Tuesday 28 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 189 - 195

ತತಃ ಸ ಆಬದ್ಧತಳಾಙ್ಗುಲಿತ್ರಃ ಸತೂಣೀರಶ್ಚಾಪಮಾಯಮ್ಯ ಬಾಣೈಃ ।

ಚಕ್ರೇsನ್ತರಿಕ್ಷಮ್ ಪ್ರದಿಶೋ ದಿಶಶ್ಚ ನಿರನ್ತರಂ ಶಿಕ್ಷಯಾ ವಿದ್ಯಯಾ ಚ ॥೨೦.೧೮೯॥

ಅಂಗೈ ಬೆರಳುಗಳ ಕವಚ ತೊಟ್ಟು ಬತ್ತಳಿಕೆ ಧರಿಸಿದಂಥ ವಿಜಯ,

ವಿದ್ಯೆ ಮತ್ತು ಅಭ್ಯಾಸದಿಂದ ದಿಕ್ಕು ವಿದಿಕ್ಕುಗಳ ಮಾಡಿದ ಬಾಣಮಯ.

 

ಚಕ್ರೇ ಸಾರತ್ಥ್ಯಂ ಕೇಶವೇನೈತದರ್ತ್ಥೇ ಸುಶಿಕ್ಷಿತಾ ತಸ್ಯ ಸಮ್ಯಕ್ ಸುಭದ್ರಾ ।

ತಯಾ ಪಾರ್ತ್ಥೋ ವಾರಿತೋ ನೈವ ಕಞ್ಚಿದ್ ಭಿನ್ನತ್ವಚಂ ಕೃತವಾನ್ ಕ್ರೀಡಮಾನಃ ॥೨೦.೧೯೦॥

ಶ್ರೀಕೃಷ್ಣನಿಂದ ಇದಕ್ಕಾಗೇ ಸುಭದ್ರೆ ಶಿಕ್ಷಣ ಪಡೆದಿದ್ದಳು,

ನುರಿತ ಸಾರಥಿಯಂತೆ ಚತುರತೆಯಿಂದ ಸಾರಥ್ಯ ಮಾಡಿದಳು.

ಅರ್ಜುನ ಯಾರನ್ನೂ ಗಾಯಗೊಳಿಸಲಿಲ್ಲ-ಹಾಗೆ ಸುಭದ್ರೆ ತಡೆದಿದ್ದಳು.

 

ಸ ಶಿಕ್ಷಯಾ ತ್ವದ್ಭುತಯಾ ಶರೌಘೈರ್ವಿದ್ರಾಪ್ಯ ತಾನ್ ಭೀಷಯಿತ್ವೈವ ಸರ್ವಾನ್ ।

ನಿರ್ಗ್ಗತ್ಯ ಪುರ್ಯ್ಯಾ ವಿಪೃಥುಂ ದದರ್ಶ ರಾಮೇಣ ಪುರ್ಯ್ಯಾರಕ್ಷಣೇ ಸನ್ನಿಯುಕ್ತಮ್ ॥೨೦.೧೯೧॥

ಅದ್ಭುತ ಅಭ್ಯಾಸಬಲ ಅಸಂಖ್ಯ ಬಾಣಗಳಿಂದ,

ಎಲ್ಲರ ಹೆದರಿಸಿ ಓಡಿಸಿ ಊರಹೊರಗೆ ಬಂದ.

ಪಟ್ಟಣದ ರಕ್ಷಣೆಗಾಗಿ ಎಂದು ಬಲರಾಮನಿಂದ,

ನೇಮಕವಾದ ವಿಪೃಥುವ ಅರ್ಜುನ ನೋಡಿದ.

 

ಪ್ರಿಯಂ ಕುರ್ವನ್ನಿವ ರಾಮಸ್ಯ ಸೋsಪಿ ವ್ಯಾಜೇನ ಪಾರ್ತ್ಥಂ ಸೇನಯೈವಾsವೃಣೋತ್ ತಮ್ ।

ಕೃಷ್ಣಾದೇಶಾನ್ನೈವ ಪಾರ್ತ್ಥಸ್ಯ ಚಕ್ರೇ ಸಮ್ಯಗ್ರೋಧಂ ಯುಯುಧೇ ಚ ಚ್ಛಲೇನ ॥೨೦.೧೯೨॥

 ಆ ವಿಪೃಥುವಾದರೋ ಬಲರಾಮನ ಪರವಾಗಿರುವಂತೆ,

ನೆಪಕ್ಕಾಗಿ ಅರ್ಜುನನ್ನು ಸೇನೆಯೊಂದಿಗೆ ತಡೆದನಂತೆ.

ಕೃಷ್ಣ ಹೇಳಿದ್ದರಿಂದ ಚೆನ್ನಾಗಿ ಮಾಡಲಿಲ್ಲ ಯುದ್ಧ,

ಕೇವಲ ಯುದ್ಧ ಮಾಡಿದವನಂತೆ ನಾಟಕವಾಡಿದ.

 

ಏಕೋ ಹ್ಯಸೌ ಮರುತಾಂ ಸೌಮ್ಯನಾಮಾ ಶುಶ್ರೂಷಾರ್ಥಂ ವಾಸುದೇವಸ್ಯ ಜಾತಃ ।

ತಂ ಯಾದವಂ ಶರವರ್ಷೈರ್ವವರ್ಷ ಯಥಾ ಕ್ಷತಂ ನ ಭವೇತ್ ಸವ್ಯಸಾಚೀ ॥೨೦.೧೯೩॥

ಮೂಲದಲ್ಲಿ ವಿಪೃಥು ಸೌಮ್ಯನೆನ್ನುವ ಮರುತ್ ದೇವತೆ,

ಭಗವಂತನ ಶುಶ್ರೂಷೆಗಾಗಿಯೇ ಹುಟ್ಟಿ ಬಂದಿದ್ದನಂತೆ.

ಅರ್ಜುನ ಆ ಯಾದವನ ಮೇಲೆ,

ಸುರಿಸಿದ ಗಾಯವಾಗದ ಬಾಣಮಳೆ.

 

ನಿರಾಯುಧಂ ವಿರಥಂ ಚೈವ ಚಕ್ರೇ ಪಾರ್ತ್ಥಃ ಸೇನಾಂ ತಸ್ಯ ನೈವಾಹನಚ್ಚ ।

ದೃಷ್ಟ್ವಾ ಶರಾಂಸ್ತಸ್ಯತೀಕ್ಷ್ಣಾಂಸ್ತ್ವಚೋsಪಿ ನಚ್ಛೇದಕಾನ್ ವಿಪೃಥುಃ ಸನ್ತುತೋಷ ॥೨೦.೧೯೪॥

ಅರ್ಜುನ ವಿಪೃಥುವ ಮಾಡಿದ ಆಯುಧ ರಥಹೀನ,

ತೆಗೆಯಲಿಲ್ಲ ಅವನ ಸೇನೆಯಲ್ಲಿ ಯಾರೊಬ್ಬರ ಪ್ರಾಣ.

ಅರ್ಜುನನ ತೀಕ್ಷ್ಣವಾದ ಬಾಣಗಳ ಮಳೆ,

ಚರ್ಮ ಕೂಡಾ ಭೇದಿಸದಂಥ ಚತುರ ಕಲೆ.

ಕಂಡ ವಿಪೃಥುವಿನಲ್ಲಿ ಎದ್ದಿತು ಸಂತಸದ ಅಲೆ.

 

ಶಿಕ್ಷಾಂ ಪಾರ್ತ್ಥಸ್ಯಾಧಿಕಂ ಮಾನಯಾನ ಉಪೇತ್ಯ ಪಾರ್ತ್ಥಂ ಚ ಶಶಂಸ ಸರ್ವಮ್ ।

ಆಜ್ಞಾಂ ವಿಷ್ಣೋಃ ಸನ್ನಿಯುದ್ಧ್ಯನ್ನಿವಾಸ್ಮೈ ಕೃತ್ತಾಯುಧಃ ಫಲ್ಗುನೇನೈವ ಪೂರ್ವಮ್ ॥೨೦.೧೯೫॥

ವಿಪೃಥು ಅರ್ಜುನನಿಂದ ಆಯುಧ ರಥಹೀನನಾದ,

ಮುಷ್ಠಿಯುದ್ಧಕ್ಕೇನೋ ಎಂಬಂತೆ ಅರ್ಜುನನ ಬಳಿ ಬಂದ.

ಮಾಡಿದ ಅರ್ಜುನನ ಯುದ್ಧಕೌಶಲ್ಯದ ಶ್ಲಾಘನೆ,

ತಿಳಿಸಿದ-ಪಾಲಿಸಿದ್ದೇನೆ ಏನಿತ್ತೋ ಶ್ರೀಕೃಷ್ಣನ ಆಜ್ಞೆ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula