Showing posts with label ಪ್ರಕಾಶ ಶೆಟ್ಟಿ. Show all posts
Showing posts with label ಪ್ರಕಾಶ ಶೆಟ್ಟಿ. Show all posts

Wednesday, 12 September 2018

ವಿಘ್ನನಾಶ ವಿನಾಯಕನ ಕುರಿತು ಇಂದು ಹೆಚ್ಚು ಪ್ರಚಲಿತದಲ್ಲಿರುವ ಕಥೆಯ ಹಿಂದಿನ ಅಧ್ಯಾತ್ಮ

ಗಣೇಶ ಚತುರ್ಥಿಯಂದು ಎಲ್ಲೆಲ್ಲೂ ಕೇಳುವ ಗಣಪತಿಯ ಕಥೆಯ ಹಿಂದಿನ ತಿರುಳೇನು?
ಆನೆ ಮೊಗದ ವಿಶ್ವಂಭರ ರೂಪಿ ಪರಮಾತ್ಮನ ಜೊತೆಗೆ ಆಕಾಶ ತತ್ತ್ವ, ಶಿವ-ಪಾರ್ವತಿ ಪುತ್ರ ಶ್ರೀ ಗಣೇಶ 

ಪ್ರಾಚೀನ ಗ್ರಂಥಗಳಲ್ಲಿ ಅನೇಕ ಕಥೆಗಳನ್ನು ಕಾಣುತ್ತೇವೆ. ಅದನ್ನು ಮೇಲ್ನೋಟದಲ್ಲಿ ನೋಡಿದರೆ ವಿನೋದವೆನಿಸುತ್ತದೆ. ಆದರೆ ಅದರ ತಿರುಳನ್ನು ಅರಿತರೆ ಜೀವನ ಸಾರ್ಥಕ. ಇದಕ್ಕೆ ಉತ್ತಮ ಉದಾಹರಣೆ ಗಣಪತಿಯ ಕಥೆ. "ಪಾರ್ವತಿ ತನ್ನ ಮೈಯ ಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು, ಆತನ ತಲೆಯನ್ನು ಶಿವ ಕಡಿದ, ನಂತರ ಆತನಿಗೆ ಉತ್ತರ ದಿಕ್ಕಿಗೆ ತಲೆ ಹಾಕಿದ ಆನೆಯ ತಲೆಯನ್ನು ಜೋಡಿಸಿದರು, ಕಡಬು ತಿಂದ ಗಣೇಶ ಹೊಟ್ಟೆಗೆ ಹಾವನ್ನು ಸುತ್ತಿಕೊಂಡ". ಏನಿದರ ಅರ್ಥ? ಪ್ರಾಯಃ ಈ ಕಥೆಯನ್ನು ಕೇಳದವರಿಲ್ಲ; ಆದರೆ ಅರ್ಥ ತಿಳಿದವರು ಸಾವಿರಕ್ಕೆ ಒಬ್ಬರಿಲ್ಲ! ಈ ಕಥೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಮಾತ್ರ ನಮಗೆ ಕಥೆಯ ಮಹತ್ವ, ಪೂಜೆಯ ಮಹತ್ವ, ನಂಬಿಕೆಯ ಮಹತ್ವ ಅರಿಯುತ್ತದೆ. ಗಣಪತಿ ಆಕಾಶದ ದೇವತೆ. ಆಕಾಶ ಪಂಚ ಭೂತಗಳಲ್ಲಿ ಮಹತ್ತಾದದ್ದು. ಗಣಪತಿಯ ಸ್ಥಾನ ಇಪ್ಪತ್ತೊಂದನೆಯದು. ಅದಕ್ಕಾಗಿ ಆತನಿಗೆ ಇಪ್ಪತ್ತೊಂದು ಮೋದಕ ಅರ್ಪಣೆ. ಐದು ಅಂತಃಕರಣ, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಐದು ತನ್ಮಾತ್ರೆಗಳು(ಶಬ್ದ, ಸ್ಪರ್ಶ ರೂಪ ರಸ ಗಂಧ) ಇದರಿಂದ ಆಚೆಗೆ ಆಕಾಶ, ಗಾಳಿ, ಬೆಂಕಿ,ನೀರು, ಮಣ್ಣು. ಇಲ್ಲಿ ಆಕಾಶ ಇಪ್ಪತ್ತೊಂದನೇ ಮೆಟ್ಟಿಲಲ್ಲಿದೆ. ಇದು ಇಪ್ಪತ್ತೊಂದನೇ ತತ್ವ. ಗಣಪತಿಗಿಂತ ಮೊದಲ ಸ್ತರದಲ್ಲಿರುವ ತತ್ತ್ವಾಭಿಮಾನಿಗಳು ಇಪ್ಪತ್ತುಮಂದಿ. ಬ್ರಹ್ಮ, ವಾಯು, ಗರುಡ, ಶೇಷ, ರುದ್ರ, ಇಂದ್ರ, ಕಾಮ, ಅಹಂಪ್ರಾಣ, ಅನಿರುದ್ಧ, ಸ್ವಾಯಂಭುವಮನು, ಬೃಹಸ್ಪತಿ, ದಕ್ಷಪ್ರಜಾಪತಿ, ಪ್ರವಹವಾಯು, ಚಂದ್ರ, ಸೂರ್ಯ, ಯಮಧರ್ಮ, ವರುಣ, ವಹ್ನಿ, ಮಿತ್ರ ಮತ್ತು ನಿರ್ಋತಿ. ಗಣಪತಿ ಇಪ್ಪತ್ತೊಂದನೆಯವನು.

ಶಿವ ಪಾರ್ವತಿಯರು ದಂಪತಿಗಳು. ಇಲ್ಲಿ ಶಿವ ಮನಸ್ಸಿನ ಅಭಿಮಾನಿ ಮತ್ತು ಪಾರ್ವತಿ ವಾಕ್ ದೇವತೆ. ಮನಸ್ಸು ಯೋಚಿಸಿದಂತೆ ಮಾತು. ಅದಕ್ಕಾಗಿ ಅವರದು ಅನ್ಯೋನ್ಯ ದಾಂಪತ್ಯ. ಶಬ್ದದ ಮೂಲಶಕ್ತಿ ಗಾಳಿ ಮತ್ತು ಆಕಾಶ. ಆಕಾಶ ಮತ್ತು ಗಾಳಿ ಇಲ್ಲದಿದ್ದರೆ ಶಬ್ದವಿಲ್ಲ. ನಮ್ಮ ಒಳಗಿನ ವಾಕ್ ನಾದವೇ ಪಾರ್ವತಿ-ಅದು ಶಬ್ದ ರೂಪದಲ್ಲಿ ಹೊರ ಹೊಮ್ಮುವುದೇ ಮಾತು. ಇದು ಮೂಲ ನಾದದ ಸ್ಥೂಲ ರೂಪ. ಮನುಷ್ಯನಿಗೆ ದೊಡ್ಡ ಆಪತ್ತು ಮಾತು. ಅಧ್ಯಾತ್ಮ ಸಾಧನೆಗೆ ಬೇಕಾಗಿರುವುದು ಮಾತಿಗಿಂತ ಹೆಚ್ಚಾಗಿ ಮೌನ. ತನ್ನತನದ ಅರಿವಿಲ್ಲದೇ(Awareness of self), ಅಹಂಕಾರ ತತ್ವದ ವಿರುದ್ಧ ಮಾತು ಬೆಳೆದಾಗ, ಮಾತಿನ ಶಿರಛೇದನವಾಗದೇ ಜ್ಞಾನವಿಲ್ಲ. ಶಿರಛೇದನವಾದ ಮೇಲೆ ಪುನಃ ಅದೇ ಮಾತು ಮುಂದುವರಿಯಬಾರದು. ಅದಕ್ಕಾಗಿ ಎಲ್ಲವನ್ನು ಕೇಳುವ ದೊಡ್ಡ ಕಿವಿಯುಳ್ಳ, ಪ್ರಾಣಶಕ್ತಿಯನ್ನು ನಿಯಂತ್ರಿಸುವ ಉದ್ದನೆಯ ಮೂಗಿನ ಸಂಕೇತ ರೂಪವಾದ ಆನೆಯ ತಲೆಯನ್ನು ಇಟ್ಟು ಗಣಪತಿ ಎನ್ನುವ ಹೊಸ ಆಕಾರದ ಜನನವಾಯಿತು. ಗಣಪತಿಯನ್ನು ನೋಡಿದಾಕ್ಷಣ ನಮಗೆ ನೆನಪಿಗೆ ಬರಬೇಕಾದ ವಿಷಯ ಮಾತಿಗಿಂತ ಮನನ ಹೆಚ್ಚು ಮಾಡು, ಸರಿಯಾಗಿ ಕೇಳಿಸಿಕೋ (Be a good listener) ಎನ್ನುವ ವಿಚಾರ.

ಉತ್ತರ ದಿಕ್ಕಿಗೆ ತಲೆ ಹಾಕುವುದು ಅಂದರೆ ಏನು? ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಉತ್ತರಕ್ಕೆ ತಲೆ ಹಾಕಿ ಮಲಗಬಾರದು. ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತು ಕೊಳ್ಳಬಾರದು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಸುತ್ತಬಾರದು ಇತ್ಯಾದಿ. ಆದರೆ ಈ ಎಲ್ಲಾ ವಿಚಾರ ಏಕೆ? ಇದರ ಹಿಂದಿರುವ ಸಿದ್ಧಾಂತ ಏನು? ಈ ಭೂಮಿಯಲ್ಲಿ ಉತ್ತರ ಧ್ರುವದ ಶಕ್ತಿ ಉತ್ತರದಿಂದ ಪೂರ್ವಕ್ಕೆ ಹರಿಯುತ್ತಿರುತ್ತದೆ ಹಾಗೂ ದಕ್ಷಿಣ ಧ್ರುವದ ಶಕ್ತಿ ದಕ್ಷಿಣದಿಂದ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ನಮ್ಮ ಚಲನೆ ಕೂಡಾ ಈ ಶಕ್ತಿಪಾತಕ್ಕೆ ಅನುಗುಣವಾಗಿರಬೇಕು. ನಾವು ದಕ್ಷಿಣಕ್ಕೆ ಮುಖ ಮಾಡಿದರೆ ದಕ್ಷಿಣ ಧ್ರುವದ ಶಕ್ತಿಪಾತಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಂತೆ ಹಾಗೂ ಉತ್ತರಕ್ಕೆ ಮುಖ ಮಾಡಿದರೆ ಉತ್ತರ ದ್ರುವದ ಶಕ್ತಿಪಾತಕ್ಕೆ ಒಡ್ಡಿಕೊಂಡಂತೆ. ಉತ್ತರಕ್ಕೆ ತಲೆ ಹಾಕಿ ಮಲಗುವುದು ಎಂದರೆ ಎದ್ದಾಗ ದಕ್ಷಿಣಕ್ಕೆ ಮುಖ ಮಾಡುವುದು. ಆದ್ದರಿಂದ ದಕ್ಷಿಣ ಮುಖ ಹಾಗೂ ಉತ್ತರ ತಲೆ ಎರಡೂ ಒಂದೆ. ಈ ಎರಡು ಶಕ್ತಿಪಾತದಲ್ಲಿ ಒಂದು ದೊಡ್ಡ ವ್ಯತ್ಯಾಸವಿದೆ. ಅದೇನೆಂದರೆ ಉತ್ತರದ ಶಕ್ತಿಪಾತ ಊರ್ಧ್ವಮುಖವಾದದ್ದು ಹಾಗೂ ದಕ್ಷಿಣದ ಶಕ್ತಿಪಾತ ಸಂಸಾರದ ಸುಳಿಯಲ್ಲಿ ಸಿಲುಕಿಸುವಂತಾದ್ದು. ಈ ಕಾರಣಕ್ಕಾಗಿ ಉತ್ತರಕ್ಕೆ ತಲೆ ಹಾಕಿ ಮಲಗಿದರೆ ಅಥವಾ ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತರೆ ನಮ್ಮ ಶಿರಛೇದನವಾಗುತ್ತದೆ. ನಾವು ಪುನಃ ಈ ಸಂಸಾರದ ಸುಳಿಯಲ್ಲಿ ಸುತ್ತಬೇಕಾಗುತ್ತದೆ. ಇನ್ನು ಹೊಟ್ಟೆಗೆ ಹಾವಿನ ಸುತ್ತು. ಹಾವು ಕುಂಡಲಿನೀ ಶಕ್ತಿಯ ಸಂಕೇತ. ಇದು ಚಕ್ರಾಕಾರವಾಗಿ ತಲೆ ಕೆಳಗೆ ಹಾಕಿ ಮಲಗಿದ ಹಾವಿನ ರೂಪದಲ್ಲಿ ನಮ್ಮ ಮಲ-ಮೂತ್ರ ದ್ವಾರದ ಮಧ್ಯದಲ್ಲಿರುತ್ತದೆ. ಕುಂಡಲಿನೀ ಜಾಗೃತವಾಗುವುದು ಎಂದರೆ ಈ ಹಾವು ಹೆಡೆಯೆತ್ತಿ ನಿಲ್ಲುವುದು. ಕುಂಡಲಿನೀ ಜಾಗೃತವಾದಾಗ ಶಕ್ತಿ- ಮೂಲಾಧಾರ, ಮಣಿಪುರ ಹಾಗೂ ಸ್ವಾದಿಷ್ಠಾನ ಶಕ್ತಿ ಕೇಂದ್ರಗಳಲ್ಲಿ ಊರ್ಧ್ವ ಮುಖವಾಗಿ ಸಂಚರಿಸುತ್ತದೆ. ನಮ್ಮ ಹೊಕ್ಕುಳಿನ ಮೇಲಿನ ಶಕ್ತಿ ಕೇಂದ್ರ ಜ್ಞಾನದ ಬಾಗಿಲು, ಗಣಪತಿ ಈ ಮೂರು ಶಕ್ತಿ ಕೇಂದ್ರಗಳನ್ನು ನಿಯಂತ್ರಿಸಿ ನಮಗೆ ಜ್ಞಾನದ ಬಾಗಿಲನ್ನು ತೆರೆಯುವ ಶಕ್ತಿದೇವತೆ. ಇಷ್ಟೊಂದು ಸಂಗತಿ ಈ ಪುಟ್ಟ ಕಥೆಯಲ್ಲಿದೆ. ಇದು ಹೂವಿನಿಂದ ಹಣ್ಣಿಗೆ ಹೋಗುವ ರೀತಿ. ಕೇವಲ ಮೇಲ್ನೋಟದ ಅರ್ಥದಲ್ಲೇ (ಹೂವಿನಲ್ಲೇ)ನಿಂತರೆ ತೊಂದರೆಯಿಲ್ಲ, ಅದರಿಂದಾಚೆಗೆ ಏನೂ ಇಲ್ಲ ಎಂದು ತಿಳಿದರೆ ಅದು ಅನರ್ಥ!

ಯಾವುದೇ ಪೂಜೆ-ಕರ್ಮವನ್ನು ಮಾಡುವಾಗ ವಿಘ್ನನಿವಾರಕನಾದ ಗಣಪತಿ ಪೂಜೆ ಮಾಡುವುದು ಸಂಪ್ರದಾಯ. ಅದಕ್ಕಾಗಿ ಗಣಪತಿ ಮಂಡಲ ಬರೆದು ಪೂಜಿಸಿ ನಂತರ ಇತರ ಕರ್ಮವನ್ನು ಮಾಡುತ್ತಾರೆ.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಹೀಗೆ ವಿಘ್ನ ನಿವಾರಕ ಗಣಪತಿ ಸ್ತುತಿ ಮೊದಲಿಗೆ.
ಭಗವಂತ ತನ್ನ ವಿಶ್ವಂಭರರೂಪದಲ್ಲಿ ಗಣಪತಿಯ ಅಂತರ್ಯಾಮಿಯಾಗಿ ಸನ್ನಿಹಿತನಾಗಿದ್ದಾನೆ.
ಭಗವಂತನ ವಿಶ್ವಂಭರ ರೂಪಕ್ಕೆ ಒಟ್ಟು ೧೯ ತಲೆಗಳು. ನಡುವಿನಲ್ಲಿ ಆನೆಯ ಮೊಗ ಹಾಗೂ ಎಡ ಬಲಗಳಲ್ಲಿ ೯-೯ ಮಾನವ ಮೊಗ.

ಸಹಸ್ರನಾಮ ಭಗವಂತನ 'ವಿಶ್ವಮ್' ಎನ್ನುವ ವಿಘ್ನನಿವಾರಕ 'ವಿಶ್ವಂಭರ' ರೂಪದ ನಾಮದಿಂದ ಪ್ರಾರಂಭವಾಗುತ್ತದೆ.
ನಮ್ಮ ಜೀವನದಲ್ಲಿರುವ ಮೂರು ಅವಸ್ಥೆಗಳಲ್ಲಿ (ಎಚ್ಚರ-ಕನಸು-ನಿದ್ದೆ), ನಮ್ಮ ಎಚ್ಚರವನ್ನು ನಿಯಂತ್ರಿಸುವ ಭಗವಂತನ ರೂಪ 'ವಿಶ್ವ' ನಾಮಕ ರೂಪ.

ದೇವತೆಗಳು ನಮಗೆ ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಕೊಟ್ಟು, ನಮ್ಮನ್ನು ನಿಯಮನ ಮಾಡಿಕೊಂಡು ಈ ನಮ್ಮ ದೇಹದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಒಬ್ಬ ದೇವತೆ ಗಣಪತಿ. ಆತ ಆಕಾಶದ ದೇವತೆ. ಬ್ರಹ್ಮಾಂಡದಲ್ಲಿ ಆಕಾಶ ಹಾಗೂ ಪಿಂಡಾಂಡದಲ್ಲಿ ರಕ್ತಸಂಚಾರ, ಉಸಿರಾಟಕ್ಕೆ ಬೇಕಾದ ಅವಕಾಶ(Space)ವನ್ನು ಒದಗಿಸಿ ಮನುಷ್ಯ ಜೀವಂತವಾಗಿರಲು ಅವಕಾಶವನ್ನು ಈತ ಕಲ್ಪಿಸಿಕೊಡುತ್ತಾನೆ. ಈತ ಅವಕಾಶದ ದೇವತೆಯಾದ್ದರಿಂದ ವಿಘ್ನನಾಶ.
ಶಿವ ಪಾರ್ವತೀ ಪುತ್ರ, 
ನಿನ್ನದೆಂಥಾ ಪಾತ್ರ. 
ನಿನ್ನ ಮನೆ ಆಕಾಶ, 
ನೀ ನೀಡುವೆ ಅವಕಾಶ. 
ದೇಹ ನಾಡಿಗಳಿಗೆ ನೀ ಮೂಲಾಧಾರ, 
ಮೊದಲ ಅಂತರ್ಜಾಗೃತಿಯ ಸೂತ್ರಧಾರ. 
ನಿನ್ನ ಅನುಗ್ರಹವಿರೇ ಅಪಾರ, 
ಸಹಸ್ರಾರದಲ್ಲಿ ಪರಮಸಾಕ್ಷಾತ್ಕಾರ. 

ನಿನ್ನಪ್ಪನ ಮನೆ ಮನಸು, 
ಅವಕಾಶವೀವ ನೀನವನ ಕೂಸು. 
ನಮೋ ಗಣೇಶಾಂತರ್ಗತ ವಿಶ್ವಂಭರ, 
ತೊಡಿಸೆಮಗೆ ಜ್ಞಾನ ಭಕ್ತಿ ವೈರಾಗ್ಯಗಳಂಬರ. 

ಗಲ್ಲಿ ಗಲ್ಲಿಗೂ ಗಣೇಶ ಅಲಂಕಾರದಾಡಂಬರ, 
ಕಿವಿಗಡಚಿಕ್ಕುವ ಚಿತ್ರಗೀತೆಗಳ ಮೈಕಾಸುರ. 
ಅರ್ಥ ಅನುಸಂಧಾನಕೆ ಎಲ್ಲೆಲ್ಲೂ ತತ್ವಾರ, 
ಒಪ್ಪಿಯಾನೆ ಇದ ಗಣೇಶಾಂತರ್ಗತ ವಿಶ್ವಂಭರ. 

ನಮೋ ನಮೋ ಆಕಾಶಾಭಿಮಾನಿ ಗಣೇಶ, ಕರುಣಿಸು ಸದ್ಬುದ್ಧಿ ಸತ್ಕರ್ಮಗಳ ಅವಕಾಶ. 
ನೀಡೆಮಗೆ ಸಚ್ಛಾಸ್ತ್ರ ಕೇಳುವ ತೆರೆದ ಕಿವಿ, 
ಅವಾದಾವು ದುರ್ವಚನ ದುರ್ವಾದಗಳಿಗೆ ಪವಿ. 

ವಿಘ್ನ ನಿವಾರಕ ತರಿದುಬಿಡು ವಿಘ್ನ, 
ನಿನ್ನೊಲುಮೆಯಿಂದ ಬದುಕಾಗಲಿ ಯಜ್ಞ. 
ಬಾಳ ಯಾತ್ರೆಯಲಿ ಸತ್ಕರ್ಮಗಳನೇ ನಡೆಸು, 
ತಂದೆಯೊಡಗೂಡಿ ಎಮ್ಮ ಮನ ಹರಿಪಾದದೊಳಿರಿಸು.

ಸತ್ಕರ್ಮಗಳಲೇ ಅವಕಾಶ ಕೊಡು ಗಣಪ, 
ಹರಿಚರಣಗಳಲಿ ಎಮ್ಮ ಮನವಿಡಲಿ ನಿನ್ನಪ್ಪ. 
ಸುಜ್ಞಾನ ಮತಿಯಿತ್ತು ಸಲಹು ನೀ ಪವಮಾನ, 

ಸುತ್ತುವಾಟ ಮುಗಿಸಿ ಎತ್ತಿಕೋ ಗರುಡವಾಹನ.
(Contributed by Shri Prakash Shetty)

Sunday, 21 February 2016

ಜ್ಞಾನದ ದಾರಿ - ಗೀತೆಯ ಬೆಳಕು

ಜ್ಞಾನದ ದಾರಿಯಲ್ಲಿ ಸಾಗಬೇಕಿದ್ದರೆ ನಮ್ಮ ನಡತೆಯಲ್ಲಿ ನಾವು ಅನುಸರಿಸಬೇಕಾದ ಕೆಲವು ನೀತಿ ಸಂಹಿತೆ(Code of Conduct)ಗಳಿವೆ. ಅದನ್ನು ನಾವು ಅನುಸರಿಸಬೇಕು. ನಾವು ನಮ್ಮ ಜೀವನದಲ್ಲಿ ಅನುಸರಿಸಬೇಕಾದ ಇಪ್ಪತ್ತು ಗುಣ(Discipline)ಗಳನ್ನು ಶ್ರೀಕೃಷ್ಣ ಗೀತೆಯಲ್ಲಿ ನೀಡಿದ್ದಾನೆ. ಈ ಗುಣಗಳಲ್ಲಿ ಪ್ರತಿಯೊಂದನ್ನು ನಮ್ಮ ಜೀವನದಲ್ಲಿ ಎಷ್ಟು ಹೆಚ್ಚು ಅಳವಡಿಸಿಕೊಂಡೆವೋ ಅಷ್ಟು ನಾವು ಜ್ಞಾನ ದಾರಿಯಲ್ಲಿ ಸಾಗಬಹುದು. ಇಲ್ಲದಿದ್ದರೆ ನಾವು ಅಜ್ಞಾನದ ದಾರಿಯಲ್ಲಿ ಸಾಗಬೇಕಾಗುತ್ತದೆ ಎಂದು ಕೃಷ್ಣ ಎಚ್ಚರಿಸಿದ್ದಾನೆ.

ಅಮಾನಿತ್ವಮಡಂಭಿತ್ವಮಹಿಂಸಾ ಕ್ಷಾಂತಿರಾರ್ಜವಮ್ ।
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ   ॥೧೩-೭॥

ಇಂದ್ರಿಯಾರ್ಥೇಷು ವೈರಾಗ್ಯಮನಹಂಕಾರ ಏವ ಚ ।
ಜನ್ಮಮೃತ್ಯುಜರಾವ್ಯಾಧಿದುಃಖದೋಷಾನುದರ್ಶನಮ್  ॥೧೩-೮॥

ಅಸಕ್ತಿರನಭಿಷ್ವಂಗಃ ಪುತ್ರದಾರಗೃಹಾದಿಷು ।
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು   ॥೧೩-೯॥

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ ।
ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ   ॥೧೩-೧೦॥

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಮ್ ।
ಏತಜ್ ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋSನ್ಯಥಾ ॥೧೩-೧೧॥

(೧) ಅಮಾನಿತ್ವಮ್: ಜ್ಞಾನ ಗಳಿಸುವುದಕ್ಕಾಗಿ ನಾವು ಮಾನ-ಸಮ್ಮಾನದ ಬಯಕೆಯನ್ನು ಬಿಡಬೇಕು. ತನಗೆ ಸನ್ಮಾನವಾಗಬೇಕು, ಪ್ರಶಸ್ತಿ ಸಿಗಬೇಕು ಎನ್ನುವ ನಿರೀಕ್ಷೆಯಲ್ಲಿರುವವರಿಗೆ ಎಂದೂ ಜ್ಞಾನ ಸಿದ್ಧಿಯಾಗದು. ಅದಕ್ಕಾಗಿ ಪ್ರಚಾರಪ್ರಿಯತೆಯನ್ನು ನಾವು ಮೊದಲು ಬಿಡಬೇಕು. ಎಲ್ಲಾ ಪ್ರಚಾರಗಳಿಗೆ ತಿಲಾಂಜಲಿ ಕೊಟ್ಟು ಜ್ಞಾನದ ಬೆನ್ನು ಹತ್ತು. ಆಗ ಜ್ಞಾನ ದಕ್ಕುತ್ತದೆ. ಯಾರಾದರೂ ನಿನ್ನನ್ನು ಮೆಚ್ಚಿಕೊಂಡರೆ ಅದು ಅವರ ದೊಡ್ಡಸ್ತಿಕೆ. ಅಲ್ಲಿ ನಮ್ರತೆಯಿಂದಿರು.
(೨) ಅಡಂಭಿತ್ವಮ್ : ಎಲ್ಲರ ಮುಂದೆ ಸಣ್ಣವನಾಗಿ ಬದುಕಲು ಕಲಿ. ದೊಡ್ಡಸ್ತಿಕೆಯ ಪ್ರದರ್ಶನ ಬೇಡ. ಜ್ಞಾನ ಮಾರ್ಗದಲ್ಲಿ ಎಂದೂ ಪ್ರಾಮಾಣಿಕತೆಯಿಂದ ಅತ್ತ ಸರಿಯಬೇಡ. ಇಲ್ಲದ್ದನ್ನು ಇದೆ ಎಂದು ತೋರಿಸಲು ಹೋಗಬೇಡ.
(೩) ಅಹಿಂಸಾ : ಎಂದೂ ಇನ್ನೊಬ್ಬರನ್ನು ನೋಯಿಸಬೇಡ. ನಾವು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದರೆ ಅದನ್ನು ಮರಳಿ ವಾಸಿ ಮಾಡುವ ಯಾವ ಔಷಧವೂ ಇಲ್ಲ. ಆದ್ದರಿಂದ ಎಂದೂ ಇನ್ನೊಬ್ಬರನ್ನು ಮುಖಭಂಗ(Insult) ಮಾಡಬೇಡ. ಇನ್ನೊಬ್ಬರಿಗೆ ತೊಂದರೆ ಕೊಡದೇ ಇರುವುದು ಅಹಿಂಸೆ.
(೪)  ಕ್ಷಾಂತಿಃ :  ಪ್ರತೀಕಾರ ಮಾಡದೇ ಇರುವುದು. ಒಬ್ಬರು ನಮಗೆ ಕೇಡು ಬಗೆದಾಗ ನಾವು ಅದಕ್ಕೆ ಪ್ರತಿಕೇಡು ಬಗೆಯಲು ಹೋಗಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಒಂದು ವ್ಯವಸ್ಥೆ ಇದೆ. ಲೌಕಿಕವಾಗಿ ನೋಡಿದರೆ, ಯಾರಾದರು ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ಕೊಡುವ  ಜವಾಬ್ಧಾರಿ ಆರಕ್ಷಕ ಮತ್ತು ನ್ಯಾಯಾಂಗ ವ್ಯವಸ್ಥೆಯದೇ ಹೊರತು ನಮ್ಮದಲ್ಲ. ಒಂದು ವೇಳೆ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಹೊರಟರೆ ಅದು ಕಾನೂನನ್ನು ಕೈಯಲ್ಲಿ ತೆಗೆದುಕೊಂಡ ಅಪರಾಧವಾಗುತ್ತದೆ. ಅದೇ ರೀತಿ ಭಗವಂತನ ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಪ್ರತ್ಯೇಕ ವ್ಯವಸ್ಥೆ ಇದೆ. ಆದ್ದರಿಂದ ನಿನಗೆ ಪ್ರತೀಕಾರ ತೆಗೆದುಕೊಳ್ಳುವುದಕ್ಕಾಗಲೀ,  ಶಾಪ ಹಾಕುವುದಕ್ಕಾಗಲೀ ಹಕ್ಕಿಲ್ಲ.
ಈ ಮೇಲಿನ ಗುಣಗಳಿಗೆ ಉತ್ತಮ ದೃಷ್ಟಾಂತ ಜಡಭರತ ಮತ್ತು ರೈಕ್ವ ಮುನಿ. ಇವರ ಜೀವನ ಚರಿತ್ರೆಯನ್ನು ಓದಿದರೆ ಅವರು ಈ ಗುಣವನ್ನು ತಮ್ಮ ಜೀವನದಲ್ಲಿ ಹೇಗೆ ಪಾಲಿಸಿದ್ದರು ಎನ್ನುವುದು ತಿಳಿಯುತ್ತದೆ.
(೫) ಆರ್ಜವಮ್ : ಮುಖವಾಡವಿಲ್ಲದ ಬದುಕು. ನೇರ ನಡೆ ನುಡಿ. ಒಳಗೊಂದು ಹೊರಗೊಂದು ಇಲ್ಲದ ಪ್ರಾಮಾಣಿಕ ಬದುಕು(Sincerity-Straightforwardness).
(೬) ಆಚಾರ್ಯೋಪಾಸನಮ್: ಆಚಾರ್ಯ ಎಂದರೆ ಯಾವುದು ಸರಿ ಯಾವುದು ತಪ್ಪು ಎಂದು ಚೆನ್ನಾಗಿ ತಿಳಿದು ಅದನ್ನು ಆಚರಣೆಗೆ ತರುವವರು. ತಾವು ಸತ್ಯವನ್ನು ಕಂಡು, ಸಮಾಜದ ಮುಂದೆ ಅದನ್ನು ನಡೆದು ತೋರಿಸುವವರು. ಅಂಥವರ ಸೇವೆ ಮಾಡು. ಜ್ಞಾನಿಗಳು ಸುಲಭವಾಗಿ ಸಿಗುವುದಿಲ್ಲ ಮತ್ತು ಅವರು ಸಾಮಾನ್ಯವಾಗಿ ಪರೀಕ್ಷಿಸದೆ ಜ್ಞಾನ ಧಾರೆ ಮಾಡುವುದಿಲ್ಲ. ಏನೇ ಆದರೂ ಜ್ಞಾನಿಗಳ ಬೆನ್ನುಬಿಡಬೇಡ. ನಿನ್ನಲ್ಲಿರುವ ಜ್ಞಾನ ತೃಷೆ ಗಾಢವಾಗಿದ್ದಲ್ಲಿ ಖಂಡಿತವಾಗಿ ಅವರು ಜ್ಞಾನ ಧಾರೆ ಮಾಡುತ್ತಾರೆ. ಜ್ಞಾನ ಬೇಕಿದ್ದರೆ ಜ್ಞಾನಿಗಳು ತೆರೆದುಕೊಳ್ಳುವ ತನಕ ಕಾಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಶ್ವೇತಕೇತು ಮತ್ತು  ಪ್ರಶ್ನೋಪನಿಷತ್ತಿನಲ್ಲಿ ಬರುವ ಪಿಪ್ಪಲಾದರ ಕಥೆ.
(೭) ಶೌಚಮ್: ಶೌಚ ಎಂದರೆ ಶುಚಿತ್ವ. ಕನ್ನಡದಲ್ಲಿ ಶೌಚಮ್ ಎಂದರೆ ‘ಮಡಿ’. ನಾವು ಮಡಿ ಮಾಡುವುದನ್ನು ಬಿಟ್ಟು ಮಡಿಯಾಗುವುದನ್ನು ಕಲಿಯಬೇಕು. ಸ್ನಾನ ಮಾಡಿ ಒದ್ದೆ ಬಟ್ಟೆ ಉಟ್ಟು ಯಾರನ್ನೂ ಮುಟ್ಟದೆ ಇದ್ದರೆ ಮಡಿಯಾಗಲು ಸಾಧ್ಯವಿಲ್ಲ.  ಶುಚಿ ಎನ್ನುವುದು ಮೂಲಭೂತವಾಗಿ ಮನಸ್ಸಿಗೆ ಸಂಬಂಧಪಟ್ಟದ್ದು. ಅದಕ್ಕೆ ಪೂರಕವಾಗಿ ದೇಹ ಶುದ್ಧಿ. ಪ್ರಾಪಂಚಿಕ ವಿಚಾರವನ್ನು ಮರೆತು, ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು ಮಡಿ. ನಾವು ಕಾಯೇನ-ವಾಚಾ-ಮನಸಾ ಮಡಿಯಾಗಬೇಕು. ನಮ್ಮಲ್ಲಿ ಕೆಟ್ಟ ಯೋಚನೆ ಬಂದರೆ, ಕೆಟ್ಟ ಮಾತು ಬಾಯಲ್ಲಿ ಬಂದರೆ- ಆಗ  ನಾವು ಮೈಲಿಗೆ. ನಿಜವಾಗಿ ಕಾಯೇನ-ವಾಚಾ-ಮನಸಾ ಮಡಿಯಾಗಿರುವವ ಮೈಲಿಗೆಯವರೊಂದಿಗಿದ್ದರೆ  ಜೊತೆಗಿರುವವರೆಲ್ಲರೂ ಮಡಿಯಾಗಬಹುದು. ಇದನ್ನೇ ಹಿಂದೆ ‘ಪಂಕ್ತಿಪಾವನ’ ಎಂದು ಕರೆಯುತ್ತಿದ್ದರು. ಪೂರ್ಣ ಮಡಿಯಾಗಿರುವವ ಯಾವ ಪಂಕ್ತಿಯಲ್ಲಿ ಕುಳಿತನೋ ಆ ಪಂಕ್ತಿ ಮಡಿ. ಶಾಸ್ತ್ರ ಜ್ಞಾನವಿಲ್ಲದ ಮಡಿ ಮಡಿಯಲ್ಲ. ದೇವರ ಸ್ಮರಣೆ ಮನಸ್ಸಿನಲ್ಲಿ, ದೇವರ ನಾಮ ಬಾಯಿಯಲ್ಲಿ ಇದ್ದಾಗ ನಾವು ಮಡಿ.
ಮನಸ್ಸನ್ನು ಶುದ್ಧ ಮಾಡುವುದಕ್ಕೋಸ್ಕರ ಆಚಮನ ಮತ್ತು ಪ್ರಾಣಾಯಾಮ. “ಓ ಭಗವಂತಾ,  ನಿನ್ನ ಕಾರುಣ್ಯಧಾರೆಯಿಂದ ನನ್ನ ಸಹಸ್ರಾರದಿಂದ ಅಮೃತವನ್ನು ಕೆಳಕ್ಕೆ ಇಳಿಸಿ, ನನ್ನ ಇಡೀ ಮೈ ಪಾವನವಾಗುವಂತೆ ಮಾಡು. ನನ್ನೊಳಗಿನ ಎಲ್ಲಾ ಪಾಪಗಳೂ ಕೊಳೆಗಳೂ ಸುಟ್ಟು ತೊಳೆದುಹೋಗಲಿ” ಎನ್ನುವ ಅನುಸಂಧಾನದಿಂದ,  ಧ್ಯಾನಪೂರ್ವಕ, ಪಾಪಪುರುಷ ನಿರಸನ ಮಾಡಬೇಕು. ಇಲ್ಲಿ ನಮ್ಮ ತಲೆಯಿಂದ ಅಮೃತಧಾರೆ ಇಳಿದು ಬರುವುದನ್ನು ನಾವು ಅನುಭವಿಸಬೇಕು(Feel it). ಪ್ರಾಣಾಯಾಮದಿಂದ ನಮ್ಮೊಳಗಿನ ಎಲ್ಲಾ ಕೊಳೆ ಸುಟ್ಟು ಹೋಗುತ್ತದೆ. ನಮ್ಮ ಅಂಗಾಂಗದಲ್ಲಿ ಕೂತ ಭಗವಂತನ ಸ್ಮರಣೆಯೇ ಆಚಮನ. “ಓ ನೀರೇ, ನೀನು ಸುಖದ ಸೆಲೆ, ನೀನು ಸುಖದ ನೆಲೆ, ನಿನ್ನನ್ನು ಪ್ರೋಕ್ಷಿಸಿಕೊಳ್ಳುತ್ತಿದ್ದೇನೆ. ಆ ಭಗವಂತ ನನ್ನಲ್ಲಿ ಬಂದು ನೆಲೆಸುವಂತೆ ಮಾಡು” ಎಂದು ಪ್ರಾರ್ಥಿಸಿ ಪ್ರೋಕ್ಷಣೆಮಾಡಿಕೊಳ್ಳಬೇಕು. ಇದೆಲ್ಲವನ್ನೂ ನಾವು ತಿಳಿದು ಮಾಡಿದಾಗ ಮಾತ್ರ  ಮಡಿಯಾಗುತ್ತೇವೆ. ದೇವರನ್ನು ನೆನೆಯುವುದೇ ಮಡಿ. ದೇವರನ್ನು ಮರೆಯುವುದೇ ಮೈಲಿಗೆ. ಪುಂಡರೀಕಾಕ್ಷನ ಸ್ಮರಣೆ ಇಲ್ಲದೆ, ಅಂತರಂಗ ಶುದ್ಧಿ ಅಸಾಧ್ಯ.
(೮) ಸ್ಥೈರ್ಯಮ್ : ಮನಸ್ಸಿನ ಸ್ಥಿರತೆ(Conviction) ಸ್ಥೈರ್ಯ. ನಮಗೆ ನಮ್ಮದೇ ಆದ ಸ್ವಂತ ನಿರ್ಧಾರ ಬೇಕು. ಯಾರೋ ಹೇಳಿದಂತೆ ನಾವು ನಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುತ್ತಾ  ಗೊಂದಲಕ್ಕೊಳಗಾಗಬಾರದು. ನಾವು ನಮ್ಮ ತಲೆಯಲ್ಲಿ ಚಿಂತಿಸಬಲ್ಲವರಾಗಬೇಕು. ನಮಗೆ ಯಾವುದಾದರೂ ಪ್ರಶ್ನೆ ಬಂದರೆ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಸಾಮರ್ಥ್ಯ ನಮ್ಮ ತಲೆಯಲ್ಲೇ ಇರುತ್ತದೆ. “ಎಲ್ಲಿ ಪ್ರಶ್ನೆ ಇದೆಯೋ ಅಲ್ಲೇ ಉತ್ತರವೂ ಇರುತ್ತದೆ”. ಶಾಸ್ತ್ರವನ್ನು ಚೆನ್ನಾಗಿ ಅಧ್ಯಾಯನ ಮಾಡಿ ನೀನೇ ನಿನ್ನ ಸಮಸ್ಯೆಗೆ ಉತ್ತರ ಕಂಡುಕೊಂಡು ದೃಢವಾಗಿ ಕೆಲಸ ಮಾಡು. ಯಾರ ಯಾರೋ ಮಾತನ್ನು ಕೇಳಿ ಗೊಂದಲಗೊಳ್ಳದೆ ಸ್ಥೈರ್ಯವನ್ನು ಸಾಧಿಸು.  
(೯) ಆತ್ಮವಿನಿಗ್ರಹಃ : ಇಂದ್ರಿಯ ನಿಯಂತ್ರಣ(Self Control). ನಮ್ಮ ಇಂದ್ರಿಯ ನಮ್ಮ ಹಿಡಿತದಲ್ಲಿರಬೇಕು. ಇಂದ್ರಿಯ ಹಿಡಿತಲ್ಲಿರಬೇಕಾದರೆ ನಾವು ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಮನಸ್ಸಿನ ಕೈಯಲ್ಲಿ ನೀನು ಮಂಗನಾಗಬೇಡ, ಮನಸ್ಸನ್ನು ನೀನು ನಿಯಂತ್ರಿಸು. ಇದಕ್ಕಾಗಿ ನಿನ್ನ ಮನಸ್ಸನ್ನು ದೇವರಲ್ಲಿ ನೆಲೆ ನಿಲ್ಲಿಸು. ಹೀಗೆ ಮನೋನಿಗ್ರಹದಿಂದ ಇಂದ್ರಿಯ ನಿಗ್ರಹ ಸಾಧಿಸು.
(೧೦) ಇಂದ್ರಿಯಾರ್ಥೇಷು ವೈರಾಗ್ಯ : ಇಂದ್ರಿಯಗಳನ್ನು ಹೊರಪ್ರಪಂಚದತ್ತ ಹರಿಯದಂತೆ ತಡೆದು ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು. ಇದನ್ನು ಶಮ-ಧಮ ಎನ್ನುತ್ತಾರೆ. ಇಂದ್ರಿಯಗಳು ಲೌಕಿಕ ವಿಚಾರದತ್ತ ಹರಿಯದಂತೆ ಮಾಡುವುದು ಧಮ ಮತ್ತು ಅದನ್ನು ಭಗವಂತನತ್ತ ಹರಿಯುವಂತೆ ಮಾಡುವುದು ಶಮ. ಭಗವಂತನ ಬಗ್ಗೆ ತಿಳಿದಾಗ ಇಂದ್ರಿಯ ಇನ್ಯಾವುದರ ಕಡೆಗೂ ಹರಿಯುವುದಿಲ್ಲ. ಪ್ರಾಪಂಚಿಕವಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧದ ಬಗ್ಗೆ ವಿರಕ್ತಿ ತಾಳು. ಉದಾಹರಣೆಗೆ ನಾಲಿಗೆ ಚಪಲ. ನಮ್ಮಲ್ಲಿ ಕೆಲವರು ಮನೆಯಲ್ಲಿ ಯಾವ ರೀತಿ ಅಡಿಗೆ ಮಾಡಿದರೂ ಅಲ್ಲಿ ಅದು ಸರಿಯಾಗಿಲ್ಲ, ಇದು ಸರಿಯಾಗಿಲ್ಲ ಇತ್ಯಾದಿಯಾಗಿ ತಗಾದೆ ಎತ್ತುತ್ತಾರೆ. ಈ ರೀತಿಯ ಚಪಲವನ್ನು ಬಿಟ್ಟುಬಿಡು.  ಇಲ್ಲಿ ಬೇಕು ಬೇಡಗಳ ಆಯ್ಕೆ ಇಲ್ಲದೆ ಏನನ್ನು ಹಾಕಿದರೂ ಭಗವಂತನ ಪ್ರಸಾದ ಎಂದು ಸ್ವೀಕರಿಸುವುದನ್ನು ಕಲಿ. ಈ ರೀತಿ ಶಮ-ಧಮ ಸಾಧಿಸು. 
(೧೧) ಅನಹಂಕಾರ: ಇದು ಎಲ್ಲಾ ಗುಣಗಳಿಗಿಂತ ಶ್ರೇಷ್ಠ ಗುಣ. ನಮ್ಮಲ್ಲಿ ಯಾವ ಗುಣವಿದ್ದರೂ ಅದು ನಮ್ಮ ಅಹಂಕಾರದ ಮುಂದೆ ವ್ಯರ್ಥ. ಅಹಂಕಾರ(Ego) ನಮ್ಮಲ್ಲಿನ ಎಲ್ಲಾ ಗುಣವನ್ನು ನಾಶ ಮಾಡುತ್ತದೆ. ಅಹಂಕಾರವಿದ್ದೆಡೆ  ಉಳಿದ ಗುಣಗಳಿಗೆ ಅಸ್ತಿತ್ವವೇ ಇಲ್ಲ. ಆದ್ದರಿಂದ ಕೃಷ್ಣ ಅದನ್ನು ಇಲ್ಲಿ “ಏವ-ಚ” ಎಂದು ಒತ್ತಿ ಹೇಳಿದ್ದಾನೆ. ‘ನಾನು ವಿದ್ವಾಂಸ, ನಾನು ಅನುಷ್ಠಾನವಂತ, ನಾನು ಮಡಿ’ ಹೀಗೆ ನಮ್ಮನ್ನು ಅಹಂಕಾರ ಪ್ರತಿಯೊಂದು ವಿಚಾರದಲ್ಲೂ ಕಾಡುತ್ತದೆ. ಹೀಗೆ ನಾವು ಅಹಂಕಾರಪಟ್ಟರೆ ನಮ್ಮ ಅನುಷ್ಠಾನ-ಅನುಷ್ಠಾನವೇ ಆಗುವುದಿಲ್ಲ. ಎಲ್ಲಿ ಅಹಂಕಾರ ಕಾಡಿತೋ ಅಲ್ಲಿ ಸಾಧನೆ ವ್ಯರ್ಥವಾಗುತ್ತದೆ. ಎಲ್ಲಿ ಅಹಂಕಾರವಿರುತ್ತದೆ ಅಲ್ಲಿ ದೇವರಿರುವುದಿಲ್ಲ-ಅಂದರೆ ಅಹಂಕಾರದಿಂದಾಗಿ ನಾವು ದೇವರಿಂದ ದೂರ ಸರಿಯುತ್ತೇವೆ. ಈ ಕಾರಣದಿಂದ ‘ನಾನು ಮಾಡಿದೆ, ನನ್ನಿಂದಾಯ್ತು’ ಎಂದು ಬೀಗುವುದನ್ನು ಬಿಡು. ಭಗವಂತ ನನ್ನ ಕೈಯಿಂದ ಮಾಡಿಸಿದ ಎಂದು ಆತನಿಗೆ ಕೃತಜ್ಞತೆಯನ್ನು ತೋರು.
(೧೨) ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷ ಅನುದರ್ಶನಮ್:  ಜೀವನವನ್ನು ಒಳನೋಟದಿಂದ ನೋಡು. ಈ ಜೀವನ ಎನ್ನುವುದು ಹುಟ್ಟು ಸಾವು ಎನ್ನುವ ಎರಡು ದಡದ ನಡುವೆ ಹರಿಯುವ ಒಂದು ಪ್ರವಾಹ. ಈ ಪ್ರವಾಹದಲ್ಲಿ ವ್ಯಾಧಿ, ಮುಪ್ಪು, ದುಃಖ, ಶೋಕ ಎನ್ನುವ ಅಲೆಗಳ ಸರಮಾಲೆ. ಈ ನಮ್ಮ ಬದುಕಿನ ಉದ್ದೇಶವೇನು,  ಭಗವಂತ ನಮ್ಮನ್ನು ಏಕೆ ಹುಟ್ಟಿಸಿದ, ಮಾನವ ಜನ್ಮವನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವ ಅನುದರ್ಶನ ಮಾಡು. ಆಹಾರ ನಿದ್ರಾ ಭಯ ಮೈಥುನ ಇಷ್ಟೇ ಜೀವನವಲ್ಲ. ಇದನ್ನು ಪ್ರಾಣಿಗಳೂ ಅನುಭವಿಸುತ್ತವೆ. ಆದ್ದರಿಂದ ಶಾಸ್ತ್ರವನ್ನು ಓದಿ ಸತ್ಯಕ್ಕೆ ಅನುಗುಣವಾದ ಯಥಾರ್ಥ ದರ್ಶನವನ್ನು ಮಾಡಿಕೋ. ಕೇವಲ ಲೌಕಿಕ ಸುಖದ ನಿರೀಕ್ಷೆಯಲ್ಲಿ ಬದುಕುವುದನ್ನು ಬಿಟ್ಟು-ಸತ್ಯದ ಸಾಕ್ಷಾತ್ಕಾರಕ್ಕಾಗಿ, ಭಗವಂತನನ್ನು ಸೇರುವುದಕ್ಕಾಗಿ ಬದುಕು. ಎಲ್ಲಾ ಲೌಕಿಕ ಸುಖ, ಸಂಪತ್ತು ನಿಸ್ಸಾರ. ಇದರಿಂದಾಚೆಗಿನ ಸಾರವಾದ ಭಗವಂತನನ್ನು ತಿಳಿದು ಅದರತ್ತ ಹೆಜ್ಜೆಹಾಕು.
(೧೩) ಅಸಕ್ತಿಃ : ‘ಸಕ್ತಿ’ ಎಂದರೆ ಹಚ್ಚಿಕೊಳ್ಳುವುದು ಅಥವಾ ಅಂಟಿಸಿಕೊಳ್ಳುವುದು(Attachment).  ನಮ್ಮೆಲ್ಲಾ ದುಃಖಕ್ಕೂ ಮೂಲಕಾರಣ ‘ಸಕ್ತಿ’. ಆದ್ದರಿಂದ ಯಾವುದನ್ನೂ ಅಂಟಿಸಿಕೊಳ್ಳಬೇಡ. ಹುಟ್ಟುವಾಗ ನಾವು ಏನನ್ನೂ ತಂದಿಲ್ಲ, ಸಾಯುವಾಗ ಯಾವುದನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಲೌಕಿಕವಾದ ಈ ಸಕ್ತಿಯಿಂದ ದೂರ ನಿಲ್ಲು. ಬಂದದ್ದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸು, ಹೋದಾಗ ಭಗವಂತನ ಇಚ್ಛೆ ಎಂದು ಸಂತೋಷದಿಂದಿರು.
(೧೪) ಅನಭಿಷ್ವಂಗಃ ಪುತ್ರ ದಾರ ಗೃಹ ಆದಿಷು : ಅಭಿಷ್ವಂಗ ಎಂದರೆ ಅತಿಯಾಗಿ ಹಚ್ಚಿಕೊಳ್ಳುವುದು(Over attachment). ಮನೆ, ಹೆಂಡತಿ(ಗಂಡ/ಹೆಂಡತಿ) ಮಕ್ಕಳು ಇತ್ಯಾದಿಯನ್ನು ಅತಿಯಾಗಿ ಹಚ್ಚಿಕೊಳ್ಳಬೇಡ ಎನ್ನುತ್ತಾನೆ  ಕೃಷ್ಣ.  ಇಲ್ಲಿ ಮನೆ ಸಂಸಾರವನ್ನು ಹಚ್ಚಿಕೊಳ್ಳದೇ ಇರುವುದು ಎಂದರೆ ಎಲ್ಲವನ್ನೂ ತೊರೆದು ಕಾಡಿಗೆ ಹೋಗುವುದಲ್ಲ. ‘ಇದನ್ನು ಬಿಟ್ಟು ನಾನು ಇರಲಾರೆ’ ಎನ್ನುವ ಅಭಿಷ್ವಂಗ ಬಿಟ್ಟುಬಿಡುವುದು ಅಷ್ಟೆ. ಜೀವನದಲ್ಲಿ ಏನು ಬರುತ್ತದೋ ಅದನ್ನು ಸಾಕ್ಷೀಭೂತನಾಗಿ ನೋಡು. ಜೀವನವೇ ಒಂದು ನಾಟಕ, ಅದರಲ್ಲಿ ನೀನೇ ಪಾತ್ರಧಾರಿ , ನೀನೇ  ಪ್ರೇಕ್ಷಕ. ಭಗವಂತ ನಿರ್ದೇಶಕ. ಇಲ್ಲಿ ನನ್ನ ಮಕ್ಕಳೇ ನನ್ನ ಬದುಕು, ನನ್ನ ಪತಿ/ಪತ್ನಿ ನನ್ನ ಬದುಕು, ನನ್ನ ಸಂಪಾದನೆಯೇ ನನ್ನ ಬದುಕು, ಇದನ್ನು ಬಿಟ್ಟು ನನ್ನ ಅಸ್ತಿತ್ವವಿಲ್ಲ ಎನ್ನುವ ಅತಿಯಾದ ಅಭಿಷ್ವಂಗ ಬೇಡ. ಪ್ರೀತಿಸು-ಆದರೆ ಹಚ್ಚಿಕೊಂಡು ಕೊರಗಬೇಡ, ನಿರಾಶನಾಗಬೇಡ. ಈ ರೀತಿ ಬದುಕಲು ಕಲಿತಾಗ ಜೀವನ ಸುಂದರವಾಗಿರುತ್ತದೆ. ನಮ್ಮಿಂದ ನಮ್ಮ ಮಕ್ಕಳು ದೂರವಾದರೆ, ಹೆಂಡತಿ/ಗಂಡ ದೂರವಾದರೆ, ನಾವು ನಮ್ಮ ಸಂಪತ್ತನ್ನು(ಮನೆ, ಆಸ್ತಿ ಇತ್ಯಾದಿ) ಕಳೆದುಕೊಂಡರೆ ದುಃಖ-ನಿರಾಶೆಯಾಗುವುದಿಲ್ಲ. ಈ ರೀತಿ ಬದುಕಿದಾಗ  ಜೀವನದಲ್ಲಿ ಏನು ದುರಂತ ಬಂದರೂ ಅದು ನಮ್ಮ ಪಾಲಿನ ಪಾತ್ರಾಭಿನಯ ಎನ್ನುವ ಭಾವನೆಯಿಂದ ನಾವು ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ-ಆಘಾತವಾಗುವುದಿಲ್ಲ.
(೧೫) ನಿತ್ಯಮ್ ಚ ಸಮಚಿತ್ತತ್ವಮ್ ಇಷ್ಟ ಅನಿಷ್ಟ ಉಪಪತ್ತಿಷು : ಜೀವನದಲ್ಲಿ ಇಷ್ಟವಾದ ಘಟನೆ ನಡೆಯಬಹುದು, ಅನಿಷ್ಟವಾದ ಘಟನೆ ನಡೆಯಬಹುದು. ಇಷ್ಟ ಅನಿಷ್ಟಗಳು ಬಂದೊದಗಿದಾಗ ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳದೆ ಎಲ್ಲಾ ಸಮಯದಲ್ಲೂ ಸಮಚಿತ್ತತ್ವದಿಂದಿರಲು ಕಲಿ.  ನಾವು ಅನಿಷ್ಟ ಅಂದುಕೊಂಡಿದ್ದು ಅನಿಷ್ಟವಾಗಿರಬೇಕೆಂದಿಲ್ಲ ಅಥವಾ ನಾವು ಇಷ್ಟಪಟ್ಟದ್ದು ಒಳ್ಳೆಯದಾಗಿರಬೇಕೆಂದಿಲ್ಲ. ಆದ್ದರಿಂದ ಇಷ್ಟ-ಅನಿಷ್ಟ ಎಂದು ಲೇಪ ಹಚ್ಚದೆ ಬಂದಿದ್ದನ್ನು ‘ನಾಹಂ ಕರ್ತಾ ಹರಿಃ ಕರ್ತಾ’ ಎಂದು ಸ್ವೀಕರಿಸಲು ಕಲಿ. ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆ ಭಗವಂತ ನಮ್ಮ ತರಬೇತಿಗಾಗಿ ಸೃಷ್ಟಿಸಿರುವ ಪ್ರಾಯೋಗಿಕ(Practical)ಶಿಕ್ಷಣ. ಭಗವಂತ ನಮಗೆ ದುಃಖವನ್ನು ಕೊಟ್ಟು ನಮ್ಮನ್ನು ಜಾಣರನ್ನಾಗಿ ಮಾಡುತ್ತಾನೆ ಎನ್ನುವ ಸತ್ಯವನ್ನು ಅರಿತು ಬದುಕು.
(೧೬) ಮಯಿ ಚ ಅನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ: ಭಗವಂತನಲ್ಲಿ ನಿರಂತರ ಪರಿಶುದ್ಧ ಭಕ್ತಿ  ಇರಲಿ. ಭಗವಂತ ಒಬ್ಬನೆ, ಆತನ ನಾಮ ಹಲವು. ಆತನಲ್ಲಿ ಅನನ್ಯವಾದ ಭಕ್ತಿಯನ್ನಿಡು. ಇಲ್ಲಿ ಏಕಭಕ್ತಿ ಬಹಳ ಮುಖ್ಯ. ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸುವುದು, ಒಂದು ದೇವತೆಯನ್ನು ಪೂಜಿಸಿದಾಗ ಇನ್ನೊಂದು ದೇವತೆ ಕೋಪಗೊಳ್ಳಬಹುದು ಎನ್ನುವ ಭಯದಿಂದ ಅನೇಕ ದೇವತಾ ಆರಾಧನೆ ಮಾಡುವುದನ್ನು  ಮಾಡಿದರೆ ಅದು ವ್ಯಭಿಚಾರವಾಗುತ್ತದೆ. ಆದ್ದರಿಂದ ಕೃಷ್ಣ ಇಲ್ಲಿ “ನಿನ್ನ ಭಕ್ತಿ ಅನನ್ಯವಾಗಿದ್ದು ಅವ್ಯಭಿಚಾರಿಣಿಯಾಗಿರಬೇಕು” ಎಂದು ಒತ್ತಿ ಹೇಳಿದ್ದಾನೆ. ಭಗವಂತ ಸರ್ವಸಮರ್ಥ, ಸರ್ವಶಕ್ತ, ಜಗತ್ಜನ್ಮಾದಿ ಕಾರಣ ಎನ್ನುವ ನಿಷ್ಠೆ ನಿನ್ನಲ್ಲಿರಲಿ. ದೇವರ ಮೇಲೆ ನಂಬಿಕೆ ಇಲ್ಲದೆ ಯಾವ ಶಾಸ್ತ್ರ ಓದಿ ಏನೂ ಉಪಯೋಗವಿಲ್ಲ. ಭಗವಂತನ ಮೇಲಿನ ಪೂರ್ಣ ನಂಬಿಕೆಯಿಂದ ಮಾತ್ರ ಜ್ಞಾನ ಸಾಧನೆ ಸಾಧ್ಯ
(೧೭) ವಿವಿಕ್ತ ದೇಶ ಸೇವಿತ್ವಮ್: ಸಾಧ್ಯವಾದಷ್ಟು ಅತಿ ಹೆಚ್ಚು ಸಾತ್ವಿಕ ಕಂಪನವಿರುವ ಕಡೆ, ಸಾತ್ವಿಕ ಜನರ ಜೊತೆಗೆ ವಾಸ ಮಾಡಲು ಪ್ರಯತ್ನಿಸು. ಪೂರ್ಣಪ್ರಮಾಣದಲ್ಲಿ ಅಖಂಡವಾದ ಸಾತ್ವಿಕ ಕಂಪನವಿರುವ ಸ್ಥಳ  ಪುಣ್ಯಕ್ಷೇತ್ರವೆನಿಸುತ್ತದೆ. ಅಂತಹ ಸ್ಥಳದಲ್ಲಿ ಒಳ್ಳೆಯದನ್ನು ಮಾತನಾಡುವ, ಒಳ್ಳೆಯ ಚಿಂತನೆ ಮಾಡುವ ಸಜ್ಜನರೊಂದಿಗೆ ವಾಸಮಾಡು. ಇದು ಸಾಧ್ಯವಾಗದೇ ಇದ್ದಲ್ಲಿ ಆದಷ್ಟು ಏಕಾಂತವಾಸವನ್ನು ಅಭ್ಯಾಸ ಮಾಡು. ನಾಲ್ಕು ಜನರೊಂದಿಗೆ ಸೇರಿ ಹಾಳು ಹರಟೆಯಲ್ಲಿ ನಿನ್ನ ಅಮೂಲ್ಯವಾದ ಜನ್ಮವನ್ನು ವ್ಯರ್ಥ ಮಾಡಿಕೊಳ್ಳಬೇಡ.   
(೧೮) ಅರತಿಃ ಜನ ಸಂಸದಿ: ಎಲ್ಲಿ ಬೇಡವಾದ ವಿಚಾರಕ್ಕಾಗಿ ಜನಜಂಗುಳಿ ಸೇರುತ್ತದೋ, ಅಂತಹ ಜನಜಂಗುಳಿಯಿಂದ ದೂರವಿರು.
(೧೯) ಅಧ್ಯಾತ್ಮ ಜ್ಞಾನ ನಿತ್ಯತ್ವಮ್ : ಅಧ್ಯಾತ್ಮದ ಅರಿವಿನಲ್ಲಿ ನಿರಂತರವಾಗಿರು. ಮೊದಲು ಪಿಂಡಾಂಡ-ಬ್ರಹ್ಮಾಂಡವನ್ನು ತಿಳಿ,  ಆನಂತರ ಇದನ್ನು ತಿಳಿಯುವ ಅಪೂರ್ವ ಮನಸ್ಸಿನ ವಿಸ್ಮಯದ ಬಗ್ಗೆ ತಿಳಿ,  ನಂತರ ‘ನಾನು’ ಎಂದರೆ ಏನು(Awareness of self) ಎನ್ನುವುದನ್ನು ತಿಳಿ. ಇದು ತಿಳಿದಮೇಲೆ ಈ ಆತ್ಮವನ್ನು ನಿಯಂತ್ರಿಸುವ ಪರಮಾತ್ಮನನ್ನು ತಿಳಿ. ಇದು ಅಧ್ಯಾತ್ಮಜ್ಞಾನ. ನಿನ್ನ ಅಧ್ಯಯನದ ಗುರಿ ಅಧ್ಯಾತ್ಮ ಜ್ಞಾನವಾಗಿರಲಿ.  

(೨೦) ತತ್ತ್ವಜ್ಞಾನ ಅರ್ಥ ದರ್ಶನಮ್: ಜಗತ್ತಿನ ಮೂಲಭೂತ ಸತ್ಯ ತಿಳಿಯುವುದಕ್ಕೆ ನಿನ್ನ ಅಧ್ಯಯನ ಮೀಸಲಿರಲಿ. ಮೇಲಿನ ಎಲ್ಲಾ ಗುಣಗಳಿಂದ ಎಲ್ಲಾ ಶಾಸ್ತ್ರಗಳಿಗೆ ವಿಷಯಭೂತನಾದ, ಎಲ್ಲಾ ಶಾಸ್ತ್ರಗಳಿಂದ ಪ್ರತಿಪಾಧ್ಯನಾದ ಭಗವಂತನ ಸಾಕ್ಷಾತ್ಕಾರ ಪಡೆ.

ಇಲ್ಲಿ ಹೇಳಿರುವ ಗುಣಗಳೇ ಜ್ಞಾನ ಮತ್ತು ಜ್ಞಾನ ಸಾಧನಗಳು. ಇದಕ್ಕಿಂತ ಬೇರೆಯಾಗಿರುವುದು ಅಜ್ಞಾನ ಮತ್ತು ಅಜ್ಞಾನದ ಗುರಿ.
(Contributed by Shri Prakash Shetty)

*****