Showing posts with label Festival. Show all posts
Showing posts with label Festival. Show all posts

Wednesday, 12 September 2018

ವಿಘ್ನನಾಶ ವಿನಾಯಕನ ಕುರಿತು ಇಂದು ಹೆಚ್ಚು ಪ್ರಚಲಿತದಲ್ಲಿರುವ ಕಥೆಯ ಹಿಂದಿನ ಅಧ್ಯಾತ್ಮ

ಗಣೇಶ ಚತುರ್ಥಿಯಂದು ಎಲ್ಲೆಲ್ಲೂ ಕೇಳುವ ಗಣಪತಿಯ ಕಥೆಯ ಹಿಂದಿನ ತಿರುಳೇನು?
ಆನೆ ಮೊಗದ ವಿಶ್ವಂಭರ ರೂಪಿ ಪರಮಾತ್ಮನ ಜೊತೆಗೆ ಆಕಾಶ ತತ್ತ್ವ, ಶಿವ-ಪಾರ್ವತಿ ಪುತ್ರ ಶ್ರೀ ಗಣೇಶ 

ಪ್ರಾಚೀನ ಗ್ರಂಥಗಳಲ್ಲಿ ಅನೇಕ ಕಥೆಗಳನ್ನು ಕಾಣುತ್ತೇವೆ. ಅದನ್ನು ಮೇಲ್ನೋಟದಲ್ಲಿ ನೋಡಿದರೆ ವಿನೋದವೆನಿಸುತ್ತದೆ. ಆದರೆ ಅದರ ತಿರುಳನ್ನು ಅರಿತರೆ ಜೀವನ ಸಾರ್ಥಕ. ಇದಕ್ಕೆ ಉತ್ತಮ ಉದಾಹರಣೆ ಗಣಪತಿಯ ಕಥೆ. "ಪಾರ್ವತಿ ತನ್ನ ಮೈಯ ಮಣ್ಣಿನಿಂದ ಗಣಪತಿಯನ್ನು ನಿರ್ಮಿಸಿದಳು, ಆತನ ತಲೆಯನ್ನು ಶಿವ ಕಡಿದ, ನಂತರ ಆತನಿಗೆ ಉತ್ತರ ದಿಕ್ಕಿಗೆ ತಲೆ ಹಾಕಿದ ಆನೆಯ ತಲೆಯನ್ನು ಜೋಡಿಸಿದರು, ಕಡಬು ತಿಂದ ಗಣೇಶ ಹೊಟ್ಟೆಗೆ ಹಾವನ್ನು ಸುತ್ತಿಕೊಂಡ". ಏನಿದರ ಅರ್ಥ? ಪ್ರಾಯಃ ಈ ಕಥೆಯನ್ನು ಕೇಳದವರಿಲ್ಲ; ಆದರೆ ಅರ್ಥ ತಿಳಿದವರು ಸಾವಿರಕ್ಕೆ ಒಬ್ಬರಿಲ್ಲ! ಈ ಕಥೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದರೆ ಮಾತ್ರ ನಮಗೆ ಕಥೆಯ ಮಹತ್ವ, ಪೂಜೆಯ ಮಹತ್ವ, ನಂಬಿಕೆಯ ಮಹತ್ವ ಅರಿಯುತ್ತದೆ. ಗಣಪತಿ ಆಕಾಶದ ದೇವತೆ. ಆಕಾಶ ಪಂಚ ಭೂತಗಳಲ್ಲಿ ಮಹತ್ತಾದದ್ದು. ಗಣಪತಿಯ ಸ್ಥಾನ ಇಪ್ಪತ್ತೊಂದನೆಯದು. ಅದಕ್ಕಾಗಿ ಆತನಿಗೆ ಇಪ್ಪತ್ತೊಂದು ಮೋದಕ ಅರ್ಪಣೆ. ಐದು ಅಂತಃಕರಣ, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಐದು ತನ್ಮಾತ್ರೆಗಳು(ಶಬ್ದ, ಸ್ಪರ್ಶ ರೂಪ ರಸ ಗಂಧ) ಇದರಿಂದ ಆಚೆಗೆ ಆಕಾಶ, ಗಾಳಿ, ಬೆಂಕಿ,ನೀರು, ಮಣ್ಣು. ಇಲ್ಲಿ ಆಕಾಶ ಇಪ್ಪತ್ತೊಂದನೇ ಮೆಟ್ಟಿಲಲ್ಲಿದೆ. ಇದು ಇಪ್ಪತ್ತೊಂದನೇ ತತ್ವ. ಗಣಪತಿಗಿಂತ ಮೊದಲ ಸ್ತರದಲ್ಲಿರುವ ತತ್ತ್ವಾಭಿಮಾನಿಗಳು ಇಪ್ಪತ್ತುಮಂದಿ. ಬ್ರಹ್ಮ, ವಾಯು, ಗರುಡ, ಶೇಷ, ರುದ್ರ, ಇಂದ್ರ, ಕಾಮ, ಅಹಂಪ್ರಾಣ, ಅನಿರುದ್ಧ, ಸ್ವಾಯಂಭುವಮನು, ಬೃಹಸ್ಪತಿ, ದಕ್ಷಪ್ರಜಾಪತಿ, ಪ್ರವಹವಾಯು, ಚಂದ್ರ, ಸೂರ್ಯ, ಯಮಧರ್ಮ, ವರುಣ, ವಹ್ನಿ, ಮಿತ್ರ ಮತ್ತು ನಿರ್ಋತಿ. ಗಣಪತಿ ಇಪ್ಪತ್ತೊಂದನೆಯವನು.

ಶಿವ ಪಾರ್ವತಿಯರು ದಂಪತಿಗಳು. ಇಲ್ಲಿ ಶಿವ ಮನಸ್ಸಿನ ಅಭಿಮಾನಿ ಮತ್ತು ಪಾರ್ವತಿ ವಾಕ್ ದೇವತೆ. ಮನಸ್ಸು ಯೋಚಿಸಿದಂತೆ ಮಾತು. ಅದಕ್ಕಾಗಿ ಅವರದು ಅನ್ಯೋನ್ಯ ದಾಂಪತ್ಯ. ಶಬ್ದದ ಮೂಲಶಕ್ತಿ ಗಾಳಿ ಮತ್ತು ಆಕಾಶ. ಆಕಾಶ ಮತ್ತು ಗಾಳಿ ಇಲ್ಲದಿದ್ದರೆ ಶಬ್ದವಿಲ್ಲ. ನಮ್ಮ ಒಳಗಿನ ವಾಕ್ ನಾದವೇ ಪಾರ್ವತಿ-ಅದು ಶಬ್ದ ರೂಪದಲ್ಲಿ ಹೊರ ಹೊಮ್ಮುವುದೇ ಮಾತು. ಇದು ಮೂಲ ನಾದದ ಸ್ಥೂಲ ರೂಪ. ಮನುಷ್ಯನಿಗೆ ದೊಡ್ಡ ಆಪತ್ತು ಮಾತು. ಅಧ್ಯಾತ್ಮ ಸಾಧನೆಗೆ ಬೇಕಾಗಿರುವುದು ಮಾತಿಗಿಂತ ಹೆಚ್ಚಾಗಿ ಮೌನ. ತನ್ನತನದ ಅರಿವಿಲ್ಲದೇ(Awareness of self), ಅಹಂಕಾರ ತತ್ವದ ವಿರುದ್ಧ ಮಾತು ಬೆಳೆದಾಗ, ಮಾತಿನ ಶಿರಛೇದನವಾಗದೇ ಜ್ಞಾನವಿಲ್ಲ. ಶಿರಛೇದನವಾದ ಮೇಲೆ ಪುನಃ ಅದೇ ಮಾತು ಮುಂದುವರಿಯಬಾರದು. ಅದಕ್ಕಾಗಿ ಎಲ್ಲವನ್ನು ಕೇಳುವ ದೊಡ್ಡ ಕಿವಿಯುಳ್ಳ, ಪ್ರಾಣಶಕ್ತಿಯನ್ನು ನಿಯಂತ್ರಿಸುವ ಉದ್ದನೆಯ ಮೂಗಿನ ಸಂಕೇತ ರೂಪವಾದ ಆನೆಯ ತಲೆಯನ್ನು ಇಟ್ಟು ಗಣಪತಿ ಎನ್ನುವ ಹೊಸ ಆಕಾರದ ಜನನವಾಯಿತು. ಗಣಪತಿಯನ್ನು ನೋಡಿದಾಕ್ಷಣ ನಮಗೆ ನೆನಪಿಗೆ ಬರಬೇಕಾದ ವಿಷಯ ಮಾತಿಗಿಂತ ಮನನ ಹೆಚ್ಚು ಮಾಡು, ಸರಿಯಾಗಿ ಕೇಳಿಸಿಕೋ (Be a good listener) ಎನ್ನುವ ವಿಚಾರ.

ಉತ್ತರ ದಿಕ್ಕಿಗೆ ತಲೆ ಹಾಕುವುದು ಅಂದರೆ ಏನು? ಸಾಮಾನ್ಯವಾಗಿ ನಮಗೆಲ್ಲರಿಗೂ ಗೊತ್ತಿರುವಂತೆ ಉತ್ತರಕ್ಕೆ ತಲೆ ಹಾಕಿ ಮಲಗಬಾರದು. ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತು ಕೊಳ್ಳಬಾರದು. ದೇವಸ್ಥಾನದಲ್ಲಿ ಅಪ್ರದಕ್ಷಿಣೆ ಸುತ್ತಬಾರದು ಇತ್ಯಾದಿ. ಆದರೆ ಈ ಎಲ್ಲಾ ವಿಚಾರ ಏಕೆ? ಇದರ ಹಿಂದಿರುವ ಸಿದ್ಧಾಂತ ಏನು? ಈ ಭೂಮಿಯಲ್ಲಿ ಉತ್ತರ ಧ್ರುವದ ಶಕ್ತಿ ಉತ್ತರದಿಂದ ಪೂರ್ವಕ್ಕೆ ಹರಿಯುತ್ತಿರುತ್ತದೆ ಹಾಗೂ ದಕ್ಷಿಣ ಧ್ರುವದ ಶಕ್ತಿ ದಕ್ಷಿಣದಿಂದ ಪಶ್ಚಿಮಕ್ಕೆ ಹರಿಯುತ್ತಿರುತ್ತದೆ. ನಮ್ಮ ಚಲನೆ ಕೂಡಾ ಈ ಶಕ್ತಿಪಾತಕ್ಕೆ ಅನುಗುಣವಾಗಿರಬೇಕು. ನಾವು ದಕ್ಷಿಣಕ್ಕೆ ಮುಖ ಮಾಡಿದರೆ ದಕ್ಷಿಣ ಧ್ರುವದ ಶಕ್ತಿಪಾತಕ್ಕೆ ನಮ್ಮನ್ನು ನಾವು ಒಡ್ಡಿಕೊಂಡಂತೆ ಹಾಗೂ ಉತ್ತರಕ್ಕೆ ಮುಖ ಮಾಡಿದರೆ ಉತ್ತರ ದ್ರುವದ ಶಕ್ತಿಪಾತಕ್ಕೆ ಒಡ್ಡಿಕೊಂಡಂತೆ. ಉತ್ತರಕ್ಕೆ ತಲೆ ಹಾಕಿ ಮಲಗುವುದು ಎಂದರೆ ಎದ್ದಾಗ ದಕ್ಷಿಣಕ್ಕೆ ಮುಖ ಮಾಡುವುದು. ಆದ್ದರಿಂದ ದಕ್ಷಿಣ ಮುಖ ಹಾಗೂ ಉತ್ತರ ತಲೆ ಎರಡೂ ಒಂದೆ. ಈ ಎರಡು ಶಕ್ತಿಪಾತದಲ್ಲಿ ಒಂದು ದೊಡ್ಡ ವ್ಯತ್ಯಾಸವಿದೆ. ಅದೇನೆಂದರೆ ಉತ್ತರದ ಶಕ್ತಿಪಾತ ಊರ್ಧ್ವಮುಖವಾದದ್ದು ಹಾಗೂ ದಕ್ಷಿಣದ ಶಕ್ತಿಪಾತ ಸಂಸಾರದ ಸುಳಿಯಲ್ಲಿ ಸಿಲುಕಿಸುವಂತಾದ್ದು. ಈ ಕಾರಣಕ್ಕಾಗಿ ಉತ್ತರಕ್ಕೆ ತಲೆ ಹಾಕಿ ಮಲಗಿದರೆ ಅಥವಾ ದಕ್ಷಿಣಕ್ಕೆ ಮುಖ ಮಾಡಿ ಪೂಜೆಗೆ ಕುಳಿತರೆ ನಮ್ಮ ಶಿರಛೇದನವಾಗುತ್ತದೆ. ನಾವು ಪುನಃ ಈ ಸಂಸಾರದ ಸುಳಿಯಲ್ಲಿ ಸುತ್ತಬೇಕಾಗುತ್ತದೆ. ಇನ್ನು ಹೊಟ್ಟೆಗೆ ಹಾವಿನ ಸುತ್ತು. ಹಾವು ಕುಂಡಲಿನೀ ಶಕ್ತಿಯ ಸಂಕೇತ. ಇದು ಚಕ್ರಾಕಾರವಾಗಿ ತಲೆ ಕೆಳಗೆ ಹಾಕಿ ಮಲಗಿದ ಹಾವಿನ ರೂಪದಲ್ಲಿ ನಮ್ಮ ಮಲ-ಮೂತ್ರ ದ್ವಾರದ ಮಧ್ಯದಲ್ಲಿರುತ್ತದೆ. ಕುಂಡಲಿನೀ ಜಾಗೃತವಾಗುವುದು ಎಂದರೆ ಈ ಹಾವು ಹೆಡೆಯೆತ್ತಿ ನಿಲ್ಲುವುದು. ಕುಂಡಲಿನೀ ಜಾಗೃತವಾದಾಗ ಶಕ್ತಿ- ಮೂಲಾಧಾರ, ಮಣಿಪುರ ಹಾಗೂ ಸ್ವಾದಿಷ್ಠಾನ ಶಕ್ತಿ ಕೇಂದ್ರಗಳಲ್ಲಿ ಊರ್ಧ್ವ ಮುಖವಾಗಿ ಸಂಚರಿಸುತ್ತದೆ. ನಮ್ಮ ಹೊಕ್ಕುಳಿನ ಮೇಲಿನ ಶಕ್ತಿ ಕೇಂದ್ರ ಜ್ಞಾನದ ಬಾಗಿಲು, ಗಣಪತಿ ಈ ಮೂರು ಶಕ್ತಿ ಕೇಂದ್ರಗಳನ್ನು ನಿಯಂತ್ರಿಸಿ ನಮಗೆ ಜ್ಞಾನದ ಬಾಗಿಲನ್ನು ತೆರೆಯುವ ಶಕ್ತಿದೇವತೆ. ಇಷ್ಟೊಂದು ಸಂಗತಿ ಈ ಪುಟ್ಟ ಕಥೆಯಲ್ಲಿದೆ. ಇದು ಹೂವಿನಿಂದ ಹಣ್ಣಿಗೆ ಹೋಗುವ ರೀತಿ. ಕೇವಲ ಮೇಲ್ನೋಟದ ಅರ್ಥದಲ್ಲೇ (ಹೂವಿನಲ್ಲೇ)ನಿಂತರೆ ತೊಂದರೆಯಿಲ್ಲ, ಅದರಿಂದಾಚೆಗೆ ಏನೂ ಇಲ್ಲ ಎಂದು ತಿಳಿದರೆ ಅದು ಅನರ್ಥ!

ಯಾವುದೇ ಪೂಜೆ-ಕರ್ಮವನ್ನು ಮಾಡುವಾಗ ವಿಘ್ನನಿವಾರಕನಾದ ಗಣಪತಿ ಪೂಜೆ ಮಾಡುವುದು ಸಂಪ್ರದಾಯ. ಅದಕ್ಕಾಗಿ ಗಣಪತಿ ಮಂಡಲ ಬರೆದು ಪೂಜಿಸಿ ನಂತರ ಇತರ ಕರ್ಮವನ್ನು ಮಾಡುತ್ತಾರೆ.
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ
ಹೀಗೆ ವಿಘ್ನ ನಿವಾರಕ ಗಣಪತಿ ಸ್ತುತಿ ಮೊದಲಿಗೆ.
ಭಗವಂತ ತನ್ನ ವಿಶ್ವಂಭರರೂಪದಲ್ಲಿ ಗಣಪತಿಯ ಅಂತರ್ಯಾಮಿಯಾಗಿ ಸನ್ನಿಹಿತನಾಗಿದ್ದಾನೆ.
ಭಗವಂತನ ವಿಶ್ವಂಭರ ರೂಪಕ್ಕೆ ಒಟ್ಟು ೧೯ ತಲೆಗಳು. ನಡುವಿನಲ್ಲಿ ಆನೆಯ ಮೊಗ ಹಾಗೂ ಎಡ ಬಲಗಳಲ್ಲಿ ೯-೯ ಮಾನವ ಮೊಗ.

ಸಹಸ್ರನಾಮ ಭಗವಂತನ 'ವಿಶ್ವಮ್' ಎನ್ನುವ ವಿಘ್ನನಿವಾರಕ 'ವಿಶ್ವಂಭರ' ರೂಪದ ನಾಮದಿಂದ ಪ್ರಾರಂಭವಾಗುತ್ತದೆ.
ನಮ್ಮ ಜೀವನದಲ್ಲಿರುವ ಮೂರು ಅವಸ್ಥೆಗಳಲ್ಲಿ (ಎಚ್ಚರ-ಕನಸು-ನಿದ್ದೆ), ನಮ್ಮ ಎಚ್ಚರವನ್ನು ನಿಯಂತ್ರಿಸುವ ಭಗವಂತನ ರೂಪ 'ವಿಶ್ವ' ನಾಮಕ ರೂಪ.

ದೇವತೆಗಳು ನಮಗೆ ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿ ಕೊಟ್ಟು, ನಮ್ಮನ್ನು ನಿಯಮನ ಮಾಡಿಕೊಂಡು ಈ ನಮ್ಮ ದೇಹದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಒಬ್ಬ ದೇವತೆ ಗಣಪತಿ. ಆತ ಆಕಾಶದ ದೇವತೆ. ಬ್ರಹ್ಮಾಂಡದಲ್ಲಿ ಆಕಾಶ ಹಾಗೂ ಪಿಂಡಾಂಡದಲ್ಲಿ ರಕ್ತಸಂಚಾರ, ಉಸಿರಾಟಕ್ಕೆ ಬೇಕಾದ ಅವಕಾಶ(Space)ವನ್ನು ಒದಗಿಸಿ ಮನುಷ್ಯ ಜೀವಂತವಾಗಿರಲು ಅವಕಾಶವನ್ನು ಈತ ಕಲ್ಪಿಸಿಕೊಡುತ್ತಾನೆ. ಈತ ಅವಕಾಶದ ದೇವತೆಯಾದ್ದರಿಂದ ವಿಘ್ನನಾಶ.
ಶಿವ ಪಾರ್ವತೀ ಪುತ್ರ, 
ನಿನ್ನದೆಂಥಾ ಪಾತ್ರ. 
ನಿನ್ನ ಮನೆ ಆಕಾಶ, 
ನೀ ನೀಡುವೆ ಅವಕಾಶ. 
ದೇಹ ನಾಡಿಗಳಿಗೆ ನೀ ಮೂಲಾಧಾರ, 
ಮೊದಲ ಅಂತರ್ಜಾಗೃತಿಯ ಸೂತ್ರಧಾರ. 
ನಿನ್ನ ಅನುಗ್ರಹವಿರೇ ಅಪಾರ, 
ಸಹಸ್ರಾರದಲ್ಲಿ ಪರಮಸಾಕ್ಷಾತ್ಕಾರ. 

ನಿನ್ನಪ್ಪನ ಮನೆ ಮನಸು, 
ಅವಕಾಶವೀವ ನೀನವನ ಕೂಸು. 
ನಮೋ ಗಣೇಶಾಂತರ್ಗತ ವಿಶ್ವಂಭರ, 
ತೊಡಿಸೆಮಗೆ ಜ್ಞಾನ ಭಕ್ತಿ ವೈರಾಗ್ಯಗಳಂಬರ. 

ಗಲ್ಲಿ ಗಲ್ಲಿಗೂ ಗಣೇಶ ಅಲಂಕಾರದಾಡಂಬರ, 
ಕಿವಿಗಡಚಿಕ್ಕುವ ಚಿತ್ರಗೀತೆಗಳ ಮೈಕಾಸುರ. 
ಅರ್ಥ ಅನುಸಂಧಾನಕೆ ಎಲ್ಲೆಲ್ಲೂ ತತ್ವಾರ, 
ಒಪ್ಪಿಯಾನೆ ಇದ ಗಣೇಶಾಂತರ್ಗತ ವಿಶ್ವಂಭರ. 

ನಮೋ ನಮೋ ಆಕಾಶಾಭಿಮಾನಿ ಗಣೇಶ, ಕರುಣಿಸು ಸದ್ಬುದ್ಧಿ ಸತ್ಕರ್ಮಗಳ ಅವಕಾಶ. 
ನೀಡೆಮಗೆ ಸಚ್ಛಾಸ್ತ್ರ ಕೇಳುವ ತೆರೆದ ಕಿವಿ, 
ಅವಾದಾವು ದುರ್ವಚನ ದುರ್ವಾದಗಳಿಗೆ ಪವಿ. 

ವಿಘ್ನ ನಿವಾರಕ ತರಿದುಬಿಡು ವಿಘ್ನ, 
ನಿನ್ನೊಲುಮೆಯಿಂದ ಬದುಕಾಗಲಿ ಯಜ್ಞ. 
ಬಾಳ ಯಾತ್ರೆಯಲಿ ಸತ್ಕರ್ಮಗಳನೇ ನಡೆಸು, 
ತಂದೆಯೊಡಗೂಡಿ ಎಮ್ಮ ಮನ ಹರಿಪಾದದೊಳಿರಿಸು.

ಸತ್ಕರ್ಮಗಳಲೇ ಅವಕಾಶ ಕೊಡು ಗಣಪ, 
ಹರಿಚರಣಗಳಲಿ ಎಮ್ಮ ಮನವಿಡಲಿ ನಿನ್ನಪ್ಪ. 
ಸುಜ್ಞಾನ ಮತಿಯಿತ್ತು ಸಲಹು ನೀ ಪವಮಾನ, 

ಸುತ್ತುವಾಟ ಮುಗಿಸಿ ಎತ್ತಿಕೋ ಗರುಡವಾಹನ.
(Contributed by Shri Prakash Shetty)

Monday, 15 January 2018

ಸಂಕ್ರಾಂತಿಯ ಸಂದೇಶ :

ರವಿಸಂಕ್ರಮಣೇ ಪ್ರಾಪ್ತೇ 
ನ ಸ್ನಾಯಾತ್ ಯಸ್ತು ಮಾನವಃ |
ಸಪ್ತಜನ್ಮಸು ರೋಗೀ ಸ್ಯಾತ್
ನಿರ್ಧನಶ್ಚೈವ ಜಾಯತೇ ||

ಸಂಕ್ರಮಣದ ಮಹತ್ವವನ್ನು ತಿಳಿಸಿಕೊಡುವ ಈ ಶ್ಲೋಕದಲ್ಲಿ ಹೇಳಲ್ಪಟ್ಟಂತೆ, ನಿತ್ಯವೂ ನಾವು ಸ್ನಾನ, ಜಪ-ತಪ-ತರ್ಪಣಾದಿಗಳನ್ನು ಮಾಡುತ್ತೇವೆಯಾದರೂ, ಸಂಕ್ರಮಣ ಕಾಲದಲ್ಲಿ ಮಾಡುವ ಸ್ನಾನ-ಜಪ-ತರ್ಪಣಾದಿಗಳು ವಿಶೇಷ ಫಲದಾಯಕ ಹಾಗು ಅವಶ್ಯಮಾಡಲೇಬೇಕಾದುದು. ಇಲ್ಲವಾದಲ್ಲಿ ಅದು ಏಳು ಜನ್ಮಗಳಲ್ಲಿ ಆರೋಗ್ಯನಾಶ, ಸಂಪತ್ತುನಾಶಕ್ಕೆ ಕಾರಣವಾಗಿ ಆಯಾ ಜನ್ಮಗಳಲ್ಲಿನ ದಾರಿದ್ರ್ಯತೆಗೆ ಕಾರಣವಾಗತ್ತದೆ ಅನ್ನುವ ಸಂದೇಶವನ್ನು ಈ ಶ್ಲೋಕದಲ್ಲಿ ಕೊಟ್ಟಿದ್ದಾರೆ. ಅಂದರೆ ಸಂಕ್ರಮಣಕ್ಕಿರುವ ಮಹತ್ವವನ್ನು ಇದು ಹೇಳುತ್ತದೆ... ಹೇಗೆ ಗ್ರಹಣ ಕಾಲದಲ್ಲಿ ಗಾಯತ್ರೀ ಅಥವಾ ಯಾವುದೇ ಮಂತ್ರ ಜಪ ಅತ್ಯುನ್ನತ ಫಲವನ್ನು ಕೊಡುತ್ತದೋ ಹಾಗೆ...

ನಮ್ಮಲ್ಲಿ "ಆರೋಗ್ಯಂ ಆದಿತ್ಯಾದಿಚ್ಛೇತ್" ಎಂಬ ಮಾತು ಬಳಕೆಯಲ್ಲಿದೆ. ಸೌರಶಕ್ತಿಯ ಮೂಲಕ ಜಗತ್ತಿನ ಎಲ್ಲ ಜೀವರಾಶಿಗಳಿಗೆ ಆರೋಗ್ಯ ನೀಡುವವನು ಸೂರ್ಯ... ಸೂರ್ಯದೇವ ನಾವು ಪರ್ವಕಾಲಗಳಲ್ಲಿ ಮಾಡುವ ಪುಣ್ಯಕರ್ಮಗಳ ಫಲವನ್ನು ಅನೇಕ ಜನ್ಮಗಳಿಗೆ ಕೊಂಡೊಯ್ದು ತಲುಪಿಸುತ್ತಾನೆ ಎಂಬ ಮಾತನ್ನು ಕೂಡ ಶಾಸ್ತ್ರಕಾರರು ಹೇಳುತ್ತಾರೆ...

ಸಂಕ್ರಮಣ ಎಂದರೇನು ? ರವಿಯು ಮೇಷದಿಂದ-ಮೀನದತನಕ ಹನ್ನೆರಡು ರಾಶಿಗಳಲ್ಲಿ, ಅಂದರೆ ತಿಂಗಳಿಗೊಂದು ರಾಶಿಯಂತೆ ಹನ್ನೆರಡು ರಾಶಿಗಳಲ್ಲಿ ಸಂಚರಿಸುತ್ತಾನೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲಘಟ್ಟಕ್ಕೆ "ಸಂಕ್ರಮಣ" ಎಂದು ಹೆಸರು... ಈ ಹನ್ನೆರಡು ಸಂಕ್ರಮಣವೂ ನಡೆಯುವುದು ಒಂದು ನಿರ್ದಿಷ್ಟವಾದ ದಿನಾಂಕದಂದು... ಅದನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದಾಗಿದೆ...

ಸೂರ್ಯ ಮೇಷ ರಾಶಿಯನ್ನು ಏಪ್ರಿಲ್ ತಿಂಗಳ 13-14 ರಂದು ಪ್ರವೇಶಿಸುವನು....
ವೃಷಭ ರಾಶಿಯನ್ನು ಮೇ 14-15 ರಂದು ಪ್ರವೇಶಿಸುವನು....
ಮಿಥುನ ರಾಶಿಯನ್ನು ಜೂನ್ 14-15 ರಂದು...
ಕಟಕ ರಾಶಿಯನ್ನು ಜುಲೈ 16- 17 ರಂದು...
ಸಿಂಹ ರಾಶಿಯನ್ನು ಆಗಸ್ಟ್ 16-17 ರಂದು...
ಕನ್ಯಾ ರಾಶಿಯನ್ನು ಸೆಪ್ಟೆಂಬರ್ 16- 17 ರಂದು...
ತುಲಾ ರಾಶಿಯನ್ನು ಅಕ್ಟೋಬರ್ 16-17 ರಂದು...
ವೃಶ್ಚಿಕ ರಾಶಿಯನ್ನು ನವೆಂಬರ್ 15-16 ರಂದು...
ಧನು ರಾಶಿಯನ್ನು ಡಿಸೆಂಬರ್ 15-16 ರಂದು...
ಮಕರ ರಾಶಿಯನ್ನು ಜನವರಿ 13-14 ರಂದು....
ಕುಂಭ ರಾಶಿಯನ್ನು ಫೆಬ್ರವರಿ 12-13 ರಂದು...
ಮೀನ ರಾಶಿಯನ್ನು ಮಾರ್ಚ್ 14-15 ರಂದು ಪ್ರವೇಶಿಸುವನು....

ರವಿಯು ಸಂಚರಿಸುವ ಈ ಹನ್ನೆರಡು ತಿಂಗಳುಗಳಲ್ಲಿ ಆರು ತಿಂಗಳು ಉತ್ತರಾಯಣವೆಂದು ಮತ್ತೆ ಆರು ತಿಂಗಳು ದಕ್ಷಿಣಾಯವೆಂದು ಕರೆಯುತ್ತಾರೆ.... ಇದು ದೇವತೆಗಳ ಒಂದು ಹಗಲು ಮತ್ತು ರಾತ್ರಿ ಕೂಡ ಹೌದು...‌

ರವಿಯು ಕಟಕದಿಂದ - ಧನುರ್ರಾಶಿಯ ತನಕ ಸಂಚರಿಸುವ ಕಾಲಘಟ್ಟಕ್ಕೆ "ದಕ್ಷಿಣಾಯನ" ಎನ್ನುತ್ತಾರೆ.... ಅದೇ
ರವಿ ಮಕರದಿಂದ - ಮಿಥುನರಾಶಿಯ ತನಕ ಸಂಚರಿಸುವ ಕಾಲಘಟ್ಟಕ್ಕೆ "ಉತ್ತರಾಯಣ" ಎನ್ನುತ್ತಾರೆ....

ದಕ್ಷಿಣಾಯನ : ರವಿಯು ಭೂಮಧ್ಯರೇಖೆಗೆ ದಕ್ಷಿಣಾಭಿಮುಖವಾಗಿ ಸಂಚರಿಸುವ ಕಾಲ "ದಕ್ಷಿಣಾಯಣ". ಇದು ಸಾಮಾನ್ಯವಾಗಿ ಶ್ರಾವಣ ಮಾಸದಿಂದ ಪ್ರಾರಂಭವಾಗಿ ಪುಷ್ಯಮಾಸದವರೆಗೆ ಇರುತ್ತದೆ.

ಉತ್ತರಾಯಣ : ರವಿಯು ಭೂಮಧ್ಯರೇಖೆಗೆ ಉತ್ತರಾಭಿಮುಖವಾಗಿ ಸಂಚರಿಸುವ ಕಾಲಕ್ಕೆ "ಉತ್ತರಾಯಣ" ಕಾಲವೆಂದು ಹೆಸರು. ಇದು ಸಾಮಾನ್ಯವಾಗಿ ಮಾಘಮಾಸದಿಂದ ಭಾದ್ರಪದ ಮಾಸದವರೆಗೆ ಇರುತ್ತದೆ.

ವಿಜ್ಞಾನದ ಪ್ರಕಾರ ಸೂರ್ಯ ಸುತ್ತುವುದಿಲ್ಲ ಅವನ ಸುತ್ತ ಉಳಿದ ಗ್ರಹಗಳು ಸುತ್ತುತ್ತವೆ ಅಂತ.. ಶಾಸ್ತ್ರಕಾರರ ಒಂದು ನಂಬಿಕೆಯಂತೆ ಇಡೀ ಬ್ರಹ್ಮಾಂಡದ ಕೊಂಡಿ ಇರುವುದು "ಧ್ರುವನಕ್ಷತ್ರದಲ್ಲಿ"...  ಅದನ್ನು ಮೂಲವನ್ನಾಗಿಟ್ಟುಕೊಂಡಾಗ ಸೂರ್ಯನಿಗೂ ಇತರ ಗ್ರಹಗೋಲಗಳಂತೆ ಚಲನೆ ಇದೆ ಎನ್ನುತ್ತಾರೆ... ಅದರಿಂದ ಇಡೀ ಬ್ರಹ್ಮಾಂಡದ ನಿಯಂತ್ರಣ ಇರುವುದು ಧ್ರುವನಕ್ಷತ್ರದಲ್ಲಿ... ಧ್ರುವರಾಯನನ್ನು ತನ್ನ ಕೊಂಡಿಯಲ್ಲಿ ಧರಿಸಿರುವ ಶಿಂಶುಮಾರ ರೂಪಿ ಪರಮಾತ್ಮ ಸಂಕ್ರಮಣದ ಅಧಿದೇವತೆಯಾದ ಸೂರ್ಯನನ್ನೂ ಸಂಚರಿಸುವಂತೆ ಮಾಡುತ್ತಾನೆ...

ತಿಲಸ್ನಾಯೀ ತಿಲೋದ್ವರ್ತೀ
ತಿಲಹೋಮೀ ತಿಲೋದಕೀ | 
ತಿಲಭುಕ್ ತಿಲದಾತಾ ಚ 
ಷಟ್ತಿಲಾ ಪಾಪನಾಶಕಾಃ ||

"ತಿಲ" ಎಂದರೆ ಎಳ್ಳು... ಇದರಿಂದ ಹುಟ್ಟಿದ ಶಬ್ದವೇ ತೈಲ. ತೈಲ ಎಂದರೆ "ಎಳ್ಳೆಣ್ಣೆ" ಅಂತಲೇ ಅರ್ಥ... ಮಕರಸಂಕ್ರಮಣದಂದು ಎಳ್ಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು. ದೇವರ ಮುಂದೆ ಎಳ್ಳೆಣ್ಣೆ ದೀಪ ಹಚ್ಚುವುದು... ಎಳ್ಳು ಬಳಸಿ ಹೋಮಿಸುವುದು... ಪಿತೃಗಳಿಗೆ "ತಿಲತರ್ಪಣ"... ತಿಲಭಕ್ಷಣ - ಎಳ್ಳನೇ ಪ್ರಧಾನವಾಗಿ ಬಳಸಿದ ಖಾದ್ಯ ಭಕ್ಷಣ... ತಿಲದಾನ - ಅದಕೆಂದೇ ಹೆಣ್ಣುಮಕ್ಕಳು ಈ ದಿನ ಮನೆಮನೆಗೆ ಹೋಗಿ ಎಳ್ಳುಬೀರಿ ಬರುವುದು ನಮ್ಮಲ್ಲಿ ರೂಢಿಯಲ್ಲಿರುವ ಸಂಪ್ರದಾಯ... ಹೀಗೆ ಮಕರ ಸಂಕ್ರಮಣ ದಿನದಂದು ಮಾಡುವ "ಎಳ್ಳಿನ ಆರು ಬಗೆಯ" ಬಳಕೆಯಿಂದ ನಾವು ಕಳೆದ ಆರು ತಿಂಗಳಿನಲ್ಲಿ ಅಂದರೆ ದಕ್ಷಿಣಾಯನದಲ್ಲಿ ಮಾಡಿದ ಎಲ್ಲ ಪಾಪಗಳನ್ನು ಕಳೆದುಕೊಳ್ಳಬಹುದಾಗಿದೆ ಎನ್ನುತಾರೆ ಶಾಸ್ತ್ರಕಾರರು....

ಸಂಕ್ರಾಂತೌ ದತ್ತಾನಿ 
ಹವ್ಯಕವ್ಯಾನಿ ದಾತೃಭಿಃ | 
ತಾನಿ ನಿತ್ಯಂ ದದಾತ್ಯರ್ಕಃ
ಪುನರ್ಜನ್ಮನಿ ಜನ್ಮನಿ ||

ಹೀಗೆ ಸಂಕ್ರಮಣ ಸಮಯದಲ್ಲಿ ಮಾಡಿದ ದಾನ-ಧರ್ಮಗಳ ಪುಣ್ಯವನ್ನು ನಮ್ಮ ಅನೇಕ ಜನ್ಮಗಳಿಗೆ ರವಿ ರವಾನೆ ಮಾಡುತ್ತಾನೆ ಎನ್ನುತ್ತದೆ ಈ ಶ್ಲೋಕ...

ಎಳ್ಳಿನ ದಾನ :
ಎಳ್ಳನ್ನೇ ಪ್ರಧಾನವಾಗಿ ಬಳಸಿ ಅದರ ಜೊತೆಗೆ ಸಮ ಪ್ರಮಾಣದಲ್ಲಿ ಬೆರೆಸಿದ ಬೆಲ್ಲ, ಕೊಬ್ಬರಿ, ಸೇಂಗಾ (ಕಡ್ಲೇಕಾಯಿ ಬೀಜ), ಹುರಿಗಡಲೆಯಿಂದ ತಯಾರಿಸಲ್ಪಟ್ಟ, ಐದು ಪದಾರ್ಥಗಳ ಮಿಶ್ರಣವನ್ನು ದೇವರಿಗೆ ಸಮರ್ಪಣೆ ಮಾಡಿ ದಾನ ಮಾಡುವುದು, ದಾನ ತೆಗೆದುಕೊಳ್ಳುವುದು ಈ ಪ್ರಕ್ರಿಯೆಯಿಂದ ಬದುಕಿನಲ್ಲಿ ಬಂದೊದಗಬಹುದಾದ ಅಪಮೃತ್ಯುವನ್ನು ಪರಿಹರಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಶಾಸ್ತ್ರಕಾರರು.... ಅದರಿಂದಲೇ ನಮ್ಮಲ್ಲಿ ಒಂದು ನಾಣ್ಣುಡಿ ಚಾಲ್ತಿಯಲ್ಲಿದೆ -"ಎಳ್ಳುತಿಂದು ಒಳ್ಳೆಯ ಮಾತಾಡೋಣ" ಅಂತ...

ಇಂದು ನಾವು "ಸಕ್ಕರೆ" ಬಳಸಿ ಮಾಡುವ ಸಕ್ಕರೆ ಅಚ್ಚಿನ ದಾನ ಅಶಾಸ್ತ್ರೀಯಾ... ಇದು ಇತ್ತೀಚೆಗೆ ಬಂದ ಫ್ಯಾಶನ್ ಅಷ್ಟೇ... ಹಿಂದೆ ಸಕ್ಕರೆಗೆ ಪ್ರತಿಯಾಗಿ ಕಬ್ಬನ್ನು, ಬಾಳೆಹಣ್ಣನ್ನು ಮಾತ್ರ ಕೊಡುತ್ತಿದ್ದರು... ಇಂದು ಸ್ತ್ರೀಯರು ಮನೆ ಮನೆಗೆ ಹೋಗಿ ಎಳ್ಳು ಬೀರುತ್ತಾರೆ. ಇದರೊಟ್ಟಿಗೆ ಕಬ್ಬು, ಬಾಳೆಹಣ್ಣು ಪ್ರಕೃತಿಯೆ ಸಂಕ್ರಮಣಕ್ಕೆಂದು ಕೊಟ್ಟ ಸಿಹಿಪದಾರ್ಥವನ್ನು ದಾನ ಮಾಡುತ್ತಾರೆ...  ಈ ದಿವಸ ಕುಂಬಳಕಾಯಿ ದಾನವೂ ವಿಶೇಷ ಫಲಪ್ರದ.. ಈ ದಿವಸ ಅಧಿಕಾರಿಗಳು ಪಿತೃದೇವತೆಗಳಿಗೆ ತಿಲತರ್ಪಣವನ್ನು ಕೊಡಲೇಬೇಕು... ಇದು ಮಹಾಲಯದಂತೆ ವಿಹಿತಕಾರ್ಯ... ಹೀಗೆ ಸಂಕ್ರಮಣ ಕಾಲದಲ್ಲಿ ಮಾಡುವ ಎಲ್ಲ ಪುಣ್ಯಕಾರ್ಯವು ನಮಗೊದಗುವ ಅಪಮೃತ್ಯುವನ್ನು ಪರಿಹರಿಸಿ (ವಿಶೇಷವಾಗಿ ಬೆಲ್ಲದಾನ ಅಪಮೃತ್ಯುಪರಿಹಾರಕ) ಪುಣ್ಯವರ್ಧನೆಗೆ ಕಾರಣವಾಗುತ್ತದೆ..... ಹೀಗೆ ಉತ್ತರಾಯಣ ಪುಣ್ಯಕಾಲ ಅನಂತಫಲವೀವ ಪುಣ್ಯಕಾಲ. ಅದಕೆಂದೇ ಇಚ್ಛಾಮರಣಿಗಳಾದ ಭೀಷ್ಮಾಚಾರ್ಯರು ಮಹಾಭಾರತ ಯುದ್ಧ ಮುಗಿದ ಮೇಲೆ ಕೂಡ ಶರಶಯ್ಯೆಯಲ್ಲಿದ್ದೆ ಉತ್ತರಾಯಣ ಬರುವ ಪುಣ್ಯಕಾಲಕ್ಕಾಗಿ ಕಾದು ದೇಹತ್ಯಾಗ ಮಾಡಿದರು ಅನ್ನುತ್ತದೆ ಮಹಾಭಾರತ...
[Contributed by Shri Harish B S]

Monday, 23 October 2017

Balipadyami: Vamana Avatara ಬಲಿಪಾಡ್ಯಮೀ: ವಾಮನ ಅವತಾರ

ಬಲಿಪಾಡ್ಯಮೀ: ವಾಮನ ಅವತಾರ

ಭಗವಂತನ ಹತ್ತು ಅವತಾರಗಳಲ್ಲಿ ಎರಡು ಅವತಾರಗಳು ಒಂದೇ ವಂಶದ ಇಬ್ಬರು ಮಹಾನ್ ವ್ಯಕ್ತಿಗಳನ್ನು ಉದ್ಧರಿಸಿದ ಅವತಾರಗಳು... ಒಂದು ನರಸಿಂಹ ಮತ್ತೊಂದು ವಾಮನ... ಭಕ್ತ ಪ್ರಹ್ಲಾದನನ ಭಕ್ತಿಯ ಕರೆಗೆ ಓಗೊಟ್ಟ ರೂಪ ನರಸಿಂಹಾವತಾರವಾದರೆ ಅವನ ಮೊಮ್ಮಗ ಬಲಿಯನ್ನು ಉದ್ಧರಿಸಿದ ರೂಪ ವಾಮನಾವತಾರ...

ಇದರ ವಿಶೇಷತೆಯನ್ನು ನಾವು ನಿತ್ಯ ಸಂಧ್ಯಾವಂದನೆಯಲ್ಲಿ ಜಪಿಸುವ ಗಾಯತ್ರೀ ಮಂತ್ರದಿಂದ ಕೂಡ ತಿಳಿಯಬಹುದಾಗಿದೆ...

ವಿಶ್ವಾಮಿತ್ರ ಗಾಯತ್ರಿ ಮಂತ್ರದಲ್ಲಿ ಒಟ್ಟು ಹತ್ತು ಶಬ್ದಗಳಿವೆ... ಅಲ್ಲಿ ಹತ್ತು ಶಬ್ದಗಳೇ ಯಾಕಿವೆ ?... ಯಾಕಿವೆಯಂದರೆ ಇವು  ಸ್ಪಷ್ಟವಾಗಿ ಭಗವಂತನ ದಶಾವತಾರಗಳನ್ನು ಹೇಳುವ ಶಬ್ದಗಳಾಗಿವೆ. ಅದು ವಿಶೇಷ..

ಗಾಯತ್ರಿ ಮಂತ್ರದ ಆ ಹತ್ತು ಶಬ್ದಗಳು : ತತ್, ಸವಿತುಃ, ವರೇಣ್ಯಂ, ಭರ್ಗಃ, ದೇವಸ್ಯ. ಧೀಮಹಿ, ಧಿಯಃ, ಯಃ, ನಃ, ಪ್ರಚೋದಯಾತ್...

ತತ್ : ಮತ್ಸ್ಯಾವತಾರ
ಸವಿತುಃ : ಕೂರ್ಮಾವತಾರ
ವರೇಣ್ಯಂ : ವರಾಹಾವತಾರ
ಭರ್ಗಃ : ನರಸಿಂಹಾವತಾರ
ದೇವಸ್ಯ : ವಾಮನಾವತಾರ
ಧೀಮಹಿ : ಪರಶುರಾಮಾವತಾರ
ಧಿಯಃ : ರಾಮಾವತಾರ
ಯಃ : ಕೃಷ್ಣಾವತಾರ
ನಃ : ಬುದ್ಧಾವತಾರ
ಪ್ರಚೋದಯಾತ್ : ಕಲ್ಕ್ಯಾವತಾರ

ಈಗ ಗಾಯತ್ರಿಗೆ ಸಂಬಂಧಪಟ್ಟ ವಿಷಯ ಹೀಗಿದೆ :  ಗಾಯತ್ರಿ ಮಂತ್ರ ಅಂದರೆ ಮೂರ ಪಾದದ, ಒಂದೊಂದು ಪಾದದಲ್ಲೂ ಎಂಟೆಂಟು ಅಕ್ಷರಗಳಿರುವ ಗ್ರಾಯತ್ರೀ ಛಂದಸ್ಸಿನ ಒಂದು ಮಂತ್ರ...

ಯಾವುದೇ ಮಂತ್ರವಾಗಲಿ ಉಪಾಸನೆಯಲ್ಲಿ ನಾವು ಮೊದಲು ನೆನೆಯಬೇಕಾದದ್ದು, ಋಷಿ-ಛಂದಸ್ಸು-ದೇವತೆಯನ್ನು... ಅಂದರೆ ಆ ಮಂತ್ರವನ್ನು ಕಂಡ ಋಷಿ ಯಾರು ? ಆ ಮಂತ್ರ ಯಾವ ಛಂದಸ್ಸಿನಲ್ಲಿದೆ ? ಮತ್ತು ಆ ಮಂತ್ರ ಪ್ರತಿಪಾದ್ಯವಾದ ದೇವತೆ ಯಾರು ? ಯಾವುದೇ ಮಂತ್ರ ಪಠಿಸುವ ಮೊದಲು ಈ ಮೂರನ್ನು ನೆನಪಿಸಿಕೊಂಡ ಮೇಲೆಯೇ ಮಂತ್ರಜಪ...

ಸದ್ಯ ನಾವು ನಿತ್ಯ ಜಪಿಸುವ ಗಾಯತ್ರಿ ಮಂತ್ರವನ್ನು ಕಂಡ ಋಷಿ : ವಿಶ್ವಾಮಿತ್ರ ; ಛಂದಸ್ಸು: ಗಾಯತ್ರೀ; ದೇವತೆ : ಸೂರ್ಯನ ಅಂತರ್ಗತವಾದ ನಾರಾಯಣ ರೂಪ.. ಅದೇ ಸವಿತೃನಾರಾಯಣ ಅಥವಾ ಸೂರ್ಯನಾರಾಯಣ ರೂಪ...

ಯಾವುದೇ ಮಂತ್ರಕ್ಕೆ ಹೆಸರು ಬರುವುದು ಇದೇ ಮೂರು ಕಾರಣಗಳಿಂದ... ಮಂತ್ರವನ್ನು ಕಂಡ ಋಷಿಯಿಂದ ಅಥವಾ ಮಂತ್ರದ ಛಂದಸ್ಸಿನಿಂದ ಅಥವಾ ಆ ಮಂತ್ರ ಪ್ರತಿಪಾದ್ಯ ದೇವತೆಯಿಂದ...

ಎಂಟೆಂಟು ಅಕ್ಷರದ ಮೂರು ಪಾದಗಳುಳ್ಳ ಎಲ್ಲ ಮಂತ್ರಗಳೂ ಗಾಯತ್ರೀ ಮಂತ್ರಗಳೇ ಆದರೂ ವಿಶ್ವಾಮಿತ್ರ ಗಾಯತ್ರಿ ಮಾತ್ರ ಗಾಯತ್ರೀ ಮಂತ್ರ ಎಂದು ಕರೆಯಲ್ಪಡುವುದಕ್ಕೆ ಮುಖ್ಯ ಕಾರಣ ಈ ಮಂತ್ರಕ್ಕಿರುವ ವೈಶಿಷ್ಟ್ಯ ಹಾಗೂ "ಛಂದಸ್ಸಿ"ನಿಂದಲೇ ಗುರುತಿಸಲ್ಪಟ್ಟ ಮಂತ್ರ ಇದಾದದ್ದರಿಂದ...

ಈ ಗಾಯತ್ರಿಗೂ ಇಂದು ನಾವು ಬಲಿಪಾಡ್ಯಮೀ ದಿನದಂದು ನೆನೆಯುವ ವಾಮನ ರೂಪಕ್ಕೂ ಒಂದು ವಿಶೇಷವಾದ ಸಂಬಂಧ ಇದೆ... ಗಾಯತ್ರೀ ಮಂತ್ರದಲ್ಲಿ ಒಟ್ಟು ಇಪ್ಪತ್ತನಾಲ್ಕು ಅಕ್ಷರಗಳಿವೆ ಅಂತಾರೆ... ಆದರೆ ಎಣಿಸಿ ನೋಡಿ ! ಇರುವುದು ಇಪ್ಪತ್ತಮೂರೇ ಅಕ್ಷರಗಳು...

ತತ್ ಸವಿತುರ್ವರೇಣ್ಯಂ |
ಭರ್ಗೋದೇವಸ್ಯ ಧೀಮಹಿ |
ಧಿಯೋಯೋನಃ ಪ್ರಚೋದಯಾತ್ ||

7+8+8 = 23 (ತ್ - ಅರ್ಧ ಮಾತ್ರೆ ಅದನ್ನು ಪರಿಗಣಿಸುವಂತಿಲ್ಲ;
ಸಂಸ್ಕೃತ ಭಾಷೆಯಲ್ಲಿ ವರ್ಣಗಳನ್ನು ಅಂದರೆ ಅಕ್ಷರಗಳನ್ನು "ಮಾತ್ರೆಗಳು" ಅಂತ ಕರೆಯುತ್ತಾರೆ)...

ಮೊದಲ ಸಾಲು ಎಂಟಕ್ಷರ ಆಗಬೇಕೆಂದರೆ "ವರೇಣ್ಯಂ" ಶಬ್ದವನ್ನು ಜಪದಲ್ಲಿ ಬಿಡಿಸಿ ಉಚ್ಚರಿಸಬೇಕು "ವರೇಣಿಯಂ" ಅಂತ...
ಇದನ್ನು ಯಾಕೆ ಬಿಡಿಸಬೇಕು ? ಅದಕ್ಕೂ ಕಾರಣ ಉಂಟು...

ಯಾವುದೇ ವೇದ ಮಂತ್ರ ಕೂಡ ಅದು ನಿರ್ಮಾಣಗೊಂಡ ಒಂದೊಂದು ಅಕ್ಷರದಲ್ಲೂ ಒಂದೊಂದು ವಿಶೇಷತೆ ಅಡಗಿರುತ್ತದೆ... ಅದರಿಂದಲೇ ವೇದ ಮಂತ್ರಗಳನ್ನು ಜ್ಞಾನರಾಶಿಗಳು ಅಂತ ಕರೆದದ್ದು... "ವೇದ" means Knowledge.... ಋಗ್ವೇದದಲ್ಲಿ ಒಟ್ಟಾರೆ ಹತ್ತುಸಾವಿರ ಮಂತ್ರಗಳಿವೆ ಮತ್ತು ಒಟ್ಟು 4,32,000 ಅಕ್ಷರಗಳಿವೆ... ಇಷ್ಟು ಅಕ್ಷರಗಳಿಗೂ ಭಗವಂತನ ಒಂದೊಂದು ರೂಪಗಳಿವೆ.. ಅದರಿಂದ ಒಂದೊಂದು ಅಕ್ಷರಕ್ಕೂ ಆಳವಾದ ಅರ್ಥಗಳಿವೆ...

ಹಾಗೆಯೇ, ಗಾಯತ್ರೀ ಮಂತ್ರದಲ್ಲಿರುವ ಒಂದೊಂದು ಅಕ್ಷರವೂ ಕೂಡ ಭಗವಂತನ ಒಂದೊಂದು ರೂಪವನ್ನು ಹೇಳುತ್ತದೆ... ಯಾವುವು ಭಗವಂತನ ಆ ರೂಪಗಳು ? ಅವು ನಾವು ಆಚಮನ ಮಂತ್ರದಲ್ಲಿ ಹೇಳುವ
ಕೇಶವಾದಿ ಚತುರ್ವಿಂಶತಿ (24) ರೂಪಗಳು...

ತ(ತ್)- ಕೇಶವ; ಸ-ನಾರಾಯಣ; ವಿ-ಮಾಧವ; ತು-ಗೋವಿಂದ; ವ-ವಿಷ್ಣು ; ರೇ- ಮಧುಸೂದನ ; ಣ್ಯಂ-ತ್ರಿವಿಕ್ರಮ... ಈಗ ಸಿಕ್ಕಿತು ನೋಡಿ ವಾಮನಾವತಾರದ ಅರ್ಥ.. "ಣ್ಯಂ" ಅಕ್ಷರವನ್ನು "ಣಿಯಂ" ಎಂದು ಎರಡು ಅಕ್ಷರವಾಗಿ ಬಿಡಿಸಿಕೊಂಡರೆ "ಣಿ-ತ್ರಿವಿಕ್ರಮ; ಯಂ-ವಾಮನ" ಎಂಬ ಎರಡು ಭಗವಂತನ ರೂಪಗಳನ್ನು ಹೇಳುವ ಅಕ್ಷರಗಳಾಗುತ್ತವೆ...

ಎಂಥಾ ಅದ್ಭುತ ನೋಡಿ ! ತ್ರಿವಿಕ್ರಮ ಅಂತ ಭಗವಂತನ ಬೇರೊಂದು ರೂಪವಿಲ್ಲ...‌ ವಾಮನನೇ ಬೆಳೆದು ತ್ರಿವಿಕ್ರಮನಾದದ್ದು...‌ ಅದರಿಂದ "ಣ್ಯಂ" ಅಕ್ಷರವನ್ನು ಬಿಡಿಸಿಕೊಂಡು "ಣಿಯಂ" ಅಂತ ಎರಡು ಅಕ್ಷರ ಮಾಡಿಕೊಂಡಾಗ ಗಾಯತ್ರೀ ಮಂತ್ರದ ಮೂರು ಪಾದದಲ್ಲೂ 8+8+8= 24 ಅಕ್ಷರಗಳಾಗುತ್ತವೆ... ಈಗ ಇದು Perfect ಆಗಿ 24 ಅಕ್ಷರಗಳ ಗಾಯತ್ರೀ ಮಂತ್ರವಾಯಿತು... ಅದರಿಂದ ಜಪದಲ್ಲಿ ನಮ್ಮ ಮಂತ್ರೋಚ್ಚಾರ "ತತ್ ಸವಿತುರ್ವರೇಣಿಯಂ" ಅಂತ ಆಗಬೇಕು... ಅದು ಏಕೆ ಎಂಬುದೂ ಕೂಡ ಈಗ ಅರ್ಥವಾಯಿತು...
ಇದನ್ನೆಲ್ಲ ಹೀಗೆ ತಿಳಿಸಿಕೊಟ್ಟವರು ನಮ್ಮ ಪೂಜ್ಯ ಆಚಾರ್ಯರು... ಇದು ನಿಮ್ಮೆಲ್ಲರಿಗೂ ತಿಳಿದ ವಿಷಯವೇ ಆಗಿದೆ..‌‌. ಆದರೂ ಬಲಿಪಾಡ್ಯಮೀ ದಿನದ ವಿಶೇಷವಾಗಿ ಮೆಲುಕುಹಾಕುವುದಕ್ಕಷ್ಟೇ ಈ ಪ್ರಯತ್ನ ... ನಮಸ್ಕಾರ.
- By B S Harish

Wednesday, 20 January 2016

Sankranti - The Importance of Yellu (Sesame) and Bella (Jaggery)

ಸಂಕ್ರಾಂತಿ ಎಳ್ಳು-ಬೆಲ್ಲದ ಮಹತ್ವ by ಡಾ|| ಎಸ್. ಹೇಮಲತಾ
( "ವಿಕ್ರಮ" - ಆರ್.ಎಸ್.ಎಸ್. ವಾರಪತ್ರಿಕೆಯಲ್ಲಿ ಬಂದಿರುವ ಲೇಖನ...)
🔹🔹🔹🔹🔹🔹🔹🔹🔹🔹

ಸಂಕ್ರಾಂತಿ ಸಮೀಪಿಸಿತೆಂದರೆ ಎಲ್ಲರ ಮನೆಗಳಲ್ಲಿಯೂ ಎಳ್ಳು ಕೂಡಿಸುವ ಸಂಭ್ರಮ. ಭಾರತೀಯರ ಪ್ರತಿಯೊಂದು ಹಬ್ಬದಲ್ಲಿಯೂ ಕಾಲಕ್ಕೆ ತಕ್ಕಂತಹ ವಿಶೇಷ ಆಚರಣೆಗಳಿವೆ. ಈ ಪದ್ಧತಿಗಳ ಹಿಂದೆ ಅಡಗಿರುವ ವೈಜ್ಞಾನಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಅರ್ಥ ಮಾಡಿಕೊಂಡರೆ ಆಶ್ಚರ್ಯವೆನಿಸುತ್ತದೆ.

ಸಂಕ್ರಾಂತಿಯಲ್ಲಿ ಪ್ರಧಾನವಾಗಿ ಬಳಸುವ ಎಳ್ಳಿನ ಬಗ್ಗೆ ಈಗ ಸ್ವಲ್ಪ ಯೋಚಿಸೋಣ. ಎಳ್ಳು ನಮ್ಮ ಪ್ರಮುಖ ಬೆಳೆಯೂ ಹೌದು, ಆಹಾರ ಪದಾರ್ಥವೂ ಹೌದು. ಎಣ್ಣೆಯನ್ನು ತೆಗೆಯುವ ಹಲವು ಬೀಜಗಳಲ್ಲಿ ಅಂದಿನ ಕಾಲಕ್ಕೆ ಪ್ರಧಾನವಾದ ಬೀಜ ಇದಾಗಿತ್ತು.

ತಿಲವೆಂಬ ಇದರ ಸಂಸ್ಕೃತ ನಾಮಧೇಯ ‘ತಿಲಸ್ನೇಹೇ’ ಎಂಬ ಧಾತುವಿನಿಂದ ವ್ಯುತ್ಪನ್ನವಾಗಿದೆ. ಇದು ತುದಾದಿ ಗಣದ ಧಾತುವಾಗಿದೆ. ಇದಲ್ಲದೆ ‘ತಿಲ ಗತೌ’ ಎಂಬ ಭ್ವಾದಿಗಣದ ಧಾತು. ‘ತಿಲಸ್ನೇಹೇ’ ಎಂಬ ಚುರಾದಿಗಣದ ಧಾತುಗಳೂ ಇವೆ. ಒಟ್ಟಿನಲ್ಲಿ ಸ್ನೇಹವೆಂದರೆ ಅಂಟಿಕೊಳ್ಳುವ ಗುಣ ಅಥವ ಎಣ್ಣೆಯ ಅಂಶವೆಂದು ಮುಖ್ಯವಾದ ಅರ್ಥ. ದಾಸರು ಒಂದು ಹಾಡಿನಲ್ಲಿ, ‘ತೈಲಧಾರೆಯಂತೆ ಮನಸುಕೊಡು ಹರಿಯಲ್ಲಿ ಶಂಭೋ’ ಎಂದು ಹಾಡಿದ್ದಾರೆ. ಎಣ್ಣೆಯ ಧಾರೆ ಹೇಗೆ ಕಡಿವಡೆಯದೆ ನಿರಂತರವಾಗಿರುತ್ತದೆಯೋ ಹಾಗೆ ಸಮಾಜದಲ್ಲಿ ಪ್ರೀತಿ, ಭಕ್ತಿ ಮತ್ತು ಸ್ನೇಹಗಳು ನಿರಂತರವಾಗಿರಬೇಕು. ಇದರ ಸಂಕೇತವೇ ಈ ಎಳ್ಳು. ಸ್ನೇಹವು ಹೇಗಿರಬೇಕೆಂದರೆ :

ದರ್ಶನೇ ಸ್ಪರ್ಶನೇ ವಾಪಿ
ಶ್ರವಣೇ ಭಾಷಣೇಪಿ ವಾ |
ಯತ್ರ ದ್ರವತ್ಸಂತರಂಗಂ
ಸ ಸ್ನೇಹ ಇತಿ ಕಥ್ಯತೇ ॥

ಯಾರನ್ನಾದರೂ ನೋಡಿದರೆ, ಸ್ಪರ್ಶಿಸಿದರೆ, ಅವರ ಬಗ್ಗೆ ಕೇಳಿದರೆ, ಅವರೊಂದಿಗೆ ಮಾತನಾಡಿದರೆ, ಹೃದಯ ಕರಗಿಹೋಗುತ್ತದೆಯೋ ಅದೇ ಸ್ನೇಹ. ಇಂತಹ ಸ್ನೇಹದ ಸಂಕೇತ ಈ ಎಳ್ಳು. ಅದನ್ನು ಕುಟ್ಟಿದರೆ ಅದರ ಕಾಳುಗಳು ಒಂದಕ್ಕೊಂದು ಅಂಟಿಕೊಳ್ಳುವುವು. ಹಾಗೆಯೇ ಸ್ನೇಹವು ಎಡರುತೊಡರುಗಳಲ್ಲಿ ಗಟ್ಟಿಗೊಳ್ಳಬೇಕು. ಎಳ್ಳಿನಲ್ಲಿರುವ ತೈಲವು ಬತ್ತಿಯ ಮೂಲಕ ಏರಿ, ದೀಪವನ್ನು ಬೆಳಗಿಸುವಂತೆ, ಸ್ನೇಹವು ಹೃದಯದಲ್ಲಿ ಪ್ರೇಮಜ್ಯೋತಿಯನ್ನು ಬೆಳಗಿಸಬೇಕು. ಸ್ನೇಹಕ್ಕಾಗಿ ಎಳ್ಳು ತನ್ನನ್ನೇ ಅರ್ಪಿಸಿಕೊಳ್ಳುವಂತೆ ನಾವು ಗೆಳೆಯರಿಗಾಗಿ ಸಿದ್ಧವಿರಬೇಕು.

ಎಳ್ಳು ಸುಗ್ಗಿಯ ಸಂಕೇತವೂ ಹೌದು. ಸಂಕ್ರಾಂತಿ ಸುಗ್ಗಿಯ ಹಬ್ಬ. ಜಾನಪದ ಕವಿ ‘ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ ಎದ್ದೊಂದು ಗಳಿಗೆ ನೆನದೇನು’ ಎಂದು ಹಾಡಿರುತ್ತಾನೆ. ಹೀಗೆ ಎಳ್ಳು ಪ್ರಾತ:ಸ್ಮರಣೀಯವಾದ ದ್ರವ್ಯ. ಬೇರೆ ಬೇರೆ ಬೀಜಗಳಿಂದ ಎಣ್ಣೆ ತೆಗೆದರೂ ಅವೆಲ್ಲವನ್ನೂ ತಿಲದ ಹೆಸರಿನಲ್ಲಿ ತೈಲವೆಂದೇ ಕರೆಯುತ್ತಾರೆಯೇ ಹೊರತು ತಿಲದ ಎಣ್ಣೆಯನ್ನು ಬೇರೆ ಹೆಸರಿನಿಂದ ಕರೆಯುವುದಿಲ್ಲ. ‘ತಿಲಸ್ಯ ವಾ ತತ್ತದೃಶಸ್ಯ ವಾ ವಿಕಾರಂ ತೈಲಂ’ ಎಂದು ತಿಲವನ್ನೇ ಪ್ರಧಾನವಾಗಿ ಸ್ವೀಕರಿಸಿರುತ್ತಾರೆ. ಎಣ್ಣೆಯ ಕಾಳುಗಳಾದ ಕಡಲೆಕಾಯಿ, ಹರಳು, ಸಾಸಿವೆ ಮುಂತಾದವುಗಳನ್ನು ತೈಲಧಾನ್ಯಗಳೆಂದೇ ಕರೆಯುತ್ತಾರೆ.

ಎಳ್ಳು ಚೀನಾ ಮತ್ತು ಇಂಡಿಯಾ ದೇಶಗಳಲ್ಲಿ ಬೆಳೆಯುವ ಪ್ರಮುಖ ಬೆಳೆ. ನಾಲ್ಕು ತಿಂಗಳಲ್ಲಿ ಕಟಾವಿಗೆ ಬರುವ ಈ ಬೆಳೆ ಮಳೆಗಾಲದಲ್ಲಿ ಬಿತ್ತಿದರೆ ಸಂಕ್ರಾಂತಿಗೆ ಬೇಕಾದಷ್ಟು ಧಾನ್ಯವನ್ನು ಕೊಡುತ್ತದೆ. ಇದರಲ್ಲಿ ಬಿಳಿ ಮತ್ತು ಕರಿ ಎಳ್ಳುಗಳೆಂಬ ಮುಖ್ಯ ಪ್ರಭೇದಗಳಿವೆ. ಉತ್ತರ ಮತ್ತು ಮಧ್ಯಪ್ರದೇಶಗಳಲ್ಲಿ ಬಿಳಿ ಎಳ್ಳು, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕರಿ ಎಳ್ಳು ಹೆಚ್ಚಾಗಿ ಬೆಳೆಯುತ್ತದೆ. ಬಿಳಿಯ ಎಳ್ಳು ಹೆಚ್ಚಿನ ಎಣ್ಣೆಯ ಅಂಶವನ್ನು ಹೊಂದಿರುತ್ತದೆ. ಅದನ್ನೇ ನಾವು ಸಂಕ್ರಾಂತಿಯಲ್ಲಿ ಬಳಸುವುದು. ಕರಿಯ ಎಳ್ಳು ಪಿತೃಕಾರ್ಯಕ್ಕೆ ಶ್ರೇಷ್ಠವಾದುದು. ಪಿತೃಗಳಿಗೆ ಇದು ಪರಮಶ್ರೇಷ್ಠ ಭೋಜ್ಯವು.

ಪಿತೃಣಾಂ ಪರಮಂ ಭೋಜ್ಯಂ
ತಿಲಾಃ ಸೃಷ್ಟಾಃ ಸ್ವಯಂಭುವಾ |
ತಿಲದಾನೇನ ವೈ ತಸ್ಮಾತ್
ಪಿತೃಪಕ್ಷಃ ಪ್ರಮೋದತೇ ॥

ಎಂದು ಮಹಾಭಾರತದಲ್ಲಿ ಹೇಳಿದೆ. ಎಳ್ಳನ್ನು ಮಾಘಮಾಸದಲ್ಲಿ ದಾನ ಮಾಡುವವನು ನರಕವನ್ನು ನೋಡಬೇಕಾಗುವುದಿಲ್ಲ. ಅದು ಪುಷ್ಟಿಯನ್ನು ಕೊಡುತ್ತದೆ ಮತ್ತು ರೂಪವನ್ನು ವರ್ಧಿಸುತ್ತದೆ.

ಪೌಷ್ಟಿಕಾ ರೂಪದಾಶ್ಚೈವ
ತಥಾ ಪಾಪವಿನಾಶನಮ್ |
ತಸ್ಮಾತ್ ಸರ್ವಪ್ರದಾನೇಭ್ಯಃ
ತಿಲದಾನಂ ವಿಶಿಷ್ಯತೇ ॥

ವೈಜ್ಞಾನಿಕವಾಗಿಯೂ ಎಳ್ಳಿನಲ್ಲಿ ಕೊಬ್ಬಿನ ಅಂಶ ಇರುವುದರಿಂದ ಅದು ಪುಷ್ಟಿಯನ್ನು ನೀಡುತ್ತದೆ.ಅದರಿಂದ ದೇಹ ಸೌಂದರ್ಯ ಹೆಚ್ಚುತ್ತದೆ. ಎಣ್ಣೆಯ ಅಂಶ ಚರ್ಮವನ್ನು ಆರೋಗ್ಯವಾಗಿಡುವುದು ನಮಗೆಲ್ಲಾ ಗೊತ್ತಿರುವ ವಿಷಯ. ಈ ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಕಡಿಮೆಯಿರುವುದರಿಂದ ಚರ್ಮ ಒಡೆಯುತ್ತದೆ. ಎಳ್ಳು ಮತ್ತು ಉಳಿದ ಅದರ ಘಟಕಗಳು ಇದಕ್ಕೆ ಉತ್ತಮವಾದ ರೋಧವನ್ನು ಒದಗಿಸುತ್ತವೆ. ಆದ್ದರಿಂದ ತಿಲವನ್ನು ನಾವು ತಿನ್ನಬೇಕು ಮತ್ತು ದಾನ ಮಾಡಬೇಕು.

ಸಂಕ್ರಮಣದಲ್ಲಿ ಎಳ್ಳಿನ ದಾನ ಅಕ್ಷಯವಾದ ಫಲವನ್ನು ಕೊಡುತ್ತದೆಂದು ಯಮನೇ ಹೇಳಿರುತ್ತಾನೆ. ಯಮದೂತರು ತಪ್ಪಿನಿಂದ ಒಬ್ಬ ಬ್ರಾಹ್ಮಣನನ್ನು ನರಕಕ್ಕೆ ಒಯ್ದಿದ್ದರು. ಯಮನು ಅವನನ್ನು ಸತ್ಕರಿಸಿ, ಅವನೊಡನೆ ಧರ್ಮಸಂವಾದ ನಡೆಸಿ ಹಿಂದಕ್ಕೆ ಕಳಿಸಿಕೊಡುತ್ತಾನೆ. ಈ ಸಂದರ್ಭದಲ್ಲಿ ತಿಲದಾನದ ಮಹತ್ವವು ವಿಶೇಷವಾಗಿ ಹೇಳಲ್ಪಟ್ಟಿದೆ. ಎಳ್ಳಿನಿಂದ ಮಾಡಿದ ಗೋವನ್ನು ದಾನಮಾಡಿ, ಗೋದಾನದ ಫಲವನ್ನು ಪಡೆಯಬಹುದು.

ಎಳ್ಳು ಬಹುವಿಧವಾದ ಉಪಯೋಗವನ್ನು ಹೊಂದಿದೆ. ಅದನ್ನು ಆರು ವಿಧವಾಗಿ ಬಳಸಬಹುದೆಂದು ಕೆಳಗಿನ ಶ್ಲೋಕ ಹೇಳುತ್ತದೆ:

ತಿಲೋದ್ವರ್ತೀ ತಿಲಸ್ನಾಯೀ
ತಿಲಹೋಮೀ ತಿಲಪ್ರದಃ |
ತಿಲಭುಕ್ ತಿಲವಾಪೀ ಚ
ಷಟ್‌ತಿಲೇ ನಾವಸೀದತಿ ॥

ಎಳ್ಳಿನ ಎಣ್ಣೆಯಿಂದ ದೀಪ ಹಚ್ಚುವುದು, ಎಳ್ಳೆಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದು, ಎಳ್ಳನ್ನು ಹೋಮ ಮಾಡುವುದು, ದಾನ ಮಾಡುವುದು, ತಿನ್ನುವುದು ಮತ್ತು ಬಿತ್ತುವುದು, ಹೀಗೆ ಈ ಆರು ವಿಧಗಳಿಂದಲೂ ಎಳ್ಳನ್ನು ಬಳಸಿಕೊಳ್ಳುವವನು ನಾಶವಾಗುವುದಿಲ್ಲ. ಶನಿಗ್ರಹದ ಪೀಡಾಪರಿಹಾರಾರ್ಥವಾಗಿ ಎಳ್ಳಿನ ದೀಪ ಹಚ್ಚುವ ವಾಡಿಕೆಯಿದೆ. ಎಳ್ಳಿನ ದಾನವು ಪವಿತ್ರವೆಂದರೂ, ಬರಿಯ ಎಳ್ಳನ್ನು ದಾನವಾಗಿ ಯಾರೂ ಸ್ವೀಕರಿಸುವುದಿಲ್ಲ.

ಬ್ರಾಹ್ಮಣಃ ಪ್ರತಿಗೃಹ್ಣೀಯಾತ್
ವೃತ್ತ್ಯರ್ಥಂ ಸಾಧುತಸ್ತಥಾ |
ಅತ್ಯಲ್ಪಮಪಿ ಮಾತಂಗ
ತಿಲತಾಹಾಂಶ್ಚ ವರ್ಜಯೇತ್॥

ಎಂದು ಧರ್ಮಶಾಸ್ತ್ರ ಹೇಳುತ್ತದೆ. ಆನೆ, ಎಳ್ಳು ಮತ್ತು ಕಬ್ಬಿಣಗಳ ದಾನವನ್ನು ತೆಗೆದುಕೊಳ್ಳಬಾರದೆಂದು ಇಲ್ಲಿ ನಿಷೇಧಿಸಿದೆ. ಆದ್ದರಿಂದ ಬರಿಯ ಎಳ್ಳನ್ನು ದಾನ ಕೊಡಲು ಹೋದರೆ ಯಾರೂ ತೆಗೆದುಕೊಳ್ಳುವುದಿಲ್ಲ. ಅದಕ್ಕಾಗಿಯೇ ನಮ್ಮ ಹಿರಿಯರು ಉತ್ತರಾಯಣ ಪುಣ್ಯಕಾಲದಲ್ಲಿ ಈ ರೀತಿ ಎಳ್ಳನ್ನು ವಿನಿಮಯ ಮಾಡಿಕೊಳ್ಳುವ ಉಪಾಯವನ್ನು ಕಂಡುಕೊಂಡಿರುತ್ತಾರೆ.
ಎಳ್ಳಿನ ಜೊತೆಗೆ ಹುರಿದಕಡಲೆಬೀಜ, ಬೆಲ್ಲ, ಹುರಿಗಡಲೆ ಮತ್ತು ಕೊಬ್ಬರಿಯನ್ನು ಸೇರಿಸುವುದರಿಂದ ಅದರ ಪುಷ್ಟಿ ಮತ್ತು ರುಚಿಗಳೆರಡೂ ಹೆಚ್ಚುತ್ತವೆ. ಈ ಐದನ್ನೂ ಸೇರಿಸಿ ಮಾಡಿದ ಎಳ್ಳನ್ನು ಪಂಚಕಜ್ಜಾಯವೆಂದೂ ಕರೆಯುತ್ತಾರೆ. ಗಣಪತಿಗೂ ಇದು ಪ್ರಿಯವಾದ ತಿನಿಸು.

ಎಳ್ಳಿನಲ್ಲಿರುವ ಕಡಲೆಕಾಯಿ ಮುಂತಾದವುಗಳ ವಿಷಯ ಹೆಚ್ಚು ಹೇಳದಿದ್ದರೂ ಬೆಲ್ಲದ ವಿಷಯ ಹೇಳಲೇಬೇಕು. ಎಳ್ಳಿನ ಜೊತೆ ಬೆಲ್ಲ ಒಳ್ಳೆಯ ಜೋಡಿ. ಸಕ್ಕರೆ ಅಚ್ಚಿನ ಚೂರುಗಳಾಗಲೀ, ಜೀರಿಗೆ ಪೆಪ್ಪರುಮಿಂಟ್‌ಗಳಾಗಲೀ ಇದಕ್ಕೆ ಸರಿದೂಗಲಾರವು. ಎಳ್ಳಿನಲ್ಲಿ ಸ್ವಲ್ಪ ಒಗಚು ರುಚಿಯಿರುತ್ತದೆ. ಅದನ್ನು ಪ್ರತಿರೋಧಿಸಲು ಬೆಲ್ಲದ ಸವಿಯೇ ಬೇಕು. ಜೊತೆಗೆ 
ಎಳ್ಳು ಸ್ವಲ್ಪ ಪಿತ್ತಪ್ರಕೋಪವನ್ನು ಉಂಟುಮಾಡಬಹುದು.

ಕಡಲೆಕಾಯಿಬೀಜ ಮತ್ತು ಕೊಬ್ಬರಿ ಕೂಡ ಹಾಗೆಯೇ ಮಾಡುತ್ತವೆ. ಇವೆಲ್ಲ ದುಷ್ಪರಿಣಾಮಗಳನ್ನು ಕಡಿಮೆಮಾಡಿ, ಈ ತಿನಿಸನ್ನು ಸಂಪೂರ್ಣ ಆರೋಗ್ಯಕರವಾಗಿ ಮಾಡುವ ಒಂದೇ ಒಂದು ಘಟಕವೆಂದರೆ ಬೆಲ್ಲ.

ಹಿಂದಿನಿಂದಲೂ ಬೆಲ್ಲ ನಮ್ಮ ಗ್ರಾಮಗಳ ಗುಡಿಕೈಗಾರಿಕೆಯ ಉತ್ಪನ್ನ. ಯಾವುದೇ ರಾಸಾಯನಿಕ ವಸ್ತುಗಳ ಮಿಶ್ರಣವಿಲ್ಲದ ಸಂಪೂರ್ಣ ಸಾವಯವ ಆಹಾರ. ಸಕ್ಕರೆಯಲ್ಲಿ ಬಣ್ಣವನ್ನು ತೆಗೆಯಲು ಕೆಲವು ವಸ್ತುಗಳನ್ನು ಬಳಸುವುದುಂಟು. ಬೆಲ್ಲ ತನ್ನ ನೈಸರ್ಗಿಕ ಬಣ್ಣ ಮತ್ತು ರುಚಿಯನ್ನು ಉಳಿಸಿಕೊಂಡಿರುತ್ತದೆ. ಸಕ್ಕರೆಗಿಂತ ಮೃದುವಾಗಿಯೂ ಇದ್ದು, ಎಳ್ಳಿನೊಡನೆ ಹೊಂದಿಕೊಳ್ಳುತ್ತದೆ. ‘ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು’ ಎನ್ನುತ್ತಾರೆಯೇ ಹೊರತು ’ಎಳ್ಳು ಸಕ್ಕರೆ’ ಎನ್ನುವುದಿಲ್ಲ. ಬೆಲ್ಲ ತಂಪಾದ ಅನುಭವವನ್ನು ಕೊಡುವಂತೆ ಸಕ್ಕರೆ ಕೊಡುವುದಿಲ್ಲ. ಇಂದಿಗೂ ಹಳ್ಳಿಯ ಕಡೆ ರೈತರು ಬಿಸಿಲಿನಲ್ಲಿ ಕೆಲಸ ಮಾಡುವಾಗ ಬೆಲ್ಲದ ನೀರನ್ನು ಕುಡಿಯುತ್ತಾರೆ. ಮನೆಗೆ ಬಂದವರಿಗೂ ನೀರಿನ ಜೊತೆ ಬಾಯರಿಕೆಗೆ ಬೆಲ್ಲವನ್ನು ಕೊಡುತ್ತಾರೆ. ಬೆಲ್ಲದಲ್ಲಿ ನಾರಿನ ಆಂಶ, ಖನಿಜಾಂಶ ಮತ್ತು ಲವಣಗಳು ಸಕ್ಕರೆಗಿಂತ ಅಧಿಕವಾಗಿರುತ್ತವೆ. ಕಬ್ಬಿಣ, ಸುಣ್ಣ, ಪೊಟ್ಯಾಷಿಯಂ, ರಂಜಕ, ಮೆಗ್ನಿಷಿಯಂ ಮುಂತಾದವು ಹೆಚ್ಚಾಗಿರುವುದರಿಂದ ಇದು ಸಕ್ಕರೆಗಿಂತ ನಿಧಾನವಾಗಿ ಜೀರ್ಣವಾಗಿ ರಕ್ತವನ್ನು ಸೇರುತ್ತದೆ. ಸಕ್ಕರೆ ಕಾಹಿಲೆಯಿರುವವರಿಗೂ ಸಕ್ಕರೆಗಿಂತ ಬೆಲ್ಲ ಕಡಿಮೆ ಅಪಾಯಕಾರಿ. ಆದ್ದರಿಂದ ಎಳ್ಳಿನ ಜೊತೆಗೆ ಬೆಲ್ಲವೇ ಸರಿಯಾದ ಜೋಡಿ. ಎಳ್ಳಿನಿಂದ ಮಾಡುವ ಚಿಗಳಿ, ಎಳ್ಳುಂಡೆ ಮುಂತಾದ ಖಾದ್ಯಗಳಿಗೂ ಬೆಲ್ಲವನ್ನೇ ಹಾಕುತ್ತಾರೆ. ಎಳ್ಳು ಬೆಲ್ಲ ಸೇರಿದ ಚಿಗಳಿಯನ್ನು ಋತುಮತಿಯಾದ ಹೆಣ್ಣುಮಕ್ಕಳಿಗೆ ತುಪ್ಪದ ಜೊತೆ ಆರೈಕೆಗೆ ಕೊಡುತ್ತಾರೆ. ಇದು ಸೊಂಟಕ್ಕೆ ಶಕ್ತಿಯನ್ನು ನೀಡುತ್ತದೆ.

ಸಂಕ್ರಾಂತಿಯಲ್ಲಿ ಹೀಗೆ ತಯಾರಿಸಿದ ಎಳ್ಳನ್ನು ಬಾಂಧವರಿಗೆ ಮತ್ತು ಸ್ನೇಹಿತರಿಗೆ ಹಂಚುವುದು ಮತ್ತೊಂದು ಸಡಗರ. ವರ್ಷಕ್ಕೊಮ್ಮೆಯಾದರೂ ಬಂಧುಗಳನ್ನು ಭೇಟಿಮಾಡಿ, ಕಷ್ಟಸುಖಗಳನ್ನು ಹಂಚಿಕೊಳ್ಳಲು ಇದೊಂದು ಸದಾವಕಾಶ. ಒಂದೇ ಊರು-ಕೇರಿಯಲ್ಲಿದ್ದರೂ, ಒಬ್ಬರನ್ನೊಬ್ಬರು ಸಂಧಿಸುವುದು ಮತ್ತು ಮಾತನಾಡುವುದು ಇತ್ತೀಚೆಗೆ ಅಪರೂಪವಾಗಿಬಿಟ್ಟಿದೆ. ಸಂಕ್ರಾಂತಿಯ ಎಳ್ಳು ಈ ವಿಷಯದಲ್ಲಿ ಸಂಪರ್ಕ ಸೇತುವೆಯಾಗಿ ಕೆಲಸಮಾಡುತ್ತದೆ.

ಎಳ್ಳಿನ ಜೊತೆಗೆ ಕಬ್ಬು, ಸಕ್ಕರೆಅಚ್ಚು ಮತ್ತು ಹಣ್ಣುಗಳನ್ನು ಹಂಚುತ್ತಾರೆ. ಕಬ್ಬು ಸುಗ್ಗಿಯ ಸಂಕೇತ. ಎಲ್ಲ ದೇವತೆಗಳ ಕೈಯಲ್ಲಿಯೂ ವಿರಾಜಿಸುವ ವಿಶೇಷ ವಸ್ತುವಿದು. ಅದರ ಗಿಣ್ಣುಗಳಿಗೆ ಪರ್ವವೆಂದು ಹೆಸರು. ಹಬ್ಬಕ್ಕೂ ಸಂಸ್ಕೃತದಲ್ಲಿ ಪರ್ವವೆಂದೇ ಹೆಸರು. ಸಕ್ಕರೆ ಅಚ್ಚಿನಲ್ಲಿ ವಿವಿಧ ಆಕಾರಗಳನ್ನು ಮೂಡಿಸುವ ಕಲೆ ಈ ಸಮಯದಲ್ಲಿಯೇ ಅಭಿವ್ಯಕ್ತಗೊಳ್ಳಬೇಕು.


ಈ ಹಬ್ಬದಿಂದ ಮುಂದೆ ಸೂರ್ಯ ಉತ್ತರದ ಕಡೆಗೆ ಚಲಿಸುತ್ತಾನೆ. ದೇವತೆಗಳ ಹಗಲು ಪ್ರಾರಂಭವಾಗಿ ಮುಂದೆ ಶುಭಕಾರ್ಯಗಳಿಗೆ ಪ್ರಶಸ್ತವೆನಿಸುತ್ತದೆ. ಗೋಪೂಜೆಯೂ ಈ ಹಬ್ಬದ ಇನ್ನೊಂದು ವಿಶೇಷ. ನಮ್ಮ ಸುಖಜೀವನಕ್ಕೆ ಸಹಾಯವಾಗಿರುವ ಸೂರ್ಯ, ಗೋವು, ಬಂಧುಗಳು, ಎಲ್ಲವನ್ನೂ ನೆನಪಿಗೆ ತಂದುಕೊಡುವ ವಿಶೇಷ ಅವಕಾಶವಿದು. ಅಂದಿನಿಂದ ಅನೇಕ ಸಂಕ್ರಾಂತಿ ವ್ರತಗಳನ್ನು ಮಾಡಬಹುದು. ಧಾನ್ಯ ಸಂಕ್ರಾಂತಿ, ಲವಣ, ಭೋಗ (ಅಕ್ಕಿ ಮತ್ತು ಬೆಲ್ಲ), ರೂಪ (ತುಪ್ಪ), ಜ್ಯೋತಿ ಸೌಭಾಗ್ಯ, ತಾಂಬೂಲ, ಮನೋರಥ (ಬೆಲ್ಲ), ಆಯಸ್ಸು (ಹಾಲುತುಪ್ಪ) ಈ ರೀತಿ ಅನೇಕ ಸಂಕ್ರಾಂತಿ ವ್ರತಗಳು ಹೇಳಲ್ಪಟ್ಟಿವೆ. ಸಂಕ್ರಮಣ ಕಾಲದಲ್ಲಿ ವರ್ಷಪೂರ್ತಿ ಮಾಡುವ ವ್ರತಗಳಿವು. ಇವು ಮನಸ್ಸಿಗೆ ಶುದ್ಧತೆಯನ್ನು ನೀಡುತ್ತದೆ. ಹೀಗೆ ಸಂಕ್ರಾಂತಿ ನಮಗೆ ಇಹಪರಗಳೆರಡನ್ನೂ ಸಾಧಿಸುವ ವಿಶಿಷ್ಟ ಹಬ್ಬವಾಗಿದೆ...

(Contributed by Shri B.S.Harish,,,)