಳೆದ ಸತ್ಯ ವೈದಿಕರಾದ ಸಾಯಣರಿಗೆ ಹೊಳೆಯಲಿಲ್ಲ. ಮಹಾನ್ ವೇದವಿದ್ವಾಂಸನಾಗಿದ್ದ ಒಬ್ಬ ಈ ದೇಶದಲ್ಲಿ ಒಂದು ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಎನ್ನುವುದು ಇನ್ನೂ ಅಚ್ಚರಿಯ ಸಂಗತಿ. ಪ್ರಾಯಃ ಹೆಚ್ಚಿನ ವಿದ್ವಾಂಸರು ಗಮನಿಸದ ಈ ಗ್ರಂಥ ವೈದಿಕವ್ಮಾಯಕ್ಕೆ ಒಬ್ಬ ರಾಜಕಾರಣಿಯ ಅನನ್ಯ ಕಾಣಿಕೆ.

ಆದರೆ ಇಲ್ಲೂ ಆನೆಯ ಸೊಂಡಿಲಿನ ಸೊಲ್ಲೇ ಇಲ್ಲ. ಈ ಎಲ್ಲ ಕಾರಣಗಳಿಂದ ಅನೇಕ ಮಂದಿ ವಿಮರ್ಶಕರು ಭ್ರಮಿಸಿದ್ದುಂಟು: ಈ ಗಣಪತಿ ವೈದಿಕದೇವತೆಯಲ್ಲ, ಜನಪದರ ದೇವತೆ ಎಂದು.

ಗಣಪತಿಯ ಗಾಯತ್ರಿ
==============
ಇದೂ ಕೂಡಾ ಅರ್ವಾಚೀನ ವಿಮರ್ಶಕರ ದುಡುಕಿನ ನಿರ್ಧಾರ. ಏಕೆಂದರೆ ಆನೆಯ ಮೋರೆಯ ಗಣಪತಿಯ ಉಲ್ಲೇಖವೂ ಯಜುರ್ವೇದದ ಮಹಾನಾರಾಯಣೋಪನಿಷತ್ತಿನಲ್ಲಿದೆ-
ಏಕದಂತಾಯ ವಿದ್ಮಹೇ|
ವಕ್ರತುಂಡಾಯ ಧಿಮಹಿ|
ತನ್ನೋ ದಂತಿಃ ಪ್ರಚೋದಯಾತ್|

ಈ ಗಣಪತಿ ಗಾಯತ್ರಿಯ ಅರ್ಥ- ‘ಒಂದು ದಾಡೆಯ ಗಣಪನ ಅನುಗ್ರಹಕ್ಕಾಗಿ ನಾವು ಅವನ ಹಿರಿಮೆಯನ್ನು ಅರಿಯುತ್ತೇವೆ. ಸೊಟ್ಟ ಮೋರೆಯ ಗಣಪನನ್ನೇ ಚಿಂತಿಸುತ್ತೇವೆ. ಅಂಥ ಆನೆಯ ರೂಪದ ಗಣಪ ನಮ್ಮನ್ನು ಸನ್ಮಾರ್ಗದಲ್ಲಿ ಪ್ರೇರಿಸಲಿ..’
ನಮಗೆ ಬೇಕಾದ ವೈದಿಕ ಗಣಪತಿ ಇಲ್ಲಿ ಸಿಕ್ಕಿದ..

(ಇದು ದಿನಾಂಕ ೪ -೯-೨೦೧೬ ರ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ)

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 42 - 46

ವಸಿಷ್ಠನಾಮಾ ಕಮಳೋದ್ಭವಾತ್ಮಜಃ ಸುತೋsಸ್ಯ ಶಕ್ತಿಸ್ತನಯಃ ಪರಾಶರಃ ।
ತಸ್ಯೋತ್ತಮಂ ಸೋsಪಿ ತಪೋsಚರದ್ಧರಿಃ ಸುತೋ ಮಮ ಸ್ಯಾದಿತಿ 
ತದ್ಧರಿರ್ದ್ದದೌ  ॥೧೦.೪೨॥

ಬ್ರಹ್ಮನಮಗ ವಸಿಷ್ಠ, ವಸಿಷ್ಠರ ಮಗನಾದವ  ಶಕ್ತಿಮುನಿ,
ಶಕ್ತಿಯಮಗ ಪರಾಶರ;ಹರಿ ತನ್ನ ಮಗನಾಗಲೆಂದು ತಪಗೈದ ಜ್ಞಾನಿ.
ಅವನ ಉತ್ಕೃಷ್ಟ ತಪವ ಮೆಚ್ಚಿದ ಶ್ರೀಹರಿ,
ಪರಾಶರನ ಅಭೀಷ್ಟ ಅನುಗ್ರಹಿಸಿದ ಪರಿ.

ಉವಾಚ ಚೈನಂ ಭಗವಾನ್ ಸುತೋಷಿತೋ ವಸೋರ್ಮ್ಮದೀಯಸ್ಯ ಸುತಾsಸ್ತಿ ಶೋಭನಾ ।
ವನೇ ಮೃಗಾರ್ತ್ಥಂ ಚರತೋsಸ್ಯ ವೀಯ್ಯಂ ಪಪಾತ ಭಾರ್ಯ್ಯಾಂ ಮನಸಾ 
ಗತಸ್ಯ  ॥೧೦.೪೩॥

ತಚ್ಛ್ಯೇನಹಸ್ತೇ ಪ್ರದದೌ ಸ ತಸ್ಯೈ ದಾತುಂ ತದನ್ಯೇನ ತು ಯುದ್ಧ್ಯತೋsಪತತ್ ।
ಜಗ್ರಾಸ ತನ್ಮತ್ಸ್ಯವಧೂರ್ಯ್ಯಮಸ್ವಸುರ್ಜ್ಜಲಸ್ಥಮೇನಾಂ ಜಗೃಹುಶ್ಚ 
ದಾಶಾಃ  ॥೧೦.೪೪॥

ತದ್ಗರ್ಭತೋsಭೂನ್ಮಿಥುನಂ ಸ್ವರಾಜ್ಞೇ ನ್ಯವೇದಯನ್ ಸೋsಪಿ ವಸೋಃ ಸಮರ್ಪ್ಪಯತ್ ।
ಪುತ್ರಂ ಸಮಾದಾಯ ಸುತಾಂ ಸ ತಸ್ಮೈ ದದೌ ಸುತೋsಭೂದಥ 
ಮತ್ಸ್ಯರಾಜಃ ॥೧೦.೪೫॥

ಕನ್ಯಾ ತು ಸಾ ದಾಶರಾಜಸ್ಯ ಸದ್ಮನ್ಯವರ್ದ್ಧತಾತೀವ ಸುರೂಪಯುಕ್ತಾ ।
ನಾಮ್ನಾ ಚ ಸಾ ಸತ್ಯವತೀತಿ ತಸ್ಯಾಂ ತವಾsತ್ಮಜೋsಹಂ 
ಭವಿತಾಸ್ಮ್ಯಜೋsಪಿ ॥೧೦.೪೬॥

ಪರಾಶರನ ತಪಸ್ಸಿನಿಂದ ಅತ್ಯಂತ ಸಂತಸಗೊಂಡ ಶ್ರೀಹರಿ,
ತನ್ನ ಭಕ್ತ ವಸುರಾಜ ಪುತ್ರಿಯ ಕಥೆ ಹೇಳಿ ಬಿಚ್ಚಿಟ್ಟ ಪರಿ.
ಕಾಡಿನಲ್ಲಿ ತಿರುಗುತ್ತಿದ್ದ ವಸುರಾಜ ಬೇಟೆಯ ಕಾರಣ,
ಮಾನಸಿಕವಾಗಿ ಹೆಂಡತಿಯೊಡನೆ ಆದಾಗ ಮಿಲನ.
ಆ ಕಾರಣದಿಂದಾಯಿತು ಅವನ ವೀರ್ಯ ಸ್ಖಲನ.
ರೇತಸ್ಸನ್ನು ಗಿಡುಗಗಿತ್ತ ರಾಜ ತನ್ನ ಹೆಂಡತಿಗೆ ಕೊಡಲ್ಹೇಳಿದ,
ಅದಕ್ಕೆದುರಾದ ಇನ್ನೊಂದು ಗಿಡುಗದೊಂದಿಗೆ ಆಯಿತಾಗ ಯುದ್ಧ.
ಗಿಡುಗನಲ್ಲಿದ್ದ ವೀರ್ಯ ಯಮುನಾ ನದಿಗೆ ಬಿತ್ತು,
ಬಿದ್ದ ಆ ರೇತಸ್ಸನ್ನು ಹೆಣ್ಣು ಮೀನೊಂದು ನುಂಗಿತು.
ಅಂಬಿಗರಿಗೆ ಸಿಕ್ಕ ಮೀನಲ್ಲಿ ಸಿಕ್ಕಿದ್ದು ಅವಳಿಜವಳಿ ಮಕ್ಕಳು,
ಮಾಡಿದರು ಆ ಮಕ್ಕಳ ತಮ್ಮೊಡೆಯ ದಾಶರಾಜನ ಪಾಲು.
ದಾಶರಾಜ ಆ ಮಕ್ಕಳನ್ನು ವಸುರಾಜಗೇ ಕೊಟ್ಟ,
ವಸು ಗಂಡನ್ನಿಟ್ಟುಕೊಂಡು ಹೆಣ್ಣನ್ನ ದಾಶಗೇ ಬಿಟ್ಟ.
ಗಂಡುಮಗು ಮತ್ಸ್ಯರಾಜನಾಗಿ -ವಿರಾಟನಾದ ಗತಿ,
ಹೆಣ್ಣು ಬೆಳೆದಾದಳು ರೂಪವತಿ -ಅವಳೇ ಸತ್ಯವತಿ .
ಪರಾಶರ ಮುನಿಯ ಮೇಲಿನ ಅನುಗ್ರಹದಿಂದ ಭಗವಂತ,
ಸತ್ಯವತಿಯಲ್ಲಿ ನಿನ್ನ ಮಗನಾಗಿ ಬರುವೆನೆಂಬ ಮಾತಿತ್ತ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 38 - 41

ವೇದಾಶ್ಚ ಸರ್ವೇ ಸಹಶಾಸ್ತ್ರಸಙ್ಘಾ ಉತ್ಸಾದಿತಾಸ್ತೇನ ನ ಸನ್ತಿ ತೇsದ್ಯ ।
ತತ್ ಸಾಧು ಭೂಮಾವವತೀರ್ಯ್ಯ ವೇದಾನುದ್ಧೃತ್ಯ ಶಾಸ್ತ್ರಾಣಿ ಕುರುಷ್ವ 
ಸಮ್ಯಕ್  ॥೧೦.೩೮॥

ಕಲಿಪ್ರವೇಶದಿಂದ ಆಗಿದೆ ಸಕಲ ವೇದಶಾಸ್ತ್ರಗಳ ನಾಶ,
ಅವನ್ನುಳಿಸಿ ಬಿತ್ತಲು ಭುವಿಯಲ್ಲಾಗಬೇಕು ನಿನ್ನ ಪ್ರವೇಶ.
ನಿನ್ನಿಂದಾಗಬೇಕಿದೆ ವೇದಗಳ ಸಂಪಾದನ,
ನೀಡಬೇಕಿದೆ  ವೇದ ಶಾಸ್ತ್ರಗಳ ಸುಜ್ಞಾನ.

ಅದೃಶ್ಯಮಜ್ಞೇಯಮತರ್ಕ್ಕ್ಯರೂಪಂ ಕಲಿಂ ನಿಲೀನಂ ಹೃದಯೇsಖಿಲಸ್ಯ ।
ಸಚ್ಛಾಸ್ತ್ರಶಸ್ತ್ರೇಣ ನಿಹತ್ಯ ಶೀಘ್ರಂ ಪದಂ ನಿಜಂ ದೇಹಿ 
ಮಹಾಜನಸ್ಯ  ॥೧೦.೩೯॥

ಕಲಿಯದು ಕಾಣದ ತಿಳಿಯದ ಊಹಿಸಲಾಗದ ರೂಪ,
ಸಚ್ಚಾಸ್ತ್ರಗಳ ಶಸ್ತ್ರದಿಂದ ಕೊಂದವನ ಕಳೆ ಭಕ್ತರ ತಾಪ.

ಋತೇ ಭವನ್ತಂ ನಹಿ ತನ್ನಿಹನ್ತಾ ತ್ವಮೇಕ ಏವಾಖಿಲಶಕ್ತಿಪೂರ್ಣ್ಣಃ ।
ತತೋ ಭವನ್ತಂ ಶರಣಂ ಗತಾ ವಯಂ ತಮೋನಿಹತ್ಯೈ 
ನಿಜಭೋಧವಿಗ್ರಹಮ್ ॥೧೦.೪೦॥

ಕಲಿಯನ್ನು ಕೊಲ್ಲಲು ಇನ್ನೊಬ್ಬರಿಲ್ಲ ಸಮರ್ಥ,
ಸ್ವರೂಪಜ್ಞಾನವೇ ಮೈದಾಳಿದ ನೀನೇ ಸರ್ವಶಕ್ತ.
ನಮ್ಮ ಅಜ್ಞಾನದ ನಾಶವಾಗಬೇಕಾದ ಕಾರಣ,
ಶರಣಾಗಿದ್ದೇವೆ ನಿನ್ನಲ್ಲಿ --ಆಗಲಿ ನಿನ್ನವತರಣ.

ಇತೀರಿತಸ್ತೈರಭಯಂ ಪ್ರದಾಯ ಸುರೇಶ್ವರಾಣಾಂ ಪರಮೋsಪ್ರಮೇಯಃ ।
ಪ್ರಾದುರ್ಭಬೂವಾಮೃತಭೂರಿಳಾಯಾಂ 
ವಿಶುದ್ಧವಿಜ್ಞಾನಘನಸ್ವರೂಪಃ  ॥೧೦.೪೧॥

ಈ ರೀತಿ ಪ್ರಾರ್ಥಿಸಲ್ಪಟ್ಟ ದೇವತೆಗಳಿಂದ,
ಅವರೆಲ್ಲರಿಗೆ ಇತ್ತ ಅಭಯದ ಆನಂದ.
ಉತ್ಕೃಷ್ಟ ಅಪ್ರಮೇಯ ಗಟ್ಟಿಸ್ವರೂಪದ ಹೂರಣ,
ಸತ್ಯ-ತತ್ವದ ಉದ್ಧಾರಕ್ಕೆ ಅವತರಿಸಿದ ನಾರಾಯಣ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 33 - 37

ತಸ್ಯಾರ್ದ್ಧದೇಹಾತ್ ಸಮಭೂದಲಕ್ಷ್ಮೀಸ್ತತ್ಪುತ್ರಕಾ ದೋಷಗಣಾಶ್ಚ ಸರ್ವಶಃ ।
ಅಥೇನ್ದಿರಾ ವಕ್ಷಸಿ ತೇ ಸಮಾಸ್ಥಿತಾ ತ್ವತ್ ಕಣ್ಠಗಂ ಕೌಸ್ತುಭಮಾಸ 
ಧಾತಾ ॥೧೦.೩೩॥

ಕಲಿಯ ಅರ್ಧದೇಹದಿಂದ ಅವನಾರ್ಧಾಂಗಿ ಅಲಕ್ಷ್ಮಿ ಹುಟ್ಟಿಬಂದಳು,
ಆನಂತರ ಬಂದದ್ದವರ ಮಕ್ಕಳಾದ ಸರ್ವದೋಷಗಳ ಅಭಿಮಾನಿಗಳು.
ಆವಿರ್ಭವಿಸಿದ ಶ್ರೀಲಕ್ಷ್ಮಿ ಆಶ್ರಯ ಪಡೆದದ್ದು ನಿನ್ನೆದೆಯ ಜಾಗ,
ಬ್ರಹ್ಮಾಭಿಮಾನಿಕವಾದ ಕೌಸ್ತುಭ ಸೇರಿದ್ದು ನಿನ್ನ  ಕಂಠಭಾಗ.

ಯಥಾವಿಭಾಗಂ ಚ ಸುರೇಷು ದತ್ತಾಸ್ತ್ವಯಾ ತಥಾsನ್ಯೇsಪಿ ಹಿ ತತ್ರ ಜಾತಾಃ ।
ಇತ್ಥಂ ತ್ವಯಾ ಸಾಧ್ವಮೃತಂ ಸುರೇಷು ದತ್ತಂ ಹಿ ಮೋಕ್ಷಸ್ಯ 
ನಿದರ್ಶನಾಯ ॥೧೦.೩೪॥

ದೇವತೆಗಳಿಗೂ ನೀನು ಅಮೃತ ಉಣಿಸಿದ್ದು ತಾರತಮ್ಯಾನುಸಾರ,
ಹಾಗೇ ನೀನು ಅಮೃತ ಹಂಚಿದ್ದು ಮೋಕ್ಷಕ್ಕೆ ನಿದರ್ಶನವಾದ ವ್ಯಾಪಾರ.

ಭವೇದ್ಧಿ ಮೋಕ್ಷೋ ನಿಯತಂ ಸುರಾಣಾಂ ನೈವಾಸುರಾಣಾಂ ಸ ಕಥಞ್ಚನ ಸ್ಯಾತ್ ।
ಉತ್ಸಾಹಯುಕ್ತಸ್ಯ ಚ ತತ್ ಪ್ರತೀಪಂ ಭವೇದ್ಧಿ ರಾಹೋರಿವ 
ದುಃಖರೂಪಮ್ ॥೧೦.೩೫॥

ದೇವತೆಗಳಿಗೆ ಮೋಕ್ಷವು ನಿಯತ -ನಿಶ್ಚಿತ,
ಅಸುರರಿಗೆಂದೂ ಮೋಕ್ಷವಿಲ್ಲೆಂಬುದು ಖಚಿತ.
ಹಾಗೊಮ್ಮೆ ರಾಹುವಿನಂತಾದರೆ ಯಾರಾದರೂ ಉತ್ಸಾಹಭರಿತ,
ಅವರಿಗೊದಗುವ ಪರಿಣಾಮ-ಗತಿಯದು ದುಃಖದಾಯಕ ವಿಪರೀತ.

ಕಲಿಸ್ತ್ವಯಂ ಬ್ರಹ್ಮವರಾದಿದಾನೀಂ ವಿಬಾಧತೇsಸ್ಮಾನ್ ಸಕಲಾನ್ ಪ್ರಜಾಶ್ಚ।
ಅಜ್ಞಾನಮಿತ್ಥ್ಯಾಮತಿರೂಪತೋsಸೌ ಪ್ರವಿಶ್ಯ 
ಸಜ್ಜ್ಞಾನವಿರುದ್ಧರೂಪಃ ॥೧೦.೩೬॥

ಈ ರೀತಿ ಬ್ರಹ್ಮವರದಿಂದ ಅವಧ್ಯನಾದ ಕಲಿಯ ವ್ಯಾಪಾರ,
ಬಾಧಕನಾಗಿ ಜ್ಞಾನಕ್ಕೆ-ಕಾಡುತ್ತಿರುವ ವಿಪರೀತಜ್ಞಾನ ಅಜ್ಞಾನದ್ವಾರ.

ತ್ವದಾಜ್ಞಯಾ ತಸ್ಯ ವರೋsಬ್ಜಜೇನ ದತ್ತಃ ಸ ಆವಿಶ್ಯ ಶಿವಂ ಚಕಾರ ।
ಕದಾಗಮಾಂಸ್ತಸ್ಯ ಕುಯುಕ್ತಿಬಾಧಾನ್ ನಹಿ ತ್ವದನ್ಯಶ್ಚರಿತುಂ 
ಸಮರ್ತ್ಥಃ ॥೧೦.೩೭॥

ಬ್ರಹ್ಮದೇವ ಕಲಿಗೆ ವರ ಕೊಟ್ಟದ್ದು ಪಾಲಿಸಿ ನಿನ್ನ ಆಜ್ಞೆ,
ಅವ ಶಿವನಲ್ಲಿ ಪ್ರವೇಶಿಸಿ ಮಾಡಿದ ದುಷ್ಟಶಾಸ್ತ್ರಗಳ ರಚನೆ.
ಅವನ ಕುಯುಕ್ತಿಗಳ ಖಂಡನ ಮಾಡಬಲ್ಲವ ನೀನೊಬ್ಬನೇ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 28 - 32

ಇತಿ ಪ್ರಹಸ್ಯಾಭಿಹಿತಂ ನಿಶಮ್ಯ ಸ್ತ್ರೀಭಾವಮುಗ್ಧಾಸ್ತು ತಥೇತಿ ತೇsವದನ್ ।
ತತಶ್ಚ ಸಂಸ್ಥಾಪ್ಯ ಪೃಥಕ್ ಸುರಾಸುರಾಂಸ್ತವಾತಿರೂಪೋಚ್ಚಲಿತಾನ್ 
ಸುರೇತರಾನ್ ॥೧೦.೨೮ ॥
ಸರ್ವಾನ್ ಭವದ್ದರ್ಶಿನ ಈಕ್ಷ್ಯ ಲಜ್ಜಿತಾsಸ್ಮ್ಯಹಂ ದೃಶೋ ಮೀಲಯತೇತ್ಯವೋಚಃ ।
ನಿಮೀಲಿತಾಕ್ಷೇಷ್ವಸುರೇಷು ದೇವತಾ ನ್ಯಪಾಯಯಃ ಸಾಧ್ವಮೃತಂ ತತಃ 
ಪುಮಾನ್ ॥೧೦.೨೯॥

ಈ ರೀತಿ ಮುಗುಳ್ನಗುತ್ತಾ ನೀನು ಹೇಳಿದ ಮಾತು,
ಮಂತ್ರಮುಗ್ದರನ್ನಾಗಿ ಇರಿಸಿ ದೈತರನ್ನ ಒಪ್ಪಿಸಿತು.
ಆಗ ನೀನು ದೇವತೆಗಳು ದೈತ್ಯರನ್ನು ಪ್ರತ್ಯೇಕ ಮಾಡಿ,
ನಾಚಿಕೆ ಎನಗೆ ಕಣ್ಮುಚ್ಚಿ ಎಂದು ದೈತ್ಯರಿಗ್ಹೇಳಿದ ಮೋಡಿ.
ಅಸುರರೆಲ್ಲಾ ಕಣ್ಮುಚ್ಚಿಕೊಂಡು ಕುಳಿತಿರಲು ಆಗ,
ದೇವತೆಗಳಿಗೆ ಕರುಣಿಸಿದೆ ಅಮೃತಪಾನದ ಯೋಗ.

ಕ್ಷಣೇನ ಭೂತ್ವಾ ಪಿಬತಃ ಸುಧಾಂ ಶಿರೋ ರಾಹೋರ್ನ್ನ್ಯಕೃನ್ತಶ್ಚ ಸುದರ್ಶನೇನ ।
ತೇನಾಮೃತಾರ್ತ್ಥಂ ಹಿ ಸಹಸ್ರಜನ್ಮಸು ಪ್ರತಪ್ಯ ಭೂಯಸ್ತಪ ಆರಿತೋ ವರಃ ।
ಸ್ವಯಮ್ಭುವಸ್ತೇನ ಭವಾನ್ ಕರೇsಸ್ಯ ಬಿನ್ದುಂ ಸುಧಾಂ ಪ್ರಾಸ್ಯ ಶಿರೋ 
ಜಹಾರ ॥೧೦.೩೦॥

ಸುಧೆ ಬಯಸಿ ದೇವತೆಗಳ ಸಾಲಲ್ಲಿ ರಾಹು ಬಂದ;ನೀನಾಗ ಕಂಡೆ ಪುರುಷರೂಪದಿಂದ,
ಕೊಟ್ಟೆ ಅವನಿಗೊಂದು ಸುಧಾಬಿಂದು ಸುದರ್ಶನದಿಂದ ಮಾಡಿದೆಯವನ ಶಿರಚ್ಛೇದ.
ಹಿಂದೆ ಅಮೃತಕ್ಕಾಗಿ ಸಾವಿರ ಜನ್ಮಗಳಲ್ಲಿ ರಾಹುವಿನ  ತಪಸ್ಸಿತ್ತು,
ಬ್ರಹ್ಮವರವಿದ್ದವಗೆ ಸುಧಾಹನಿಕೊಟ್ಟು ಮಗನ ವರ ಗೌರವಿಸಿದ ಗತ್ತು.

ಶಿರಸ್ತು ತಸ್ಯ ಗ್ರಹತಾಮವಾಪ ಸುರೈಃ ಸಮಾವಿಷ್ಟಮಥೋ ಸಬಾಹು ।
ಕ್ಷಿಪ್ತಃ ಕಬನ್ಧೋsಸ್ಯ ಶುಭೋದಸಾಗರೇ ತ್ವಯಾ ಸ್ಥಿತೋsದ್ಯಾಪಿ ಹಿ ತತ್ರ 
ಸಾಮೃತಃ  ॥೧೦.೩೧॥

ಆ ರಾಕ್ಷಸನ  ಶಿರ ದೇವತೆಗಳಿಂದ ಪ್ರವಿಷ್ಟವಾಗಿ ಗ್ರಹವಾದ ಪ್ರಸಂಗ,
ಶುಭೋದಸಾಗರಕ್ಕೆಸೆಯಲ್ಪಟ್ಟು ಇಂದಿಗೂ ಇರುವ ಅವನದೇಹದ ಮುಂಡಭಾಗ.

ಅಥಾಸುರಾಃ ಪ್ರತ್ಯಪತನ್ನುದಾಯುಧಾಃ ಸಮಸ್ತಶಸ್ತೇ ಚ ಹತಾಸ್ತ್ವಯಾ ರಣೇ ।
ಕಲಿಸ್ತು ಸ ಬ್ರಹ್ಮವರಾದಜೇಯೋ ಹ್ಯೃತೇ ಭವನ್ತಂ ಪುರುಷೇಷು 
ಸಂಸ್ಥಿತಃ  ॥೧೦.೩೨॥

ದೈತ್ಯರೆಲ್ಲರೂ ನಿನ್ನೆದುರು ಬಂದರು ಆಯುಧ ಸಮೇತ,
ಬಂದವರೆಲ್ಲಾ ನಿನ್ನಿಂದ ಸಂಹಾರವಾಗಿ ಆದರು ಮೃತ.
ನಿನ್ನ ಬಿಟ್ಟು ಇನ್ನೊಬ್ಬರಿಂದ ಗೆಲ್ಲಲಾಗದೆಂದು ಕಲಿಗೆ ಬ್ರಹ್ಮನ ವರ,
ನೀನು,ಬ್ರಹ್ಮವಾಯುಗಳ ಬಿಟ್ಟು ಎಲ್ಲ ಪುರುಷರಲ್ಲಿ ಕಲಿಯ  ವ್ಯಾಪಾರ. 

Wednesday 12 September 2018

ವಿಘ್ನನಾಶ ವಿನಾಯಕನ ಕುರಿತು ಇಂದು ಹೆಚ್ಚು ಪ್ರಚಲಿತದಲ್ಲಿರುವ ಕಥೆಯ ಹಿಂದಿನ ಅಧ್ಯಾತ್ಮ

ಗಣೇಶ ಚತುರ್ಥಿಯಂದು ಎಲ್ಲೆಲ್ಲೂ ಕೇಳುವ ಗಣಪತಿಯ ಕಥೆಯ ಹಿಂದಿನ ತಿರುಳೇನು?
ಆನೆ ಮೊಗದ ವಿಶ್ವಂಭರ ರೂಪಿ ಪರಮಾತ್ಮನ ಜೊತೆಗೆ ಆಕಾಶ ತತ್ತ್ವ, ಶಿವ-ಪಾರ್ವತಿ ಪುತ್ರ ಶ್ರೀ ಗಣೇಶ 

ಪ್ರಾಚೀನ ಗ್ರಂಥಗಳಲ್ಲಿ ಅನೇಕ ಕಥೆಗಳನ್ನು ಕಾಣುತ್ತೇವೆ. ಅದನ್ನು ಮೇಲ್ನೋಟದಲ್ಲಿ ನೋಡಿದರೆ ವಿನೋದವೆನಿಸುತ್ತದೆ. ಆದರೆ ಅದರ ತಿರುಳನ್ನು ಅರಿತರೆ ಜೀವನ ಸಾರ್ಥಕ. ಇದಕ್ಕೆ ಉತ್ತಮ ಉದಾಹರಣೆ ಗಣಪತಿಯ ಕಥೆ. "ಪಾರ್ವತಿ ತನ್ನ ಮೈಯ ಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು, ಆತನ ತಲೆಯನ್ನು ಶಿವ ಕಡಿದ, ನಂತರ ಆತನಿಗೆ ಉತ್ತರ ದಿಕ್ಕಿಗೆ ತಲೆ ಹಾಕಿದ ಆನೆಯ ತಲೆಯನ್ನು ಜೋಡಿಸಿದರು, ಕಡಬು ತಿಂದ ಗಣೇಶ ಹೊಟ್ಟೆಗೆ ಹಾವನ್ನು ಸುತ್ತಿಕೊಂಡ". ಏನಿದರ ಅರ್ಥ? ಪ್ರಾಯಃ ಈ ಕಥೆಯನ್ನು ಕೇಳದವರಿಲ್ಲ; ಆದರೆ ಅರ್ಥ ತಿಳಿದವರು ಸಾವಿರಕ್ಕೆ ಒಬ್ಬರಿಲ್ಲ! ಈ ಕಥೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಮಾತ್ರ ನಮಗೆ ಕಥೆಯ ಮಹತ್ವ, ಪೂಜೆಯ ಮಹತ್ವ, ನಂಬಿಕೆಯ ಮಹತ್ವ ಅರಿಯುತ್ತದೆ. ಗಣಪತಿ ಆಕಾಶದ ದೇವತೆ. ಆಕಾಶ ಪಂಚ ಭೂತಗಳಲ್ಲಿ ಮಹತ್ತಾದದ್ದು. ಗಣಪತಿಯ ಸ್ಥಾನ ಇಪ್ಪತ್ತೊಂದನೆಯದು. ಅದಕ್ಕಾಗಿ ಆತನಿಗೆ ಇಪ್ಪತ್ತೊಂದು ಮೋದಕ ಅರ್ಪಣೆ. ಐದು ಅಂತಃಕರಣ, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಐದು ತನ್ಮಾತ್ರೆಗಳು(ಶಬ್ದ, ಸ್ಪರ್ಶ ರೂಪ ರಸ ಗಂಧ) ಇದರಿಂದ ಆಚೆಗೆ ಆಕಾಶ, ಗಾಳಿ, ಬೆಂಕಿ,ನೀರು, ಮಣ್ಣು. ಇಲ್ಲಿ ಆಕಾಶ ಇಪ್ಪತ್ತೊಂದನೇ ಮೆಟ್ಟಿಲಲ್ಲಿದೆ. ಇದು ಇಪ್ಪತ್ತೊಂದನೇ ತತ್ವ. ಗಣಪತಿಗಿಂತ ಮೊದಲ ಸ್ತರದಲ್ಲಿರುವ ತತ್ತ್ವಾಭಿಮಾನಿಗಳು ಇಪ್ಪತ್ತುಮಂದಿ. ಬ್ರಹ್ಮ, ವಾಯು, ಗರುಡ, ಶೇಷ, ರುದ್ರ, ಇಂದ್ರ, ಕಾಮ, ಅಹಂಪ್ರಾಣ, ಅನಿರುದ್ಧ, ಸ್ವಾಯಂಭುವಮನು, ಬೃಹಸ್ಪತಿ, ದಕ್ಷಪ್ರಜಾಪತಿ, ಪ್ರವಹವಾಯು, ಚಂದ್ರ, ಸೂರ್ಯ, ಯಮಧರ್ಮ, ವರುಣ, ವಹ್ನಿ, ಮಿತ್ರ ಮತ್ತು ನಿರ್ಋತಿ. ಗಣಪತಿ ಇಪ್ಪತ್ತೊಂದನೆಯವನು.

ಶಿವ ಪಾರ್ವತಿಯರು ದಂಪತಿಗಳು. ಇಲ್ಲಿ ಶಿವ ಮನಸ್ಸಿನ ಅಭಿಮಾನಿ ಮತ್ತು ಪಾರ್ವತಿ ವಾಕ್ ದೇವತೆ. ಮನಸ್ಸು ಯೋಚಿಸಿದಂತೆ ಮಾತು. ಅದಕ್ಕಾಗಿ ಅವರದು ಅನ್ಯೋನ್ಯ ದಾಂಪತ್ಯ. ಶಬ್ದದ ಮೂಲಶಕ್ತಿ ಗಾಳಿ ಮತ್ತು ಆಕಾಶ. ಆಕಾಶ ಮತ್ತು ಗಾಳಿ ಇಲ್ಲದಿದ್ದರೆ ಶಬ್ದವಿಲ್ಲ. ನಮ್ಮ ಒಳಗಿನ ವಾಕ್ ನಾದವೇ ಪಾರ್ವತಿ-ಅದು ಶಬ್ದ ರೂಪದಲ್ಲಿ ಹೊರ ಹೊಮ್ಮುವುದೇ ಮಾತು. ಇದು ಮೂಲ ನಾದದ ಸ್ಥೂಲ ರೂಪ. ಮನುಷ್ಯನಿಗೆ ದೊಡ್ಡ ಆಪತ್ತು ಮಾತು. ಅಧ್ಯಾತ್ಮ ಸಾಧನೆಗೆ ಬೇಕಾಗಿರುವುದು ಮಾತಿಗಿಂತ ಹೆಚ್ಚಾಗಿ ಮೌನ. ತನ್ನತನದ ಅರಿವಿಲ್ಲದೇ(Awareness of self), ಅಹಂಕಾರ ತತ್ವದ ವಿರುದ್ಧ ಮಾತು ಬೆಳೆದಾಗ, ಮಾತಿನ ಶಿರಛೇದನವಾಗದೇ ಜ್ಞಾನವಿಲ್ಲ. ಶಿರಛೇದನವಾದ ಮೇಲೆ ಪುನಃ ಅದೇ ಮಾತು ಮುಂದುವರಿಯಬಾರದು. ಅದಕ್ಕಾಗಿ ಎಲ್ಲವನ್ನು ಕೇಳುವ ದೊಡ್ಡ ಕಿವಿಯುಳ್ಳ, ಪ್ರಾಣಶಕ್ತಿಯನ್ನು ನಿಯಂತ್ರಿಸುವ ಉದ್ದನೆಯ ಮೂಗಿನ ಸಂಕೇತ ರೂಪವಾದ ಆನೆಯ ತಲೆಯನ್ನು ಇಟ್ಟು ಗಣಪತಿ ಎನ್ನುವ ಹೊಸ ಆಕಾರದ ಜನನವಾಯಿತು. ಗಣಪತಿಯನ್ನು ನೋಡಿದಾಕ್ಷಣ ನಮಗೆ ನೆನಪಿಗೆ ಬರಬೇಕಾದ ವಿಷಯ ಮಾತಿಗಿಂತ ಮನನ ಹೆಚ್ಚು ಮಾಡು, ಸರಿಯಾಗಿ ಕೇಳಿಸಿಕೋ (Be a good listener) ಎನ್ನುವ ವಿಚಾರ.

ಉತ್ತರ ದಿಕ್ಕಿಗೆ ತಲೆ ಹಾಕುವುದು ಅಂದರೆ ಏನು? ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಉತ್ತರಕ್ಕೆ ತಲೆ ಹಾಕಿ ಮಲಗಬಾರದು. ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತು ಕೊಳ್ಳಬಾರದು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಸುತ್ತಬಾರದು ಇತ್ಯಾದಿ. ಆದರೆ ಈ ಎಲ್ಲಾ ವಿಚಾರ ಏಕೆ? ಇದರ ಹಿಂದಿರುವ ಸಿದ್ಧಾಂತ ಏನು? ಈ ಭೂಮಿಯಲ್ಲಿ ಉತ್ತರ ಧ್ರುವದ ಶಕ್ತಿ ಉತ್ತರದಿಂದ ಪೂರ್ವಕ್ಕೆ ಹರಿಯುತ್ತಿರುತ್ತದೆ ಹಾಗೂ ದಕ್ಷಿಣ ಧ್ರುವದ ಶಕ್ತಿ ದಕ್ಷಿಣದಿಂದ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ನಮ್ಮ ಚಲನೆ ಕೂಡಾ ಈ ಶಕ್ತಿಪಾತಕ್ಕೆ ಅನುಗುಣವಾಗಿರಬೇಕು. ನಾವು ದಕ್ಷಿಣಕ್ಕೆ ಮುಖ ಮಾಡಿದರೆ ದಕ್ಷಿಣ ಧ್ರುವದ ಶಕ್ತಿಪಾತಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಂತೆ ಹಾಗೂ ಉತ್ತರಕ್ಕೆ ಮುಖ ಮಾಡಿದರೆ ಉತ್ತರ ದ್ರುವದ ಶಕ್ತಿಪಾತಕ್ಕೆ ಒಡ್ಡಿಕೊಂಡಂತೆ. ಉತ್ತರಕ್ಕೆ ತಲೆ ಹಾಕಿ ಮಲಗುವುದು ಎಂದರೆ ಎದ್ದಾಗ ದಕ್ಷಿಣಕ್ಕೆ ಮುಖ ಮಾಡುವುದು. ಆದ್ದರಿಂದ ದಕ್ಷಿಣ ಮುಖ ಹಾಗೂ ಉತ್ತರ ತಲೆ ಎರಡೂ ಒಂದೆ. ಈ ಎರಡು ಶಕ್ತಿಪಾತದಲ್ಲಿ ಒಂದು ದೊಡ್ಡ ವ್ಯತ್ಯಾಸವಿದೆ. ಅದೇನೆಂದರೆ ಉತ್ತರದ ಶಕ್ತಿಪಾತ ಊರ್ಧ್ವಮುಖವಾದದ್ದು ಹಾಗೂ ದಕ್ಷಿಣದ ಶಕ್ತಿಪಾತ ಸಂಸಾರದ ಸುಳಿಯಲ್ಲಿ ಸಿಲುಕಿಸುವಂತಾದ್ದು. ಈ ಕಾರಣಕ್ಕಾಗಿ ಉತ್ತರಕ್ಕೆ ತಲೆ ಹಾಕಿ ಮಲಗಿದರೆ ಅಥವಾ ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತರೆ ನಮ್ಮ ಶಿರಛೇದನವಾಗುತ್ತದೆ. ನಾವು ಪುನಃ ಈ ಸಂಸಾರದ ಸುಳಿಯಲ್ಲಿ ಸುತ್ತಬೇಕಾಗುತ್ತದೆ. ಇನ್ನು ಹೊಟ್ಟೆಗೆ ಹಾವಿನ ಸುತ್ತು. ಹಾವು ಕುಂಡಲಿನೀ ಶಕ್ತಿಯ ಸಂಕೇತ. ಇದು ಚಕ್ರಾಕಾರವಾಗಿ ತಲೆ ಕೆಳಗೆ ಹಾಕಿ ಮಲಗಿದ ಹಾವಿನ ರೂಪದಲ್ಲಿ ನಮ್ಮ ಮಲ-ಮೂತ್ರ ದ್ವಾರದ ಮಧ್ಯದಲ್ಲಿರುತ್ತದೆ. ಕುಂಡಲಿನೀ ಜಾಗೃತವಾಗುವುದು ಎಂದರೆ ಈ ಹಾವು ಹೆಡೆಯೆತ್ತಿ ನಿಲ್ಲುವುದು. ಕುಂಡಲಿನೀ ಜಾಗೃತವಾದಾಗ ಶಕ್ತಿ- ಮೂಲಾಧಾರ, ಮಣಿಪುರ ಹಾಗೂ ಸ್ವಾದಿಷ್ಠಾನ ಶಕ್ತಿ ಕೇಂದ್ರಗಳಲ್ಲಿ ಊರ್ಧ್ವ ಮುಖವಾಗಿ ಸಂಚರಿಸುತ್ತದೆ. ನಮ್ಮ ಹೊಕ್ಕುಳಿನ ಮೇಲಿನ ಶಕ್ತಿ ಕೇಂದ್ರ ಜ್ಞಾನದ ಬಾಗಿಲು, ಗಣಪತಿ ಈ ಮೂರು ಶಕ್ತಿ ಕೇಂದ್ರಗಳನ್ನು ನಿಯಂತ್ರಿಸಿ ನಮಗೆ ಜ್ಞಾನದ ಬಾಗಿಲನ್ನು ತೆರೆಯುವ ಶಕ್ತಿದೇವತೆ. ಇಷ್ಟೊಂದು ಸಂಗತಿ ಈ ಪುಟ್ಟ ಕಥೆಯಲ್ಲಿದೆ. ಇದು ಹೂವಿನಿಂದ ಹಣ್ಣಿಗೆ ಹೋಗುವ ರೀತಿ. ಕೇವಲ ಮೇಲ್ನೋಟದ ಅರ್ಥದಲ್ಲೇ (ಹೂವಿನಲ್ಲೇ)ನಿಂತರೆ ತೊಂದರೆಯಿಲ್ಲ, ಅದರಿಂದಾಚೆಗೆ ಏನೂ ಇಲ್ಲ ಎಂದು ತಿಳಿದರೆ ಅದು ಅನರ್ಥ!

ಯಾವುದೇ ಪೂಜೆ-ಕರ್ಮವನ್ನು ಮಾಡುವಾಗ ವಿಘ್ನನಿವಾರಕನಾದ ಗಣಪತಿ ಪೂಜೆ ಮಾಡುವುದು ಸಂಪ್ರದಾಯ. ಅದಕ್ಕಾಗಿ ಗಣಪತಿ ಮಂಡಲ ಬರೆದು ಪೂಜಿಸಿ ನಂತರ ಇತರ ಕರ್ಮವನ್ನು ಮಾಡುತ್ತಾರೆ.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಹೀಗೆ ವಿಘ್ನ ನಿವಾರಕ ಗಣಪತಿ ಸ್ತುತಿ ಮೊದಲಿಗೆ.
ಭಗವಂತ ತನ್ನ ವಿಶ್ವಂಭರರೂಪದಲ್ಲಿ ಗಣಪತಿಯ ಅಂತರ್ಯಾಮಿಯಾಗಿ ಸನ್ನಿಹಿತನಾಗಿದ್ದಾನೆ.
ಭಗವಂತನ ವಿಶ್ವಂಭರ ರೂಪಕ್ಕೆ ಒಟ್ಟು ೧೯ ತಲೆಗಳು. ನಡುವಿನಲ್ಲಿ ಆನೆಯ ಮೊಗ ಹಾಗೂ ಎಡ ಬಲಗಳಲ್ಲಿ ೯-೯ ಮಾನವ ಮೊಗ.

ಸಹಸ್ರನಾಮ ಭಗವಂತನ 'ವಿಶ್ವಮ್' ಎನ್ನುವ ವಿಘ್ನನಿವಾರಕ 'ವಿಶ್ವಂಭರ' ರೂಪದ ನಾಮದಿಂದ ಪ್ರಾರಂಭವಾಗುತ್ತದೆ.
ನಮ್ಮ ಜೀವನದಲ್ಲಿರುವ ಮೂರು ಅವಸ್ಥೆಗಳಲ್ಲಿ (ಎಚ್ಚರ-ಕನಸು-ನಿದ್ದೆ), ನಮ್ಮ ಎಚ್ಚರವನ್ನು ನಿಯಂತ್ರಿಸುವ ಭಗವಂತನ ರೂಪ 'ವಿಶ್ವ' ನಾಮಕ ರೂಪ.

ದೇವತೆಗಳು ನಮಗೆ ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಕೊಟ್ಟು, ನಮ್ಮನ್ನು ನಿಯಮನ ಮಾಡಿಕೊಂಡು ಈ ನಮ್ಮ ದೇಹದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಒಬ್ಬ ದೇವತೆ ಗಣಪತಿ. ಆತ ಆಕಾಶದ ದೇವತೆ. ಬ್ರಹ್ಮಾಂಡದಲ್ಲಿ ಆಕಾಶ ಹಾಗೂ ಪಿಂಡಾಂಡದಲ್ಲಿ ರಕ್ತಸಂಚಾರ, ಉಸಿರಾಟಕ್ಕೆ ಬೇಕಾದ ಅವಕಾಶ(Space)ವನ್ನು ಒದಗಿಸಿ ಮನುಷ್ಯ ಜೀವಂತವಾಗಿರಲು ಅವಕಾಶವನ್ನು ಈತ ಕಲ್ಪಿಸಿಕೊಡುತ್ತಾನೆ. ಈತ ಅವಕಾಶದ ದೇವತೆಯಾದ್ದರಿಂದ ವಿಘ್ನನಾಶ.
ಶಿವ ಪಾರ್ವತೀ ಪುತ್ರ, 
ನಿನ್ನದೆಂಥಾ ಪಾತ್ರ. 
ನಿನ್ನ ಮನೆ ಆಕಾಶ, 
ನೀ ನೀಡುವೆ ಅವಕಾಶ. 
ದೇಹ ನಾಡಿಗಳಿಗೆ ನೀ ಮೂಲಾಧಾರ, 
ಮೊದಲ ಅಂತರ್ಜಾಗೃತಿಯ ಸೂತ್ರಧಾರ. 
ನಿನ್ನ ಅನುಗ್ರಹವಿರೇ ಅಪಾರ, 
ಸಹಸ್ರಾರದಲ್ಲಿ ಪರಮಸಾಕ್ಷಾತ್ಕಾರ. 

ನಿನ್ನಪ್ಪನ ಮನೆ ಮನಸು, 
ಅವಕಾಶವೀವ ನೀನವನ ಕೂಸು. 
ನಮೋ ಗಣೇಶಾಂತರ್ಗತ ವಿಶ್ವಂಭರ, 
ತೊಡಿಸೆಮಗೆ ಜ್ಞಾನ ಭಕ್ತಿ ವೈರಾಗ್ಯಗಳಂಬರ. 

ಗಲ್ಲಿ ಗಲ್ಲಿಗೂ ಗಣೇಶ ಅಲಂಕಾರದಾಡಂಬರ, 
ಕಿವಿಗಡಚಿಕ್ಕುವ ಚಿತ್ರಗೀತೆಗಳ ಮೈಕಾಸುರ. 
ಅರ್ಥ ಅನುಸಂಧಾನಕೆ ಎಲ್ಲೆಲ್ಲೂ ತತ್ವಾರ, 
ಒಪ್ಪಿಯಾನೆ ಇದ ಗಣೇಶಾಂತರ್ಗತ ವಿಶ್ವಂಭರ. 

ನಮೋ ನಮೋ ಆಕಾಶಾಭಿಮಾನಿ ಗಣೇಶ, ಕರುಣಿಸು ಸದ್ಬುದ್ಧಿ ಸತ್ಕರ್ಮಗಳ ಅವಕಾಶ. 
ನೀಡೆಮಗೆ ಸಚ್ಛಾಸ್ತ್ರ ಕೇಳುವ ತೆರೆದ ಕಿವಿ, 
ಅವಾದಾವು ದುರ್ವಚನ ದುರ್ವಾದಗಳಿಗೆ ಪವಿ. 

ವಿಘ್ನ ನಿವಾರಕ ತರಿದುಬಿಡು ವಿಘ್ನ, 
ನಿನ್ನೊಲುಮೆಯಿಂದ ಬದುಕಾಗಲಿ ಯಜ್ಞ. 
ಬಾಳ ಯಾತ್ರೆಯಲಿ ಸತ್ಕರ್ಮಗಳನೇ ನಡೆಸು, 
ತಂದೆಯೊಡಗೂಡಿ ಎಮ್ಮ ಮನ ಹರಿಪಾದದೊಳಿರಿಸು.

ಸತ್ಕರ್ಮಗಳಲೇ ಅವಕಾಶ ಕೊಡು ಗಣಪ, 
ಹರಿಚರಣಗಳಲಿ ಎಮ್ಮ ಮನವಿಡಲಿ ನಿನ್ನಪ್ಪ. 
ಸುಜ್ಞಾನ ಮತಿಯಿತ್ತು ಸಲಹು ನೀ ಪವಮಾನ, 

ಸುತ್ತುವಾಟ ಮುಗಿಸಿ ಎತ್ತಿಕೋ ಗರುಡವಾಹನ.
(Contributed by Shri Prakash Shetty)

Monday 10 September 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 19 - 27

ಉಚ್ಚೈಃಶ್ರವಾ ನಾಮ ತುರಙ್ಗಮೋsಥ ಕರೀ ತಥೈರಾವತನಾಮಧೇಯಃ ।
ಅನ್ಯೇ ಚ ದಿಕ್ಪಾಲಗಜಾ ಬಭೂವುರ್ವರಂ ತಥೈವಾಪ್ಸರಸಾಂ 
ಸಹಸ್ರಮ್ ॥೧೦.೧೯॥
ನಡೆದಿರಲು ಅಮೃತಕ್ಕಾಗಿ ಸಮುದ್ರಮಥನ,
ಉಚ್ಚೈಶ್ರವಾ ಎಂಬ ಕುದುರೆಯ ಆಗಮನ.
ಐರಾವತ ಎಂಬಾನೆ ದಿಕ್ಪಾಲಗಜಗಳ ಜನನ,
ಸಹಸ್ರ ಅಪ್ಸರೆಯರೂ ಬಂದರಂತೆ ಆ ಕ್ಷಣ.

ತಥಾsಯುಧಾನ್ಯಾಭರಣಾನಿ ಚೈವ ದಿವೌಕಸಾಂ ಪರಿಜಾತಸ್ತರುಶ್ಚ ।
ತಥೈವ ಸಾಕ್ಷಾತ್ ಸುರಭಿರ್ನ್ನಿಶೇಶೋ ಬಭೂವ ತತ್ ಕೌಸ್ತುಭಂ 
ಲೋಕಸಾರಮ್  ॥೧೦. ೨೦ ॥

ಹಾಗೆಯೇ ಬಂದವು ದೇವತೆಗಳ ಆಯುಧಗಳು ಆಭರಣಗಳು,
ಪಾರಿಜಾತ ವೃಕ್ಷ ಕಾಮಧೇನು ಚಂದ್ರ ಕೌಸ್ತುಭ ಕೊಟ್ಟಿತು ಕಡಲು.

ಅಥೇನ್ದಿರಾ ಯದ್ಯಪಿ ನಿತ್ಯದೇಹಾ ಬಭೂವ ತತ್ರಾಪರಯಾ ಸ್ವತನ್ವಾ ।
ತತೋ ಭವಾನ್ ದಕ್ಷಿಣಬಾಹುನಾ ಸುಧಾಕಮಣ್ಡಲುಂ ಕಲಶಂ 
ಚಾಪರೇಣ ॥೧೦.೨೧॥

ಪ್ರಗೃಹ್ಯ ತಸ್ಮಾನ್ನಿರಗಾತ್ ಸಮುದ್ರಾದ್ ಧನ್ವನ್ತರಿರ್ನ್ನಾಮ ಹರಿನ್ಮಣಿದ್ಯುತಿಃ ।
ತತೋ ಭವದ್ಧಸ್ತಗತಂ ದಿತೇಃಸುತಾಃ ಸುಧಾಭರಂ ಕಲಶಂ 
ಚಾಪಜಹ್ರುಃ ॥೧೦.೨೨ ॥

ಆನಂತರ ಆಯಿತು ನಿತ್ಯಶರೀರವುಳ್ಳ ಲಕ್ಷ್ಮೀ ದೇವಿಯ ಆವಿರ್ಭಾವ.
ಒಂದುಕೈಲಿ ಸುಧಾಕಮಂಡಲು ಇನ್ನೊಂದುಕೈಲಿ ಕಲಶ ಹಿಡಿದ ದೇವ.
ನೀಲಮಣಿ ಕಾಂತಿಯುಳ್ಳ ಧನ್ವಂತರಿ ಹೆಸರ ಹೊತ್ತು ಬಂದ,
ಅಪಹರಣವಾಯಿತಾಗ ಅಮೃತಕಲಶ ದಿತಿಯ ಮಕ್ಕಳಿಂದ.

ಮುಕ್ತಂ ತ್ವಯಾ ಶಕ್ತಿಮತಾsಪಿ ದೈತ್ಯಾನ್ ಸತ್ಯಚ್ಯುತಾನ್ ಕಾರಯತಾ ವಧಾಯ ।
ತತೋ ಭವಾನನುಪಮಮುತ್ತಮಂ ವಪುರ್ಬಭೂವ ದಿವ್ಯಪ್ರಮದಾತ್ಮಕಂ 
ತ್ವರನ್ ॥೧೦.೨೩ ॥
ಶ್ಯಾಮಂ ನಿತಮ್ಬಾರ್ಪಿತರತ್ನಮೇಖಲಂ ಜಾಮ್ಬೂನದಾಭಾಮ್ಬರಭೃತ್ ಸುಮದ್ಧ್ಯಮಮ್ ।
ಬೃಹನ್ನಿತಮ್ಬಂ ಕಲಶೋಪಮಸ್ತನಂ 
ಸತ್ಪುಣ್ಡರೀಕಾಯತನೇತ್ರಮುಜ್ಜ್ವಲಮ್ ॥೧೦.೨೪ ॥
ಸಮಸ್ತಸಾರಂ ಪರಿಪೂರ್ಣ್ಣಸದ್ಗುಣಂ ದೃಷ್ಟ್ವೈವ ತತ್ ಸಮ್ಮುಮುಹುಃ ಸುರಾರಯಃ ।
ಪರಸ್ಪರಂ ತೇsಮೃತಹೇತುತೋsಖಿಲಾ ವಿರುದ್ಧ್ಯಮಾನಾಃ ಪ್ರದದುಃ ಸ್ಮ ತೇ 
ಕರೇ ॥ ೧೦.೨೫ ॥

ಸದಾ ಇದ್ದರೂ ನಿನ್ನಲ್ಲಿ ಅಪಾರವಾದ ಶಕ್ತಿ,
ತೋರಲು ದೈತ್ಯರಾದಾಗ ಸತ್ಯದಿಂದ ಚ್ಯುತಿ,
ದೈತ್ಯರ ಸಂಹಾರ ಮಾಡುವ ಕಾರಣ,
ಮಾಡಿದೆ ಅಲೌಕಿಕ ಸ್ತ್ರೀರೂಪ ಧಾರಣ.
ನೀಲವರ್ಣ ಕಟಿಯಲ್ಲಿ ದಿವ್ಯ ರತ್ನದ ಉಡಿದಾರ,
ಧರಿಸಿ ಸುವರ್ಣಕಾಂತಿವುಳ್ಳ ಭವ್ಯ ಪೀತಾಂಬರ.
ವಿಶಾಲ ನಿತಂಬ ಕಳಶದಂಥ ಸ್ತನ ಕಮಲದಳದಂಥ ಕಂಗಳು,
ಉತ್ಕೃಷ್ಟ ಸೌಂದರ್ಯ ಕಂಡ ದೈತ್ಯರಿಗೆ ಮೋಹದ ಅಮಲು.
ಅಮೃತಕ್ಕಾಗಿ ದೈತ್ಯರಲ್ಲೇ ಆಯಿತು ಹೊಡೆದಾಟ,
ಎಲ್ಲರ ಮನದಲ್ಲಿದ್ದು ಪ್ರಚೋದಿಸುವ ನಿನ್ನಾಟ.

ಸಮಂ ಸುಧಾಯಾಃ ಕಲಶಂ ವಿಭಜ್ಯ ನಿಪಾಯಯಾಸ್ಮಾನಿತಿ ವಞ್ಚಿತಾಸ್ತ್ವಯಾ।
ಧರ್ಮ್ಮಚ್ಛಲಂ ಪಾಪಜನೇಷು ಧರ್ಮ್ಮ ಇತಿ ತ್ವಯಾ ಜ್ಞಾಪಯಿತುಂ 
ತದೋಕ್ತಮ್ ॥೧೦.೨೬ ॥
ಯದ್ಯತ್ ಕೃತಂ ಮೇ ಭವತಾಂ ಯದೀಹ ಸಂವಾದ ಏವೋದ್ವಿಭಜೇ ಸುಧಾಮಿಮಾಮ್ ।
ಯಥೇಷ್ಟತೋsಹಂ ವಿಭಜಾಮಿ ಸರ್ವಥಾ ನ ವಿಶ್ವಸಧ್ವಂ ಮಯಿ ಕೇನಚಿತ್ 
ಕ್ವಚಿತ್  ॥೧೦.೨೭ ॥

ಹೀಗೆ ದೈತ್ಯರಿಗಾಯಿತು ನಿನ್ನಿಂದ ಮೋಸ,
ನೀನೇ ಹಂಚೆಂದು ನಿನ್ನ ಕೈಗಿಟ್ಟರು ಕಲಶ.
ಧರ್ಮರಕ್ಷಣೆಗಾಗಿ ಪಾಪಿಷ್ಟರಲ್ಲಿ ಮೀರುವ ಒಪ್ಪಂದ,
ಧರ್ಮಾಧರ್ಮಗಳ ಪಾಲನೆಯ ಬಿಚ್ಚಿಟ್ಟ ಗೋವಿಂದ.
ಮೋಹಿನಿಯಿಂದ ಮೋಹಕ ಮಾತು-ಅಮೃತ ವಿಭಾಗ ವಿಚಾರ,
ಒಪ್ಪಬೇಕು ನನ್ನಿಷ್ಟದಂತೇ ನಡೆಯುವುದು ಹಂಚುವ ವ್ಯಾಪಾರ.
ನನ್ನಲ್ಲಿ ಸರ್ವಥಾ ವಿಶ್ವಾಸ ಇಡಬೇಡಿ ಎಂದ,

ಒಪ್ಪಿತು ಸ್ತ್ರೀಮಾದಕತೆಗೆ ಮರುಳಾದ ದೈತ್ಯವೃಂದ.
[Contributed by Shri Govind Magal]