Sunday 16 September 2018

ಘನಪಾಠಿಗಳಿಗೂ ದಕ್ಕದ ಗಣಪತಿ. ಲೇಖನ : ಡಾ.ಬನ್ನ೦ಜೆ ಗೋವಿ೦ದಾಚಾಯ೯

ಶಿವ-ಪಾರ್ವತಿಯರ ಮಗನೆಂದು ಶೈವರಿಗೆ-ಶಾಕ್ತರಿಗೆ ಗಣಪತಿ ಪ್ರಿಯನಾದ.
ಅಷ್ಟೇ ಅಲ್ಲ, ಇದೇ ಗಣಪತಿ ಕೃಷ್ಣ-ರುಕ್ಮಿಣಿಯರ ಮಗನಾಗಿ ಚಾರುದೇಷ್ಣನಾದ. ಅದರಿಂದ ವೈಷ್ಣವರಿಗೂ ಪ್ರಿಯ.
ಅವನು ಕ್ಷಿಪ್ರಪ್ರಸಾದ.
ಪೂಜಿಸಿದವರಿಗೆ ಉಳಿದ ದೇವತೆಗಳಿಗಿಂತ ಬೇಗ ಫಲಕೊಡುವವನು. ಅದರಿಂದಲೂ ಅವನು ಎಲ್ಲರಿಗೂ ಇಷ್ಟದೇವತೆಯಾದ.


ಋಗ್ವೇದದಲ್ಲಿ ಒಂದು ಗಣಪತಿ ಮಂತ್ರ ಇದೆ -

ನಿಷು ಸೀದ ಗಣಪತೇ ಗಣೇಷು
ತ್ವಾಮಾಹುರ್ವಿಪ್ರತಮಂ ಕವೀನಾಮ್
ನ ಋತೇ ತ್ವತ್ ಕ್ರಿಯತೇ ಕಿಂಚನಾರೇ
ಮಹಾಮರ್ಕಂ ಮಘವನ್ ಚಿತ್ರಮರ್ಚ
(10.112.9)

ಈ ಮಂತ್ರದ ಋಷಿ ವಿರೂಪನ ಮಗ ನಭಃಪ್ರಭೇದನ. ಇದು ಗಣಪತಿಯ ಸ್ತುತಿಯಲ್ಲ. ಇಂದ್ರನ ಸ್ತುತಿ ಎನ್ನುತ್ತಾರೆ ಸಂಪ್ರದಾಯಜ್ಞರು. ಇಲ್ಲಿ ಬಂದ ಗಣಪತಿ ಎಂದರೆ ಆನೆಯ ಮೋರೆಯ, ಸೊಟ್ಟ ಸೊಂಡಿಲಿನ ಗಣಪತಿ ಅಲ್ಲ. ಇಂದ್ರನೆಂದರೆ ಸಗ್ಗದೊಡೆಯ, ಶಚೀಪತಿ ಇಂದ್ರನೂ ಅಲ್ಲ. ವೈದಿಕ ಪರಿಭಾಷೆಯಲ್ಲಿ ಮುಖ್ಯವಾಗಿ ಇಂದ್ರ ಎಂದರೆ ಇಡಿಯ ವಿಶ್ವವನ್ನು ನಿಯಂತ್ರಿಸುವ ಪರತತ್ವ. ಪರಮಪುರುಷ. ಪುರುಷೋತ್ತಮ.

ಈ ಮಂತ್ರದಲ್ಲಿ ನಭಃಪ್ರಭೇದನ ಕಂಡ ಅರ್ಥ- 'ಓ ಜೀವಗಣಗಳ ಒಡೆಯನಾದ ಪರಮಾತ್ಮನೆ, ಪೀಠದಲ್ಲಿ ಬಂದು ಕೂಡು. ಜ್ಞಾನಿಗಳ ತಂಡದಲ್ಲೆ ನೀನು ಎಲ್ಲರಿಗಿಂತ ಮಿಗಿಲಾದ ಜ್ಞಾನಿ, ಸರ್ವಜ್ಞ ಎನ್ನುತ್ತಾರೆ. ನಿನ್ನ ನೆರವಿಲ್ಲದೆ ಎಲ್ಲೂ ಯಾರೂ ಏನೂ ಮಾಡಲಾರರು. ಓ ಯಜ್ಞಾರಾಧ್ಯನೆ, ಪೂಜೆಕೊಳ್ಳುವವರಲ್ಲಿ ಮೊದಲಿಗ ನೀನು. ಜ್ಞಾನಾನಂದಗಳ ಅಚ್ಚರಿಯ ಮೂರ್ತಿ ನೀನು. ನನ್ನ ಮೂಲಕ ನೀನೇ ನಿನ್ನ ಪೂಜೆಯನ್ನು ಮಾಡಿಸಿಕೋ...’
ಇಲ್ಲಿ ಗಜಾನನನ ಸುಳಿವೇ ಇಲ್ಲ. ಜಗನ್ನಿಯಾಮಕನಾದ ಭಗವಂತನ ಪ್ರಾರ್ಥನೆ ಇದು.
                    .***

ಪ್ರಾಯಃ ಈ ಮಂತ್ರದ ಪ್ರಭಾವದಿಂದಲೇ ಒಂದು ಹೊಸ ಪಂಥ ಹುಟ್ಟಿಕೊಂಡಿತು. ಗಣಪತಿಯೇ ಸರ್ವಶಕ್ತ, ಗಣಪತಿಯೇ ಪರತತ್ವ ಎನ್ನುವ ಪಂಥ. ಇದರ ಅನುಯಾಯಿಗಳನ್ನು ಗಾಣಪತ್ಯರು ಅಥವಾ ಗಾಣಪತರು ಎಂದು ಕರೆಯುತ್ತಿದ್ದರು.

ಈಗ ಈ ಪಂಥ ಬಳಕೆಯಲ್ಲಿಲ್ಲ. ಅದು ಶಾಕ್ತರಲ್ಲಿ ಶೈವರಲ್ಲಿ ಅಂತರ್ಭಾವಗೊಂಡಿದೆ. ಪರಿಣಾಮವಾಗಿ ಪಂಚಾಯತನ ಪೂಜೆಯಲ್ಲಿ ಶಿವಪಾರ್ವತಿಯರ ಜತೆಗೆ ಗಣಪತಿಯೂ ಸೇರಿಕೊಂಡ. ಆದರೆ ವಾಸ್ತವವಾಗಿ ಈ ಮಂತ್ರದಲ್ಲಿ ಗಾಣಪತ್ಯರು ಪೂಜಿಸುವ ಗಣಪತಿಯ ಸುದ್ದಿಯೇ ಇಲ್ಲ.

ಬ್ರಹ್ಮಣಸ್ಪತಿಯಾದ ಗಣಪತಿ :
====================

ಋಗ್ವೇದದಲ್ಲಿ ಇನ್ನೊಂದು ಮಂತ್ರವಿದೆ -

ಗಣಾನಾಂ ತ್ವಾ ಗಣಪತಿಂ ಹವಾಮಹೇ...
(2.23.1)
ಈ ಮಂತ್ರದ ಋಷಿ ಗೃತ್ಯಮದ ಅಥವಾ ಶೌನಕ. ಇದರ ದೇವತೆ ಬೃಹಸ್ಪತಿ ಮತ್ತು ಬ್ರಹ್ಮಣಸ್ಪತಿ ಎನ್ನುತ್ತದೆ ಅನುಕ್ರಮಣಿಕೆ. ಇದೂ ಒಂದು ಗೊಂದಲವೆ. ವಾಸ್ತವವಾಗಿ ಬೃಹಸ್ಪತಿ ಮತ್ತು ಬ್ರಹ್ಮಣಸ್ಪತಿ ಬೇರೆ ಬೇರೆ ದೇವತೆಗಳಲ್ಲ. ಅಮುಖ್ಯ ಅರ್ಥದಲ್ಲಿ ದೇವಗುರು ಬೃಹಸ್ಪತಿ. ಮುಖ್ಯ ಅರ್ಥದಲ್ಲಿ ವಾಕ್ಪತಿಗಳಾದ ಪ್ರಾಣ-ನಾರಾಯಣರು.

ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಈ ಮಂತ್ರ ಬಂದಿದೆ (2.3.14.3). ‘ಓ ಜೀವಗಣಗಳ, ಇಂದ್ರಿಯಗಣಗಳ ನೇತಾರನೆ, ಓ ವಾಗ್ದೇವತೆಯ ನಲ್ಲನೆ, ನಿನ್ನನ್ನು ನಾವು ನಮ್ಮತ್ತ ಬರುವಂತೆ ಆಹ್ವಾನಿಸುತ್ತಿದ್ದೇವೆ’ ಎನ್ನುತ್ತದೆ ಈ ಮಂತ್ರ. ಇಲ್ಲೂ ಸೊಟ್ಟ ಸೊಂಡಿಲಿನ ಗಣಪತಿಯ ಸೊಲ್ಲೇ ಇಲ್ಲ.

ಅಥರ್ವವೇದದ ವ್ರಾತ್ಯಕಾಂಡ
=====================
ಅಥರ್ವವೇದದ ಒಂದು ಕಾಂಡದ ಹೆಸರು-"ವ್ರಾತ್ಯಕಾಂಡ". ವೈದಿಕರು ಮತ್ತು ವೇದವ್ಯಾಖ್ಯಾನಕಾರರು ಈ ಅಪೂರ್ವಕಾಂಡವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ವ್ರಾತ್ಯ ಶಬ್ದಕ್ಕೆ ಬಳಕೆಯ ಅರ್ಥ: ಸಾಮಾಜಿಕ ರೀತಿ ರಿವಾಜುಗಳನ್ನು ಧಿಕ್ಕರಿಸಿ ಸ್ವಚ್ಛಂದವಾಗಿ ಬದುಕುವವನು; ಲೋಕಬಾಹ್ಯ. ಅಂಥ ಒಬ್ಬ ಅವಧೂತ ಮುನಿಯಿದ್ದ. ಅವನ ಕುರಿತಾಗಿಯೇ ಈ ಕಾಂಡವಿದೆ ಎನ್ನುತ್ತಾರೆ ಸಾಯಣರು.

ಇವರ ಈ ವಿವರಣೆ ಯಾಕೋ ಇಷ್ಟವಾಗುವುದಿಲ್ಲ. ಸಂಸ್ಕೃತದಲ್ಲಿ ವ್ರಾತ ಎಂದರೆ ಸಮೂಹ-ಗಣ. ವ್ರಾತ್ಯ ಎಂದರೆ ಗುಂಪಿನ ನಾಯಕ-ಗಣಪತಿ. ಅದರಿಂದ ಇಡಿಯ ಕಾಂಡ ಗಣಪತಿಯ ಸ್ತುತಿರೂಪವಾಗಿದೆ. ವೇದಗಳಿಗೆ ಬರಿಯ ಮೇಲುನೋಟದ ಅರ್ಥವನ್ನಷ್ಟೆ ಹೇಳುವ ಕರ್ಮಠರಾದ ಸಾಯಣರಿಗೆ ಗಣಪತಿ ಪರವಾದ ಈ ಸುಂದರವಾದ ಅರ್ಥ ಏಕೆ ಹೊಳೆಯಲಿಲ್ಲ ಎನ್ನುವುದೊಂದು ವಿಸ್ಮಯ.

ಸತ್ಯಕಂಡ ಸಂಪೂರ್ಣಾನಂದರು
=====================

ಡಾ. ಸಂಪೂರ್ಣಾನಂದರು ಉತ್ತರಪ್ರದೇಶದ ಮುಖ್ಯಮಂತ್ರಿಗಳಾಗಿದ್ದವರು. ಅವರು ಸಂಸ್ಕೃತದಲ್ಲಿ ಒಂದು ಗ್ರಂಥವನ್ನು ಬರೆದಿದ್ದರು: "ವ್ರಾತ್ಯಕಾಂಡವಿಮರ್ಶಃ". ಅವರು ಈ ಕಾಂಡವನ್ನು ವಿಸ್ತಾರವಾಗಿ ವಿಮರ್ಶಿಸಿ ಸಾಯಣರ ಅರ್ಥವನ್ನು ಸಕಾರಣವಾಗಿ ನಿರಾಕರಿಸುತ್ತಾರೆ. ವಿಚಿತ್ರ ಅಲ್ಲವೇ?
ಒಬ್ಬ ರಾಜಕಾರಣಿಗೆ ಹೊಳೆದ ಸತ್ಯ ವೈದಿಕರಾದ ಸಾಯಣರಿಗೆ ಹೊಳೆಯಲಿಲ್ಲ. ಮಹಾನ್ ವೇದವಿದ್ವಾಂಸನಾಗಿದ್ದ ಒಬ್ಬ ಈ ದೇಶದಲ್ಲಿ ಒಂದು ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಎನ್ನುವುದು ಇನ್ನೂ ಅಚ್ಚರಿಯ ಸಂಗತಿ. ಪ್ರಾಯಃ ಹೆಚ್ಚಿನ ವಿದ್ವಾಂಸರು ಗಮನಿಸದ ಈ ಗ್ರಂಥ ವೈದಿಕವ್ಮಾಯಕ್ಕೆ ಒಬ್ಬ ರಾಜಕಾರಣಿಯ ಅನನ್ಯ ಕಾಣಿಕೆ.

ಆದರೆ ಇಲ್ಲೂ ಆನೆಯ ಸೊಂಡಿಲಿನ ಸೊಲ್ಲೇ ಇಲ್ಲ. ಈ ಎಲ್ಲ ಕಾರಣಗಳಿಂದ ಅನೇಕ ಮಂದಿ ವಿಮರ್ಶಕರು ಭ್ರಮಿಸಿದ್ದುಂಟು: ಈ ಗಣಪತಿ ವೈದಿಕದೇವತೆಯಲ್ಲ, ಜನಪದರ ದೇವತೆ ಎಂದು.

ಗಣಪತಿಯ ಗಾಯತ್ರಿ
==============
ಇದೂ ಕೂಡಾ ಅರ್ವಾಚೀನ ವಿಮರ್ಶಕರ ದುಡುಕಿನ ನಿರ್ಧಾರ. ಏಕೆಂದರೆ ಆನೆಯ ಮೋರೆಯ ಗಣಪತಿಯ ಉಲ್ಲೇಖವೂ ಯಜುರ್ವೇದದ ಮಹಾನಾರಾಯಣೋಪನಿಷತ್ತಿನಲ್ಲಿದೆ-
ಏಕದಂತಾಯ ವಿದ್ಮಹೇ|
ವಕ್ರತುಂಡಾಯ ಧಿಮಹಿ|
ತನ್ನೋ ದಂತಿಃ ಪ್ರಚೋದಯಾತ್|

ಈ ಗಣಪತಿ ಗಾಯತ್ರಿಯ ಅರ್ಥ- ‘ಒಂದು ದಾಡೆಯ ಗಣಪನ ಅನುಗ್ರಹಕ್ಕಾಗಿ ನಾವು ಅವನ ಹಿರಿಮೆಯನ್ನು ಅರಿಯುತ್ತೇವೆ. ಸೊಟ್ಟ ಮೋರೆಯ ಗಣಪನನ್ನೇ ಚಿಂತಿಸುತ್ತೇವೆ. ಅಂಥ ಆನೆಯ ರೂಪದ ಗಣಪ ನಮ್ಮನ್ನು ಸನ್ಮಾರ್ಗದಲ್ಲಿ ಪ್ರೇರಿಸಲಿ..’
ನಮಗೆ ಬೇಕಾದ ವೈದಿಕ ಗಣಪತಿ ಇಲ್ಲಿ ಸಿಕ್ಕಿದ..

(ಇದು ದಿನಾಂಕ ೪ -೯-೨೦೧೬ ರ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ)

1 comment:

ಗೋ-ಕುಲ Go-Kula