Saturday 13 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 82 - 84

(ಏಕಾಗಬಾರದು ರಾಮ ಕೃಷ್ಣರು ಕೇವಲ ಆದರ್ಶ ಮಾನವರು?
ನಾವೇಕೆ ಒಪ್ಪಿಕೊಳ್ಳಬೇಕು ಮಾನವರಲ್ಲ ಅವರು --ದೇವರು?
ಸರ್ವಸಮ್ಮತ ಗೀತೆಯಲ್ಲಿ ಉತ್ತರಿಸಿದ್ದಾನೆ ಇದಕೆ ಗೀತಾಚಾರ್ಯ,
ಅವನ್ನೇ ಉಲ್ಲೇಖಿಸಿ ನಿರ್ಣಯ ನೀಡಿದ್ದಾರೆ ಶ್ರೀ  ಮಧ್ವಾಚಾರ್ಯ).

ಜ್ಞಾನಂ ತೇsಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ ।
ಯಜ್ಜ್ಞಾತ್ವಾ ನೇಹ ಭೂಯೋsನ್ಯಜ್ಜ್ಞಾತವ್ಯಮವಶಿಷ್ಯತೇ ॥೨.೮೨॥

ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಳಯಸ್ತಥಾ ।
ಮತ್ತಃ ಪರತರಂ ನಾನ್ಯತ್ ಕಿಞ್ಚಿದಸ್ತಿ ಧನಞ್ಜಯ ॥೨.೮೩॥

ಗೀತೋಪದೇಶದ ಮಧ್ಯೆ ಕೃಷ್ಣ ಅರ್ಜುನಗೆ ಹೇಳುವ ವಿಚಾರ,
ಅದನ್ನ ತಿಳಿದರೆ ಮತ್ತೇನೂ ತಿಳಿಯುವಂಥದ್ದಿರುವುದಿಲ್ಲ ಸಾರ,
ನಾನೇ ಈ ಜಗದ ಹುಟ್ಟು ಸಾವುಗಳಿಗೆ ಕಾರಣ,
ನಾನೇ ಜನಕ-ನನ್ನಿಂದಲೇ ಸಂಹಾರಕ ಮಾರಣ,
ನನ್ನಲ್ಲೇ ಇರುವುದು ಎಲ್ಲದರ ಮೂಲ ಸತ್ವ,
ನನಗಿಂತ ಬೇರಿಲ್ಲ ಇನ್ನೊಂದು ಪರತರ ತತ್ವ.

ಅವಜಾನನ್ತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ ।
ಮೋಘಾಶಾ ಮೋಘಕರ್ಮಾಣೋ ಮೋಘಜ್ಞಾನ ವಿಚೇತಸಃ ।
ರಾಕ್ಷಸೀಮಾಸುರೀಂ ಚೈವ ಪ್ರಕೃತಿಂ ಮೋಹನೀಂ ಶ್ರಿತಾಃ ॥೨.೮೪॥

ನಾನು ಧರಿಸಿ ಬಂದಾಗ ಮಾನುಷ ತರಹ ದೇಹ,
ಖಚಿತ ಮೂಢರಿಗಾವರಿಸುತ್ತದೆ ಅಜ್ಞಾನ-ಸಂದೇಹ,
ಅನಿಸುತ್ತದವರಿಗೆ ಕೃಷ್ಣ ಅಜ್ಞಾನಿ ಪ್ರಾಕೃತದೇಹಿ ಇತ್ಯಾದಿ,
ಅದು ಬಗೆಗೇಡಿಗಳ ರಕ್ಕಸ ತಾಮಸರ ಆವರಿಸೋ ವ್ಯಾಧಿ.

ಹರಿ ಅವಜ್ಞೆ ಮಾಡುವವರ ಪರಲೋಕದಾಸೆ ಅದು ವ್ಯರ್ಥ,
ಯಜ್ಞ ಯಾಗ ಇತರೆ ತತ್ವಜ್ಞಾನ ಸಾಧನೆಗಳಿಗಿಲ್ಲವೇ ಇಲ್ಲ ಅರ್ಥ,
ಅದಕ್ಕೆ ದೈವವನೊಪ್ಪದ ದ್ವೇಷಪೂರ್ಣ ಮಲಿನ ಮನಸ್ಸು ಕಾರಣ,
ತಾಮಸರ ಇಂದ್ರಿಯಲೋಲುಪರ ಚಿಂತನೆಯೇ ತತ್ವವಿರೋಧೀ ಹೂರಣ.

(ಅಂತಃಸಾಕ್ಷಿ ಇರದೇ ಕೆಲಸ ಮಾಡುವರಿಗನ್ನುತ್ತಾರೆ ವಿಚೇತಸಃ,
ಅಂತರಂಗಸಾಕ್ಷಿಯಿರದ ಶಬ್ಧ ಪ್ರಾಮಾಣ್ಯ ಅವಲಂಬಿತ ಕೆಲಸ,
ಶಬ್ಧ ಹಾಗೂ ಅರ್ಥಗಳ ನಡುವಿದೆ ಒಂದು ಸಂಬಂಧ,
ಜಗದ್ವ್ಯಾಪಾರ ನಡೆಸುವ ಸೂಕ್ಷ ಸಂವೇದೀ ಅನುಬಂಧ,
ಸಂವೇದನೆಯಿಂದ ಅತೀಂದ್ರಿಯಗಳ ಅಸ್ತಿತ್ವದ ಅನುಭವ,
ಆಂತರಿಕ ಮಂಥನದಿಂದ ಅತೀಂದ್ರಿಯ ಶಕ್ತಿ ಅಸ್ತಿತ್ವದ ಅನುಭಾವ,
ಆದರೆ ವಿಚೇತಸರಿಗೆ ಇದು ಎಂದೂ ಮುಚ್ಚಿದ ದಾರಿ,
ಆಕಡೆ ಹರಿಯುವುದೇ ಇಲ್ಲವರ ಯೋಚನಾ ಲಹರಿ,
ಎಂದೆಂದೂ ಹರಿಯುವುದಿಲ್ಲ ಭಗವಂತನೆಡೆ ಅವರ ಚಿತ್ತ,
ಎಲ್ಲವನ್ನೂ ಸ್ವಭಾವಕ್ಕನುಗುಣವಾಗಿ ನಡೆಸುವುದು ಹರಿಚಿತ್ತ).

[Contributed by Shri Govind Magal]

No comments:

Post a Comment

ಗೋ-ಕುಲ Go-Kula