ಹೇಳದೇ ಉಳಿದದ್ದು....
ಆಚಾರ್ಯರ ಈ ಸ್ತೋತ್ರ ಶುರುವಾಗುವುದು ಸ್ಥಂಭಂ ನಿರ್ಭಿದ್ಯ
ಎಂದು. ಅಂದರೆ,
ಸ್ಥಂಭವನ್ನು ಸೀಳಿ ಬಂದ ನರಸಿಂಹನ ಸ್ತೋತ್ರ.
ನರಸಿಂಹ ನಿಜವಾಗಿ ಸೀಳಿದ್ದು ಯಾವ ಸ್ಥಂಭ ? ಮೊದಲಿಗೆ, ಸ್ಥಂಭ
ಎಂದರೇನು ಎಂದು ತಿಳಿಯೋಣ.
ಸ್ಥಂಭ- ಶಬ್ದ ನಿಷ್ಪನ್ನವಾದದ್ದು ಸ್ಥಭಿ- ಪ್ರತಿರೋಧೇ ಎಂಬ
ಧಾತುವಿನಿಂದ. ಅರ್ಥ - ಪ್ರತಿರೋಧ ಒಡ್ಡುವಂಥದ್ದು ಎಂದು. ಅದಕ್ಕೇ, ಒಂದು
ಕಟ್ಟಡವು ಯಾವ ಒತ್ತಡಕ್ಕೂ ಬೀಳದಹಾಗೆ ಎಲ್ಲಾ ಒತ್ತಡಗಳಿಗೂ ಪ್ರತಿರೋಧ ಒಡ್ಡುವಂಥ ಕಂಬವನ್ನು
ಸ್ಥಂಭ ಎಂದು ಕರೆಯುವುದು.
ಇಲ್ಲೂ ಕೂಡ ಮೇಲ್ನೋಟಕ್ಕೆ ನರಸಿಂಹ ಸ್ಥಂಭವನ್ನು ಸೀಳಿಕೊಂಡು ಬಂದ
ಎಂದೇ ಅನ್ನಿಸುತ್ತದೆ. ಆದರೆ,
ಶಬ್ದದ ನಿರ್ವಚನದ ಆಳಕ್ಕಿಳಿದರೆ ಅಪೂರ್ವ ಅರ್ಥ ಹೊಳೆಯಬಲ್ಲುದು.
ಹೇಗೆಂದರೆ, ಪ್ರಹ್ಲಾದನಂಥ ಒಬ್ಬ ಭಗವದ್ಭಕ್ತ, ಒಬ್ಬ ಸಾಧಕಜೀವ ತನ್ನ ಬಿಂಬರೂಪೀ ಭಗವಂತನ
ಬಳಿಗೆ ಹೋಗಲಾರದಂತೆ ಪ್ರಬಲವಾಗಿ ಪ್ರತಿರೋಧ ಒಡ್ಡುವ ಶಕ್ತಿಯಾಗಿ ಹಿರಣ್ಯ ಕಶಿಪು ನಿಂತಿದ್ದ.
ಹಾಗಾಗಿ ಭಗವಂತ,
ತನ್ನ ಭಕ್ತನಿಗೂ ತನಗೂ ಅಡ್ಡವಾಗಿ ನಿಂತಿದ್ದ ಸ್ಥಂಭದಂಥ ಹಿರಣ್ಯ
ಕಶಿಪುವನ್ನು ನಿರ್ಭಿದ್ಯ - ಸೀಳಿ, ನಿರ್ಯತ್ - ಬಂದ.
ಈ ಅರ್ಥವನ್ನೂ ಕೂಡ ಈಗ ನಡೆಯುತ್ತಿರುವ ಮಾಂತ್ರಿಕೀ ಉಪನಿಷತ್
ಪ್ರವಚನದಲ್ಲಿ ಆಚಾರ್ಯರು ಬಿಡಿಸಿ ಹೇಳಿದ ಸ್ಥಂಭ ಶಬ್ದದ ನಿರ್ವಚನದ ಆಧಾರದಿಂದಲೇ ಅನುಸಂಧಾನ
ಮಾಡಿದ್ದು.
ಹೀಗೆ, ನಾವು ಕೇಳುವುದಕ್ಕೂ ಮುನ್ನವೇ ನಮ್ಮನ್ನು
ಸರಿಯಾದ ಅರ್ಥಾನುಸಂಧಾನದ ದಾರಿಗೆ ತರುತ್ತಿರುವ ಆಚಾರ್ಯರ ಅನುಗ್ರಹ ನಿಜಕ್ಕೂ ಅನನ್ಯ.
ನರಸಿಂಹಾಷ್ಟಕದಂಥ ಒಂದು ಅಪೂರ್ವ ಕೃತಿಯ ಅರ್ಥಾನುಸಂಧಾನದ ಭಾಗ್ಯ
ದೊರೆತದ್ದು ಕೂಡ ಆಚಾರ್ಯರು ಮತ್ತು ಇತರ ಆಚಾರ್ಯರು ಅನುಗ್ರಹಿಸಿದ ಜ್ಞಾನದ ಕಡಲಿನ ಒಂದು ತುಣುಕು
ನನ್ನ ಮೇಲೆ ಬಿದ್ದ ಪುಣ್ಯದಿಂದಲೇ ಎಂಬ ನಮ್ರತೆಯೊಂದಿಗೆ ಈ ಅರ್ಥ ಚಿಂತನೆಯನ್ನು ಇಂದಿಗೆ
ತಾತ್ಕಾಲಿಕವಾಗಿ ಮುಗಿಸುತ್ತೇನೆ. ನಮ್ಮನ್ನು ಭಗವಂತನೆಡೆಗೆ ಹೋಗದಂತೆ ತಡೆಯುವ ಅಜ್ಞಾನಾದಿ
ಸ್ಥಂಭಗಳನ್ನೂ ಸಹ,
ಆ ಭಗವಂತ ಸೀಳಿ, ಅವನೆಡೆಗೆ ನಮ್ಮ ದಾರಿಯನ್ನು
ವ್ಯಸ್ಥೆಮಾಡಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತಾ,
ಇಷ್ಟು ದಿವಸ ನನ್ನೊಂದಿಗೆ ಸಹಕರಿಸಿದ ಶ್ರೀ ಪ್ರಸಾದ್ ಅವರಿಗೆ ಹಾಗೂ, ನನ್ನ
ಪ್ರಯತ್ನವನ್ನು ಮೆಚ್ಚಿ ಉತ್ತೇಜಿಸಿದ ಬಳಗದ ಗೆಳೆಯರಿಗೆ ಹೃತ್ಪೂರ್ವಕ ವಂದನೆಗಳನ್ನು
ಅರ್ಪಿಸುತ್ತೇನೆ. ಶ್ರೀ ಕೃಷ್ಣಾರ್ಪಣಮಸ್ತು.
(Contributed by Shri B R Krishna)
****