Saturday 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 28: 201-241

 ವೇದೇಶ್ವರೇಣಾಪಿ ಯದೂತ್ತಮೇನ ಕೃಷ್ಣೇನ ಯುಕ್ತಾಸ್ತತ ಆಶು ಪಾರ್ತ್ಥಾಃ ।

ಯಯುಃ ಸಭಾರ್ಯ್ಯಾ ನಿಜರಾಜಧಾನೀಂ ಹತ್ವೈವ ಸನ್ತೋSನ್ತರರೀನ್ ಸ್ವರಾಜ್ಯಮ್ ॥೨೮.೨೦೧॥

 

ಹೀಗೆ ವೇದವ್ಯಾಸರಿಂದಲೂ, ಯಾದವೋತ್ತಮ ಕೃಷ್ಣನಿಂದಲೂ ಕೂಡಿದ, ಸಜ್ಜನರಾದ ಪಾಂಡವರು,

ಒಳಗಡೆಯ ಶತ್ರುಗಳನ್ನೂ ಕೂಡಾ ಕೊಂದು, ತಮ್ಮ ರಾಜಧಾನಿಗೆ ಪತ್ನಿಯರೊಂದಿಗೆ ತೆರಳಿದರು.

 

(ಯುದ್ಧದಲ್ಲಿ ಪಾಂಡವರು ಇದು ‘ಭಗವದ್ ಪ್ರೀತ್ಯರ್ಥವಾದ  ಕ್ಷತ್ರಿಯ ಧರ್ಮ’ ಎಂಬ ಭಾವನೆ ಹೊಂದಿದ್ದರು,

ಹೀಗಾಗಿ ‘ನಾವು ಬಲಜ್ಯೇಷ್ಠರು’ ಎನ್ನುವ ಅಹಂಕಾರವಿಲ್ಲದೆ ಯುದ್ಧಮಾಡಿದ್ದವರು, ಕೃಷ್ಣ ಮತ್ತು ವ್ಯಾಸರ ಜೊತೆ ಹಸ್ತಿನಪುರಕ್ಕೆ ತೆರಳಿದರು).

 

ಯುಧಿಷ್ಠಿರಸ್ಯಾನು ವಿಚಿತ್ರವೀರ್ಯ್ಯಸುತಸ್ಯ ಪಾದಾವಭಿವನ್ದಮಾನಮ್ ।

ಆಕೃಷ್ಯ ಭೀಮಂ ಪರಮೇಶ್ವರೋSಯಮಯಾಕೃತಿಂ ಧಾತ್ ಪುರತೋ ನೃಪಸ್ಯ ॥೨೮.೨೦೨॥

 

ಶ್ರೀಕೃಷ್ಣನು, ಯುಧಿಷ್ಠಿರನ ನಂತರ ವಿಚಿತ್ರವೀರ್ಯನ ಮಗನಾದ ಧೃತರಾಷ್ಟ್ರನ ಚರಣಗಳನ್ನು ನಮಸ್ಕರಿಸಲೆಂದು, ಹೊರಡುತ್ತಿರುವ ಭೀಮಸೇನನನ್ನು ಸೆಳೆದು, ಧೃತರಾಷ್ಟ್ರನ ಎದುರು ಇಟ್ಟ ಭೀಮನ ಉಕ್ಕಿನ ಆಕೃತಿಯ ಗೊಂಬೆಯೊಂದು.

 

ಭೀಮಾಕೃತಿಂ ತಾಂ ಸ ಸುಯೋಧನೇನ ಕಾರಾಪಿತಾಮಭ್ಯಸನೇ ಗದಾಯಾಃ ।

ಆಶ್ಲಿಷ್ಯ ಚೂರ್ಣ್ಣೀಕೃತವಾನಸೃಗ್ ವಮನ್ ಹಾ ತಾತ ಭೀಮೇತಿ ವದನ್ ಪಪಾತ ॥೨೮.೨೦೩॥

 

ಆ ಧೃತರಾಷ್ಟ್ರನು, ಸುಯೋಧನನಿಂದ ಗದೆಯ ಅಭ್ಯಾಸಕ್ಕಾಗಿ ಮಾಡಿಸಲ್ಪಟ್ಟ,

ಭೀಮಸೇನನ ಲೋಹದ ಪ್ರತಿಮೆಗೆ ಬಲು ಗಟ್ಟಿಯಾದ ಆಲಿಂಗನವನ್ನು ಕೊಟ್ಟ .

ಆ ಪ್ರತಿಮೆಯನ್ನು ಪುಡಿ-ಪುಡಿ ಮಾಡಿ ಬಿಟ್ಟ, ನಂತರ ‘ಅಪ್ಪಾ, ಭೀಮಸೇನಾ..ಎಂದಳುತ್ತಾ,

ಕೆಳಗಡೆ ಕುಸಿಯುತ್ತಾನೆ ರಕ್ತವನ್ನು ಕಾರುತ್ತಾ. 

 

ತಮಾಹ ಕೃಷ್ಣೋ ನ ಹತೋSದ್ಯ ಭೀಮೋ ನಚ ತ್ವಯಾSನ್ಯೈರಪಿ ಶಕ್ಯತೇSಸೌ ।

ಹನ್ತುಂ ಸ್ವಬುದ್ಧಿಃ ಪ್ರಥಿತಾ ತ್ವಯಾSದ್ಯ ಪಾಪಾ ಹಿ ತೇ ಬುದ್ಧಿರದ್ಯಾಪಿ ರಾಜನ್ ॥೨೮.೨೦೪॥

 

ಕೃಷ್ಣನು ಹೀಗೆ ಅಳುತ್ತಿರುವ ಧೃತರಾಷ್ಟ್ರನನ್ನು ಕುರಿತು- ‘ಭೀಮಸೇನನು ಈಗ ಸಾಯಲಿಲ್ಲ. ನಿನ್ನಿಂದಾಗಲೀ, ಬೇರೆಯವರಿಂದಾಗಲೀ ಅವನನ್ನು ಎಂದೂ ಕೊಲ್ಲಲಾಗುವುದಿಲ್ಲ. ಇದರಿಂದ ಆಗಿದೆ ಭೀಮಸೇನನನ್ನು ಕೊಲ್ಲಬೇಕೆಂದಿರುವ ನಿನ್ನ ಬುದ್ಧಿಯ ಅನಾವರಣ, ಜಗತ್ತಿಗೇ ತೋರಿಸಲ್ಪಟ್ಟಿದೆ, ಓ ರಾಜನೇ,                    ಈಗಲೂ ಕೂಡಾ ನಿನ್ನ ಬುದ್ಧಿ ಪಾಪಿಷ್ಠ ಹೂರಣ.

 

ಸ್ವಬುದ್ಧಿದೋಷಾದತಿಪಾಪಶೀಲಪುತ್ರಾಖ್ಯಪಾಪಾನಿ ವಿವರ್ದ್ಧಯಿತ್ವಾ ।

ನೀತೋ ವಶಂ ತೈಃ ಫಲಮದ್ಯ ಭುಞ್ಜನ್ ನ ಕ್ರೋಧಿತುಂ ಚಾರ್ಹಸಿ ಭೀಮಸೇನೇ ॥೨೮.೨೦೫॥

 

ನಿನ್ನ ಬುದ್ಧಿದೋಷದಿಂದ ಅತ್ಯಂತ ಪಾಪಶೀಲರಾಗಿರುವ ಪುತ್ರರೆಂಬ ಪಾಪಗಳನ್ನು ಬೆಳೆಸಿರುವೆ,

ಅವರಿಂದ ಅಧೀನತೆ ಹೊಂದಿ, ಅದರ ಫಲವನ್ನು ಈಗ ತಿನ್ನುತ್ತಿರುವೆ,ಭೀಮನಲ್ಲಿ ಬೇಡ ಮುನಿಸಿನ ಗೊಡವೆ.

 

 

ಇತ್ಯುಕ್ತೇ ಶಾನ್ತಬುದ್ಧ್ಯೈವ ರಾಜ್ಞಾSSಹೂತೋ ವೃಕೋದರಃ ।

ಅಭ್ಯವನ್ದತ ತತ್ಪಾದಾವನುಜಾದ್ಯಾಶ್ಚ ತಸ್ಯ ಯೇ ॥೨೮.೨೦೬॥

 

ಈರೀತಿ ಹೇಳಲ್ಪಡಲು, ಶಾಂತನಾದ ಧೃತರಾಷ್ಟ್ರನಿಂದ,

ಕರೆಯಲ್ಪಟ್ಟ ಭೀಮಸೇನನು, ಅವನ ಅಡಿಗಳನ್ನು ನಮಿಸಿದ.

ಅವನ ತಮ್ಮಂದಿರು ಮತ್ತು ಉಳಿದವರೂ, ಕೂಡಾ ನಮಸ್ಕಾರವನ್ನೇ ಮಾಡಿದರು.

 

ವಜ್ರಾಚ್ಚ ದೃಢದೇಹತ್ವಾದವಿಕಾರೇ ವೃಕೋದರೇ ।

ನ ದೋಷೋ ವಿವೃತೋSಸ್ಯ ಸ್ಯಾದಿತಿ ಕೃಷ್ಣೇನ ವಞ್ಚಿತಃ ॥೨೮.೨೦೭॥

 

ವಜ್ರಕ್ಕಿಂತಲೂ ದೃಢವಾಗಿದ್ದ, ಭಂಗವಾಗದ ಶರೀರವನ್ನು ಹೊಂದಿದ್ದ ಭೀಮಸೇನ,

ಪ್ರಪಂಚಕ್ಕೆ ತಿಳಿಯದೇ ಹೋದೀತು ಎಂದು ಧೃತರಾಷ್ಟ್ರನ ಒಳಗಿನ ಕೆಟ್ಟ ಮನ,

ಮೋಸಗೊಳಿಸಿ ಧೃತರಾಷ್ಟ್ರನನ್ನು ಶ್ರೀಕೃಷ್ಣ ಮಾಡಿದ್ದ ಅಂಧಕನ ಅನಾವರಣ.

 

ಸರ್ವಾನಾಶ್ಲಿಷ್ಯ ಚ ಪ್ರೇಮ್ಣಾ ಯುಯೋಜ ನೃಪ ಆಶಿಷಃ ।

ಕುಲನಾಶಕರಃ ಪಾಪಃ ಶಾಪಯೋಗ್ಯಸ್ತವ ಹ್ಯಹಮ್ ॥೨೮.೨೦೮॥

 

ಇತ್ಯುಕ್ತ್ವೈವ ಪ್ರಣಮತೋ ಗಾನ್ಧಾರೀ ಸುಪದಾಙ್ಗುಲೀಃ ।

ದದರ್ಶ ಧರ್ಮ್ಮರಾಜಸ್ಯ ಪಟ್ಟಾನ್ತೇನ ಪ್ರಕೋಪಿತಾ ॥೨೮.೨೦೯॥

 

ಧೃತರಾಷ್ಟ್ರನು ಎಲ್ಲರನ್ನೂ ಪ್ರೀತಿಯಿಂದ ಅಪ್ಪಿ ಆಶೀರ್ವಾದವನ್ನು ಮಾಡಿದ.

‘ಕುಲನಾಶ ಮಾಡಿ ಪಾಪಿಯಾದ ನಾನು ನಿನ್ನ ಶಾಪಕ್ಕೆ ಯೋಗ್ಯ’- ಧರ್ಮಜನೆಂದ.

ಹಾಗೆ ಹೇಳಿಯೇ ನಮಸ್ಕರಿಸುವ ಧರ್ಮಜನ ಶೋಭನವಾದ ಆ ಪಾದದ ಬೆರಳುಗಳು,

ಅತಿ ಕೋಪದಲ್ಲಿದ್ದ ಗಾಂಧಾರಿ,ಕಣ್ಣಿಗೆ ಕಟ್ಟಿದ್ದ ಬಟ್ಟೆಯ ಅಂಚಿನಿಂದಲೇ ನೋಡಿದಳು.

 

ತಸ್ಯಾಃ ಕ್ರೋಧಾಗ್ನಿನಿರ್ದ್ದಗ್ಧನಖಃ ಸ ಕುನಖೋSಭವತ್ ।

ವನ್ದಮಾನಂ ಪುನರ್ಭೀಮಮಾಹ ಸಾ ಕ್ರೋಧವಿಹ್ವಲಾ  ॥೨೮.೨೧೦॥

 

ಅಧರ್ಮ್ಮತಃ ಕಥಂ ಭೀಮ ಸುತಂ ಮೇ ತ್ವಂ ನಿಜಘ್ನಿವಾನ್ ।

ಇತ್ಯುಕ್ತೋSಸ್ಯಾಃ ಶಮಯಿತುಂ ಕ್ರೋಧಮಗ್ರೇ ವೃಕೋದರಃ ॥೨೮.೨೧೧॥

 

ಗಾಂಧಾರಿಯ ಕ್ರೋಧಾಗ್ನಿಯಿಂದ ಧರ್ಮರಾಜನ ಉಗುರುಗಳು ಸುಡಲ್ಪಟ್ಟವು,

ಆನಂತರ ತನಗೆ ನಮಿಸುವ ಭೀಮನನ್ನು ಕುರಿತು ಸಿಟ್ಟಿನಿಂದ ಕಂಗೆಟ್ಟ ಗಾಂಧಾರಿಯು-,

ಓ ಭೀಮಸೇನನೇ, ನನ್ನ ಮಗನನ್ನು ಹೇಗೆ ಅಧರ್ಮದಿಂದ ಕೊಂದೆ’ ಎಂದು ಕೇಳಿದಾಗ,

ಭೀಮನು, ಮೊದಲು ಅವಳ  ಕೋಪವನ್ನು ಸಮಾಧಾನಗೊಳಿಸಲು ಹೀಗೆ ಹೇಳುವನಾಗ.

 

ಪ್ರಾಹ ನ ಪ್ರಾಣಸನ್ದೇಹೇ ಪಾಪಂ ಸ್ಯಾತ್ ಪಾಪಿನೋ ವಧೇ ।

ಇತ್ಯುಕ್ತ್ವಾ ತಾಂ ಪುನಃ ಪ್ರಾಹ ಪ್ರತಿಜ್ಞಾಹಾನಿಮನ್ತರಾ ॥೨೮.೨೧೨॥

 

ನ ಮೇSಸ್ತಿ ಪ್ರಾಣಸನ್ದೇಹ ಇತಿ ಜಾನನ್ ವೃಕೋದರಃ ।

ಯಥಾಪ್ರತಿಜ್ಞಂ ಭ್ರಾತೃವ್ಯಾನ್ ರಣೇ ಮಮ ನಿಜಘ್ನುಷಃ  ॥೨೮.೨೧೩॥

 

ಕ್ವಾಧರ್ಮ್ಮಃ ಕ್ಷತ್ರಜಾತೇಸ್ತು ತದ್ಧಾನೌ ಜೀವಿತಂ ನಹಿ ।

ಪಾಪಾ ನ ಶುದ್ಧಧರ್ಮ್ಮೇಣ ಹನ್ತವ್ಯಾ ಇತಿ ಚ ಶ್ರುತಿಃ ॥೨೮.೨೧೪॥

 

‘ನಮ್ಮ ಪ್ರಾಣ ಉಳಿಯುತ್ತದೋ ಇಲ್ಲವೋ ಎನ್ನುವ ಸಂದೇಹ ಬಂದಾಗ,

ಪಾಪಿಗಳನ್ನು ಕೊಲ್ಲುವುದರಲ್ಲಿ ಯಾವುದೇ  ಪಾಪವಿರುವುದಿಲ್ಲ’ ಆಗ .

ದುರ್ಯೋಧನನ ತೊಡೆ ಮುರಿಯದೇ ಹೋಗಿದ್ದರೆ,

ತನ್ನ ಪ್ರತಿಜ್ಞೆ ಈಡೇರುವುದಿಲ್ಲ ಎನ್ನುವುದನ್ನು ಬಿಟ್ಟರೆ,

ಅವನಿಗೆ ಪ್ರಾಣಸಂಶಯವಿರಲಿಲ್ಲ, ಅದನ್ನು ಸ್ಪಷ್ಟಪಡಿಸುತ್ತಾ ಭೀಮ ಮುಂದುವರಿದು ಹೇಳುತ್ತಾನೆ-

‘ಹಿತಶತ್ರುಗಳನ್ನು ಯುದ್ಧದಲ್ಲಿ ಕೊಲ್ಲುವ, ಕ್ಷತ್ರಿಯನಾಗಿ ಹುಟ್ಟಿದ ನನಗೆ ಅದೇ ಧರ್ಮದ ದಿಟ್ಟ ಪ್ರತಿಜ್ಞೆ.

ಅದೇ ಪರಮೋಚ್ಛವಾದ ಧರ್ಮದ ದಾರಿ, ಕೈಬಿಟ್ಟರೆ ಅದು ನಮ್ಮ ಜೀವನ ನಾಶದ ಪರಿ.

 

ಅನ್ಯವತ್ ಪಾಪಹನನಂ ಪಾಪಾಯೇತ್ಯಾಹ ಹಿ ಶ್ರುತಿಃ ।

ಅತೋSಸುರಾನ್ ನೈಕೃತಿಕಾನ್ ನಿಕೃತ್ಯಾ ಘ್ನನ್ತಿ ದೇವತಾಃ ॥೨೮.೨೧೫॥

 

‘ಪಾಪಿಗಳು ಶುದ್ಧಧರ್ಮದಿಂದ ಕೊಲ್ಲಲು ಯೋಗ್ಯರಾದವರಲ್ಲ ಎನ್ನುವುದು ವೇದದ ನುಡಿ,

ಹಾಗಾಗಿ ದೇವತೆಗಳು ಮೋಸಗಾರರಾದ ಅಸುರರನ್ನು ಮೋಸದಿಂದಲೇ ಕೊಲ್ಲುವುದು ರೂಢಿ.

ಧರ್ಮಿಷ್ಟರಾದ ಉಳಿದವರನ್ನು ಕೊಲ್ಲುವಂತೆ, ಪಾಪಿಗಳನ್ನೂ ಕೊಲ್ಲುವುದದು ಪಾಪವಂತೆ.’

 

‘ನಿಕೃತ್ಯಾ ನಿಕೃತಿಂ ಹನ್ಯಾನ್ನಿಕೃತ್ಯಾ ನೈವ ಧಾರ್ಮ್ಮಿಕಮ್’ ।

ಇತಿ ಶ್ರುತಿರ್ಹಿ ಪರಮಾ ಪಠ್ಯತೇ ಪೈಙ್ಗಿಭಿಃ ಸದಾ ॥೨೮.೨೧೬॥

 

‘ಮೋಸಕ್ಕೆ ಮೋಸದಿಂದಲೇ ಕೊಡಬೇಕು ಏಟು ,

ಆದರೆ ಮೋಸದಿಂದ ಧಾರ್ಮಿಕರಿಗೆ ಸಲ್ಲದು ಪೆಟ್ಟು.

ಇದು ಉತ್ಕೃಷ್ಟ ವೇದದ ಪೈಂಗಿ ಶಾಖೆಯದೇ ಮಾತು.

 

ಇತ್ಯುಕ್ತಾ ತಂ ಪುನಃ ಪ್ರಾಹ ಕಥಂ ತೇ ನರಶೋಣಿತಮ್ ।

ಪೀತಂ ನರೇಣೈವ ಸತಾ ನ ಪೀತಮಿತಿ ಸೋSಬ್ರವೀತ್ ॥೨೮.೨೧೭॥

 

ದನ್ತಾನ್ತರಂ ನ ಮೇ ಪ್ರಾಪ ಶೋಣಿತಂ ತತ್ ಸುತಸ್ಯ ತೇ ।

ಪ್ರತಿಜ್ಞಾಪಾಲನಾಯಾಪಿ ಪ್ರತಿಕರ್ತ್ತುಂ ಚ ತತ್ ಕೃತಮ್ ॥೨೮.೨೧೮॥

 

ಈರೀತಿಯಾಗಿ ಭೀಮಸೇನನಿಂದ ಹೇಳಲ್ಪಟ್ಟ ಗಾಂಧಾರಿ ಅವನನ್ನು ಮತ್ತೆ ಕೇಳುತ್ತಾಳೆ. ‘ಮನುಷ್ಯ ರಕ್ತವು ಸಜ್ಜನಮಾನವನಾದ ನಿನ್ನಿಂದ ಹೇಗೆ ಕುಡಿಯಲ್ಪಟ್ಟಿತು’ ಎನ್ನುತ್ತಾಳೆ.

ಆಗ ಭೀಮಸೇನ ಹೇಳುತ್ತಾನೆ- ‘ನಿನ್ನ ಮಗನ ರಕ್ತವು ನನ್ನ ಹಲ್ಲಿನ ಒಳಗೆ ಹೋಗಲೇ ಇಲ್ಲ. ಪ್ರತಿಜ್ಞಾ ಪಾಲನೆಗೆ ಮತ್ತು ಸೇಡಿಗಾಗಿ ಹಾಗೆ ಮಾಡಿದೆ;ಹಾಗಾಗಿ ಆ ಬಗ್ಗೆ ಚಿಂತಿಸಬೇಕಿಲ್ಲ.’

 

ಭೀಷಣಾಯ ಚ ಶತ್ರೂಣಾಂ ಪೀತವಚ್ಚ ಪ್ರದರ್ಶಿತಮ್ ।

ವೇದದೃಷ್ಟಶ್ಚ ಧರ್ಮ್ಮೋSಯಮತಿಪಾಪಜನಂ ಪ್ರತಿ ॥೨೮.೨೧೯॥

 

‘ಶತ್ರುಗಳನ್ನು ಭಯಗೊಳಿಸುವುದಕ್ಕಾಗಿ ರಕ್ತವನ್ನು ಕುಡಿದಂತೆ ತೋರಿಸಿದೆ.

ಇದು ಅತ್ಯಂತ ಪಾಪಿಷ್ಠರನ್ನು ಕುರಿತು ಮಾಡಬೇಕಾದ್ದನ್ನು, ವೇದದಲ್ಲೇ ಹೇಳಿದೆ.

ಭೀಮನೆನ್ನುತ್ತಾನೆ ಇದೇ ಧರ್ಮ, ನಾನು ತೋರಿದ್ದು ಅದೇ ಮರ್ಮ.

 

ಇತ್ಯುಕ್ತೋವಾಚ ನೈವಾನ್ಧದ್ವಯಸ್ಯಾಸ್ಯ ವೃಕೋದರ ।

ಘ್ನತಾ ಪುತ್ರಶತಂ ಯಷ್ಟಿಮಾತ್ರಂ ಚೋರ್ವರಿತಂ ತ್ವಯಾ ॥೨೮.೨೨೦॥

 

ಈರೀತಿಯಾಗಿ ಹೇಳಲ್ಪಟ್ಟ ಗಾಂಧಾರಿ ಮತ್ತೆ ಕೇಳುತ್ತಾಳೆ- ‘ ಎಲೋ ಭೀಮಸೇನಾ,

ಈ ಮುದಿ ಅಂಧರ ನೂರು ಜನ ಮಕ್ಕಳನ್ನು ನೀನು ಸಂಹರಿಸಿದ್ದು ನ್ಯಾಯವೇನಾ?.

ಊರುಗೊಲಿನಂತೆ ಒಬ್ಬ ಮಗನನ್ನಾದರೂ, ಉಳಿಸಲು ಬರಲಿಲ್ಲವೇ ಕರುಣೆ ಒಂಚೂರು.

 

 

ತಾಮಾಹ ಭೀಮಃ ಪಾಪಿಷ್ಠಾ ವಧಯೋಗ್ಯಾಪರಾಧಿನಃ ।

ಸರ್ವೇ ಹತಾ ಇತಿ ಪುನಃ ಸಾSSಹ ಯೇನಾಕೃತಸ್ತವ  ॥೨೮.೨೨೧॥

 

ಅಪರಾಧಃ ಸ ಏಕೋSಪಿ ಕಿಂ ನಾಸ್ತೀತ್ಯವದತ್ ಸ ತಾಮ್ ।

ಸರ್ವೈಃ ಸಮೇತೈಃ ಕೃಷ್ಣಸ್ಯ ಬನ್ಧನಾಯ ವಿನಿಶ್ಚಿತಮ್ ॥೨೮.೨೨೨॥

 

ಆಗ ಭೀಮಸೇನನು ‘ನಿನ್ನ ಎಲ್ಲಾ ಮಕ್ಕಳೂ ಕೊಲ್ಲಲು ಅರ್ಹರಾಗಿರುವ ಪಾಪವನ್ನು ಮಾಡಿದ್ದರು.

ಹಾಗಾಗಿ ನಾನು ಎಲ್ಲರನ್ನೂ ಕೊಂದೆ ಅವರು ಎಲ್ಲರೂ ವಧಾರ್ಹ ಆತತಾಯಿಗಳು ಆಗಿದ್ದರು.

‘ಅಂತಹ ಅಪರಾಧ ಮಾಡದ ಒಬ್ಬ ಮಗನೂ ಕೂಡಾ ಇರಲಿಲ್ಲವೇ’ ಎಂದು ಪುನಃ ಗಾಂಧಾರಿ ಕೇಳಿದಾಗ,

ಭೀಮ ಹೇಳಿದ-‘ ಇರಲಿಲ್ಲ,ಏಕೆಂದರೆ ಎಲ್ಲರೂ ಸೇರಿ ಶ್ರೀಕೃಷ್ಣನನ್ನೇ ಸೆರೆಹಿಡಿವ ನಿಶ್ಚಯ ಮಾಡಿದ್ದರಾಗ'.

 

ಅನ್ಯಾನಿ ಚ ಸುಪಾಪಾನಿ ಕೃತಾನ್ಯತ್ರ ಪುರಾSಪಿಚ ।

ವಾಸುದೇವಂ ಸಭಾಸಂಸ್ಥಂ ಬ್ರುವಾಣಂ ಧರ್ಮ್ಮಸಂಹಿತಮ್  ॥೨೮.೨೨೩॥

 

ಪುನಃಪುನರವಜ್ಞಾಯ ಯಾನ್ತಂ ದೂರ್ಯ್ಯೋಧನಂ ಬಹಿಃ ।

ಸರ್ವೇSನ್ವಗಚ್ಛನ್ನಿತ್ಯಾದೀನ್ಯಭಿಪ್ರೇತ್ಯ ವೃಕೋದರಃ ॥೨೮.೨೨೪॥

 

ನೈಕೋSಪ್ಯನಪರಾಧೀ ಮೇ ಸ್ವಯಂ ತಾನನುಶಿಕ್ಷಿತುಮ್ ।

ಅಸಮರ್ತ್ಥಾ ಮಯಿ ಕ್ರೋಧಂ ಕಿಂ ಕರೋಷಿ ನಿರರ್ತ್ಥಕಮ್ ॥೨೮.೨೨೫॥

 

ಮುಂದುವರಿದು ಭೀಮಸೇನ ಹೇಳುತ್ತಾನೆ- ‘ಬಹಳ ಹಿಂದೆಯೂ ಕೂಡಾ ಅವರೆಲ್ಲರೂ ಅನೇಕ ಪಾಪಗಳನ್ನು ಮಾಡಿದ್ದಾರೆ’, ಸಭೆಯಲ್ಲಿ ಧರ್ಮವನ್ನು ಹೇಳುತ್ತಿರುವ ಶ್ರೀಕೃಷ್ಣನನ್ನು ಮತ್ತೆ-ಮತ್ತೆ ಧಿಕ್ಕರಿಸಿ ಹೊರಗೆ ಹೋಗುತ್ತಿರುವ ಕೌರವನ ಅನುಸರಿಸಿದ್ದಾರೆ.

ಅದೆಲ್ಲ ಅಭಿಪ್ರಾಯದಲ್ಲಿಟ್ಟುಕ್ಕೊಂಡ ವೃಕೋದರನು – ‘ಒಬ್ಬನೂ ಅಲ್ಲಿ ಅಪರಾಧಿಯಲ್ಲದವನು ಇರಲಿಲ್ಲ.

ನೀನವರನ್ನು ಶಿಕ್ಷಿಸಲು ಅಸಮರ್ಥಳಾಗಿ, ಈಗ ನನ್ನಲ್ಲಿ ಏಕೆ ಕೋಪಗೊಳ್ಳುತ್ತಿರುವೆ’ ಎಂದು ಭೀಮನ ಪ್ರಶ್ನಾಜಾಲ.

 

 

ಇತ್ಯುಕ್ತಾ ಸಾSಭವತ್ ತೂಷ್ಣೀಂ ಕ್ರಮಾತ್ ಸರ್ವೈಶ್ಚ ಪಾಣ್ಡವೈಃ ।

ವನ್ದಿತಾ ವ್ಯಾಸವಾಕ್ಯಾಚ್ಚ ಕಿಞ್ಚಿಚ್ಛಾನ್ತಾSಥ ಸಾSಭವತ್ ॥೨೮.೨೨೬॥

 

ತಸ್ಯಾ ಯಾಶ್ಚ ಸ್ನುಷಾಃ ಸರ್ವಾಸ್ತಾಭಿಃ ಸಹ ಪುರಸ್ಕೃತಾಮ್ ।

ಕೃತ್ವಾ ತಂ ಧೃತರಾಷ್ಟ್ರಂ ಚ ವಿದುರಾದೀಂಶ್ಚ ಸರ್ವಶಃ ॥೨೮.೨೨೭॥

 

ಪಾಣ್ಡವಾಃ ಪ್ರಧನಸ್ಥಾನಂ ಸಭಾರ್ಯ್ಯಾಃ ಪೃಥಯಾ ಸಹ ।

ಕೃಷ್ಣಾಭ್ಯಾಂ ಚ ಯಯುಸ್ತತ್ರ ಗಾನ್ಧಾರ್ಯ್ಯಾಸ್ತಪಸೋ ಬಲಮ್ ॥೨೮.೨೨೮॥

 

ಈರೀತಿಯಾಗಿ ಹೇಳಲ್ಪಟ್ಟ ಅವಳು ಆಗ ಸುಮ್ಮನಾಗುತ್ತಾಳೆ.

ಉಳಿದ ಮೂರು ಜನ ಪಾಂಡವರಿಂದ ನಮಸ್ಕೃತಳಾಗುತ್ತಾಳೆ.

ವೇದವ್ಯಾಸರ ಮಾತಿನಿಂದ ಕೂಡಾ ಕಿಂಚಿತ್ ಶಾಂತಳಾಗುತ್ತಾಳೆ.

 

ಎಲ್ಲಾ ಸೊಸೆಯರಿಂದ ಕೂಡಿದ ಗಾಂಧಾರಿ,

ವಿದುರ ಹಾಗೂ ಧೃತರಾಷ್ಟ್ರನನ್ನೂ ಕರೆದುಕೊಂಡು ಪಾಂಡವರು, ಕುಂತಿ, ತಮ್ಮ ಹೆಂಡಂದಿರು,

ವೇದವ್ಯಾಸರು ಮತ್ತು ಶ್ರೀಕೃಷ್ಣ ಪರಮಾತ್ಮನೊಂದಿಗೆ ರಣಭೂಮಿಯತ್ತ ತೆರಳಿದರು.

 

ಜಾನನ್ ಪಾಣ್ಡವರಕ್ಷಾರ್ತ್ಥಂ ಚಿಕೀರ್ಷುಸ್ತತ್ತಪೋವ್ಯಯಮ್ ।

ವೇದೇಶ್ವರೋ ದದೌ ದಿವ್ಯಂ ಚಕ್ಷುಃ ಸತ್ಯವತೀಸುತಃ ॥೨೮.೨೨೯॥

 

ಗಾಂಧಾರಿಗೆ ಅವಳ ತಪಸ್ಸಿನ ಬಲವನ್ನು ತಿಳಿದವರಾದ ವೇದವ್ಯಾಸರು,

ಪಾಂಡವರಕ್ಷಣೆಗೆ ಮತ್ತವಳ ತಪೋವ್ಯಯಕ್ಕೆ ದಿವ್ಯಚಕ್ಷುಸನ್ನು ಕೊಟ್ಟರು.

 

ತೇನ ದೃಷ್ಟ್ವಾ ಪ್ರೇತದೇಹಾನ್ ಸರ್ವಾಂಸ್ತತ್ರ ಸಮಾಕುಲಾ ।

ಶಶಾಪ ಯಾದವೇಶಾನಂ ತ್ವಯಾSಸ್ಮತ್ಕುಲನಾಶನಮ್ ॥೨೮.೨೩೦॥

 

ಯತ್ ಕೃತಂ ತತ್ ತವ ಕುಲಂ ಗಚ್ಛತ್ವನ್ಯೋನ್ಯತಃ ಕ್ಷಯಮ್ ।

ಇತ್ಯುಕ್ತೋ ಭಗವಾನ್ ಕೃಷ್ಣಃ ಸ್ವಚಿಕೀರ್ಷಿತಮೇವ ತತ್ ॥೨೮.೨೩೧॥

 

ಅಸ್ತ್ವೇವಮಿತ್ಯಾಹ ವಿಭುರೀಶ್ವರೋSಪ್ಯನ್ಯಥಾ ಕೃತೌ ।

ತೇನ ತಸ್ಯಾಸ್ತಪೋ ನಷ್ಟಂ ಹೀನಾ ಸಾSತೋ ಹಿ ಭರ್ತ್ತೃತಃ ॥೨೮.೨೩೨॥

 

ಆ ದಿವ್ಯಚಕ್ಷುಸಿನಿಂದ ಸತ್ತ ಎಲ್ಲರ ದೇಹವನ್ನು ನೋಡಿದ ಗಾಂಧಾರಿ,

ಶ್ರೀಕೃಷ್ಣನನ್ನು ಕುರಿತು- ‘ನಿನ್ನಿಂದಲೇ ಆಗಿದೆ ನಮ್ಮ ಕುಲನಾಶಕ್ಕೆ ದಾರಿ.

ಅದರಿಂದ ನಿನ್ನ ಕುಲವೂ ಕೂಡಾ ಪರಸ್ಪರ ಹೊಡೆದಾಡಿಕೊಂಡು ನಾಶವನ್ನು ಹೊಂದಲಿ’ ಎಂದು ಕೊಡುತ್ತಾಳೆ ಶಾಪ, ಈರೀತಿ ಶಪಿಸಲ್ಪಟ್ಟ ಕೃಷ್ಣ ಶಾಪವನ್ನು ಹುಸಿ ಮಾಡಲು ಸಮರ್ಥನಿದ್ದರೂ ಕೂಡಾ, ‘ಹಾಗೇ ಆಗಲಿ, ಎಂದುದವನ ಸಂಕಲ್ಪ.

ನಿನ್ನ ಶಾಪವನ್ನು ನಾನು ಸ್ವೀಕರಿಸಿದ್ದೇನೆ’ ಎಂದು ಶ್ರೀಕೃಷ್ಣನ ಮಾತು,

ಈ ಶಾಪ ಕೊಟ್ಟದ್ದರಿಂದ ಗಾಂಧಾರಿಯ ತಪಸ್ಸು ಕುಂದಿಸುವುದೇ ಇತ್ತು.

ಅವಳು ಗಂಡನ ತಪಸ್ಸಿಗಿಂತಲೂ ಕಡಿಮೆ ತಪಸ್ಸಿನವಳಾದದ್ದಕ್ಕೆ ಹೇತು.

 

ನಾಶಯೇದ್ಧಿ ಸದಾ ವಿಷ್ಣುಃ ಸ್ವಯೋಗ್ಯಾದಧಿಕಾನ್ ಗುಣಾನ್ ।

ತತ ಆಶ್ಲಿಷ್ಯ ಭರ್ತ್ತೄಣಾಂ ದೇಹಾನ್ ಪ್ರರುದತೀಃ ಸ್ತ್ರಿಯಃ ॥೨೮.೨೩೩॥

 

ಸರ್ವಾ ದುರ್ಯ್ಯೋಧನಾದೀನಾಂ ದರ್ಶಯಾಮಾಸ ಕೇಶವಃ ।

ಕೃಷ್ಣಾಯೈ ಸಾ ಚ ತಂ ದೇವಮಸ್ತುವತ್ ಪೂರ್ಣ್ಣಸದ್ಗುಣಮ್ ॥೨೮.೨೩೪॥

 

ಶ್ರೀಕೃಷ್ಣ ಪರಮಾತ್ಮನು ಯಾವಾಗಲೂ ಜೀವರ ಯೋಗ್ಯತೆಗಿಂತ ಮಿಗಿಲಾದ ಗುಣಗಳನ್ನು ನಾಶ ಮಾಡುತ್ತಾನೆ. (ಹಾಗೇ, ಗಾಂಧಾರಿಯ ಯೋಗ್ಯತೆಗೆ ಮೀರಿದ ತಪಃಶಕ್ತಿಯನ್ನು ಶ್ರೀಕೃಷ್ಣ ಪರಮಾತ್ಮ ನಾಶಮಾಡುತ್ತಾನೆ).

ತದನಂತರ ಗಂಡಂದಿರಾಗಿರುವ ದುರ್ಯೋಧನಾದಿಗಳ ದೇಹಗಳನ್ನು ಅಪ್ಪಿ ಅಳುವ ಕೌರವ ಸ್ತ್ರೀಯರನ್ನು ,

ದ್ರೌಪದಿಗಾಗಿ ಶ್ರೀಕೃಷ್ಣನು ತೋರಿಸುತ್ತಾನೆ, ಅವಳು ಮಾಡುವಳು ಗುಣಪೂರ್ಣನಾದ ಶ್ರೀಕೃಷ್ಣ ಸ್ತೋತ್ರವನ್ನು.

 

ತತೋ ದೇಹಾನ್ ಪ್ರಸಿದ್ಧಾನಾಂ ಪಾರ್ತ್ಥಾಃ ಸಮದಹನ್ ಸತಾಮ್ ।

ಅನ್ಯೇಷಾಂ ಧೃತರಾಷ್ಟ್ರಾದೀನ್ ಪುರಸ್ಕೃತ್ಯೈವ ಕಾಂಶ್ಚನ ।

ಸೂತೈಃ ಪಞ್ಚಭಿರೇವ ಸ್ವೈಃ ಸರಸ್ವತ್ಯಾಂ ಪ್ರಚಿಕ್ಷಿಪುಃ ॥೨೮.೨೩೫॥

 

ತದನಂತರ ಪಾಂಡವರು ಪ್ರಸಿದ್ಧರಾಗಿರುವ ಸಜ್ಜನರ ದೇಹಗಳನ್ನು ಸುಟ್ಟರು.

ದುಷ್ಟರ ದೇಹಗಳನ್ನು ಧೃತರಾಷ್ಟ್ರಾದಿಗಳ ಮುಂದಿಟ್ಟುಕೊಂಡು ಸುಡಿಸಿದರು.

ಕೆಲವರನ್ನು ತಮ್ಮೈದು ಸಾರಥಿಗಳಿಂದ ಸರಸ್ವತೀ ನದಿಯಲ್ಲಿ ಹಾಕಿಸಿದರು.

 

ಸ್ನೇಹಾನ್ನೃಪೋ ಯಮೌ ಚ ಸ್ವಾನ್ ನಾSಜೌ ತಸ್ಮಿನ್ ಹ್ಯಯೋಜಯನ್ ।

ಶವಾಃ ಪ್ರಾಯೋ ಬಹುತ್ವೇನ ತತ್ರತತ್ರೈವ ಸಂಸ್ಥಿತಾಃ ॥೨೮.೨೩೬॥

 

ಧರ್ಮರಾಜ, ನಕುಲ ಮತ್ತು ಸಹದೇವರಿಗೆ ತಮ್ಮ ಸಾರಥಿಗಳ ಮೇಲೆ ಪ್ರೀತಿ,

ಅದರಿಂದ ಆ ಯುದ್ಧದಲ್ಲಿ ಪಾಲ್ಗೊಳ್ಳುವಂತೆ ಮಾಡಿರದಿತ್ತು ಅವರ ರೀತಿ.

ಶವಗಳು ಬಹಳ ಇದ್ದುದರಿಂದ ಕೆಲವು ಅಲ್ಲೇ ಅವಶಿಷ್ಟವಾಗಿ ಬಿದ್ದಿದ್ದ ಗತಿ.

 

ತತೋ ದದತ್ಸು ಪಾನೀಯಂ ಗಙ್ಗಾಯಾಂ ಸ್ವಜನಸ್ಯ ತು ।

ಪೃಥಾ ಕರ್ಣ್ಣಾಯ ದತ್ತೇತಿ ಪಾರ್ತ್ಥಾನಾಹಾಗ್ರಜಂ ಚ ತಮ್ ॥೨೮.೨೩೭॥

 

ತತೋ ಹಾಹೇತಿ ವಿಲಪನ್ ರಾಜಾ ಪರಮದುಃಖಿತಃ ।

ಶಶಾಪ ಸರ್ವನಾರೀಣಾಂ ಗುಹ್ಯಂ ಹೃದಿ ನ ತಿಷ್ಠತು ॥೨೮.೨೩೮॥

 

ಆನಂತರ ಪಾಂಡವರು ಗಂಗೆಯಲ್ಲಿ ತಮ್ಮವರಿಗೆ ತರ್ಪಣ ಕೊಡುತ್ತಿರಲು,                      

ಕುಂತಿಯು ‘ಕರ್ಣನಿಗೂ ತರ್ಪಣ  ಕೊಡಿ’ ಎಂದು ಅವರಿಗೆ ಹೇಳುವಳು.

‘ಕರ್ಣ ಪಾಂಡವರಲ್ಲಿ ಅಗ್ರಜ’ ಎನ್ನುವ ರಹಸ್ಯವನ್ನು ಹೊರಹಾಕುವಳು.

 

ಈ ಮಾತನ್ನು ಕೇಳಿದ ಧರ್ಮಜ ಬಹಳ ಬೇಗುದಿಯಿಂದ ಕೂಡಿ, ಹಾ..ಹಾ.. ಎಂದು ಮಾಡಿದ ಪ್ರಲಾಪ,

ಪ್ರಲಾಪಿಸುತ್ತಾ ‘ಎಲ್ಲಾ ಹೆಣ್ಣುಮಕ್ಕಳ ಹೃದಯದಲ್ಲಿ ರಹಸ್ಯವು ನಿಲ್ಲದಿರಲಿ’  ಎಂದು ಹಾಕಿದನು ಶಾಪ.

 

ಹಾ ಮಾತಸ್ತವ ಧೃತ್ಯೈವ ವಯಂ ಸರ್ವೇ ಭೃಶಂ ಹತಾಃ ।

ಜ್ಯೇಷ್ಠಂ ಪಿತೃಸಮಂ ಹತ್ವಾ ಪ್ರತಿಪತ್ಸ್ಯಾಮ ಕಾಂ ಗತಿಮ್ ॥೨೮.೨೩೯॥

 

ಪ್ರಲಾಪಿಸುತ್ತಾ ಧರ್ಮರಾಜ ಹೇಳುತ್ತಾನೆ- ‘ಎಲೈ ತಾಯಿಯೇ, ನಿನ್ನ ಅತಿಯಾದ ಧೈರ್ಯದಿಂದ ನಾವೆಲ್ಲರೂ ನಾಶವಾದೆವು,

ತಂದೆಗೆ ಸಮನಾಗಿರುವ ಹಿರಿಯಣ್ಣನನ್ನು ಕೊಂದ ಪಾಪಿಷ್ಠರಾದ ನಾವು ಯಾವ ಗತಿಯನ್ನು ಹೊಂದಿಯೇವು?’.

 

ಏವಂ ವದನ್ತಂ ಕೌನ್ತೇಯಂ ವಾಸುದೇವಃ ಸನಾರದಃ ।

ಶಮಯಾಮಾಸ ಸದ್ವಾಕ್ಯೈರ್ಗ್ಗುಣಾನ್ ಕರ್ಣ್ಣಸ್ಯ ಚಾಬ್ರವೀತ್ ॥೨೮.೨೪೦॥

 

ಈರೀತಿಯಾಗಿ ಪ್ರಲಾಪಿಸುತ್ತಿರುವ ಧರ್ಮರಾಜನನ್ನು,

ನಾರದರ ಕೂಡಿದ ಕೃಷ್ಣನು ಆಡಿದ ಒಳ್ಳೆಯ ಮಾತುಗಳನ್ನು ,

ಸಮಾಧಾನ ಮಾಡಿ, ಅವರು ಹೇಳಿದರು ಕರ್ಣನ ಗುಣಗಳನ್ನೂ.

 

ತತಸ್ತೇ ಪ್ರೇತಕಾರ್ಯ್ಯಾಣಿ ಚಕ್ರುಃ ಸರ್ವೇSಪಿ ಸರ್ವಶಃ ।

ಸರ್ವೇಷಾಮಾಧಿರಾಜ್ಯೇ ಚ ಸ್ಥಿತೋSಭೂತ್ ಪಾಣ್ಡವಾಗ್ರಜಃ ॥೨೮.೨೪೧॥

 

ತದನಂತರ ಅವರೆಲ್ಲರೂ ಮಾಡುತ್ತಾರೆ ವಿಧಿಯುಕ್ತ ಪ್ರೇತಕಾರ್ಯಗಳನ್ನು ,

ಪಾಂಡವಾಗ್ರಜ ಧರ್ಮಜನು  ರಾಜನಾಗಿ ಅಭಿಷಿಕ್ತನಾಗಿ,ಮತ್ತೆ ನಿಯುಕ್ತನಾದನು.

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವರಾಜ್ಯಲಾಭೋನಾಮ ಅಷ್ಟಾವಿಂಶೋSದ್ಧ್ಯಾಯಃ ॥

 

[ ಆದಿತಃ ಶ್ಲೋಕಾಃ ೪೪೪೧+೨೪೧=೪೬೮೨ ]

 

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ವಿರಚಿತವಾದ,

ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ,

ಪಾಂಡವರಾಜ್ಯಲಾಭ ಹೆಸರಿನ ಇಪ್ಪತ್ತೆಂಟನೇ ಅಧ್ಯಾಯ,

ಶ್ರೀಕೃಷ್ಣ, ವಾಯುದೇವರಿಗರ್ಪಿಸಿದ ಧನ್ಯತಾ ಭಾವ.

*********

No comments:

Post a Comment

ಗೋ-ಕುಲ Go-Kula