Sunday 4 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 32: 59-106

 

ತತ್ರ ಕಾಳೀ ಭೀಮಭಾರ್ಯ್ಯಾ ವೈಷ್ಣವಂ ಯೋಗಮಾಸ್ಥಿತಾ।

ಕೃಷ್ಣಯೈಕತ್ವಮಾಪನ್ನಾ ತ್ಯಕ್ತ್ವಾ ದೇಹಂ ತು ಮಾನುಷಮ್ ॥ ೩೨.೫೯ ॥

 

ಸುಭದ್ರಾದ್ಯಾಸ್ತು ಯಾ ಭಾರ್ಯ್ಯಾಃ ಪಾರ್ತ್ಥಾನಾಂ ತು ತದಾಜ್ಞಯಾ ।

ಯುಯುತ್ಸುಶ್ಚಾತ್ರ ಶಿಕ್ಷಾರ್ತ್ಥಂ ಪೌತ್ರಸ್ಯೈವಾವಸನ್ ಪುರೇ ॥ ೩೨.೬೦ ॥

 

ಆ ಸಂದರ್ಭದಲ್ಲಿ ಭೀಮಪತ್ನಿ ಕಾಳೀದೇವಿಯಿಂದ ಪರಮಾತ್ಮನ ಧ್ಯಾನದ ಅವಲಂಬನೆ,

ಮನುಷ್ಯದೇಹವನ್ನು ಬಿಟ್ಟು, ದ್ರೌಪದೀದೇವಿಯಲ್ಲಿ ಐಕ್ಯವನ್ನು ಹೊಂದಿದ ತಪದ ಸಾಧನೆ.

ಸುಭದ್ರಾ ಮೊದಲಾದವರು, ಯುಯುತ್ಸು ಕೂಡಾ ಪಾಂಡವರ ಆಜ್ಞೆಯಂತೆ,

ಪರೀಕ್ಷಿತರಾಜನ ಮಾರ್ಗದರ್ಶನಕ್ಕಾಗಿ ಅಲ್ಲಿಯೇ ಎಲ್ಲರೂ ವಾಸಮಾಡಿದರಂತೆ.

 

ಸನ್ತ್ಯಜ್ಯ ರಾಜ್ಯಚಿಹ್ನಾನಿ ವೈಷ್ಣವಂ ಯೋಗಮಾಸ್ಥಿತಾಃ ।

ವೀರಾಧ್ವಾನಂ ಯಯುಃ ಸರ್ವೇ ಕೃಷ್ಣಯಾ ಸಹ ಪಾಣ್ಡವಾಃ ॥ ೩೨.೬೧ ॥

 

ದ್ರೌಪದೀದೇವಿಯಿಂದ ಕೂಡಿದ ಪಾಂಡವರು ತಮ್ಮ ಲಾಂಛನಗಳನ್ನು ಬಿಡುತ್ತಾರೆ, ನಾರಾಯಣನ ಧ್ಯಾನವನ್ನು ಮಾಡುತ್ತಾ, ವೀರರ ಮಾರ್ಗವನ್ನು ಹಿಡಿಯುತ್ತಾರೆ. (ಅಂದರೆ ರಾಜ್ಯತ್ಯಾಗ ಮಾಡಿದರು,

ಕಾಡಿನ ಮಾರ್ಗವನ್ನು ಹಿಡಿದರು).

 

 

ಪ್ರಾಗುದೀಚೀಂ ದಿಶಂ ಪೂರ್ವಂ ಯುಯುಸ್ತತ್ರಾರ್ಜ್ಜುನೋ ಧನುಃ ।

ನಾತ್ಯಜಲ್ಲೋಭತಸ್ತಂ ತು ಸಮುದ್ರಮುಪ ಪಾವಕಃ ॥ ೩೨.೬೨ ॥

 

ದೃಷ್ಟ್ವಾ ಯಯಾಚೇ ರಾಜಾನಂ ತದುಕ್ತಃ ಪ್ರಾಸ್ಯದಮ್ಬುಧೌ ।

ಪ್ರಾತಿಭಾವ್ಯಂ ತು ವರುಣೇ ನಿಸ್ತೀರ್ಯ್ಯಾಗ್ನಿರದೃಶ್ಯತಾಮ್ ॥ ೩೨.೬೩ ॥

 

ಯಯೌ ತೇSಪಿ ಯಯುಃ ಕ್ಷಿಪ್ರಂ ಪ್ಲವನ್ತಃ ಸಪ್ತ ವಾರಿಧೀನ್ ।

ಅಹೋಭಿಃ ಸಪ್ತಭಿರ್ಯ್ಯೋಗಂ ಸಮಾರೂಢಾಃ ಪ್ರದಕ್ಷಿಣಮ್  ॥ ೩೨.೬೪ ॥

 

ಕೃತ್ವಾ ಕ್ವಚಿದಸಜ್ಜನ್ತ ಆಸೇದುರ್ಗ್ಗನ್ಧಮಾದನಮ್ ।

ತತ್ರ ನಾರಾಯಣಕ್ಷೇತ್ರೇ ತೇಷಾಂ ತನ್ವೋSಪತನ್ ಕ್ರಮಾತ್ ॥ ೩೨.೬೫ ॥

 

ಮೊದಲು ಅವರು ಪೂರ್ವ ಹಾಗೂ ಉತ್ತರ ದಿಕ್ಕಿನ ಮಧ್ಯದ ದಿಕ್ಕನ್ನು ಕುರಿತು ತೆರಳುತ್ತಾರೆ. ಹೀಗೆ ಹೋಗುವಾಗ ಅರ್ಜುನನಿಗೆ ಗಾಂಡೀವ ಧನುಸ್ಸನ್ನು ಬಿಡಲಾಗದಂಥ ಲೋಭದಾಸರೆ.

ಆಗ ಸಮುದ್ರದ ಬಳಿ ಅಗ್ನಿ ಕಾಣಿಸಿಕೊಂಡ,

ರಾಜನನ್ನು (ಯುಧಿಷ್ಠಿರನನ್ನು)ಬೇಡಿಕೊಂಡ.  [ನಿನ್ನ ಸಹೋದರ ಅರ್ಜುನ ಗಾಂಡೀವವನ್ನು ಇಲ್ಲಿಯೇ ಬಿಟ್ಟು ವನಕ್ಕೆ ತೆರಳಬೇಕು. ಅವನಿಗೆ ಇನ್ನು ಮುಂದೆ ಇದರ ಅವಶ್ಯಕತೆ ಇರುವುದಿಲ್ಲವೆಂಬುದನ್ನು ಅರಿಯಬೇಕು].

ಆಗ ಅರ್ಜುನನು ಯುಧಿಷ್ಠಿರನಿಂದ ಹೇಳಲ್ಪಟ್ಟವನಾಗಿ ಗಾಂಡೀವವನ್ನು ಸಮುದ್ರಕ್ಕೆ ಎಸೆದ.

ವರುಣನಿಗೆ ಸೇರಿರುವ ಆ ಬಿಲ್ಲನ್ನು ಹಿಂದೆ ಅಗ್ನಿ ತಂದು ಅರ್ಜುನನಿಗೆ ಕೊಟ್ಟಿದ್ದ.

ಹೀಗೆ ತನ್ನಲ್ಲಿ ಗಿರವಿ ಇಟ್ಟಿದ್ದ ಆ ಧನುಸ್ಸನ್ನು ಅಗ್ನಿ ವರುಣನಿಗೆ ಹಿಂತಿರುಗಿಸಿ ಅಲ್ಲಿಂದ ಕಾಣದಾದ.

 

ಪಾಂಡವರು ತಮ್ಮ ಯೋಗಶಕ್ತಿಯನ್ನು ಆಶ್ರಯಿಸಿದರು,

ವೇಗದಲ್ಲಿ ಏಳು ಸಮುದ್ರಗಳನ್ನು ಏಳು ದಿನಗಳಲ್ಲಿ ದಾಟಿದರು,

ಭೂಮಿಗೆ ಪ್ರದಕ್ಷಿಣೆ ಬಂದು, ಗಂಧಮಾದನಕ್ಕೆ ಬಂದರು.

ಆ ನಾರಾಯಣ ಕ್ಷೇತ್ರದಲ್ಲಿ ಅವರ ದೇಹಗಳ ಬಿಟ್ಟು ಎದ್ದರು.

 

ದ್ರೌಪದೀಸಹದೇವಾದಿಪಞ್ಚಾನಾಂ ತತ್ರ ಮಾರುತಿಃ ।

ಸದೇಹನಾಕಾನಿಚ್ಛುತ್ವಾದ್ ದೇಹಪ್ರಪತನಂ ಹಿ ತತ್ ॥ ೩೨.೬೬ ॥

 

ತೇಷಾಮಿಹೇತಿ ಯಾಥಾರ್ತ್ಥಂ ಜಾನನ್ ಪಪ್ರಚ್ಛ ಧರ್ಮ್ಮಜಮ್ ।

ಕೇನಕೇನಾಪತದ್ ದೇಹೋ ದೋಷೇಣ  ನ ಇತಿ ಕ್ರಮಾತ್ ॥ ೩೨.೬೭ ॥

 

ದ್ರೌಪದಿ ಮೊದಲಾಗಿರುವ ಐದು ಜನರು ಸಶರೀರ ಸ್ವರ್ಗವನ್ನು ಬಯಸದೇ ಇರುವುದರಿಂದ ,

ಅವರ ದೇಹದ ಬೀಳುವಿಕೆಯು ಆಗಿದೆ ಎನ್ನುವ ಯಥಾರ್ಥ ಸಂಗತಿಯನ್ನು ಭೀಮ ತಿಳಿದಿದ್ದ .

ಆದರೂ, ಭೀಮನು ಧರ್ಮರಾಜನನ್ನು ಕುರಿತು ‘ಯಾವಯಾವ ದೋಷದಿಂದ ನಮ್ಮ ದೇಹ ಬಿತ್ತು’ ಎಂದು ಕೇಳಿದ.

 

ಮೃತಿಕಾಲೇ ಹಿ ಯೋ ಯಸ್ಯ ದೋಷಂ ವಕ್ತ್ಯೃಣಮೋಚನಮ್ ।

ತಸ್ಮಾತ್ ಸ್ಯಾದುಕ್ತದೋಷಸ್ಯೇತ್ಯಾಹ ಯಚ್ಛ್ರುತಿರೇವ ತತ್ ॥ ೩೨.೬೮ ॥

 

ಸಾಯುವ ಕಾಲದಲ್ಲಿ ಯಾರು ಯಾರ ದೋಷವನ್ನು ಹೇಳುತ್ತಾನೆ,

ಆ ದೋಷವನ್ನು ಹೇಳುವವನಿಂದ ಹೇಳಲ್ಪಟ್ಟವನಿಗೆ ಋಣವಿಮೋಚನೆ. 

ಈ ಋಣಪರಿಹಾರದ ಮಾರ್ಗವು ವೇದದಲ್ಲೆ ಹೇಳಲ್ಪಟ್ಟು ಸ್ಪಷ್ಟ ಪಡಿಸಿದ ಸೂಚನೆ.

 

ಋಣಮೋಕ್ಷಾಯ ಸರ್ವೇಷಾಂ ಭೀಮೋ ದೋಷಾನವಾದಯತ್ ।

ಸೋSಪೀಚ್ಛಾಪತಿತಾನ್ ದೇಹಾನಜಾನಞ್ಛುದ್ಧಕರ್ಮ್ಮಣಾಮ್  ॥ ೩೨.೬೯ ॥

 

ಅಪಶ್ಯನ್ ಕಾರಣಂ ಪ್ರಾಹ ದೋಷಾನ್ ಸ್ಯಾದೇವಮಿತ್ಯಪಿ ।

ರಾಜಾ ಸಮ್ಭಾವನಾಮಾತ್ರಂ ನಹಿ ಕಾರ್ಯ್ಯಮಕಾರಣಮ್ ॥ ೩೨.೭೦ ॥

 

ಎಲ್ಲರ ಋಣದ ಬಿಡುಗಡೆಗಾಗಿ ಭೀಮಸೇನನು ಎಲ್ಲರ ದೋಷಗಳನ್ನೂ ಯುಧಿಷ್ಠಿರನಿಂದ ಹೇಳಿಸಿದ.

ಯುಧಿಷ್ಠಿರ ಶುದ್ಧಕರ್ಮರಾದ ತನ್ನ ತಮ್ಮಂದಿರು ಮತ್ತು ಹೆಂಡತಿಯ ದೇಹ ಅವರ ಇಚ್ಛೆಯಿಂದ ಬಿದ್ದಿರುವುದು ತಿಳಿಯದ್ದರಿಂದ,

ಕಾರಣವೂ ತೋರದೇ, ‘ಹೀಗೆ ಇರಬಹುದು’ ಎಂದು ಊಹಿಸಿ, (ಸಮ್ಭಾವನಾಮಾತ್ರಮ್) ಎಲ್ಲರ ದೋಷಗಳನ್ನು ಹೇಳಿದ.

 

‘ಸ್ವಚ್ಛನ್ದಮೃತ್ಯವೋ ಯೋಗಾದ್ ದೇಹಾನುತ್ಸೃಜ್ಯ ಪಾಣ್ಡವಾಃ ।

ಕೃಷ್ಣಾ ಚಾSಪುಃ ಪರಂ ಸ್ಥಾನಂ ಯನ್ನ ಯಾನ್ತ್ಯಪಿ ದೇವತಾಃ’ ॥ ೩೨.೭೧ ॥

 

ಪಾಂಡವರು ತಾವು ಬಯಸಿದಂತಹ ಸಾವನ್ನು ಪಡೆಯಬಲ್ಲವರು.

ಅವರು ಧ್ಯಾನಯೋಗದಿಂದ ದೇಹ ಬಿಟ್ಟು ಉತ್ಕೃಷ್ಟ ಸ್ಥಾನವನ್ನು ಹೊಂದಿದರು. ದೇವತೆಗಳಿಗೂ ಕೂಡಾ ಅಲಭ್ಯವಾದಂತಹ ಸ್ಥಾನವನ್ನು ಹೊಂದಿದರು.

 

ಇತಿ ಶ್ರುತೇರ್ನ್ನ ತೇ ಪಾಪಾದ್ ದೇಹಾಂಸ್ತತ್ಯಜುರೂರ್ಜ್ಜಿತಾಃ ।

‘ಋಣಾನ್ಯುನ್ಮುಚ್ಯ ದೋಷೋಕ್ತ್ಯಾ ಸ್ವಾನಾಂ ಭೀಮಃ ಸ್ವಕಾಂ ತನುಮ್  ॥ ೩೨.೭೨ ॥

 

‘ತತ್ಯಾಜ ಪರಮಂ ದ್ಧ್ಯಾಯನ್ನಾಪ ಚ ಸ್ಥಾನಮುತ್ತಮಮ್ ’।

ಇತಿ ಸ್ಕಾನ್ದಪುರಾಣೋಕ್ತಂ ವ್ಯಾಸವಾಕ್ಯಮೃಷೀನ್ ಪ್ರತಿ ॥ ೩೨.೭೩ ॥

 

ಈರೀತಿಯಾಗಿ ವೇದವಾಣಿ ಇರುವುದರಿಂದ, ಆ ಶ್ರೇಷ್ಠರಾದ ಪಾಂಡವರು ಪಾಪದಿಂದ ದೇಹಗಳನ್ನು ಬಿಡಲಿಲ್ಲ ಎನ್ನುವುದು ಸ್ಪಷ್ಟ. ‘ಭೀಮಸೇನನು ತಮ್ಮವರ ದೋಷವನ್ನು ಹೇಳಿಸುವುದರ ಮೂಲಕ ಅವರ ಋಣವನ್ನು ಪರಿಹರಿಸಿ, ತನ್ನ ಶರೀರವನ್ನೂ ಬಿಟ್ಟ. ನಾರಾಯಣನನ್ನು ಧ್ಯಾನಮಾಡುತ್ತಾ , ಉತ್ಕೃಷ್ಟವಾದ ಸ್ಥಾನವನ್ನು ಹೊಂದಿದ ಭೀಮಸೇನ.

ಇದು ಸ್ಕಾಂದಪುರಾಣದಲ್ಲಿ ಋಷಿಗಳನ್ನು ಕುರಿತು ವೇದವ್ಯಾಸರೇ ನುಡಿದಂತಹ ವಚನ.

 

[ಧರ್ಮರಾಜನಿಂದ ತಾನು ಊಹಿಸಿ ಹೇಳಿದ ದೋಷಗಳ ವಿಶ್ಲೇಷಣೆ,

ನಿಜವಾಗಿಯೂ ಅವು ಅವರ ದೋಷಗಳೇ ಆಗಿರಲಿಲ್ಲ ಎಂಬ ವಿವರಣೆ.]

 

ಭೀಮಾದೃತೇ ಹಿ ಚತುರ್ಷು ಪಕ್ಷಪಾತಸ್ತು ವಾಸವೌ ।

ಯೋಗ್ಯ ಏವೇತಿ ಕೃಷ್ಣಾಯಾ ನ ದೋಷಃ ಸ್ಯಾತ್ ಕಥಞ್ಚನ ॥ ೩೨.೭೪ ॥

 

ನೀತಿರೂಪೇ ವೀರ್ಯ್ಯಬಲೇ ಮಹಾನ್ತ್ಯೇಷಾಂ ಯತಃ ಕ್ರಮಾತ್ ।

ಪ್ರಾಣತ್ವಾದ್ ಭೋಗಶಕ್ತಿಶ್ಚ ನಹಿ ದೋಷಾಯ ಮಾರುತೇಃ ॥ ೩೨.೭೫ ॥

 

‘ಯಥಾಸ್ವರೂಪವಿಜ್ಞಾನಮಾತ್ಮನ್ಯಪಿ ನ ದೋಷಕೃತ್ ’ ।

ಇತಿ ವ್ಯಾಸಸ್ಮೃತೇರೇಷಾಮುಕ್ತದೋಷೋದ್ಭವಃ ಕಥಮ್ ॥ ೩೨.೭೬ ॥

 

ಭೀಮನನ್ನು ಬಿಟ್ಟು ಉಳಿದ ನಾಲ್ಕುಜನ ಪಾಂಡವರಲ್ಲಿ ಗುಣದಲ್ಲಿ ಶ್ರೇಷ್ಠನಾದವನು ಅರ್ಜುನ.

ಹೀಗಾಗಿ ಗುಣಾನುರೂಪವಾದಪ್ರೀತಿ ದೋಷವಲ್ಲ ಎಂಬುದು ಸರಳ ಮತ್ತು ಸಾಮಾನ್ಯ.

ನೀತಿ, ಸೌಂದರ್ಯ, ವೀರ್ಯ ಮತ್ತು ಬಲ - ಈ ಗುಣಗಳು ಹೆಚ್ಚುವಿಕೆಯ ಕ್ರಮದಲ್ಲಿ,

ಕ್ರಮವಾಗಿ ಸಹದೇವ, ನಕುಲ, ಯುಧಿಷ್ಠಿರ, ಅರ್ಜುನ ಮತ್ತು ಭೀಮರಲ್ಲಿ ಇದ್ದವಲ್ಲಿ.

ಹಾಗಾಗಿ ಇದೂ ದೋಷಕ್ಕೆ ಕಾರಣವಲ್ಲ. ಹೆಚ್ಚು ಕ್ರಿಯೆಯ ಭೀಮಗೆ ಭೋಗಶಕ್ತಿ ಬಹಳ.

ಅವನ ಆ ಶಕ್ತಿ ದೋಷದಾಯಕವಲ್ಲ.

‘ತನ್ನಲ್ಲಿ ಎಷ್ಟು ಗುಣ ಇದೆಯೋ, ಅಷ್ಟನ್ನು ತಿಳಿದುಕೊಳ್ಳುವುದೂ ದೋಷವಲ್ಲ’ -

ಇದು ವ್ಯಾಸಸ್ಮೃತಿಯಲ್ಲಿ ಬಂದಿರುವ ಮಾತು. ಧರ್ಮಜ ಹೇಳಿದ ದೋಷ ಹೇಗೆ ಬಂದೀತು?

 

ಕದಾಚಿದತಿಮಾನೋSಪಿ ತ್ರಯಾಣಾಮೇಷು ಜಾಯತೇ ।

ತಥಾSಪಿ ತತ್ಫಲಂ ನೈತತ್ ತಾರತಮ್ಯಂ ಹಿ ಮುಕ್ತಿಗಮ್ ॥ ೩೨.೭೭ ॥

 

ಗುಣದೋಷಾಧಿಕಾಲ್ಪತ್ವಾದತ್ರಸ್ಥಮಪಿ ಹಿ ಶ್ರುತಮ್ ।

ಆರಬ್ಧಕರ್ಮ್ಮನಾಶೇ ಹಿ ಪತೇದ್ ದೇಹೋSಪ್ಯಪಾಪಿನಃ ॥ ೩೨.೭೮ ॥

 

ಕೆಲವು ಸಂದರ್ಭಗಳಲ್ಲಿ, ಅರ್ಜುನ ಸೇರಿದಂತೆ ಮೂವರು ತಮ್ಮ ಗುಣಗಳ ಬಗ್ಗೆ ಅತಿಯಾದ ಅಹಂಕಾರವನ್ನು ಅನುಭವಿಸಿದ್ದಿದೆ,

ಆದರೂ, ಅವರು ತಮ್ಮ ದೇಹವನ್ನು ತ್ಯಜಿಸಿರುವುದು ಅದರ ಫಲದಿಂದಲ್ಲ, ಏಕೆಂದರೆ ಅದರ ಫಲ ಮುಕ್ತಿಯಲ್ಲಿ ತಾರತಮ್ಯವಾಗಿದೆ.

ಗುಣ ಹಾಗೂ ದೋಷ ಇತ್ಯಾದಿಗಳು ಇಲ್ಲಿ ದೇಹ ಬೀಳಲು ಕಾರಣವಲ್ಲ ,ಪ್ರಾರಬ್ಧಕರ್ಮ ನಾಶವಾದಾಗ ಪಾಪಿ ಅಲ್ಲದವನ ದೇಹವೂ ಕೂಡಾ ಬಿದ್ದೇ ಬೀಳುತ್ತದೆ.

 

ಯುಧಿಷ್ಠಿರೋSಪಿ ಹಿ ಸ್ವರ್ಗ್ಗಂ ಬುಭುಜೇ ನೈವ ತತ್ತನುಃ ।

ತಿಮಾನಾದಯೋ ದೋಷಾಃ ಕುತ ಏವ ಹಿ ಮಾರುತೇಃ ॥ ೩೨.೭೯ ॥

 

ಯುಧಿಷ್ಠಿರನೂ ಕೂಡಾ ಮಾನವ ಶರೀರದಿಂದ ಸ್ವರ್ಗವನ್ನು ಭೋಗಿಸಲಿಲ್ಲ.                   

ಹೀಗಿರುವಾಗ ಯುಧಿಷ್ಠಿರ ಹೇಳಿರುವ ಅತಿಮಾನ ಇತರ ದೋಷಗಳು  ಭೀಮಸೇನನಿಗೆ ಅನ್ವಯಿಸುವುದಿಲ್ಲ.

 

ಅನಾದಿಕಾಲತಃ ಸರ್ವದೋಷಹೀನಾ ಗುಣಾಧಿಕಾಃ ।

ಸರ್ವಜೀವಗಣೇಭ್ಯೋ ಯೇ ತೇ ಹಿ ವಾಯುತ್ವಮಾಪ್ನುಯುಃ  ॥ ೩೨.೮೦ ॥

 

ಋಜವೋ ನಾಮ ಯೇ ದೇವಾ ದೇವಾನಾಮಪಿ ದೇವತಾಃ ।

ಅಭಾವಂ ಹ್ಯತಿಮಾನಾದೇರ್ಭೀಮಸ್ಯಾSಹ ಚ ಕೇಶವಃ  ॥ ೩೨.೮೧ ॥

 

ಅನಾದಿಕಾಲದಿಂದ ದೋಷರಹಿತರು ಹಾಗೂ ಎಲ್ಲಾ ಜೀವಗಣಗಳಿಗಿಂತಲೂ ಗುಣದಿಂದ ಮಿಗಿಲಾದ ಋಜುಗಳೇ ವಾಯುಪದವಿಯನ್ನು ಹೊಂದುವುದು.        

 

ಅಂತಹ ಋಜುಗಳು ದೇವತೆಗಳಿಗೂ ದೇವತೆಗಳು,ಕೃಷ್ಣ ಕೂಡಾ ಭೀಮಸೇನನಲ್ಲಿ ಅಹಂಕಾರ ಮೊದಲಾದವುಗಳ ಇಲ್ಲದಿರುವಿಕೆಯನ್ನು ಹೇಳಿರುವುದು.

 

‘ಯತ್ಕಿಞ್ಚಾSತ್ಮನಿ ಕಲ್ಯಾಣಂ ಸಮ್ಭಾವಯಸಿ ಪಾಣ್ಡವ ।

‘ಸಹಸ್ರಗುಣಮಪ್ಯೇತತ್ ತ್ವಯಿ ಸಮ್ಭಾವಯಾಮ್ಯಹಮ್’ ॥ ೩೨.೮೨ ॥

 

‘ಓ ಪಾಂಡವನೇ, ನೀನು ನಿನ್ನಲ್ಲಿ ಏನೊಂದು ಮಂಗಳವನ್ನು ತಿಳಿದುಕೊಳ್ಳುತ್ತಿರುವೆ,

ಕೃಷ್ಣನೆಂದ - ಅದು ನಿನ್ನಲ್ಲಿ ಸಾವಿರಪಟ್ಟಿದೆ ಎಂದು ನಾನು ತಿಳಿದುಕೊಂಡಿರುವೆ’ 

 

ಇತಿ ತಸ್ಮಾದ್ ಯಥಾ ಯುದ್ಧೇ ಧರ್ಮ್ಮಹಾನಿಮಮನ್ಯತ ।

ಏವಮತ್ರಾಪ್ಯಧರ್ಮ್ಮೇಣ ದೇಹಪಾತಂ ನೃಪೋSಬ್ರವೀತ್ ॥ ೩೨.೮೩ ॥

 

ಈ ಎಲ್ಲಾ ಕಾರಣಗಳಿಂದಾಗಿ ಧರ್ಮರಾಜನು, ಹೇಗೆ ಯುದ್ಧದಲ್ಲಿ ಧರ್ಮಹಾನಿಯನ್ನು ತಿಳಿದುಕೊಂಡನು,

ಹಾಗೆಯೇ ಇಲ್ಲಿಯೂ ಕೂಡಾ ‘ಅಧರ್ಮದ ಕಾರಣದಿಂದ ದೇಹದ ಬೀಳುವಿಕೆ ಆಯಿತು’ ಎಂದು ಹೇಳಿದನು.

 

ಪೂಜ್ಯೇಭ್ಯಃ ಪೂರ್ವಮೇವೈಷಾಂ ದೇಹಪಾತಮಭೀಪ್ಸತಾಮ್

ತತ್ಕಾಮಾದ್ ದೇಹಪಾತೋSಭೂನ್ನ ಪಾಪಾನ್ಮುಚ್ಯತಾಂ ಯಥಾ ॥ ೩೨.೮೪ ॥

 

ನಹಿ ಪಾಪಫಲಾನ್ಮುಕ್ತೌ ದೇಹಪಾತಃ ಕಥಞ್ಚನ ।

ಕಿನ್ತು ಕರ್ಮ್ಮಕ್ಷಯಾದೇವ ತಥಾ ಸರ್ವತ್ರ ನಿಶ್ಚಿತಃ ॥ ೩೨.೮೫ ॥

 

ಹಿರಿಯರಿಗಿಂತ ಮೊದಲೇ ತಮ್ಮ ದೇಹ ಬೀಳಬೇಕು ಎಂದು ಬಯಸಿರುವುದರಿಂದ, ದೇಹ ಬಿದ್ದಿತೇ ಹೊರತು, ಬಿದ್ದಿರುವುದು ಅಲ್ಲ  ಅದು ಯಾವುದೇ ಪಾಪದೋಷದಿಂದ. ಕರ್ಮಕ್ಷಯದಿಂದಲೇ ದೇಹಪಾತ ಎನ್ನುವುದು ಎಲ್ಲೆಡೆ ನಿಶ್ಚಿತವಾದ ಪ್ರಮೇಯ. ಮುಕ್ತಿಯಾಗುವಾಗಲೂ  ದೇಹಪಾತವಿದೆ, ಪಾಪದೋಷದ ಕಲ್ಪನೆಗಿಲ್ಲ ಅಡಿಪಾಯ.

 

ತೇಷು ಸ್ವಲೋಕಾನ್ ಪ್ರಾಪ್ತೇಷು ಧರ್ಮ್ಮಜಶ್ಚಾSತ್ಮನಾ ಸಹ ।

ಯಯೌ ಪುರೋ ದೇವರಥಸ್ತದಾSಸ್ಯಾವತತಾರ ಹ ॥ ೩೨.೮೬ ॥

 

ಹೀಗೆ ಅವರೆಲ್ಲರೂ ತಮ್ಮ ಲೋಕವನ್ನು ಹೊಂದಿದರು,

ಯುಧಿಷ್ಠಿರ ತಾನೂ ತನ್ನ ನಾಯಿ ರೂಪವೂ ಮುನ್ನಡೆದರು.

ಆಗ ಅವನ ಮುಂದೆ ಇಳಿಯಿತು ದೇವತೆಗಳ (ರಥ) ತೇರು.

 

ರಥಾಮಾರುಹೇತಿ ಕಥಿತೋ ರಥಿನಾ ಪುರತಃ ಶುನಃ ।

ಆರೋಹಮಬ್ರವೀನ್ನೈ ತದ್ ಯುಕ್ತಮಿತ್ಯಾಹ ಸೋSಪಿ ತು ॥ ೩೨.೮೭ ॥

 

ಸಾರಥಿ ಧರ್ಮರಾಜಗೆ ‘ರಥವನ್ನೇರು’ ಎಂದು ಹೇಳಿದ,

ಯುಧಿಷ್ಠಿರ ನಾಯಿಯ ಇರುವಿಕೆಯನ್ನು ಸಾರಥಿಗೆ ಹೇಳಿದ.

ಅವನು, ನಾಯಿಯನ್ನು ರಥಕ್ಕೆ ಏರಿಸಿಕೊಳ್ಳುವುದು ತರವಲ್ಲ ಎಂದ.

 

ನಾSರುಹೇಯಂ ವಿನಾ ಶ್ವಾನಮಿತಿ ತೇನ ಸ್ಥಿರೋದಿತೇ ।

ಸ್ವರೂಪಂ ದರ್ಶಯಾಮಾಸ ಧರ್ಮ್ಮೋ ಹ್ಯಾಪ್ತಃ ಶ್ವರೂಪತಾಮ್ ॥ ೩೨.೮೮ ॥

 

‘ನಾಯಿ ಇಲ್ಲದೇ ನಾನು ರಥವನ್ನೇರಲಾರೆ’ ಎಂದು ಯುಧಿಷ್ಠಿರ ಗಟ್ಟಿ ಹೇಳಿದ,

ನಾಯಿ ರೂಪದಲ್ಲಿದ್ದ ಧರ್ಮರಾಜನು ತನ್ನ ಸ್ವರೂಪವನ್ನು ಎತ್ತಿ ತೋರಿದ.

ತಾತ್ಪರ್ಯ: ಯಮಧರ್ಮನೇ ನಾಯಿಯ ರೂಪವನ್ನು ಹೊಂದಿದ್ದ.

 

ಆನೃಶಂಸ್ಯಪರತ್ವೇನ ಕೀರ್ತ್ತಿರ್ಮೇವಾSತ್ಮನೋ ವೃಷಃ ।

ಖ್ಯಾಪಯಾಮಾಸ ಕೌನ್ತೇಯರೂಪಿಣೋ ಧರ್ಮ್ಮಸೂಕ್ತಿಭಿಃ ॥ ೩೨.೮೯ ॥

 

ಕುಂತಿಯ ಮಗನ ರೂಪದಲ್ಲಿರುವ, ತಾನೇ ಯಮಧರ್ಮನು ಆಗಿರುವ ,

ತಾನು ಅತ್ಯಂತ ಕೃಪೆಯನ್ನು ಉಳ್ಳವ’ ಎಂಬ ಕೀರ್ತಿಯನ್ನು ಧರ್ಮಭೂವಿಷ್ಠವಾದ ಮಾತುಗಳಿಂದ ಜನರೆದುರು ತೋರುವ .

 

ತತಃ ಸ ರಥಮಾರುಹ್ಯ ಲೋಕಾನಾಮುತ್ತರೋತ್ತರಮ್ ।

ಅತಿಕ್ರಮ್ಯಾಖಿಲಾನ್ ರಾಜ್ಞೋ ಜಗಾಮ ಶ್ರೀಪತಿಪ್ರಿಯಃ ॥ ೩೨.೯೦ ॥

 

ಸರ್ವೇಷಾಮುತ್ತರಂ ಲೋಕಮೈನ್ದ್ರಂ ಪ್ರಾಪ್ಯೇದಮೇವ ತೇ ।

ಸ್ಥಾನಮಿತ್ಯುದಿತೋ ದೇವೈರ್ದ್ದುರ್ಯ್ಯೋಧನಮವೈಕ್ಷತ ॥ ೩೨.೯೧ ॥

 

 

ತದನಂತರ ಲಕ್ಷ್ಮೀಪತಿಯಾದ ಶ್ರೀಕೃಷ್ಣನಿಗೆ ಪ್ರಿಯನಾದ ಆ ಯುಧಿಷ್ಠಿರನು ರಥವನ್ನೇರಿದ, ಮೇಲಿರುವ ಎಲ್ಲಾ ಸ್ವರ್ಗ ಲೋಕಗಳನ್ನೂ , ಆನೇಕ ರಾಜರುಗಳನ್ನೂ ಮೀರಿ ತೆರಳಿದ. ಹೀಗೆ ಎಲ್ಲಾ ಲೋಕಗಳಿಗೆ ಆಚೆಯ ಲೋಕವಾಗಿದ್ದ ಇಂದ್ರಲೋಕವ ಹೊಂದಿದ, ‘ಇದೇ ನಿನ್ನ ಸ್ಥಾನವಾಗಿದೆ’ ಎಂದು ದೇವತೆಗಳು ಹೇಳಲು,ಅಲ್ಲಿಯೇ ಕುಳಿತಿರುವ ದುರ್ಯೋಧನನನ್ನು ಕಂಡ.

 

ಸಭ್ರಾತೃಕಂ ಜ್ವಲನ್ತಂ ಚ ಸರ್ವೇಷಾಮುಪರಿ ಸ್ಥಿತಮ್ ।

ತಂ ದೃಷ್ಟ್ವಾ ಪರಮಕ್ರುದ್ಧೋ ನಿಮೀಲ್ಯ ನಯನೇ ಶುಭೇ  ॥ ೩೨.೯೨ ॥

 

ಭ್ರಾತರೋ ಮೇ ಕ್ವ ಕೃಷ್ಣಾ ಚ ಸಕರ್ಣಾಃ ಕ್ವ ಚ ಬಾನ್ಧವಾಃ ।

ಧೃಷ್ಟಧ್ಯುಮ್ನಾದಯಃ ಪುತ್ರಾ ಹೈಡಿಮ್ಬಾದ್ಯಾಶ್ಚ ಸರ್ವಶಃ ॥ ೩೨.೯೩ ॥

 

ಯಾದವಾಶ್ಚೇತಿ ಪಪ್ರಚ್ಛ ದೇವಾಂಸ್ತೇ ಚ ತಮಬ್ರುವನ್ ।

ಕಿಂ ತೇ ತೈಃ ಸ್ವಕೃತಂ ಕರ್ಮ್ಮ ಭುಜ್ಯತೇSತ್ರ ನಚಾಪರೈಃ ॥ ೩೨.೯೪ ॥

 

ಅಲ್ಲಿ ತನ್ನ ಅಣ್ಣತಮ್ಮಂದಿರಿಂದ ಕೂಡಿಕೊಂಡು ಶೋಭಿಸುತ್ತಿರುವ, ಎಲ್ಲರಿಗಿಂತಲೂ ಮೇಲ್ಗಡೆ ಕುಳಿತಿರುವ ದುರ್ಯೋಧನನನ್ನು ಕಂಡು ಧರ್ಮರಾಜ ಮುನಿದ.

ಮಂಗಳವಾದ ತನ್ನ ಕಣ್ಣನ್ನು ಮುಚ್ಚಿ, ಕರ್ಣಸಹಿತರಾದ ನನ್ನ ಅಣ್ಣತಮ್ಮಂದಿರು, ದ್ರೌಪದಿ, ಧೃಷ್ಟದ್ಯುಮ್ನ, ಬಾಂಧವರು, ಘಟೋತ್ಕಚಾದಿ ಪುತ್ರರು, ಯಾದವರು, ಎಲ್ಲಿದ್ದಾರೆ ಎಂದು ಕೇಳಿದ.

ಆಗ ಆ ದೇವತೆಗಳು ಅವನನ್ನು ಕುರಿತು ‘ಅವರಿಂದ ನಿನಗೇನಾಗಬೇಕು?

ಈ ಲೋಕದಲ್ಲಿ ತಾವು ಮಾಡಿದ ಕರ್ಮ ತಮ್ಮಿಂದಲೇ ಅನುಭವಿಸಲ್ಪಡಬೇಕು.      

ಅದನ್ನು ಬೇರೆಯವರು ಅನುಭವಿಸಲು ಸಾಧ್ಯವಿಲ್ಲ’ ಎಂದದ್ದು ಇಲ್ಲಿ ಗಮನಿಸಬೇಕು.

 

ಇತ್ಯುಕ್ತ ಆಹ ಪಾಪೋSಯಂ ಪೃಥಿವೀಕ್ಷಯಕಾರಕಃ ।

ಸರ್ವಾತಿಶಙ್ಕೀ ಮಿತ್ರಧ್ರುಙ್ ನಾರಾಯಣಪರಾಙ್ಮುಖಃ ॥ ೩೨.೯೫ ॥

 

ನಾಸ್ತಿಕೋSತಿಶಠಃ ಕ್ರೂರೋ ದ್ವೇಷ್ಟಾ ವಿಷ್ಣೋಶ್ಚ ತದ್ಭುವಾಮ್ ।

ಕಥಂ ಕಥಂ ಚ ಸರ್ವಧರ್ಮ್ಮಜ್ಞಾ ನಾರಾಯಣಪರಾಯಣಾಃ॥ ೩೨.೯೬ ॥

 

ಸಂಸ್ಥಿತಾಃ ಪರಮೇ ಧರ್ಮ್ಮೇ ದೃಶ್ಯನ್ತೇSತ್ರ ನ ಮತ್ಪ್ರಿಯಾಃ

ದುರ್ಯ್ಯೋಧನಃ ಸ್ಥಾನಂ ಸರ್ವೋತ್ತಮಮವಾಪ್ತವಾನ್ ॥ ೩೨.೯೭ ॥

 

 

ಈರೀತಿಯಾಗಿ ಹೇಳಲ್ಪಟ್ಟ ಆ ಯುಧಿಷ್ಠಿರನು ಸಿಟ್ಟಿನಿಂದ- -

‘ಭೂಮಿ ನಾಶಮಾಡಿದ, ಎಲ್ಲರಲ್ಲಿಯೂ ಸಂಶಯಪಡುವ, ಮಿತ್ರದ್ರೋಹಿಯಾದ, ನಾರಾಯಣನಿಗೆ ವಿಮುಖನಾದ, ನಾಸ್ತಿಕನಾದ, ಅತ್ಯಂತ ಧೂರ್ತನಾದ, ನಾರಾಯಣನ ಭಕ್ತರ ದ್ವೇಷಿಯಾದ ದುರ್ಯೋಧನ ಉತ್ಕೃಷ್ಟವಾದ ಸ್ಥಾನವನ್ನು ಹೇಗೆ ಹೊಂದಿದ?

ಎಲ್ಲಾ ಧರ್ಮವನ್ನೂ ತಿಳಿದಿರುವ, ನಾರಾಯಣನ ಭಕ್ತರಾಗಿರುವ, ಉತ್ಕೃಷ್ಟವಾದ ಧರ್ಮದಲ್ಲಿ ನೆಲೆಗೊಂಡ, ನನಗೆ ಪ್ರಿಯರಾಗಿರುವ, ನನ್ನ ಭ್ರಾತ್ರಾದಿಗಳು ಇಲ್ಲಿ ಏಕೆ ಕಾಣುತ್ತಿಲ್ಲ’ ಎಂದು ಕೇಳಿದ.

 

ಯತ್ರ ಸನ್ತಸ್ತು ತೇ ಸನ್ತಿ ತತ್ರ ಸ್ಥಾತವ್ಯಮೇವ ಮೇ ।

ನಿರಯೇSಪಿ ನಚಾತ್ರಾಪಿ ನಾನೇನ ಸಹ ಪಾಪಿನಾ ॥ ೩೨.೯೮ ॥

 

‘ಎಲ್ಲಿ ಸಜ್ಜನರಿದ್ದಾರೋ ಅಲ್ಲಿಯೇ ನಾನಿರಬೇಕು,ಅದು ನರಕವಾದರೂ ಸರಿ ಎನ್ನುತ್ತಾನೆ ಧರ್ಮರಾಯ ,

ಇಲ್ಲಿ ಈ ಪಾಪಿಯಾದ ದುರ್ಯೋಧನನ ಜೊತೆಗೆ ನಾನಿರಲಾರೆ’  ಎಂಬುದು ಅವನ ಮಾತಿನ ಭಾವ.

 

ಅಸ್ಯ ವೀರತಮಸ್ಯೇದಂ ಧಾರ್ತ್ತರಾಷ್ಟ್ರಸ್ಯ ಯುಜ್ಯತೇ ।

ಇತ್ಯುಕ್ತಾ ದೇವತಾ ದೂತಂ ಸ್ವಾನಾಂ ಸನ್ದರ್ಶನಾರ್ತ್ಥಿನಃ ॥ ೩೨.೯೯ ॥

 

ರಾಜ್ಞಃ ಸಮ್ಪ್ರೇಷಯಾಮಾಸುಸ್ತತ್ಸನ್ದರ್ಶಿತವರ್ತ್ಮನಾ ।

ದುರ್ಗ್ಗನ್ಧೇನ ಸುಕೃಚ್ಛ್ರೇಣ ತಮಸಾ ಪ್ರಾವೃತೇನ ಚ । ॥ ೩೨.೧೦೦ ॥

 

ಗತ್ವೈವ ಕಿಯತೀಂ ಭೂಮಿಂ ತದ್ದುರ್ಗ್ಗನ್ಧಾಸಹೋ ನೃಪಃ ।

ಇಚ್ಛನ್ ನಿವರ್ತ್ತನಂ ತತ್ರ ಸ್ವಾನಾಂ ವಾಚ ಇವಾಶೃಣೋತ್ ॥ ೩೨.೧೦೧ ॥

 

‘ಅತ್ಯಂತ ವೀರನಾಗಿರುವ ದುರ್ಯೋಧನನಿಗೆ ಈರೀತಿಯ ಸ್ವರ್ಗಪ್ರಾಪ್ತಿಯಾಗಿದೆ’ ಎಂದು ದೇವತೆಗಳು ಹೇಳುತ್ತಾರೆ,

ತನ್ನವರನ್ನು ನೋಡಬೇಕೆಂದು ಬಯಸಿದ ಯುಧಿಷ್ಠಿರಗೆ ದಾರಿ ತೋರಲು, ದೇವತೆಗಳು ದೂತನೊಬ್ಬನನ್ನು ಕಳುಹಿಸುತ್ತಾರೆ.

ದೂತನಿಂದ ತೋರಲ್ಪಟ್ಟ ಹಾದಿಯಿಂದ, ಅತ್ಯಂತ ದುರ್ವಾಸನೆಯಿಂದ ಕೂಡಿರುವ, ಬಹಳ ಕಷ್ಟವಾದ,

ಕತ್ತಲಿನಿಂದ ಒಡಗೂಡಿರುವ ದಾರಿಯಿಂದ ತೆರಳಿ, ಎಷ್ಟೋ ದಾರಿ ಸವೆಸಿ, ಆ ಕೆಟ್ಟ ವಾಸನೆ ಸಹಿಸಲಾರದಾದ,

ಯುಧಿಷ್ಠಿರ, ತಿರುಗಿ ಬರಬೇಕು ಎಂದು ಬಯಸಿದಾಗ, ಅಲ್ಲಿ ತನ್ನವರ ಮಾತು ಎಂಬಂತೆ ಧ್ವನಿಯನ್ನುಕೇಳಿದ. 

 

ಕ್ಷಣಂ ತಿಷ್ಠ ಮಹಾರಾಜ ಸನ್ನಿಧಾನಬಲಾತ್ ತವ ।

ವೇದನಾ ನೋ ನ ಮಹತೀತ್ಯೇಚ್ಛ್ರುತ್ವಾ ಯುಧಿಷ್ಠಿರಃ ॥ ೩೨.೧೦೨ ॥

 

ಕೇ ಯೂಯಮಿತಿ ಪಪ್ರಚ್ಛ ದೀನಧ್ವನಿವಿಶಙ್ಕಿತಃ ।

ಭೀಮೋSಹಮರ್ಜ್ಜುನಃ ಕರ್ಣ್ಣ ಇತ್ಯಾದ್ಯುಕ್ತಮಿವಾಶೃಣೋತ್ ॥ ೩೨.೧೦೩ ॥

 

‘ಓ ಮಹಾರಾಜನೇ, ಒಂದು ಕ್ಷಣಕಾಲ ಇಲ್ಲಿಯೇ ನಿಲ್ಲು. ನಿನ್ನ ಸನ್ನಿಧಿಯ ಬಲದಿಂದ ನಮಗೆ ಅಪಾರವಾದ ನೋವಿರುವುದಿಲ್ಲ’ ಎಂಬ ಮಾತು ಕೇಳಿದಾಗ,

ಆ ಧ್ವನಿಯಮೇಲೆ ಅನುಮಾನಗೊಂಡು, ದೀನವಾಗಿರುವ ಧ್ವನಿಯಲ್ಲಿ ಯುಧಿಷ್ಠಿರ ಅವರುಗಳಿಗೆ ‘ನೀವು ಯಾರು’ ಎಂದು ಕೇಳಿದನಾಗ.

‘ನಾನು ಭೀಮ’, ‘ನಾನು ಅರ್ಜುನ’ , ‘ನಾನು ಕರ್ಣ’ ಇತ್ಯಾದಿಯಾಗಿ ಹೇಳಿದಂತೆ ಯುಧಿಷ್ಠಿರ ಕೇಳಿಸಿಕೊಂಡ ಆಗ.

 

ಶ್ರುತ್ವಾ ತತ್ ಕೃಪಯಾSSವಿಷ್ಟಃ ಶೋಕಾಮರ್ಷಸಮನ್ವಿತಃ ।

ಆಹ ದೂತ ಯಥೇಷ್ಟಂ ತ್ವಂ ಗಚ್ಛ ನಾಹಮಿತೋ ವ್ರಜೇ ॥ ೩೨.೧೦೪ ॥

 

ನಚ ಸ್ವರ್ಗ್ಗೇಣ ಮೇ ಕಾರ್ಯ್ಯಂ ತ್ಯಕ್ತ್ವಾ ಸ್ವಜನಮೀದೃಶಮ್ ।

ಇತ್ಯುಕ್ತಃ ಪ್ರಯಯೌ ದೂತಸ್ತಸ್ಥಾವೇವ ಯುಧಿಷ್ಠಿರಃ ॥ ೩೨.೧೦೫ ॥

 

ಅದನ್ನು ಕೇಳಿ, ದಯೆಯಿಂದ, ಶೋಕದಿಂದ, ಮುನಿಸಿನಿಂದಲೂ ಕೂಡಿದ ಯುಧಿಷ್ಠಿರದೂತಗೆ ಹೇಳಿದ, ‘ಓ ದೂತನೇ, ನೀನು ಇನ್ನ ಹೊರಡಬಹುದು ನಿನ್ನ ಇಚ್ಛಾನುಸಾರ.

ನಾನಿಲ್ಲಿಂದ ಹೋಗಲಾರೆ, ಈರೀತಿಯಿರುವ ನನ್ನ ಬಂಧುಗಳ ಬಿಟ್ಟು, ನನಗೆ  ಸ್ವರ್ಗದಿಂದ ಯಾವ ಪ್ರಯೋಜನವಿಲ್ಲ’ ಎಂದನು. 

ಈ ರೀತಿಯಾಗಿ ಹೇಳಲ್ಪಟ್ಟ ದೂತನು ಅಲ್ಲಿಂದ ತೆರಳಿದನು , ಯುಧಿಷ್ಠಿರನು ಮಾತ್ರ ಅಲ್ಲಿಯೇ ನಿಂತನು.

 

ತತೋSತ್ರ ದೇವಾಃ ಪುರೂಹೂತಪೂರ್ವಕಾಃ ಸಮಾಯಯುಃ ಸ್ನೇಹವಶಾದ್ ಯುಧಿಷ್ಠಿರೇ ।

ತೇಷ್ವಾಗತೇಷ್ವೇವ ನ ತತ್ರ ವಾಚೋ ದೀನಾ ನ ದುರ್ಗ್ಗನ್ಧತಮೋSಪ್ಯಪಶ್ಯತ್ ॥ ೩೨.೧೦೬ ॥

 

 

ತದನಂತರ ಇಂದ್ರನೇ ಮೊದಲಾಗಿರುವ ದೇವತೆಗಳು ಯುಧಿಷ್ಠಿರನಲ್ಲಿ ಪ್ರೀತಿಯಿಂದ ಬರುತ್ತಾರೆ.

ಅವರು ಬರಲು ಅಲ್ಲಿ ಕೆಟ್ಟ ಮಾತು, ಕೆಟ್ಟ ವಾಸನೆ , ತಮಸ್ಸು ಮೊದಲಾದವುಗಳು ಆದವು ಕಣ್ಮರೆ.

No comments:

Post a Comment

ಗೋ-ಕುಲ Go-Kula