Monday, 15 January 2018

ಸಂಕ್ರಾಂತಿಯ ಸಂದೇಶ :

ರವಿಸಂಕ್ರಮಣೇ ಪ್ರಾಪ್ತೇ 
ನ ಸ್ನಾಯಾತ್ ಯಸ್ತು ಮಾನವಃ |
ಸಪ್ತಜನ್ಮಸು ರೋಗೀ ಸ್ಯಾತ್
ನಿರ್ಧನಶ್ಚೈವ ಜಾಯತೇ ||

ಸಂಕ್ರಮಣದ ಮಹತ್ವವನ್ನು ತಿಳಿಸಿಕೊಡುವ ಈ ಶ್ಲೋಕದಲ್ಲಿ ಹೇಳಲ್ಪಟ್ಟಂತೆ, ನಿತ್ಯವೂ ನಾವು ಸ್ನಾನ, ಜಪ-ತಪ-ತರ್ಪಣಾದಿಗಳನ್ನು ಮಾಡುತ್ತೇವೆಯಾದರೂ, ಸಂಕ್ರಮಣ ಕಾಲದಲ್ಲಿ ಮಾಡುವ ಸ್ನಾನ-ಜಪ-ತರ್ಪಣಾದಿಗಳು ವಿಶೇಷ ಫಲದಾಯಕ ಹಾಗು ಅವಶ್ಯಮಾಡಲೇಬೇಕಾದುದು. ಇಲ್ಲವಾದಲ್ಲಿ ಅದು ಏಳು ಜನ್ಮಗಳಲ್ಲಿ ಆರೋಗ್ಯನಾಶ, ಸಂಪತ್ತುನಾಶಕ್ಕೆ ಕಾರಣವಾಗಿ ಆಯಾ ಜನ್ಮಗಳಲ್ಲಿನ ದಾರಿದ್ರ್ಯತೆಗೆ ಕಾರಣವಾಗತ್ತದೆ ಅನ್ನುವ ಸಂದೇಶವನ್ನು ಈ ಶ್ಲೋಕದಲ್ಲಿ ಕೊಟ್ಟಿದ್ದಾರೆ. ಅಂದರೆ ಸಂಕ್ರಮಣಕ್ಕಿರುವ ಮಹತ್ವವನ್ನು ಇದು ಹೇಳುತ್ತದೆ... ಹೇಗೆ ಗ್ರಹಣ ಕಾಲದಲ್ಲಿ ಗಾಯತ್ರೀ ಅಥವಾ ಯಾವುದೇ ಮಂತ್ರ ಜಪ ಅತ್ಯುನ್ನತ ಫಲವನ್ನು ಕೊಡುತ್ತದೋ ಹಾಗೆ...

ನಮ್ಮಲ್ಲಿ "ಆರೋಗ್ಯಂ ಆದಿತ್ಯಾದಿಚ್ಛೇತ್" ಎಂಬ ಮಾತು ಬಳಕೆಯಲ್ಲಿದೆ. ಸೌರಶಕ್ತಿಯ ಮೂಲಕ ಜಗತ್ತಿನ ಎಲ್ಲ ಜೀವರಾಶಿಗಳಿಗೆ ಆರೋಗ್ಯ ನೀಡುವವನು ಸೂರ್ಯ... ಸೂರ್ಯದೇವ ನಾವು ಪರ್ವಕಾಲಗಳಲ್ಲಿ ಮಾಡುವ ಪುಣ್ಯಕರ್ಮಗಳ ಫಲವನ್ನು ಅನೇಕ ಜನ್ಮಗಳಿಗೆ ಕೊಂಡೊಯ್ದು ತಲುಪಿಸುತ್ತಾನೆ ಎಂಬ ಮಾತನ್ನು ಕೂಡ ಶಾಸ್ತ್ರಕಾರರು ಹೇಳುತ್ತಾರೆ...

ಸಂಕ್ರಮಣ ಎಂದರೇನು ? ರವಿಯು ಮೇಷದಿಂದ-ಮೀನದತನಕ ಹನ್ನೆರಡು ರಾಶಿಗಳಲ್ಲಿ, ಅಂದರೆ ತಿಂಗಳಿಗೊಂದು ರಾಶಿಯಂತೆ ಹನ್ನೆರಡು ರಾಶಿಗಳಲ್ಲಿ ಸಂಚರಿಸುತ್ತಾನೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕಾಲಘಟ್ಟಕ್ಕೆ "ಸಂಕ್ರಮಣ" ಎಂದು ಹೆಸರು... ಈ ಹನ್ನೆರಡು ಸಂಕ್ರಮಣವೂ ನಡೆಯುವುದು ಒಂದು ನಿರ್ದಿಷ್ಟವಾದ ದಿನಾಂಕದಂದು... ಅದನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದಾಗಿದೆ...

ಸೂರ್ಯ ಮೇಷ ರಾಶಿಯನ್ನು ಏಪ್ರಿಲ್ ತಿಂಗಳ 13-14 ರಂದು ಪ್ರವೇಶಿಸುವನು....
ವೃಷಭ ರಾಶಿಯನ್ನು ಮೇ 14-15 ರಂದು ಪ್ರವೇಶಿಸುವನು....
ಮಿಥುನ ರಾಶಿಯನ್ನು ಜೂನ್ 14-15 ರಂದು...
ಕಟಕ ರಾಶಿಯನ್ನು ಜುಲೈ 16- 17 ರಂದು...
ಸಿಂಹ ರಾಶಿಯನ್ನು ಆಗಸ್ಟ್ 16-17 ರಂದು...
ಕನ್ಯಾ ರಾಶಿಯನ್ನು ಸೆಪ್ಟೆಂಬರ್ 16- 17 ರಂದು...
ತುಲಾ ರಾಶಿಯನ್ನು ಅಕ್ಟೋಬರ್ 16-17 ರಂದು...
ವೃಶ್ಚಿಕ ರಾಶಿಯನ್ನು ನವೆಂಬರ್ 15-16 ರಂದು...
ಧನು ರಾಶಿಯನ್ನು ಡಿಸೆಂಬರ್ 15-16 ರಂದು...
ಮಕರ ರಾಶಿಯನ್ನು ಜನವರಿ 13-14 ರಂದು....
ಕುಂಭ ರಾಶಿಯನ್ನು ಫೆಬ್ರವರಿ 12-13 ರಂದು...
ಮೀನ ರಾಶಿಯನ್ನು ಮಾರ್ಚ್ 14-15 ರಂದು ಪ್ರವೇಶಿಸುವನು....

ರವಿಯು ಸಂಚರಿಸುವ ಈ ಹನ್ನೆರಡು ತಿಂಗಳುಗಳಲ್ಲಿ ಆರು ತಿಂಗಳು ಉತ್ತರಾಯಣವೆಂದು ಮತ್ತೆ ಆರು ತಿಂಗಳು ದಕ್ಷಿಣಾಯವೆಂದು ಕರೆಯುತ್ತಾರೆ.... ಇದು ದೇವತೆಗಳ ಒಂದು ಹಗಲು ಮತ್ತು ರಾತ್ರಿ ಕೂಡ ಹೌದು...‌

ರವಿಯು ಕಟಕದಿಂದ - ಧನುರ್ರಾಶಿಯ ತನಕ ಸಂಚರಿಸುವ ಕಾಲಘಟ್ಟಕ್ಕೆ "ದಕ್ಷಿಣಾಯನ" ಎನ್ನುತ್ತಾರೆ.... ಅದೇ
ರವಿ ಮಕರದಿಂದ - ಮಿಥುನರಾಶಿಯ ತನಕ ಸಂಚರಿಸುವ ಕಾಲಘಟ್ಟಕ್ಕೆ "ಉತ್ತರಾಯಣ" ಎನ್ನುತ್ತಾರೆ....

ದಕ್ಷಿಣಾಯನ : ರವಿಯು ಭೂಮಧ್ಯರೇಖೆಗೆ ದಕ್ಷಿಣಾಭಿಮುಖವಾಗಿ ಸಂಚರಿಸುವ ಕಾಲ "ದಕ್ಷಿಣಾಯಣ". ಇದು ಸಾಮಾನ್ಯವಾಗಿ ಶ್ರಾವಣ ಮಾಸದಿಂದ ಪ್ರಾರಂಭವಾಗಿ ಪುಷ್ಯಮಾಸದವರೆಗೆ ಇರುತ್ತದೆ.

ಉತ್ತರಾಯಣ : ರವಿಯು ಭೂಮಧ್ಯರೇಖೆಗೆ ಉತ್ತರಾಭಿಮುಖವಾಗಿ ಸಂಚರಿಸುವ ಕಾಲಕ್ಕೆ "ಉತ್ತರಾಯಣ" ಕಾಲವೆಂದು ಹೆಸರು. ಇದು ಸಾಮಾನ್ಯವಾಗಿ ಮಾಘಮಾಸದಿಂದ ಭಾದ್ರಪದ ಮಾಸದವರೆಗೆ ಇರುತ್ತದೆ.

ವಿಜ್ಞಾನದ ಪ್ರಕಾರ ಸೂರ್ಯ ಸುತ್ತುವುದಿಲ್ಲ ಅವನ ಸುತ್ತ ಉಳಿದ ಗ್ರಹಗಳು ಸುತ್ತುತ್ತವೆ ಅಂತ.. ಶಾಸ್ತ್ರಕಾರರ ಒಂದು ನಂಬಿಕೆಯಂತೆ ಇಡೀ ಬ್ರಹ್ಮಾಂಡದ ಕೊಂಡಿ ಇರುವುದು "ಧ್ರುವನಕ್ಷತ್ರದಲ್ಲಿ"...  ಅದನ್ನು ಮೂಲವನ್ನಾಗಿಟ್ಟುಕೊಂಡಾಗ ಸೂರ್ಯನಿಗೂ ಇತರ ಗ್ರಹಗೋಲಗಳಂತೆ ಚಲನೆ ಇದೆ ಎನ್ನುತ್ತಾರೆ... ಅದರಿಂದ ಇಡೀ ಬ್ರಹ್ಮಾಂಡದ ನಿಯಂತ್ರಣ ಇರುವುದು ಧ್ರುವನಕ್ಷತ್ರದಲ್ಲಿ... ಧ್ರುವರಾಯನನ್ನು ತನ್ನ ಕೊಂಡಿಯಲ್ಲಿ ಧರಿಸಿರುವ ಶಿಂಶುಮಾರ ರೂಪಿ ಪರಮಾತ್ಮ ಸಂಕ್ರಮಣದ ಅಧಿದೇವತೆಯಾದ ಸೂರ್ಯನನ್ನೂ ಸಂಚರಿಸುವಂತೆ ಮಾಡುತ್ತಾನೆ...

ತಿಲಸ್ನಾಯೀ ತಿಲೋದ್ವರ್ತೀ
ತಿಲಹೋಮೀ ತಿಲೋದಕೀ | 
ತಿಲಭುಕ್ ತಿಲದಾತಾ ಚ 
ಷಟ್ತಿಲಾ ಪಾಪನಾಶಕಾಃ ||

"ತಿಲ" ಎಂದರೆ ಎಳ್ಳು... ಇದರಿಂದ ಹುಟ್ಟಿದ ಶಬ್ದವೇ ತೈಲ. ತೈಲ ಎಂದರೆ "ಎಳ್ಳೆಣ್ಣೆ" ಅಂತಲೇ ಅರ್ಥ... ಮಕರಸಂಕ್ರಮಣದಂದು ಎಳ್ಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡುವುದು. ದೇವರ ಮುಂದೆ ಎಳ್ಳೆಣ್ಣೆ ದೀಪ ಹಚ್ಚುವುದು... ಎಳ್ಳು ಬಳಸಿ ಹೋಮಿಸುವುದು... ಪಿತೃಗಳಿಗೆ "ತಿಲತರ್ಪಣ"... ತಿಲಭಕ್ಷಣ - ಎಳ್ಳನೇ ಪ್ರಧಾನವಾಗಿ ಬಳಸಿದ ಖಾದ್ಯ ಭಕ್ಷಣ... ತಿಲದಾನ - ಅದಕೆಂದೇ ಹೆಣ್ಣುಮಕ್ಕಳು ಈ ದಿನ ಮನೆಮನೆಗೆ ಹೋಗಿ ಎಳ್ಳುಬೀರಿ ಬರುವುದು ನಮ್ಮಲ್ಲಿ ರೂಢಿಯಲ್ಲಿರುವ ಸಂಪ್ರದಾಯ... ಹೀಗೆ ಮಕರ ಸಂಕ್ರಮಣ ದಿನದಂದು ಮಾಡುವ "ಎಳ್ಳಿನ ಆರು ಬಗೆಯ" ಬಳಕೆಯಿಂದ ನಾವು ಕಳೆದ ಆರು ತಿಂಗಳಿನಲ್ಲಿ ಅಂದರೆ ದಕ್ಷಿಣಾಯನದಲ್ಲಿ ಮಾಡಿದ ಎಲ್ಲ ಪಾಪಗಳನ್ನು ಕಳೆದುಕೊಳ್ಳಬಹುದಾಗಿದೆ ಎನ್ನುತಾರೆ ಶಾಸ್ತ್ರಕಾರರು....

ಸಂಕ್ರಾಂತೌ ದತ್ತಾನಿ 
ಹವ್ಯಕವ್ಯಾನಿ ದಾತೃಭಿಃ | 
ತಾನಿ ನಿತ್ಯಂ ದದಾತ್ಯರ್ಕಃ
ಪುನರ್ಜನ್ಮನಿ ಜನ್ಮನಿ ||

ಹೀಗೆ ಸಂಕ್ರಮಣ ಸಮಯದಲ್ಲಿ ಮಾಡಿದ ದಾನ-ಧರ್ಮಗಳ ಪುಣ್ಯವನ್ನು ನಮ್ಮ ಅನೇಕ ಜನ್ಮಗಳಿಗೆ ರವಿ ರವಾನೆ ಮಾಡುತ್ತಾನೆ ಎನ್ನುತ್ತದೆ ಈ ಶ್ಲೋಕ...

ಎಳ್ಳಿನ ದಾನ :
ಎಳ್ಳನ್ನೇ ಪ್ರಧಾನವಾಗಿ ಬಳಸಿ ಅದರ ಜೊತೆಗೆ ಸಮ ಪ್ರಮಾಣದಲ್ಲಿ ಬೆರೆಸಿದ ಬೆಲ್ಲ, ಕೊಬ್ಬರಿ, ಸೇಂಗಾ (ಕಡ್ಲೇಕಾಯಿ ಬೀಜ), ಹುರಿಗಡಲೆಯಿಂದ ತಯಾರಿಸಲ್ಪಟ್ಟ, ಐದು ಪದಾರ್ಥಗಳ ಮಿಶ್ರಣವನ್ನು ದೇವರಿಗೆ ಸಮರ್ಪಣೆ ಮಾಡಿ ದಾನ ಮಾಡುವುದು, ದಾನ ತೆಗೆದುಕೊಳ್ಳುವುದು ಈ ಪ್ರಕ್ರಿಯೆಯಿಂದ ಬದುಕಿನಲ್ಲಿ ಬಂದೊದಗಬಹುದಾದ ಅಪಮೃತ್ಯುವನ್ನು ಪರಿಹರಿಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಶಾಸ್ತ್ರಕಾರರು.... ಅದರಿಂದಲೇ ನಮ್ಮಲ್ಲಿ ಒಂದು ನಾಣ್ಣುಡಿ ಚಾಲ್ತಿಯಲ್ಲಿದೆ -"ಎಳ್ಳುತಿಂದು ಒಳ್ಳೆಯ ಮಾತಾಡೋಣ" ಅಂತ...

ಇಂದು ನಾವು "ಸಕ್ಕರೆ" ಬಳಸಿ ಮಾಡುವ ಸಕ್ಕರೆ ಅಚ್ಚಿನ ದಾನ ಅಶಾಸ್ತ್ರೀಯಾ... ಇದು ಇತ್ತೀಚೆಗೆ ಬಂದ ಫ್ಯಾಶನ್ ಅಷ್ಟೇ... ಹಿಂದೆ ಸಕ್ಕರೆಗೆ ಪ್ರತಿಯಾಗಿ ಕಬ್ಬನ್ನು, ಬಾಳೆಹಣ್ಣನ್ನು ಮಾತ್ರ ಕೊಡುತ್ತಿದ್ದರು... ಇಂದು ಸ್ತ್ರೀಯರು ಮನೆ ಮನೆಗೆ ಹೋಗಿ ಎಳ್ಳು ಬೀರುತ್ತಾರೆ. ಇದರೊಟ್ಟಿಗೆ ಕಬ್ಬು, ಬಾಳೆಹಣ್ಣು ಪ್ರಕೃತಿಯೆ ಸಂಕ್ರಮಣಕ್ಕೆಂದು ಕೊಟ್ಟ ಸಿಹಿಪದಾರ್ಥವನ್ನು ದಾನ ಮಾಡುತ್ತಾರೆ...  ಈ ದಿವಸ ಕುಂಬಳಕಾಯಿ ದಾನವೂ ವಿಶೇಷ ಫಲಪ್ರದ.. ಈ ದಿವಸ ಅಧಿಕಾರಿಗಳು ಪಿತೃದೇವತೆಗಳಿಗೆ ತಿಲತರ್ಪಣವನ್ನು ಕೊಡಲೇಬೇಕು... ಇದು ಮಹಾಲಯದಂತೆ ವಿಹಿತಕಾರ್ಯ... ಹೀಗೆ ಸಂಕ್ರಮಣ ಕಾಲದಲ್ಲಿ ಮಾಡುವ ಎಲ್ಲ ಪುಣ್ಯಕಾರ್ಯವು ನಮಗೊದಗುವ ಅಪಮೃತ್ಯುವನ್ನು ಪರಿಹರಿಸಿ (ವಿಶೇಷವಾಗಿ ಬೆಲ್ಲದಾನ ಅಪಮೃತ್ಯುಪರಿಹಾರಕ) ಪುಣ್ಯವರ್ಧನೆಗೆ ಕಾರಣವಾಗುತ್ತದೆ..... ಹೀಗೆ ಉತ್ತರಾಯಣ ಪುಣ್ಯಕಾಲ ಅನಂತಫಲವೀವ ಪುಣ್ಯಕಾಲ. ಅದಕೆಂದೇ ಇಚ್ಛಾಮರಣಿಗಳಾದ ಭೀಷ್ಮಾಚಾರ್ಯರು ಮಹಾಭಾರತ ಯುದ್ಧ ಮುಗಿದ ಮೇಲೆ ಕೂಡ ಶರಶಯ್ಯೆಯಲ್ಲಿದ್ದೆ ಉತ್ತರಾಯಣ ಬರುವ ಪುಣ್ಯಕಾಲಕ್ಕಾಗಿ ಕಾದು ದೇಹತ್ಯಾಗ ಮಾಡಿದರು ಅನ್ನುತ್ತದೆ ಮಹಾಭಾರತ...
[Contributed by Shri Harish B S]

No comments:

Post a Comment

ಗೋ-ಕುಲ Go-Kula