Wednesday 29 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 196 - 206

 ತತಃ ಪರಾಜಿತವಚ್ಛೀಘ್ರಮೇತ್ಯ ಶಶಂಸ ಸರ್ವಂ ಹಲಿನೇsಥ ಸೋsಪಿ ।

ಪ್ರದ್ಯುಮ್ನಸಾಮ್ಬಾದಿಯುತೋsಥ ಕೋಪಾದಾಯಾತ್ ಪುರೀಂ ಹನ್ತುಕಾಮೋsರ್ಜ್ಜುನಂ ಚ॥೨೦.೧೯೬॥

ಆನಂತರ ವಿಪೃಥು ಅರ್ಜುನನಿಂದ ಆದವನಂತೆ ಪರಾಜಿತ,

ಶೀಘ್ರವೇ ಪಿಂಡೋದ್ಧಾರ ಕ್ಷೇತ್ರಕ್ಕೆ ಬರುತ್ತಾನೆ ಬಲರಾಮನತ್ತ.

ವಿಷಯ ಕೇಳಿ ಕೆರಳಿ ಕೆಂಡವಾಗುತ್ತಾನೆ ಬಲರಾಮ ಕೋಪದಿಂದೆ,

ಪ್ರದ್ಯುಮ್ನ ಸಾಂಬರ ಕೂಡಿ ದ್ವಾರಕೆಗೆ ಹೊರಟ ಅರ್ಜುನನ ಕೊಲ್ಲಲೆಂದೇ.

 

ಕೃಷ್ಣೋsಪಿ ಸರ್ವಂ ವಿಪೃಥೋರ್ನ್ನಿಶಮ್ಯ ಪ್ರಾಪ್ತಃ ಸುಧರ್ಮ್ಮಾಂ ವಿಮನಾ ಇವಾsಸೀತ್ ।

ಅವಾಙ್ಮುಖಸ್ತತ್ರ ಯದುಪ್ರವೀರಾಃ  ಪ್ರದ್ಯುಮ್ನಾದ್ಯಾ ಆಹುರುಚ್ಚೈರ್ನ್ನದನ್ತಃ ॥೨೦.೧೯೭॥

ವಿಪೃಥುವಿಂದ ಎಲ್ಲ ಕೇಳಿ  ಸುಧರ್ಮಸಭೆಗೆ ಬಂದ ಕೃಷ್ಣ,

ತಲೆ ತಗ್ಗಿಸಿ ಅನ್ಯಮನಸ್ಕನಾದಂತಾದ ಮಧುಸೂದನ,

ಪ್ರದ್ಯುಮ್ನ ಮುಂತಾದವರು ಮಾಡಿದರು  ಭಾರೀ ಗರ್ಜನ.

 

ಮಾಯಾವ್ರತಂ ತಂ ವಿನಿಹತ್ಯ ಶೀಘ್ರಂ ವಯಂ ಸುಭದ್ರಾಮಾನಯಾಮಃ ಕ್ಷಣೇನ ।

ಇತ್ಯುಕ್ತವಾಕ್ಯಾನವದದ್ ಬಲಸ್ತಾನ್ ಕೃಷ್ಣಾಜ್ಞಯಾ ಯಾನ್ತು ನ ಸ್ವೇಚ್ಛಯೈವ ॥೨೦.೧೯೮॥

ಕಳ್ಳ ಸನ್ಯಾಸಿಯ ವೇಷ ಧರಿಸಿದ ಅರ್ಜುನನನ್ನು,

ಕೊಂದು ಕರೆತರೋಣ ನಮ್ಮ ಸುಭದ್ರೆಯನ್ನು.

ಹೀಗೆ ನಡೆದ ಮಾತುಗಳ ಕೇಳಿಸಿಕೊಂಡ ಬಲರಾಮ,

ಹೇಳುತ್ತಾನೆ -ಕೃಷ್ಣಾಜ್ಞೆಯಂತೆ ನಡೆಯುವುದೇ ನಿಯಮ,

ನಿಮ್ಮಗಳ ಇಚ್ಛಾನುಸಾರ ನಡೆಯದಿರುವುದು ಕ್ಷೇಮ.

 

ಜ್ಞಾತವ್ಯಮೇತಸ್ಯ ಮತಂ ಪುರಸ್ತಾದ್ಧರೇರ್ವಿರೋಧೇ ನ ಜಯೋ ಭವೇದ್ ವಃ ।

ಇತ್ಯುಕ್ತವಾಕ್ಯೇ ಹಲಿನಿ ಸ್ಮ ಸರ್ವೇ ಪಪ್ರಚ್ಛುರಾನಮ್ಯ ಜನಾರ್ದ್ದನಂ ತಮ್ ॥೨೦.೧೯೯॥

 ಮೊದಲು ತಿಳಿದುಕೊಳ್ಳಬೇಕು ಕೃಷ್ಣನ ಅಭಿಪ್ರಾಯ,

ವಿರೋಧವಾದಲ್ಲಿ ಸಿಗಲಾರದು ನಿಮಗೆ ಕಾರ್ಯಜಯ.

ಹೀಗೆ ಯುದ್ಧಸನ್ನದ್ಧ ಯಾದವ ವೀರರಿಗೆ ಹೇಳುತ್ತಾನೆ ಬಲರಾಮ,

ಏನು ಮಾಡೋಣವೆನ್ನುತ್ತಾರೆ ಯಾದವರು ಕೃಷ್ಣಗೆ ಮಾಡುತ್ತಾ ಪ್ರಣಾಮ.

 

ಅಥಾsಬ್ರವೀದ್ ವಾಸುದೇವೋsಮಿತೌಜಾಃ  ಶೃಣ್ವನ್ತು ಸರ್ವೇ ವಚನಂ ಮದೀಯಮ್ ।

ಪುರೈವೋಕ್ತಂ ತನ್ಮಯಾ ಕನ್ಯಕಾಯಾ ಮಾಯಾವ್ರತೋ ನಾರ್ಹತಿ ಸನ್ನಿಧಿಸ್ಥಿತಿಮ್ ॥೨೦.೨೦೦॥

ಆಗ ಅಮಿತ ಶಕ್ತಿಯ ಶ್ರೀಕೃಷ್ಣ ಹೇಳುತ್ತಾನೆ,

ಕನ್ಯೆಯ ಬಳಿ ಸನ್ಯಾಸಿ ಬೇಡವೆಂದಿದ್ದೆ ತಾನೇ?

ಕೇಳಿರೆಲ್ಲಾ -ಕಪಟ ಸನ್ಯಾಸಿ ಬಗ್ಗೆ ನಂಗಿತ್ತು ಸಂದೇಹ,

ಕುಹಕಿ ಕಪಟಿಗಳಿಗೆ ಕಪಟದಿಂದಲೇ ಮಣಿಸುವ ಭಾವ.

 

ತಾಂ ಮೇ ವಾಚಂ ನಾಗ್ರಹೀದಗ್ರಜೋsಯಂ ಬಹೂನ್ ದೋಷಾನ್ ವ್ಯಾಹರತೋsಪ್ಯತೋ ಮಯಾ

ಅನುಲ್ಲಙ್ಘ್ಯತ್ವಾದಗ್ರಜೋsನುಪ್ರವೃತ್ತಃ ಕನ್ಯಾಗೃಹೇ ವಾಸನೇ ಕೂಟಬುದ್ಧೇಃ ॥೨೦.೨೦೧॥

ಸನ್ಯಾಸಿಯ ಕುರಿತ ದೋಷಗಳ ಅಣ್ಣ ಒಪ್ಪಲಿಲ್ಲ,

ಕಪಟ ಸನ್ಯಾಸಿಯ ಮನದಲ್ಲಿತ್ತು ಮೋಸದ ಜಾಲ.

ನನ್ನ ಕಟ್ಟಿಹಾಕಿತ್ತು ಹಿರಿಯನಾದ ಅಣ್ಣನ ಮಾತು,

ಅದ ಮೀರಲಾಗದೇ ನನ್ನಿಂದ ಅನುಸರಿಸಲ್ಪಟ್ಟಿತು.

 

ಅತೀತಶ್ಚಾಯಂ ಕಾರ್ಯ್ಯಯೋಗೋsಸಮಕ್ಷಂ ಹೃತಾ ಕನ್ಯಾsತೋ ನೋsತ್ರ ಕಾ ಮಾನಹಾನಿಃ।

ಭೂಯಸ್ತರಾಂ ಮಾನಿನಸ್ತಸ್ಯ ಸಾ ಸ್ಯಾಜ್ಜ್ಞಾತಾ ಚ ವೋ ವಿಪೃಥೋಃ ಪಾರ್ತ್ಥತಾsಸ್ಯ ॥೨೦.೨೦೨॥

ಈಗ ಮಿಂಚಿಹೋಗಿದೆ ಕಾರ್ಯ, ನಾವಿಲ್ಲದಾಗ ನಡೆದಿದೆ ಕನ್ಯಾಪಹಾರ.

ಇದರಿಂದ ನಮಗೇನಿಲ್ಲ ಮಾನಹಾನಿ, ಅಭಿಮಾನಿ ಅರ್ಜುನಗೇ ಮಾನಹಾನಿ.

ನಮಗೇನು ಗೊತ್ತಿತ್ತು ಅವ ಅರ್ಜುನನೆಂದು, ಈಗಷ್ಟೇ ತಿಳಿಯಿತು ಹೇಳಲು ವಿಪೃಥು ಬಂದು.

 

ದೇಯಾ ಚ ಕನ್ಯಾ ನಾಸ್ತಿ ಪಾರ್ತ್ಥೇನ ತುಲ್ಯೋ ವರೋsಸ್ಮಾಕಂ ಕೌರವೇಯಶ್ಚ ಪಾರ್ತ್ಥಃ ।

ಪೌತ್ರಶ್ಚ ಕೃಷ್ಣಸ್ಯ ಸುಪೂರ್ಣ್ಣಶಕ್ತೇಃ ಪೈತೃಷ್ವಸೇಯೋ ವೀರತಮೋ ಗುಣಾಢ್ಯಃ ॥೨೦.೨೦೩॥

ಹೇಗಿದ್ದರೂ ನಾವು ಮಾಡಲೇಬೇಕಲ್ಲ ಕನ್ಯಾದಾನ,

ಕುರುಕುಲದ ಅದ್ವಿತೀಯ ವರನವನು ಅರ್ಜುನ.

ವೇದವ್ಯಾಸರ ಮೊಮ್ಮಗ, ನಮ್ಮ ಸೋದರತ್ತೆಯ ಮಗ.

ಶೂರ ಮಹಾವೀರ -ಗುಣಶಾಲಿಯಾದ ಧೀರ.

 

ಅರ್ತ್ಥ್ಯೋsಸ್ಮಾಭಿಃ ಸ್ವಯಮೇವಾಹರತ್ ಸ ಶಕ್ರಾತ್ಮಜೋ ನಾತ್ರ ನಃ ಕಾರ್ಯ್ಯಹಾನಿಃ ।

ಅನುದ್ರುತ್ಯೈನಂ ಯದಿ ಚ ಸ್ಯಾತ್ ಪರಾಜಯೋ ಹಾನಿರ್ದ್ದೃಢಂ ಯಶಸೋ ವೋ ಭವೇತ ॥೨೦.೨೦೪॥

ಕನ್ಯೆಯ ಅವನಿಗೆ ಕೊಡಲು ನಾವೇ ಬೇಡಿಕೊಳ್ಳಬೇಕಿತ್ತು,

ಅವನೇ ಅಪಹರಿಸಿ ಕೊಂಡೊಯ್ದ ಸುಭದ್ರೆ ಈಗವನ ಸ್ವತ್ತು.

ಇದರಲ್ಲಿ ನಮಗೇನಂಥಾ ಕಾರ್ಯಹಾನಿ ಆಗಿಲ್ಲ,

ಯುದ್ಧದಿ ನಾವು ಸೋತರೆ ಮರ್ಯಾದೆ ಇರಲ್ಲ.

 

ಜಿತ್ವಾ ಯದ್ಯೇನಂ ಕನ್ಯಕಾ ಚಾsಹೃತಾ ಚೇತ್ ಪರಾಮೃಷ್ಟಾಂ ನೈವ ಕಶ್ಚಿದ್ಧಿ ಲಿಪ್ಸೇತ್ ।

ಅತೋ ನ ಮೇ ರೋಚತೇ ವೋsನುಯಾನಮಿತ್ಯೂಚಿವಾನಾಸ ತೂಷ್ಣೀಂ ಪರೇಶಃ ॥೨೦.೨೦೫ ॥

ಒಂದುವೇಳೆ ಅವನನ್ನು ಗೆದ್ದು ಸುಭದ್ರೆಯನ್ನು ಕರೆತಂದೆವೆಂದುಕೊಳ್ಳೋಣ,

ಯಾರು ಒಪ್ಪಿ ಕೈಹಿಡಿಯುತ್ತಾರೆ ಬೇರೆ ಪುರುಷನ ಜೊತೆ ಓಡಿಹೋದವಳನ್ನ.

ನಿಮ್ಮ ಗೆಲುವಿಗೆ ಅವನ ಬೆನ್ನಟ್ಟುವುದು ನನಗಿಷ್ಟವಿಲ್ಲ,

ಇಷ್ಟೆಲ್ಲಾ ಹೇಳಿ ಸುಮ್ಮನೆ ಕುಳಿತ ಜಗದೊಡೆಯ ಗೊಲ್ಲ.

 

ಶ್ರುತ್ವಾ ಹಲೀ ಕೃಷ್ಣವಾಕ್ಯಂ ಬಭಾಷೇ ಮಾ ಯಾತ ಚಿತ್ತಂ ವಿದಿತಂ ಮಮಾಸ್ಯ ।

ಅಸ್ಯಾನುವೃತ್ತಿರ್ವಿಜಯಾಯ ನಃ ಸ್ಯಾಚ್ಛುಭಾಯ ಶಾನ್ತ್ಯೈ ಪರತಶ್ಚ ಮುಕ್ತ್ಯೈ ॥೨೦.೨೦೬॥

ಬಲರಾಮ ಕೃಷ್ಣ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡು ಮಾತನಾಡುತ್ತಾನೆ,

ಪ್ರದ್ಯುಮ್ನ ಸಾಂಬರೇ ಹೋಗಬೇಡಿ- ಕೃಷ್ಣನ ಮನ ತಿಳಿಯಿತೆನ್ನುತ್ತಾನೆ.

ಕೃಷ್ಣನ ಅನುಸರಣೆಯಿಂದೆಮಗೆ ವಿಜಯ, ಶುಭ, ಶಾಂತಿ,

ಕಾರಣವಾಗುತ್ತದೆ ಅದು ಒದಗಿಸಲು ಪರಲೋಕ ಮುಕ್ತಿ.

[Contributed by Shri Govind Magal]

Tuesday 28 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 189 - 195

ತತಃ ಸ ಆಬದ್ಧತಳಾಙ್ಗುಲಿತ್ರಃ ಸತೂಣೀರಶ್ಚಾಪಮಾಯಮ್ಯ ಬಾಣೈಃ ।

ಚಕ್ರೇsನ್ತರಿಕ್ಷಮ್ ಪ್ರದಿಶೋ ದಿಶಶ್ಚ ನಿರನ್ತರಂ ಶಿಕ್ಷಯಾ ವಿದ್ಯಯಾ ಚ ॥೨೦.೧೮೯॥

ಅಂಗೈ ಬೆರಳುಗಳ ಕವಚ ತೊಟ್ಟು ಬತ್ತಳಿಕೆ ಧರಿಸಿದಂಥ ವಿಜಯ,

ವಿದ್ಯೆ ಮತ್ತು ಅಭ್ಯಾಸದಿಂದ ದಿಕ್ಕು ವಿದಿಕ್ಕುಗಳ ಮಾಡಿದ ಬಾಣಮಯ.

 

ಚಕ್ರೇ ಸಾರತ್ಥ್ಯಂ ಕೇಶವೇನೈತದರ್ತ್ಥೇ ಸುಶಿಕ್ಷಿತಾ ತಸ್ಯ ಸಮ್ಯಕ್ ಸುಭದ್ರಾ ।

ತಯಾ ಪಾರ್ತ್ಥೋ ವಾರಿತೋ ನೈವ ಕಞ್ಚಿದ್ ಭಿನ್ನತ್ವಚಂ ಕೃತವಾನ್ ಕ್ರೀಡಮಾನಃ ॥೨೦.೧೯೦॥

ಶ್ರೀಕೃಷ್ಣನಿಂದ ಇದಕ್ಕಾಗೇ ಸುಭದ್ರೆ ಶಿಕ್ಷಣ ಪಡೆದಿದ್ದಳು,

ನುರಿತ ಸಾರಥಿಯಂತೆ ಚತುರತೆಯಿಂದ ಸಾರಥ್ಯ ಮಾಡಿದಳು.

ಅರ್ಜುನ ಯಾರನ್ನೂ ಗಾಯಗೊಳಿಸಲಿಲ್ಲ-ಹಾಗೆ ಸುಭದ್ರೆ ತಡೆದಿದ್ದಳು.

 

ಸ ಶಿಕ್ಷಯಾ ತ್ವದ್ಭುತಯಾ ಶರೌಘೈರ್ವಿದ್ರಾಪ್ಯ ತಾನ್ ಭೀಷಯಿತ್ವೈವ ಸರ್ವಾನ್ ।

ನಿರ್ಗ್ಗತ್ಯ ಪುರ್ಯ್ಯಾ ವಿಪೃಥುಂ ದದರ್ಶ ರಾಮೇಣ ಪುರ್ಯ್ಯಾರಕ್ಷಣೇ ಸನ್ನಿಯುಕ್ತಮ್ ॥೨೦.೧೯೧॥

ಅದ್ಭುತ ಅಭ್ಯಾಸಬಲ ಅಸಂಖ್ಯ ಬಾಣಗಳಿಂದ,

ಎಲ್ಲರ ಹೆದರಿಸಿ ಓಡಿಸಿ ಊರಹೊರಗೆ ಬಂದ.

ಪಟ್ಟಣದ ರಕ್ಷಣೆಗಾಗಿ ಎಂದು ಬಲರಾಮನಿಂದ,

ನೇಮಕವಾದ ವಿಪೃಥುವ ಅರ್ಜುನ ನೋಡಿದ.

 

ಪ್ರಿಯಂ ಕುರ್ವನ್ನಿವ ರಾಮಸ್ಯ ಸೋsಪಿ ವ್ಯಾಜೇನ ಪಾರ್ತ್ಥಂ ಸೇನಯೈವಾsವೃಣೋತ್ ತಮ್ ।

ಕೃಷ್ಣಾದೇಶಾನ್ನೈವ ಪಾರ್ತ್ಥಸ್ಯ ಚಕ್ರೇ ಸಮ್ಯಗ್ರೋಧಂ ಯುಯುಧೇ ಚ ಚ್ಛಲೇನ ॥೨೦.೧೯೨॥

 ಆ ವಿಪೃಥುವಾದರೋ ಬಲರಾಮನ ಪರವಾಗಿರುವಂತೆ,

ನೆಪಕ್ಕಾಗಿ ಅರ್ಜುನನ್ನು ಸೇನೆಯೊಂದಿಗೆ ತಡೆದನಂತೆ.

ಕೃಷ್ಣ ಹೇಳಿದ್ದರಿಂದ ಚೆನ್ನಾಗಿ ಮಾಡಲಿಲ್ಲ ಯುದ್ಧ,

ಕೇವಲ ಯುದ್ಧ ಮಾಡಿದವನಂತೆ ನಾಟಕವಾಡಿದ.

 

ಏಕೋ ಹ್ಯಸೌ ಮರುತಾಂ ಸೌಮ್ಯನಾಮಾ ಶುಶ್ರೂಷಾರ್ಥಂ ವಾಸುದೇವಸ್ಯ ಜಾತಃ ।

ತಂ ಯಾದವಂ ಶರವರ್ಷೈರ್ವವರ್ಷ ಯಥಾ ಕ್ಷತಂ ನ ಭವೇತ್ ಸವ್ಯಸಾಚೀ ॥೨೦.೧೯೩॥

ಮೂಲದಲ್ಲಿ ವಿಪೃಥು ಸೌಮ್ಯನೆನ್ನುವ ಮರುತ್ ದೇವತೆ,

ಭಗವಂತನ ಶುಶ್ರೂಷೆಗಾಗಿಯೇ ಹುಟ್ಟಿ ಬಂದಿದ್ದನಂತೆ.

ಅರ್ಜುನ ಆ ಯಾದವನ ಮೇಲೆ,

ಸುರಿಸಿದ ಗಾಯವಾಗದ ಬಾಣಮಳೆ.

 

ನಿರಾಯುಧಂ ವಿರಥಂ ಚೈವ ಚಕ್ರೇ ಪಾರ್ತ್ಥಃ ಸೇನಾಂ ತಸ್ಯ ನೈವಾಹನಚ್ಚ ।

ದೃಷ್ಟ್ವಾ ಶರಾಂಸ್ತಸ್ಯತೀಕ್ಷ್ಣಾಂಸ್ತ್ವಚೋsಪಿ ನಚ್ಛೇದಕಾನ್ ವಿಪೃಥುಃ ಸನ್ತುತೋಷ ॥೨೦.೧೯೪॥

ಅರ್ಜುನ ವಿಪೃಥುವ ಮಾಡಿದ ಆಯುಧ ರಥಹೀನ,

ತೆಗೆಯಲಿಲ್ಲ ಅವನ ಸೇನೆಯಲ್ಲಿ ಯಾರೊಬ್ಬರ ಪ್ರಾಣ.

ಅರ್ಜುನನ ತೀಕ್ಷ್ಣವಾದ ಬಾಣಗಳ ಮಳೆ,

ಚರ್ಮ ಕೂಡಾ ಭೇದಿಸದಂಥ ಚತುರ ಕಲೆ.

ಕಂಡ ವಿಪೃಥುವಿನಲ್ಲಿ ಎದ್ದಿತು ಸಂತಸದ ಅಲೆ.

 

ಶಿಕ್ಷಾಂ ಪಾರ್ತ್ಥಸ್ಯಾಧಿಕಂ ಮಾನಯಾನ ಉಪೇತ್ಯ ಪಾರ್ತ್ಥಂ ಚ ಶಶಂಸ ಸರ್ವಮ್ ।

ಆಜ್ಞಾಂ ವಿಷ್ಣೋಃ ಸನ್ನಿಯುದ್ಧ್ಯನ್ನಿವಾಸ್ಮೈ ಕೃತ್ತಾಯುಧಃ ಫಲ್ಗುನೇನೈವ ಪೂರ್ವಮ್ ॥೨೦.೧೯೫॥

ವಿಪೃಥು ಅರ್ಜುನನಿಂದ ಆಯುಧ ರಥಹೀನನಾದ,

ಮುಷ್ಠಿಯುದ್ಧಕ್ಕೇನೋ ಎಂಬಂತೆ ಅರ್ಜುನನ ಬಳಿ ಬಂದ.

ಮಾಡಿದ ಅರ್ಜುನನ ಯುದ್ಧಕೌಶಲ್ಯದ ಶ್ಲಾಘನೆ,

ತಿಳಿಸಿದ-ಪಾಲಿಸಿದ್ದೇನೆ ಏನಿತ್ತೋ ಶ್ರೀಕೃಷ್ಣನ ಆಜ್ಞೆ.

[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 184- 188

 ಮಾತಾಪಿತೃಭ್ಯಾಂ ಸಹಿತೋsಥ ಕೃಷ್ಣಸ್ತತ್ರೈವಾsಯಾದ್ ವಾಸವಶ್ಚಾಥ ಶಚ್ಯಾ ।

ಸಮಂ ಮುನೀನ್ದ್ರೈಃ ಫಲ್ಗುನೇನ ಸ್ಮೃತಃ ಸಂಸ್ತತ್ರೈವಾsಗಾತ್ ಪ್ರೀತಿಯುಕ್ತೋ ನಿಶಾಯಾಮ್ ॥೨೦.೧೮೪॥

ಆಗ ವಸುದೇವ ದೇವಕಿಯರ ಕೂಡಿದವನಾದ ಶ್ರೀಕೃಷ್ಣ ಅಲ್ಲಿಗೆ ಬಂದ,

ಇಂದ್ರ ಶಚಿಯರು ಮುನಿಗಳ ಕೂಡಿ ಬಂದರಲ್ಲಿಗೆ ಅರ್ಜುನ ಸ್ಮರಿಸಿದ್ದರಿಂದ.

 

 ಕೃಷ್ಣಸ್ತತಃ ಪುರುಹೂತೇನ ಸಾಕಂ ತಯೋರ್ವಿವಾಹಂ ಕಾರಯಾಮಾಸ ಸಮ್ಯಕ್ ।

ಮಾತಾಪಿತೃಭ್ಯಾಂ ಸಾತ್ಯಕಿನಾsಪಿ ಯುಕ್ತೋ ಮಹೋತ್ಸವೇsನ್ಯಾವಿದಿತೋ ಮುನೀನ್ದ್ರೈಃ  ॥೨೦.೧೮೫॥

ಆನಂತರ ಕೃಷ್ಣ, ಇಂದ್ರ ಮತ್ತು ತಂದೆ ತಾಯಿಯರ ಸಮೇತನಾಗಿ,

ಸಾತ್ಯಕಿ ಮತ್ತು ಇತರ ಕೆಲವು ಮುನಿಶ್ರೇಷ್ಠರಿಂದ ಕೂಡಿದವನಾಗಿ,

ಅರ್ಜುನ ಮತ್ತು ಸುಭದ್ರೆಯರಿಗೆ ಚೆನ್ನಾಗಿ ಮಾಡಿಸಿದ ವಿವಾಹ,

ಬೇರೆ ಇನ್ಯಾರಿಗೂ ತಿಳಿಯದಂತೆ ನಡೆಯಿತು ಆ ಮಹೋತ್ಸವ.

 

ತತಃ ಕೃಷ್ಣಃ ಸ್ಯನ್ದನಂ ಫಲ್ಗುನಾರ್ತ್ಥೇ ನಿಧಾಯ ಸ್ವಂ ಪ್ರಯಯೌ ತದ್ರಜನ್ಯಾಮ್ ।

ಗತೇ ಚ ಶಕ್ರೇ ರಥಮಾರುರೋಹ ಪ್ರಾತಃ ಪಾರ್ತ್ಥಃ ಸಹಿತೋ ಭಾರ್ಯ್ಯಯೈವ ॥೨೦.೧೮೬॥

ಕೃಷ್ಣ ಅರ್ಜುನಗೆ ತನ್ನ ರಥವನ್ನು ಕೊಟ್ಟ,

ಆ ರಾತ್ರಿಯೇ ತಾನಲ್ಲಿಂದ ಹೊರಟುಬಿಟ್ಟ.

ಇಂದ್ರನೂ ಹೊರಟು, ರಾತ್ರಿ ಕಳೆದು ಬೆಳಗಾಯಿತಾಗ,

ಅರ್ಜುನ ಸುಭದ್ರೆಯೊಂದಿಗೆ ಕೂಡಿ ರಥವನ್ನೇರಿದನಾಗ.

 

ಸರ್ವಾಯುಧೈರ್ಯ್ಯುಕ್ತರಥಂ ಸಮಾಸ್ಥಿತೇ ಗೃಹೀತಚಾಪೇ ಫಲ್ಗುನೇ ದ್ವಾರವತ್ಯಾಮ್ ।

ಆಸೀದ್ ರಾವಃ ಕಿಙ್ಕಿಮೇತತ್ ತ್ರಿದಣ್ಡೀ ಕನ್ಯಾಂ ಹರತ್ಯೇಷ ಕೋದಣ್ಡಪಾಣಿಃ ॥೨೦.೧೮೭॥

ಆಯುಧಯುಕ್ತನಾಗಿ ಧನುರ್ಧಾರಿಯಾಗಿ ರಥವೇರಿ ಹೊರಟಿದ್ದ ಅರ್ಜುನ,

ದ್ವಾರಕೆಯ ಆವರಿಸಿದ ಸುದ್ದಿ - ಸನ್ಯಾಸಿ ಮಾಡಿದ್ದಾನೆ ಸುಭದ್ರೆಯ ಅಪಹರಣ.

 

ತತಸ್ತು ತಂ ಸತನುತ್ರಂ ಮಹೇನ್ದ್ರದತ್ತೇ ದಿವ್ಯೇ ಕುಣ್ಡಲೇ ವಾಸಸೀ ಚ ।

ದಿವ್ಯಾನಿ ರತ್ನಾನಿ ಚ ಭೂಷಣಾನಿ ದೃಷ್ಟ್ವಾ ಬಿಭ್ರಾಣಂ ರಕ್ಷಿಣೋsವಾರಯನ್ ಸ್ಮ ॥೨೦.೧೮೮॥

ಇಂದ್ರ ಕೊಟ್ಟ ಅಲೌಕಿಕವಾದ ಕವಚ- ಕುಂಡಲ,

ಪಾರ್ಥ ಧರಿಸಿದ್ದ ಬಟ್ಟೆ ದಿವ್ಯ ರತ್ನಾಭರಣಗಳ.

ಹೀಗೆಲ್ಲಾ ಅಲಂಕೃತನಾದ ಅರ್ಜುನನ ಕಂಡು,

ತಡೆಯಿತು ಅವನ ನಗರ ರಕ್ಷಕ ಸೈನಿಕರ ದಂಡು.

[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 178 - 183

 ಪ್ರದ್ಯುಮ್ನಮ್ನಸಾಮ್ಬಪ್ರಮುಖಾಶ್ಚ ವಞ್ಚಿತಾ ಯಯುಸ್ತೀರ್ತ್ಥಾರ್ತ್ಥಂ ರಾಮಯುಕ್ತಾಃ ಸಮಗ್ರಾಃ ।

ಪಿಣ್ಡೋದ್ಧಾರಂ ತತ್ರ ಮಹೋತ್ಸವೇಷ್ವೇವಾsವರ್ತ್ತಯತ್ಸು ಕ್ವಚಿದೂಚೇ ಸುಭದ್ರಾ ॥೨೦.೧೭೮॥

ಪ್ರದ್ಯುಮ್ನ ಸಾಂಬ ಮೊದಲಾದವರು ಕೃಷ್ಣನಿಂದ ವಂಚನೆಗೊಳಗಾದವರು,

ಒಮ್ಮೆ ಬಲರಾಮನೊಡಗೂಡಿ ಪಿಂಡೋದ್ಧಾರ ಕ್ಷೇತ್ರಕ್ಕೆ ಸ್ನಾನಕ್ಕೆ ಹೋದರು.

ಅಲ್ಲಿ ದೊಡ್ಡದಾದ ಜಾತ್ರೆಯೇ ನಡೆಯುತ್ತಿತ್ತು,

ಸುಭದ್ರೆ ಕೇಳಿದಳು ಅರ್ಜುನಗೆ ಕೆಳಕಂಡ ಮಾತು.

 

ಯತೇ ತೀರ್ತ್ಥಾನಾಚರನ್ ಬಾನ್ಧವಾಂಸ್ತ್ವಮದ್ರಾಕ್ಷೀರ್ನ್ನಃ ಕಚ್ಚಿದಿಷ್ಟಾನ್ ಸ್ಮ ಪಾರ್ತ್ಥಾನ್ ।

ಕುನ್ತೀಂ ಕೃಷ್ಣಾಂ ಚೇತ್ಯಾಹ ಪೃಷ್ಟಃ ಸ ಪಾರ್ತ್ಥ ಓಮಿತ್ಯೇತೇಷಾಮಾಹ ಚಾನಾಮಯಂ ಸಃ ॥೨೦.೧೭೯॥

 ಶ್ರೇಷ್ಠ ಯತಿಯೇ ನೀನು ತೀರ್ಥಯಾತ್ರೆಯ ಮಾಡುತ್ತಿರುವಾಗ,

ಘಟಿಸಿತೇ ಎಲ್ಲಾದರೂ ನಮ್ಮ ಪ್ರಿಯ ಪಾಂಡವರ ಕಾಣುವ ಯೋಗ.

ಕಂಡೆಯಾ ಎಲ್ಲಿಯಾದರೂ ಕುಂತಿದೇವಿ ದ್ರೌಪದಿಯರನ್ನು,

ಹೌದೆಂದ ಅರ್ಜುನ ಹೇಳಿದ ಅವರ ಕ್ಷೇಮ ಸಮಾಚಾರವನ್ನು.

 

ಭೂಯಃ ಸಾsವಾದೀದ್ ಭಗವನ್ನಿನ್ದ್ರಸೂನುರ್ಗ್ಗತಸ್ತೀರ್ತ್ಥಾರ್ತ್ಥಂ  ಬ್ರಾಹ್ಮಣೇಭ್ಯಃ ಶ್ರುತೋ ಮೇ ।

ಕಚ್ಚಿದ್ ದೃಷ್ಟೋ ಭವತೇತ್ಯೋಮಿತಿ ಸ್ಮ ಪಾರ್ತ್ಥೋsಪ್ಯೂಚೇ ಕ್ವೇತಿ ಸಾsಪೃಚ್ಛದೇನಮ್ ॥೨೦.೧೮೦॥

ಸುಭದ್ರೆ ಕೇಳುತ್ತಾಳೆ -ಪೂಜ್ಯರೇ ತೀರ್ಥಯಾತ್ರೆಗೆ ಹೋಗಿದ್ದಾನಂತೆ ಅರ್ಜುನ,

ನಿಮ್ಮ ಯಾತ್ರಾಜಾಡಿನಲ್ಲಿ ಎಲ್ಲಾದರೂ ಆಯಿತೇ ಅರ್ಜುನನನ ದರ್ಶನ.

ಆಗ ಪಾರ್ಥ ಅವಳಿಗೆ ಉತ್ತರಿಸುತ್ತಾನೆ -ಹೌದು,

ಸುಭದ್ರೆ ಕೇಳುತ್ತಾಳೆ ಎಲ್ಲಿ ನೋಡಿದಿರಿ -ಎಂದು.

 

ಅತ್ರೈವೇತಿ ಸ್ಮಯಮಾನಂ ಚ ಪಾರ್ತ್ಥಂ ಪುನಃಪುನಃ ಪರ್ಯ್ಯಪೃಚ್ಛಚ್ಛುಭಾಙ್ಗೀ ।

ಸೋsಪ್ಯಾಹೋನ್ಮತ್ತೇ ಸೋsಸ್ಮಿ ಹೀತಿ ಸ್ಮಯಂಸ್ತಾಂ ಫುಲ್ಲಾಕ್ಷೀ ತಂ ಸಾ ದದರ್ಶಾತಿಹೃಷ್ಟಾ ॥೨೦.೧೮೧॥

‘ಇಲ್ಲಿಯೇ’ ಎಂದು ಅರ್ಜುನ ಸನ್ಯಾಸಿ ಹೇಳುತ್ತಾನೆ.

'ಎಲ್ಲಿ ಎಲ್ಲಿ' -ಎಂದು ಮತ್ತೆ ಮತ್ತೆ ಸುಭದ್ರೆಯ ಪ್ರಶ್ನೆ.

ನಗುತ್ತಾ ಅರ್ಜುನ ಹೇಳುತ್ತಾನೆ- 'ಹುಚ್ಚಿಯೇ ಅವನೇ ನಾನು',

ಸಂತಸದ ತೆರೆದ ಕಂಗಳಿಂದವನ ನೋಡುತ್ತಾಳೆ ಸುಭದ್ರೆ ತಾನು.

 

ತತೋ ಹರ್ಷಾಲ್ಲಜ್ಜಯಾ ಚೋತ್ಪಲಾಕ್ಷೀ ಕಿಞ್ಚಿನ್ನೋಚೇ  ಪಾರ್ತ್ಥ ಏನಾಮುವಾಚ ।

ಕಾಮಾವಿಷ್ಟೋ ಮುಖ್ಯಕಾಲೋ ಹ್ಯಯಂ ನಾವುದ್ವಾಹಾರ್ತ್ಥೋಕ್ತಸ್ತ್ವಿತಿ ಸಾ ಚೈನಮಾಹ ॥೨೦.೧೮೨॥

ಸುಭದ್ರೆ ಆನಂದದಿಂದ ನಾಚಿಕೆಯಿಂದ ವಹಿಸಿದಳು ಮೌನ,

ಮಾತನಾಡುತ್ತಾನೆ ಆಗ ಅನುರಾಗ ತುಂಬಿದಂಥ ಅರ್ಜುನ.

ನಮ್ಮಿಬ್ಬರಲ್ಲಿ ಈಗ ಪ್ರೀತಿ ಪ್ರೇಮ ಅಂಕುರಿಸಿದ ಸಮಯ,

ಪ್ರಶಸ್ತವಾಗಿ ಕೂಡಿಬಂದಂತಿದೆ ಈಗ ನಮ್ಮಿಬ್ಬರ ವಿವಾಹ.

ಸುಭದ್ರೆ ಬಿಚ್ಚಿಡುತ್ತಾಳೆ ಅರ್ಜುನನಲ್ಲಿ ತನ್ನ ಮನದ ಭಾವ.

 

ನಾತಿಕ್ರಮೋ ವಾಸುದೇವಸ್ಯ ಯುಕ್ತಸ್ತಸ್ಮಾತ್ ತೇನ ಸ್ವಪಿತೃಭ್ಯಾಂ ಚ ದತ್ತಾಮ್ ।

ಯುಕ್ತೋ ನಿಜೈರ್ಬನ್ಧುಭಿಶ್ಚೋತ್ಸವೇ ಮಾಂ ಸಮುದ್ವಹೇತ್ಯಥ ಕೃಷ್ಣಂ ಸ ದದ್ಧ್ಯೌ ॥೨೦.೧೮೩॥

ಕೃಷ್ಣನನ್ನು ಬಿಟ್ಟು ನಾವೇನು ಮಾಡಿದರೂ ಅದು ಯುಕ್ತವಲ್ಲ,

ಕೃಷ್ಣ, ನನ್ನ ಹೆತ್ತವರು, ಬಂಧುಗಳಿಂದ ಮದುವೆ ನಡೆಯಬೇಕಲ್ಲ!.

ವಿದ್ಯುಕ್ತವಾಗಿ ನೀನು ಉತ್ಸವದಲ್ಲಿ ನನ್ನ ಮದುವೆಯಾಗು,

ಅರ್ಜುನನ ಮನದಲ್ಲಾಗ ಬಂತು ಕೃಷ್ಣ ಸ್ಮರಣೆಯ ಕೂಗು.

[Contributed by Shri Govind Magal]