Showing posts with label ಪುರಂದರದಾಸರು. Show all posts
Showing posts with label ಪುರಂದರದಾಸರು. Show all posts

Sunday, 21 February 2016

ಪುರಂದರದಾಸರು ಭಗವಂತನಿಗಾಗಿ ಹಾಡಿದ ಸುಪ್ರಭಾತ - ಭಾಗ-5

ಪುರಂದರದಾಸರು, ಒಳಬಗೆಯಲ್ಲಿ ಭಗವಂತನ ಮಾನಸ ಪೂಜೆಯ ವಿಧಾನವನ್ನು ಹಾಡಿನ ಮುಂದಿನ ಸಾಲುಗಳಲ್ಲಿ ನೆನಪಿಸಿಕೊಳ್ಳುತ್ತಾರೆ...

"ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿಹರಯ್ಯ ಸುಜನರೊಡೆಯ
ಅರವಿಂದಲೋಚನನೆ ಕೋಳಿ ಕೂಗಿತು ಕೇಳು
ಪುರಂದರ ವಿಠಲನೆ ಬೆಳಗಾಯಿತು"

ಇದು ದಾಸರು ತಮ್ಮ ಒಳಬಗೆಯಲ್ಲಿ ಕಂಡು ಆಡಿದ ಮಾತುಗಳು... ಹೊರಗೆ ತಿರುಪತಿಯ ಬೆಟ್ಟದಲ್ಲಿ ಪೂಜೆಗೆಂದು ದೇವತೆಗಳು ಬಂದು ನಿಂತಿದ್ದಾರೋ ಇಲ್ಲವೋ ಗೊತ್ತಿಲ್ಲ... ಆದರೆ, ದಾಸರ ಬಗೆಯ ಬೆಟ್ಟದಲ್ಲಿ ಮಾತ್ರ ಖಂಡಿತ ಬಂದು ನಿಂತಿದ್ದಾರೆ...

"ಅರಳಿ ಗಮಗಮಿಸುವ ಮಲ್ಲಿಗೆ , ಜಾಜಿ ಮುಂತಾದ ಕಂಪು ಸೂಸುವ ಹೂವುಗಳನ್ನು ತಂದು ನಿನ್ನ ಪೂಜೆಗೆಂದು ಸುರರು ನಿಂತಿದ್ದಾರೆ ಓ ಶ್ರೀನಿವಾಸನೇ" ಅನ್ನುತ್ತಾರೆ ದಾಸರು..

ವಿಶೇಷವಾಗಿ ಸುಗಂಧಯುಕ್ತವಾದ ಬಿಳಿಯ ಹೂವುಗಳು ವಿಷ್ಣುವಿನ ಆರಾಧನೆಗೆ ವಿಹಿತವಾದಂತವು ಎಂದು ಶಾಸ್ತ್ರಗಳು ಹೇಳುತ್ತವೆ.... ಅದಕೆಂದೆ ದಾಸರು ಇಲ್ಲಿ "ಪರಿಮಳದ ಪುಷ್ಪಗಳ " ಎಂಬ ವಿಶೇಷವನ್ನಿತ್ತು, ಮಲ್ಲಿಗೆ, ಜಾಜಿ ಮುಂತಾದ ಬಿಳಿಯ ಹೂಗಳನ್ನೇ ಉಲ್ಲೇಖಿಸಿದ್ದಾರೆ...

ಪೂಜೆಗೆ ಬಳಸುವ ಹೂವುಗಳಲ್ಲಿರುವ ಬೇರೆ ಬೇರೆ ದೇವತೆಗಳ ಸನ್ನಿಧಾನವನ್ನು ಒಂದು ಮಂತ್ರ ಹೀಗೆ ಹೇಳುತ್ತದೆ :

"ಪಾರಿಜಾತಸ್ಯ ಪುಷ್ಪೇಷು
ಆಂಜನೇಯಸ್ತದಾಜ್ಞೇಯಾ |
ಸೌಗಂಧಿಕೇ ಭೀಮಸೇನಃ
ಶ್ವೇತ ಪುಷ್ಪೇಷು ಶಂಕರಃ |
ಪುನ್ನಾಗ ಪುಷ್ಪೇ ಗರುಡಃ.....

ಪಾರಿಜಾತ ಪುಷ್ಪದಲ್ಲಿ ಆಂಜನೇಯನಿದ್ದಾನೆ...

ಕಲ್ಹಾರ (ಸೌಗಂಧಿಕ) ಪುಷ್ಪದಲ್ಲಿ ಭೀಮಸೇನನಿದ್ದಾನೆ...

ಪುನ್ನಾಗ ಪುಷ್ಪದಲ್ಲಿ ಗರುಡನಿದ್ದಾನೆ...

ಬಿಳಿಯ ಹೂಗಳಲ್ಲೆಲ್ಲ ಶಂಕರನಿದ್ದಾನೆ...

ಅದರಿಂದ ಬಿಳಿಯ ಪರಿಮಳದ ಪುಷ್ಪಗಳ ಸುರರು ತಂದಿಹರಯ್ಯ...

ಅದೂ ಕೂಡ ಅರಳಿದ ಪುಷ್ಪಗಳು, ಏಕೆಂದರೆ, ಅರಳಿದಾಗ ಮಾತ್ರವೆ ಹೂವಿನ ಕಂಪು, ಚೆಲುವು ಪೂರ್ಣಪ್ರಮಾಣದಲ್ಲಿ ಅಭಿವ್ಯಕ್ತಗೊಳ್ಳುವುದು....

ಆಧ್ಯಾತ್ಮದ ನಮ್ಮ ಮಾನಸ ಪೂಜೆಯಲ್ಲಾಗುವಾಗ  ಈ ಹೂಗಳೆಂದರೆ ಏನು ?
ಮಹಾಭಾರತದ ಒಂದು ಮಾತು ಇದಕ್ಕೆ ಪುಷ್ಟಿಕೊಡುತ್ತದೆ...

"ಭಾವಾಷ್ಟ ಪುಷ್ಪವಿಧಿನಾ ಹರಿಮರ್ಚಯಾಮಿ"...

ನಮ್ಮ ಬಗೆಯ ಸಾತ್ವಿಕ ಭಾವಗಳೆ ಹೂವುಗಳು. ಇಂಥ ಎಂಟು ಬಗೆಯ ಹೂವುಗಳಿಂದ ಭಗವಂತನನ್ನು ಆರಾಧಿಸಬೇಕು ಅನ್ನುತ್ತದೆ ಮಹಾಭಾರತ...

ಹೂವುಗಳಿಗೆ ಇನ್ನೊಂದು ಹೆಸರು "ಸುಮನಸ್" ಅಂತ.. ನಮ್ಮ ಮನಸ್ಸು ಸುಮನಸ್ ಆದಾಗ, ಮನದ ಎಂಟು ಬಗೆಯ ಸದ್ಭಾವಗಳೇ ಆ ಎಂಟು ಹೂವುಗಳಾಗುತ್ತವೆ....

ಅಹಿಂಸಾ ಪ್ರಥಮಂ ಪುಷ್ಪಂ
ಪುಷ್ಪಂ ಇಂದ್ರಿಯ ನಿಗ್ರಹಃ |
ಸರ್ವಭೂತದಯಾ ಪುಷ್ಪಂ
ಕ್ಷಮಾ ಪುಷ್ಪಂ ವಿಶಿಷ್ಯತೇ |
ಜ್ಞಾನ ಪುಷ್ಪಂ ತಪಃ ಪುಷ್ಪಂ
ಧ್ಯಾನ ಪುಷ್ಪಂ ಚ ಸಪ್ತಮಮ್ |
ಸತ್ಯಂ ಚೈವಾಷ್ಟಮಂ ಪುಷ್ಪಂ
ಏಭಿಸ್ತುಷ್ಯತಿ ಕೇಶವಃ ||

ಅಹಿಂಸೆಯೇ ಮೊದಲ ಹೂವು. ಕಾಯದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಪರರಿಗೆ ಕೇಡು ಬಗೆಯದಿರುವುದೇ ಅಹಿಂಸೆ...

ಇಂದ್ರಿಯನಿಗ್ರಹ ಎರಡನೆಯ ಹೂವು...

ಕೆಟ್ಟ ವಿಷಯಗಳತ್ತ ನಮ್ಮ ಇಂದ್ರಿಯಗಳು ಸುಳಿಯದಂತೆ ನಿಯಂತ್ರಣಗೊಳಿಸುವುದು...

ಎಲ್ಲ ಪ್ರಾಣಿ-ಪಕ್ಷಿಗಳತ್ತ ತೋರುವ ದಯೆಯೇ ಮೂರನೆಯ ಹೂವು...

ಅಂದರೆ, ಭಗವಂತನ ಸೃಷ್ಟಿಯ ಒಂದು ಸಣ್ಣ ಕೀಟವನ್ನೂ ಅನುಕಂಪೆಯಿಂದ ಕಾಣುವುದೇ "ಸರ್ವಭೂತದಯಾ"...

"ಕ್ಷಮಾ" ಗುಣವೇ ನಾಲ್ಕನೇ ಹೂವು....

 ನಮಗೆ ಕೇಡು ಬಗೆದವರ ಮೇಲೂ ಸೇಡು ಬಗೆಯದ ದಿವ್ಯ ಸಹನೆಯೇ ಕ್ಷಮೆ... ಇದೇ ಹಿರಿಯ ಹೂವು....

ಭಗವಂತನ ಬಗೆಗೆ ಆಳವಾಗಿ ಅರಿಯಬೇಕೆಂಬ ಅಧ್ಯಾತ್ಮದ ಅರಿವೇ

"ಜ್ಞಾನವೆಂಬ" ಐದನೆಯ ಹೂವು....

ತಾತ್ವಿಕ ಸಂಗತಿಗಳನ್ನು ಮನನ ಮಾಡುತ್ತಾ ಆಳವಾದ ಚಿಂತನೆಗೆ ನಿರಂತರ ತೊಡಗಿಕೊಳ್ಳುವುದೇ "ತಪಸ್ಸೆಂಬ" ಆರನೆಯ ಹೂವು....

ಭಗವಂತನಲ್ಲಿ ನಿರಂತರ ಮನಸ್ಸನ್ನು ನೆಲೆಗೊಳಿಸುವುದೇ "ಧ್ಯಾನವೆಂಬ" ಏಳನೇ ಹೂವು....

ನಿಜವನ್ನರಿತು ನಿಜವನ್ನೇ ಆಡುವ, ನುಡಿದಂತೆ ನಡೆವ, ನಡೆದಂತೆ ನುಡಿವ ದೀಕ್ಷೆಯೇ (Talk the Walk and Walk the Talk ಅಂತಾರಲ್ಲ ಹಾಗೆ.... )   "ಸತ್ಯವೆಂಬ" ಎಂಟನೆಯ ಹೂವು...

ಇಂಥ ಹೂವುಗಳ ಅರ್ಚನೆಯಿಂದ (ಕೇಶವ) ಭಗವಂತ ಸಂತುಷ್ಟನಾಗುತ್ತಾನೆ.... ಇವೇ ಎಂಟು ಭಾವಗಳು ನಮ್ಮ ಮನಸ್ಸು ಸತ್ಯ ಪ್ರಚುರವಾದಾಗ ಅರಳುವ ಹೂವುಗಳು ಅಥವಾ  ಅಧ್ಯಾತ್ಮದ ಮಲ್ಲಿಗೆ, ಮಂದಾರ, ಜಾಜಿ, ಪಾರಿಜಾತ, ನಂದಿಬೆಟ್ಟಲು, ಪುನ್ನಾಗ, ಕಮಲ, ಕಲ್ಹಾರಗಳು...

ಸತ್ವದ ಗುಣ ಬೆಳಕು, ಪ್ರಕಾಶ ಅದಕೆಂದೆ ಬಿಳಿಯ ಹೂವುಗಳು... ಭಕ್ತಿಯ ಕಂಪು ತುಂಬಿದ ಪರಿಮಳದ ಹೂವುಗಳು... ಇಂಥಾ ಸದ್ಭಾವದ ಬದುಕೇ ಭಗವಂತನಿಗೆ ನಾವು ಮಾಡಬೇಕಾದ "ಪುಷ್ಪಾರ್ಚನೆ"....

ಇಂಥಾ ಅಧ್ಯಾತ್ಮದ ಸತ್ಪಥದಲ್ಲಿ ನಮ್ಮನ್ನು ಸಾಧನೆಯತ್ತ ಕೊಂಡಯ್ಯಲು ನಮ್ಮ ಇಂದ್ರಿಯಗಳಲ್ಲಿದ್ದು ಇಂಥಾ ಪುಷ್ಪಗಳನ್ನು ಹಿಡಿದು ನಿಂತ ಸುರರೇ ತತ್ವಾಭಿಮಾನಿ ದೇವತೆಗಳು ಮತ್ತು ಜೀವ ಕಲೆಯ ಅಭಿಮಾನಿಯಾದ ಮುಖ್ಯ ಪ್ರಾಣದೇವರು...

ಆದ್ದರಿಂದಲೇ, ದಾಸರು ಹಾಡಿದರು "ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ ಸುರರು ತಂದಿಹರಯ್ಯ "..

"ನಾನು ಮಾಡುತ್ತೇನೆ" ಎನ್ನುವುದು ಅಹಂಕಾರದ ಮಾತು "ಸುರರು ನನ್ನಿಂದ ಮಾಡಿಸುತ್ತಿದ್ದಾರೆ" ಎನ್ನುವುದು ಸಾತ್ವಿಕ ಉಪಾಸನೆ... ಸುರರು ನನ್ನೊಳಗಿದ್ದು ನನಗಾಗಿ ದೇವರಿಗೆ ಹೂವಿನ ಪೂಜೆ ಸಲ್ಲಿಸುತ್ತಿದ್ದಾರೆ, ತನ್ಮೂಲಕ ನನ್ನಿಂದ ಪೂಜೆ ಮಾಡಿಸುತ್ತಿದ್ದಾರೆ" ಎಂಬ ಅರಿವು ಇರಬೇಕು...

ಸರ್ವೇಂದ್ರಿಯಾಭಿಮಾನಿಸ್ಥ ಮುಖ್ಯಪ್ರಾಣಸ್ಥ ವಿಷ್ಣುನಾ |
ಪ್ರೇರಿತಃ ಶ್ರೀಶತುಷ್ಟ್ಯರ್ಥಂ ಕರಿಷ್ಯೇ ಕರ್ಮ ಚಾಖಿಲಮ್ ||

(ಇಂದ್ರಿಯಾಭಿಮಾನಿಗಳ ಒಳಗೆ ಮುಖ್ಯಪ್ರಾಣ ನಿಯಾಮಕನಾಗಿದ್ದಾನೆ. ಅವನೊಳಗೆ ಅವನಿಗೂ ನಿಯಾಮಕನಾಗಿ ನಾರಾಯಣನಿದ್ದಾನೆ. ಅವನ ಪ್ರೇರಣೆಯಿಂದಲೆ, ಅವನು ಪ್ರೀತನಾಗಲಿ ಎಂದೆ, ಅವರೆಲ್ಲ ಪ್ರೇರಿಸಿದಂತೆ ನಾನು ಕರ್ಮಗಳನ್ನು ಮಾಡುತ್ತೇನೆ...) ಈ ಅನುಸಂಧಾನವನ್ನು ದಾಸರು ತೋರಿಸಿಕೊಟ್ಟಿದ್ದಾರೆ....

ಮತ್ತೆ ದಾಸರು ಭಗವಂತನನ್ನು ಇಲ್ಲಿ "ಸುಜನರೊಡೆಯ" ಅಂತ ಕರೆದಿದ್ದಾರೆ.. ಇದರ ಉದ್ದೇಶವೇನು ? ವಾಸ್ತವವಾಗಿ ಸುಜನರಿಗೂ, ದುರ್ಜನರಿಗೂ ಅವನೇ ಒಡೆಯ..

ಯಾರ ಮನಸ್ಸು "ಸುಮನಸ್ಸೋ" ಅವರು ಸುಜನರು. ಯಾರ ಮನಸ್ಸಿನಲ್ಲಿ ಹೊಲಸು ತುಂಬಿದೆಯೋ ಅವರು ದುರ್ಜನರು..  
ಮನಸ್ಸಿನಲ್ಲಿ ಕೊಳೆ ತುಂಬಿರುವಾಗ ಅವರ ಭಾವ ಸದ್ಭಾವ ಆಗಲಾರದು.. ಅಂಥವರು ಭಾವ ಪುಷ್ಪಗಳಿಂದ ಪೂಜಿಸಲಾರರು.. ದುರ್ಭಾವದ ಪೂಜೆಯನ್ನು ದೇವರು ಸ್ವೀಕರಿಸುವುದಿಲ್ಲ... ಆದ್ದರಿಂದ ಭಗವಂತ ಸುಮನಸರ ಒಡೆಯ. "ಸುಜನರೊಡೆಯ"...

"ಅರವಿಂದಲೋಚನನೆ, ಕೋಳಿ ಕೂಗಿತು ಕೇಳು ಪುರಂದರವಿಠಲನೇ ಬೆಳಗಾಯಿತು"...

ಅಂತರಂಗದಲ್ಲಿ ಭಗವಂತನ ರೂಪವನ್ನು ಭಾವ ಪುಷ್ಪಗಳಿಂದ ಅರ್ಚಿಸಿದ ದಾಸರು ಪಾದಾದಿಕೇಶಾಂತ ಭಗವಂತನ ದರ್ಶನದ ಬಯಕೆಯಿಂದ, ಮೆಲ್ಲನೆ ತಲೆಯೆತ್ತಿ ಕಣ್ಣೆತ್ತಿ ನೋಡುತ್ತಾರೆ...

ಭಕ್ತನ ಮೇಲಣ ಮಮತೆಯಿಂದ ಭಗವಂತ ಅರಳಿನಿಂತ ತನ್ನ ತಾವರೆಗಣ್ಣುಗಳಿಂದ ಭಕ್ತನ ಮೇಲೆ ಬೀರಿದ ಕೃಪಾದೃಷ್ಟಿ ದಾಸರಿಗೆ ಅಭಯರಕ್ಷೆಯಾಗಿ ಗೋಚರವಾಗುತ್ತದೆ... 
ಆಗ ದಾಸರು ನುಡಿದ ಸಾಲುಗಳಿವು...

ಭಗವಂತ ಅರವಿಂದಲೋಚನ. ಅಂದರೆ ತಾವರೆಗಣ್ಣಿನ ಸುಂದರ ಮೂರ್ತಿ... ಉಪನಿಷತ್ತು ಕೂಡ ಹೀಗೇ ಹೇಳಿತು - "ತಸ್ಯ ಯಥಾ ಕಪ್ಯಾಸಂ ಪುಂಡರೀಕಮೇವಮಕ್ಷಿಣೀ".... ಅಂದರೆ, ನೀರಿನಲ್ಲಿ ಬೇರುಬಿಟ್ಟ ಹಸಿ ತಾವರೆಯೆಸಳಿನಂತೆ ಅವನ ಕಣ್ಣುಗಳು ರಸಸ್ಯಂದಿಯಾಗಿ ಸುಂದರವಾಗಿವೆ...

"ಅರವಿಂದ ರಾತ್ರಿಯ ಹೊತ್ತು ಮೊಗ್ಗಾಗಿ ಮುಚ್ಚಿಕೊಂಡು ಸೂರ್ಯೋದಯವಾದಾಗ ಅರಳಿಕೊಳ್ಳುತ್ತದೆ... ಭಗವಂತನೂ ಅರವಿಂದಲೋಚನ ಎಂದ ಮೇಲೆ  ಭಕ್ತರ ಬಗೆಯೊಳಗೆ ಜ್ಞಾನಸೂರ್ಯನ ಉದಯವಾಗಲೇ ಬೇಕಲ್ಲವೆ... ಹೀಗೆ "ಅರವಿಂದಲೋಚನ" ಎನ್ನುವುದು ಭಗವಂತನ ದೃಷ್ಟಿಯಲ್ಲಿ ತುಂಬಿದ ಕೃಪಾರಸ ಪೂರವನ್ನೂ , ಅನುಗ್ರಹೋನ್ಮುಖತೆಯನ್ನೂ ಸೂಚಿಸುವ ಪದ....

ಮುಂದೆ, ವಾತ್ಸಲ್ಯದ ಮಾತುಗಳಿಂದ ಮುದ್ದು ಮಕ್ಕಳನ್ನು ಮಮತಾ ಮಯಿ ತಾಯಿ ತಟ್ಟಿ ಎಬ್ಬಿಸುವಂತೆ ದಾಸರೂ ತನ್ನ ಹೃದಯ ತೊಟ್ಟಿಲಲ್ಲಿ ಮಲಗಿದ ಅಪ್ರಾಕೃತ ಶಿಶು "ಪ್ರಾಜ್ಞರೂಪೀ" ಭಗವಂತನನ್ನು ಏಳುವಂತೆ ರಮಿಸುತ್ತಾರೆ  - "ಕೋಳಿ ಕೂಗಿತು ಕೇಳು"....

ಹೊರಗಿನ ಅರ್ಥ ಸ್ಪಷ್ಟ... ಬೆಳಗಾಯಿತು ಎಂದು ಕೋಳಿಗೂ ತಿಳಿದಿದೆ... ಮನುಷ್ಯನಿಗೆ ತಿಳಿಯೋದು ಬೇಡವೆ ?
ಒಳಗೆ ಬೆಳಕಾದಾಗ ಒಳಗೂ ಕೋಳಿ ಕೂಗುತ್ತದೆ. ಒಳಬಗೆಯಲ್ಲಿ , ಹೃದಯದಲ್ಲಿ ಭಗವಂತ ನೆಲೆಸಿದ್ದಾನೆ. ಪ್ರಾಜ್ಞ ರೂಪದಿಂದ ಜೀವನಿಗೆ ನಿದ್ರೆ ಬರಿಸಿ ಪವಡಿಸಿದ್ದಾನೆ... ಜ್ಞಾನೋದಯವಾದಾಗ ಬೆಳಕು ಹರಿಯ ತೊಡಗಿದೆ... ಭ್ರೂಮಧ್ಯದ ಆಜ್ಞಾಚಕ್ರದಲ್ಲಿ ಉಷೆಯ ಕೆಂಪು ಮೂಡಿದೆ. ಹೃದಯದ ಅನಾಹತ ಚಕ್ರದಲ್ಲಿ ಅನಾಹತಧ್ವನಿಯ ಕೋಳಿ ಕೂಗುತ್ತಿದೆ... ಅದೇ Non-vibrative Sound... ಮೂಲಾಧಾರದಿಂದ ಹೊರಟ

ಧ್ವನಿ 'ಪರಾ' ಆಗಿ, 'ಪಶ್ಯಂತಿ' ಆಗಿ , ಹೃದಯ ಮಧ್ಯದಲ್ಲಿ 'ಮಧ್ಯಮಾ' ಆಗಿ ನಿನದಿಸುವ ನಾದ... ಈ ಅನಾಹತದ ನಾದ ಪುರಂದರದಾಸರಿಗೆ ಕೇಳಿಸಿತು. ಈ ಅಂತರ್ನಾದದ ಅನುಭವದ ಸಂತೋಷವನ್ನು ಅವರು ಭಗವಂತನ ಮುಂದೆ ತೋಡಿಕೊಳ್ಳುತ್ತಾರೆ : "ಕೋಳಿ ಕೂಗಿತು ಕೇಳು"....

ಆದ್ದರಿಂದ ಇನ್ನು ಸಹಸ್ರಾರದಲ್ಲಿ ಸೂರ್ಯೋದಯಕ್ಕೆ ಹೆಚ್ಚು ಹೊತ್ತು ಕಾಯಬೇಕಾಗಿಲ್ಲ.... ಅದೂ ಆಗಿಯೇ ಬಿಟ್ಟಿತು :  

"ಪುರಂದರ ವಿಠಲನೆ ಬೆಳಗಾಯಿತು"...

ಪುರಂದರದಾಸರಿಗೊಲಿದ ವಿಠ್ಠಲನೆ ಪುರಂದರವಿಠಲ... 'ಪುರ' ಎಂದರೆ ದೇಹ ಕೂಡ ಹೌದು. ದೇಹ ಬಂಧನವನ್ನು ಕಳಚುವುದರಿಂದ ಪುರಂದರನಾದ ವಿಠ್ಠಲನೇ  "ಪುರಂದರ ವಿಠ್ಠಲ". ಗುರು ವ್ಯಾಸತೀರ್ಥರು ದಾಸರಿಗೆ ಕೊಟ್ಟ ಪವಿತ್ರ ಮುದ್ರಿಕೆ ಇದು...

"ವಿಠ್ಠಲ" ಭಗವಂತನ ಪ್ರತ್ಯೇಕ ರೂಪವಲ್ಲ , ಶ್ರೀನಿವಾಸನೂ ಒಂದು ಅವತಾರವಲ್ಲ... ಕೃಷ್ಣನೇ ವಿಠ್ಠಲ, ಕೃಷ್ಣನೇ ಶ್ರೀನಿವಾಸ. ಪಂಢರಪುರದ ಶ್ರೀನಿವಾಸನೇ ವಿಠ್ಠಲ.  ತಿರುಪತಿಯ ವಿಠ್ಠಲನೇ ಶ್ರೀನಿವಾಸ...

ಇದು ಕೃಷ್ಣಾವತಾರದ ರೂಪವೇ ಎಂದು ಸೂಚಿಸುವುದಕ್ಕಾಗಿಯೇ ಈ ಹಾಡಿನ ಮೊದಲನೆಯ ಸೊಲ್ಲಿನಲ್ಲಿ "ವಾಸುದೇವನೆ" ಎಂಬ ಸಂಬೋಧನೆ ಬಂದಿದೆ... ವಸುದೇವ ತನಯನಾದ ಶ್ರೀಕೃಷ್ಣನೇ ವೇಂಗಡದ ಶ್ರೀನಿವಾಸ ಎನ್ನುವುದು ಇಲ್ಲಿ ಸ್ಪಷ್ಟ... ಹಾಗೇ ಬಾಲಕೃಷ್ಣನ ಲೀಲೆಯನ್ನು ನೆನಪಿಸಲು ಬಂದ ಇನ್ನೊಂದು ಸಾಲು "ಲೇಸಾಗಿ ಕೆನೆಮೊಸರು ಬೆಣ್ಣೆಯನೆ ಮೆದ್ದು"...

ವಿಠ್ಠಲ ಎನ್ನುವುದು ಕೃಷ್ಣನಿಗೆ ಅನುಭಾವಿಗಳಿಟ್ಟ ಹೆಸರು... ಮಹಾರಾಷ್ಟ್ರದಲ್ಲಿ ಇವನು ಪ್ರೀತಿಯ "ವಿಟ್ಟೂ", "ವಿಠೋಬ" ಆದರೆ ಕನ್ನಡ ದಾಸರ ಕೈಯಲ್ಲಿ ವಿಠಲ ಆದ....
ಸಂಸ್ಕೃತ ಪಂಡಿತರ ಕೈಯಲ್ಲಿ "ವೇಂಗಡ" "ವೇಂಕಟ" ಆದಂತೆ, ವಿಠಲ "ವಿಠ್ಠಲ"ನಾದ...

ವಿದ್ ಅಂದರೆ "ಜ್ಞಾನ"... ಜ್ಞಾನದ ಸ್ಥಲವೆ, ಹೃದಯ ಮಂದಿರವೆ "ವಿತ್ ಸ್ಥಲ" - ವಿಠ್ಠಲ... ಹೃದಯ ಮಂದಿರದಲ್ಲಿ ನೆಲೆಸಿರುವ ಭಗವಂತನೆ ನಿಜವಾದ "ವಿಠ್ಠಲ"... ಇದು ಅನುಭಾವದ ನೆಲೆಯಲ್ಲಿ ಗೋಚರವಾಗುವ ಅರ್ಥ...

"ಅರವಿಂದಲೋಚನನೆ , ಕೋಳಿ ಕೂಗಿತು ಕೇಳು....." - ಇನ್ನೊಂದು ನೆಲೆಯಿಂದ ನೋಡಿದಾಗ ಹೃದಯರಂಗದಲ್ಲಿರುವ ವಿಠ್ಠಲನೆ ಪ್ರಾಜ್ಞ. ಲೋಚನದಲ್ಲಿರುವ ವಿಶ್ವನೆ ಅರವಿಂದಲೋಚನ... ದಾಸರಿಗೆ ಅಪರೋಕ್ಷಾನುಭೂತಿಯ ಕೊನೆಯ ಸೂರ್ಯೋದಯದ ಪ್ರಾರ್ಥನೆಯ ಜತೆಗೆ, ನಮ್ಮ ಬದುಕಿನ ಅಸ್ಥಿರತೆಯ ಎಚ್ಚರ - ಕಾಲ ಮೀರುವ ಮುನ್ನ ಭಗವಂತನ ದರ್ಶನದ ಬಗೆಗಿನ ಕಾತರವೂ ಈ ಕೊನೆಯ ಸಾಲುಗಳಲ್ಲಿ ತುಂಬಿದೆ..

ಕಾಲಪುರುಷನ ಕೋಳಿ ಕೂಗುತಿದೆ. ಆ ಕರೆಗೆ ಪ್ರತಿಯೊಬ್ಬ ಜೀವನೂ ಓಗೊಡಲೇಬೇಕು.. ಆದ್ದರಿಂದ ಓ "ಪುರಂದರವಿಠ್ಠಲನೇ" ನೀನು ಬೇಗನೇ ಎದ್ದು ಬರಬೇಕು. ಈ ದೇಹ ಬಿದ್ದು ಹೋಗುವ ಮುನ್ನ ನಿನ್ನ ಅರಿವಿನ ಬೆಳಕಾಗಬೇಕು.... ಆದ್ದರಿಂದಲೇ ಭಕ್ತನಿಗೆ ಸುಪ್ರಭಾತದ ಬಗೆಗೆ ಅಷ್ಟೊಂದು ಕಾತರ.. ಪುರಂದರದಾಸರಿಗೆ ಆ ಭಯವಿಲ್ಲ...  ಕೋಳಿ ಕೂಗುವ ಮುನ್ನ ಅವರಿಗೆ ಬೆಳಗಾಯಿತು.. ಆ ಸಂತಸದಲ್ಲೇ ಅವರು ಹಾಡಿದರು...

ಏಳಯ್ಯ ಬೆಳಗಾಯಿತು
ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಯೊಡೆಯ ವೇಂಕಟೇಶ...

ಹೀಗೆ ಅಧ್ಯಾತ್ಮದ ಅನೇಕ ಮಜಲುಗಳಲ್ಲಿ ತನ್ನನ್ನು ತೆರೆದುಕೊಳ್ಳುವ, ಹೃದಯವನ್ನು ಮುಟ್ಟುವ, ಆತ್ಮಸಾಕ್ಷಿಯನ್ನು ತಟ್ಟಿ ಎಬ್ಬಿಸುವ ಈ ಸುಪ್ರಭಾತದ ಹಾಡು ಪುರಂದರದಾಸರ
ಅನುಭಾವಗೀತೆಗಳ ಸಾಲಿನಲ್ಲಿ ಒಂದು ಅನರ್ಘ್ಯ ಮಾಣಿಕ್ಯ....ಅದಕೆಂದೇ ಗುರುಗಳಾದ ಶ್ರೀವ್ಯಾಸತೀರ್ಥರು ಪುರಂದರದಾಸರ ಹಾಡುಗಳನ್ನು "ಕನ್ನಡದ ಉಪನಿಷತ್ತುಗಳು" ಎಂದೇ ಕರೆದರು... ಅಂದರೆ, ಅನುಭಾವದ ಆಳ ಮಾತ್ರ ಪುರಂದರದಾಸರದ್ದು , ನುಡಿಸಿದ್ದು ಪುರಂದರ ವಿಠಲ... ದಾಸರು ಏನನ್ನು ಯೋಚಿಸಿ ಹಾಡಿದರೋ ಅದಷ್ಟೇ ಇದರ ಅರ್ಥವಾಗ ಬೇಕಾಗಿಯೂ ಇಲ್ಲ. ಯಾರ ಅನುಭಾವಕ್ಕೆ ಎಂಥ ಭಾವ ಸ್ಫುರಿಸಿತೋ ಅದೆಲ್ಲವೂ ಅದರದರೇ ಭಾವ.. ಅದರದೇ ಪ್ರಭಾವ..  ಅನುಭಾವದ ರೀತಿಯೇ ಹಾಗೆ. ಏಕೆಂದರೆ ಈ ಹಾಡೇ ಒಂದು ದೈವೀ ಸ್ಫುರಣೆ, ಆರ್ಷದರ್ಶನ. ಅದರಿಂದಲೇ ಉಪನಿಷತ್ತು...

🙏🌸🙏🌸🙏🌸🙏🌸🙏🌸🙏


[Contributed by Shri Harish BS]

Thursday, 18 February 2016

"ಪುರಂದರದಾಸರು" ಭಗವಂತನಿಗಾಗಿ ಹಾಡಿದ ಸುಪ್ರಭಾತ - ಭಾಗ - 4

ಕುಂಡಲಿನಿಯಲ್ಲಿ ಮಲಗಿದ್ದ ಶೇಷ ಶಕ್ತಿಯನ್ನು  ಭಗವಂತನ ಅನುಗ್ರದಿಂದ ಎತ್ತರಕ್ಕೇರಿಸಿದಾಗಸಹಸ್ರಾರ ಚಕ್ರದಲ್ಲಿ ಶೇಷ ತನ್ನ ಸಾವಿರ ಹೆಡೆ ಬಿಚ್ಚಿ ನಿಲ್ಲುತ್ತಾನೆ... ಅಲ್ಲಿ ಪವಡಿಸಿದ ಶೇಷಶಯನನಾದ ಶ್ರೀನಿವಾಸ ಏಳು ಕಡಲುಗಳನ್ನು ಕಡೆದು ನಮ್ಮ ಭಕ್ತಿರಸದ ಬೆಣ್ಣೆಯಲ್ಲಿ ಮೂಡಿಬರಬೇಕು.. ಅದಕೆಂದೆ ದಾಸರು ಹಾಡಿದರು "ಶೇಷಶಯನನೆ, ಏಳು ಸಮುದ್ರಮಥನವ ಮಾಡು"...

ಈ ಏಳು ನಾಡೀಚಕ್ರಗಳಿಗೂ, ಸೂರ್ಯನ ಏಳು ಕುದುರೆಗಳಿಗೂ, ಅಂದರೆ ಸೂರ್ಯಕಿರಣದ ಏಳು ವರ್ಣಗಳಿಗೂ, ಅಗ್ನಿಯ ಏಳು ಜಿಹ್ವೆ (ಜ್ವಾಲೆ)ಗಳಿಗೂ ಪರಸ್ಪರವಾದ ಅಧ್ಯಾತ್ಮ ಸಂಬಂಧವಿದೆ.

ಈ ಏಳು ನಾಡೀಚಕ್ರಗಳಲ್ಲಿ ನಾಭಿ ಮತ್ತು ಮೂಲಾಧಾರದ ನಡುವಿನ ಚಕ್ರವನ್ನು ಈ ಎರಡರಲ್ಲೇ ಏಕೀಭವಿಸಿ ಆರೇ ಚಕ್ರಗಳನ್ನು ಕೆಲವು ಕಡೆ ಉಲ್ಲೇಖಿಸಿದ್ದಾರೆ :

"ಮೂಲೇ ಚ ನಾಭೌ ಹೃದಯೇಂದ್ರಯೋನಿ -

ಭ್ರೂಮಧ್ಯ ಮೂರ್ಧದ್ವಿಷಡಂತಕೇಷು|" (ತಂತ್ರಸಾರ ಸಂಗ್ರಹ)

ಮೂಲಾಧಾರ, ನಾಭಿ, ಹೃದಯ, ಕಂಠ, ಹುಬ್ಬುಗಳ ನಡುವಿನ ಭಾಗ ಮತ್ತು ನೆತ್ತಿಯಿಂದ 12 ಅಂಗಲು ಎತ್ತರದ ಪ್ರಭಾವಲಯ ಇವು ಆರು ನಾಡೀಚಕ್ರಗಳ ಸ್ಥಾನಗಳು...

ಪುರಂದರದಾಸರೇ ಇನ್ನೊಂದು ಹಾಡಿನಲ್ಲಿ ನಾಡೀಚಕ್ರಗಳು ಆರು ಅಂತ ಹಾಡಿದ್ದಾರೆ :

"ಆಧಾರ ಮೊದಲಾದ ಆರು | ಚಕ್ರ
ಶೋಧಿಸಿ ಬಿಡಬೇಕು ಈಷಣ ಮೂರು
ಸಾಧಿಸಿ ಸುಷುಮ್ನಾ ಏರು | ಅಲ್ಲಿ
ಭೇದಿಸಿ ನೀ ಪರಬ್ರಹ್ಮನ ಸೇರು"

ಒಂದು ದೃಷ್ಟಿಯಿಂದ ಇವೆಲ್ಲ ನಮ್ಮ ದೇಹದೊಳಗೇ ನೆಲೆಸಿರುವ ಒಂದೇ ಕಡಲು, ಅದಕ್ಕೆ ಏಳು ಸ್ತರಗಳಲ್ಲಿ ಏಳು ಹೆಸರುಗಳು... ಅದಕೆಂದೆ ದಾಸರು ಏಕವಚನದಲ್ಲೆಂಬಂತೆಯೆ ನುಡಿದರು : "ಸಮುದ್ರ ಮಥನವ ಮಾಡು"..

ಮುಂದಿನ ಸಾಲು-

"ದೇಶ ಕೆಂಪಾಯಿತೇಳಯ್ಯ ಹರಿಯೇ"

ಈ ಮಥನಕ್ರಿಯೆಗೆ ಸಾಧಕಜೀವ ಪಕ್ವಗೊಂಡು ಅಣಿಯಾದ ಬಗೆ ಇದು...

ಭೌತಿಕ ಪ್ರಪಂಚದಲ್ಲೂ ಅರುಣೋದಯವಾದಾಗ ಇರುಳ ಕತ್ತಲೆ ಸರಿದು ಉಷೆಯ ಕೆಂಪು ದಿಗ್ದೇಶಗಳನೆಲ್ಲ ತುಂಬುವ ಕಾಲ.. ಹೊರಗಿನಂತೆಯೆ ಒಳಗೂ ಒಂದು ದೇಶ ಇದೆ. ಅದೇ ನಮಗೆ ಸಾಧನೆಯ ಆದೇಶ ದೊರೆಯುವ ಪ್ರದೇಶ... ಇನ್ನೇನು ಅಂತರ್ಯಾಮಿಯ ಬಿಂಬೋದಯವಾಗಬೇಕು, ಆಗ ಉಷೆಯ ಕೆಂಬೆಳಕು ಆಜ್ಞಾಚಕ್ರದಲ್ಲಿ ಕಾಣಿಸುತ್ತದೆ... ಇದೇ ಮೂರನೆಯ ಕಣ್ಣು.. ಅಗ್ನಿನೇತ್ರ ತೆರೆದುಕೊಂಡಾಗ ಆ ಕೆಂಪು ಕಾಣಿಸಿಕೊಳ್ಳುತ್ತದೆ, ಮೂರು ಕಾಲಗಳೂ ತೆರೆದುಕೊಳ್ಳುತ್ತವೆ. ಅಂಥ ಸಾಧಕನಿಗೆ ಭೂತ ಭವಿಷ್ಯತ್ತುಗಳು ವರ್ತಮಾನದಷ್ಟೇ ಸಹಜ ಮತ್ತು ಸ್ಫುಟ... ಮುಂದೆ ಸಹಸ್ರಾರದಲ್ಲಿ ಸಹಸ್ರ ಕಿರಣಗಳೊಡನೆ ಉದಿಸುವ ಆ ದಿವ್ಯ ಸೂರ್ಯನ ದರ್ಶನಕ್ಕಾಗಿ ಭಕ್ತ ಕಾತರನಾಗಿದ್ದಾನೆ...

ಅಲ್ಲಿ "ಹರಿಯೇ" ಅನ್ನುವ ಸಂಬೋಧನೆ ತುಂಬ ಮಹತ್ವದ್ದು. 'ಹರಿ' ಎಂದರೆ ಸಂಸ್ಕೃತದಲ್ಲಿ ಸೂರ್ಯನೂ ಹೌದು, ನಾರಾಯಣನೂ ಹೌದು.. ಹೊರಗಿನ ಕತ್ತಲನ್ನು ಹರಿಸುವುದರಿಂದ ಸೂರ್ಯ ಹರಿ, ಒಳಗಿನ ಕತ್ತಲನ್ನು ಹರಿಸುವುದರಿಂದ ನಾರಾಯಣ ಹರಿ...

ಅದಕೆಂದೇ ಅವನನ್ನು "ಸೂರ್ಯನಾರಾಯಣ" ಎಂದೇ ಕರೆಯುತ್ತಾರೆ..

"ದಿನಮಣಿರ್ಭಾಸ್ವಾನ್ ವಿವಸ್ವಾನ್ ಹರಿಃ" ... 
"ಹರಿಂ ಹೃಷೀಕೇಶಮುದಾಹರಂತಿ"...

"ಏಳು ಹರಿಯೆ" ಎಂದರೆ "ಗಾಯತ್ರಿ ಪ್ರತಿಪಾದ್ಯನಾದ ನನ್ನ ಒಳಬಗೆಯ ಸೂರ್ಯನೆ, ಉದಿಸಿ ಬಾ " ಎಂದೇ ಅರ್ಥ... ನನ್ನ ಅಜ್ಞಾನವನ್ನೆಲ್ಲ ತೊಳೆದು ಬೆಳಕಾಗಿ ಬಾ, ನನ್ನ ಸಂಚಿತ ಕರ್ಮಗಳನ್ನೆಲ್ಲ ಪರಿಹರಿಸುವ ಹರಿಯಾಗಿ ಬಾ, ಆದ್ದರಿಂದಲೆ ಶೇಷಶಯನನ್ನು "ಹರಿಯೆ" ಎಂದರು ದಾಸರು..

"ಕ್ಷೀಯಂತೇ ಚಾಸ್ಯ ಕರ್ಮಾಣಿ
ತಸ್ಮಿನ್ ದೃಷ್ಟೆ ಪರಾವರೇ |"

(ಆ ಪರತತ್ವವನ್ನು ಕಂಡಾಗ ಜ್ಞಾನಿಯ ಕರ್ಮಗಳೆಲ್ಲ ನಾಶವಾಗಿ ಹೋಗುವುವು)

"ಜ್ಞಾನಾಗ್ನಿಃ ಸರ್ವ ಕರ್ಮಾಣಿ
ಭಸ್ಮಸಾತ್ ಕುರುತೇ ತಥಾ |"

(ಜ್ಞಾನದ ಬೆಂಕಿ ಕರ್ಮದ ಕಟ್ಟಿಗೆಯ ರಾಶಿಯನ್ನು ಸಂಪೂರ್ಣವಾಗಿ ಸುಟ್ಟು ಬಿಡುತ್ತದೆ)

ಇವೆಲ್ಲ ಮಾತುಗಳು - ಹರಿಯ ದರ್ಶನವಾದ ಮೇಲೂ ಪಾಪ ಪರಿಹಾರವಾಗದಿರುವುದುಂಟೇ ? ಎಂಬುದನ್ನು ಪುಷ್ಟೀಕರಿಸುತ್ತವೆ...


(ಮುಂದುವರೆಯುವುದು.... )

Saturday, 13 February 2016

"ಪುರಂದರದಾಸರು" ಭಗವಂತನಿಗೆ ಹಾಡಿದ ಸುಪ್ರಭಾತ - ಭಾಗ 3

ನಮ್ಮ ದೇಹದಲ್ಲಿ ಈ ಏಳು ಚಕ್ರಗಳ ನೆಲೆಯನ್ನು ನೋಡೋಣ:

ಮೂಲಾಧಾರ: -    ಇದು ಮೊದಲ ನಾಡೀಚಕ್ರ,  ಇದು ನಮ್ಮ ದೇಹದ ಬೆನ್ನುಹುರಿಯ ಕೆಳಗಡೆ ಜನನೇಂದ್ರಿಯಕ್ಕೆ ತಾಗಿಕೊಂಡಿದೆ. ಇದೇ "ಕುಂಡಲಿನಿ". ಅಂದರೆ, ಕುಂಡಲ ಸುತ್ತಿ ಮಲಗಿರುವ ಹಾವು... ಇದು ಕೆಳಕ್ಕೆ ಮುಖಮಾಡಿ ಇರುವಷ್ಟು ಕಾಲ ಮನುಷ್ಯ ಪ್ರಾಪಂಚಿಕ ವೈಷಯಿಕ ಭೋಗಗಳಲ್ಲಿ ತೊಡಗಿರುತ್ತಾನೆ... ಒಮ್ಮೆ ಇದರ ಗತಿ ಊರ್ಧ್ವಮುಖವಾದರೆ ಅದು ತಲೆಯೆತ್ತಿ ಹೆಡೆಬಿಚ್ಚಿ ನಿಲ್ಲುತ್ತದೆ, ಆಗ ಮನುಷ್ಯ ಕೂಡ ವಿಷಯಾಸಕ್ತಿಯನ್ನು ಕಳೆದುಕೊಂಡು ಅಧ್ಯಾತ್ಮದತ್ತ ಒಲಿಯುತ್ತಾನೆ, ಸಾಧನೆಯ ಎತ್ತರಕ್ಕೆ ಏರುತ್ತಾನೆ... ಮನುಷ್ಯನ ಪ್ರವೃತ್ತಿಯನ್ನು ನಿಯಂತ್ರಿಸುವ ಮೂಲ ಕೇಂದ್ರವೇ ಈ "ಮೂಲಾಧಾರ ಚಕ್ರ"... ಇದೇ ಉಪ್ಪುನೀರಿನ ಸಮುದ್ರ... (Gonad)

ಸ್ವಾಧಿಷ್ಠಾನ :-   ನಾಭಿಯಿಂದ ಕೆಳಗಡೆ, ಕೆಳಹೊಟ್ಟೆಯ ಭಾಗದಲ್ಲಿರುವ ಚಕ್ರವೇ "ಸ್ವಾಧಿಷ್ಠಾನಚಕ್ರ"... ಈ ಎರಡನೆಯ ಕಡಲೆ "ಕಬ್ಬಿನ ರಸದ ಕಡಲು"  (Cells of Laydig)...

ಸಾಧಕ ಮೊದಲು ಮೂಲಾಧಾರವನ್ನು ಕಡೆದು ಜಾಗೃತಗೊಳಿಸಿ ಮೇಲೆ ಬಂದಾಗ, ಉಪ್ಪು ನೀರನ್ನು ಸ್ವಚ್ಛಗೊಳಿಸಿ, ಸಿಹಿನೀರಾಗಿ ಕಬ್ಬಿನ ರಸವಾಗಿಸುವುದೇ ಎರಡನೆಯ ಹಂತ....

ಮಣಿಪೂರ: - ಈ ನಾಡೀಚಕ್ರ ನಾಭಿಯ ಸ್ತರದಲ್ಲಿದೆ. ಇದೇ ಒಳಗಿನ ಮೂರನೆಯ ಕಡಲು, ಸುರಾರಸದ ಕಡಲು, ನಮ್ಮ ಕರ್ಮದ ಅಮಲೇರಿಸುವ, ಕರ್ಮಗ್ರಂಥಿಗಳನ್ನು ಜ‌ಾಗೃತಗೊಳಿಸುವ ಕೇಂದ್ರ... ಅದಕ್ಕೆಂದೇ ಇದು ಸುರಾಸಮುದ್ರ... ವೈದ್ಯ ವಿಜ್ಞಾನಿಗಳ ಭಾಷೆಯಲ್ಲಿ Adrenal Gland...

ಅನಾಹತ: - ನಮ್ಮ ಹೃದಯ ಕೋಶದಲ್ಲಿರುವ ನಾಡೀಚಕ್ರವೇ ಅನಾಹತ ಚಕ್ರ... ಇದೇ ನಾಲ್ಕನೆ ಕಡಲು. ತುಪ್ಪದ ಕಡಲು. ಇಲ್ಲಿದೆ ಭಕ್ತಿಯ ಬೆಣ್ಣೆ , ಸ್ನೇಹದ ತುಪ್ಪ.  ಈ ಅನಾಹತ ಚಕ್ರದಲ್ಲೆ
ಮಡುಗಟ್ಟಿದ ತುಪ್ಪ ಕರಗಿ ಹರಿಯಬೇಕು... ಅದನ್ನು ಭಗವಂತ ಸ್ವೀಕರಿಸಬೇಕು... ವೈದ್ಯಕೀಯ ಭಾಷೆಯಲ್ಲಿ ಇದೆ Thymus Gland.

ವಿಶುದ್ಧಿ :- ಇದು ಕಂಠ ಸ್ತರದಲ್ಲಿರುವ ಐದನೆಯ ಚಕ್ರ. ಇದನ್ನು ಇಂದ್ರಯೋನಿ ಅಂತಲೂ ಕರೆಯುತ್ತಾರೆ. ಇದೇ ತುಪ್ಪಕ್ಕೂ ಮೊದಲಿರುವ ಮೊಸರಿನ ಕಡಲು. ಅನಾಹತ ಚಕ್ರದ ಮೇಲೆ ಇರುವ ವಿಶುದ್ಧಿ ಚಕ್ರ... ಇದೇ Thyroid & Para thyroid..

ಆಜ್ಞಾಚಕ್ರ:  ಇದು ನಮ್ಮ ಭ್ರೂಮಧ್ಯದಲ್ಲಿರುವ ಆರನೇ ಕಡಲು. ಮೊಸರಿನ ಮೂಲಕ್ಕೆ ಹೋದಾಗ ಇರುವುದು ಹಾಲು. ಈ ಹಾಲಿನ ಕಡಲಿನಲ್ಲೆ , ಅಂದರೆ ಭ್ರೂಮಧ್ಯದಲ್ಲೆ ಕ್ಷೀರಸಾಗರದಲ್ಲಿ ನೆಲೆಸಿರುವ ಭಗವಂತನ ಬೆಳಕಿನ ಸಾಕ್ಷಾತ್ಕಾರ.. ಇದೇ ಆಜ್ಞಾಚಕ್ರದಲ್ಲಿ. ಇದೇ ಮೂರನೆಯ ಕಣ್ಣು.  ಒಳಗಣ್ಣು. ಈ ಚಕ್ರದ ಜಾಗೃತಿಯಿಂದ ಭೂತ ಭವಿಷ್ಯತ್ತುಗಳ ಪೂರ್ಣ ಅರಿವು. ಸಾಧನೆಯಲ್ಲಿ ನಾವು ಮುಂದೆ ಸಾಗಬೇಕಾದ ದಾರಿ ಯಾವುದು ಎಂಬ ಆಜ್ಞೆ ದೊರಕುವುದು ಈ ಕೇಂದ್ರದಲ್ಲಿ... ಅದಕೆಂದೆ ಇದು ಆಜ್ಞಾಚಕ್ರ.... ಇದೇ ಭೌತಿಕ ಕೇಂದ್ರವಾದ Pineal Gland... ಇಂದು ಪಾಶ್ಚಾತ್ಯ ವೈದ್ಯ ವಿಜ್ಞಾನ ಕೂಡ ಪೈನೀಯಲ್ ಗ್ರಂಥಿಯ ಚಟುವಟಿಕೆ ಅಥವಾ ಉದ್ದೇಶದ ಬಗೆಗೆ ಗುರುತಿಸಲು ಯಶಸ್ವಿಯಾಗಿಲ್ಲ..

ಸಹಸ್ರ‌ಾರ: - ಇದೇ ಏಳನೆಯ ಕಡಲು. ನೆತ್ತಿಯ ಮೇಲೆ ಸಹಸ್ರಾರ ಚಕ್ರವಿದೆ... ಇದೇ ತಿಳಿನೀರಿನ ಕಡಲು. ಭಗವಂತನನ್ನು ತಿಳಿದು ಬಾಳೆಲ್ಲ , ಬಗೆಯೆಲ್ಲ ತಿಳಿಯಾದ ಸ್ಥಿತಿ ಇದು.. ಇದೇ ಭೌತಿಕ ಕೇಂದ್ರದಲ್ಲಿ Pituitary Gland.

ಸ್ವಾರಸ್ಯವೆಂದರೆ ತಿರುಪತಿಯ ಬೆಟ್ಟಗಳೂ ಏಳು.  ಆರು ಬೆಟ್ಟಗಳನ್ನು ದಾಟಿ ಏಳನೇ ಬೆಟ್ಟವನ್ನೇರಿದಾಗಲೇ ಶ್ರೀನಿವಾಸನ ದರ್ಶನ.. ಹಾಗೆ ನಮ್ಮ ಸಾಧನೆಯಲ್ಲಿ ಕೂಡ ಒಳಬಗೆಯಿಂದ ಸಾಧಕ ಏರಬೇಕಾದ ಏಳು ಮೆಟ್ಟಿಲುಗಳು... ಕೊನೆಯ ಮೆಟ್ಟಿಲನ್ನೇರಿದ ಮೇಲೆ ಮತ್ತೆ ಕೆಳಗಿಳಿಯುವ ಭಯವಿಲ್ಲ... ಎಲ್ಲ ಏರು ಮೆಟ್ಟಿಲುಗಳೆ ಹೊರತು ಇಳಿಮೆಟ್ಟಿಲುಗಳಿಲ್ಲ...

ಮುಂದುವರೆಯುವುದು...
(Contributed by Shri B S Harish)

Tuesday, 9 February 2016

"ಪುರಂದರದಾಸರು" ಭಗವಂತನಿಗೆ ಹಾಡಿದ ಸುಪ್ರಭಾತ - ಭಾಗ 2

"ಕಾಸಿದ್ದ ಹಾಲುಗಳ ಕಾವಡಿಯೊಳ್ಹೆಪ್ಪಿಟ್ಟು  ಲೇಸಾಗಿ ಕೆನೆ-ಮೊಸರು ಬೆಣ್ಣೆಯನೆ ಮೆದ್ದು "...
ಈ ಬಾಹ್ಯ ಅರ್ಥದಲ್ಲಷ್ಟೇ ದಾಸರು ನಿಲ್ಲುವವರಲ್ಲ , ಅವರ ಆಸಕ್ತಿ ಕೇಂದ್ರೀಕೃತವಾಗಿರುವುದು ಇದರ ಅಧ್ಯಾತ್ಮದ ಮುಖದಲ್ಲಿ.... ಇದು ಭಗವಂತನನ್ನು ಕುರಿತು ಅವರು ಆಡಿದ ಮಾತು - "ಓ ಶ್ರೀನಿವಾಸನೆ, ನಾನು ಅನುಭವದ ಹಾಲಿನಿಂದ ತುಂಬಿರದ ಖಾಲಿ ಕಾವಡಿಯನ್ನು ಹೊತ್ತು ತಂದಿದ್ದೇನೆ... ಅದರಲ್ಲಿ ಪಕ್ವಾನುಭವದ ಬಿಸಿ ಹಾಲನ್ನು ತುಂಬು. ತುಂಬಿಟ್ಟು ಹೆಪ್ಪುಹಾಕಿ ಕೆನೆ ಮೊಸರು ಮಾಡು. ಮತ್ತೆ ಆ ಕೆನೆಮೊಸರನ್ನು ಕಡೆದು ಬೆಣ್ಣೆ ತೆಗೆ. ತೆಗೆದ ಆ ಬೆಣ್ಣೆಯನ್ನು ನೀನೇ ಮೆದ್ದು ಎದ್ದೇಳು".ಇದು ಇಲ್ಲಿಯ ಒಟ್ಟು ಭಾವ..

ಆದರೆ, ಹಾಲನ್ನು ಸಂಗ್ರಹಿಸಿ ತುಂಬಿಡುವುದು, ಹೆಪ್ಪುಹಾಕಿ ಕೆನೆಮೊಸರು ಮಾಡುವುದು, ಮೊಸರು ಕಡೆದು ಬೆಣ್ಣೆ ತೆಗೆಯುವುದು... ಈ ಎಲ್ಲ ಕ್ರಿಯೆ ನಮ್ಮೊಳಗೆ ನಿರಂತರ ನಡೆಯಬೇಕಾದದ್ದು ನಿಜ, ಆದರೆ ನಾವಾಗಿಯೇ ಇದನ್ನೆಲ್ಲ ಮಾಡಲಾರೆವು... ನಮಗೆ ಆ ಶಕ್ತಿಯೂ ಇಲ್ಲ.... ಋಗ್ವೇದದ ಒಂದು ಮಂತ್ರ ಹೇಳಿತು - "ನ ಋತೇ ತ್ವತ್ ಕ್ರಿಯತೇ ಕಿಂಚನಾsರೇ"... (ದೂರದ ಕೆಲಸಗಳನ್ನಾಗಲಿ, ನನ್ನ ಬಳಿಯ - ನನ್ನದೇ ಆದ ಅಂತರಂಗದ ಕೆಲಸಗಳನ್ನಾಗಲಿ ನೀನಿಲ್ಲದೆ ನಾನಾಗಿಯೇ ಮಾಡಲಾರೆ)...

ಒಂದು ಉಪನಿಷತ್ ಮಂತ್ರ ಹೀಗಿದೆ :

ಘೃತಮಿವ ಪಯಸಿ ನಿಗೂಢಂ
ಭೂತೇ ಭೂತೇ ಚ ವಸತಿ ವಿಜ್ಞಾನಮ್ |
ಸತತಂ ಮಂಥಯಿತವ್ಯಂ
ಮನಸಾ ಮಂಥನಾಭೂತೇನ ||
(ಬ್ರಹ್ಮ ಬಿಂದೂಪನಿಷತ್)

ಪ್ರತಿಯೊಬ್ಬ ಸಾಧಕ ಜೀವನಲ್ಲಿಯೂ ವಿಜ್ಞಾನದ ಸೆಲೆ ಹುದುಗಿದೆ, ಹೇಗೆಂದರೆ -ಹಾಲಿನಲ್ಲಿ ಬೆಣ್ಣೆ ಹುದುಗಿರುವಂತೆ... ಮನಸ್ಸೆಂಬ ಕಡೆಗೋಲಿನಿಂದ ನಿರಂತರ ಕಡೆದು ಆ ಬೆಣ್ಣೆಯನ್ನು ಹೊರತೆಗೆಯಬೇಕು.... ಇದಕ್ಕೆ ಭಗವಂತನ ಅನುಗ್ರಹ ಬೇಕು, ಅವನೇ ಮಾಡಿಸಬೇಕು...
ಇದು ವೇದಕಾಲದ ಋಷಿಗಳು ತೋಡಿಕೊಂಡ ಅಳಲು... ಇದು ದಾಸರ ಅಳಲಾಗಿ ಕೂಡ ಈ ಹಾಡಿನಲ್ಲಿ ಮೂಡಿಬಂದಿದೆ... ಅದಕ್ಕಾಗಿಯೇ ಅವರ ಪ್ರಾರ್ಥನೆ ಭಗವಂತನಲ್ಲಿ :-

"ಈ ಕಾವಡಿಗೆ ಜೀವನಾನುಭವದ ಹಾಲನ್ನು ತುಂಬು ಓ ಭಗವಂತನೆ !
ನಾನೇ ಮಾಡಿದೆ ಎಂಬ ಅಹಂಕಾರದ ಹುಳಿಮದ್ಯ ತುಂಬಬೇಡ...
ತುಂಬಿದ ಹಾಲೂ ಹುಳಿತು ಕೆಡದಂತೆ ನೀನೇ ಹೆಪ್ಪುಹಾಕು...
ನೀನೇ ತೆಗೆದ ಆ ಬೆಣ್ಣೆ ನಿನಗೇ ಮೀಸಲು...
ನನ್ನ ಒಳಬಗೆಯ ಭಕ್ತಿ-ಜ್ಞಾನಗಳ ಬೆಣ್ಣೆಯನ್ನು ಲೇಸಾಗಿ ಮೆದ್ದು ಏಳು...
ಈ ಮೆಲ್ಲುವಿಕೆ ಕೂಡ ಒತ್ತಡಕ್ಕಾಗಿ ಅಲ್ಲ, ಅನಾಸಕ್ತಿಯಿಂದ ಕೂಡ ಅಲ್ಲ, ಲೇಸಾಗಿ....
ಚೆನ್ನಾಗಿ, ಹೊಟ್ಟೆತುಂಬ ಪ್ರೀತಿಯಿಂದ ಮೆಲ್ಲಬೇಕು ನೀನು ಓ ಶ್ರೀನಿವಾಸನೆ!"...

ಹೀಗೆ ಭಗವಂತನಲ್ಲಿ ಭಕ್ತನ ಕಳಕಳಿಯ ಪ್ರಾರ್ಥನೆಯಿದು... ಈ ಭಕ್ತಿಯ ಬೆಣ್ಣೆಯನ್ನು ಭಗವಂತ ಪ್ರೀತಿಯಿಂದ ಸ್ವೀಕರಿಸಿ ತೃಪ್ತನಾಗದೆ ಇದ್ದರೆ, ಸಾಧಕನ ಗತಿಯೇನು ?... ಭಕ್ತ ಭಗವಂತನನ್ನು ಪ್ರೀತಿಸಿದರೆ ಮಾತ್ರ ಸಾಲದು, ಭಗವಂತನೂ ಭಕ್ತನನ್ನು ಪ್ರೀತಿಸಬೇಕು. ಇಲ್ಲವಾದರೆ - "ನೀನೊಲಿಯದಿದ್ದರೆ ನಾನೊಲಿದು ಫಲವೇನು ?"

ಆದರೆ ಕಠೋಪನಿಷತ್ ಹೇಳಿತು : -"ಯಮೇವೈಷ ವೃಣುತೇ ತೇನ ಲಭ್ಯಃ |"

ಅಂದರೆ, ಯಾರ ಬಗೆಗೆ ಭಗವಂತ ಪ್ರೀತಿಯಿಂದ ಒಲಿಯುತ್ತಾನೊ ಅಂಥವರಿಗೆ ಮಾತ್ರ ಅವನು ಲಭ್ಯವಾಗುತ್ತಾನೆ....
ಆದ್ದರಿಂದ ದಾಸರು ಹೇಳುತ್ತಾರೆ "ನನ್ನಲ್ಲಿ ದೇವರನ್ನು ಒಲಿಸಿಯೇ ಬಿಡುವ  ಛಲವಿಲ್ಲ , ಅವನೊಲಿಯಬೇಕೆಂಬ ಹಂಬಲ ಮಾತ್ರ. ಒಲಿಯುವುದು, ಒಲಿದು ಉದ್ಧರಿಸುವುದು ಭಗವಂತನ ಇಚ್ಛೆಗೆ ಬಿಟ್ಟದ್ದು"...

ಈ ಸ್ಥಿತಿಯಲ್ಲು ಪುರಂದರದಾಸರಿಂದ ಬಂದ ಉದ್ಗಾರವೇ :-
 "ಶೇಷಶಯನನೆ ಏಳು, ಸಮುದ್ರ ಮಥನವ ಮಾಡು"....
ಇದು ಇಡಿಯ ಪದ್ಯದ ಅಂತರಂಗದ ಕೀಲಿಕೈ.... ಇಡಿಯ ಸುಪ್ರಭಾತದ ಮರ್ಮಸ್ಥಾನ... ಇದು ಅಧ್ಯಾತ್ಮದ ಆಳಕ್ಕೆ ನಮ್ಮನ್ನು ಕೊಂಡೊಯ್ಯಬಲ್ಲ ಮಾತಿನ ಕೊಂಡಿ... ಹಿಂದಿನ ಸಾಲುಗಳಲ್ಲಿ ಮೊಸರು ಕಡೆದು ಬೆಣ್ಣೆ ತೆಗೆವ ಮಾತು ಬಂದಿದೆ. ಅದೇ ಇಲ್ಲಿ ಸಮುದ್ರಮಥನವಾಯಿತು...
"ಜೀವನಾನುಭವದ ಹಾಲು ತುಂಬಿದ ಈ ಹೃದಯವೇ ಕ್ಷೀರ ಸಮುದ್ರ... ಕ್ಷೀರಸಮುದ್ರಶಾಯಿಯಾಗಿ ಪಾಲಕಡಲಲ್ಲಿ ಪವಡಿಸಿದವನೇ ಆ ಶ್ರೀಹರಿ, ಅವನೇ ಶ್ರೀನಿವಾಸ... ಮೂಲಾಧಾರದಿಂದ ಸಹಸ್ರಾರದ ತನಕ ಹಬ್ಬಿರುವ ಸುಷುಮ್ನಾ ನಾಡಿಯೇ ಸಾವಿರ ಹೆಡೆಯ ಶೇಷ. ಅಲ್ಲಿ ನೆಲೆಸಿದವನೇ ಶೇಷಶಯನ... ಅವನೇ "ನಾರಾಯಣ"...

ಈ ಹೃದಯ ಸಮುದ್ರದ ಮಥನ ನಿತ್ಯ ನಿರಂತರ ನಡೆಯಬೇಕು, ವಿಷವೆಲ್ಲ ತೊಲಗಿ ಅಮೃತ ಮೂಡಿಬರುವ ತನಕ ನಡೆಯುತ್ತಿರಬೇಕು... ಅದು ಈ ಶೇಷಶಯನನಿಂದಲೆ ನಡೆಯಬೇಕು. ಇದು ಭಕ್ತನ ಅನುದಿನದ ಬಯಕೆ. ಅದಕ್ಕೆಂದೇ ದಿನಬೆಳಗಾದರೆ ದಾಸರ ಪ್ರಾರ್ಥನೆ "ಸಮುದ್ರಮಥನವ ಮಾಡು"

ಈ ಅಧ್ಯಾತ್ಮದ ಅರ್ಥ ಅಗೆದಷ್ಟೂ ಆಳ. ನಮ್ಮ ದೇಹದೊಳಗೇ ಏಳು ಸಮುದ್ರಗಳಿವೆ... ಅದರಲ್ಲಿ ಭಗವಂತ ಶೇಷಶಾಯಿಯಾಗಿದ್ದಾನೆ... ಒಂದೊಂದು ಸಮುದ್ರವೂ ಮಥನವಾಗಬೇಕು, ಅದಕ್ಕಾಗೇ ದಾಸರು ಹಾಡುತ್ತಾರೆ :

"ಶೇಷಶಯನನೆ, ಏಳು ಸಮುದ್ರ(ಗಳ)ಮಥನವ ಮಾಡು"...

ನಮ್ಮೊಳಗಿರುವ ಅಧ್ಯಾತ್ಮದ ಅಭಿವ್ಯಕ್ತಿ ಕೇಂದ್ರಗಳಾದ ಏಳು ನಾಡೀಚಕ್ರಗಳೇ ಅಧ್ಯಾತ್ಮದ ಕಡಲುಗಳು... ಆ ಏಳು ನಾಡೀ ಚಕ್ರದ ಕೇಂದ್ರಗಳಲ್ಲಿ ನಾವು ಭಗವಂತನ ದರ್ಶನದ ದಿವ್ಯಾನುಭೂತಿ ಪಡೆಯಬೇಕು...

ಯೋಗಶಾಸ್ತ್ರದ ಪ್ರಕಾರ ನಮ್ಮ ದೇಹದಲ್ಲಿ ಈ ಜಾಗೃತಿ ಕೇಂದ್ರಗಳು ಏಳು ಇವೆ.... ನಮ್ಮ ದೇಹದಲ್ಲಿ ವೈದ್ಯವಿಜ್ಞಾನಿಗಳು ಗುರುತಿಸಿರುವ ಏಳು ನಿರ್ನಾಳ ಗ್ರಂಥಿಗಳು, ಈ ನಾಡೀ ಚಕ್ರಗಳನ್ನು ಪ್ರತಿನಿಧಿಸುವ ಭೌತಿಕ ಕೇಂದ್ರಗಳು... ಅವುಗಳ ಕ್ರಮ ಹೀಗಿದೆ :

ಮೂಲಾಧಾರ = Gonad
ಸ್ವಾಧಿಷ್ಠಾನ = Cells of Leydig
ಮಣಿಪೂರ = Adrenals
ಅನಾಹತ = Thymus
ವಿಶುದ್ಧಿ = Thyroid & Para Thyroid
ಆಜ್ಞಾ = Pineal
ಸಹಸ್ರಾರ = Pituitary

ಇವೇ ಆ ಏಳು ಕಡಲುಗಳು. ಇವುಗಳ ಮಥನದಿಂದ, ಇಲ್ಲಿ ಭಗವಂತನ ಅಭಿವ್ಯಕ್ತಿಯಾಗಬೇಕು....
(Contributed by Shri B S Harish)

Monday, 8 February 2016

"ಪುರಂದರದಾಸರು" ಭಗವಂತನಿಗೆ ಹಾಡಿದ ಸುಪ್ರಭಾತ - ಭಾಗ 1

(ಸಂಗ್ರಹ: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ "ಪುರಂದರೋಪನಿಷತ್" ಪುಸ್ತಕದಿಂದ)

 ***************************

ಏಳಯ್ಯ ಬೆಳಗಾಯಿತು ||ಪಲ್ಲವಿ||
ಏಳು ನಾರಾಯಣನೆ 
ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಯೊಡೆಯ 
ವೇಂಕಟೇಶ ||ಅನುಪಲ್ಲವಿ||

ದಾಸರೆಲ್ಲರು ಬಂದು ಧೂಳಿ 
ದರುಶನಗೊಂಡು ಲೇಸಾಗಿ 
ತಾಳ - ದಂಡಿಗೆಯ ಪಿಡಿದು |
ಕೇಶವನೆ, ನಿಮ್ಮ ಸಿರಿನಾಮವನೆ
ಸ್ಮರಿಸುತಲಿ ವಾಸುದೇವನೆ, ಉದಯದಲಿ ಪಾಡುತಿಹರು ||1||

ಕಾಸಿದ್ದ ಹಾಲುಗಳ 
ಕಾವಡಿಯೊಳ್ಹೆಪ್ಪಿಟ್ಟು
ಲೇಸಾಗಿ ಕೆನೆ-ಮೊಸರು 
ಬೆಣ್ಣೆಯನೆ ಮೆದ್ದು |
ಶೇಷಶಯನನೆ, ಏಳು ಸಮುದ್ರ 
ಮಥನವ ಮಾಡು ದೇಶ ಕೆಂಪಾಯಿತೇಳಯ್ಯ ಹರಿಯೆ ||2||

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ ಸುರರು ತಂದಿಹರಯ್ಯ 
ಸುಜನರೊಡೆಯ |
ಅರವಿಂದಲೋಚನನೆ, ಕೋಳಿ 
ಕೂಗಿತು ಕೇಳು ಪುರಂದರ 
ವಿಠಲನೇ ಬೆಳಗಾಯಿತು ||3||
*********

ಈ ಹಾಡನ್ನು ಕೇಳಿದೊಡನೆಯೇ ನಮಗನ್ನಿಸುವುದು, ಇದೇನು ದೇವರಿಗೂ ನಮ್ಮ ಹಾಗೆ ಹಗಲು-ರಾತ್ರಿ, ಎಚ್ಚರ-ನಿದ್ರೆಗಳುಂಟೆ ? ಕತ್ತಲಿನ ಸ್ಪರ್ಶವೇ ಇಲ್ಲದವನಿಗೆ ರಾತ್ರಿ ಉಂಟೆ ? ಎಂದೂ ಮಲಗದವನಿಗೆ ಬೆಳಗಾಯಿತು ಏಳು ಅನ್ನುವುದುಂಟೆ ?...

ಆದರೂ ನಾವು ನಿತ್ಯ ಬೆಳಗಾತ ಎದ್ದು ಭಗವಂತನಿಗೆ ಸುಪ್ರಭಾತ ಹೇಳುತ್ತೇವೆ.. ಪ್ರತಿದಿನವೂ ರಾತ್ರಿ ಭಗವಂತನಿಗೆ ಜೋಗುಳ ಹಾಡಿ ಮಲಗಿಸುತ್ತೇವೆ...
ಇದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ...

ಪ್ರತಿದಿನ ಎಚ್ಚರವಾದ ಕೂಡಲೇ ಹೇಳುತ್ತೇವಲ್ಲ :

ಉತ್ತಿಷ್ಠೋತ್ತಿಷ್ಠ ಗೋವಿಂದ 
ಉತ್ತಿಷ್ಠ ಗರುಡ ಧ್ವಜ | 
ಉತ್ತಿಷ್ಠ ಕಮಲಾಕಾಂತ 
ತ್ರೈಲೋಕ್ಯಂ ಮಂಗಂಲಂ ಕುರು ||

ಎದ್ದೇಳು ಎದ್ದೇಳು ಓವೋ ಗೋವಿಂದನೇ, ನಿದ್ದೆಯಿಂದೆದ್ದೇಳು ಗರುಡಗಮನ,  ನಿದ್ದೆ ಸಾಕಿನ್ನೇಳು ಓವೋ ರಮೆಯರಸ...  ಮೂರು ಲೋಕಗಳಲ್ಲು ಮಂಗಳವ ಹರಿಸು...

ಹೀಗೆ ಇವೆಲ್ಲ ಭಗವಂತನನ್ನು ಕೊಂಡಾಡುವ ಭಕ್ತರ ಹೃದಯದಲ್ಲಿ ತೇಲಿಬಂದ ಪ್ರೀತಿ-ವಾತ್ಸಲ್ಯದ ತರಂಗಗಳು...

ಭಗವಂತನ ಕುರಿತಾಗಿ ಕೆಲವರದು ವಾತ್ಸಲ್ಯದ ಭಕ್ತಿ - ದೇವಕೀ ಮತ್ತು ವಸುದೇವರಂತೆ. ಮತ್ತೆ ಕೆಲವರದು ಶೃಂಗಾರದ ಭಕ್ತಿ - ಗೋಪಿಕಾ ಸ್ತ್ರೀಯರಂತೆ. ಹೀಗೆ ವಿವಿಧ ಭಕ್ತರ ವಿವಿಧ ಭಾವನೆಗಳಿಗೆ ನೆಲೆ ಭಗವಂತನೊಬ್ಬನೆ
-ಅವನೆ ತಂದೆ, ಅವನೆ ತಾಯಿ, ಅವನೆ ಗಂಡ, ಅವನೆ ಮಗು...
"ತ್ವಮೇವ ಮಾತಾಚ ಪಿತಾ ತ್ವಮೇವ,
ತ್ವಮೇವ ಬಂಧುಶ್ಚ ಸಖಾ ತ್ವಮೇವ.... "

ಎಲ್ಲ ಭಕ್ತರ ಹೃದಯದ ತೊಟ್ಟಿಲಲ್ಲಿ ಭಗವಂತ ಸದಾ ಇದ್ದಾನೆ. ಆದ್ದರಿಂದಲೇ ಬೆಳಗಾತ ಸುಪ್ರಭಾತ ಹಾಡಿ ಎಚ್ಚರಿಸುತ್ತೇವೆ.... ರಾತ್ರಿಯಲ್ಲಿ ಜೋಗುಳ ಪಾಡಿ ಮಲಗಿಸುತ್ತೇವೆ... ಇದು ಅವನಿಗಲ್ಲದಿದ್ದರೂ ನಮಗೆ ಒಳಬಗೆಯಲ್ಲಿ ಅವನ ಬಗೆಗೆ ಇರಬೇಕಾದ ಎಚ್ಚರ. ಭಗವಂತನ ಬಗೆಗೆ ನಾವು ಸದಾ ಎಚ್ಚರಾಗಿರಬೇಕು ಅನ್ನುವ ಎಚ್ಚರ....ಹಾಗಾದಾಗ ಮಾತ್ರ ನಮ್ಮ ಒಳಗೂ ಎಂದೂ ಇರುಳಿಲ್ಲದ ಬೆಳಕೋ ಬೆಳಕು.. ಅದೇ ಬೆಳಗೂ ಹೌದು...

ಶ್ರೀಪುರಂದರದಾಸರಂತ ಅನೇಕ ಅನುಭಾವಿಗಳು ಈ ವ್ಯವಹಾರದ ನುಡಿಗಟ್ಟುಗಳಿಂದಲೇ ಭಗವಂತನ ಜೊತೆ ಸಂಭಾಷಣೆ ನಡೆಸುತ್ತಾರೆ... ಅನೇಕ ದಾಸರು ಹೇಳಿದ ನುಡಿಗಳು - "ಓ ಭಗವಂತ ಈ ಭಕ್ತನನ್ನು ಮರೆಯಬೇಡ"...

 "ಓ ಭಗವಂತನೇ ನನ್ನತ್ತ ಕಣ್ತೆರೆದು ನೋಡು"....
"ಓ ಜ್ಞಾನ ಸ್ವರೂಪಿಯಾದ ಭಗವಂತನೆ, ನಿನಗೆ ನನ್ನ ನೆನಪಿರಲಿ (ಓಂ ಕ್ರತೋ ಸ್ಮರ ಕೃತಂ ಸ್ಮರ-ಇದು ವೇದ ಕಾಲದ ಒಬ್ಬ ಋಷಿಯ ಉದ್ಗಾರ)...
ನಾವು ಮಾತ್ರ ನೆನೆದರೆ ಸಾಲದ,  ಅವನೂ ನಮ್ಮನ್ನು ನೆನೆಯಬೇಕು, ನಮ್ಮತ್ತ ಕಣ್ತೆರೆಯಬೇಕು...

ಇದು ಒಬ್ಬ ಸಾತ್ವಿಕ ಭಕ್ತನ ತುಡಿತ... ಇಂಥ ಭಾವುಕಮನದ ಲೌಕಿಕ ಅಭಿವ್ಯಕ್ತಿಯ ಅಲೌಕಿಕ ಒಳಧ್ವನಿಯನ್ನು  ಭಗವಂತ ಓದುತ್ತಾನೆ ಎಂಬುದನ್ನು ಅವನ ಅಂತರಂಗ ಭಕ್ತರೂ ಓದಬಲ್ಲರು...

ದಾರ್ಶನಿಕರಾದ ಪುರಂದರದಾಸರೂ ಇಂಥದೇ ಒಂದು ಅಂತರಂಗದ ಸುಪ್ರಭಾತವನ್ನು ತಿರುಪತಿಯ ಬೆಟ್ಟದ ಮೇಲೆ, ಒಂದು ಬೆಳಗಿನ ಜಾವದಲ್ಲಿ ಶ್ರೀನಿವಾಸನ ಮುಂದೆ ನಿಂತು ಹಾಡಿದರು ... ದಾಸರಿಗೆ ಒಳಗಣ್ಣು ತೆರೆದಿತ್ತು, ಅದರಿಂದ ಒಳಗೂ ಹೊರಗೂ ಬೆಳಗಾಗಿತ್ತು, ಆಗ ತಮ್ಮ ಅಂತರ್ಯಾಮಿ ಬಿಂಬಮೂರ್ತಿಯನ್ನು ಕರೆದು ಮಾತನಾಡಿಸಿದ ಪರಿಯೇ - "ಏಳು ಬೆಳಗಾಯಿತು ! ಏಳು ನಾರಾಯಣ ಏಳು ಲಕ್ಷ್ಮೀರಮಣ ! ಏಳು ಶ್ರೀಗಿರಿಯೊಡೆಯ ವೇಂಕಟೇಶ !....

ನಮ್ಮ ಈ ಪಾಂಚಭೌತಿಕ ದೇಹದ ಒಳಗಿನ ಪಂಚಕೋಶಗಳ ಕೋಟೆಯೊಳಗಿರುವ ಜೀವನ ಕೊನೆಯ ಕೋಟೆಯಾದ ಆನಂದಮಯ ಕೋಶದಲ್ಲಿರುವ ರೂಪ "ನಾರಾಯಣ".
ನರರ ಸಮುದಾಯವೇ ನಾರ. ಅವರ ಹೃದಯ ಸಮುದ್ರದಲ್ಲಿ ನೆಲೆಸಿದವನು "ನಾರಾಯಣ"...
ಲಕ್ಷ್ಮೀರಮಣ ಅಂದರೆ, ಪದ್ಮಾವತಿಯ ರೂಪದಿಂದ ಧರೆಗಿಳಿದು ಬಂದ ಲಕ್ಷ್ಮಿಯನ್ನು ವರಿಸಲೆಂದೇ ಇಳೆಗಿಳಿದು ಬಂದ "ಶ್ರೀನಿವಾಸ"...

ಶ್ರೀಗಿರಿ ಅಂದರೆ ತಿರುಮಲೆ. ತಿರುಮಲೆಯ ಒಡೆಯನಾಗಿ ಶ್ರೀನಿವಾಸನಾಗಿ ಬೆಟ್ಟದ ಮೇಲೆ ನಿಂತ ಕರುಣಾಳುವೇ ಆ ನಾರಾಯಣ... ಆ ಬೆಟ್ಟಕ್ಕಿರುವ ಇನ್ನೊಂದು ಹೆಸರು ವೇಂಕಟಗಿರಿ. ಅದಕ್ಕೆಂದೇ ಅಲ್ಲಿ ನಿಂತ ಶ್ರೀನಿವಾಸ ವೇಂಕಟೇಶನಾದ...

ಇದರ ಅಧ್ಯಾತ್ಮದ ಮುಖದಲ್ಲೂ ಭಗವಂತ ಶ್ರೀಗಿರಿಯೊಡೆಯ...
ಶ್ರೀ ಅಂದರೆ ಪಂಚೇಂದ್ರಿಯಗಳು-
 "ತಾ ಏತಾಃ ಶೀರ್ಷನ್ ಶ್ರಿಯಃ ಶ್ರಿತಾಶ್ಚಕ್ಷುಃ ಶ್ರೋತ್ರಂ ಮನೋ ವಾಕ್ ಪ್ರಾಣಃ"

ಭಗವಂತನ ಪ್ರತೀಕಗಳನ್ನು ಕಾಣುವ ಕಣ್ಣು ಒಂದು ಸಂಪತ್ತು....
ಭಗವಂತನ ಮಹಿಮೆಯನ್ನು ಕೇಳುವ ಕವಿಯೊಂದು ಸಂಪತ್ತು....
ಭಗವಂತನಿಗೆ ಅರ್ಪಿಸಿದ ಸುಗಂಧವನ್ನು ಮೂಸುವ ಮೂಗೊಂದು ಸಂಪತ್ತು...
ಭಗವಂತನ ಗುಣಗಾನ ಮಾಡುವ ಬಾಯೊಂದು ಸಂಪತ್ತು...
ಭಗವಂತನ ಮಹಿಮೆಯನ್ನೆ ನಿರಂತರ ಚಿಂತಿಸುವ ಮನಸ್ಸೂ ಒಂದು ಸಂಪತ್ತು...
ಈ ಐದು ಸಂಪತ್ತುಗಳು ನಮ್ಮ ದೇಹದಲ್ಲೇ ಶಿರೋಭಾಗದಲ್ಲಿವೆ. ಈ ಶ್ರೀಮಂತಿಕೆಯನ್ನು ಹೊತ್ತ ಗಿರಿ ಎಂದರೆ ನಮ್ಮ ದೇಹದ ತುದಿಯಭಾಗ ಶಿರಸ್ಸು , ಅಲ್ಲಿ ಸಹಸ್ರಾರ ಚಕ್ರ ಇದೆ. ಆ ಚಕ್ರದಲ್ಲಿ ಪವಡಿಸಿದ ನಾರಾಯಣನೆ "ಶ್ರೀಗಿರಿಯೊಡೆಯ"....

ಈ ಸಾತ್ವಿಕ ಇಂದ್ರಿಯಗಳ ಸಂಪತ್ತೇ ಲಕ್ಷ್ಮಿಯ ವಾಸಸ್ಥಾನ, ಆ ಸಂಪತ್ತಿನ ರಮಣನಾದ ನಾರಾಯಣ, ಅಜ್ಞಾನದ ನಿದ್ರೆಯಿಂದ ನಮ್ಮನ್ನು ಎಬ್ಬಿಸಿ , ಎಚ್ಚರಗೊಳಿಸಿ, ಎತ್ತರಕ್ಕೆ ಕೊಂಡು ಹೋದಾಗ ಮಾತ್ರ ಸಹಸ್ರಾರದ ಕೊನೆಯ ಚಕ್ರದಲ್ಲಿ ನಮಗೆ ಅವನ ದರ್ಶನ...

ಆದ್ದರಿಂದ ಭಗವಂತ ನಮ್ಮ ಬಳಿಗೆ ವೇಂಕಟೇಶನಾಗಿ ಬರಬೇಕು...  "ವ"ಕಾರವೆಂಬ ಜ್ಞಾನ ಶಕ್ತಿಯಾಗಿ, "ಇ"ಕಾರವೆಂಬ ಇಚ್ಛಾಶಕ್ತಿಯಾಗಿ, "ಕಟ"  ವೈದಿಕ ಧಾತುವಿನ ಅರ್ಥದಂತೆ "ಪ್ರಕಟ"ಗೊಳ್ಳಬೇಕು....

ನಮ್ಮಲ್ಲಿ ಜ್ಞಾನಶಕ್ತಿ , ಇಚ್ಛಾಶಕ್ತಿಗಳ ಪೂರವನ್ನೇ ಹರಿಸಿ , ನಮ್ಮೊಳಗೆ ಸುಪ್ತವಾದ ಶಕ್ತಿಯನ್ನು ಪ್ರಕಟಗೊಳಿಸಿ, ನಮ್ಮ ವಾಂಛಿತ ಇಷ್ಟಾರ್ಥಗಳನ್ನು ಈಡೇರಿಸುವ ಈಶನಾಗಿ, ವೇಂಕಟೇಶನಾಗಿ ನಮ್ಮಲಿಗೆ ಬರಬೇಕು. ಇದು ಕನ್ನಡದ ವೇಂಕಟೇಶ ಸಂಸ್ಕೃತದ ವೇಂಕಟೇಶನಾದ ಪರಿ....

ದಾಸರೆಲ್ಲರು ಬಂದು ಧೂಳಿ ದರ್ಶನಗೊಂಡು...
ಎಲ್ಲ ಜೀವರ ಅಂತರ್ಯಾಮಿಯಾದ ನಾರಾಯಣ ವಿಶ್ವಕ್ಕೆಲ್ಲ ಸ್ವಾಮಿ ಅಂತ ಅರಿತವರೆಲ್ಲ ಹರಿದಾಸರು...

"ಮಮ ಸ್ವಾಮೀ ಹರಿರ್ನಿತ್ಯಂ ಸ್ವತಂತ್ರಃ ಪೂರ್ಣ ಷಡ್ಗುಣಃ " ಅಥವಾ "ಮಮಸ್ವಾಮೀ ಹರಿರ್ನಿತ್ಯಂ ಸರ್ವಸ್ಯ ಪತಿರೇವಚ"...

ಹೀಗೆಲ್ಲ ಉಪಾಸನೆ ಮಾಡುವವರು ದಾಸರು... ಇಂಥಾ ಭಕ್ತರು, ದಾಸರು ಭಗವಂತನ ಬಳಿಗೆ ಬಂದಾಗ, ಭಕ್ತ-ಭಗವಂತರ ನಡುವೆ ಇರುವ ಕತ್ತಲೆಲ್ಲ ಅಳಿದು ಎಲ್ಲೆಲ್ಲೂ ಬೆಳಕು...  ತಿರಮಲೆಯ ಶ್ರೀನಿವಾಸನ ದರ್ಶನಕೆ ಇಂಥಾ ದಾಸರೆಲ್ಲ ಬಂದದ್ದಾಯಿತು... ಮುಂದೆ "ಧೂಳೀದರ್ಶನ"ವಾಗಬೇಕು... ಧೂಳೀದರ್ಶನ ಎನ್ನುವುದು ಒಂದು ಮಹತ್ವದ ಸಾಂಕೇತಿಕ ಪದ ... ಮೇಲು ನೋಟಕ್ಕೆ ಕ್ಷೇತ್ರಕ್ಕೆ ಬಂದವರು ಮೈಯ ಧೂಳು ಮಾಸುವ ಮುನ್ನ , ಮೈತೊಳೆಯುವ ಮುನ್ನ ಭಗವಂತನನ್ನು ಕಾಣುವ ಆತುರದ ದರ್ಶನ...  ವಿಶ್ವ ದರ್ಶನವನ್ನೇ ಕೊಡುವ ಪದ ಇದು.. ವೃಂದಾವನದ ಗೋಪಿಕೆಯರಂತೆ , ಆತುರದಿಂದ "ಭಗವಂತನನ್ನು ಎಂದು ಕಂಡೇನು" ಎಂಬ ಭಕ್ತನ ದರ್ಶನಕಾತುರತೆಯೇ "ಧೂಳೀದರ್ಶನ"

ಅಧ್ಯಾತ್ಮದ ಹಿನ್ನೆಲೆಯಿಂದ ನೋಡಿದಾಗ ಇದು ಒಂದು ರಹಸ್ಯೋಪಾಸನೆ.. ಭಕ್ತ ಮತ್ತು ಅವನ ಅಂತರ್ಯಾಮಿಯ ಒಳಗಿನ ಒಡನಾಟ ಇದು...

 "ಓ ಭಗವಂತನೆ ನಾನು ನಿನ್ನ ಚರಣದಾಸ... ನನಗೆ ಕಾಣುವುದೆಲ್ಲ ನಿನ್ನ ಚರಣಧೂಳಿ ಮಾತ್ರ..  ಆ ಪಾದಧೂಳಿ ನನ್ನ ತಲೆಯ ಮೇಲೆ ಯಾವಾಗ ಬಿದ್ದೀತೋ ಎಂದು ಕಾತುರದಿ ಕಾಯುತ್ತಿರುವ ಅಂತರಂಗದ ಬಯಕೆಯೇ ಈ ಧೂಳೀದರ್ಶನ"....

ಇದೇ ಅಲ್ಲವೇ ನಾವು ದೊಡ್ಡವರ , ಜ್ಞಾನಿಗಳ ಬಳಿ ಮಾತನಾಡುವಾಗ ಮುಖಕ್ಕೆ ಮುಖ ಕೊಟ್ಟು ಮಾತನಾಡದೆ, ಅವರ ಮುಂದೆ ತಲೆ ಬಗ್ಗಿಸಿ ನಿಂತು ತೋರುವ ಸೌಜನ್ಯದ ಲಕ್ಷಣ...  ಆಗ ನಮಗಾಗುವುದು ಅವರ ಪಾದರಜೋದರ್ಶನ...

ಆದರೆ ಭಗವಂತನ ಪಾದಧೂಳಿ ಅಂದರೇನು ? ಆ ಪಾದಕ್ಕಂಟಿದ ಧೂಳು ಯಾವುದು ? ಪುರಂದರದಾಸರು ಅನುಭಾವಿಗಳು ಆ ಅನುಭಾವದ ಅರ್ಥ ಮಹತ್ತದ್ದೇ ಆಗಿರಬೇಕಲ್ಲವೇ ?... ಇದನ್ನು ನಾವು ಅರಿಯಬೇಕಾದರೆ ವೇದಕಾಲದ ಋಷಿಗಳ ಉದ್ಗಾರವನ್ನು ಗಮನಿಸಬೇಕು :-

ಇದಂ ವಿಷ್ಣುರ್ವಿಚಕ್ರಮೇ
ತ್ರೇಧಾ ನಿದಧೇ ಪದಮ್ |
ಸಮೂಳ್ಢ್ಹ ಮಸ್ಯ ಪಾಂಸುರೇ ||

(ಇದು ಋಗ್ವೇದದಲ್ಲಿ ಬಂದ ಮಂತ್ರ.
ಶ್ರೀ ವಿಷ್ಣುವು ಮೂರು ಹೆಜ್ಜೆಗಳನ್ನಿಟ್ಟ ,
ಇಟ್ಟು ಇದನ್ನೆಲ್ಲ ವ್ಯಾಪಿಸಿದ, ಇಡಿಯ ಬ್ರಹ್ಮಾಂಡ ಅವನ ಪಾದಧೂಳಿಯಲ್ಲಿ ಅಡಗಿದೆ)...
ಹೀಗೆ ಮೂರು ಹೆಜ್ಜೆಗಳನ್ನಿಟ್ಟು ಮೂರು ಲೋಕಗಳನ್ನು ವ್ಯಾಪಿಸಿ ಸರ್ವಗತನಾದ, ಮೂರು ಕಾಲಗಳನ್ನು ವ್ಯಾಪಿಸಿ ನಿತ್ಯ ತತ್ವವಾದ, ಮೂರು ವೇದಗಳನ್ನು ವ್ಯಾಪಿಸಿ ಸರ್ವ ವೇದ ಪ್ರತಿಪಾದ್ಯನಾದ ಭಗವಂತನ ಭಾವಚಿತ್ರವನ್ನು ನೀಡುವ ಈ ವೇದಮಂತ್ರ ಮೊದಲ ಭಾರಿಗೆ ಭಗವಂತನ ಧೂಳಡಗಿದ ಪಾದವನ್ನು ಉಲ್ಲೇಖಿಸುತ್ತದೆ.. ಇದೇ ಪುರಂದರದಾಸರಂಥ ಅನುಭಾವಿಗಳಿಗೆಲ್ಲ ಮೂಲಸ್ಫೂರ್ತಿಯಾಗಿದೆ....
ಏಕೆಂದರೆ "ಮಹತೋ ಮಹೀಯಾನ್" ಆದ ಭಗವಂತನ ಎದುರು ಈ ಅಖಿಲಾಂಡ ಕೋಟಿ ಬ್ರಹ್ಮಾಂಡ, ಅಂದರೆ ಲಕ್ಷೋಪ ಲಕ್ಷ ಜ್ಯೋತಿರ್ವರ್ಷಗಳ ದೂರದ ಅಂತರದಲ್ಲಿ ಒಂದನ್ನೊಂದು ಹೆಣೆದುಕೊಂಡಿರುವ ಬೃಹತ್ತಾದ ವಿಶ್ವಗೋಲ ಕೂಡ ಭಗವಂತನ ಪಾದದ ಕಿರುಬೆರಳ ಅಡಿಯಲ್ಲಿ ಅಂಟಿಕೊಂಡಿರುವ ಒಂದು ಧೂಳಿನ ಕಣವಾಯಿತು... ಹೀಗೆ ಮಹತೋ ಮಹೀಯಾನ್ ಆದ ಭಗವಂತನ ಭೂಮರೂಪದ ಮುಂದೆ ಇಡೀ ವಿಶ್ವದ ಕುಬ್ಜತೆಯ ದರ್ಶನವೆ ನಿಜವಾದ "ಧೂಳಿದರ್ಶನ".... ಅದಕ್ಕೆಂದೇ ಸುಪ್ರಭಾತದಲ್ಲಿ ದಾಸರು ನುಡಿದರು "ದಾಸರೆಲ್ಲರು ಬಂದು ಧೂಳಿದರ್ಶನಗೊಂಡು"  ಈ ಭ‌ೌಮದೃಷ್ಟಿಕೋನದಿಂದ ನೋಡಿದಾಗ ಬ್ರಹ್ಮಾದಿ ಸಕಲದೇವತೆಗಳೂ ಈ "ದಾಸವರ್ಗ"ದಲ್ಲಿ ಸೇರುತ್ತಾರೆ... ಬ್ರಹ್ಮಾದಿಗಳು ಕೂಡ ಭಗವಂತನ ಚರಣಧೂಳಿಯ ದರ್ಶನಪಡೆದು ಧನ್ಯರಾದ "ಮಹಾದಾಸರು"....

ಇನ್ನು ಮುಂದಿನ ಸಾಲು "ಲೇಸಾಗಿ ತಾಳ ದಂಡಿಗೆಯ ಪಿಡಿದು"... ಇದು ಒಬ್ಬ ಭಕ್ತ ತನ್ನನ್ನು ತಾನು ಭಗವಂತನಿಗೆ ಅರ್ಪಿಸಿಕೊಳ್ಳುವ ದೈಹಿಕ ಸಿದ್ಧತೆಯನ್ನು ಹೇಳುತ್ತದೆ... ಮೇಲು ನೋಟಕ್ಕೆ ದಾಸತ್ವದ ಸಂಕೇತವಾಗಿ, ಹರಿನಾಮ ಕೀರ್ತನೆಗೆ ಗಾನ ಪರಿಕರವಾಗಿ ಕೈಯಲ್ಲಿ ತಾಳ, ಅಂದರೆ ವೀಣೆ ಅಥವಾ ತಂಬೂರಿ ಬಗಲಲ್ಲಿ ದಂಡಿಗೆ, ತಾಳವಾದ್ಯ ಮತ್ತು ತತವಾದ್ಯ (ತಂತಿವಾದ್ಯ) ಅನ್ನುವಂತಿದೆ..

ಇದರ ಅಧ್ಯಾತ್ಮದ ಅರ್ಥ ನೋಡಿದಾಗ ಈ ದೇಹವೆ ಒಂದು ದಂಡಿಗೆ, ದೇವರು ನಿರ್ಮಿಸಿದ ವೀಣೆ... ಈ ವೀಣೆಗೆ ಕೈಯ ತಳವೆ ತಾಳವಾದ್ಯ...  ಕೈತಟ್ಟಿನ ತಾಳ ತಟ್ಟಿ ದೇಹವೆಂಬ ದಂಡಿಗೆ(ವೀಣೆ)ಯನ್ನು ನುಡಿಸಬೇಕು... ಹೀಗೆ ಹಾಡುವಾಗ ಕೈಯ ತಳವನ್ನೇ ತಾಳವಾದ್ಯವಾಗಿ ಬಳಸುತ್ತಿದ್ದ ಸಾಮವೇದದ ಒಂದು ಶಾಖೆಯವರನ್ನು  "ತಳವಾದ್ಯಕಾರರು" ಅಥವಾ "ತಳವಕಾರರು" ಎಂದು ಕರೆಯುತ್ತಾರೆ...

ಹೀಗೆ ವೈದಿಕವಾದ ದೈವೀವಾದ್ಯಗಳನ್ನು ಅಂದರೆ ಕೈಯೆಂಬ ತಾಳ, ಮೈಯೆಂಬ ವೀಣೆಯನ್ನು ಹಿಡಿದು ಭಗವಂತನ ಮುಂದೆ ನಿಂತಿದ್ದಾರೆ ದಾಸರು... ಈ ತಾಳ ಭಗವಂತನಿಗಾಗಿ ತಟ್ಟಬೇಕು... ಈ ವೀಣೆ ಭಗವಂತನ ಗುಣಗಳನ್ನು ಹಾಡಬೇಕು.. ಅದೂ ಕೂಡ "ಲೇಸಾಗಿ" ಅಂದರೆ ಲಯಬದ್ಧವಾಗಿ, ಶೃತಿಬದ್ಧವಾಗಿ, ಗುರೂಪದೇಶಕ್ಕೆ ಅನುಗುಣವಾಗಿ, ಶೃತಿ-ಪುರಾಣಗಳಿಗೆ ಸಮ್ಮತವಾಗಿ.... ಈ ದೇಹ ಭಗವಂತ ಕರುಣಿಸಿದ ವೀಣೆ, ಇದನ್ನು ಲೇಸಾಗಿ ಹಿಡಿಯುವುದು ಎಂದರೆ,  ಒಪ್ಪವಾಗಿ, ಚೆನ್ನಾಗಿ ರಕ್ಷಿಸಿಕೊಳ್ಳುವುದು ಆಗಷ್ಟೇ ಇದರಿಂದ ದೇವರ ಗುಣಗಾನ ಮಾಡಲು ಸಾಧ್ಯ.. ಇಲ್ಲದಿದ್ದರೆ ವಿರಕ್ತರಾದ ಸಾಧು-ಸಂತರಿಗೆ ಈ ದೇಹದ ಮಮತೆಯಾದರೂ ಏಕೆ ಬೇಕು ?... "ಶರೀರ ಮಾದ್ಯಂ ಖಲು ಧರ್ಮಸಾಧನಮ್"...

ಹೀಗೆ ಈ ಕಾಯ ಭಗವಂತನ ಪಾದಧೂಳಿಯಿಂದ ಶುದ್ಧವಾಗಿ, ಈ ವೀಣೆ ಭಗವಂತನನ್ನು ಹಾಡಲು ಸಿದ್ಧವಾದ ಮೇಲೆ... ಮುಂದಿನ ಮಾತು ಮನಸ್ಸಿನ ಶುದ್ಧಿ ಮತ್ತು ಸಿದ್ಧತೆಗೆ ಸಂಬಂಧಿಸಿದ್ದು...

"ಕೇಶವನೆ ನಿಮ್ಮ ಸಿರಿನಾಮವನು ಸ್ಮರಿಸುತಲಿ"...
ಇಲ್ಲಿ "ನಿಮ್ಮ" ಅನ್ನುವ ಬಹುವಚನ ಔಚಿತ್ಯಪೂರ್ಣವಾಗಿ ಬಂದಿದೆ... ಏಕೆಂದರೆ ಕೇಶವ ಎಂಬ ಸಂಬೋಧನೆ ಭಗವಂತನ ಅನಂತರೂಪಗಳ ಅನಂತ ನಾಮಗಳನ್ನು ಹೇಳುವ ಉದ್ದೇಶದಿಂದ ಕೂಡಿದೆ... ಭಗವಂತನ ಅನಂತ ಸಿರಿನಾಮಗಳ ಸ್ಮರಣೆಯಿಂದ ಮನಸ್ಸು ಸದಾ ಅವನಲ್ಲಿ ನೆಲೆಸಿರಲಿ, ಅದರಿಂದ ಅಂತರಂಗ ಪಾವನವಾಗಲಿ....ಎಂದು
ಒಬ್ಬ ಸಾಧಕನಿಗೆ ನಾಮಸ್ಮರಣೆಗಿಂತ ಮಿಗಿಲಾದ ಭಾಗ್ಯ - ಸಂಪತ್ತು ಬೇರೇನಿದೆ ? ಎಲ್ಲ ಐಹಿಕ ಸಂಪತ್ತನ್ನೂ ತೊರೆದು ಹರಿನಾಮದ ಸಿರಿಯನ್ನು ಗಳಿಸಿದ ಪುರಂದರದಾಸರು ಅದನ್ನು "ಸಿರಿನಾಮ" ಎಂದು ಕರೆದದ್ದು ತುಂಬಾ ಅರ್ಥಪೂರ್ಣ, ಸ್ವಾನುಭವ ಕೂಡ ಹೌದು... ಅದಕ್ಕೆಂದೇ ಅವರ ಇನ್ನೊಂದು ಹಾಡಲ್ಲಿ ಹಾಡಿದ್ದು -
"ನೀನ್ಯಾಕೋ ನಿನ್ನ ಹಂಗ್ಯಾಕೋ
ನಿನ್ನ ನಾಮದ ಬಲವೊಂದಿದ್ದರೆ ಸಾಕೋ"... ಎಂದು.
ಹರಿಯ ನಾಮಗಳೆ ನಿಜವಾದ ಸಿರಿ. ಅವುಗಳಿಂದ ವಾಚ್ಯನಾದವನೇ ನಿಜವಾದ "ಸಿರಿಯ ವಾಸ" ಅವನೇ "ಶ್ರೀನಿವಾಸ"....

"ಕಲೌ ಸಂಕೀರ್ತ್ಯ ಕೇಶವಮ್" ಎಂಬ ಪುರಾಣವಚನ ಪ್ರಾಯಃ ದಾಸರ ಮನದಲ್ಲಿ ಸುಳಿದು "ಕೇಶವನೆ , ನಿಮ್ಮ ಸಿರಿನಾಮವನೆ ಸ್ಮರಿಸುತಲಿ" ಎಂದು "ಕೇಶವನೆ" ಎಂಬ ನಾಮ ಸಂಬೋಧನೆಯಿಂದಲೇ ಶುರುವಾಗಿರಬೇಕು ಈ ಸೊಲ್ಲು...

ಅಷ್ಟೇ ಅಲ್ಲ , ಶಾಸ್ತ್ರಕಾರರ ಆಣತಿಯಂತೆ ಪ್ರಾತಃಕಾಲದಲ್ಲಿ ಸ್ಮರಿಸಬೇಕಾದ ಭಗವಂತನ ರೂಪ "ಕೇಶವ"....

ಪ್ರಾತಃ ಕಾಲೇ ಕೇಶವಂತು
ಗೋವಿಂದಂ ಸಂಗಮೇ ತಥಾ |
ಮಧ್ಯಾಹ್ನಾಧಿಪತಿಂ ವಿಷ್ಣುಂ
ಮಧುಘ್ನಮಪರಾಹ್ಣಕೇ |
ಸಾಯಂಕಾಲೇ ನೃಸಿಂಹಂತು
ಹೃಷೀಕೇಶಂ ಪ್ರದೋಷಕೇ ||

(ಪ್ರಭಾತದಲ್ಲಿ ಕೇಶವ, ಪೂರ್ವಾಹ್ಣದಲ್ಲಿ ಗೋವಿಂದ, ಮಧ್ಯಾಹ್ನದ ಒಡೆಯ ವಿಷ್ಣು , ಅಪರಾಹ್ಣದಲ್ಲಿ ಮಧುಸೂದನ, ಸಂಜೆಯಲ್ಲಿ ನರಸಿಂಹ, ರಾತ್ರಿಯಲ್ಲಿ ಹೃಷೀಕೇಶ)...

ಹೀಗೆ ಯಾವ ಹೊತ್ತಿನಲ್ಲಿ ಯಾವ ರೂಪವನ್ನು ಸ್ಮರಿಸಬೇಕು ಅನ್ನುವ ಶಾಸ್ತ್ರ ಸಂಪ್ರದಾಯವನ್ನು ನಮಗೆ ತಿಳಿಹೇಳಲೂ ಪುರಂದರದಾಸರು  "ಕೇಶವನೆ" ಎಂಬ ನಾಮವನ್ನು ಇಲ್ಲಿ ಸಂಬೋಧಿಸಿರಬಹುದು...

ಅಷ್ಟೇ ಅಲ್ಲ ಕೇಶವ ಶಬ್ದದ ಒಂದು ಅರ್ಥ ಹೀಗಿದೆ... ಕ=ಬ್ರಹ್ಮ, , ಈಶ=ರುದ್ರ,  ಇವರೀರ್ವರನ್ನೂ ಸೃಷ್ಟಿ-ಸಂಹಾರಗಳ ಕರ್ತವ್ಯಕ್ಕೆ ಹಚ್ಚಿ ನಿಯಂತ್ರಿಸುವವ "ಕೇಶವ"...
ಹಿಂದೆ ಹೇಳಿದ ಧೂಳಿದರ್ಶನದಲ್ಲಿ ಬ್ರಹ್ಮಾದಿ ದೇವತೆಗಳೂ "ದಾಸವರ್ಗಕ್ಕೆ" ಸೇರುತ್ತಾರೆ.. ಅದಕ್ಕೆ ಪೂರಕವಾಗಿಯೂ ಇಲ್ಲಿ ದಾಸರು "ಕೇಶವ" ಪದ ಬಳಸಿರಬಹುದು...

ಹೀಗೆ ಸಾಧಕ ಕಾಯ-ಮನಸ್ಸು -ವಾಕ್ಕುಗಳೆಂಬ ತ್ರಿಕರಣಗಳ ಮೂಲಕ ತನ್ನನ್ನು ಭಗವಂತನಿಗೆ ಅರ್ಪಿಸಿಕೊಳ್ಳುತ್ತಾನೆ...
                   (ಮುಂದುವರೆಯುವುದು...)
                                                   (Contributed by Shri B S Harish)