Saturday 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 28: 01-30

 

ಅಧ್ಯಾಯ ಇಪ್ಪತ್ತೆಂಟು[ಪಾಣ್ಡವರಾಜ್ಯಲಾಭಃ]

 

̐

ಪ್ರಭಾತಾಯಾಂ ತು ಶರ್ವರ್ಯ್ಯಾಂ ಗುರುಪುತ್ರಾನುಮೋದಿತಃ ।

ಶಲ್ಯಂ ಸೇನಾಪತಿಂ ಕೃತ್ವಾ ಯೋದ್ಧುಂ ದುರ್ಯ್ಯೋಧನೋSಭ್ಯಯಾತ್ ॥೨೮.೦೧॥

 

ರಾತ್ರಿ ಕಳೆದು ಬೆಳಗಾಗುತ್ತಿರಲು ಅಂದಿನ ದಿನವಾಗಿತ್ತು ಮಹಾಭಾರತ ಯುದ್ಧದ ಹದಿನೆಂಟನೇ ದಿನ,

ಅಶ್ವತ್ಥಾಮರ ಅನುಮತಿ ಪಡೆದು, ಶಲ್ಯನ ಸೇನಾಪತಿ ಮಾಡಿ ಯುದ್ಧಕ್ಕೆ ಹೊರಟ ದುರ್ಯೋಧನ.

 

ತಮಭ್ಯಯುಃ ಪಾಣ್ಡವಾಶ್ಚ ಹೃಷ್ಟಾ ಯುದ್ಧಾಯ ದಂಸಿತಾಃ ।

ತತ್ರಾSಸೀತ್ ಸುಮಹದ್ ಯುದ್ಧಂ ಪಾಣ್ಡವಾನಾಂ ಪರೈಃ ಸಹ ॥೨೮.೦೨॥

 

ಪಾಂಡವರಾದರೋ, ಅತ್ಯಂತ ಸಂತಸದಿಂದ, ತಮ್ಮ ಕವಚಗಳನ್ನು ತೊಟ್ಟು ಬಂದರು ಯುದ್ಧಕ್ಕೆಂದು,

ಪಾಂಡವರಿಗೆ ಇತರ ಕೌರವರ ಜೊತೆ ಘೋರವಾದ ಯುದ್ಧ ನಡೆಯಿತು ಆ ಹದಿನೆಂಟನೇ ದಿನದಂದು.

 

ಅಗ್ರೇ ಭೀಮಃ ಪಾಣ್ಡವಾನಾಂ ಮದ್ಧ್ಯೇ ರಾಜಾ ಯುಧಿಷ್ಠಿರಃ ।

ಪೃಷ್ಠೇ ಗಾಣ್ಡೀವಧನ್ವಾSSಸೀದ್ ವಾಸುದೇವಾಭಿರಕ್ಷಿತಃ ॥೨೮.೦೩॥

 

ಚಕ್ರರಕ್ಷೌ ಯಮೌ ರಾಜ್ಞೋ ಧೃಷ್ಟದ್ಯುಮ್ನಶ್ಚ ಸಾತ್ಯಕಿಃ ।

ನೃಪಸ್ಯ ಪಾರ್ಶ್ವಯೋರಾಸ್ತಾಮಗ್ರೇSನ್ಯೇಷಾಂ ಗುರೋಃ ಸುತಃ ॥೨೮.೦೪॥

 

ಮದ್ಧ್ಯೇ ಶಲ್ಯಃ ಪೃಷ್ಠತೋSಭೂದ್ ಭ್ರಾತೃಭಿಶ್ಚ ಸುಯೋಧನಃ ।

ಚಕ್ರರಕ್ಷೌ ತು ಶಲ್ಯಸ್ಯ ಶಕುನಿಸ್ತತ್ಸುತಸ್ತಥಾ ॥೨೮.೦೫॥

 

ಕೃಪಶ್ಚ ಕೃತವರ್ಮ್ಮಾ ಚ ಪಾರ್ಶ್ವಯೋಃ ಸಮವಸ್ಥಿತೌ ।

ತತ್ರಾಭವನ್ಮಹದ್ ಯುದ್ಧಂ ಭೀಮಸ್ಯ ದ್ರೌಣಿನಾ ಸಹ  ॥೨೮.೦೬॥

 

ಭೀಮನಿದ್ದ ಪಾಂಡವರ ಮುಂಭಾಗದಲ್ಲಿ, ರಾಜ ಯುಧಿಷ್ಠಿರನಿದ್ದ ಮಧ್ಯಭಾಗದಲ್ಲಿ,         

ಗಾಣ್ಡೀವಧಾರಿ ಅರ್ಜುನನಿದ್ದ ಹಿಂಭಾಗದಲ್ಲಿ, ಶ್ರೀಕೃಷ್ಣನಿಂದ ರಕ್ಷಿಸಲ್ಪಟ್ಟವನಾಗಿ ಇದ್ದನಲ್ಲಿ.                                              ಯುಧಿಷ್ಠಿರನ ಚಕ್ರರಕ್ಷಕರಾಗಿ ನಕುಲ-ಸಹದೇವರಿದ್ದರು.

ಧೃಷ್ಟದ್ಯುಮ್ನ ಸಾತ್ಯಕಿಯರು ರಕ್ಷಣೆಗೆ ಯುಧಿಷ್ಠಿರನ ಪಾರ್ಶ್ವದಲ್ಲಿದ್ದರು.

ಹಾಗೆಯೇ ಗುರುಸುತ ಅಶ್ವತ್ಥಾಮ ಇತರರಾದ ಕೌರವರ ಮುಂಭಾಗದಲ್ಲಿ ,

ಮಧ್ಯದಿ ಶಲ್ಯ, ತಮ್ಮಂದಿರರಿಂದ ಕೂಡಿದ ಸುಯೋಧನ ಕಡೆಯ ಹಿಂಭಾಗದಲ್ಲಿ.

ಶಲ್ಯನ ಚಕ್ರ ರಕ್ಷಣೆಗೆ ಶಕುನಿ ಮತ್ತವನ ಮಗ, ಕೃಪ ಕೃತವರ್ಮ ಇಬ್ಬರಿದ್ದದ್ದು ಪಾರ್ಶ್ವಭಾಗ .

ಅಲ್ಲಿ ಭೀಮ ಅಶ್ವತ್ಥಾಮರ ಮಧ್ಯ,ನಡೆಯಿತು ಬಹಳ ಮಹತ್ತಾದ ಯುದ್ಧ. 

 

ರಾಜ್ಞಃ ಶಲ್ಯೇನ ಚ ತಥಾ ಘೋರರೂಪಂ ಭಯಾನಕಮ್ ।

ತತ್ರ ನಾತಿಪ್ರಯತ್ನೇನ ದ್ರೌಣಿರ್ಭೀಮೇನ ಸಾಯಕೈಃ  ॥೨೮.೦೭॥

 

ವಿರಥೀಕೃತಸ್ತಥಾ ಧರ್ಮ್ಮಸೂನುಃ ಶಲ್ಯೇನ ತತ್ಕ್ಷಣಾತ್ ।

ಆಸಸಾದ ತದಾ ಶಲ್ಯಂ ಕಪಿಪ್ರವರಕೇತನಃ ॥೨೮.೦೮॥

 

ಧರ್ಮರಾಜನಿಗೆ ಶಲ್ಯನೊಂದಿಗೆ ನಡೆಯಿತು ಘೋರವಾದ, ಭಯಾನಕ ಯುದ್ಧ,

ಯಾವುದೇ ಪ್ರಯಾಸವಿಲ್ಲದೇ ಭೀಮನ ಬಾಣಗಳಿಂದ ಅಶ್ವತ್ಥಾಮ ರಥಹೀನನಾದ.

ಹಾಗೆಯೇ ಶಲ್ಯನಿಂದ ತತ್ಕ್ಷಣದಲ್ಲಿ ಧರ್ಮರಾಜನು ರಥಹೀನನಾದ.

ಆಗ ಶ್ರೇಷ್ಠ ಕಪಿ ಹನುಮಧ್ವಜನಾದ ಅರ್ಜುನನು ಶಲ್ಯನನ್ನು ಹೊಂದಿದ.

 

ತಯೋರಾಸೀನ್ಮಹದ್ ಯುದ್ಧಮದ್ಭುತಂ ರೋಮಹರ್ಷಣಮ್ ।

ರಥಮನ್ಯಂ ಸಮಾಸ್ಥಾಯ ದ್ರೌಣಿರ್ಭೀಮಂ ಸಮಭ್ಯಯಾತ್ ॥೨೮.೦೯॥

 

ನಡೆಯಿತು ಶಲ್ಯ ಹಾಗೂ ಅರ್ಜುನರಿಬ್ಬರ ಮಧ್ಯ, ವಿಸ್ಮಯ,ರೋಮಾಂಚಕಾರಿ, ಭಯಂಕರ ಯುದ್ಧ .

ಇತ್ತ ಅಶ್ವತ್ಥಾಮ ಇನ್ನೊಂದು ರಥವನ್ನೇರಿದ, ಮತ್ತೆ ಭೀಮಸೇನನಿಗೆ ಎದುರಾಗಿ ಬಂದ.

 

ದುರ್ಯ್ಯೋಧನಶ್ಚ ಭೀಮಸ್ಯ ಶರೈರಾವಾರಯದ್ ದಿಶಃ ।

ತಾವುಭೌ ಶರವರ್ಷೇಣ ವಾರಯಾಮಾಸ ಮಾರುತಿಃ ॥೨೮.೧೦॥

 

ದುರ್ಯೋಧನನೂ ಕೂಡಾ ಭೀಮನ ಸುತ್ತಲೂ ಬಾಣಗಳಿಂದ ಮುಚ್ಚಿದ.

ಆಗ ಅಶ್ವತ್ಥಾಮ ಮತ್ತು ದುರ್ಯೋಧನರನ್ನು  ಭೀಮ ತನ್ನ ಬಾಣಗಳಿಂದ ತಡೆದ.

 

ತಾಭ್ಯಾಂ ತಸ್ಯಾಭವದ್ ಯುದ್ಧಂ ಸುಘೋರಮತಿಮಾನುಷಮ್ ।

ದುರ್ಯ್ಯೋಧನಸ್ಯಾವರಜಾನ್ ದ್ರೌಪದೇಯಾ ಯುಯುತ್ಸುನಾ ॥೨೮.೧೧॥

 

ಶಿಖಣ್ಡ್ಯಾದ್ಯೈರ್ಮ್ಮಾತುಲೈಶ್ಚ ಸಹ ಸರ್ವಾನ್ ನ್ಯವಾರಯನ್ ।

ಸಹದೇವಸ್ತು ಶಕುನಿಮುಲೂಕಂ ನಕುಲಸ್ತದಾ  ॥೨೮.೧೨॥

 

ಧೃಷ್ಟದ್ಯುಮ್ನಶ್ಚ ಹಾರ್ದ್ದಿಕ್ಯಂ ಸಾತ್ಯಕಿಃ ಕೃಪಮೇವ ಚ ।

ತೇಷಾಂ ತದಭವದ್ ಯುದ್ಧಂ ಚಿತ್ರಂ ಲಘು ಚ ಸುಷ್ಠು ಚ ॥೨೮.೧೩॥

 

ಭೀಮ ಮತ್ತು ಅವರಿಬ್ಬರ ನಡುವೆ ಅತ್ಯಂತ ಘೋರವಾದ,

ನಡೆಯಿತು ಆಗ ಅಲ್ಲಿ ಅತಿಮಾನುಷವಾದ ಯುದ್ಧ.

ದುರ್ಯೋಧನನ ತಮ್ಮಂದಿರರನ್ನು ದ್ರೌಪದಿಯ ಪುತ್ರರು,

ಯುಯುತ್ಸುವಿನೊಂದಿಗೆ ಕೂಡಿಕೊಂಡು, ಎದುರಿಸಿದರು,

ಶಿಖಂಡಿ ಮೊದಲಾದ ಮಾವಂದಿರೊಂದಿಗೆ ಸೇರಿ  ತಡೆದರು. 

ಸಹದೇವನು ಎದುರಿಸಿದ ಶಕುನಿಯನ್ನು, ನಕುಲ ಉಲೂಕ ಎಂಬ ಶಕುನಿಪುತ್ರನನ್ನು.

ಧೃಷ್ಟದ್ಯುಮ್ನ ಎದುರಿಸಿದ ಕೃತವರ್ಮನನ್ನು, ಸಾತ್ಯಕಿ ಎದುರಿಸಿದ ಕೃಪಾಚಾರ್ಯರನ್ನು.

ಅವರ ನಡುವೆ ನಡೆದ ಆ ಯುದ್ಧ ಆಶ್ಚರ್ಯಕರ, ವೇಗಭರಿತ ಆಗಿತ್ತು.

ಪ್ರಾಣವನ್ನು ತೆಗೆಯುವಷ್ಟು ಮಟ್ಟದ ಗಟ್ಟಿ ನಿರ್ಧಾರವನ್ನು ಹೊಂದಿತ್ತು. 

 

ಶಲ್ಯಸ್ತು ಶರಸಙ್ಘಾತೈಃ ಪಾರ್ತ್ಥಸ್ಯಾSವಾರಯದ್ ದಿಶಃ ।

ಸೋSಪಿ ವಿವ್ಯಾಧ ವಿಶಿಖೈಃ ಶಲ್ಯಮಾಹವಶೋಭಿನಮ್ ॥೨೮.೧೪॥

 

ಶಲ್ಯನಾದರೋ ಬಾಣಗಳಿಂದ ಅರ್ಜುನನ ದಿಕ್ಕುಗಳನ್ನು ತಡೆದ.

ಅರ್ಜುನ ಯುದ್ಧದಿ ಶೋಭಿಸುತ್ತಿದ್ದ ಶಲ್ಯನನ್ನು ಬಾಣಗಳಿಂದ ಹೊಡೆದ.

 

ತಯೋಃ ಸುಸಮಮೇವಾSಸೀಚ್ಚಿರಂ ದೇವಾಸುರೋಪಮಮ್ ।

ತತಃ ಶರಂ ವಜ್ರನಿಭಂ ಮದ್ರರಾಜಃ ಸಮಾದದೇ ॥೨೮.೧೫॥

 

ಅವರಿಬ್ಬರಿಗೂ ನಡೆದ ಯುದ್ಧವದು ಧೀರ್ಘಕಾಲ,

ದೇವತೆಗಳಿಗೆ ಮತ್ತು ಅಸುರರಿಗೆ ಆದ ಯುದ್ಧಕೌಶಲ.

ನಡೆಯಿತು ದೇವತಾಸುರ ಸದೃಶವಾದ  ಸಮಯುದ್ಧ .

ಆನಂತರ ಶಲ್ಯ ವಜ್ರಾಯುಧಕ್ಕೆ ಸಮನಾದ ಬಾಣವನೆತ್ತಿದ.

 

ತೇನ ವಿವ್ಯಾಧ ಬೀಭತ್ಸುಂ ಹೃದಯೇ ಸ ಮುಮೋಹ ಚ ।

ಉಪಲಭ್ಯ ಪುನಃ ಸಂಜ್ಞಾಂ ವಾಸವಿಃ ಶತ್ರುತಾಪನಃ  ॥೨೮.೧೬॥

 

ಚಿಚ್ಛೇದ ಕಾರ್ಮ್ಮುಕಂ ಸಙ್ಖೇ ಮದ್ರರಾಜಸ್ಯ ಧೀಮತಃ ।

ಸೋSನ್ಯತ್ ಕಾರ್ಮ್ಮುಕಮಾದಾಯ ಮುಮೋಚಾಸ್ತ್ರಾಣಿ ಫಲ್ಗುನೇ ॥೨೮.೧೭॥

 

ಆ ಬಾಣದಿಂದ ಶಲ್ಯ ಅರ್ಜುನನೆದೆಗೆ ಹೊಡೆದ.

ಆಗ ಅದರಿಂದ ಅರ್ಜುನ ಮೂರ್ಛೆ ಹೊಂದಿದ.

ಶತ್ರುಗಳನ್ನು ಕಂಗೆಡಿಸುವ ಆ  ಅರ್ಜುನ ಮತ್ತೆ ಅರಿವನ್ನು ಪಡೆದ,

ಬುದ್ಧಿವಂತನಾದ ಶಲ್ಯನ ಬಿಲ್ಲನ್ನು ಯುದ್ಧದಲ್ಲಿ ಕತ್ತರಿಸಿದ.

ಶಲ್ಯನಾದರೋ, ಇನ್ನೊಂದು ಬಿಲ್ಲನ್ನು ತೆಗೆದುಕೊಂಡ,

ಅರ್ಜುನನ ಮೇಲೆ ಅಸ್ತ್ರಗಳನ್ನು ಪ್ರಯೋಗ ಮಾಡಿದ.

 

ಸೌರಂ ಯಾಮ್ಯಂ ಚ ಪಾರ್ಜ್ಜನ್ಯಂ ತಾನ್ಯೈನ್ದ್ರೇಣ ಜಘಾನ ಸಃ ।

ಪುನರ್ನ್ನ್ಯಕೃನ್ತತ್ ತಚ್ಚಾಪಮಿನ್ದ್ರಸೂನುರಮರ್ಷಿತಃ ॥೨೮.೧೮॥

 

ಶಲ್ಯ ಬಿಟ್ಟ ಸೂರ್ಯ,ಯಮ,ಪರ್ಜನ್ಯ ಅಸ್ತ್ರ, ಅರ್ಜುನ ನಾಶಪಡಿಸಿದ ಬಿಟ್ಟು ಇಂದ್ರಾಸ್ತ್ರ .

ಮುನಿದ ಆ ಇಂದ್ರನ ಮಗನಾದ ಅರ್ಜುನ, ಮತ್ತೆ ಕತ್ತರಿಸಿ ಹಾಕುತ್ತಾನೆ ಶಲ್ಯನ ಬಿಲ್ಲನ್ನ.

 

ಶಲ್ಯೋ ಗದಾಂ ಸಮಾವಿದ್ಧ್ಯ ಚಿಕ್ಷೇಪಾರ್ಜ್ಜುನವಕ್ಷಸಿ ।

ತದಾ ಮುಮೋಹ ಬೀಭತ್ಸುಸ್ತತ ಉಚ್ಚುಕ್ರುಶುಃ ಪರೇ ॥೨೮.೧೯॥

 

ಶಲ್ಯನು ತನ್ನ ಗದೆಯನ್ನು ತಿರುಗಿಸಿದ, ಅರ್ಜುನನೆದೆಗೆ ಗುರಿಯಿಟ್ಟು ಹೊಡೆದ.

ಆಗ ಅರ್ಜುನನು ಮೂರ್ಛೆಹೋದ.ಇದನ್ನು ಕಂಡು ಶತ್ರುಗಳಿಗೆ ಸಂತೋಷ,

ಗಟ್ಟಿಯಾಗಿ ಮಾಡಿದರು ಜಯಘೋಷ .

 

ಪ್ರಾಪ್ಯ ಸಞ್ಜ್ಞಾಂ ಪುನಃ ಪಾರ್ತ್ಥಃ ಶಲ್ಯಂ ವಿವ್ಯಾಧ ವಕ್ಷಸಿ ।

ಸ ವಿಹ್ವಲಿತಸರ್ವಾಙ್ಗಃ ಶಿಶ್ರಿಯೇ ಧ್ವಜಮುತ್ತಮಮ್ ॥೨೮.೨೦॥

 

ಮೂರ್ಛೆಯಿಂದ ಅರ್ಜುನ ಚೇತರಿಸಿಕೊಂಡ, ಮತ್ತೆ  ಶತ್ರು ಶಲ್ಯನ ವಕ್ಷಸ್ಥಳಕ್ಕೆ ಹೊಡೆದ.

ಶಲ್ಯನೋ ನೊಂದ ಅವಯವವುಳ್ಳವನಾದ, ಧ್ವಜದ ದಂಡವನ್ನು ಹಿಡಿದುಕೊಂಡು ನಿಂದ.

 

ಸಮಾಶ್ವಸ್ತಃ ಪುನರ್ಬಾಣಂ ಯಮದಣ್ಡನಿಭಂ ರಣೇ ।

ಮುಮೋಚ ಪಾರ್ತ್ಥಸ್ಯ ಸ ಚ ನಿರ್ಬಿಭೇದ ಸ್ತನಾನ್ತರಮ್ ॥೨೮.೨೧॥

 

ಪುನಃ ಶಲ್ಯನು ಚೇತರಿಸಿಕೊಂಡ , ಬಿಟ್ಟ ಬಾಣವದು ಸದೃಶ ಯಮದಂಡ.

ಅರ್ಜುನನ ಮೇಲೆ ಬಿಟ್ಟ ಆ ತೀಕ್ಷ್ಣಬಾಣ , ಮಾಡಿತು ಅರ್ಜುನನ ಎದೆಭಾಗದ ಛೇದನ.

 

ತೇನ ವಿಹ್ವಲಿತಃ ಪಾರ್ತ್ಥೋ ಧ್ವಜಯಷ್ಟಿಂ ಸಮಾಶ್ರಿತಃ ।

ಸಮಾಶ್ವಸ್ತಃ ಪ್ರಚಿಚ್ಛೇದ ಮದ್ರರಾಜಸ್ಯ ಕಾರ್ಮ್ಮುಕಮ್ ॥೨೮.೨೨॥

 

ಅದರಿಂದ ನೊಂದ ಅರ್ಜುನನು ಧ್ವಜದಂಡವನ್ನು ಹಿಡಿದುಕೊಂಡ.

ಸ್ವಲ್ಪ ಹೊತ್ತು ವಿರಮಿಸಿ ಚೇತರಿಸಿಕೊಂಡ ಅರ್ಜುನ ಶಲ್ಯನ ಬಿಲ್ಲನ್ನು ಮತ್ತೆ ಕತ್ತರಿಸಿದ.

 

ಛತ್ರಂ ಧ್ವಜಂ ಚ ತರಸಾ ಸಾರಥಿಂ ಚ ನ್ಯಪಾತಯತ್ ।

ತದಾSನ್ಯಂ ರಥಮಾಸ್ಥಾಯ ಧರ್ಮ್ಮರಾಜಃ ಶರೋತ್ತಮೈಃ ॥೨೮.೨೩॥

 

ಚತುರ್ಭಿಶ್ಚತುರೋ ವಾಹಾಞ್ಛಲ್ಯಸ್ಯ ನಿಜಘಾನ ಹ ।

ಶಲ್ಯೋSನ್ಯಂ ರಥಮಾಸ್ಥಾಯ ಸರ್ವಾಂಸ್ತಾಞ್ಛರವೃಷ್ಟಿಭಿಃ ॥೨೮.೨೪॥

 

ಛಾದಯಾಮಾಸ ರಾಜಾನಂ ವಿರಥಂ ಚ ಚಕಾರ ಹ ।

ನಿಹತ್ಯಾಶ್ವಾನ್ ಸಾತ್ಯಕೇಶ್ಚ ಧೃಷ್ಟದ್ಯುಮ್ನಸ್ಯ ಚಾಭಿಭೂಃ ।

ಚಾಪೇ ಚ್ಛಿತ್ವಾ ಚ ಯಮಯೋರ್ದ್ದಧ್ಮೌ ಶಙ್ಖಂ ಮಹಾಸ್ವನಮ್ ॥೨೮.೨೫॥

 

ಆಗ ಅರ್ಜುನ ಶಲ್ಯನ ಛತ್ರವ ಮುರಿದ,  ಅವನ ಧ್ವಜವನ್ನೂ ಹರಿದು ಹಾಕಿದ,

ಅವನ ಸಾರಥಿಯನ್ನೂ ಕೊಂದುಹಾಕಿದ.

ಆಗ ಹಿಂದೆ ಶಲ್ಯನಿಂದ ರಥಹೀನನಾಗಿದ್ದ ಧರ್ಮಜ ಬೇರೊಂದು ರಥವನ್ನೇರಿ ಬಂದ,

ನಾಲ್ಕು ಉತ್ಕೃಷ್ಟ ಬಾಣಗಳಿಂದ ಶಲ್ಯನ ನಾಲ್ಕು ಕುದುರೆಗಳನ್ನು ಕೊಂದುಹಾಕಿದ.

ಶಲ್ಯನು ಇನ್ನೊಂದು ರಥವನ್ನೇರಿ ಬಂದು ಅವರೆಲ್ಲರನ್ನೂ ಬಾಣಗಳಿಂದ ಮುಚ್ಚಿದ.

ಧರ್ಮರಾಜನನ್ನು ಶಲ್ಯ ಮತ್ತೆ ರಥಹೀನನನ್ನಾಗಿ ಮಾಡಿದ.

ಸಾತ್ಯಕಿಯ ಮತ್ತು ಧೃಷ್ಟದ್ಯುಮ್ನನ ಅಶ್ವಗಳನ್ನು ಶಲ್ಯ ಕೊಂದುಹಾಕಿದ,

ನಕುಲ ಸಹದೇವರ ಬಿಲ್ಲುಗಳ ಕತ್ತರಿಸಿ ಶಲ್ಯ ಮಹಾಧ್ವನಿಯುಳ್ಳ ಶಂಖವನ್ನೂದಿದ.

 

ತತಸ್ತು ಶಲ್ಯಂ ಸಮುದೀರ್ಯ್ಯಮಾಣಂ ದೃಷ್ಟ್ವಾ ರಣೇ ಭೀಮಸೇನಸ್ತರಸ್ವೀ ।

ನ್ಯವಾರಯದ್ ಬಾಣವರೈರನೇಕೈಶ್ಚಕಾರ ಚೈನಂ ವಿರಥಂ ಕ್ಷಣೇನ ॥೨೮.೨೬॥

 

ಆನಂತರ ಭೀಮಸೇನ ನುಗ್ಗುತ್ತಿರುವ ಶಲ್ಯನನ್ನು ಕಂಡ ,

ಪರಾಕ್ರಮಿ ಭೀಮ ಅನೇಕ ಬಾಣಗಳಿಂದ ಅವನನ್ನು ತಡೆದ.

ಶಲ್ಯನನ್ನು ಭೀಮ ಕ್ಷಣದಲ್ಲಿ ರಥಹೀನನನ್ನಾಗಿ ಮಾಡಿದ. 

 

ಆಸ್ಥಾಯ ಚಾನ್ಯಂ ರಥಮಾಪತನ್ತಂ ಪುನಶ್ಚ ಶಲ್ಯಂ ಭೃಶಮೇವ ಮರ್ಮ್ಮಸು ।

ನಿರ್ಭಿದ್ಯ ಬಾಣೈರ್ವಿರಥಂ ಚಕಾರ ಪುನಸ್ತೃತೀಯಂ ಚ ರಥಂ ರುರೋಜ ॥೨೮.೨೭॥

 

ಪುನಃ ಇನ್ನೊಂದು ರಥವನ್ನೇರಿ  ಶಲ್ಯ ಬರುತ್ತಾನೆ ,

ಮರ್ಮಸ್ಥಾನಕ್ಕೆ ಬಾಣಗಳಿಂದ ಭೀಮ ಹೊಡೆಯುತ್ತಾನೆ.

ಭೀಮಸೇನ, ಮತ್ತೆ ಅವನನ್ನು ರಥಹೀನನನ್ನಾಗಿ ಮಾಡುತ್ತಾನೆ.

ಪುನಃ ರಥವನ್ನೇರಿ ಬಂದ ಶಲ್ಯನ ಮೂರನೆಯ ರಥವನ್ನು ನಾಶಮಾಡುತ್ತಾನೆ.

 

ಆತ್ತಾನ್ಯಾತ್ತಾನ್ಯಾಯುಧಾನ್ಯಸ್ಯ ಭೀಮಃ ಸರ್ವಾಣಿ ಚಿಚ್ಛೇದ ಬಿಭೇದ ಚಾಸ್ಯ।

ಮರ್ಮ್ಮಾಣಿ ಬಾಣೈರ್ನ್ನಿತರಾಂ ಪುನಶ್ಚ ಸ ಮುಷ್ಟಿಮುದ್ಯಮ್ಯ ಜಗಾಮ ಧರ್ಮ್ಮಜಮ್ ॥೨೮.೨೮॥

 

 

ಶಲ್ಯ ಆಯುಧವನ್ನು ತೆಗೆದುಕೊಂಡಾಗಲೆಲ್ಲಾ, ಭೀಮಸೇನ ಕತ್ತರಿಸುತ್ತಾನೆ ಅವುಗಳನ್ನೆಲ್ಲಾ.

ಅವನ ಮರ್ಮಸ್ಥಾನಗಳನ್ನೂ ಬಾಣಗಳಿಂದ ಸೀಳಿದ.

ಶಲ್ಯನು ಬೇರೆ ದಾರಿ ಕಾಣದೇ ತನ್ನ ಕೈಯನ್ನು  ಮುಷ್ಟಿ ಮಾಡಿದ.

ಧರ್ಮಜನ ಮುಷ್ಟಿಯಿಂದಲೇ ಕೊಲ್ಲುವೆ ಎಂದು ಬಳಿ ಹೋದ .

 

 

ತಂ ಭೀಮಭಿನ್ನಮರ್ಮ್ಮಾಣಂ ವಿವರ್ಮ್ಮಾಣಂ ನಿರಾಯುಧಮ್ ।

ಶ್ವಾಸಮಾತ್ರಾವಶಿಷ್ಟಂ ಚ ಮರಣಾಯೈವ ಕೇವಲಮ್ ॥೨೮.೨೯॥

 

ಆತ್ಮಾನಮಭಿಗಚ್ಛನ್ತಂ ದೃಷ್ಟ್ವಾSನ್ಯಂ ರಥಮಾಸ್ಥಿತಃ ।

ಹನ್ತುಕಾಮೋ ರಣೇ ವೀರಮಮೋಘಾಂ ಶಕ್ತಿಮಾದದೇ ॥೨೮.೩೦॥


ಭೀಮಸೇನನಿಂದ ಭೇದಿಸಲ್ಪಟ್ಟ ಮರ್ಮಸ್ಥಾನಗಳಿಂದ,

ಶಲ್ಯನು ತಾನು ಕವಚರಹಿತನಾದ, ನಿರಾಯುಧನಾದ .

ಉಸಿರು ಮಾತ್ರವೇ ಉಳಿದು ಕೊಂಡಿದ್ದ, ಸಾಯಬೇಕೆಂದೇ ತನ್ನತ್ತ ಬರುತ್ತಲಿದ್ದ,

ಶಲ್ಯನನ್ನು ಕಂಡ, ಧರ್ಮರಾಜ ಇನ್ನೊಂದು ರಥವನ್ನೇರಿದ,

ವೀರಗ್ರೇಸರ ಶಲ್ಯನನ್ನು ಕೊಲ್ಲಬೇಕೆಂದು ಬಯಸಿದ,

ಎಂದೂ ವ್ಯರ್ಥವಾಗದ ಶಕ್ತ್ಯಾಯುಧವನ್ನು ತೆಗೆದುಕೊಂಡ.

No comments:

Post a Comment

ಗೋ-ಕುಲ Go-Kula