Saturday 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 31: 01-35

 

ಅಧ್ಯಾಯ ಮೂವತ್ತೊಂದು [ಧೃತರಾಷ್ಟ್ರಾದಿಸ್ವರ್ಗ್ಗಪ್ರಾಪ್ತಿಃ]

 

̐

ಯಜ್ಞೇಶ್ವರೇಣಾಭಿಯುತೇಷು ಯುಕ್ತ್ಯಾ ಮಹೀಂ ಪ್ರಶಾಸತ್ಸು ಪೃಥಾಸುತೇಷು ।

ಯಿಯಕ್ಷುರಾಗಾನ್ನಿಶಿ ವಿಪ್ರವರ್ಯ್ಯೋ ಯುಧಿಷ್ಠಿರಂ ವಿತ್ತಮಭೀಪ್ಸಮಾನಃ ॥ ೩೧.೦೧ ॥

 

ಯಜ್ಞಪ್ರತಿಪಾದ್ಯನಾದ ಶ್ರೀಕೃಷ್ಣನಿಂದ ಕೂಡಿಕೊಂಡು,

ಪ್ರಜ್ಞಾಪೂರ್ವಕವಾಗಿ ಪಾಂಡವರು ಭೂಮಿಆಳಿಕೊಂಡು,

ಇರುವಾಗ ಯಾಗಮಾಡಬೇಕೆಂಬ ಇಚ್ಛೆಯುಳ್ಳ ಶ್ರೇಷ್ಠ ಬ್ರಾಹ್ಮಣನೊಬ್ಬನು,                   

ವಿತ್ತವನ್ನು ಬಯಸಿ ಯುಧಿಷ್ಠಿರನಲ್ಲಿಗೆ ರಾತ್ರಿಯ ಕಾಲದಲ್ಲಿ ಬರುವನು.

 

ಪ್ರಾತರ್ದ್ದದಾನೀತಿ ನೃಪಸ್ಯ ವಾಕ್ಯಂ ನಿಶಮ್ಯ ವಿಪ್ರಸ್ತ್ವರಿತೋ ಮಖಾರ್ತ್ಥೇ ।

ಭೀಮಂ ಯಯಾಚೇ ಸ ನೃಪೋಕ್ತಮಾಶು ನಿಶಮ್ಯ ಚಾದಾನ್ನಿಜಹಸ್ತಭೂಷಣಮ್ ॥ ೩೧.೦೨ ॥

 

‘ಬೆಳಿಗ್ಗೆ ಕೊಡುತ್ತೇನೆ’ ಎಂದು ಯುಧಿಷ್ಠಿರನು ಹೇಳುತ್ತಾನೆ,

ಬಹಳ ಅವಸರದಲ್ಲಿದ್ದ ಆ ಬ್ರಾಹ್ಮಣ ಭೀಮನನ್ನು ಬೇಡುತ್ತಾನೆ.

ಭೀಮನಾದರೋ, ಧರ್ಮರಾಜನಿಂದ ಹೇಳಲ್ಪಟ್ಟಿದ್ದನ್ನು ಕೇಳಿದವನು,

ಬ್ರಾಹ್ಮಣ ಕೇಳುತ್ತಿದ್ದಂತೆಯೇ ತನ್ನ ಕೈಯಲ್ಲಿದ್ದ ಆಭರಣವನ್ನು ಕೊಟ್ಟನು.

 

ಅನರ್ಘಮಗ್ನಿಪ್ರತಿಮಂ ವಿಚಿತ್ರರತ್ನಾಞ್ಚಿತಂ ವಿಪ್ರವರಸ್ತದಾಪ್ಯ ।

ಯಯೌ ಕೃತಾರ್ತ್ಥೋSಥ ಚ ನನ್ದಿಘೋಷಮಕಾರಯದ್ ವಾಯುಸುತಸ್ತದೈವ ॥ ೩೧.೦೩ ॥

 

ಬೆಲೆಕಟ್ಟಲು ಸಾಧ್ಯವಿಲ್ಲದಂತೆ, ಹೊಳೆಯುತ್ತಿತ್ತದು ಬೆಂಕಿಯಂತೆ,

ಚಿತ್ರ ವಿಚಿತ್ರವಾದ ರತ್ನಗಳಿಂದ ಕೂಡಿದ್ದ,

ಆ ಆಭರಣ ಅವನು ಹೊಂದಿ, ಧನ್ಯನಾಗಿ ತೆರಳಿದ.

ತದನಂತರ ಭೀಮನು ಆ ಅರ್ಧರಾತ್ರಿಯಲ್ಲಿ ಸಂತೋಷದ ಘೋಷವನ್ನು ಮಾಡಿದನು.

(ಅತ್ಯಂತ ಆನಂದವಾದಾಗ ಮಾಡಲ್ಪಡುವ ವಿಶೇಷ ನಾದಘೋಷವನ್ನು ಮಾಡಿದನು).

 

 

 

ಅಕಾಲಜಂ ತಂ ತು ನಿಶಮ್ಯ ರಾಜಾ ಪಪ್ರಚ್ಛ ದೂತೈಸ್ತಮುವಾಚ ಭೀಮಃ ।

ಯನ್ಮರ್ತ್ತ್ಯದೇಹೋSಪಿ ವಿನಿಶ್ಚಿತಾಯುರಭೂನ್ನೃಪಸ್ತೇನ ಮಮಾSಸ ಹರ್ಷಃ ॥ ೩೧.೦೪ ॥

 

ಅಕಾಲದಲ್ಲಿ ಉಂಟಾದ ಸಂತೋಷ-ಘೋಷವನ್ನು ಕೇಳಿದ, ಧರ್ಮರಾಜನು ಕಾರಣ ತಿಳಿಯಲು ದೂತರನ್ನು ಕಳುಹಿಸಿದ.

ಹಾಗೆ ಬಂದಿರುವ ದೂತರಲ್ಲಿ ಭೀಮಸೇನ ಹೇಳುವನು- ,

‘ನಶ್ವರವಾದ ಮಾನುಷ ಶರೀರದಲ್ಲಿರುವ ಧರ್ಮರಾಜನು,

ತನ್ನ ಆಯುಷ್ಯದ ಬಗೆಗೆ ಖಚಿತತೆಯನ್ನು ಹೊಂದಿರುವನು.

ಅದರಿಂದಾಗಿ ನಾನು ಅತೀವ ಸಂತೋಷ ಹೊಂದಿರುವೆನು.

[ನಶ್ವರ ಶರೀರದಲ್ಲಿರುವ ಮಾನವರು ತಕ್ಷಣ ಮಾಡಬೇಕು ದಾನ.

ನಾಳೆ ಎಂದರೆ ನಾಳೆ ಬದುಕಿರುತ್ತೇವೆ ಎಂಬ ಖಾತರಿ ಇರದ ಕ್ಷಣ .

ಹೀಗಿರುವಾಗ ಧರ್ಮರಾಜ ಬ್ರಾಹ್ಮಣನಿಗೆ ನಾಳೆ ಕೊಡುತ್ತೇನೆ ಎಂದು ಹೇಳಿದ್ದೇ ತಪ್ಪು.

ಅದನ್ನವನಿಗೆ ಮನವರಿಕೆ ಮಾಡಿಕೊಡಲು ಭೀಮ ಹಾರಿಸಿದ ಹಾಸ್ಯಪಾಠದ ತೋಪು.]

 

ಇತೀರಿತೋSಸೌ ನೃಪತಿಸ್ತ್ವರೇತ ಧರ್ಮ್ಮಾರ್ತ್ಥಮಿತ್ಯಸ್ಯ ಮತಂ ಪ್ರಪೂಜಯನ್ ।

ಜಗಾದ ಸಾಧ್ವಿತ್ಯಥ ಭೂಯ ಏವ ಧರ್ಮ್ಮೇ ತ್ವರಾವಾನಪಿ ಸಮ್ಬಭೂವ ॥ ೩೧.೦೫ ॥

 

ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜ ಅರಿತ ‘ಧರ್ಮ ಮಾಡಲು ಮುಖ್ಯ ವೇಗ’,

ಆ ಮುಖ್ಯಪ್ರಾಣನ ಅಭಿಪ್ರಾಯವನ್ನು ಗೌರವಿಸಿ, ‘ಒಳ್ಳೆಯದು’ ಎನ್ನುವನಾಗ,

ಮತ್ತು ಆನಂತರ ಧರ್ಮ ಕಾರ್ಯಗಳಲ್ಲಿ ಅಳವಡಿಸಿಕೊಂಡ ತಾನು ಬಹಳ ವೇಗ .

 

ಅಥಾsಮ್ಬಿಕೇಯಂ ವಿಷಯೇಷು ಸಕ್ತಂ ದುಸ್ಸಙ್ಗದುಷ್ಟಂ ಕೃತಭೂರಿದೋಷಮ್ ।

ಸಮಸ್ತ ರಾಜಾಪ್ಯಯಹೇತುಭೂತಂ ನಿಚಾಯ್ಯ ತಂ ಮಾರುತಿರನ್ವಕಮ್ಪತ ॥ ೩೧.೦೬ ॥

 

ತದನಂತರ ಶಕುನಿ ಮೊದಲಾದ , ದುಷ್ಟರಿಂದ ಕೂಡಿ ಕೆಟ್ಟುಹೋದ,

ಬಹಳ ದೋಷವನ್ನು ಮಾಡಿರುವ, ಎಲ್ಲಾ ರಾಜರ ನಾಶಕ್ಕೆ ಕಾರಣನಾಗಿರುವ,   .                           

ಇನ್ನೂ ಭೋಗದಲ್ಲಿಯೇ ಆಸಕ್ತನಾದ ಧೃತರಾಷ್ಟ್ರನನ್ನು,

ಕಂಡು ಭೀಮನು ಅವನ ಮೇಲೆ ಅನುಕಂಪ ತೋರಿದನು.

 

ಅಕುರ್ವತಸ್ತೀಕ್ಷ್ಣತಪಃ ಕುತಶ್ಚಿನ್ನೈವಾಸ್ಯ ಲೋಕಾಪ್ತಿರಮುಷ್ಯ ಭೂಯಾತ್ ।

ರಾಗಾಧಿಕೋSಯಂ ನ ತಪಶ್ಚ ಕುರ್ಯ್ಯಾದಿತ್ಯಸ್ಯ ವೈರಾಗ್ಯಕರಾಣಿ ಚಕ್ರೇ ॥ ೩೧.೦೭ ॥

 

ತೀಕ್ಷ್ಣ ತಪಸ್ಸು ಧೃತರಾಷ್ಟ್ರಗೆ ದೂರವಾಗಿತ್ತು, ಅವನಿಗೆ ತನ್ನ ಲೋಕ ಪ್ರಾಪ್ತಿ ಆಗುವದೆಂತು ? ಅತ್ಯಂತವಾಗಿ  ವಿಷಯಾಸಕ್ತನಾಗಿರುವ ಇವನು, ತಪಸ್ಸು ಮಾಡಲಾರ ಎಂದು ತಿಳಿದ ಭೀಮಸೇನನು

ಧೃತರಾಷ್ಟ್ರಗೆ ವೈರಾಗ್ಯ ಹುಟ್ಟಿಸುವ ಕರ್ಮಗಳ ಮಾಡಿದನು.

 

ಆಜ್ಞಾಂ ಪರೈರಸ್ಯ ನಿಹನ್ತಿ ಸೋದರೈರ್ವಧೂಜನೈರಪ್ಯತಿಪೂಜಿತೇSಸ್ಮಿನ್ ।

ಸ ನಿಷ್ಟನತ್ಯೇವಮಪೀತರೈಃ ಸ ಸುಪೂಜಿತೋ ನಾSಸ ತದಾ ವಿರಾಗಃ ॥ ೩೧.೦೮ ॥

 

ಸಹೋದರರಿಂದಲೂ, ಸೊಸೆಯರಿಂದಲೂ ಅತ್ಯಂತ ಪೂಜಿತನಾದರೂ,

ಭೀಮ ಧೃತರಾಷ್ಟ್ರನ ಆದೇಶಗಳನ್ನು ಬೇರೆಯವರಿಂದ ಉಲ್ಲಂಘಿಸಿದರೂ,

ತಾನೂ ಕೂಡಾ ತಿರಸ್ಕಾರ ಸೂಚಿಸುವ ನಿಷ್ಠುರ ಮಾತುಗಳನ್ನಾಡಿದರೂ ,

ಬೇರೊಬ್ಬರಿಂದ ಪೂಜಿಸಲ್ಪಟ್ಟ ಧೃತರಾಷ್ಟ್ರನಿಗೆ ವೈರಾಗ್ಯ ಏರದ ಮೇರು.

 

ಸರ್ವೇ ಹಿ ಪಾರ್ತ್ಥಸ್ತಮೃತೇ ಸಭಾರ್ಯ್ಯಾ ವೈಚಿತ್ರವೀರ್ಯ್ಯಂ ಪರಮಾದರೇಣ ।

ಪರ್ಯ್ಯೇವ ಚಕ್ರುಃ ಸತತಂ ಸಭಾರ್ಯ್ಯಂ ಕೃಷ್ಣಾ ಚ ನ ಸ್ಯಾತ್ ತನಯಾರ್ತ್ತಿಮಾನಿತಿ ॥ ೩೧.೦೯ ॥

 

ಭೀಮಸೇನನನ್ನು ಬಿಟ್ಟು, ಹೆಂಡಂದಿರಿಂದ ಒಡಗೂಡಿದ ಎಲ್ಲಾ ಪಾಂಡವರು,

ಗಾಂಧಾರಿಯಿಂದ ಕೂಡಿದ ಧೃತರಾಷ್ಟ್ರನನ್ನು ಪರಮ ಗೌರವದಿಂದ ಕಾಣುತ್ತಿದ್ದರು.

ಅವನಿಗೆ ಇರಬಾರದು ಎಂದು ಮಕ್ಕಳನ್ನು   ಕಳೆದುಕೊಂಡ ಸಂಕಟ ,

ದ್ರೌಪದಿಯದು ಅವನತ್ತ ಯಾವಾಗಲೂ ಬಹಳ ಪ್ರೀತಿಯ ನೋಟ.

 

ಸ ಪ್ರೀಯಮಾಣೋ ನಿತರಾಂ ಚ ತೇಷು ನೈವಾಧಿಕಂ ಪ್ರೀಯತೇ ಭೀಮಸೇನೇ ।

ಸ್ಮರನ್ ಸುತಾಂಸ್ತೇನ ಹತಾನ್ ಸಮಸ್ತಾನಪಿ ಪ್ರಭಾವಂ ಪರಮಸ್ಯ ಜಾನನ್ ॥ ೩೧.೧೦ ॥

 

ಧೃತರಾಷ್ಟ್ರನು ಪಾಂಡವರಲ್ಲಿ ಪರಮ ಪ್ರೀತಿಯನ್ನಿಟ್ಟಿದ್ದರೂ ಸಹಿತ,

ಸತ್ತುಹೋದ ತನ್ನ ಎಲ್ಲಾ ಮಕ್ಕಳನ್ನು ಸ್ಮರಣೆ ಮಾಡಿಕೊಳ್ಳುತ್ತಾ,

ಧೃತರಾಷ್ಟ್ರನು ಶ್ರೀಕೃಷ್ಣನ ಪ್ರಭಾವವನ್ನು ತಿಳಿದವನಾದರೂ ಕೂಡಾ,

ಭೀಮನಿಂದ ತನ್ನ ಮಕ್ಕಳು ಸತ್ತರು ಎಂದು ಹಿಡಿಯಲಿಲ್ಲ ಪ್ರೀತಿಯ ಜಾಡ.

 

ತಸ್ಯಾಪನೇತುಂ ವಿಷಯೇಷು ಸಕ್ತಿಂ ದ್ವೇಷಂ ತಥೈವಾSತ್ಮನಿ ಭೀಮಸೇನಃ ।

ಜಗಾದ ಮಾದ್ರೀಸುತಯೋಃ ಸಮಕ್ಷಮಾಸ್ಫೋಟ್ಯ ಸಂಶೃಣ್ವತ ಏವ ತಸ್ಯ ॥ ೩೧.೧೧ ॥

 

ಧೃತರಾಷ್ಟ್ರನಿಗೆ ವಿಷಯಪದಾರ್ಥಗಳಲ್ಲಿ ಆಸಕ್ತಿಯ ಕಡಿಮೆಮಾಡಲು,

ಹಾಗೆಯೇ ತನ್ನ ಮೇಲೆ ಅವನಿಗಿದ್ದಂಥ ದ್ವೇಷವನ್ನು ದೂರಓಡಿಸಲು ,

ಭೀಮಸೇನನು ನಕುಲ-ಸಹದೇವರ ಎದುರುಗಡೆ ,

ಧೃತರಾಷ್ಟ್ರ ಕೇಳುತ್ತಿರುವಾಗಲೇ ತಟ್ಟಿ ಮಾತಾಡಿದ ತೊಡೆ-

 

ತಾವಿಮೌ ಮೇ ಭುಜೌ ವೃತ್ತೌ ಪೀನೌ ಚನ್ದನರೂಷಿತೌ ।

ಯಯೋರನ್ತರಮಾಸಾದ್ಯ ಜರಢಸ್ಯ ಸುತಾ ಹತಾಃ ॥ ೩೧.೧೨ ॥

 

‘ಯಾವ ನನ್ನ ಎರಡು ಭುಜಗಳ ನಡುವೆ ಸಿಕ್ಕಿ ಈ ಮುದುಕನಾದ ಧೃತರಾಷ್ಟ್ರನ ಮಕ್ಕಳೆಲ್ಲರೂ ಆದರೋ ಮೃತ, 

ಅವೇ ಈ ನನ್ನ ಭುಜಗಳನ್ನು ನೋಡಿ, ಹೇಗೆ ದುಂಡಾಗಿ ದಪ್ಪವಾಗಿ ಗಂಧದಿಂದ ಆಗಿವೆ ಸಂಪೂರ್ಣ ಲೇಪಿತ.’

 

ಯಮೌ ತದನ್ವಮೋದೇತಾಂ ತತ್ಸ್ನೇಹಾದ್ ಗೌರವಾದಪಿ ।

ನೈವ ತತ್ ಕೃಷ್ಣಯಾ ಜ್ಞಾತಂ ಪೃಥಯಾ  ಸಹಪುತ್ರಯಾ ॥ ೩೧.೧೩ ॥

 

ನಕುಲ-ಸಹದೇವರು ಅಣ್ಣನಮೇಲಿನ ಸ್ನೇಹದಿಂದಲೂ, ಗೌರವದಿಂದಲೂ ‘ಹೌದು’ ಎಂದವನ ಮಾತನ್ನು ಅನುಮೋದಿಸಿದರು. ದ್ರೌಪದಿಯಿಂದ ಅದು ತಿಳಿಯಲ್ಪಡಲಿಲ್ಲ, ಉಳಿದ ಯುಧಿಷ್ಠಿರ, ಅರ್ಜುನ, ಕುಂತಿ, ಇತರರು ಕೂಡಾ ಇದನ್ನು ತಿಳಿಯದಾದರು.

 

ತಚ್ಛ್ರುತ್ವೋತ್ಪನ್ನನಿರ್ವೇದಂ ಕ್ಷತ್ತಾ ಜ್ಯೇಷ್ಠಸ್ಯ ವರ್ದ್ಧಯನ್ ।

ಉವಾಚ ಜೀವಿತಾಶಾ ತೇ ನನು ರಾಜನ್ ಮಹೀಯಸೀ ॥ ೩೧.೧೪ ॥

 

ಭೀಮಾಪವರ್ಜ್ಜತಂ ಪಿಣ್ಡಮಾದತ್ಸೇ ಗೃಹಪಾಲವತ್ ।

ನಚಾಪರಾಧೋ ಭೀಮಸ್ಯ ಬ್ರುವತಸ್ತ್ವಾಮಿದಂ ವಚಃ  ॥ ೩೧.೧೫ ॥

 

ಭೀಮನ ಮಾತನ್ನು ಕೇಳಿ ಧೃತರಾಷ್ಟ್ರನಲ್ಲಿ ಹುಟ್ಟಿದ ವೈರಾಗ್ಯವನ್ನು ಗಮನಿಸಿದ ವಿದುರನು ಅದನ್ನು ಬೆಳೆಸುತ್ತಾ ಹೇಳುತ್ತಾನೆ-;

 ‘ನಿನ್ನಲ್ಲಿ ಅತಿಯಾದ ಬದುಕುವ ಆಸೆಯಿದೆ , ಅದಕ್ಕಾಗಿ ಭೀಮ ಎಸೆಯುವ ಪಿಂಡವನ್ನು ನಾಯಿಯಂತೆ ತಿನ್ನುತ್ತಿರುವೆ ಓ ರಾಜನೇ'.

ನಿನ್ನನ್ನು ಕುರಿತು ಈ ರೀತಿಯಾಗಿ ಹೇಳುವ, ಭೀಮನಲ್ಲಿಲ್ಲ ಯಾವ ಅಪರಾಧದ ಭಾವ.

 

‘ಅಗ್ನಿರ್ನ್ನಿಸೃಷ್ಟೋ ದತ್ತಶ್ಚ ಗರೋ ದಾರಾಶ್ಚ ದೂಷಿತಾಃ’ ।

ಹೃತಂ ಕ್ಷೇತ್ರಂ ಧನಂ ಯಸ್ಯ ಕಿಂ ಭೀಮೇನ ಕೃತಂ ತ್ವಯಿ ॥ ೩೧.೧೬ ॥

 

ಅವರಿಗೆ ಬೆಂಕಿಯನ್ನಿಟ್ಟೆ, ವಿಷವನ್ನು ಕೊಟ್ಟೆ, ಅವರ ಹೆಂಡಿರನ್ನು ಕೆಡಿಸಲು ಪ್ರಯತ್ನಪಟ್ಟೆ,

ಅವರ ಭೂಮಿಯನ್ನು, ಹಣವನ್ನು ಕಿತ್ತುಕೊಂಡೆ.

ಅಂತಹ ನಿನ್ನಲ್ಲಿ ಭೀಮನಿಂದ ಯಾವ ಅನಿಷ್ಟವಾಗಿದೆ ?

(ಪ್ರತಿಯಾಗಿ ಅವನು ನಿಂಗೇನೂ ಮಾಡಿಲ್ಲ ಸ್ಪಷ್ಟವಾಗಿದೆ).

 

ಅಲಮಾಸಜ್ಜತಸ್ತೇSದ್ಯ ನಿರ್ವೇದಕರಮೀರಿತಮ್ ।

ಉಪಕಾರಾಯ ಭೀಮೇನ ತವ ದ್ವೇಷಂ ತ್ಯಜಾತ್ರ ತತ್ ॥ ೩೧.೧೭ ॥

 

ಕೇವಲ ವಿಷಯದಲ್ಲಿ ಆಸಕ್ತನಾಗಿರುವ ನಿನಗೆ,

ವೈರಾಗ್ಯ ಬರಲೀ ಎಂಬುದೇ ಭೀಮಸೇನನ ಬಗೆ .

ನಿನ್ನ ಉಪಕಾರಕ್ಕೆಂದೇ ಭೀಮನು ಈರೀತಿ ಹೇಳಿರುವುದು.

ಅದರಿಂದಾಗಿ ಈ ಭೀಮಸೇನನಲ್ಲಿ ನಿನ್ನ ಸೇಡನ್ನು ಬಿಡು.

 

ವಿಮುಚ್ಯ ದ್ವೇಷಕಾಮೌ ತ್ವಂ ವನೇ ತೀರ್ತ್ಥನಿಷೇವಕಃ ।

ತಪಸಾSSರಾಧಯ ಹರಿಂ ತತಃ ಪೂತೋ ಭವಿಷ್ಯಸಿ ॥ ೩೧.೧೮ ॥

 

ನೀನು ದ್ವೇಷ ಹಾಗೂ ಕಾಮನೆಗಳನ್ನು ಬಿಟ್ಟು, ಕಾಡಲ್ಲಿ ತೀರ್ಥಗಳ ಸೇವಿಸುತ್ತಾ ತಪವಿಟ್ಟು ,

'ನಾರಾಯಣನ ಆರಾಧನೆ ಮಾಡು, ಅದರಿಂದ ಪವಿತ್ರನಾಗುವೆ ನೀ ನೋಡು’.

 

ಇತ್ಯುಕ್ತೋ ದ್ವೇಷಮುತ್ಸೃಜ್ಯ ಭೀಮೇ ನಿರ್ವೇದಮಾಗತಃ ।

ಅನುಜ್ಞಾಂ ತಪಸೇ ಪ್ರಾಪ್ತುಮುಪವಾಸಪರೋSಭವತ್ ॥ ೩೧.೧೯ ॥

 

ಈರೀತಿಯಾಗಿ ಹೇಳಲ್ಪಟ್ಟ ಧೃತರಾಷ್ಟ್ರನು ಭೀಮಸೇನನಲ್ಲಿ ದ್ವೇಷವನ್ನು ಬಿಟ್ಟ,

ವೈರಾಗ್ಯ ಹೊಂದಿ ತಪಸ್ಸಿಗೋಸ್ಕರ ಅನುಜ್ಞೆಯ ಹೊಂದಲು ಉಪವಾಸ ಕುಳಿತ.

 

 

ಅನಶ್ನನ್ತಂ ಚತುರ್ತ್ಥೇSಹ್ನಿ ಧೃತರಾಷ್ಟ್ರಂ ಯುಧಿಷ್ಠಿರಃ ।

ಜ್ಞಾತ್ವಾ ಸಮ್ಪ್ರಾರ್ತ್ಥಯಾಮಾಸ ಭೋಜನಾರ್ತ್ಥಂ ಪುನಃಪುನಃ ॥ ೩೧.೨೦ ॥

 

ಯುಧಿಷ್ಠಿರನು ಉಪವಾಸ ಕುಳಿತಿರುವ ಧೃತರಾಷ್ಟ್ರನಿಗೆ,

ನಾಲ್ಕನೇ ದಿನ ತಿಳಿದು, ‘ಊಟಮಾಡು’ ಎಂದು ಬೇಡಿದ ಬಗೆ.

 

ಅನುಜ್ಞಾಂ ವನವಾಸಾಯ ತ್ವತ್ತಃ ಪ್ರಾಪ್ಯೈವ ಸರ್ವಥಾ ।

ಭೋಕ್ಷ್ಯೇSನ್ಯಥಾ ನೇತಿ ವದನ್ ಧೃತರಾಷ್ಟ್ರಃ ಶ್ರಮಾನ್ವಿತಃ ॥ ೩೧.೨೧ ॥

 

ಉಪವಾಸಕೃಶೋ ಭಾರ್ಯ್ಯಂ ಶಿಶ್ರಿಯೇ ಮೂರ್ಚ್ಛಿತಃ ಕ್ಷಣಾತ್ ।

ಶನ್ತಮೇನ ಕರೇಣಾಥ ಧರ್ಮ್ಮಜಸ್ತಂ ಮೃದು ಸ್ಪೃಶನ್ ॥ ೩೧.೨೨ ॥

 

ಶನೈಃ ಸಂಜ್ಞಾಮಗಮಯದಬ್ರವೀಚ್ಚ ಸುದುಃಖಿತಃ ।

ಪುರಸ್ಕೃತ್ಯ ಯುಯುತ್ಸುಂ ತ್ವಂ ಕುರು ರಾಜ್ಯಮಕಣ್ಟಕಮ್ ॥ ೩೧.೨೩ ॥

 

ವಯಮೇವ ತ್ವದರ್ತ್ಥಾಯ ಕುರ್ಮ್ಮಃ ಸರ್ವೇ ತಪೋ ವನೇ ।

ನೇತ್ಯಾಹ ಧೃತರಾಷ್ಟ್ರಸ್ತಂ ಕುಲಧರ್ಮ್ಮೋ ಹಿ ನೋ ವನೇ ॥ ೩೧.೨೪ ॥

 

ಅನ್ತೇ ದೇಹಪರಿತ್ಯಾಗಸ್ತನ್ಮಾSನುಜ್ಞಾತುಮರ್ಹಸಿ ।

ತಯೋರ್ವಿವದತೋರೇವಂ ಕೃಷ್ಣದ್ವೈಪಾಯನಃ ಪ್ರಭುಃ ॥ ೩೧.೨೫ ॥

 

ಸರ್ವಜ್ಞಃ ಸರ್ವಕರ್ತ್ತೇಶ ಆವಿರ್ಭೂತೋSಬ್ರವೀನ್ನೃಪಮ್ ।

ತಪಸಾSಶೇಷದೋಷಾಣಾಂ ಕ್ಷಯಕಾಮಮಿಮಂ ನೃಪಮ್  ॥ ೩೧.೨೬ ॥

 

ಅನುಜಾನೀಹಿ ನೈವಾಸ್ಯ ಧರ್ಮ್ಮವಿಘ್ನಕರೋ ಭವ ।

ಕಾಲೇ ನಿರ್ವೇದಮಾಪನ್ನಸ್ತಪಸಾ ದಗ್ಧಕಿಲ್ಬಿಷಃ ॥ ೩೧.೨೭ ॥

 

ಶುಭ್ರಾಂ ಗತಿಮಯಂ ಯಾಯಾದನ್ಯಥಾ ನ ಕಥಞ್ಚನ ।

ಇತ್ಯುಕ್ತೋ ಧರ್ಮ್ಮರಾಜಸ್ತಮನುಜಜ್ಞೇ ಸ ಚಾಶಿತಃ ॥ ೩೧.೨೮ ॥

 

 

‘ನಿನ್ನಿಂದ ವನವಾಸಕ್ಕಾಗಿ ಅನುಜ್ಞೆಯನ್ನು ಹೊಂದಿಯೇ ಊಟಮಾಡುತ್ತೇನೆ,

'ಇಲ್ಲದಿದ್ದರೆ ಇಲ್ಲಾ’ ಎಂದು ಹೇಳುತ್ತಾನೆ, ಉಪವಾಸ ಶ್ರಮದಿಂದ ಕೃಶನಾಗಿರುತ್ತಾನೆ.

ಧೃತರಾಷ್ಟ್ರನು ಮೂರ್ಛಿತನಾಗುತ್ತಾನೆ, ಮತ್ತು ಹೆಂಡತಿಯನ್ನು ಆಶ್ರಯಿಸುತ್ತಾನೆ.   

 

ಆಗ ಯುಧಿಷ್ಟಿರನು ಬಹಳ ಆನಂದವನ್ನು ಉಂಟುಮಾಡುವ ತನ್ನ ಕೈಯಿಂದ,

ದೊಡ್ಡಪ್ಪನನ್ನು ಮೃದುವಾಗಿ ಮುಟ್ಟಿ, ನಿಧಾನವಾಗಿ ಅವನನ್ನು ಎಚ್ಚರಗೊಳಿಸಿದ.

ದುಃಖಿತನಾಗಿ ಯುಧಿಷ್ಠಿರ ಹೇಳುತ್ತಾನೆ-

‘ನೀನು ಯುಯುತ್ಸುವನ್ನು ಮುಂದಿಟ್ಟುಕೊಂಡು,ಮಾಡು ಶತ್ರುರಹಿತವಾದ ರಾಜ್ಯವನ್ನು ಪಾಲನೆ.

ನಾವೇ ನಿನಗಾಗಿ ಕಾಡಿಗೆ ಹೋಗಿ ಅಲ್ಲಿ ಇದ್ದು ಮಾಡುತ್ತೇವೆ ತಪಸ್ಸಿನ ಆಚರಣೆ’.

ಧೃತರಾಷ್ಟ್ರನು ಹೀಗೆ ಹೇಳುವ ಧರ್ಮರಾಜನನ್ನು ಕುರಿತು ಹೇಳುತ್ತಾನೆ-                                 ' ಅದು ಸಾಧ್ಯವಿಲ್ಲ, ಆಶ್ರಯಿಸಬೇಕು ಕಾಡನ್ನೆ,

ಕಡೆಗಾಲದಿ ಮಾಡಬೇಕಲ್ಲಿ ದೇಹತ್ಯಾಗವನ್ನೇ.

ಇದು ನಮ್ಮ ಕುಲಧರ್ಮ ,ನನಗೆ ಕಾಡಿಗೆ ಹೋಗಲು ಅನುಜ್ಞೆ ನೀಡಲು ನೀನು ಅರ್ಹನಾಗಿದ್ದೀಯ’ ಎಂದು ಹೇಳುತ್ತಾನೆ.  ಅವರಿಬ್ಬರೂ ಈ ರೀತಿ ವಾದ-ವಿವಾದ ಮಾಡುತ್ತಿರುವಾಗ-,

ಎಲ್ಲವನ್ನೂ ಬಲ್ಲ, ಎಲ್ಲವನ್ನೂ ಮಾಡುವ, ಸರ್ವಸಮರ್ಥರಾದ, ಎಲ್ಲರ ಒಡೆಯರಾದ ವೇದವ್ಯಾಸರು ಆವಿರ್ಭಾವಗೊಳ್ಳುವರಾಗ. ಧರ್ಮರಾಜನನ್ನು ಕುರಿತು ಹೇಳಿದರು- ‘ತಪಸ್ಸಿನಿಂದ ಎಲ್ಲಾ ದೋಷಗಳ ನಾಶವಾಗಬೇಕು ಎಂದು ಅವನ ಬಯಕೆ ,

ನಿನ್ನ ಕಾರ್ಯವದು ಅನುಜ್ಞೆಕೊಟ್ಟು ಇವನ ಧರ್ಮ ವಿಘ್ನ ಮಾಡದಿರುವಿಕೆ.

ಸರಿಯಾದ ಕಾಲದಲ್ಲಿ ವೈರಾಗ್ಯವನ್ನು ಹೊಂದಿರುವ ಇವನು,

ತಪಸ್ಸಿನಿಂದ ತನ್ನ ಪಾಪವನ್ನು ಸುಟ್ಟು ಪವಿತ್ರವಾದ ಗತಿಯನ್ನು ,

ಹೊಂದುತ್ತಾನೆ, ಇಲ್ಲದಿರೆ ಹೊಂದಲಾರ’ ಎಂಬ ಬುದ್ಧಿಮಾತನ್ನು.

ಈರೀತಿ ಹೇಳಲ್ಪಟ್ಟ ಧರ್ಮರಾಜ ಅನುಜ್ಞೆಯನ್ನಿತ್ತನು.

ಧೃತರಾಷ್ಟ್ರನು ಕೂಡಾ ಊಟವನ್ನು ಮಾಡಿದನು.

 

ಶಿಕ್ಷಯಾಮಾಸ ಸದ್ಧರ್ಮ್ಮಾನ್ ನೀತಿಂ ಚ ವಿದುಷೇSಪ್ಯಲಮ್ ।

ಕೇವಲಸ್ನೇಹತೋ ರಾಜ್ಞೇ ಶುಶ್ರಾವ ವಿನಯಾಯ ಸಃ ॥ ೩೧.೨೯ ॥

 

ಯುಧಿಷ್ಠಿರನ ಮೇಲಿನ ಸ್ನೇಹದಿಂದ ಸಜ್ಜನ ಧರ್ಮವನ್ನೂ, ರಾಜನೀತಿಯನ್ನೂ,

ಮಹಾರಾಜ ಧೃತರಾಷ್ಟ್ರನು ಮಾಡಿದನು ಯುಧಿಷ್ಟಿರನಿಗೆ ಉಪದೇಶವನ್ನು.

ಅದೆಲ್ಲವನ್ನೂ ಚೆನ್ನಾಗಿ ಬಲ್ಲವನಾಗಿದ್ದ, ಧರ್ಮರಾಜ ವಿನಯಕ್ಕಾಗಿ ಅದನ್ನು ಕೇಳಿದ. 

 

ಅನುಜ್ಞಾಯ ಗೃಹಂ ಪ್ರಾಪ್ತೇ ಧರ್ಮ್ಮಜೇ ವಿದುರಂ ಪುನಃ ।

ಶ್ರಾದ್ಧಾಯ ವಿತ್ತಮಾಕಾಙ್ಕ್ಷನ್ ಪ್ರೇಷಯಾಮಾಸ ತದ್ವಚಃ ॥ ೩೧.೩೦ ॥

 

ಶ್ರುತ್ವಾ ಯುಧಿಷ್ಠಿರೋ ಭೀಮಮಾಹ ದಾತವ್ಯಮದ್ಯ ನಃ ।

ಪುತ್ರಪೌತ್ರಾಪ್ತಬನ್ಧೂನಾಂ ಶ್ರಾದ್ಧೇಚ್ಛೋರ್ವಿತ್ತಮಞ್ಜಸಾ ॥ ೩೧.೩೧ ॥

 

ಧೃತರಾಷ್ಟ್ರನಿಗೆ ಅನುಜ್ಞೆಯನ್ನಿತ್ತ ಧರ್ಮರಾಜನು ತನ್ನ ಮನೆಗೆ ಹಿಂತಿರುಗಿದ, ಪುನಃ ಧೃತರಾಷ್ಟ್ರನು ದುರ್ಯೋಧನನ ಶ್ರಾದ್ಧ ಮಾಡಲು ಹಣವನ್ನು ಬಯಸಿದ. ಕಳುಹಿಸಲ್ಪಟ್ಟ ವಿದುರನ ಮಾತನ್ನು ಕೇಳಿ ಯುಧಿಷ್ಠಿರನು ಭೀಮಸೇನಗೆ ಹೇಳಿದ , ‘ಮಕ್ಕಳು, ಮೊಮ್ಮಕ್ಕಳು, ಆಪ್ತ ಬಂಧುಗಳ ಶ್ರಾದ್ಧವನ್ನು ಮಾಡಬೇಕು ಎಂದು ಬಯಸಿರುವ, ಅದಕ್ಕೆ ವಿತ್ತವ ಬೇಡುವ ಧೃತರಾಷ್ಟ್ರನಿಗೆ ಹಣವು ಕೊಡಲ್ಪಡಬೇಕಾದದ್ದು’ ನಮ್ಮ ಕರ್ತವ್ಯ.

 

ತಮಾಹ ಭೀಮಃ ಪಾಪಾನಾಂ ವಿಮುಖಾನಾಂ ಮಧುದ್ವಿಷಃ ।

ಪಾರಲೌಕಿಕಸಾಹಾಯ್ಯಂ ನ ಕಾರ್ಯ್ಯಮಿತರಾರ್ತ್ಥತಃ ॥ ೩೧.೩೨ ॥

 

ದತ್ತೇನಾಪಿ ಹಿ ವಿತ್ತೇನ ಪುತ್ರಶ್ರಾದ್ಧಂ ಕರಿಷ್ಯತಿ ।

ತಜ್ಜ್ಞಾತ್ವಾ ದದತಾಂ ದೋಷೋ ಭವೇದಿತಿ ವಿಚಿನ್ತಯನ್  ॥ ೩೧.೩೩ ॥

 

‘ಕಷ್ಟಾತ್ ಕಷ್ಟತರಂ ಯಾನ್ತು ಸರ್ವೇ ದುರ್ಯ್ಯೋಧನಾದಯಃ’ ।

ಭೀಷ್ಮಾದೀನಾಂ ವಯಂ ಶ್ರಾದ್ಧಕರ್ತ್ತಾರಸ್ತೇನ ಕಿಂ ತತಃ ॥ ೩೧.೩೪ ॥

 

ಕಾನೀನತ್ವಾತ್ತು ಕರ್ಣ್ಣಸ್ಯ ಸಹಾಸ್ಮಾಭಿಃ ಪೃಥೈವ ಹಿ ।

ಶ್ರಾದ್ಧಕರ್ಮ್ಮಣ್ಯಧಿಕೃತಾ ಕಿಂ ತಸ್ಮೈ ಧೀಯತೇ ಧನಮ್ ॥ ೩೧.೩೫ ॥

 

ಆಗ ಧರ್ಮರಾಜನನ್ನು ಕುರಿತು ಭೀಮಸೇನನು ಹೇಳುತ್ತಾನೆ- ,

‘ಆ ಪಾಪಿಗಳೆಲ್ಲರೂ ಶ್ರೀಕೃಷ್ಣನಿಗೆ ವಿಮುಖರಾದವರು ತಾನೇ?

ಪರಲೋಕದ ಸಹಾಯರೂಪವಾದ ಶ್ರಾದ್ಧ ಇತ್ಯಾದಿಗಳೆಲ್ಲ,

ಬೇರೊಬ್ಬರ  ಸಂಕೋಚಕ್ಕೆ ಬಲಿಬಿದ್ದೂ ಕೂಡಾ ಮಾಡತಕ್ಕದ್ದಲ್ಲ.

ಭೀಷ್ಮಾದಿಗಳ ಶ್ರಾದ್ಧಕ್ಕಾಗಿ ಹಣ ಕೊಟ್ಟರೂ ಕೂಡಾ,

ಅದನ್ನು ತನ್ನ ಮಕ್ಕಳ ಶ್ರಾದ್ಧಕ್ಕೇ ಬಳಸುತ್ತಾನೆ ಕುರುಡ .

ಇದನ್ನು ತಿಳಿದೂ ಕೂಡಾ ಕೊಡುವವರಿಗೆ ಆಗುತ್ತವೆ ದೋಷ.

ದುರ್ಯೋಧನಾದಿಗಳಿಗೆಲ್ಲ ಆಗಲೇಬೇಕು ಅಧೋಲೋಕ ವಾಸ.

ಹೊರತು ಊರ್ಧ್ವಲೋಕಕ್ಕಲ್ಲ ಅವರುಗಳು ಹೋಗಬೇಕಾಗಿರುವುದು.

ಭೀಷ್ಮಾದಿಗಳ ಶ್ರಾದ್ಧವನ್ನು ಕೂಡಾ ನಾವೇ ಅಲ್ಲವೇ ಮಾಡುತ್ತಿರುವುದು.

ಹಾಗಿರುವಾಗ ಧೃತರಾಷ್ಟ್ರನಿಗೆ ಕೊಡುವ ದ್ರವ್ಯದಿಂದ ಏನು ಪ್ರಯೋಜನ?

ಇನ್ನು ತಾಯಿ ಕುಂತಿಯ ಕನ್ಯಾವಸ್ಥೆಯಲ್ಲೇ ಹುಟ್ಟಿರುವುದಲ್ಲವೇ ಅವನು ಕರ್ಣ,

ನಮ್ಮ ಜೊತೆಗೇ ಕೂಡಿಕೊಂಡು ತಾಯಿಯೇ  ಮಾಡಬೇಕಲ್ಲವೇ ಅವನ ಶ್ರಾದ್ಧವನ್ನ. ಹೀಗಿರುವಾಗ ಧೃತರಾಷ್ಟ್ರನಿಗೇಕೆ ಕೊಡಬೇಕು ನಾವುಗಳು ಸಹಕಾರ ಮತ್ತು ಹಣ?’.

No comments:

Post a Comment

ಗೋ-ಕುಲ Go-Kula