Saturday 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 29: 48-63

 ಪಾರ್ತ್ಥಾನಾಂ ಗದಿತಂ ತಚ್ಚ ಶ್ರುತ್ವಾ ಧರ್ಮ್ಮಸುತೋSನುಜಾನ್ ।

ಪಪ್ರಚ್ಛ ವಿದುರಂ ಚೈವ ಸಾರಂ ಧರ್ಮ್ಮಾದಿಷು ತ್ರಿಷು ॥ ೨೯.೪೮ ॥

 

ಧರ್ಮರಾಜ ಭೀಷ್ಮರ ಮುಖೇನ ಉಪದೇಶ ಪಡೆಯುತ್ತಾನೆ ,

ತನ್ನ ತಮ್ಮಂದಿರನ್ನು, ವಿದುರನನ್ನೂ, ಕುರಿತು-ಕೇಳುತ್ತಾನೆ.

‘ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಇವುಗಳಲ್ಲಿ ಯಾವುದು(ಶ್ರೇಷ್ಠ) ಅತ್ಯುತ್ತಮ’?

 

ಆಹ ಕ್ಷತ್ತಾ ಧರ್ಮ್ಮಮೇವ ಸಾರಮರ್ತ್ಥಂ ಚ ಮದ್ಧ್ಯಮಮ್ ।

ನೀಚಂ ಕಾಮಂ ನಿಷ್ಫಲತ್ವಾದರ್ತ್ಥಮೇವಾರ್ಜ್ಜುನೋSಬ್ರವೀತ್ ॥ ೨೯.೪೯ ॥

 

ವಿದುರನೆಂದ -ಪುರುಷಾರ್ಥಗಳಲ್ಲಿ  ಧರ್ಮವೇ ಶ್ರೇಷ್ಠ.

ಅರ್ಥ ಮಧ್ಯಮ ಎಂದ, ಫಲವಿಲ್ಲದ ಕಾಮವು ಕನಿಷ್ಠ.

ಆದರೆ ಅರ್ಜುನ ಸ್ಪಷ್ಟ ಪಡಿಸುತ್ತಾನೆ ಅರ್ಥವೇ ಶ್ರೇಷ್ಠ . 

 

[ಅರ್ಥವೇ ಶ್ರೇಷ್ಠ ಎನ್ನುವ ತನ್ನ ಮಾತಿಗೆ, ಅರ್ಜುನ ಕೊಟ್ಟ ವಿವರಣೆಯ ಕೊಡುಗೆ]

 

ಸಾರಂ ಸ ದ್ವಿವಿಧೋ ಜ್ಞೇಯೋ ದೈವೋ ಮಾನುಷ ಏವ ಚ ।

ದೈವೋ ವಿದ್ಯಾ ಹಿರಣ್ಯಾದಿರ್ಮ್ಮಾನುಷಃ ಪರಿಕೀರ್ತ್ತಿತಃ ॥ ೨೯.೫೦ ॥

 

ಅರ್ಥ ಎನ್ನುವುದು ಎರಡು ರೀತಿ. ಒಂದು ದೈವ ಇನ್ನೊಂದು ಮಾನುಷ ನೀತಿ.

ದೈವಸಂಪತ್ತು ಅದು ವಿದ್ಯೆಯಾದರೆ, ಮಾನುಷ ಸಂಪತ್ತಿಗೆ ಬಂಗಾರಾದಿಗಳ ಆಸರೆ.

 

ಮದ್ಧ್ಯಮೋ ಧರ್ಮ್ಮ ಏವಾತ್ರ ಸಾದ್ಧ್ಯಂ ಸಾಧನಮೇವ ಚ ।

ವಿದ್ಯಾಹ್ವಯೋSರ್ತ್ಥೋ ಧರ್ಮ್ಮಸ್ಯ ವಿದ್ಯಯೈವ ಚ ಮುಚ್ಯತೇ ॥ ೨೯.೫೧ ॥

 

 

ಧರ್ಮ ಎನ್ನುವುದು ಅದು ಮಧ್ಯಮ. ವಿದ್ಯೆ ಎಂಬ ದೈವಸಂಪತ್ತಿನ ಗುರಿ ಧರ್ಮ.

ವಿದ್ಯೆ ಎನ್ನುವುದು ಸಾಧ್ಯವೂ ಹೌದು, ಹಾಗೆಯೇ ಅದು ಸಾಧನವೂ ಹೌದು.

ವಿದ್ಯೆಯೇ ಮೋಕ್ಷಸಾಧನವಾದುದು.

 

ಮಾನುಷೋSರ್ತ್ಥೋSಪಿ ವಿದ್ಯಾಯಾಃ ಕಾರಣಂ ಸುಪ್ರಯೋಜಿತಃ ।

ತುಷ್ಟೋSರ್ತ್ಥೇನ ಗುರುರ್ಯ್ಯಸ್ಮಾತ್ ಕೈವಲ್ಯಂ ದಾತುಮಪ್ಯಲಮ್ ॥ ೨೯.೫೨ ॥

 

ಧರ್ಮ್ಮಾರ್ತ್ಥತಾಂ ವಿನಾSಪ್ಯರ್ತ್ಥೈಸ್ತುಷ್ಯೇಯುರ್ಗ್ಗುರುದೇವತಾಃ ।

ಯದ್ಯನುದ್ದೇಶಿತೋ ಧರ್ಮ್ಮೋSಪ್ಯರ್ತ್ಥಮೇವಾನು ಸಂವ್ರಜೇತ್ ॥ ೨೯.೫೩ ॥

 

ಗುರುತಾSರ್ತ್ಥಗತೈವ ಸ್ಯಾತ್ ಕಾಮೋSಸ್ತಾದ್ಧಿ ನಿಷ್ಪಲಃ ।

ಯಮಾವತ್ರ ವಿದಾಂ ಶ್ರೇಷ್ಠಾವರ್ಜ್ಜುನೋಕ್ತಮನೂಚತುಃ ॥ ೨೯.೫೪ ॥

 

ಮಾನುಷ ಸಂಪತ್ತನ್ನು ಸರಿಯಾಗಿ ಬಳಸಿದರೆ, ಅದೂ ಕೂಡಾ ವಿದ್ಯೆಗೆ ಕಾರಣ ಮತ್ತು ಆಸರೆ.

ಸಂಪತ್ತನ್ನು ವಿದ್ಯೆಗಾಗಿ ಬಳಸುವುದರಿಂದ ಗುರುಪ್ರೀತಿಯನ್ನು ಹೊಂದಬಹುದು,

ಮತ್ತು ಪ್ರೀತನಾದ ಗುರುವಿನ ಅನುಗ್ರಹದಿಂದ ಮೋಕ್ಷವನ್ನೂ ಪಡೆಯಬಹುದು.

ಧರ್ಮಕ್ಕೆ ಬಳಸಿದ ಅರ್ಥವು ಕೂಡಾ ಗುರು, ದೇವತೆಗಳನ್ನು ಪ್ರೀತರಾಗಿಸಬಲ್ಲದು.

 

ಧರ್ಮದ ಪ್ರಯೋಜನವನ್ನು ಬಿಟ್ಟು ಬಿಟ್ಟಾಗ, ಕೇವಲ ಅರ್ಥದಿಂದ ಗುರು-ದೇವತೆಗಳನ್ನಾಗ, ಸಂತುಷ್ಟಗೊಳಿಸಬಹುದಾದ ಹಿರಿ ಯೋಗ . ಫಲಾಪೇಕ್ಷೆ ಇಲ್ಲದೇ ಮಾಡುವ ಧರ್ಮವೂ, ಕೂಡಾ ಅರ್ಥವ ತಂದುಕೊಡುವ ಫಲವು. ಈರೀತಿಯಾಗಿ ಅರ್ಥವೇ ಶ್ರೇಷ್ಠ, ಕಾಮ ನಿಷ್ಪಲ ಎಂದವನ ಪ್ರತಿಪಾದನೆ,

ನಕುಲ ಸಹದೇವರ ಕೇಳಲು, ಅವರೂ ಕೊಡುವರದಕ್ಕೆ ಅನುಮೋದನೆ.

 

ಅಥಾSಹ ಭೀಮಃ ಪ್ರವರಃ ಸುತತ್ವದೃಶಾಂ ಸಮಸ್ತಾನಭಿಭಾಷ್ಯ ಹರ್ಷಾತ್ ।

ಸ್ಮಯನ್ ನ ಕಾಮಾದತಿರಿಕ್ತಮಸ್ತಿ ಕಿಞ್ಚಿಚ್ಛುಭಂ ಕ್ವಾವರತಾಂ ಸ ಯಾಯಾತ್ ॥ ೨೯.೫೫ ॥

 

ತದನಂತರ ತತ್ವವೇದಿಗಳಲ್ಲಿ ಅಗ್ರಗಣ್ಯನಾದ, ಭೀಮಸೇನ ಎಲ್ಲರ ಕುರಿತು ಸಂತಸದಿಂದ, ಮುಗುಳ್ನಗುತ್ತಾ ಹೀಗೆ ಮಾತನಾಡುತ್ತಾನೆ-

ಕಾಮಕ್ಕೆ ಮಿಗಿಲಾದ ಪುಣ್ಯವಿಲ್ಲವೆನ್ನುತ್ತಾನೆ. ಹೀಗಿರುವಾಗ ಅದಕ್ಕೆ ಹೇಗೆ ನೀಚತ್ವ?

ಅದು ನಿರ್ಲಕ್ಷಿಸಲಾಗದ ದೊಡ್ದ ತತ್ವ.

 

ಕಾಮ್ಯಂ ಹಿ ಕಾಮಾಭಿಧಮಾಹುರಾರ್ಯ್ಯಾಃ ಕಾಮ್ಯಾಃ ಪುಮರ್ತ್ಥಾಃ ಸಹ ಸಾಧನೈರ್ಯ್ಯತ್ ।

ಅಕಾಮ್ಯತಾಂ ಯಾತ್ಯಪುಮರ್ತ್ಥ ಏವ ಪುಮರ್ತ್ಥಿತತ್ವಾದ್ಧಿ ಪುಮರ್ತ್ಥ ಉಕ್ತಃ ॥ ೨೯.೫೬ ॥

 

ಜ್ಞಾನಿಗಳು ಕಾಮಿಸಲು ಯೋಗ್ಯವಾದುದ್ದನ್ನೇ ಕಾಮವೆಂದು ಹೇಳುತ್ತಾರೆ.

ಎಲ್ಲಾ ಪುರುಷಾರ್ಥಗಳು ನಾವು‘ಬಯಸುವ’. ಅವಿಭಾಜ್ಯವಾದ ಆಸರೆ.

 

(ಒಟ್ಟಿನಲ್ಲಿ ಧರ್ಮ, ಅರ್ಥ ಮತ್ತು ಕಾಮ , ಮತ್ತದರ ಸಾಧನೆ ಸಲಕರಣೆಗಳ ಧಾಮ, ನಾವು ಬಯಸುವುದೇ ಸೃಷ್ಟಿಯ ನಿಯಮ)

 

ಹಾಗಾಗಿ ಕಾಮವೇ ಶ್ರೇಷ್ಠ ಆಗಿರುವುದರಿಂದ, ಪುರುಷಾರ್ಥದ ಅಸ್ತಿತ್ವವೇ ಕಾಮನೆಯಿಂದ. ಕಾಮನೆಯನ್ನು ಬಿಟ್ಟರೆ ಅಸ್ತಿತ್ವದ ಹೇತುವನ್ನೇ ಬಿಟ್ಟಂತೆ. ಹೀಗಾಗಿ ಕಾಮವಿದ್ದಾಗಲೇ ಪುರುಷಾರ್ಥಕ್ಕೆ ಮಾನ್ಯತೆ .

 

[ಅರ್ಥಾತ್- ಧರ್ಮ ಮಾಡಬೇಕು , ಅದರ ಬಯಕೆ ಉದಯಿಸಬೇಕು,

ವಿದ್ಯೆಯೂ ಬೇಕೆಂದು ಬಯಸಬೇಕು,ಕಡೆಗೆ ಮೋಕ್ಷವನ್ನು ಬಯಸಬೇಕು,

ಅದಕ್ಕೆ ಪರಮಾತ್ಮನನ್ನು ಬಯಸಬೇಕು.. ಹೀಗೆ ಬಯಕೆ ಇಲ್ಲದಿದ್ದರೆ ಖಾಲಿ ಸರಕು.]

 

ವಿಜ್ಞಾನಭಕ್ತ್ಯಾದಿಕಮಪ್ಯತೀವ ಸತ್ಸಾಧನಂ ಕಾಮಬಹಿಷ್ಕೃತಂ ಚೇತ್ ।

ನ ಸಾಧನಂ ಸ್ಯಾತ್ ಪರಮೋSಪಿ ಮೋಕ್ಷೋ ನ ಸಾದ್ಧ್ಯತಾಂ ಯಾತಿ ವಿನಾ ಹಿ ಕಾಮಾತ್ ॥ ೨೯.೫೭ ॥

 

ವಿಜ್ಞಾನ, ಭಕ್ತಿ, ಮೊದಲಾದವೂ ಕೂಡಾ ಪುರುಷಾರ್ಥದ ಸಾಧನಗಳು.

ಆದರೆ ಅದು ಕಾಮಬಹಿಷ್ಕೃತಗೊಂಡಿದ್ದರೆ ಸಾಧನ ಕೈಗೆಟುಕದ ಹಣ್ಣಹೋಳು.

ಕೊನೆಯಲ್ಲಿ ಮೊಕ್ಷವೂ ಕೂಡಾ ಬಯಸದೇ ಪಡೆಯಲು ಅಸಾಧ್ಯವಾದ ಪಾಲು.

 

ಪರಾತ್ ಪರೋSಪ್ಯಾದಿಪುಮಾನ್ ಹರಿಶ್ಚ ಸ್ವಸ್ಯೇತರೇಷಾಮಪಿ ಕಾಮ್ಯ ಏವ ।

ಅಕಾಮಿತೋSವಾಗ್ಗತಿಮೇವ ದದ್ಯಾತ್ ಕಾಮಃ ಪುಮರ್ತ್ಥೋSಖಿಲ ಏವ ತೇನ ॥ ೨೯.೫೮ ॥

 

ಮುಖ್ಯವಾಗಿ ಎಲ್ಲರಿಗಿಂತಲೂ ಮಿಗಿಲಾದ ಆದಿಪುರುಷನಾದ ನಾರಾಯಣ,

ಕೂಡಾ ತನಗೆ ಹಾಗೂ  ಪುರುಷಾರ್ಥವನ್ನು ಇಚ್ಛಿಸುವ ಇತರರಿಗೂ ಕಾಮ್ಯಕಾರಣ.

 

(ಪರಮಾತ್ಮನು ನನ್ನ ಪ್ರೀತಿಗೆ ಆಸ್ಪದನು,  ನನ್ನ ಆನಂದಕ್ಕೆ ಅವನೇ- ಕಾರಣನು ,  

ನಾನು ಪ್ರೀತಿಸುತ್ತೇನೆ --ಅವನನ್ನು. ತನಗೆ ತಾನೇ ಕಾಮ್ಯನಾಗಿರುವುದರಿಂದ.

ಭಗವಂತ ಭಗವಂತಗೇ ಪ್ರಿಯವೆಂದು ಸಿದ್ಧ).

 

ಕಾಮ್ಯನಾದ ಪರಮಾತ್ಮನು ತನ್ನನ್ನು ಬಯಸದೇ ಇರುವವರಿಗೆ ಅಧಮವಾದ ಗತಿಯನ್ನು ಕೊಡುತ್ತಾನೆ.

ಹೀಗಾಗಿ (ಕಾಮ್ಯಕ್ಕೆ ಕಾಮ ವಾಚ್ಯತ್ವವು ಇರುವುದರಿಂದ) ಕಾಮವು ಉತ್ತಮ ಪುರುಷಾರ್ಥವೆಂದು ಮಂಡನೆ.   

 

ಇಚ್ಛೈವ ಕಾಮೋSಸ್ತು ತಥಾSಪಿ ನೈತಾಮೃತೇ ಹಿ ಚಿತ್ತ್ವಂ ಘಟಕುಡ್ಯವತ್ ಸ್ಯಾತ್ ।

ಸಾರಸ್ತತಃ ಸೈವ ಚಿದಾತ್ಮಿಕಾSಪಿ ಸಾ ಚೇತನಾ ಗೂಢತನುಃ ಸದೈವ ॥ ೨೯.೫೯ ॥

 

ಕಾಮ ಎಂದರೆ ಬಯಕೆ(ಇಚ್ಛೆ) ಎಂದಿಟ್ಟುಕೊಂಡರೂ ಕೂಡಾ,

ಈ ಇಚ್ಛೆಯನ್ನು ಬಿಟ್ಟು ಚೈತನ್ಯವು ಇರಲಾರದು ಎಂಬುದು ಸಿದ್ಧ.

ಇಚ್ಛೆ ಇಲ್ಲದ ಚೈತನ್ಯ ಮಡಿಕೆ-ಗೋಡೆಗೆ ಸಮ.  

ಆ ಕಾರಣದಿಂದ ಅದೇ ಸಾರದ ನಿಯಮ. 

ಆ ಇಚ್ಛೆ ಜೀವಸ್ವರೂಪಾತ್ಮಕವಾಗಿರುತ್ತದೆ. ಗೂಢವಾಗಿ ಯಾವಾಗಲೂ ಒಳಗಿರುತ್ತದೆ.

 

ನ ಪ್ರಶ್ನಯೋಗ್ಯಃ ಪೃಥಗೇವ ಕಾಮಸ್ತೇನೈಷ ರಾಜನ್ ಯದಿ ತಾರತಮ್ಯಮ್ ।

ಇಚ್ಛಸ್ಯಯಂ ತೇ ತ್ರಿವಿಧೋ ಹಿ ವೇದ್ಯೋ ಧರ್ಮ್ಮಾರ್ತ್ಥಯುಕ್ತಃ ಪರಮೋ ಮತೋSತ್ರ ॥ ೨೯.೬೦ ॥

 

ಏಕಾವಿರೋಧೀ ಯದಿ ಮದ್ಧ್ಯಮೋSಸೌ ದ್ವಯೋರ್ವಿರೋಧೀ ತು ಸ ಏವ ನೀಚಃ ।

ತಸ್ಮಾತ್ ಸ್ವಬುದ್ಧಿಪ್ರಮದಾಭಿರೇವ ಕಾಮಂ ರಮೇಥಾ ಅನುರೂಪಕಾಮಃ ॥ ೨೯.೬೧ ॥

 

ಇಚ್ಛಾರೂಪವಾದ ಕಾಮ ಪ್ರತ್ಯೇಕವಾಗಿ ಪ್ರಶ್ನೆಗೆ ಯೋಗ್ಯವಾದದ್ದೇ ಅಲ್ಲ.

ತಾರತಮ್ಯ ಬಯಸುವುದಾದರೆ ತಿಳೀಬೇಕು ಮೂರು ತರದ ಕಾಮಗಳನ್ನೆಲ್ಲ.

ಆ ಮೂರರಲ್ಲಿ ಧರ್ಮ ಹಾಗೂ ಅರ್ಥಗಳಿಂದ ಕೂಡಿರುವ ಕಾಮ ಉತ್ತಮ.

ಪುರುಷಾರ್ಥದಲ್ಲಿ ಒಂದಕ್ಕೆ ವಿರುದ್ಧವಾಗಿದ್ದರೆ  ಅದು ಕರೆಯಲ್ಪತ್ತದೆ ಮಧ್ಯಮ.

ಎರಡಕ್ಕೂ ವಿರುದ್ಧವಾಗಿದ್ದರೆ ಅದು ನೀಚ  ಅಥವಾ ಆಗುತ್ತದೆ ಅಧಮ.

ನಮ್ಮ ಯೋಗ್ಯತೆಗೆ ತಕ್ಕ ಕಾಮನೆಗಳನ್ನಿಟ್ಟುಕೊಳ್ಳಬೇಕು,

ಬುದ್ಧಿಯೆಂಬ ಹೆಣ್ಣುಗಳಿಂದ ಚೆನ್ನಾಗಿ ಕ್ರೀಡಿಸಬೇಕು.

[‘ಕಾಮ ಎನ್ನುವುದು ಬೇಕೇ ಬೇಕು. ಕಾಮವೆನ್ನುವುದೇ ಪುರುಷಾರ್ಥ’ ,

ಎಂದು ಹೇಳುತ್ತಾನೆ ಭೀಮನಾಗಿ ಅವತರಿಸಿದ ವಾಯುಸುತ.

ಈ ಮಾತಿನ ತಾತ್ಪರ್ಯ ಶಾಂತಿಪರ್ವದಲ್ಲಿ ಆಚಾರ್ಯರಿಂದ ವಿಸ್ತೃತ .

ಪುರಂದರದಾಸರು ಹಾಡುತ್ತಾರೆ ‘ಹೆಂಡತಿ ಪ್ರಾಣ ಹಿಂಡುತಿ’ ಎಂದು,

ಪುರಂದರದಾಸರು ಬಳಸಿದ ಪದ ಹೆಂಡತಿ ಎಂದರೆ ಬುದ್ಧಿ ಎಂಬ ಬಂಧು.

ಭಾಗವತದಲ್ಲಿ- ‘ಬುದ್ಧಿಂ ತು ಪ್ರಮದಾಂ ವಿದ್ಯಾತ್’ (ಭಾಗವತ ೪.೨೯.೫)) ಎಂದು ಹೇಳಿರುವುದು ಕಾಣುತ್ತದೆ.

ಪರಮಾತ್ಮನಲ್ಲಿ ಅನ್ಯತಾ ಬುದ್ಧಿ ಏನಿದೆ, ಅದನ್ನೇ ಗೂಢಭಾಷೆಯಲ್ಲಿ ಸ್ತ್ರೀ ಎಂದು ಭಾಗವತದಲ್ಲಿ ಕರೆಯಲ್ಪಟ್ಟಿದೆ.

ಹೀಗಾಗಿ ಸ್ತ್ರೀಯರನ್ನು ಬಿಡಬೇಕು ಎಂದರೆ- ಪರಮಾತ್ಮನಲ್ಲಿ ವಿಪರೀತವಾದ ಪ್ರಜ್ಞೆಯನ್ನು ಬಿಡಬೇಕು ಎಂದರ್ಥ. 

ನಾವು ಈ ಅರ್ಥದ ಹಿನ್ನೆಲೆಯಲ್ಲಿ ವಿವೇಚಿಸಿ ಅರ್ಥ ಮಾಡಿಕೊಳ್ಳಬೇಕು ಭೀಮಸೇನನ ಆ ಮಾತಿನ ಅಂತರಾರ್ಥ].

 

ರಾಜನ್ ನ ಕಾಮಾದಪರಂ ಶುಭಂ ಹಿ ಪರೋ ಹಿ ಕಾಮೋ ಹರಿರೇವ ಯೇನ ।

‘ಪ್ರಾಜ್ಞಃ ಸುಹೃಚ್ಚನ್ದನಸಾರಲಿಪ್ತೋ ವಿಚಿತ್ರಮಾಲ್ಯಾಭರಣೈರುಪೇತಃ ।

ಇದಂ ವಚೋ ವ್ಯಾಸಸಮಾಸಯುಕ್ತಂ ಸಮ್ಪ್ರೋಚ್ಯ ಭೀಮೋ ವಿರರಾಮ ವೀರಃ’ ॥ ೨೯.೬೨ ॥

 

ರಾಜನ್, ಕಾಮಕ್ಕಿಂತ ಮಿಗಿಲಾದ ಮಂಗಳಕರವಾದದ್ದು ಇಲ್ಲವೇ ಇಲ್ಲ. ಪರಮಾತ್ಮನೇ ಕಾಮ ಸಾಧನನಷ್ಟೇ;           ಭಗವಂತ ಪ್ರಾಜ್ಞಃ, ಸುಹೃತ್, ಚಂದನ ಲೇಪಿತ, ವಿಚಿತ್ರವಾದ ಆಭರಣಗಳಿಂದ ಅವನು ರಮಿಸುವ ದೈವೀ ಚೇಷ್ಟೆ.

 

ಇಂತಹ ಪರಮಾತ್ಮನೇ ಕಾಮಗಳಲ್ಲಿ ಅತ್ಯುತ್ತಮ ಕಾಮನಾಗಿರುವುದರಿಂದ,                              ಕಾಮಕ್ಕಿಂತ  ಉತ್ತಮವಾದುದು ಇನ್ನೊಂದಿಲ್ಲ ಎಂಬ ಮಾತು ಬರುತ್ತದೆ ಭೀಮಸೇನನಿಂದ.

             

(ಪರಮಾತ್ಮನೇ ಕಾಮ್ಯವಾಗಿರುವುದರಿಂದ, ಪರಮಾತ್ಮನ ಭಕ್ತರೇ ಅವನ ಮಿತ್ರವೃಂದ. ‘ದ್ವಾ ಸುಪರ್ಣಾ ಸಯುಜಾಸಖಾಯಾ’  ಎನ್ನುವ ಉಪನಿಷತ್ತಿನ ಮಾತು, ಭಾಗವತದಲ್ಲಿ ಬರುವ ‘ತಸ್ಯಾವಿಜ್ಞಾತನಾಮಾSSಸೀತ್ ಸಖಾSವಿಜ್ಞಾತಚೇಷ್ಟಿತಃ’(೪.೨೫.೧೦) ಎನ್ನುವ ಪುರಂಜನನ ಕಥೆ;

ಇವೆಲ್ಲವೂ ನಮ್ಮ ಆತ್ಮೀಯ ಸ್ನೇಹಿತ, ನಮ್ಮೊಂದಿಗಿರುವ ಕೃಷ್ಣನೇ ನಮ್ಮ ಪರಮಧ್ಯೇಯವೆನ್ನುತ್ತದೆ ಶಾಸ್ತ್ರ ಸಂಹಿತೆ).

 

ಇದೇ ರೀತಿಯ ಮಾತನ್ನು ಸಂಕ್ಷಿಪ್ತ ಮತ್ತೆ ವಿಸ್ತಾರವಾಗಿ,

ಹೇಳಿದ ಭೀಮ ಮುಗಿಸಿದ ತನ್ನ ಮಾತನ್ನು ಅಂತಿಮವಾಗಿ.

 

ಪ್ರಶಸ್ಯ ಭೀಮಮನ್ಯಾಂಶ್ಚ ರಾಜಾ ಮೋಕ್ಷಮಥಾಸ್ತುವತ್ ।

ಸ್ವಯುಕ್ತೇರಪ್ರತೀಪತ್ವಾನ್ನಿರಾಚಕ್ರೇ ನ ಮಾರುತಿಃ ॥ ೨೯.೬೩ ॥

 

ಧರ್ಮರಾಜನು ಉಳಿದವರನ್ನೂ, ಭೀಮಸೇನನನ್ನೂ ಹೊಗಳಿದ,

ಮೋಕ್ಷವನ್ನು ಸ್ತೋತ್ರಮಾಡಿದ ಅದೇ ಶ್ರೇಷ್ಠ ಎಂದು ಪ್ರತಿಪಾದಿಸಿದ .

ಅಲ್ಲಿ ಹೇಳಿದ ಎಲ್ಲಾ ಯುಕ್ತಿಗಳು ತನ್ನ ಯುಕ್ತಿಗೆ ವಿರುದ್ಧವಾಗದಿರುವುದರಿಂದ,              

ಭೀಮಸೇನ ಯುಧಿಷ್ಠಿರನ ಮಾತನ್ನು ನಿರಾಕರಣೆ ಮಾಡದೇ ಸುಮ್ಮನಿದ್ದ.

 

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಸಮಸ್ತಧರ್ಮ್ಮಸಙ್ಗ್ರಹೋನಾಮ ಏಕೋನತ್ರಿಂಶೋSದ್ಧ್ಯಾಯಃ ॥

 

[ ಆದಿತಃ ಶ್ಲೋಕಾಃ ೪೬೮೨+೬೩=೪೭೪೫ ]

 

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತಾತಾತ್ಪರ್ಯನಿರ್ಣಯದ ಭಾವಾನುವಾದ,

ಸಮಸ್ತಧರ್ಮಸಂಗ್ರಹ ಹೆಸರಿನ ಇಪ್ಪತೊಂಬತ್ತನೇ ಅಧ್ಯಾಯ,

ಶ್ರೀಕೃಷ್ಣ - ಭೀಮಸೇನರ ಅಡಿಗಳಿಗೆ ಸಮರ್ಪಿಸಿದ ಧನ್ಯತಾ ಭಾವ.

 

*********


No comments:

Post a Comment

ಗೋ-ಕುಲ Go-Kula