ತತಃ ಶ್ರುತ್ವಾ
ಸಞ್ಜಯಾದ್ ದುಃಖತಪ್ತಂ ಸಮ್ಬೋಧಯಿಷ್ಯನ್ ಪಿತರಂ ಯುಯುತ್ಸುಃ ।
ಕೃಷ್ಣಸ್ಯ ರಾಜ್ಞಶ್ಚ
ಮತೇನ ಯಾತೋ ಜಗಾಮ ಚಾನ್ವೇವ ಜನಾರ್ದ್ದನಶ್ಚ ॥೨೮.೧೧೬॥
ತದನಂತರ ಸಂಜಯನಿಂದ
ಯುದ್ಧವಾರ್ತೆಯನ್ನೆಲ್ಲವನ್ನೂ ಕೇಳಿ ತಿಳಿದುಕೊಂಡು, ಅತ್ಯಂತ
ದುಃಖಿತನಾದ;
ತನ್ನ ತಂದೆಯಾದ
ಧೃತರಾಷ್ಟ್ರನನ್ನು ಸಂತೈಸಲು ಯುಯುತ್ಸು ಕೃಷ್ಣ ಹಾಗೂ ಧರ್ಮರಾಜನ ಅಣತಿ ಪಡೆದು ತೆರಳಿದ. ನಂತರ
ಶ್ರೀಕೃಷ್ಣ ಪರಮಾತ್ಮನೂ ಕೂಡಾ, ಯುಯುತ್ಸುವನ್ನು
ಅನುಸರಿಸಿ ತೆರಳಿದ.
ಧರ್ಮ್ಮಯುಕ್ತೈಶ್ಚ
ತತ್ತ್ವಾರ್ತ್ಥೈರ್ಲೋಕವೃತ್ತಾನುದರ್ಶಕೈಃ ।
ವಾಕ್ಯೈ
ರಾಜಾನಮಾಶ್ವಾಸ್ಯ ಪ್ರಾಯಾತ್ ಪಾರ್ತ್ಥಾನ್ ಪುನರ್ಹರಿಃ ॥೨೮.೧೧೭॥
ಧರ್ಮದಿಂದ
ಯುಕ್ತವಾಗಿರುವ ತತ್ವದ ಅರ್ಥವನ್ನು ಬಿಡಿಸುವ,
ಲೋಕದ ಸ್ವಭಾವವನ್ನು
ಅಂಧಕನಿಗೆ ಪರಿಚಯಮಾಡಿಕೊಡುವ,
ಮಾತುಗಳಿಂದ ಕೃಷ್ಣ
ಧೃತರಾಷ್ಟ್ರನನ್ನು ಸಮಾಧಾನಗೊಳಿಸಿದ .
ಹಾಗೆ ಮಾಡಿದ ನಂತರ
ಮತ್ತೆ ಪಾಂಡವರಿದ್ದಲ್ಲಿಗೆ ಹಿಂತಿರುಗಿದ.
ಕಾಲಾನುಸಾರತೋ
ದೈವಾಂಶ್ಚೋಪಸಂಹರ್ತ್ತುಮಚ್ಯುತಃ ।
ಯಯೌ ಸಪಾರ್ತ್ಥಶೈನೇಯಃ
ಕುರೂಣಾಂ ಶಿಬಿರಂ ನಿಶಿ ॥೨೮.೧೧೮॥
ಕಾಲಕ್ಕೆ ಅನುಗುಣವಾಗಿ
ಅವತರಿಸಿದ ದೇವಾಂಶಸಂಭೂತರಾದ ಎಲ್ಲರನ್ನೂ ಕೂಡಾ ನಾಶಮಾಡಲು ಭಗವಂತ, ಪಾಂಡವರು ಮತ್ತು
ಸಾತ್ಯಕಿಯೊಂದಿಗೆ ಕೂಡಿ ರಾತ್ರಿಕಾಲದಲ್ಲಿ ತೆರಳುತ್ತಾನೆ ಕೌರವರ ಯುದ್ಧ ಶಿಬಿರದತ್ತ.
(ಭೂಮಿಯಲ್ಲಿ ಅವತರಿಸಿ, ಪಾಂಡವರ ಪರ ನಿಂತಿದ್ದ
ಅನೇಕ ದೇವತೆಗಳು ತಮ್ಮ ಅವತಾರವನ್ನು ಕೊನೆಗೊಳಿಸುವ ಕಾಲ ಕೂಡಿ ಬಂದಿತ್ತು, ಅದರ ಹಿನ್ನೆಲೆಯಲ್ಲಿ
ಕೃಷ್ಣ ಹೀಗೆ ಮಾಡಿದ್ದು, ಜೊತೆಗೆ ಯುದ್ಧವನ್ನು
ಗೆದ್ದವರು ಶತ್ರು ಶಿಬಿರದಲ್ಲಿ
ಉಳಿದುಕೊಳ್ಳುವುದೂ ಆಕಾಲದ ಪದ್ಧತಿಯೂ ಆಗಿತ್ತು.)
ತದೈವ
ಹಾರ್ದ್ದಿಕ್ಯಕೃಪಾನ್ವಿತೋSಯಾತ್
ಸುಯೋಧನಂ ದ್ರೌಣಿರಮುಂ ಶಯಾನಮ್ ।
ಪ್ರಭಗ್ನಸಕ್ಥಿಂ ಚ
ಸೃಗಾಲಭೂತೈಃ ಸಮ್ಭಕ್ಷ್ಯಮಾಣಂ ದದೃಶೇ ಶ್ವಸನ್ತಮ್ ॥೨೮.೧೧೯॥
ಸ ದುಃಖಶೋಕಾಭಿಹತೋ
ವಿನಿನ್ದ್ಯ ಪಾರ್ತ್ಥಾನ್ ಮಯಾ ಭೂಪ ಕಿಮತ್ರ ಕಾರ್ಯ್ಯಮ್ ।
ಇತ್ಯಾಹ ನಿಷ್ಪಾಣ್ಡವತಾಂ
ಕುರುಷ್ವೇತ್ಯಮುಂ ವ್ಯಧಾತ್ ಪಾಂಸ್ವಭಿಷೇಕಿಣಂ ನೃಪಃ ॥೨೮.೧೨೦॥
ಅದೇ ಸಂಧರ್ಭದಲ್ಲಿ, ಕೃತವರ್ಮ ಹಾಗೂ ಕೃಪಾಚಾರ್ಯರಿಂದ ಕೂಡಿದ,
ಅಶ್ವತ್ಥಾಮನು, ತೊಡೆಮುರಿದುಕೊಂಡು ರಣಭೂಮಿಯಲ್ಲಿ ಮಲಗಿದ್ದ;
ನರಿ-ನಾಯಿಗಳಿಂದ ಇತರ
ಪ್ರಾಣಿಗಳಿಂದ ತಿನ್ನಲ್ಪಡುತ್ತಿರುವ ಶರೀರದಿಂದ,
ಗಟ್ಟಿಯಾಗಿ
ನಿಟ್ಟುಸಿರು ಬಿಡುತ್ತಿರುವ ದುರ್ಯೋಧನನನ್ನು ಕುರಿತು ಬಂದ.
ಅಲ್ಲಿ ದುರ್ಯೋಧನನ
ಸ್ಥಿತಿಯನ್ನು ನೋಡಿ, ಸಂಕಟಗೊಂಡ
ಅಶ್ವತ್ಥಾಮನು,
ಪಾಂಡವರನ್ನು ನಿಂದಿಸಿ, ‘ರಾಜನೇ, ನಾನೇನು
ಮಾಡಬೇಕು’ ಎಂದು ಕೇಳಿದನು.
ಆಗ ದುರ್ಯೋಧನ
ಪಾಂಡವರೆಲ್ಲರನ್ನೂ ನಾಶಮಾಡು ಎಂದ,
ಅಲ್ಲದೇ ಅವನನ್ನು
ಅಲ್ಲಿದ್ದ ಧೂಳಿನಿಂದ ಅಭಿಷೇಕ ಮಾಡಿದ.
ಉಚ್ಛಿದ್ಯ ಸನ್ತತಿಂ
ಪಾಣ್ಡೋಃ ಕೃತ್ವಾ ಸ್ವಕ್ಷೇತ್ರಸನ್ತತಿಮ್ ।
ತಯಾ ಭೂರಕ್ಷಣಹೃದಾ ಸೋSಭಿಷಿಕ್ತಸ್ತಥೇತ್ಯಗಾತ್ ॥೨೮.೧೨೧॥
‘ಪಾಂಡವರ ಸಂತತಿಯನ್ನು
ನಾಶಮಾಡು, ನನ್ನ ಹೆಂಡತಿಯಲ್ಲಿ
ಸಂತಾನವನ್ನು ನೀಡು.
ಆ ಸಂತಾನವೇ ಭೂಮಿಯ
ಆಳಬೇಕು’ ಎಂದು ಕೌರವ ಹೇಳುತ್ತಾನೆ,
ಅಭಿಷಿಕ್ತನಾದ
ಅಶ್ವತ್ಥಾಮ, ‘ಆಯಿತು’ ಎಂದು ಹೇಳಿ
ಹೊರಡುತ್ತಾನೆ.
(ಬ್ರಹ್ಮಚಾರಿಯಾಗಿದ್ದ
ದ್ರೋಣಪುತ್ರ ಅಶ್ವತ್ಥಾಮ,ಸಂತಾನ ಹುಟ್ಟಿಸಲು
ಒಪ್ಪಿಕೊಂಡದ್ದು ವಿಧಿಯನೇಮ!)
ಸ
ಕೃಷ್ಣಭೀಮಪಾರ್ತ್ಥಾನಾಂ ಭಯಾದೇವ ಪುನರ್ವನಮ್ ।
ಕೃಪಸಾತ್ವತಸಂಯುಕ್ತೋ
ವಿವೇಶ ಗಹನಂ ರಥೀ ॥೨೮.೧೨೨॥
ಅಶ್ವತ್ಥಾಮನು
ಶ್ರೀಕೃಷ್ಣ ಮತ್ತು ಭೀಮಾರ್ಜುನರ ಭಯದಿಂದ,
ಕೃಪ ಹಾಗೂ
ಕೃತವರ್ಮರಿಂದ ಕೂಡಿ, ರಥವೇರಿ ದಟ್ಟಕಾಡನ್ನು
ಪ್ರವೇಶಿಸಿದ.
ತಸ್ಯಾ ಚಿನ್ತಯತೋ
ದ್ರೋಣವಧಂ ದುರ್ಯ್ಯೋಧನಸ್ಯ ಚ ।
ನಾSಗಾನ್ನಿದ್ರಾ ನಿಶೀಥೇ ಚ ಧ್ವಾಕ್ಷಾನ್ ನ್ಯಗ್ರೋಧವಾಸಿನಃ
॥೨೮.೧೨೩॥
ಹತಾನ್
ಸುಬಹುಸಾಹಸ್ರಾನೇಕೇನಾತಿಬಲೇನ ತು ।
ಕೌಶಿಕೇನ ನಿರೀಕ್ಷ್ಯೈವ
ಪ್ರಾಹ ತೌ ಕೃಪಸಾತ್ವತೌ ॥೨೮.೧೨೪॥
ನಿದರ್ಶನೇನ ಹ್ಯೇನೇನ
ಪ್ರೇರಿತಃ ಪರಮಾತ್ಮನಾ ।
ಯಾಮಿ ಪಾಣ್ಡುಸುತಾನ್
ಹನ್ತುಮಿತ್ಯುಕ್ತ್ವಾSSರುರುಹೇ ರಥಮ್
॥೨೮.೧೨೫॥
ದುರ್ಯೋಧನನ
ಅಂತ್ಯ ಹಾಗೂ ಅಪ್ಪನಾದ ದ್ರೋಣರ ಸಾವನ್ನು
ಅಶ್ವತ್ಥಾಮ ಚಿಂತನೆ ಮಾಡುತ್ತಿದ್ದ,
ನಿದ್ರೆಯೇ ಬಾರದ
ಅರ್ಧರಾತ್ರಿಯಲ್ಲಿ ಶಕ್ತಿಶಾಲಿಯಾದ
ಗೂಬೆಯೊಂದು ಗೋಳೀಮರದಲ್ಲಿದ್ದ ,
ಸಹಸ್ರ ಸಂಖ್ಯೆಯ
ಕಾಗೆಗಳನ್ನು ಸಂಹಾರ ಮಾಡುವ ದೃಶ್ಯವನ್ನು ಕಂಡು ಸ್ಪೂರ್ತಿಗೊಂಡ.
ಅವನು, ಕೃಪಾ ಹಾಗೂ ಕೃತವರ್ಮನನ್ನು ಕುರಿತು ಹೇಳುತ್ತಾನೆ,-
‘ಪರಮಾತ್ಮನಿಂದ ಈ
ದೃಷ್ಟಾಂತದ ಮುಖೇನ ನನಗೆ ಪ್ರೇರಣೆ,
ನಾನು ಪಾಂಡವರ ಕೊಲ್ಲಲು
ಹೊರಟೆ’ ಎಂದ್ಹೇಳಿ, ರಥವೇರುತ್ತಾನೆ.
ನಿವಾರಿತೋSಪಿ ತಾಭ್ಯಾಂ ಸಃ ಪ್ರಾದವಚ್ಛಿಭಿರಂ ಪ್ರತಿ ।
ಅನುಜಗ್ಮತುಸ್ತಾವಪಿ ತಂ
ಶಿಬಿರದ್ವಾರಿ ಚೈಕ್ಷತ ॥೨೮.೧೨೬॥
ಉಗ್ರರೂಪಧರಂ ರುದ್ರಂ
ಸ್ವಕೀಯಾಂ ತನ್ವಮೇವ ಸಃ ।
ಪರೀತಂ ವಾಸುದೇವಂ ಚ
ಬಹುಕೋಟಿಸ್ವರೂಪಿಣಾ ॥೨೮.೧೨೭॥
ಕೃಪಾ ಹಾಗೂ ಕೃತವರ್ಮರಿಂದ
ತಡೆಯಲ್ಪಟ್ಟರೂ ಕೂಡಾ,
ಅಶ್ವತ್ಥಾಮ ಪಾಂಡವರ
ಶಿಬಿರವನ್ನು ಕುರಿತು ಧಾವಿಸಿದ.
ಆಗ ಅವರಿಬ್ಬರೂ
ಅಸಹಾಯಕರಾದರು, ಅಶ್ವತ್ಥಾಮನನ್ನು
ಅನುಸರಿಸಿ ಹೊರಟರು.
ದ್ವಾರದಲ್ಲಿ
ಅಶ್ವತ್ಥಾಮ ಬಹಳ ಕೋಟಿ ರೂಪದ ನಾರಾಯಣನನ್ನು ನೋಡಿದ,
ಅವನಿಂದ ಆವೃತನಾದ ಉಗ್ರರೂಪದ ತನ್ನ ಸ್ವರೂಪದ ರುದ್ರನನ್ನೂ ಕಂಡ.
ದೃಷ್ಟ್ವೈವ ವಾಸುದೇವಂ
ತಮತ್ರಸದ್ ಗೌತಮೀಸುತಃ ।
ವಾಸುದೇವಾಜ್ಞೆಯೈವಾತ್ರ
ಸ್ವಾತ್ಮನಾSಪಿ ಸದಾಶಿವಃ ॥೨೮.೧೨೮॥
ಅಯುದ್ಧ್ಯದಗ್ರಸಚ್ಚಾSಶು ದ್ರೌಣೇಃ ಸರ್ವಾಯುಧಾನ್ಯಪಿ ।
ಅಚಿನ್ತ್ಯಾ
ಹರಿಶಕ್ತಿರ್ಯ್ಯದ್ ದೃಶ್ಯನ್ತೇSತ್ಮಹನೋSಪಿ ಹಿ ॥೨೮.೧೨೯॥
ಅತಸ್ತಯಾ ಪ್ರೇರಿತೇನ
ಸ್ವಾತ್ಮನೈವಾಖಿಲೇಷ್ವಪಿ ।
ಆಯುಧೇಷು
ನಿಗೀರ್ಣ್ಣೇಷು ದ್ರೌಣಿರ್ಯ್ಯಜ್ಞಂ ತು ಮಾನಸಮ್ ।
ಚಕ್ರೇSತ್ಮಾನಂ ಪಶುಂ ಕೃತ್ವಾ ಸ್ವಾತ್ಮಸ್ಥಾಯೈವ
ವಿಷ್ಣವೇ ॥೨೮.೧೩೦॥
ಪರಮಾತ್ಮನನ್ನು
ಕಂಡೊಡನೆಯೇ ಗೌತಮಿಯ ಮಗನಾಗಿರುವ ಅಶ್ವತ್ಥಾಮನು ಭಯದಿಂದ ತತ್ತರಿಸಿದನು.
ಭಗವಂತನ ಆಜ್ಞೆಯಂತೆ
ಶಿಬಿರದ್ವಾರದಲ್ಲಿದ್ದ ರುದ್ರನು ತನ್ನ ಸ್ವರೂಪಭೂತನಾದ ದ್ರೌಣಿಯ ಜೊತೆ ಯುದ್ಧಮಾಡಿದನು. ಅವನು
ಅಶ್ವತ್ಥಾಮನ ಎಲ್ಲಾ (ಶಿವನ ಎರಡು ರೂಪಗಳ ಯುದ್ಧದಲ್ಲಿ)ಆಯುಧಗಳನ್ನು ಶೀಘ್ರದಲ್ಲಿ
ನುಂಗಿಬಿಟ್ಟನು.
ಶ್ರೀಹರಿಯ ಶಕ್ತಿಯು
ಅದು ಅಚಿಂತ್ಯ. ಆ ಪ್ರೇರಣೆಯಿಂದ ಸಾಧ್ಯ ಆತ್ಮಹತ್ಯ .
ನಾವು ಲೋಕದಲ್ಲಿ ಕಾಣುವ
ರಣ ನೋಟ , ತನ್ನನ್ನೇ ತಾನು
ಎದುರಿಸುವ ಯುದ್ಧದಾಟ.
ಆ ಅಚಿಂತ್ಯ ಶಕ್ತಿಯಿಂದ
ಪ್ರೇರಿಸಲ್ಪಟ್ಟ ತನ್ನಿಂದಲೇ ಎಲ್ಲಾ ಆಯುಧಗಳೂ ನುಂಗಲ್ಪಡಲು,
ಅಶ್ವತ್ಥಾಮ ಅಲ್ಲೇ
ತನ್ನ ಅಂತರ್ಯಾಮಿ ನಾರಾಯಣಗೆ ಮಾನಸ ಯಜ್ಞ ಮಾಡಿದ ತಾನೇ ಆಗಿ ಪಶುಪಾಲು.
ಯಜ್ಞತುಷ್ಟೇನ ಹರಿಣಾ
ಪ್ರೇರಿತಃ ಶಙ್ಕರಃ ಸ್ವಯಮ್ ।
ಆತ್ಮನೇ ದ್ರೋಣಪುತ್ರಾಯ
ದದೌ ಸರ್ವಾಯುಧಾನಿ ಚ ॥೨೮.೧೩೧॥
ಉವಾಚ ಚಾಹಮಾದಿಷ್ಟೋ
ವಿಷ್ಣುನಾ ಪ್ರಭವಿಷ್ಣುನಾ ।
ಅರಕ್ಷಂ ಪಾರ್ತ್ಥಶಿಬಿರಮಿಯನ್ತಂ
ಕಾಲಮೇವ ತು ॥೨೮.೧೩೨॥
ಯಜ್ಞದಿಂದ ತೃಪ್ತನಾದ
ನಾರಾಯಣ, ರುದ್ರನಿಗೆ ಶ್ರೀಹರಿ
ಮಾಡಲು ಪ್ರೇರಣ,
ತಾನೇ ಆಗಿರುವ
ಅಶ್ವತ್ಥಾಮನಿಗೆ ಎಲ್ಲಾ ಆಯುಧಗಳನ್ನು ಹಿಂತಿರುಗಿಸಿದ.
‘ನಾನು
ಸರ್ವಸಮರ್ಥ ಹರಿಯಾಜ್ಞೆಯಂತೆ ಪಾಂಡವರ ಶಿಬಿರ
ರಕ್ಷಿಸಿದೆ ಎಂದ.
ತದಿಚ್ಛಯೈವ
ನಿರ್ದ್ದಿಷ್ಟೋ ದಾಸ್ಯೇ ಮಾರ್ಗ್ಗಂ ತವಾದ್ಯ ಚ ।
ಆಯುಧಾನಿ ಚ ಸರ್ವಾಣಿ
ಹನ್ತುಂ ಸರ್ವಾನಿಮಾನ್ ಜನಾನ್ ॥೨೮.೧೩೩॥
ಇತ್ಯುದೀರ್ಯ್ಯ
ಪ್ರದಾಯಾSಶು ಸರ್ವಾ
ಹೇತಿರ್ವೃಷಧ್ವಜಃ ।
ತತ್ರೈವಾನ್ತರ್ದ್ದದೇ
ಸೋSಪಿ ಪ್ರೋವಾಚ
ಕೃಪಸಾತ್ವತೌ ॥೨೮.೧೩೪॥
ಯೇ ನಿರ್ಯ್ಯಾಸ್ಯನ್ತಿ
ಶಿಬಿರಾಜ್ಜಹಿತಂ ತಾಂಸ್ತು ಸರ್ವಶಃ ।
ಇತ್ಯುಕ್ತ್ವಾ
ಪ್ರವಿವೇಶಾನ್ತರ್ದ್ಧನ್ವೀ ಖಡ್ಗೀ ಕೃತಾನ್ತವತ್ ॥೨೮.೧೩೫॥
ಆ ಶ್ರೀಹರಿಯ
ಇಚ್ಛೆಯಿಂದಲೇ ನಾನು ಶಿಬಿರದ ಮಾರ್ಗವನ್ನು ನಿನಗೆ ಬಿಡುತ್ತಿದ್ದೇನೆ.
ಈ ಎಲ್ಲಾ ಆಯುಧಗಳನ್ನು
ಇವರನ್ನು ಕೊಲ್ಲಲು ಎಂದೇ ನಿನಗೆ ನೀಡುತ್ತಿದ್ದೇನೆ’.
ಎಂದು ಹೇಳಿ ಎಲ್ಲಾ
ಆಯುಧಗಳನ್ನೂ ಕೊಡುತ್ತಾನೆ ,
ನಂದೀಧ್ವಜ ಸದಾಶಿವ
ಅಲ್ಲಿಯೇ ಅಂತರ್ಧಾನನಾಗುತ್ತಾನೆ.
ಆಗ ಅಶ್ವತ್ಥಾಮನು
ಕೃಪಾಚಾರ್ಯ ಮತ್ತು ಕೃತವರ್ಮನಿಗೆ ಹೇಳಿದ ಮಾತು,
‘ಯಾರು ಶಿಬಿರದಿಂದ
ಹೊರಗೆ ಓಡುತ್ತಾರೋ, ಅವರೆಲ್ಲರನ್ನೂ ಕೊಲ್ಲಲು ತಾಕೀತು.
ಇಷ್ಟು ಮಾಡಿದವನು
ಧನುರ್ಧಾರಿಯಾಗಿ, ಖಡ್ಗವನ್ನು ಹಿಡಿದ,
ಯಮಧರ್ಮನಂತೆ ಪಾಂಡವರ
ಶಿಬಿರದ ಒಳಗೆ ಸಾಗಿ ಹೋದ.
ಪಾರಾವತಾಶ್ವಂ ಸ ತದಾ
ಶಯಾನಮುಪೇತ್ಯ ಪದ್ಬ್ಯಾಂ ಸಮತಾಡಯಚ್ಚ ।
ವಕ್ಷಸ್ಯಸಾವವದದ್
ವೀತನಿದ್ರೋ ಜಾನೇ ಭವನ್ತಂ ಹಿ ಗುರೋಸ್ತನೂಜಮ್ ॥೨೮.೧೩೬॥
ಸಮುತ್ಥಿತಂ ಮಾಂ ಜಹಿ
ಶಸ್ತ್ರಪಾಣಿಂ ಶಸ್ತ್ರೇಣ ವೀರೋSಸಿ
ಸ ವೀರಧರ್ಮ್ಮಃ ।
ಲೋಕಾಶ್ಚ ಮೇ ಸನ್ತ್ವಥ
ಶಸ್ತ್ರಪೂತಾ ಇತಿ ಬ್ರುವಾಣಂ ಸ ರುಷಾ ಜಗಾದ ॥೨೮.೧೩೭॥
ಪಾಂಡವರ ಶಿಬಿರದ ಒಳಗೆ
ಅಶ್ವತ್ಥಾಮನು ನುಗ್ಗಿದ ,
ಅಲ್ಲಿ ಮಲಗಿದ್ದ
ಧೃಷ್ಟದ್ಯುಮ್ನನನ ಎದೆಗೊದ್ದು ಎಬ್ಬಿಸಿದ.
ಎಚ್ಚರಗೊಂಡ
ಧೃಷ್ಟದ್ಯುಮ್ನ ಹೇಳುತ್ತಾನೆ: ‘ನಿನ್ನನ್ನು ಅಶ್ವತ್ಥಾಮ ಎಂದು ನಾನು ತಿಳಿದು ಬೇಡುತ್ತಿದ್ದೇನೆ,
ನನ್ನ ಏಳಲು ಬಿಡು ,ಶಸ್ತ್ರ ಹಿಡಿದ ನಂತರ ಶಸ್ತ್ರದಿಂದ ನನ್ನನ್ನು
ಕೊಲ್ಲು ಎಂಬುದು ನನ್ನ ನಿವೇದನೆ.
ಏಕೆಂದರೆ ನೀನು ವೀರ, ಶಸ್ತ್ರಪಾಣಿಗಳನ್ನು ಕೊಲ್ಲುವುದು ವೀರರ ಧರ್ಮ.
ನನಗೆ ಶಸ್ತ್ರದಿಂದ
ಕೊಲ್ಲಲ್ಪಟ್ಟವರಿಗೆ ಸಿಗುವ ಲೋಕ ಸಿಕ್ಕರೆ ಅದು ಕ್ಷೇಮ.’
ಹೀಗೆ ಹೇಳುತ್ತಿರುವ
ಧೃಷ್ಟದ್ಯುಮ್ನನಿಗೆ ಸಿಟ್ಟಿನಿಂದ ಹೇಳುತ್ತಾನೆ ಅಶ್ವತ್ಥಾಮ.
ನ ಸನ್ತಿ ಹಿ
ಬ್ರಹ್ಮಹಣಾಂ ಸುಲೋಕಾ ವಿಶೇಷತಶ್ಚೈವ ಗುರುದ್ರುಹಾಂ ಪುನಃ ।
ನ ಧರ್ಮ್ಮಯುದ್ಧೇನ
ವಧಾರ್ಹಕಾಶ್ಚ ಯೇ ತ್ವದ್ವಿಧಾಃ ಪಾಪತಮಾಃ ಸುಪಾಪ ॥೨೮.೧೩೮॥
ಎಲೈ ಪಾಪಿಷ್ಠನಾದ
ಧೃಷ್ಟದ್ಯುಮ್ನನೇ, ಬ್ರಹ್ಮಹತ್ಯೆ
ಮಾಡಿದವರಿಗೆ,
ಸಿಕ್ಕೀತೇ ಒಳ್ಳೇ ಲೋಕ
ಅದರಲ್ಲೂ ವಿಶೇಷವಾಗಿ ಗುರುದ್ರೋಹಿಗಳಿಗೆ.
ಅದರಿಂದಾಗಿ ಧರ್ಮಯುದ್ಧ
ಯೋಗ್ಯವಲ್ಲ ನಿನ್ನಂತಹ ಪರಮ ಪಾಪಿಷ್ಠರಿಗೆ .
ಅವಶ್ಯಭಾವಿನಂ ಮೃತ್ಯುಂ
ಧೃಷ್ಟದ್ಯುಮ್ನೋ ವಿಚಿನ್ತ್ಯ ತಮ್ ।
ತೂಷ್ಣೀಂ ಬಭೂವ
ಸ್ವಪ್ನೇSಪಿ ನಿತ್ಯಂ ಪಶ್ಯತಿ
ತಾಂ ಮೃತಿಮ್ ॥೨೮.೧೩೯॥
ದ್ರೌಣಿಂ ಚ
ಕಾಳರಾತ್ರಿಂ ಚ ದ್ರೋಣಪಾತಾದನನ್ತರಮ್ ।
ವಿಶಸನ್ತಂ ಕೃಷನ್ತೀಂ ಚ
ಸ್ವಪ್ನೇSಪಶ್ಯದ್ಧಿ ಪಾರ್ಷತಃ
॥೨೮.೧೪೦॥
ನಿಶ್ಚಯವಾಗಿಯೂ ತನ್ನ
ಸಾವು ಇದೇ ರೀತಿ ಆಗುತ್ತದೆ ಎಂದು ಚಿಂತಿಸಿದ ಧೃಷ್ಟದ್ಯುಮ್ನನು ಸುಮ್ಮನಾದ.
ಹೇಗೆ ಅವನಿಗೆ ಅದು
ತಿಳಿದಿತ್ತು ಎಂದರೆ ಅವನು ಕನಸಿನಲ್ಲಿ ಯಾವಾಗಲೂ ಆ ಸಾವನ್ನು ಕಾಣುತ್ತಿದ್ದ.
ಧೃಷ್ಟದ್ಯುಮ್ನನು
ದ್ರೋಣಾಚಾರ್ಯರನ್ನು ಕೊಂದ ನಂತರ ಕನಸಿನಲ್ಲಿ ಪ್ರತಿನಿತ್ಯ- ಅಶ್ವತ್ಥಾಮ ಬಂದು
ತನ್ನನ್ನು ಕೊಂದಂತೆ, ದುರ್ಗೆ ತನ್ನನ್ನು
ಸೆಳೆದಂತೆ ಕಂಡಿದ್ದ ಸತ್ಯ.
ಸಮಾಕ್ಷಿಪದ್
ದ್ರೋಣಸುತೋSಸ್ಯ ಕಣ್ಠೇ ನಿಬದ್ಧ್ಯ
ಮೌರ್ವೀಂ ಧನುಷೋSಪ್ಯುರಸ್ಥಃ ।
ಮಮನ್ಥ ಕೃಚ್ಛ್ರೇಣ
ವಿಹಾಯ ದೇಹಂ ಯಯೌ ನಿಜಂ ಸ್ಥಾನಮಸೌ ಚ ವಹ್ನಿಃ ॥೨೮.೧೪೧॥
ದ್ರೋಣಪುತ್ರನಾದ
ಅಶ್ವತ್ಥಾಮ ತಾನು ಧೃಷ್ಟದ್ಯುಮ್ನನ ಎದೆಯಮೇಲೆ ಕುಳಿತ,
ಕುತ್ತಿಗೆ ಹಿಸುಕಿದ,ಬಿಲ್ಲಿನ ಹಗ್ಗವನ್ನು ಧೃಷ್ಟದ್ಯುಮ್ನನ ಕೊರಳಿಗೆ
ಕಟ್ಟಿ ಎಳೆಯುತ್ತ.
ಆಗ ಅಗ್ನಿಯ ಅವತಾರ
ಧೃಷ್ಟದ್ಯುಮ್ನ ಬಹಳ ಹಿಂಸೆಯಿಂದ,
ತನ್ನ ಆ ದೇಹವನ್ನು
ಬಿಟ್ಟು ಮೂಲ ಸ್ಥಾನವನ್ನೇ ಹೊಂದಿದ.
(ಅಗ್ನಿಯನ್ನು ನಂದಿಸಲು
ಹೇಗೆ ಗಾಳಿ ಇಲ್ಲವಾಗಬೇಕೋ ಹಾಗೇ,
ಅವನ ಕತ್ತನ್ನು ಹಿಚುಕಿ
ಉಸಿರುಗಟ್ಟಿಸಿ ಕೊನೆಗಾಣಿಸಿದ ಬಗೆ).
ತತಃ ಶಿಖಣ್ಡಿನಂ ಹತ್ವಾ
ಯುಧಾಮನ್ಯೂತ್ತಮೋಜಸೌ ।
ಜನಮೇಜಯಂ ಚ
ಪಾಞ್ಚಾಲೀಸುತಾನಭಿಯಯೌ ಜ್ವಲನ್ ॥೨೮.೧೪೨॥
ಆನಂತರ ಶಿಖಂಡಿ, ಯುದಾಮನ್ಯು, ಉತ್ತಮೌಜಸ ಹಾಗೂ ಜನಮೇಜಯ ಎಂಬ ನಾಲ್ವರನ್ನು ಕೊಂದ,
ಕೋಪದಿಂದ
ಉರಿಯುತ್ತಿದ್ದ ದ್ರೋಣಪುತ್ರ ಅಶ್ವತ್ಥಾಮ ದ್ರೌಪದಿಯ ಮಕ್ಕಳಿದ್ದ ಕಡೆಗೆ ನುಗ್ಗಿದ.
ತೈರುತ್ಥಿತೈರಸ್ಯಮಾನಃ
ಶರೈಃ ಖಡ್ಗೇನ ಜಘ್ನಿವಾನ್ ।
ಸರ್ವಾನ್
ಸವ್ಯಾಪಸವ್ಯೇನ ತಥಾSನ್ಯಾನ್
ಪಾಣ್ಡವಾತ್ಮಜಾನ್ ॥೨೮.೧೪೩॥
ಋತ ಏಕಂ
ಭೈಮಸೇನಿಂ ಕಾಶಿರಾಜಾತ್ಮಜಾತ್ಮಜಮ್ ।
ತಂ ತದಾSನ್ತರ್ಹಿತಃ ಶರ್ವಃ ಕೈಲಾಸಮನಯತ್ ಕ್ಷಣಾತ್
॥೨೮.೧೪೪॥
ನಿದ್ದೆಯಿಂದ
ಎದ್ದಿರತಕ್ಕ ಪಾಂಚಾಲೀ ಪುತ್ರರು, ಬಾಣಗಳಿಂದ
ಅಶ್ವತ್ಥಾಮನ ಹೊಡೆದರೂ,
ಖಡ್ಗದಿಂದ ದ್ರೌಪದಿಯ
ಎಲ್ಲಾ ಮಕ್ಕಳನ್ನು ಕೊಂದುಹಾಕಿದ.
ಭೀಮನಿಂದ ಹುಟ್ಟಿದ, ಕಾಶಿರಾಜನ ಮಗಳ ಮಗನೊಬ್ಬ ಉಳಿದ.
ಪಾಂಡವರ ಇತರ ಎಲ್ಲಾ
ಮಕ್ಕಳನ್ನೂ ಕೂಡಾ ಅಶ್ವತ್ಥಾಮ ಎಡಕ್ಕೂ, ಬಲಕ್ಕೂ
ಹೊಡೆದು ಸಂಹರಿಸಿದ.
ಅಲ್ಲಿ ಯಾರಿಗೂ
ಕಾಣದಂತೆ ಇದ್ದ ರುದ್ರನು ಕೊಲ್ಲಲ್ಪಡದೇ ಉಳಿದಿದ್ದ ಭೀಮಪುತ್ರನನ್ನು ಕೈಲಾಸಕ್ಕೊಯ್ದ.
ಸ ಶರ್ವತ್ರಾತನಾಮಾSSಸೀದತಸ್ತತ್ರೈವ ಸೋSವಸತ್ ।
ಪುರಾSರ್ತ್ಥಿತಃ ಸ್ವದೌಹಿತ್ರಸ್ಯಾಮರತ್ವಾಯ ಶಙ್ಕರಃ
॥೨೮.೧೪೫॥
ಕಾಶಿರಾಜೇನ ತೇನಾಸೌ
ಜುಗೋಪೈನಂ ಕೃಪಾಯುತಃ ।
ವಾಸುದೇವಮತಂ ಜ್ಞಾತ್ವಾ
ಸಾಮ್ರಾಜ್ಯಾಯ ಪರೀಕ್ಷಿತಃ ॥೨೮.೧೪೬॥
ವಾರಯಾಮಾಸ ಭೂಲೋಕಂ ನೈವ
ಯಾಹೀತ್ಯಮುಂ ಶಿವಃ ।
ಸಾಮಾನ್ಯತೋSಪಾಣ್ಡವಾಯ ದ್ರೌಣಿನಾSಪ್ಯಭಿಸನ್ಧಿತಮ್ ॥೨೮.೧೪೭॥
ತದ್ರೂಪೇಣೈವ ರುದ್ರೇಣ
ವಿನೈನಮಿತಿ ಚಿನ್ತಿತಮ್ ।
ಅಸ್ತ್ರಂ
ಬ್ರಹ್ಮಶಿರಶ್ಚೈನಂ ನ ಜಘಾನೈಕ್ಯತಸ್ತಯೋಃ ।
ಚೇಕಿತಾನಾದಿಕಾಂಶ್ಚೈವ
ಜಘಾನಾನ್ಯಾನ್ ಸ ಸರ್ವಶಃ ॥೨೮.೧೪೮॥
ಶರ್ವತ್ರಾತಎಂಬ ಹೆಸರಿನ
ಆ ಭೀಮಪುತ್ರನು ಮುಂದೆ ಕೈಲಾಸದಲ್ಲಿಯೇ
ವಾಸಮಾಡಿದ.
ಹಿಂದೆ ತನ್ನ ಮಗಳ ಮಗನ
ಅಮರತ್ವಕ್ಕಾಗಿ ಕಾಶಿರಾಜ ಸದಾಶಿವನಲ್ಲಿ ಬೇಡಿಕೊಂಡಿದ್ದ.
ಹೀಗಾಗಿಯೇ ಸದಾಶಿವ
ಕೃಪೆಯಿಂದ ಅವನನ್ನು ರಕ್ಷಣೆ ಮಾಡಿದ.
ಅಭಿಮನ್ಯು ಪುತ್ರ
ಪರೀಕ್ಷಿತಗೆ ರಾಜ್ಯಾಭಿಷೇಕ ಎಂಬ ಕೃಷ್ಣಾಭಿಪ್ರಾಯ ತಿಳಿದ,
ಸದಾಶಿವನು ಭೂಲೋಕಕ್ಕೆ
ಮತ್ತೆ ಹೋಗದಂತೆ ಶರ್ವತ್ರಾತನನ್ನು ತಡೆದ.
(ಹಾಗಿದ್ದರೆ ಪಾಂಡವರ
ಸಂತತಿ ನಾಶಕ್ಕಾಗಿ ಅಶ್ವತ್ಥಾಮನಿಂದ ಪ್ರಯೋಗಿಸಲ್ಪಟ್ಟ ಅಸ್ತ್ರ,
ಹೇಗೆ ಶರ್ವತ್ರಾತನನ್ನು
ಕೊಲ್ಲಲಿಲ್ಲ ಎಂಬುದಕ್ಕೆ ದೈವನಿಯಮನ ಕೊಟ್ಟ ಉತ್ತರ).
ಪಾಂಡವರ ಸಂತತಿಯ
ನಾಶಕ್ಕಾಗಿಯೇ ಅಶ್ವತ್ಥಾಮರಿಂದ ಸಂಕಲ್ಪ ಮಾಡಲ್ಪಟ್ಟಿತ್ತು.
ಆದರೆ ಅಶ್ವತ್ಥಾಮನ
ಸ್ವರೂಪಭೂತನಾದ ರುದ್ರನಿಂದ ‘ಶರ್ವತ್ರಾತನ ಬಿಟ್ಟು’ ಎಂದಿತ್ತು.
(ಸುಪ್ತಪ್ರಜ್ಞೆಯಲ್ಲಿ
ಶರ್ವತ್ರಾತನಿಗೆ ಬ್ರಹ್ಮಾಸ್ತ್ರ ತಗಲುವುದು ಬೇಡ ಎನ್ನುವ ಚಿಂತನೆ ಇತ್ತು).
ಅಶ್ವತ್ಥಾಮ ಮತ್ತು
ಸದಾಶಿವ ಒಂದೇ ಆಗಿರುವುದರಿಂದ ,
ಬ್ರಹ್ಮಾಸ್ತ್ರ
ಶರ್ವತ್ರಾತನನ್ನು ಕೊಲ್ಲಲಿಲ್ಲ ಅದೇ ಕಾರಣದಿಂದ.
ಆದರೆ ಅಶ್ವತ್ಥಾಮ; ಚೇಕಿತಾನ ಮೊದಲಾದ, ಎಲ್ಲರನ್ನೂ ಬಿಡದಂತೆ ಸಂಹಾರ ಮಾಡಿದ.
ಸ ಚೇದಿಪಾಞ್ಚಾಲಕರೂಶಕಾಶೀನನ್ಯಾಂಶ್ಚ
ಸರ್ವಾನ್ ವಿನಿಹತ್ಯ ವೀರಃ ।
ಶಿಶೂನ್ ಸ್ತ್ರಿಯಶ್ಚೈವ
ನಿಹನ್ತುಮುಗ್ರಃ ಪ್ರಾಜ್ವಾಲಯತ್ ತಚ್ಛಿಬಿರಂ ಸಮನ್ತಾತ್ ॥೨೮.೧೪೯॥
ಕ್ರೂರಕರ್ಮರತನಾದ
ಅಶ್ವತ್ಥಾಮ ಚೇದಿ, ಪಾಂಚಾಲ, ಕರೂಶ, ಕಾಶಿ, ಹೀಗೆ ಎಲ್ಲಾ ದೇಶದ ಸಮಸ್ತ ವೀರರನ್ನು ಕೊಂದ, ಅಳಿದುಳಿದ ಪುಟ್ಟ
ಮಕ್ಕಳನ್ನೂ, ಸ್ತ್ರೀಯರನ್ನೂ
ಕೊಲ್ಲಲೆಂದು ಆ ಪಾಂಡವರ ಶಿಬಿರದ ಸುತ್ತಲೂ ಬೆಂಕಿ ಹಚ್ಚಿದ.
ಜಿಜೀವಿಷೂಂಸ್ತತ್ರ
ಪಲಾಯಮಾನಾನ್ ದ್ವಾರಿ ಸ್ಥಿತೋ ಗೌತಮಃ ಸಾತ್ವತಶ್ಚ ।
ನಿಜಘ್ನತುಃ ಸರ್ವಶಃ
ಪಾರ್ಷತಸ್ಯ ಸೂತಸ್ತ್ವೇಕಃ ಶೇಷಿತೋ ದೈವಯೋಗಾತ್ ॥೨೮.೧೫೦॥
ಖಡ್ಗೇನ ಪ್ರಹೃತಂ
ದೃಷ್ಟ್ವಾ ಹಾರ್ದ್ದಿಕ್ಯೇನ ಪಪಾತ ಹ ।
ಭೂಮೌ ಪ್ರಾಗೇವ
ಸಂಸ್ಪರ್ಶಾನ್ನ ಜ್ಞಾತಸ್ತಮಸಾSಮುನಾ
॥೨೮.೧೫೧॥
ಸಂಹರಿಸಲ್ಪಡುತ್ತಿರುವ
ವೀರರ ಮಧ್ಯದಲ್ಲಿ, ಬದುಕಲು ಬಯಸಿ
ಓಡುತ್ತಿರುವ ಎಲ್ಲರನ್ನೂ,
ಶಿಬಿರ ದ್ವಾರದಿ
ನಿಂತಿದ್ದ ಕೃಪ ಮತ್ತು ಕೃತವರ್ಮ ಮಾಡಿದರು
ಸಂಹಾರವನ್ನು .
ದೈವಸಂಕಲ್ಪದಿಂದ ಕೇವಲ
ಧೃಷ್ಟದ್ಯುಮ್ನನ ಸಾರಥಿ ಒಬ್ಬನೇ ಬದುಕುಳಿದ.
ಅವನು ಕೃತವರ್ಮ ಖಡ್ಗ
ಬೀಸುವ ಮೊದಲೇ ತಾನೇ ಭೂಮಿಯಲ್ಲಿ ಬಿದ್ದ.
ಅದು ಕೃತವರ್ಮನಿಂದ
ತಿಳಿಯಲ್ಪಡಲಿಲ್ಲ ಆಗ ಕತ್ತಲು ಆವರಿಸಿದ್ದುದರಿಂದ.
ಅನ್ಯಾಸಕ್ತೇ ಸಮುತ್ಥಾಯ
ಪ್ರಾದ್ರವದ್ ಯತ್ರ ಪಾರ್ಷತೀ ।
ತಸ್ಯಾ ಅಕಥಯತ್ ಸರ್ವಂ
ಸಾ ಭೀಮಾಯಾSಹ ದುಃಖಿತಾ ।
ಪ್ರಾದ್ರವದ್
ರಥಮಾರುಹ್ಯ ಸ ಧನ್ವೀ ಗೌತಮೀಸುತಮ್ ॥೨೮.೧೫೨॥
ಕೃತವರ್ಮನು ಇತರರನ್ನು
ಸಂಹರಿಸುತ್ತಿರುವಾಗ ಅವನು ಮೇಲೆದ್ದ ,
ದ್ರೌಪದಿ ಇದ್ದಲ್ಲಿಗೆ
ಓಡಿಹೋಗಿ ಅವಳಿಗೆ ಎಲ್ಲಾ ವೃತ್ತಾಂತವನ್ನೂ ಹೇಳಿದ.
ಅವಳು ದುಃಖಿತಳಾಗಿ
ಭೀಮನಲ್ಲಿಗೆ ಬಂದು ತಿಳಿಸಿದಳು ವಿಷಯವನ್ನು ,
ಭೀಮನಾದರೋ, ರಥವನ್ನೇರಿ ದ್ರೌಣಿಯೆಡೆ ಧಾವಿಸಿದ ಹಿಡಿದು
ಬಿಲ್ಲನ್ನು.
ತದನ್ತರೇ ದ್ರೌಣಿರಪಿ
ಪ್ರಯಾತಃ ಕೃಷ್ಣಾಸುತಾನಾಂ ಮುದಿತಃ ಶಿರಾಂಸಿ ।
ಆದಾಯ
ಹಾರ್ದ್ದಿಕ್ಯಕೃಪಾನುಯಾತೋ ದುರ್ಯ್ಯೋಧನಂ ಸನ್ನಿಕೃಷ್ಟಪ್ರಯಾಣಮ್ ॥೨೮.೧೫೩॥
ಈ ಸಮಯದಲ್ಲಿ
ಸಂತುಷ್ಟಗೊಂಡ ದ್ರೌಣಿ ಅನುಸರಿಸಿದ ಕೃಪ ಹಾಗೂ
ಕೃತವರ್ಮರೊಂದಿಗೆ ,
ದ್ರೌಪದಿ ಮಕ್ಕಳ
ರುಂಡವನ್ನು ಹಿಡಿದುಕೊಂಡು ಬಂದ ಸಾಯಲಿರುವ ದುರ್ಯೋಧನನ ಬಳಿಗೆ.
ದೃಷ್ಟ್ವಾ ತದುಕ್ತಂ ಚ
ನಿಶಮ್ಯ ಪಾಪಸ್ತುಷ್ಟೋSತ್ಯಜತ್ ಸಾಧ್ವಿತಿ
ದೇಹಮಾಶು ।
ಭೀಮಾರ್ಜ್ಜುನಾಭ್ಯಾಮಥ
ಕೇಶವಾಚ್ಚ ಭೀತಾಃ ಪೃಥಗ್ ದ್ರೌಣಿಮುಖಾಃ ಪ್ರಯಾತಾಃ ॥೨೮.೧೫೪॥
ಪಾಪಿಷ್ಠನಾದ
ದುರ್ಯೋಧನನು ಅಶ್ವತ್ಥಾಮಾಚಾರ್ಯರ ಮಾತನ್ನು ಕೇಳಿದ,
ದ್ರೌಪದಿಯ ಮಕ್ಕಳ
ತಲೆಗಳನ್ನು ನೋಡಿ, ತೃಪ್ತನಾಗಿ,‘ಬಹಳ ಒಳ್ಳೆಯದಾಯಿತು’ ಎಂದ.
ಅಷ್ಟಕ್ಕೇ ಕಾದಂತಿದ್ದ
ದುರ್ಯೋಧನ ಕೂಡಲೇ ದೇಹವನ್ನು ತ್ಯಾಗ ಮಾಡಿದ.
ನಂತರ ಭೀಮಾರ್ಜುನರಿಂದ,ಕೃಷ್ಣನಿಂದ ಭಯಗೊಂಡ ಕೃಪ, ಕೃತವರ್ಮ ಮತ್ತು ಅಶ್ವತ್ಥಾಮರು,
ಆ ಸ್ಥಳದಿಂದ ಮೂರು
ಸೀಳಾಗಿ ಬೇರೆಬೇರೆ ಕಡೆಗೆ ಹೊರಟುಹೋದರು.
ತತ್ರೈಕಲಂ ದ್ರೋಣಸುತಂ
ರಥೇನ ಯಾನ್ತಂ ರಥೀ ಮಾರುತಿರನ್ವಧಾವತ್ ।
ತಮಾದ್ರವನ್ತಂ
ಪ್ರಸಮೀಕ್ಷ್ಯ ಭೀತಃ ಪರಾದ್ರವದ್ ದ್ರೌಣಿರತಿದ್ರುತಾಶ್ವೈಃ ॥೨೮.೧೫೫॥
ಆ ಮೂವರ ಮಧ್ಯದಲ್ಲಿ
ರಥದಿಂದ ಹೊರಡುತ್ತಿರುವ, ಸಹಾಯರಹಿತನಾದ;
ಒಬ್ಬನೇ
ಅಶ್ವತ್ಥಾಮನನ್ನು, ರಥವನ್ನೇರಿದ ಭೀಮಸೇನನು
ಅನುಸರಿಸಿದ.
ಹಿಂಬಾಲಿಸಿ
ಬರುತ್ತಿರುವ ಭೀಮನನ್ನು ನೋಡಿ, ಅಶ್ವತ್ಥಾಮ ವೇಗದಿಂದ
ಕೂಡಿದ ಕುದುರೆಗಳಿಂದ ಪಲಾಯನ ಮಾಡಿದ.
ಆದ್ರವನ್ತಂ
ಪುನರ್ದ್ದೃಷ್ಟ್ವಾ ಭೀಮಂ ದ್ರೋಣಾತ್ಮಜೋ ರುಷಾ ।
ಆವೃತ್ಯ ಯುದ್ಧ್ಯನ್
ವಿಜಿತೋSಸ್ತ್ರಂ ಬ್ರಹ್ಮಶಿರ
ಆದದೇ ॥೨೮.೧೫೬॥
ಪುನಃ ಓಡಿಸಿಕೊಂಡು
ಬರುತ್ತಿರುವ ಭೀಮಸೇನನನ್ನು ನೋಡಿದ,
ಅಶ್ವತ್ಥಾಮನು
ಸಿಟ್ಟಿನಿಂದ ಹಿಂದೆ ತಿರುಗಿ, ಯುದ್ಧಮಾಡಿದ,
ಭೀಮಸೇನನಿಂದ ಸೋತು
ಬ್ರಹ್ಮಾಸ್ತ್ರವನ್ನು ತೆಗೆದುಕೊಂಡ.
No comments:
Post a Comment
ಗೋ-ಕುಲ Go-Kula