Friday, 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 154 - 158

 ಯುಧಿಷ್ಠಿರಾದ್ಯೈಃ ಸೌಹೃದಾದ್ ವಾರಿತೋsಪಿ ಯಯೌ ಸತ್ಯಾರ್ತ್ಥಂ ಸ ಕದಾಚಿದ್ ದ್ಯುನದ್ಯಾಮ್ ।

ಕುರ್ವನ್ ಸ್ನಾನಂ ಮಾಯಯಾ ನಾಗವಧ್ವಾ ಹೃತೋ ಲೋಕಂ ಭುಜಗಾನಾಂ ಕ್ಷಣೇನ ॥೨೦.೧೫೪॥

ಧರ್ಮರಾಜ ಮೊದಲಾದವರು ತಡೆದರು ಅರ್ಜುನನ ಸ್ನೇಹದಿಂದ,

ಆದರೂ ಒಪ್ಪಂದದ ಮಾತಿನಂತೆ ಅರ್ಜುನನು ಯಾತ್ರೆಗೆ ತೆರಳಿದ.

ಯಾತ್ರಾಕಾಲದಲ್ಲಿ ಅರ್ಜುನ ಒಮ್ಮೆ ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದಾಗ,

ನಾಗಸ್ತ್ರೀಯಾದ ಉಲೂಪಿಯಿಂದ ನಾಗಲೋಕಕ್ಕೆ ಸೆಳೆದೊಯ್ಯಲ್ಪಟ್ಟನಾಗ.

 

[‘ನಾನು ನಿನ್ನ ಅಣ್ಣ, ಹಾಗಾಗಿ  ನಿನಗೆ ತಂದೆಯ ಸಮಾನ, ಇವಳು ಈಗ ನಿನ್ನ ಅತ್ತಿಗೆ, ಅಂದರೆ ತಾಯಿಯ ಸಮಾನ. ತಂದೆ ತಾಯಿಯರು ಏಕಾಂತದಲ್ಲಿ ಇದ್ದಾಗ ಮಗ ಬಂದರೆ ಏನೂ ಸಮಸ್ಯೆ ಇಲ್ಲ ಮತ್ತು  ಅದು ಅಪರಾಧವಲ್ಲ, ಆದ್ದರಿಂದ ನೀನು ತೀರ್ಥಯಾತ್ರೆಗೆ ಹೋಗುವುದು ಬೇಡ’ ಎಂದು ಯುಧಿಷ್ಠಿರ  ತಡೆಯುತ್ತಾನೆ. ಆದರೆ ಅರ್ಜುನ ತಮ್ಮ ನಡುವಿನ ಒಪ್ಪಂದವನ್ನು ನೆನಪಿಸಿ ತೀರ್ಥಯಾತ್ರೆಗೆ ತೆರಳುತ್ತಾನೆ ಮತ್ತು ಗಂಗೆಯಲ್ಲಿ ಸ್ನಾನ ಮಾಡುತ್ತಿರುವಾಗ ಉಲೂಪಿಯಿಂದ ಅಪಹರಿಸಲ್ಪಡುತ್ತಾನೆ]

 

ತಸ್ಯಾಃ ಪಿತಾ ಗರುಡೇನಾsತ್ತಪತ್ಯುಃ ಪುತ್ರಾಕಾಙ್ಕ್ಷೀ ಚೋದಯಾಮಾಸ ಪಾರ್ತ್ಥಮ್ ।

ಸಂವತ್ಸರಬ್ರಹ್ಮಚರ್ಯ್ಯೇ ತು ಪಾರ್ತ್ಥೈಃ ಕೃಷ್ಣಾಹೇತೋಃ ಸಮಯೇ ಸಾಧು ಬದ್ಧಮ್ ॥೨೦.೧೫೫॥

ನಾಗಲೋಕದ ಶ್ರೇಷ್ಠರಲ್ಲಿ ಒಬ್ಬನು ಉಲೂಪಿಯ ಅಪ್ಪ,

ಗರುಡ ಉಲೂಪಿಯ ಗಂಡನನ್ನು ತಿಂದುಹಾಕಿದ್ದ ಪಾಪ.

ಅವನಲ್ಲೂ ಇತ್ತು ಮಗಳ ಪುತ್ರನಾಸೆಯ ಸಹಜ ಬಯಕೆ,

ಅರ್ಜುನ ಬ್ರಹ್ಮಚರ್ಯದಲ್ಲಿದ್ದರೂ ಅವನಲ್ಲಿಟ್ಟ ಪುತ್ರ ಕೋರಿಕೆ.

 

[ಉಲೂಪಿ ಒಬ್ಬ ನಾಗಾಂಗನೆ. ಅವಳ ಪತಿಯನ್ನು ಗರುಡ ತಿಂದುಬಿಟ್ಟಿದ್ದ. ಮಕ್ಕಳಿಲ್ಲದ ಆಕೆ ಗುಣಶ್ರೇಷ್ಠನಿಂದ ಮಗನನ್ನು ಪಡೆಯಬೇಕು ಎನ್ನುವ ಬಯಕೆಯಿಂದ ಅರ್ಜುನನನ್ನು ಅಪಹರಿಸಿದ್ದಳು. ಹೀಗಾಗಿ ಉಲೂಪಿ ಅರ್ಜುನನ ಪತ್ನಿಯಲ್ಲ. ಅವನಿಂದ ನಿಯೋಗ ಪದ್ಧತಿಯಿಂದ ಸಂತಾನವನ್ನು ಪಡೆದವಳು].

 

ಪುನಃಪುನರ್ಯ್ಯಾಚ್ಯಮಾನಃ ಸ ಪಾರ್ತ್ಥಃ ಪುತ್ರಾರ್ತ್ಥಮಸ್ಯಾ ಭುಜಗೇನ ತಸ್ಯಾಮ್ ।

ಉತ್ಪಾದಯಾಮಾಸ ಸುತಂ ಕುಜಾಂಶಂ ನಾಮ್ನೇರಾವನ್ತಂ ವರುಣಾವೇಶಯುಕ್ತಮ್ ॥೨೦.೧೫೬॥

ಸಂತಾನಕ್ಕಾಗಿ ಪದೇ ಪದೇ ಬೇಡಲ್ಪಟ್ಟ ಅರ್ಜುನ,

ಅವಳಸಂತತಿಗೆ,ಮಂಗಳಕರ ವರುಣಾವೇಶದವನ,

ಕರುಣಿಸಿದ ಅವಳಿಗೆ ಇರಾವಂತ ಎನ್ನುವ ಮಗನನ್ನ.

 

[ಮುಂದಿನ ಶ್ಲೋಕದಲ್ಲಿ ಮಹಾಭಾರತ, ವೇದ, ಮೊದಲಾದವುಗಳಲ್ಲಿ ಹೇಳಿರುವ ಮಾನವಶಾಸ್ತ್ರದ ಬಗ್ಗೆ ಆಚಾರ್ಯರು ಬೆಳಕುಚೆಲ್ಲುವುದನ್ನು ಕಾಣುತ್ತೇವೆ:]

ಗುಣಾಃ ಪಿತುರ್ಮ್ಮಾತೃಜಾತಿಃ ಸುತಾನಾಂ ಯಸ್ಮಾತ್ ಸತಾಂ ಪ್ರಾಯಶಸ್ತೇನ ನಾಗಃ ।

ಬಲೀ ಚ ಪಾರ್ತ್ಥಪ್ರಥಮೋದ್ಭತ್ವಾನ್ ಮಾಯಾವಿದಸ್ತ್ರೀ ಚ ಸುಧಾರ್ಮ್ಮಿಕಶ್ಚ ॥೨೦.೧೫೭॥

ಹೇಗೆ ಸಾಮಾನ್ಯವಾಗಿ ತಂದೆಯಿಂದ ಗುಣ ತಾಯಿಯಿಂದ ಜಾತಿ,

ಅದರಂತೆಯೇ ಹುಟ್ಟಿದ ಇರಾವಂತನಾಗಿದ್ದ ಅವನು ನಾಗಜಾತಿ.

ಅರ್ಜುನನ ಮೊದಲ ಮಗನಾದ್ದರಿಂದ ಆಗಿದ್ದ ಅತ್ಯಂತ ಬಲಿಷ್ಠ,

ಮಾಯಾವಿದ್ಯೆಯ ಒಳ್ಳೆಯ ಅಸ್ತ್ರಜ್ಞನಾಗಿದ್ದನವ ಬಲು ಧರ್ಮಿಷ್ಟ.

 

ತತೋ ಯಯಾವರ್ಜ್ಜುನಸ್ತೀರ್ತ್ಥಯಾತ್ರಾಕ್ರಮೇಣ ಪಾಣ್ಡ್ಯಾಂಸ್ತನಯೋsಸ್ಯ ಮಾತ್ರಾ ।

ಸಹ ತ್ಯಕ್ತೋ ಭುಜಗೈರ್ದ್ದೇವಲೋಕೇ ಸಮ್ಪೂಜಿತೋ ನ್ಯವಸದ್ ದೈವತೈಶ್ಚ ॥೨೦.೧೫೮॥

ಅರ್ಜುನ ತೀರ್ಥಯಾತ್ರೆಗಾಗಿ ಮುಂದೆ ಹೋದ,

ಪಾಂಡ್ಯದೇಶವನ್ನು ಕುರಿತು ಅದರೆಡೆಗೆ ತೆರಳಿದ.

ಅರ್ಜುನನ ಮಗನಾದ ಇರಾವಂತ ತಾಯಿಯ ಜೊತೆಯಾಗಿ,

ಎಲ್ಲಾ ನಾಗಗಳಿಂದ ದೇವಲೋಕದಲ್ಲೇ ತಾನು ಬಿಡಲ್ಪಟ್ಟವನಾಗಿ,

ಸ್ವರ್ಗದಲ್ಲೇ ವಾಸಿಸಿದ ದೇವತೆಗಳಿಂದ ಪೂಜೆ ಮಾಡಿಸಿಕೊಂಡವನಾಗಿ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula