ಕೃಷ್ಣಂ ದ್ಯೂತೇ
ನಿಧೇಹೀತಿ ಯದವಾದೀತ್ ಸುಯೋಧನಃ ।
ತತ್ಪ್ರತಿಜ್ಞಾನುಸಾರೇಣ
ಭೀಮೋ ಮೂರ್ದ್ಧಾನಮಕ್ರಮೀತ್ ।
‘ಋಷಭಂ ಮಾ ಸಮಾನಾನಾಮ್’
ಇತಿ ಸೂಕ್ತಂ ದದರ್ಶ ಚ ॥೨೮.೭೯॥
ಹೇಗೆ ‘ಕೃಷ್ಣನನ್ನು
ಜೂಜಿನಲ್ಲಿ ಪಣಕ್ಕೆ ಇಡು’ ಎಂದು ಯುಧಿಷ್ಠಿರನಿಗೆ ಸುಯೋಧನ ಹಿಂದೆ ಹೇಳಿದ್ದ ,
ಆಗ ಭೀಮಸೇನ ಪ್ರತಿಜ್ಞೆ
ಮಾಡಿದಂತೆ ಅದರನುಗುಣವಾಗಿ ಭೀಮ ಕೌರವನ ತಲೆಗೆ ಒದ್ದ.
ಹಾಗೆ ಒದೆಯುತ್ತ
ಭೀಮಸೇನ ‘ಋಷಭಂ ಮಾ ಸಮಾನಾನಾಮ್’ ಎನ್ನುವ ಸೂಕ್ತವನ್ನು ಕಂಡ.
ತೇಷಾಂ ಪುಣ್ಯಾನಿ
ವಿದ್ಯಾಶ್ಚ ಸಮಾದಾಯೈವ ಸರ್ವಶಃ ।
ತಾಂಶ್ಚಕಾರ
ತಮೋಗನ್ತೄಂಸ್ತಸ್ಯ ಮೂರ್ಧ್ನಿ ಪದಾSSಕ್ರಮನ್ ॥೨೮.೮೦॥
ಹೀಗೆ ಭೀಮ
ದುರ್ಯೋಧನಾದಿಗಳ ಪುಣ್ಯ, ವಿದ್ಯೆಯನ್ನೂ, ಎಲ್ಲೆಡೆಯಿಂದ,
ಕಿತ್ತು ತೆಗೆದುಕೊಂಡು
ಅವರನ್ನು ತಮಸ್ಸಿಗೆ ಹೋಗುವ ವ್ಯವಸ್ಥೆ ಮಾಡಿದ.
ಸ್ಮಾರಯಾಮಾಸ
ಕರ್ಮ್ಮಾಣಿ ಯಾನಿ ತಸ್ಯ ಕೃತಾನಿ ಚ ।
ಕೃಷ್ಣಬನ್ಧೇ ಕೃತೋ
ಮನ್ತ್ರ ಇತಿ ಮೂರ್ಧ್ನಿ ಪದಾSಹನತ್
॥೨೮.೮೧॥
ಕೌರವ ಹಿಂದೆ ಏನು
ಕರ್ಮಗಳನ್ನು ಮಾಡಿದ್ದ, ಅದೆಲ್ಲವನ್ನೂ ಭೀಮ
ಅವನಿಗೆ ನೆನಪಿಸಿದ.
ಶ್ರೀಕೃಷ್ಣನನ್ನು
ಕಟ್ಟಿಹಾಕಬೇಕು ಎಂದು ಕೌರವ ಅಂದುಕೊಂಡಿದ್ದ,
ಆ ಮಂತ್ರಾಲೋಚನೆ
ಮಾಡಿರುವುದನ್ನು ನೆನಪಿಸಿ ಮತ್ತೆಮತ್ತೆ ಒದ್ದ.
ಪುನಃಪುನಶ್ಚ ತದ್
ವೀಕ್ಷ್ಯ ಚುಕ್ರೋಧ ಮುಸಲಾಯುಧಃ ।
ಚುಕ್ರೋಶ ನೈವ ಧರ್ಮ್ಮೋSಯಮಿತ್ಯಸಾವೂರ್ಧ್ವಬಾಹುಕಃ ॥೨೮.೮೨॥
ಭೀಮ ಪುನಃಪುನಃ ಕೌರವನ
ತಲೆಯನ್ನು ಒದೆಯುತ್ತಿರುವುದನ್ನು ನೋಡಿ ಬಲರಾಮ ಸಿಟ್ಟುಗೊಂಡ.
‘ಇದು ಧರ್ಮವಲ್ಲ’ ಎಂದು
ತನ್ನ ಎರಡೂ ಕೈಗಳನ್ನು ಮೇಲೆತ್ತಿ ಗಟ್ಟಿಯಾಗಿ
ಕಿರುಚಿಕೊಂಡ.
ಪುನಃ
ಕ್ರೋಧಾಭಿತಾಮ್ರಾಕ್ಷ ಆದಾಯ ಮುಸಲಂ ಹಲಮ್ ।
ಅಭಿದುದ್ರಾವ ಭೀಮಂ ತಂ
ನ ಚಚಾಲ ವೃಕೋದರಃ ॥೨೮.೮೩॥
ಮತ್ತೆ ಕೋಪದಿಂದ
ಕೆಂಪಡರಿದ ಕಣ್ಣುಗಳುಳ್ಳವನಾದ,
ತೆಗೆದುಕೊಂಡ ತನ್ನ
ಮುಸಲಾಯುಧ ಮತ್ತು ಹಲಾಯುಧ.
ಬಲರಾಮ ಭೀಮನನ್ನು
ಹೊಡೆಯಲೆಂದು ಹೋದ.
ಆದರೆ ಭೀಮ ಸ್ವಲ್ಪವೂ ಕೂಡಾ ಕದಲದೇ ನಿಂದ .
ಅಭಯೇ ಸಂಸ್ಥಿತೇ ಭೀಮೇ
ರಾಮಂ ಜಗ್ರಾಹ ಕೇಶವಃ ।
ಆಹ ಧರ್ಮ್ಮೇಣ ನಿಹತೋ
ಭೀಮೇನಾಯಂ ಸುಯೋಧನಃ ॥೨೮.೮೪॥
ಹೀಗೆ ಭೀಮಸೇನ ಯಾವುದೇ ಭಯವಿಲ್ಲದೇ ನಿಂತಿರುವಾಗ,
ಕೃಷ್ಣನು ಬಲರಾಮನನ್ನು
ಹಿಡಿದುಕೊಂಡ ಮತ್ತು ಹೇಳಿದನಾಗ .
‘ಈ ದುರ್ಯೋಧನನು
ಭೀಮಸೇನನಿಂದ , ಕೊಲ್ಲಲ್ಪಟ್ಟಿದ್ದಾನೆ
ಶುದ್ಧವಾದ ಧರ್ಮದಿಂದ’ .
ನ ಮಣ್ಡಲೇSಭಿಸಾರೇ ವಾ ನಾಪಸಾರೇ ಚ ನಾಭಿತಃ ।
ಅಧೋ ಹನ್ಯಾದ್
ವಞ್ಚಯನ್ತಮಧೋ ಹತ್ವಾ ನ ದುಷ್ಯತಿ ॥೨೮.೮೫॥
‘ಮಂಡಲದಲ್ಲಿ, ಮುಂಗಟ್ಟಿನಲ್ಲಿ, ಹಿಂಗಟ್ಟಿನ ಯುದ್ಧದಲ್ಲಿ ಹೊಕ್ಕುಳಿನ ಕೆಳಗೆ
ಹೊಡೆಯಬಾರದು ಎನ್ನುವುದು ನಿಯಮ. ಆದರೆ ಇಲ್ಲಿ ದುರ್ಯೋಧನ ತಲೆಕೆಳಗೆ ಮಾಡಿ ಮೋಸಮಾಡಿರುವುದರಿಂದ
ದೋಷವಿಲ್ಲ ಹಾಗೆ ಕೆಳಗೆ ಹೊಡೆದದ್ದು ಭೀಮ.
ಕೃತಾ ಪ್ರತಿಜ್ಞಾ ಚ
ವೃಕೋದರೇಣ ಭೇತ್ಸ್ಯೇ ತವೋರೂ ಇತಿ ಯುಕ್ತಿಪೂರ್ವಮ್ ।
ಸಂಶ್ರಾವಯಾನೇನ ತದೇಷ
ಧರ್ಮ್ಮತೋ ಜಘಾನ ದುರ್ಯ್ಯೋಧನಮಗ್ರ್ಯಕರ್ಮ್ಮಾ ॥೨೮.೮೬॥
ಭೀಮಸೇನನಿಂದ
ಪ್ರತಿಜ್ಞೆಯು ಈ ಹಿಂದೆ ಮಾಡಲ್ಪಟ್ಟಿತ್ತು.
‘ನಿನ್ನ ತೊಡೆ
ಮುರಿಯುತ್ತೇನೆ’ ಎಂಬುದು ಯುಕ್ತಿಯುತವಿತ್ತು.
ಅದರಿಂದ ಇವನು
ಶ್ರೇಷ್ಠವಾದ ಕರ್ಮದಿಂದ,
ಕೌರವನನ್ನು
ಶುದ್ಧಧರ್ಮದಿಂದಲೇ ಕೊಂದ .
ವಾಸುದೇವವಚಃ ಶ್ರುತ್ವಾ
ಧರ್ಮ್ಮಚ್ಛಲಮಿತಿ ಬ್ರುವನ್ ।
ರೌಹಿಣೇಯೋ ಜಗಾಮಾSಶು ಸ್ವಪುರೀಮೇವ ಸಾನುಗಃ ॥೨೮.೮೭॥
ವಾಸುದೇವನ ಮಾತನ್ನು
ಕೇಳಿದ ಮೇಲೂ, ‘ಇದು ಧರ್ಮವಲ್ಲ’ ಎಂದು
ಹೇಳುತ್ತಾ,
ಬಲರಾಮ ತನ್ನ ಹಿಂಬಾಲಕರ
ಕೂಡಿಕೊಂಡು ತೆರಳಿದ ದ್ವಾರಕಾಪಟ್ಟಣದತ್ತ.
ತಸ್ಮಿನ್ ಗತೇ
ವಾಸುದೇವಂ ಸಮಪೃಚ್ಛದ್ ಯುಧಿಷ್ಠಿರಃ ।
ಧರ್ಮ್ಮೋSಯಮಥವಾSಧರ್ಮ್ಮ ಇತಿ ತಂ ಪ್ರಾಹ ಕೇಶವಃ ॥೨೮.೮೮॥
ಬಲರಾಮ ಹೊರಟುಹೋದ ನಂತರ
, ವಾಸುದೇವನನ್ನು ಕೇಳಿದ ಯುಧಿಷ್ಠಿರ.
‘ಇದು ಧರ್ಮವೋ, ಅಧರ್ಮವೋ’ ಹೇಳು ಎಂದ.
ಆಗ ಶ್ರೀಕೃಷ್ಣನು
ಅವನನ್ನು ಕುರಿತು ಹೀಗೆ ಹೇಳಿದ-
ನ ಸಾಕ್ಷಾದ್ ಧರ್ಮ್ಮತೋ
ವದ್ಧ್ಯಾ ಯೇ ತು ಪಾಪತಮಾ ನರಾಃ ।
ದೇವೈರ್ಹಿ
ವಞ್ಚಯಿತ್ವೈವ ಹತಾಃ ಪೂರ್ವಂ ಸುರಾರಯಃ ॥೨೮.೮೯॥
ಅತೋSಯಮಪ್ಯಧರ್ಮ್ಮೇಣ ಹತೋ ನಾತ್ರಾಸ್ತಿ ದೂಷಣಮ್ ।
ಭೀಷ್ಮದ್ರೋಣೌ ಚ
ಕರ್ಣ್ಣಶ್ಚ ಯದೈವೋಪಧಿನಾ ಹತಾಃ ॥೨೮.೯೦॥
ಕೋ ನು ದುರ್ಯ್ಯೋಧನೇ
ಪಾಪೇ ಹತೇ ದೋಷಃ ಕಥಞ್ಚನ ।
ಪ್ರತಿಜ್ಞಾಪಾಲನಾಯಾಪಿ
ಬಿಭೇದೋರೂ ವೃಕೋದರಃ ॥೨೮.೯೧॥
‘ಯಾರು ಅತ್ಯಂತ
ಪಾಪಿಷ್ಠರೋ, ಅಂತವರು ಶುದ್ಧಧರ್ಮದಿಂದ ಕೊಲ್ಲಲಲ್ಲ ಅರ್ಹ,
ದೇವತೆಗಳಿಂದ
ಮೋಸಗೊಳಿಸಿಯೇ ಹಿಂದೆ ನಡೆದಿದೆ ಅನೇಕ ದೈತ್ಯರ ಸಂಹಾರ .
ಕೇವಲ ಧರ್ಮದಿಂದ ಪಾಪಿಷ್ಠರನ್ನು ಸಂಹರಿಸುವುದು ಯುಕ್ತವಲ್ಲವಾದುದರಿಂದ,
ಅತ್ಯಂತ ಪಾಪಿಷ್ಠನಾದ ಈ
ದುರ್ಯೋಧನನು ಕೂಡಾ ಕೊಲ್ಲಲ್ಪಟ್ಟಿದ್ದಾನೆ ಅಧರ್ಮದಿಂದ.
ಈ ವಿಚಾರದಲ್ಲಿ ಯಾವುದೇ
ದೋಷವಿಲ್ಲ, ಭೀಷ್ಮ, ದ್ರೋಣ, ಕರ್ಣ
ಮೊದಲಾದವರೆಲ್ಲ,
ಮೇಲ್ನೋಟಕ್ಕೆ ಧರ್ಮವಿರುದ್ಧವಾಗಿ
ಸತ್ತರಲ್ಲ. ಹೀಗಿರುವಾಗ ಪಾಪಿಷ್ಠನಾಗಿರುವ ಈ ದುರ್ಯೋಧನನು ಸಂಹರಿಸಲ್ಪಡಲು ದೋಷವೇನು? ಭೀಮನು ತನ್ನ ಪ್ರತಿಜ್ಞೆಯನ್ನು ಪಾಲನೆ ಮಾಡಲೆಂದೇ
ಅವನ ತೊಡೆಗಳನ್ನು ಮುರಿದನು’.
ಧರ್ಮ್ಮತಶ್ಚ
ಪ್ರತಿಜ್ಞೇಯಂ ಕೃತಾ ತೇನಾನುರೂಪತಃ ।
ಲೋಕತೋSಪಿ ನ ಧರ್ಮ್ಮಸ್ಯ ಹಾನಿರತ್ರ ಕಥಞ್ಚನ ॥೨೮.೯೨॥
ಧರ್ಮಪೂರ್ವಕವಾಗಿಯೇ
ಭೀಮಸೇನನಿಂದ ಪ್ರತಿಜ್ಞೆಯು ಮಾಡಲ್ಪಟ್ಟಿತು.
ಪಾಪಿಷ್ಠರನ್ನು ಅಧರ್ಮ
ರೀತಿಯಿಂದ ಕೊಲ್ಲುವುದೇ ಧರ್ಮವೆಂದು ಅರಿತರೆ ಒಳಿತು.
ಲೌಕಿಕವಾಗಿ ನೋಡಿದರೂ
ಕೂಡಾ , ಈ ಯುದ್ಧ ಬಿಟ್ಟಿಲ್ಲ
ಧರ್ಮದ ಜಾಡ .
ಯೇ
ಭೀಮಸ್ಯಾಪ್ರಭಾವಜ್ಞಾ ಆಪದ್ಧರ್ಮಂ ಚ ಮನ್ವತೇ ।
ಅವದ್ಧ್ಯತ್ವೇ
ಶಿವವರಾದ್ ಗದಾಶಿಕ್ಷಾಬಲಾದಪಿ ॥೨೮.೯೩॥
ಜರಾಸನ್ಧೋಪಮೋ ಯಸ್ಮಾದ್
ಧಾರ್ತ್ತರಾಷ್ಟ್ರಃ ಸುವಿಶ್ರುತಃ ।
ತಸ್ಮಾತ್ ಸದ್ಧರ್ಮ್ಮ
ಏವಾಯಂ ಭೀಮಚೀರ್ಣ್ಣ ಇತಿ ಬ್ರುವನ್ ॥೨೮.೯೪॥
ಅಪಿ ಸಂಶಯಿನಂ ಚಕ್ರೇ
ಧರ್ಮ್ಮರಾಜಂ ಜಗತ್ಪತಿಃ ।
ಭೂಭಾರಕ್ಷತಿಜೋ
ಧರ್ಮ್ಮೋ ಮಚ್ಛುಶ್ರೂಷಾತ್ಮಕಸ್ತು ಯಃ ॥೨೮.೯೫॥
ಭೀಮಸ್ಯೈವ ಭವೇತ್
ಸಮ್ಯಗಿತಿ ಬುದ್ಧ್ಯಾ ಪರಃ ಪ್ರಭುಃ ।
ಸ್ವೇನೈವ ಬಲಭದ್ರಾಯ
ಜನಾಯ ಚ ಪುನಃಪುನಃ ॥೨೮.೯೬॥
ಶ್ರುತ್ವಾSಪ್ಯುಕ್ತಂ ನ ತತ್ಯಾಜ ಸಂಶಯಂ ಧರ್ಮ್ಮಜೋ ಯತಃ ।
ತತೋSಪ್ಯಸಂಶಯಂ ಕೃಷ್ಣೋ ನ ಚಕಾರ ಯುಧಿಷ್ಠಿರಮ್
॥೨೮.೯೭॥
ಭೀಮನ ಸಾಮರ್ಥ್ಯವನ್ನು
ತಿಳಿಯದ ಜನರು,
ಇದನ್ನು ಆಪದ್ಧರ್ಮ
ಎಂದು ತಿಳಿಯುವರು.
ಇನ್ನು ಶಿವನಿಂದ
ಅವಧ್ಯತ್ವದ ವರ ಪಡೆದಿದ್ದ ಆ ದುಷ್ಟ ಜರಾಸಂಧ ,
ಗದಾಭ್ಯಾಸ ಮತ್ತು
ಕಸುವಿನಲ್ಲಿ ಕೌರವನು ಸಮ ಎಂದು ಪ್ರಸಿದ್ಧ .
(ಜರಾಸಂಧನನ್ನೇ
ಕೊಂದಿದ್ದ ಭೀಮಸೇನ, ಯಾವ ಲೆಕ್ಕದಲ್ಲಿ ಸಮ ಈ
ದುರ್ಯೋಧನ).
ಈ ರೀತಿ ಶ್ರೀಕೃಷ್ಣ,ಭೀಮ ಮಾಡಿರುವುದು ಧರ್ಮಪೂರ್ವಕವೇ ಅಂತ
ಸ್ಪಷ್ಟಪಡಿಸಿದ.
ಆದರೂ ಕೂಡಾ
ಶ್ರೀಕೃಷ್ಣ ಧರ್ಮರಾಜನಿಗೆ ಸಂಶಯ ಬರುವ ಹಾಗೇ
ನಡೆದುಕೊಂಡ.
ಯಾಕಂದರೆ ಭೂಭಾರ
ನಾಶಮಾಡಿರುವುದು -ಭಗವತ್ಸೇವಾ ಧರ್ಮ.
ಆ ಪುಣ್ಯವು
ಭೀಮಸೇನನಿಗೆ ಸಲ್ಲಬೇಕೆಂಬ ಸಂದೇಶದ ಮರ್ಮ.
ಹೀಗಾಗಿ ಕೃಷ್ಣನಿಂದ
ಸಂಶಯಕ್ಕೆ ತಳ್ಳಲ್ಪಟ್ಟ ಅವತಾರೀ ಯಮಧರ್ಮ.
ತನ್ನಿಂದಲೇ ಬಲರಾಮಗೂ, ಅಲ್ಲಿ ನೆರೆದ ಜನರಿಗೂ ಕೂಡಾ ಮತ್ತೆ ಮತ್ತೆ
ಹೇಳಿದ್ದನ್ನು ಕೇಳಿಯೂ ಕೂಡಾ,
ಯಾವ ಕಾರಣದಿಂದ
ಧರ್ಮರಾಜನು ಬಿಡಲಾರದಾದನೋ ತನ್ನ ಸಂಶಯದ ಅದೇ ಹಳೇ ಜಾಡ.
ಈ ಕಾರಣದಿಂದ
ಶ್ರೀಕೃಷ್ಣ ಪರಮಾತ್ಮ , ಯುಧಿಷ್ಠಿರನ ಇರಗೊಟ್ಟ
ಸಂಶಯಾತ್ಮ.
ಮುಖ್ಯಂ ಧರ್ಮ್ಮಂ ಹಿ
ಭಗವಾನ್ ಬಲಾಯಾSಹ ಜನಾಯ ಚ ।
ಧರ್ಮ್ಮೇಣೈವ ಹತೋ ರಾಜಾ
ಧಾರ್ತ್ತರಾಷ್ಟ್ರಃ ಸುಯೋಧನಃ ।
ಇತಿ ಯದ್ ವಕ್ಷ್ಯತಿ ಪುನರ್ನ್ನಿಶ್ಚಯಾರ್ತ್ಥೇSರ್ಜ್ಜುನಾಯ ಚ ॥೨೮.೯೮॥
ಶ್ರೀಕೃಷ್ಣನು
ಬಲರಾಮನಿಗೆ ಮತ್ತು ಅಲ್ಲಿ ನೆರೆದ ಜನರಿಗೆ ,
ಹೇಳಿರುವ ದುರ್ಯೋಧನ
ಕೊಲ್ಲಲ್ಪಟ್ಟ ಧರ್ಮದ ಬಗೆ.
ಧೃತರಾಷ್ಟನ ಮಗನಾದ
ಸುಯೋಧನನು ಧರ್ಮಮಾರ್ಗದಿಂದಲೇ ಕೊಲ್ಲಲ್ಪಟ್ಟಿದ್ದಾನೆ,
ಎಂದು ಅರ್ಜುನನಿಗೂ
ಕೂಡಾ ಶ್ರೀಕೃಷ್ಣ ಮುಂದೆ(ಭವಿಷ್ಯದಲ್ಲಿ) ಮತ್ತೆ ಹೇಳುತ್ತಾನೆ.
ಪುನಃಪುನರ್ದ್ಧರ್ಮ್ಮತ
ಏಷ ಭೀಮೋ ಜಘಾನ ರಾಜಾನಮಿತಿ ಬ್ರುವನ್ತಮ್ ।
ಜಗಾದ ಕೃಷ್ಣಂ
ಸ್ಫುರಿತಾಧರೋಷ್ಠಃ ಕ್ರೋಧಾತ್ ಸುಪಾಪೋ
ಧೃತರಾಷ್ಟ್ರಸೂನುಃ ॥೨೮.೯೯॥
‘ಈ ಭೀಮ ಕೌರವನನ್ನು
ಧರ್ಮದಿಂದಲೇ ಕೊಂದಿದ್ದಾನೆ’ ಎಂದು ಮತ್ತೆ-ಮತ್ತೆ ಹೇಳುವ ಶ್ರೀಕೃಷ್ಣನನ್ನು ಕುರಿತು ಸಿಟ್ಟಿನಿಂದ, ಅದರುತ್ತಿರುವ ತುಟಿಯುಳ್ಳವನಾಗಿ, ಪಾಪಿಷ್ಠನಾದ (ತೊಡೆಮುರಿದು
ಬಿದ್ದಿರುವ)ದುರ್ಯೋಧನ ಮಾತನಾಡಿದ-
ತ್ವಯೈವ ಪಾಪೇ ನಿಹಿತಾ
ಹಿ ಪಾರ್ತ್ಥಾಃ ಪಾಪಾಧಿಕಸ್ತ್ವಂ ಹಿ ಸದೈಕ ಏವ ।
ಇತ್ಯೂಚಿವಾಂಸಂ
ಪ್ರಜಗಾದ ಕೃಷ್ಣೋ ನ ತ್ವತ್ಸಮಃ ಪಾಪತಮಃ ಕದಾಚಿತ್ ॥೨೮.೧೦೦॥
‘ನಿನ್ನಿಂದಲೇ ಪಾಂಡವರು
ಪಾಪಕರ್ಮದಲ್ಲಿ ತೊಡಗಿದ್ದಾರೆ.
ನೀನು ಎಲ್ಲರಿಗಿಂತ
ಹೆಚ್ಚು ಪಾಪಿಷ್ಠ.’ ಎಂದ ದುರ್ಯೋಧನ,
‘ನಿನಗೆ ಸಮನಾದ
ಪಾಪಿಷ್ಠನು ಎಲ್ಲಿಯೂ ಇಲ್ಲವೇ ಇಲ್ಲಾ’
ಎಂದು ಹೇಳುತ್ತಾನೆ ಅವನ
ಮಾತ ಕೇಳಿಸಿಕೊಂಡ ಶ್ರೀಕೃಷ್ಣ.
ಭೀಷ್ಮಾದಿಹತ್ಯಾSಪಿ ತವೈವ ಪಾಪಂ ಯದನ್ವಯುಸ್ತ್ವಾಮತಿಪಾಪನಿಶ್ಚಯಮ್
।
ಪಾಪಂ ಚ ಪಾಪಾನುಗತಂ ಚ
ಹತ್ವಾ ಕಥಞ್ಚನಾಪ್ಯಸ್ತಿ ನಚೈವ ಪಾಪಮ್ ॥೨೮.೧೦೧॥
ನ ಪಾಣ್ಡವೇಷ್ವಸ್ತಿ
ತತೋ ಹಿ ಕಿಞ್ಚಿತ್ ಪಾಪಂ ಪ್ರಯತ್ನಾಚ್ಚ ನಿಸರ್ಗ್ಗತೋSಪಿ ।
ಗುಣಾಧಿಕಾಸ್ತೇ
ಮದಪಾಶ್ರಯಾಚ್ಚ ಕೋ ನಾಮ ತೇಷ್ವಣ್ವಪಿ ಪಾಪಮಾಹ ॥೨೮.೧೦೨॥
ಮುಂದುವರಿದು
ಶ್ರೀಕೃಷ್ಣ ಹೇಳುತ್ತಾನೆ- ‘ಭೀಷ್ಮಾದಿಗಳ ಹತ್ಯೆಯೂ ಕೂಡಾ ನಿನಗೇ ಪಾಪಕರ.
ಯಾಕಾಗಿ ಅವರು ಅತ್ಯಂತ
ಪಾಪಿಷ್ಠನಾದ ನಿನ್ನ ಅನುಸರಿಸಿದರೋ, ಅವರ
ಕೊಂದರೆ ಪಾಪದೂರ.
ಆ ಕಾರಣದಿಂದಲೂ
ಪಾಂಡವರಲ್ಲಿ ಇಲ್ಲ ಕಿಂಚಿತ್ ಪಾಪ,
ಪ್ರಯತ್ನ, ಸ್ವಭಾವದಿಂದಲೂ ಪಾಂಡವರು ಗುಣಸ್ವರೂಪ.
ಅವರು ಇನ್ನಷ್ಟು ಉತ್ತಮ
ಗುಣಗಳಿಂದ ಶೋಭಿಸುತ್ತಿರುವರು ಮಾಡಿದ್ದರಿಂದ ನನ್ನ ಆಶ್ರಯ.
ಅಂತಹ ಪಾಂಡವರಲ್ಲಿ ಯಾವ
ವಿವೇಕಿ ತಾನೇ ಪಾಪವಿದೇ ಎಂದು ಹೇಳಿಯಾನು ಕೌರವಾ.
ನಿಸರ್ಗ್ಗತಃ
ಪಾಪತಮಸ್ತ್ವಮನ್ಯಾನ್ ಧರ್ಮ್ಮಸ್ಥಿತಾನ್ ಪಾಪಪಥೇ ನಿಧಾಯ ।
ಸ್ವಯಂ ಚ ಪಾಪೇ ನಿರತಃ
ಸದೈವ ಪಾಪಾತ್ ಸುಪಾಪಾಂ ಗತಿಮೇವ ಯಾಸಿ ॥೨೮.೧೦೩॥
ಸ್ವಭಾವದಿಂದಲೇ ಅತ್ಯಂತ
ಪಾಪಿಷ್ಠನಾದವನು ನೀನು,
ಧರ್ಮನಿರತ
ಭೀಷ್ಮಾದಿಗಳನ್ನು ಪಾಪದ ಮಾರ್ಗದಲ್ಲಿಟ್ಟವನು.
ಎಲ್ಲರ ಪಾಪದಿಂದ
ಅತ್ಯಂತ ಪಾಪಿಷ್ಠ ಗತಿಯ ಹೊಂದುವವನು’.
ಇತಿ ಬ್ರುವನ್ತಂ
ಪುನರಾಹ ಕೃಷ್ಣಂ ದುರ್ಯ್ಯೋಧನಃ ಪಾಪಕೃತಾಂ ಪ್ರಧಾನಃ ।
ಸ್ವಂತೋತ್ತಮೋ ನಾಮ ಕ
ಏವ ಮತ್ತಃ ಕೋ ನಾಮ ದೋಷೋSಸ್ತಿ
ಮಯಾ ಕೃತೋSತ್ರ ॥೨೮.೧೦೪॥
ಪಾಪಾಗ್ರಣ್ಯನಾಗಿರುವ
ದುರ್ಯೋಧನ ಕೃಷ್ಣನಿಗೆ ಹೇಳುತ್ತಾನೆ-
ನನ್ನಿಂದಾವ ದೋಷವಾಗಿದೆ
,‘ನನಗಿಂತ ಯಾರು ಉತ್ತಮನಿದ್ದಾನೆ?
ಇಷ್ಟಂ ಚ
ಯಜ್ಞೈಶ್ಚರಿತಂ ಚ ಪೂರ್ತ್ತೈಃ ಪದಂ ರಿಪೂಣಾಂ ನಿಹಿತಂ ಹಿ ಮೂರ್ಧ್ನಿ ।
ಮೃತ್ಯುಶ್ಚ
ಸಙ್ಗ್ರಾಮಶಿರಸ್ಯವಾಪ್ತೋ ರಣೋನ್ಮುಖೇನೈವ ಮಯಾ ಕಿಮನ್ಯತ್ ॥೨೮.೧೦೫॥
ಮಾಡಿದೆ ನಾನು ಅನೇಕ
ಯಾಗಗಳನ್ನು ಕಟ್ಟಿಸಿದೆ ಕೆರೆ-ಬಾವಿ-ಅರವಟ್ಟಿಗೆಗಳನ್ನೂ .
ಶತ್ರುಗಳ ತಲೆಯ ಮೇಲೆ
ನನ್ನ ಕಾಲನ್ನಿಟ್ಟೆ. ರಣರಂಗದಲ್ಲಿ ಯುದ್ಧಮಾಡುತ್ತಲೇ ಸತ್ತೆ .
ಇದಲ್ಲದೇ ಇನ್ನೇನು
ಬೇಕಾಗಿದೆ ಮತ್ತೆ.
ಇಷ್ಟಾ ಭೋಗಾ ಮಯಾ
ಭುಕ್ತಾಃ ಪ್ರಾಪ್ತಾ ಚ ಪರಮಾ ಗತಿಃ ।
ದುಃಖಿನೋ
ದುಃಖಮಾಪ್ಸ್ಯನ್ತಿ ಪಾರ್ತ್ಥಾಸ್ತೇ ಕೂಟಯೋಧಿನಃ ॥೨೮.೧೦೬॥
ಬೇಕೆನಿಸಿದ ಭೋಗಗಳ
ಉಂಡೆ , ಉತ್ಕೃಷ್ಟವಾದ ಗತಿಯನ್ನೆ ಕಂಡೆ.
ಮೋಸದ ಯುದ್ಧಮಾಡುವ
ದುಃಖಿ ಪಾಂಡವರು, ಪರಿಣಾಮವಾಗಿ ಕಡೆಗೆ
ದುಃಖವನ್ನೇ ಹೊಂದುವರು.
ಚನ್ದ್ರಸೂರ್ಯ್ಯನಿಭೈಃ
ಶೂರೈರ್ದ್ಧಾರ್ಮ್ಮಿಕೈಃ ಸದ್ಬಿರುಜ್ಝಿತಾ ।
ಕೇವಲಾ ರತ್ನಹೀನೇಯಂ
ಪಾಣ್ಡವೈರ್ಭುಜ್ಯತಾಂ ಮಹೀ ॥೨೮.೧೦೭॥
ಚಂದ್ರ-ಸೂರ್ಯರಿಗೆ
ಸದೃಶವಾಗಿರುವ, ಶೂರ ಧಾರ್ಮಿಕ ಸಜ್ಜನ
ರಹಿತವಾಗಿರುವ,
ಅಮೂಲ್ಯವಾದ
ರತ್ನಗಳಿಲ್ಲದ, ಕೇವಲ ಮಣ್ಣಾಗಷ್ಟೇ
ಉಳಿದ ,
ಈ ಭೂಮಿಯನ್ನು ಪಾಂಡವರು
ಆಳಲಿ, ಫಲ, ಸತ್ವಹೀನ ಭೂಮಿ ಭೋಗಿಸಲ್ಪಡಲಿ.'
ಇತ್ಯುಕ್ತವತ್ಯೇವ ನೃಪೇ
ಸುರೇಶೈಃ ಪ್ರಸೂನವೃಷ್ಟಿರ್ವಿಹಿತಾ ಪಪಾತ ।
ತಾಮೇವ ಬುದ್ಧಿಂ ಧೃತರಾಷ್ಟ್ರಸೂನೋಃ
ಕೃತ್ವಾ ದೃಢಾಂ ಪಾತಯಿತುಂ ತಮೋSನ್ಧೇ
॥೨೮.೧೦೮॥
ಈರೀತಿಯಾಗಿ
ದುರ್ಯೋಧನನು ಹೇಳುತ್ತಿರುವಾಗ,
ಅದೇರೀತಿಯಾದ
ದೃಢನಿಶ್ಚಯವು ಆಗಬೇಕಾದಾಗ ,
ಅವನನ್ನು ಅಂಧತಮಸ್ಸಿನಲ್ಲಿ ತಪ್ಪದೇ ಬೀಳಿಸಲೋಸುಗ,
ದೇವತೆಗಳಿಂದ ಆಯಿತು
ಹೂಮಳೆ ಕೌರವನಮೇಲಾಗ.
(ಎಲ್ಲೋ ಸ್ವಲ್ಪ
ಅಳುಕಿನಲ್ಲಿ ದುರ್ಯೋಧನ ಮಾತನಾಡುತ್ತಿದ್ದ.
'ನಾನೇ ಸರಿ' ಎಂದವನಿಗೆ ದೃಢವಾಯಿತು ಪುಷ್ಪವೃಷ್ಟಿಯಿಂದ.
ಆಯಿತದು ಅವನ ಪಾಪ ಸಾಧನ
, ಕತ್ತಲ ಕೂಪಕ್ಕೆ ಸೇರಿಸಲು ಕಾರಣ.)
ಸಮ್ಭಾವಯತ ಆತ್ಮಾನಂ
ವಾಸುದೇವಂ ವಿನಿನ್ದತಃ ।
ತತ್ಪರಾಂಶ್ಚ ಕಥಂ ನ
ಸ್ಯಾತ್ ತಮೋSನ್ತೇ ಚ ವಿಶೇಷತಃ
॥೨೮.೧೦೯॥
ತನ್ನನ್ನೇ ತಾನು
ಅತಿಯಾಗಿ ಹೊಗಳಿಕೊಳ್ಳುವ,
ಭಗವಂತ ಮತ್ತು ಭಗವದ್ಭಕ್ತರನ್ನು
ನಿಂದನೆ ಮಾಡುವ,
ದುರ್ಯೋಧನನಿಗೆ
ಕೊನೆಗಾಲದಲ್ಲಿ, ಅಂಧoತಮಸ್ಸು ತಪ್ಪುವ ಮಾತೆಲ್ಲಿ ?
ಯದೈಕೈಕಮಲಂ ತತ್ರ
ದುಃಖಾಧಿಕ್ಯಂ ಸಮುಚ್ಚಯಾತ್ ।
ಇತಿ ತತ್ ಕಾರಯಿತ್ವೇಶ
ಆಹ ಮೋಘಂ ತವಾಖಿಲಮ್ ॥೨೮.೧೧೦॥
ನೃಶಂಸಸ್ಯ ಕೃತಘ್ನಸ್ಯ
ಗುಣವದ್ದ್ವೇಷಿಣಃ ಸದಾ ।
ಯದಿ ಧರ್ಮ್ಮಫಲಂ
ಧ್ವಾನ್ತಂ ಸೂರ್ಯ್ಯವತ್ ಸ್ಯಾತ್ ಪ್ರಕಾಶಕಮ್ ॥೨೮.೧೧೧॥
ಒಂದು ವೇಳೆ ಇದರಲ್ಲಿ ಒಂದನ್ನು ಮಾಡಿದರೂ ಸಹಿತ,
ಅತಿದುಃಖ ಎನ್ನುವುದು
ಬಂದೊದಗುವುದು ಖಚಿತ.
(ತನ್ನನ್ನು ತಾನು
ಹೊಗಳಿಕೊಂಡರೆ, ಭಗವದ್ಭಕ್ತರನ್ನು ದ್ವೇಷಮಾಡಿದರೆ, ಭಗವಂತನ ದ್ವೇಷಿಯಾಗಿದ್ದರೆ-
ಈ ಮೂರರಲ್ಲಿ ಒಂದನ್ನು
ಮಾಡಿದರೆ, ಖಂಡಿತ
ಬೀಳುತ್ತದೆ ಅತಿದುಃಖದ ಬರೆ).
ದುರ್ಯೋಧನನಂತೂ
ಮೂರನ್ನೂ ಒಟ್ಟಿಗೇ ಮಾಡುತ್ತಿದ್ದಾನೆ.
ಹೀಗಿರುವಾಗ ಅತಿದುಃಖವಾಗುವುದು ಅದು ಖಚಿತವೇ ತಾನೇ.
ಹೀಗಾಗಿ ಈ ಮೂರನ್ನೂ
ಕೂಡಾ ಶ್ರೀಕೃಷ್ಣನೇ, ಅವನ ಮೂಲಕ ಮಾಡಿಸಿ
ಹೇಳುತ್ತಾನೆ. -
‘ನಿನ್ನ ಎಲ್ಲಾ
ಕ್ರಿಯೆಗಳೂ ಕೂಡಾ ವ್ಯರ್ಥ. ಯಜ್ಞ,ದಾನಾದಿ ಕ್ರಿಯೆಗಳಿಗಿಲ್ಲ ಅರ್ಥ.
ನೀನು ಕ್ರೂರಿ, ನಿನಗಿಲ್ಲ ಉಪಕಾರ ಸ್ಮರಣೆ , ಮುಖ್ಯವಾಗಿ ನೀ ದ್ವೇಷಿಸಿದೆ ಗುಣವಂತರನ್ನೇ.
ಇಂತಹ ನಿನಗೆ ಧರ್ಮದ ಫಲ
ಸಿಗುತ್ತದೆ ಎಂಬುದಾದರೆ- ,
ಕತ್ತಲೆ ಕೂಡಾ
ಸೂರ್ಯನಂತ್ಹರಿಸಬೇಕು ಬೆಳಕಿನ ಧಾರೆ.
(ಕತ್ತಲೆ ಯಾವರೀತಿ
ಸೂರ್ಯನಂತೆ ಬೆಳಗಲು ಸಾಧ್ಯವಿಲ್ಲ ,
ಅದೇ ರೀತಿ ನಿನ್ನ ಯಾವ
ಕ್ರಿಯೆಗಳೂ ಕೂಡಾ ಬೆಳಗುವುದಿಲ್ಲ.)
ವದನ್ ಪುನಃಪುನರಿದಂ
ಧರ್ಮ್ಮತೋ ಹತ ಇತ್ಯಪಿ ।
ಖ್ಯಾಪಯಾಮಾಸ ಭಗವಾನ್
ಜನೇ ನಿಜಜನೇಷ್ಟದಃ ॥೨೮.೧೧೨॥
ಹೀಗೆ ತನ್ನ ಭಕ್ತರಿಗೆ
ಅಭೀಷ್ಟವನ್ನು ಕೊಡುವ ಸರ್ವೋತ್ತಮ ಶ್ರೀಕೃಷ್ಣ ಪರಮಾತ್ಮ,
ಮತ್ತೆ ಮತ್ತೆ
ಸ್ಪಷ್ಟಪಡಿಸಿದ ‘ಧರ್ಮದಿಂದಲೇ ಕೊಲ್ಲಲ್ಪಟ್ಟಿದ್ದಾನೆ’ ಕೌರವನೆಂಬ ದುರಾತ್ಮ.
ಪ್ರಖ್ಯಾಪಿತೇ
ವಾಸುದೇವೇನ ಧರ್ಮ್ಮೇ ಸತಾಂ ಸರ್ವೇಷಾಂ ಹೃದ್ಯಮಾಸೀತ್ ಸಮಸ್ತಮ್ ।
ಹತಂ ಚ ಧರ್ಮ್ಮೇಣ ನೃಪಂ
ವ್ಯಜಾನನ್ ಪಾಪೋSಯಮಿತ್ಯೇವ ಚ
ನಿಶ್ಚಿತಾರ್ತ್ಥಾಃ ॥೨೮.೧೧೩॥
ಶ್ರೀಕೃಷ್ಣನಿಂದ ‘ಇದು
ಧರ್ಮ’ ಎಂದು ಚೆನ್ನಾಗಿ ಹೇಳಲ್ಪಡಲು,
ಎಲ್ಲಾ ಸಜ್ಜನರ
ಹೃದಯಕ್ಕೆ ಆಯಿತು ಅದು ಪ್ರಿಯಹೊನಲು.
ಅವರೆಲ್ಲರೂ ಕೂಡಾ
‘ಧರ್ಮದಿಂದಲೇ ದುರ್ಯೋಧನ ಕೊಲ್ಲಲ್ಪಟ್ಟಿದ್ದಾನೆ’ ಎಂಬುದನ್ನು ತಿಳಿದರು.
ಅವನು ಪಾಪಿಷ್ಠ ಎಂದು
ನಿಶ್ಚಯವಾದ ಮೇಲೆ, ‘ಪಾಪಿಗಳನ್ನು ಯಾವರೀತಿ
ಕೊಂದರೂ ಅದು ಧರ್ಮವೆಂದರಿತರು.’
ಯುಧಿಷ್ಠಿರೋSಪಾಯದರ್ಶೀ ಸದೈವ ಸಸಂಶಯೋSಭೂತ್ ಸುಮನೋSಭಿವೃಷ್ಟ್ಯಾ ।
ಸ್ನೇಹಾದ್ ದ್ರೌಣಿಃ
ಸಞ್ಜಯೋ ರೌಹಿಣೇಯೋ ದೌರ್ಯ್ಯೋಧನಾತ್ ಪಾಪಮಿತ್ಯೇವ ಚೋಚುಃ ॥೨೮.೧೧೪॥
ಇದು ಪಾಪಸಾಧನವೋ ಏನೋ
ಎಂದು ಸಂಶಯಪಡುವ ಯುಧಿಷ್ಠಿರನು ಹೂಮಳೆಯಾಗಿರುವುದರಿಂದ ಸಂಶಯಗ್ರಸ್ತನಾದ. ಅಶ್ವತ್ಧಾಮ, ಸಂಜಯ ಮತ್ತು ಬಲರಾಮರು, ದುರ್ಯೋಧನನ ಮೇಲಿನ ಪ್ರೀತಿಯಿಂದಾಗಿ ‘ಇದು ಪಾಪದ
ಕೆಲಸ’ ಎಂದು ಹೇಳಿದರು, ಹಾಗಿತ್ತು ಅವರ ವಾದ.
ತತಃ ಕೃಷ್ಣಃ ಪಾಣ್ಡುಪಾಞ್ಚಾಲಕೈಸ್ತೈರ್ಭೃಶಂ
ನದದ್ಬಿರ್ಹೃಷಿತೈಃ ಸಮೇತಃ ।
ಯಯೌ
ವಿರಿಞ್ಚೇಶಸುರೇನ್ದ್ರಮುಖ್ಯೈಃ ಸಮ್ಪೂಜಿತಸ್ತೈಶ್ಚ ರಣಾಙ್ಗಣಾತ್ ಸ್ಮಯನ್ ॥೨೮.೧೧೫॥
ತದನಂತರ ಶ್ರೀಕೃಷ್ಣನು
ಸಂತೋಷದಿಂದ, ಚೆನ್ನಾಗಿ ಘರ್ಜಿಸುವ
ಪಾಂಡವರೆಲ್ಲರಿಂದ ,
ಕೂಡಿದವನಾಗಿ
ಪಾಂಚಾಲದೇಶದವರಿಂದ; ಬ್ರಹ್ಮ-ರುದ್ರ-ಇಂದ್ರಾದಿ
ದೇವತೆಗಳಿಂದ , ಪೂಜೆಗೊಂಡವನಾಗಿ
ನಸುನಗೆಯಿಂದ , ಹೊರಗೆ ತೆರಳಿದನು
ರಣಭೂಮಿಯಿಂದ.
No comments:
Post a Comment
ಗೋ-ಕುಲ Go-Kula