Wednesday 29 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 196 - 206

 ತತಃ ಪರಾಜಿತವಚ್ಛೀಘ್ರಮೇತ್ಯ ಶಶಂಸ ಸರ್ವಂ ಹಲಿನೇsಥ ಸೋsಪಿ ।

ಪ್ರದ್ಯುಮ್ನಸಾಮ್ಬಾದಿಯುತೋsಥ ಕೋಪಾದಾಯಾತ್ ಪುರೀಂ ಹನ್ತುಕಾಮೋsರ್ಜ್ಜುನಂ ಚ॥೨೦.೧೯೬॥

ಆನಂತರ ವಿಪೃಥು ಅರ್ಜುನನಿಂದ ಆದವನಂತೆ ಪರಾಜಿತ,

ಶೀಘ್ರವೇ ಪಿಂಡೋದ್ಧಾರ ಕ್ಷೇತ್ರಕ್ಕೆ ಬರುತ್ತಾನೆ ಬಲರಾಮನತ್ತ.

ವಿಷಯ ಕೇಳಿ ಕೆರಳಿ ಕೆಂಡವಾಗುತ್ತಾನೆ ಬಲರಾಮ ಕೋಪದಿಂದೆ,

ಪ್ರದ್ಯುಮ್ನ ಸಾಂಬರ ಕೂಡಿ ದ್ವಾರಕೆಗೆ ಹೊರಟ ಅರ್ಜುನನ ಕೊಲ್ಲಲೆಂದೇ.

 

ಕೃಷ್ಣೋsಪಿ ಸರ್ವಂ ವಿಪೃಥೋರ್ನ್ನಿಶಮ್ಯ ಪ್ರಾಪ್ತಃ ಸುಧರ್ಮ್ಮಾಂ ವಿಮನಾ ಇವಾsಸೀತ್ ।

ಅವಾಙ್ಮುಖಸ್ತತ್ರ ಯದುಪ್ರವೀರಾಃ  ಪ್ರದ್ಯುಮ್ನಾದ್ಯಾ ಆಹುರುಚ್ಚೈರ್ನ್ನದನ್ತಃ ॥೨೦.೧೯೭॥

ವಿಪೃಥುವಿಂದ ಎಲ್ಲ ಕೇಳಿ  ಸುಧರ್ಮಸಭೆಗೆ ಬಂದ ಕೃಷ್ಣ,

ತಲೆ ತಗ್ಗಿಸಿ ಅನ್ಯಮನಸ್ಕನಾದಂತಾದ ಮಧುಸೂದನ,

ಪ್ರದ್ಯುಮ್ನ ಮುಂತಾದವರು ಮಾಡಿದರು  ಭಾರೀ ಗರ್ಜನ.

 

ಮಾಯಾವ್ರತಂ ತಂ ವಿನಿಹತ್ಯ ಶೀಘ್ರಂ ವಯಂ ಸುಭದ್ರಾಮಾನಯಾಮಃ ಕ್ಷಣೇನ ।

ಇತ್ಯುಕ್ತವಾಕ್ಯಾನವದದ್ ಬಲಸ್ತಾನ್ ಕೃಷ್ಣಾಜ್ಞಯಾ ಯಾನ್ತು ನ ಸ್ವೇಚ್ಛಯೈವ ॥೨೦.೧೯೮॥

ಕಳ್ಳ ಸನ್ಯಾಸಿಯ ವೇಷ ಧರಿಸಿದ ಅರ್ಜುನನನ್ನು,

ಕೊಂದು ಕರೆತರೋಣ ನಮ್ಮ ಸುಭದ್ರೆಯನ್ನು.

ಹೀಗೆ ನಡೆದ ಮಾತುಗಳ ಕೇಳಿಸಿಕೊಂಡ ಬಲರಾಮ,

ಹೇಳುತ್ತಾನೆ -ಕೃಷ್ಣಾಜ್ಞೆಯಂತೆ ನಡೆಯುವುದೇ ನಿಯಮ,

ನಿಮ್ಮಗಳ ಇಚ್ಛಾನುಸಾರ ನಡೆಯದಿರುವುದು ಕ್ಷೇಮ.

 

ಜ್ಞಾತವ್ಯಮೇತಸ್ಯ ಮತಂ ಪುರಸ್ತಾದ್ಧರೇರ್ವಿರೋಧೇ ನ ಜಯೋ ಭವೇದ್ ವಃ ।

ಇತ್ಯುಕ್ತವಾಕ್ಯೇ ಹಲಿನಿ ಸ್ಮ ಸರ್ವೇ ಪಪ್ರಚ್ಛುರಾನಮ್ಯ ಜನಾರ್ದ್ದನಂ ತಮ್ ॥೨೦.೧೯೯॥

 ಮೊದಲು ತಿಳಿದುಕೊಳ್ಳಬೇಕು ಕೃಷ್ಣನ ಅಭಿಪ್ರಾಯ,

ವಿರೋಧವಾದಲ್ಲಿ ಸಿಗಲಾರದು ನಿಮಗೆ ಕಾರ್ಯಜಯ.

ಹೀಗೆ ಯುದ್ಧಸನ್ನದ್ಧ ಯಾದವ ವೀರರಿಗೆ ಹೇಳುತ್ತಾನೆ ಬಲರಾಮ,

ಏನು ಮಾಡೋಣವೆನ್ನುತ್ತಾರೆ ಯಾದವರು ಕೃಷ್ಣಗೆ ಮಾಡುತ್ತಾ ಪ್ರಣಾಮ.

 

ಅಥಾsಬ್ರವೀದ್ ವಾಸುದೇವೋsಮಿತೌಜಾಃ  ಶೃಣ್ವನ್ತು ಸರ್ವೇ ವಚನಂ ಮದೀಯಮ್ ।

ಪುರೈವೋಕ್ತಂ ತನ್ಮಯಾ ಕನ್ಯಕಾಯಾ ಮಾಯಾವ್ರತೋ ನಾರ್ಹತಿ ಸನ್ನಿಧಿಸ್ಥಿತಿಮ್ ॥೨೦.೨೦೦॥

ಆಗ ಅಮಿತ ಶಕ್ತಿಯ ಶ್ರೀಕೃಷ್ಣ ಹೇಳುತ್ತಾನೆ,

ಕನ್ಯೆಯ ಬಳಿ ಸನ್ಯಾಸಿ ಬೇಡವೆಂದಿದ್ದೆ ತಾನೇ?

ಕೇಳಿರೆಲ್ಲಾ -ಕಪಟ ಸನ್ಯಾಸಿ ಬಗ್ಗೆ ನಂಗಿತ್ತು ಸಂದೇಹ,

ಕುಹಕಿ ಕಪಟಿಗಳಿಗೆ ಕಪಟದಿಂದಲೇ ಮಣಿಸುವ ಭಾವ.

 

ತಾಂ ಮೇ ವಾಚಂ ನಾಗ್ರಹೀದಗ್ರಜೋsಯಂ ಬಹೂನ್ ದೋಷಾನ್ ವ್ಯಾಹರತೋsಪ್ಯತೋ ಮಯಾ

ಅನುಲ್ಲಙ್ಘ್ಯತ್ವಾದಗ್ರಜೋsನುಪ್ರವೃತ್ತಃ ಕನ್ಯಾಗೃಹೇ ವಾಸನೇ ಕೂಟಬುದ್ಧೇಃ ॥೨೦.೨೦೧॥

ಸನ್ಯಾಸಿಯ ಕುರಿತ ದೋಷಗಳ ಅಣ್ಣ ಒಪ್ಪಲಿಲ್ಲ,

ಕಪಟ ಸನ್ಯಾಸಿಯ ಮನದಲ್ಲಿತ್ತು ಮೋಸದ ಜಾಲ.

ನನ್ನ ಕಟ್ಟಿಹಾಕಿತ್ತು ಹಿರಿಯನಾದ ಅಣ್ಣನ ಮಾತು,

ಅದ ಮೀರಲಾಗದೇ ನನ್ನಿಂದ ಅನುಸರಿಸಲ್ಪಟ್ಟಿತು.

 

ಅತೀತಶ್ಚಾಯಂ ಕಾರ್ಯ್ಯಯೋಗೋsಸಮಕ್ಷಂ ಹೃತಾ ಕನ್ಯಾsತೋ ನೋsತ್ರ ಕಾ ಮಾನಹಾನಿಃ।

ಭೂಯಸ್ತರಾಂ ಮಾನಿನಸ್ತಸ್ಯ ಸಾ ಸ್ಯಾಜ್ಜ್ಞಾತಾ ಚ ವೋ ವಿಪೃಥೋಃ ಪಾರ್ತ್ಥತಾsಸ್ಯ ॥೨೦.೨೦೨॥

ಈಗ ಮಿಂಚಿಹೋಗಿದೆ ಕಾರ್ಯ, ನಾವಿಲ್ಲದಾಗ ನಡೆದಿದೆ ಕನ್ಯಾಪಹಾರ.

ಇದರಿಂದ ನಮಗೇನಿಲ್ಲ ಮಾನಹಾನಿ, ಅಭಿಮಾನಿ ಅರ್ಜುನಗೇ ಮಾನಹಾನಿ.

ನಮಗೇನು ಗೊತ್ತಿತ್ತು ಅವ ಅರ್ಜುನನೆಂದು, ಈಗಷ್ಟೇ ತಿಳಿಯಿತು ಹೇಳಲು ವಿಪೃಥು ಬಂದು.

 

ದೇಯಾ ಚ ಕನ್ಯಾ ನಾಸ್ತಿ ಪಾರ್ತ್ಥೇನ ತುಲ್ಯೋ ವರೋsಸ್ಮಾಕಂ ಕೌರವೇಯಶ್ಚ ಪಾರ್ತ್ಥಃ ।

ಪೌತ್ರಶ್ಚ ಕೃಷ್ಣಸ್ಯ ಸುಪೂರ್ಣ್ಣಶಕ್ತೇಃ ಪೈತೃಷ್ವಸೇಯೋ ವೀರತಮೋ ಗುಣಾಢ್ಯಃ ॥೨೦.೨೦೩॥

ಹೇಗಿದ್ದರೂ ನಾವು ಮಾಡಲೇಬೇಕಲ್ಲ ಕನ್ಯಾದಾನ,

ಕುರುಕುಲದ ಅದ್ವಿತೀಯ ವರನವನು ಅರ್ಜುನ.

ವೇದವ್ಯಾಸರ ಮೊಮ್ಮಗ, ನಮ್ಮ ಸೋದರತ್ತೆಯ ಮಗ.

ಶೂರ ಮಹಾವೀರ -ಗುಣಶಾಲಿಯಾದ ಧೀರ.

 

ಅರ್ತ್ಥ್ಯೋsಸ್ಮಾಭಿಃ ಸ್ವಯಮೇವಾಹರತ್ ಸ ಶಕ್ರಾತ್ಮಜೋ ನಾತ್ರ ನಃ ಕಾರ್ಯ್ಯಹಾನಿಃ ।

ಅನುದ್ರುತ್ಯೈನಂ ಯದಿ ಚ ಸ್ಯಾತ್ ಪರಾಜಯೋ ಹಾನಿರ್ದ್ದೃಢಂ ಯಶಸೋ ವೋ ಭವೇತ ॥೨೦.೨೦೪॥

ಕನ್ಯೆಯ ಅವನಿಗೆ ಕೊಡಲು ನಾವೇ ಬೇಡಿಕೊಳ್ಳಬೇಕಿತ್ತು,

ಅವನೇ ಅಪಹರಿಸಿ ಕೊಂಡೊಯ್ದ ಸುಭದ್ರೆ ಈಗವನ ಸ್ವತ್ತು.

ಇದರಲ್ಲಿ ನಮಗೇನಂಥಾ ಕಾರ್ಯಹಾನಿ ಆಗಿಲ್ಲ,

ಯುದ್ಧದಿ ನಾವು ಸೋತರೆ ಮರ್ಯಾದೆ ಇರಲ್ಲ.

 

ಜಿತ್ವಾ ಯದ್ಯೇನಂ ಕನ್ಯಕಾ ಚಾsಹೃತಾ ಚೇತ್ ಪರಾಮೃಷ್ಟಾಂ ನೈವ ಕಶ್ಚಿದ್ಧಿ ಲಿಪ್ಸೇತ್ ।

ಅತೋ ನ ಮೇ ರೋಚತೇ ವೋsನುಯಾನಮಿತ್ಯೂಚಿವಾನಾಸ ತೂಷ್ಣೀಂ ಪರೇಶಃ ॥೨೦.೨೦೫ ॥

ಒಂದುವೇಳೆ ಅವನನ್ನು ಗೆದ್ದು ಸುಭದ್ರೆಯನ್ನು ಕರೆತಂದೆವೆಂದುಕೊಳ್ಳೋಣ,

ಯಾರು ಒಪ್ಪಿ ಕೈಹಿಡಿಯುತ್ತಾರೆ ಬೇರೆ ಪುರುಷನ ಜೊತೆ ಓಡಿಹೋದವಳನ್ನ.

ನಿಮ್ಮ ಗೆಲುವಿಗೆ ಅವನ ಬೆನ್ನಟ್ಟುವುದು ನನಗಿಷ್ಟವಿಲ್ಲ,

ಇಷ್ಟೆಲ್ಲಾ ಹೇಳಿ ಸುಮ್ಮನೆ ಕುಳಿತ ಜಗದೊಡೆಯ ಗೊಲ್ಲ.

 

ಶ್ರುತ್ವಾ ಹಲೀ ಕೃಷ್ಣವಾಕ್ಯಂ ಬಭಾಷೇ ಮಾ ಯಾತ ಚಿತ್ತಂ ವಿದಿತಂ ಮಮಾಸ್ಯ ।

ಅಸ್ಯಾನುವೃತ್ತಿರ್ವಿಜಯಾಯ ನಃ ಸ್ಯಾಚ್ಛುಭಾಯ ಶಾನ್ತ್ಯೈ ಪರತಶ್ಚ ಮುಕ್ತ್ಯೈ ॥೨೦.೨೦೬॥

ಬಲರಾಮ ಕೃಷ್ಣ ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡು ಮಾತನಾಡುತ್ತಾನೆ,

ಪ್ರದ್ಯುಮ್ನ ಸಾಂಬರೇ ಹೋಗಬೇಡಿ- ಕೃಷ್ಣನ ಮನ ತಿಳಿಯಿತೆನ್ನುತ್ತಾನೆ.

ಕೃಷ್ಣನ ಅನುಸರಣೆಯಿಂದೆಮಗೆ ವಿಜಯ, ಶುಭ, ಶಾಂತಿ,

ಕಾರಣವಾಗುತ್ತದೆ ಅದು ಒದಗಿಸಲು ಪರಲೋಕ ಮುಕ್ತಿ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula