Showing posts with label ಈರುಳ್ಳಿ ಬೆಳ್ಳುಳ್ಳಿ. Show all posts
Showing posts with label ಈರುಳ್ಳಿ ಬೆಳ್ಳುಳ್ಳಿ. Show all posts

Sunday, 7 February 2016

ಈರುಳ್ಳಿ ಬೆಳ್ಳುಳ್ಳಿ- ಭಾಗ 3 - ನಮ್ಮ ಆಹಾರ-ಗೀತೆಯಲ್ಲಿ ಕೃಷ್ಣನ ಮಾತು

ನಮ್ಮ ಪ್ರಾಚೀನ ಋಷಿಮುನಿಗಳು ನಮ್ಮ ಆಹಾರವನ್ನು ಸಾತ್ವಿಕ, ರಾಜಸ, ತಾಮಸ ಎಂದು ಮೂರು ಭಾಗವಾಗಿ ವಿಂಗಡಿಸಿದ್ದಾರೆ... ಮನುಷ್ಯರಲ್ಲೂ ಈ ಮೂರುತರದ ಜನರಿರುತ್ತಾರೆ - ಕೆಲವರು ಸಾತ್ವಿಕರು, ಕೆಲವರು ರಾಜಸರು, ಕೆಲವರು ತಾಮಸರು...

ಕೃಷ್ಣ ಗೀತೆಯಲ್ಲಿ ಹೇಳುವ ಮಾತು ಕೂಡ ಆಯಾಯ ಸ್ವಭಾವದ ಜನರಿಗೆ ಆಯಾಯ ಆಹಾರ ಪದಾರ್ಥಗಳು ಇಷ್ಟವಾಗುತ್ತವೆ ಅಂತ... "ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ"...

ಭಗವದ್ಗೀತೆಯ 17 ನೇ ಅಧ್ಯಾಯದ ಈ ಮೂರು ಶ್ಲೋಕಗಳಲ್ಲಿ ಕೃಷ್ಣ ತುಂಬ ಸುಂದರವಾಗಿ ಮೂರು ಸ್ವಭಾವದ ಜನರ ಮೂರು ತರಹದ ಆಹಾರದ ಅಭಿರುಚಿಯ ಬಗೆಗೆ ಸುಂದರವಾದ ವಿಶ್ಲೇಷಣೆ ಕೊಟ್ಟು ಹೇಳುತ್ತಾನೆ :

ಆಯುಃಸತ್ವ ಬಲಾರೋಗ್ಯ ಸುಖಪ್ರೀತಿವಿವರ್ಧನಾಃ |
ರಸ್ಯ‌ಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕಪ್ರಿಯಾಃ ||8||

ಇವು ಸಾತ್ವಿಕರಿಗೆ ಮೆಚ್ಚಿಕೆಯಾದ ತಿನಿಸುಗಳು :- ಬದುಕು, ಒಳ್ಳೆಯತನ, ತ್ರಾಣ, ಆರೋಗ್ಯಗಳನ್ನು ಹೆಚ್ಚಿಸುವಂಥವು, ಬಹಳಕಾಲ ಮೆಚ್ಚಿಗೆಯಾಗುವಂಥವು, ತಿಂದಾಗ ಖುಷಿಯಾಗುವಂಥವು, ರುಚಿಯಾದಂಥವು, ಕಸುವಿರುವಂಥವು, ದೀರ್ಘಕಾಲ ಪರಿಣಾಮ ಬೀರುವಂಥವು, ಮತ್ತೆ ಮತ್ತೆ ಮನ ಸೆಳೆಯುವಂಥವು...

ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣ ರೂಕ್ಷ ವಿದಾಹಿನಃ |
ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ ||9||

ಇವು ರಾಜಸರಿಗೆ ಮೆಚ್ಚಿಗೆಯಾದ ತಿನಿಸುಗಳು :- ಅತಿಯಾದ ಖಾರ, ಹುಳಿ, ಉಪ್ಪು , ತುಂಬ ಬಿಸಿ, ಬಿರುಸು , ನೀರಸ ಮತ್ತು ಉರಿಬರಿಸುವಂಥವು, ದುಃಖ-ದುಮ್ಮಾನ ಮತ್ತು ಕಾಯಿಲೆ ಬರಿಸುವಂಥವು...

ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ |
ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಂ ||10||

ಇದು ತಾಮಸರಿಗೆ ಮೆಚ್ಚಿನ ತಿನಿಸು :- ಅಟ್ಟು ಜಾವ ಕಳೆದದ್ದು , (ಒಂದು ಜಾವ= ಒಂದು ದಿವಸದ ಎಂಟನೇ ಒಂದು ಭಾಗ, ಮೂರು ಗಂಟೆಗಳ ಕಾಲ), ರುಚಿ ಕಳೆದುಕೊಂಡದ್ದು , ಹಳಸಿದ್ದು , ತಂಗಳಾದದ್ದು , ಎಂಜಲು ಮತ್ತು ಕೊಳಕಾದದ್ದು...

ಹಾಗೇ, ಕೃಷ್ಣ ಹೇಳುವ ಮತ್ತೊಂದು ಮಾತೆಂದರೆ ಮನುಷ್ಯರಾಗಿ ಹುಟ್ಟಿದ ಮೇಲೆ ಬದುಕಿನಲ್ಲಿ ಬಿಡದೆ ಮಾಡಲೇಬೇಕಾದ ಮೂರು ಕ್ರಿಯೆಗಳು ಯಜ್ಞ-ದಾನ-ತಪಸ್ಸು..

ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ |
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್||5||
(ಭಗವದ್ಗೀತೆ ‌ಅಧ್ಯಾಯ- ಹದಿನೆಂಟು)


ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಲಾಗದು. ಅದನ್ನು ಮಾಡಲೇಬೇಕು. ಯಜ್ಞ,  ದಾನ ಮತ್ತು ತಪಸ್ಸು ಜ್ಞಾನಿಗಳನ್ನು ಪಾವನಗೊಳಿಸುತ್ತದೆ... ಶ್ರೇಷ್ಟವಾದ ಯಜ್ಞ - ದಾನ - ತಪದ ಬಗೆಗೂ ಕೃಷ್ಣ ಹೇಳುತ್ತಾನೆ... ಅದು ಸಾಧ್ಯವಾಗಬೇಕಾದರೆ ಸಾತ್ವಿಕ ಆಹಾರದ ಪದ್ಧತಿ ಅತ್ಯವಶ್ಯ.... ಅದಕ್ಕೆ ಬೇಕು ಪರಿಶುದ್ಧವಾದ ಮನಸ್ಸು , ಶುದ್ಧ ಮನಸ್ಥಿತಿಗೆ ಬೇಕು ಇಂದ್ರಿಯಗಳ ನಿಯಂತ್ರಣ... ಬೆಳ್ಳುಳ್ಳಿ ಈರುಳ್ಳಿಗಳ ಸೇವನೆಯಿಂದ ನಮ್ಮ ಮುಖ್ಯ ಜ್ಞಾನೇಂದ್ರಿಯಗಳಾದ ಕಣ್ಣು-ಕಿವಿಗಳಿಗೆ ಗ್ರಹಣ ಹಿಡಿದಂತಾಗಿ ರಾಹು-ಕೇತುಗಳು ಸೂರ್ಯ-ಚಂದ್ರರನ್ನು ಆವರಿಸುವಂತೆ, ಈರುಳ್ಳಿ-ಬೆಳ್ಳುಳ್ಳಿಯ ತಾಮಸ ಗುಣದ ಪ್ರಭಾವದಿಂದ   ನಮ್ಮ ಮನಸ್ಸು ಬೇಡವಾದ ಚಿಂತನೆಗಳತ್ತ ಹರಿಯುತ್ತದೆ,  ತಮೋಗುಣದ ಪ್ರವೃತ್ತಿ ಹೆಚ್ಚಾಗಿ ಸೆಕ್ಸೀ ಡ್ರೀಮ್ಗಳತ್ತ ಮನಸ್ಸು ಹರಿಯುತ್ತದೆ... ದೇಹದಲ್ಲಿರುವ ಕುಂಡಲಿನಿ ಶಕ್ತಿ ಕೆಳಮುಖವಾಗಿ ಹರಿಯುತ್ತಾ ಕೇವಲ ಸೆಕ್ಸನ್ನು ಉತ್ತೇಜಿಸುತ್ತಾ , ಉನ್ನತ  ಚಿಂತನೆಗಳಿಂದ ನಮ್ಮ ಮನಸ್ಸು ವಂಚಿತಗೊಂಡು ನೀರಸವಾದ ಬದುಕಿಗೆ ಕಾರಣವಾಗುತ್ತದೆ.  ಆದ್ದರಿಂದ ಇಂಥಹ ತಾಮಸ ಪದಾರ್ಥಗಳನ್ನು ಆಹಾರವಾಗಿ ಎಂದೂ ಬಳಸಬಾರದು...

Friday, 5 February 2016

ಈರುಳ್ಳಿ ಬೆಳ್ಳುಳ್ಳಿ- ಭಾಗ 2 - ಪುರಾಣದಲ್ಲಿ ಬಂದ ರಾಹು-ಕೇತುಗಳ ಅರ್ಥ

ಈಗ ರಾಹು-ಕೇತುಗಳ ಕಥೆಗೆ ಬರೋಣ...

ಹೀಗೆ ಬದುಕಿನಲ್ಲಿ ಅತ್ಯಂತ ಉತ್ಕೃಷ್ಟವಾದ ಜ್ಞಾನಾಮೃತವನ್ನು ಗಳಿಸಬೇಕಾದರೆ, ನಮ್ಮ ದೇಹದಲ್ಲಿ ಕಿವಿ ಮತ್ತು ಕಣ್ಣುಗಳೆಂಬ ಎರಡು ಅತ್ಯಂತ ಮುಖ್ಯವಾದ   ಜ್ಞಾನೇಂದ್ರಿಯಗಳ ಅವಶ್ಯಕತೆ ಇದೆ... ಅದಕ್ಕೆಂದೇ ತತ್ವಾಭಿಮಾನಿ ದೇವತೆಗಳ ಕುರಿತು ವೇದಕಾಲದ ಋಷಿಗಳ ಪ್ರಾರ್ಥನೆ ಶುರವಾಗುವುದೇ ಕಿವಿ, ಕಣ್ಣುಗಳ ಕುರಿತಾಗಿ - "ಭದ್ರಂ ಕರ್ಣೇಭಿ ಶೃಣುಯಾಮ ದೇವಾಃ | ಭದ್ರಂ ಪಶ್ಯೇಮಾಕ್ಷಭಿರ್ಯ ಜತ್ರಾಃ.... " ಎಂದು.

ಕಣ್ಣಿನ ಅಭಿಮಾನಿ ದೇವತೆ ಸೂರ್ಯನಾದರೆ, ಕಿವಿಗೆ ಚಂದ್ರ ದೇವತೆ.. ಸೂರ್ಯನನ್ನು "ಮುಗಿಲ ಕಣ್ಣು" ಅಂತ ಕರೆಯುತ್ತಾರೆ.... ಏಕೆಂದರೆ ಆಕಾಶದಲ್ಲಿರುವ ಸೂರ್ಯಗ್ರಹಕ್ಕೂ ನಮ್ಮ ಕಣ್ಣಿಗೂ ಸೂರ್ಯನೇ ಅಭಿಮಾನಿ ದೇವತೆ. ಅದಕ್ಕೇ ಅಲ್ಲವೆ ಆಕಾಶದಲ್ಲಿ ಸೂರ್ಯೋದಯವಾದಾಗ ನಮ್ಮ ಕಣ್ಣು ತೆರೆಯುತ್ತದೆ, ಅಲ್ಲಿ ಸೂರ್ಯ ಮುಳುಗಿದಾಗ ನಮ್ಮ ಕಣ್ಣೂ ಮುಚ್ಚುತ್ತದೆ..

ಚಂದ್ರ ಕಿವಿಯ ದೇವತೆ ಹಾಗೂ ಮನಸ್ಸಿನ ದೇವತೆಯೂ ಹೌದು.. ಏಕೆಂದರೆ ಇವನು ಭಗವಂತನ ಮನಸ್ಸಿನಿಂದ ಹುಟ್ಟಿದವನಲ್ಲವೆ...
"ಚಂದ್ರಮಾ ಮನಸೋ ಜಾತಃ
ಚಕ್ಷುಃ ಸೂರ್ಯೋ ಅಜಾಯತ" (ಪುರುಷಸೂಕ್ತ)...

ಪೌರಾಣಿಕ ಕಥೆಯಲ್ಲಿ ಬರುವ ಸಮುದ್ರಮಥನದಲ್ಲಿ ಭಗವಂತ ಧನ್ವಂತರಿ ರೂಪದಿಂದ ತಂದುಕೊಟ್ಟ ಅಮೃತದ ಕೊಡವನ್ನು ಮೊಹಿನಿ ರೂಪದಿಂದ  ಅಮೃತವನ್ನು ಹಂಚುವಾಗ ಸ್ವರ್ಭಾನು ಎಂಬ ಅಸುರ ಸೂರ್ಯ ಚಂದ್ರರ ನಡುವೆ ಮಾರುವೇಷದಿಂದ ಬಂದು ಕುಳಿತು ಅಮೃತಪಾನ ಮಾಡುವಾಗ ಅವನನ್ನು  ಸೂರ್ಯ ಚಂದ್ರರು ಗುರುತಿಸುತ್ತಾರೆ... ಮೋಹಿನಿ ರೂಪದಲ್ಲಿದ್ದ ವಿಷ್ಣು ತನ್ನ ಚಕ್ರದಿಂದ
ಸ್ವರ್ಭಾನುವಿನ ಕುತ್ತಿಗೆ ಕತ್ತರಿಸುತ್ತಾನೆ...  ಅಮೃತಪಾನ ಮಾಡಿದ್ದರಿಂದ ಸ್ವರ್ಭಾನುವಿನ ದೇಹ ಎರಡು ಭಾಗವಾದರೂ ಬದುಕುಳಿದ... ಅವನ ದೇಹವಿಲ್ಲದ ರುಂಡಭಾಗವೇ ರಾಹು ಎಂಬ ಹೆಸರು ಪಡೆಯಿತು.. ರುಂಡವಿಲ್ಲದ ಮುಂಡಭಾಗ ಕೇತು ಎಂಬ ಹೆಸರು ಪಡೆಯಿತು... ಈ ಕಥೆಯೂ ಕೂಡ ಮೇಲೆ ಹೇಳಿದ ಪೌರಾಣಿಕ ಕಥೆಗಳಂತೆ ಆಧ್ಯಾತ್ಮಿಕ ಅರ್ಥವುಳ್ಳದ್ದು ಮತ್ತು ಮುಖ್ಯವಾಗಿ ನಭೋ ಮಂಡಲದ ಕಾಯಗಳೆನಿಸಿದ ಗ್ರಹಗೋಲಗಳಿಗೆ ಸಂಬಂಧಪಟ್ಟದ್ದೂ ಹೌದು..

ಈ ಕಥೆಯನ್ನು ಒಂದು ಸಾಂಕೇತಿವಾಗಿ ಇಟ್ಟುಕೊಂಡು ನೋಡಿದಾಗ... ಬಾಹ್ಯಾಕಾಶದಲ್ಲಿ ಗ್ರಹಗೋಲಗಳು ಸೂರ್ಯನ ಸುತ್ತ ಸುತ್ತುತ್ತಿವೆ..  (ಇಡೀ Solar System ಮತ್ತು ಸೂರ್ಯ ಕೂಡ ಧ್ರುವ ನಕ್ಷತ್ರದ ನಿಯಂತ್ರಣಕ್ಕೊಳಪಟ್ಟಿದೆ ಎಂಬುದು ಶಾಸ್ತ್ರಕಾರರ ನಂಬಿಕೆ)...

ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ ವಾಸ್ತವವಾಗಿ ನಭೋಮಂಡಲದಲ್ಲಿ ಸೂರ್ಯಗ್ರಹದ ಸುತ್ತ ಭೂಮಿ ಸುತ್ತುತ್ತಿದೆ, ಭೂಮಿಯ ಸುತ್ತ ಚಂದ್ರಗ್ರಹ ಸುತ್ತುತ್ತಿದೆ ಈ ಅಂಡಾಕಾರದ ಪರಿಕ್ರಮದ ಮಾರ್ಗವನ್ನು ಮಧ್ಯದಿಂದ ವಿಭಜಿಸುವ ಒಂದು ಸರಳರೇಖೆಯುಂಟು... ಆ ಸರಳ ರೇಖೆಯ ಎರಡು ತುದಿಗಳೇ ರಾಹು ಮತ್ತು ಕೇತು ಎಂಬ ಎರಡು ಬಿಂದುಗಳು... ಮೇಲಿನ ಕಥೆಯಲ್ಲಿ ವಿಷ್ಣು ಸ್ವರ್ಭಾನು ಎಂಬ ಅಸುರನನ್ನು ಕೊಂದಾಗ, ರುಂಡ (Head) ಇರುವ ಭಾಗ ಒಂದು ಬಿಂದು, ಮುಂಡ (Headless Body) ಇರುವ ಭಾಗ ಇನ್ನೊಂದು ಬಿಂದುವಾಗಿ ವಿಷ್ಣುವಿನ ಚಕ್ರ ಅಸುರನ ತಲೆ ಸೀಳಿದ ಸರಳ ರೇಖೆಯ ಎರಡು ತುದಿಗಳಲ್ಲಿ ಇರಿಸಲ್ಪಟ್ಟಿತು ಅನ್ನುವುದು ಸಂಕೇತವಾಗಿ ಕಥೆಯಲ್ಲಿ ಬಂದಿದೆ...

ಈ ಸರಳ ರೇಖೆಯನ್ನೇ ಮಧ್ಯಂತರ ರೇಖೆಯಾಗಿರಿಸಿಕೊಂಡು (Equatorial Point) ಎಂಬಂತೆ ನವಗ್ರಹಗಳು ಸೂರ್ಯನ ಸುತ್ತಲೂ ಸುತ್ತುವುದರ ಮತ್ತು ನಕ್ಷತ್ರ ಹಾಗೂ ರಾಶಿಗಳ ವಿಭಜನೆಗೆ ಈ ರೇಖೆ ಸಂಕೇತವಾಗಿದೆ...
ರಾಹು - ಕೇತುಗಳು ಸ್ವತಃ ಗ್ರಹಗಳಲ್ಲದಿದ್ದರೂ ಅವುಗಳ ಸಮಾನ ರೇಖೆಯಲ್ಲಿ ಒಮ್ಮೊಮ್ಮೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋದಾಗ "ಸೂರ್ಯಗ್ರಹಣ"ವಾಗುತ್ತದೆ..  ಅಥವಾ ಚಂದ್ರ ತಾನು ಭೂಮಿಯ ಸುತ್ತ ಸುತ್ತುವಾಗ ಸೂರ್ಯ ಮತ್ತು ಭೂಮಿಯೊಟ್ಟಿಗೆ ಸಮಾನಾಂತರ ರೇಖೆಯಲ್ಲಿ ಚಲಿಸುವಾಗ ಭೂಮಿಯ ಇನ್ನೊಂದು ಭಾಗದಲ್ಲಿ ಅಂದರೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುವ ಸಮಾನಾಂತರ ರೇಖೆಯಲ್ಲಿ "ಚಂದ್ರಗ್ರಹಣ"ವಾಗುತ್ತದೆ ಈ ರಾಹು-ಕೇತುಗಳಿರುವ ಸಮಾನಾಂತರ ರೇಖೆಯಲ್ಲಿ ನಡೆಯುವುದೇ ಗ್ರಹಣಗಳೆಂಬ ಈ ನಭೋ ಮಂಡಲದ ಕೌತುಕಗಳು....  ಅದೇ ಸಾಂಕೇತಿಕವಾಗಿ ಗ್ರಹಣಗಳ ಸಂದರ್ಭದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ರಾಹು -ಕೇತುಗಳು ನುಂಗುತ್ತಾರೆ ಅಥವಾ    ಗ್ರಹಣಮಾಡುತ್ತಾರೆಯಾದ್ದರಿಂದ ರಾಹು ಕೇತುಗಳು ನವಗ್ರಹಗಳಲ್ಲಿ ಸೇರಿಸಲ್ಪಟ್ಟಿವೆ....

ರಾಹು-ಕೇತುಗಳು ಸಮಾನಾಂತರ ರೇಖೆಯಲ್ಲಿರುವುದರಿಂದಲೇ ಯಾವಾಗಲೂ ಗ್ರಹಣಗಳು ಸಂಭವಿಸುವುದು ಒಂದೋ ಹುಣ್ಣಿಮೆ ಅಥವಾ ಅಮಾವಾಸ್ಯೆಯಂದು ಮಾತ್ರ...

ಅಷ್ಟೇ ಅಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿಗಳ ವಿಭಾಗದಲ್ಲೂ ರಾಹು ಕೇತುಗಳಿರುವ ಮನೆ ಸಮಾನಾಂತರವಾಗಿದ್ದು ನಮ್ಮ ಜಾತಕದಲ್ಲಿ ಕೂಡ ಆರು ರಾಶಿಗಳ ಅಂತರದಲ್ಲಿ ರಾಹು ಕೇತುಗಳು ಇರುತ್ತವೆ...

ಈಗ ಇದರ ಆಧ್ಯಾತ್ಮಿಕ ಅರ್ಥಕ್ಕೆ ಬರೋಣ, ಸೂರ್ಯ ಚಂದ್ರರು ಭೂಮಿಗೆ ಬೆಳಕು ನೀಡಿ ಉಷ್ಣ ಮತ್ತು ತಂಪನ್ನು ಹಾಯಿಸುವ ನಭೋಮಂಡಲದ ಎರಡು ಬೆಳಕಿನ ಶಕ್ತಿಕೇಂದ್ರಗಳು... ಬೆಳಕು ಎಂದರೆ ಜ್ಞಾನ, ಕತ್ತಲೇ ಅಜ್ಞಾನ.. ಬೆಳಕಿನಲ್ಲಿ ನಮ್ಮ ಚಟುವಟಿಕೆ, ಕತ್ತಲಲ್ಲಿ ನಿದ್ರೆ... ರಾಹು - ಕೇತುಗಳೆಂದರೆ ಅಂತಹ ಬೆಳಕಿನ ಕೇಂದ್ರವನ್ನೇ ಆವರಿಸಿ ನಮ್ಮನ್ನು ಅಂಧಕಾರಕ್ಕೆ ತಳ್ಳುವ ಶಕ್ತಿಗಳು ಅನ್ನುವುದನ್ನು ನಭೋಮಂಡಲದಲ್ಲಿ ಸೂರ್ಯ-ಚಂದ್ರರನ್ನೇ ಮರೆಮಾಚುವ ಗ್ರಹಣವೆಂಬ ಕೌತುಕದ ದೃಷ್ಟಾಂತದಿಂದಲೇ ನಾವು ತಿಳಿದಿದ್ದೇವೆ.

ಈಗ ಈ ಪಿಂಡಾಂಡದಲ್ಲಿ , ನಮ್ಮ ದೇಹದಲ್ಲಿ ಮೊದಲೇ ಹೇಳಿದಂತೆ ಕಣ್ಣು - ಕಿವಿಗಳೇ ನಮ್ಮ ಮನಸ್ಸಿಗೆ ಅರಿವನ್ನು ಮುಟ್ಟಿಸುವ ಪ್ರಧಾನವಾದ ಎರಡು ಜ್ಞಾನೇಂದ್ರಿಯಗಳು... ಇವುಗಳ ಅಭಿಮಾನಿ ದೇವತೆಗಳೂ ಕೂಡ ಸೂರ್ಯ-ಚಂದ್ರರೇ (ಈ ವಿಷಯವನ್ನು ಮೇಲೆ ಹೇಳಿಯಾಗಿದೆ) ...


ಒಂದು ವೇಳೆ ಸಮುದ್ರಮಥನದ ಕಥೆಯಂತೆ, ರಾಹು(ಸ್ವರ್ಭಾನು ಎಂಬ ಅಸುರ) ಸ್ವೀಕರಿಸಿದ ಅಮೃತ ಅವನ ಬಾಯಲ್ಲಿತ್ತು ಅದನ್ನು ನುಂಗುವುದರೊಳಗೆ ವಿಷ್ಣು ಚಕ್ರ ಅಸುರನ ತಲೆ ಹಾರಿಸಿತ್ತು, ಆಗ ಆ ರಾಕ್ಷಸನ ಬಾಯಿಂದ ಹೊರ ಚೆಲ್ಲಿದ ಅಮೃತದ ಬಿಂದುಗಳಿಂದ ಭೂಮಿಯ ಮೇಲೆ ಬೆಳ್ಳುಳ್ಳಿ-ಈರುಳ್ಳಿ ಎಂಬ ಎರಡು ಪದಾರ್ಥಗಳು ಹುಟ್ಟಿಕೊಂಡವು... ಆದರೆ ಅವು ರಾಕ್ಷಸನ ಬಾಯಿಂದ ಹೊರಬಿದ್ದ ಕಾರಣ ದುರ್ವಾಸನೆಯಿಂದ ಕೂಡಿದ್ದು ತಾಮಸ ಗುಣವನ್ನು ಕೊಡುವ ಆದರೂ ಅಮೃತದ ಪ್ರಭಾವದಿಂದ ನಮ್ಮ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅಂಶಗಳಿಂದ ತುಂಬಿರುವ ಪದಾರ್ಥಗಳಾಗಿವೆ, ಎಂಬುದೇ ಸತ್ಯವಾಗಿದ್ದಲ್ಲಿ , ಇಂಥಹ (ಬೆಳ್ಳುಳ್ಳಿ-ಈರುಳ್ಳಿ) ಪದಾರ್ಥ ಸೇವನೆ ಬೇಕೋ ಬೇಡವೋ ಎಂಬುದು ಚರ್ಚೆಗೆ ವಿಷಯವಾಗಿದೆ...

Thursday, 4 February 2016

ಈರುಳ್ಳಿ – ಬೆಳ್ಳುಳ್ಳಿ: ಭಾಗ 1 - ನಮ್ಮ ಆಹಾರ - ಪ್ರಾಚೀನರ ಕೊಡುಗೆ

ಈರುಳ್ಳಿ – ಬೆಳ್ಳುಳ್ಳಿ ಬಗ್ಗೆ ಚಿಂತನೆಯ ಹಿನ್ನಲೆ :

ಮನೆಯಲ್ಲಿ ಹಬ್ಬ-ಹರಿದಿನ,ಪೂಜೆ-ಹವನ ಮುಂತಾದ ದೇವಕಾರ್ಯಗಳಿರುವಾಗ ಅಡಿಗೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಗಳನ್ನು ಬಳಸುವಂತಿಲ್ಲ.ಅದಕ್ಕೆ ಕಾರಣಗಳೇನು..?

ಈರುಳ್ಳಿ ಹಾಗೂ ಬೆಳ್ಳುಳ್ಳಿಯ ವಿಷಯದಲ್ಲೊಂದು ಪೌರಾಣಿಕೆ ಕಥೆಯಿದೆ.ಸಮುದ್ರಮಂಥನದ ನಂತರ ಮೋಹಿನಿಯ ವೇಷವನ್ನು ಧರಿಸಿ ಮಹಾವಿಷ್ಣು ಸುರರಿಗೆ ಅಮೃತವನ್ನು ಹಂಚುತ್ತಿರುತ್ತಾನೆ.ಅದನ್ನರಿತ ರಾಹು ಹಾಗೂ ಕೇತುವೆಂಬ ರಾಕ್ಷಸರು ಅಮೃತವನ್ನು ಸ್ವೀಕರಿಸಲು ಬರುತ್ತಾರೆ.ಪ್ರಮಾದದಿಂದ ವಿಷ್ಣು ಅವರಿಗೂ ಅಮೃತವನ್ನು ಹಂಚುತ್ತಾನೆ.ತತ್ಕ್ಷಣದಲ್ಲೇ ಸೂರ್ಯ ಹಾಗೂ ಚಂದ್ರ,ಅವರಿಬ್ಬರು ಅಸುರರೆಂಬ ಮಾಹಿತಿಯನ್ನು ಮಹಾವಿಷ್ಣುವಿಗೆ ನೀಡುತ್ತಾರೆ.ಅಷ್ಟರಲ್ಲಿ ಅವರಿಬ್ಬರೂ ಅಮೃತವನ್ನು ಕುಡಿದಾಗಿತ್ತು.ಆದರೆ ಅಮೃತ ಗಂಟಲಿಂದ ಇಳಿದು ದೇಹ ಸೇರಿರಲಿಲ್ಲ.ಕೂಡಲೇ ಮಹಾವಿಷ್ಣು ಅವರಿಬ್ಬರ ತಲೆಯನ್ನು ಕಡಿಯುತ್ತಾನೆ.ಅಮೃತವನ್ನು ಕುಡಿದಿದ್ದರಿಂದ ಅವರ ತಲೆ ನಾಶವಾಗುವುದಿಲ್ಲ.ಕೇವಲ ದೇಹಾಂತ್ಯವಾಗುತ್ತದೆ.ಆ ಕಾರಣದಿಂದ ಇಂದಿಗೂ ರಾಹು, ಕೇತುಗಳಿಗೆ ಶರೀರವಿಲ್ಲ.ಕೇವಲ ಶಿರವಷ್ಟೇ..!!

ಮಹಾವಿಷ್ಣು ಶಿರವನ್ನು ತುಂಡರಿಸುವಾಗ ಅವರ ಬಾಯಲ್ಲಿದ್ದ ಅಮೃತಬಿಂದುಗಳು ನೆಲವನ್ನು ಸೇರಿದವು.ಆಗಲೇ ಹುಟ್ಟಿದ್ದು ಈರುಳ್ಳಿ ಹಾಗೂ ಬೆಳ್ಳುಳ್ಳಿ.ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ.ಅಮೃತಕ್ಕೆ ಸರಿಸಮವಾದ ಔಷಧೀಯ ಗುಣಗಳಿವೆ. ಹಾಗೇ ರಾಕ್ಷಸರ ಬಾಯಿಯ ಎಂಜಲೂ ಸೇರಿದ್ದರಿಂದ ದುರ್ಗಂಧ,ಹಾಗೂ ಅಪವಿತ್ರವೆಂಬ ಕುಖ್ಯಾತಿಯೂ ಸೇರಿಕೊಂಡಿದೆ.ಹಾಗಾಗಿ ದೇವಕಾರ್ಯಗಳಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಸೇವನೆ ವರ್ಜ್ಯವಾಗಿದೆ.ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಅತಿಯಾಗಿ ಸೇವಿಸುವುದರಿಂದ ಶರೀರ ರಾಕ್ಷಸರಂತೇ ಗಟ್ಟಿಮುಟ್ಟಾದರೂ. ಆಚಾರ-ವಿಚಾರಗಳೂ ಸಹ ರಾಕ್ಷಸರಂತಾಗುತ್ತವೆ.ಬೆಳ್ಳುಳ್ಳಿ ಹಾಗೂ ಈರುಳ್ಳಿಗಳನ್ನು ತಾಮಸಿಕ ಆಹಾರವೆಂದು ಕರೆಯಲಾಗುತ್ತದೆ.ನಾವು ತಿನ್ನುವ ಆಹಾರ ನಮ್ಮ ಸ್ವಭಾವವನ್ನು ನಿರ್ಧರಿಸುತ್ತದೆ.ಸಾತ್ವಿಕ ಆಹಾರಗಳನ್ನು ಸೇವಿಸಿದರೆ ಸಾತ್ವಿಕರಾಗುತ್ತೇವೆ.ತಾಮಸಿಕ ಆಹಾರವನ್ನು ಸೇವಿಸಿದರೆ ತಾಮಸೀಪ್ರವೃತ್ತಿ ಬೆಳೆಯುತ್ತದೆ.ತಾಮಸಿಕ ಆಹಾರವನ್ನು ಆದಷ್ಟು ವರ್ಜಿಸುವಂತೆ ಆಹಾರನಿಯಮಗಳು ತಿಳಿಸುತ್ತವೆ.�

ಮೇಲಿನ ಲೇಖನಕ್ಕೆ ಉತ್ತರವಾಗಿ ರೂಪುಗೊಂಡ ಬರಹ ಇದು.....

ಈರುಳ್ಳಿ-ಬೆಳ್ಳುಳ್ಳಿಯ ಬಗೆಗೆ ಗೀತಾರವರು ಪೋಸ್ಟ್ ಮಾಡಿದ ಲೇಖನ ಓದಿದೆ.. ಅದಕ್ಕೆ ಉತ್ತರ ರೂಪವಾಗಿ ಹೆಚ್ಚು ವಿಸ್ತಾರ ರೀತಿಯಲ್ಲೆ , ತಿಳಿಯುವ ದೃಷ್ಟಿಯಿಂದ ಲೇಖನವೊಂದನ್ನು ಬರೆದು ಕಳಿಸುತ್ತಿದ್ದೇನೆ... ನಿಮ್ಮ ಓದುವ ತಾಳ್ಮೆಗೆ ಮೊದಲೇ ಧನ್ಯವಾದ ಹೇಳಲು ಬಯಸುತ್ತೇನೆ...


                             ನಮ್ಮ ಆಹಾರ - ಪ್ರಾಚೀನರ ಕೊಡುಗೆ
                                                     🔹🔹🔹🔹🔹🔹🔹🔹🔹🔹🔹🔹

ನಮ್ಮ ಆಹಾರ ಪದ್ಧತಿಯಲ್ಲಿ ನಮ್ಮ  ಪ್ರಾಚೀನರು ದೇಹದ ಆರೋಗ್ಯಕ್ಕಿಂತ ನಮ್ಮ ಮನಸ್ಸಿನ ಆರೋಗ್ಯಕ್ಕೆ ಹೆಚ್ಚು ಒತ್ತುಕೊಟ್ಟರು.. ಮನಸ್ಸೇ ಅಲ್ಲವೆ ನಮ್ಮ ಬೆಳವಣಿಗೆಗೆ ಕಾರಣ... ಕೇವಲ ಬಲಿಷ್ಠವಾದ ದೇಹದಿಂದ ನಮ್ಮ ಆಂತರಿಕ ಬೆಳವಣಿಗೆ ಸಾಧ್ಯವಿಲ್ಲ . ಆ ದೃಷ್ಟಿಯಿಂದ ಅವರು ಹೇಳಿದರು ಬೆಳ್ಳುಳ್ಳಿ ಮತ್ತು ಈರುಳ್ಳಿ ,ಅವು ದೇಹದ ಆರೋಗ್ಯಕ್ಕೆ ಎಷ್ಟೇ ಹಿತಕಾರಿಯಾದರೂ ಅವುಗಳ ದುಷ್ಪರಿಣಾಮ ಮನಸ್ಸಿನ ಮೇಲೆ ಆಗುವುದರಿಂದ ನಮ್ಮ ದೈನಂದಿನ ಆಹಾರದಲ್ಲಿ ಈರುಳ್ಳಿ - ಬೆಳ್ಳುಳ್ಳಿ ಬಳಸಬಾರದು ಎಂದು...

ನಿತ್ಯ ಬೆಳ್ಳುಳ್ಳಿ-ಈರುಳ್ಳಿ ಸೇವನೆಯಿಂದ ನಮ್ಮ ಮನಸ್ಸಿನ Sharpness ಹೊರಟು ಹೋಗುತ್ತದೆ.. ದೇಹಾಲಸ್ಯವನ್ನು ಜಾಸ್ತಿ ಮ‌ಾಡಿ ನಿದ್ರೆಯನ್ನು ಹೆಚ್ಚಿಸುವ ಗುಣ ಈ ಪದಾರ್ಥಗಳಲ್ಲಿ ಇದೆ... ಈರುಳ್ಳಿ-ಬೆಳ್ಳುಳ್ಳಿ ನಿತ್ಯ ಬಳಸುವುದರಿಂದ ಮನುಷ್ಯರಲ್ಲಿ ಇದು ಮಂದ ಬುದ್ಧಿಗೂ ಕಾರಣವಾಗುತ್ತದೆ...

ಸಂಸ್ಕೃತದಲ್ಲಿ ಬೆಳ್ಳುಳ್ಳಿಗೆ "ಮಹೌಷಧ" ಅಂತಲೇ ಹೆಸರು.. ನಮ್ಮ ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ದಿವ್ಯೌಷಧ...
ಓಷಧಿಯಾಗಿ ಸೇವಿಸಬೇಕಾದದ್ದನ್ನು ಊಟದಂತೆ ಸೇವಿಸಬಾರದಲ್ಲವೆ.. ಅದ್ದರಿಂದ ಆಹಾರದಲ್ಲಿ ಇವು ವರ್ಜ್ಯ..

ಇನ್ನು ನೀವು ಹಬ್ಬ-ಹರಿದಿನಗಳಲ್ಲಿ ಇವುಗಳನ್ನು ಬಳಸಬಾರದು ಅಂದಿದ್ದೀರಿ. ಅದು ಯಾಕೆ ? ಅಲ್ಲೇ ಉತ್ತರ ಕೂಡ ಅಡಗಿದೆ. ಹಬ್ಬಗಳಲ್ಲಿ ಆಯಾ ದೇವತಾರ್ಚನೆ, ಪೂಜೆ , ನೈವೇದ್ಯ ಸಮರ್ಪಣೆ ಇರುತ್ತದೆ.. ಇವುಗಳ ಬಳಕೆ ಇಲ್ಲ.. ಮನಸ್ಸು ಪ್ರಸನ್ನವಾಗಿರಬೇಕಾದರೆ ಸಾತ್ವಿಕ ಆಹಾರ ಸೇವನೆ, ಆ ಸಾತ್ವಿಕ ಆಹಾರದಿಂದ ನಮ್ಮಲ್ಲಿ ಸಾತ್ವಿಕ ಗುಣದ ಉಗಮ... ‌ಆದ್ದರಿಂದ ಪ್ರಾಚೀನರು ಹೇಳಿದರು- "ಆಹಾರ ಶುದ್ಧೌ ಸತ್ವ ಶುದ್ಧಿಃ ಸತ್ವ ಶುದ್ಧೌ ಧ್ರುವಾ ಸ್ಮೃತಿಃ ‌" ಅಂತ... ನಮ್ಮ ಆಹಾರ ಹೇಗೋ ಹಾಗೇ ನಮ್ಮ ಮನಸ್ಸು ಕೂಡ.. ಸಾತ್ವಿಕ ಆಹಾರ ಸೇವನೆಯಿಂದ ಸಾತ್ವಿಕವಾದ ಮನಸ್ಸು ಸಾಧ್ಯ... ಏಕೆಂದರೆ ನಮ್ಮ ಆಹಾರದ ಅತ್ಯಂತ ಸೂಕ್ಷ್ಮಭಾಗ ನಮ್ಮ ಮನಸ್ಸಾಗಿ ಪರಿವರ್ತನೆಗೊಳ್ಳುವಂತದು...

ಪೂಜಾ ಸಮಯಕ್ಕೆ, ಹಬ್ಬಕ್ಕೆ ಬೇಕಾದ ಸಾತ್ವಿಕ ಮನಸ್ಥಿತಿ ನಿತ್ಯವೂ ಏಕಿರಬಾರದು ?...

ಬ್ರಾಹ್ಮಣರ ಮನೆಗಳಲ್ಲಿ ನಿತ್ಯ ದೇವರಪೂಜೆ ಮತ್ತು ಮಾಡಿದ ಎಲ್ಲ ಅಡುಗೆ  ನೈವೇದ್ಯವಾಗಿ ದೇವರಿಗೆ ಸಮರ್ಪಣೆಯಾಗು(ತ್ತದೆ)ತಿತ್ತು.... ಆದ್ದರಿಂದ ಹಿಂದೆ ಬ್ರಾಹ್ಮಣರ ಮನೆಗಳಲ್ಲಿ ಎಂದೂ  ಈರುಳ್ಳಿ-ಬೆಳ್ಳುಳ್ಳಿ ಅಡುಗೆ ಮನೆಗೆ ಪ್ರವೇಶ ಪಡೆದಿರಲಿಲ್ಲ... ಇಂದು ಎಲ್ಲ ಬದಲಾಗಿದೆ.

ಇನ್ನು ಹರಿದಿನದ ಬಗೆಗೆ ಹೇಳುವುದಾದರೆ, ನಮ್ಮ ಮನಸ್ಸು ಅತ್ಯಂತ ಎತ್ತರದಲ್ಲಿ ನೆಲೆಗೊಳ್ಳಲೆಂದೇ ಹರಿದಿನಗಳಲ್ಲಿ ಆಹಾರದ ನಿಯಂತ್ರಣ ಇರಬೇಕು ಎಂದರು ಹಿಂದಿನವರು. (ಶಾಸ್ತ್ರದಲ್ಲಿ ದಶಮಿ-ಏಕಾದಶೀ-ದ್ವಾದಶೀ ತಿಥಿಗಳನ್ನು ಹರಿದಿನಗಳೆಂದು ಕರೆಯುತ್ತಾರೆ)...

ದಶಮಿಯ ರಾತ್ರಿ ಉಪವಾಸ- ಏಕಾದಶಿ ನಿರ್ಜಲ ಉಪವಾಸ- ದ್ವಾದಶೀ ಬೆಳಗ್ಗೆಯೇ ಪಾರಣೆ ಮತ್ತೆ ರಾತ್ರಿಗೆ ಉಪವಾಸ... (ಲಂಘನಂ ಪರಮೌಷಧಂ ಎಂಬಂತೆ)...

ಇದು ಯಾವುದೋ ಒಂದು ಮತದ ಆಚರಣೆಯಷ್ಟೇ ಅಲ್ಲ ಹಿಂದೆ ಎಲ್ಲರೂ ಆಚರಿಸುತ್ತಿದ್ದ , ಆಚರಿಸಲೇಬೇಕಾದ, ಆರೋಗ್ಯದ ದೃಷ್ಟಿಯಿಂದಲೂ ಒಂದು ಒಳ್ಳೆಯ  ಸಂಪ್ರದಾಯ... 15 ದಿನಗಳಲ್ಲಿ 3 ದಿನದ ಆಹಾರ ನಿಯಂತ್ರಣದಿಂದ ಉಳಿದ 12 ದಿನ ಆಹಾರ ಹೆಚ್ಚು ಕಡಿಮೆ ಸ್ವೀಕರಿಸಿದರೂ ದೇಹಕ್ಕೆ ತಡೆಯುವ ಶಕ್ತಿ ಬರುತ್ತದೆ.... ಇದು ಸಂಪೂರ್ಣವಾಗಿ ಹಿಂದಿನವರು ಹೇಳಿಕೊಟ್ಟ ಆರೋಗ್ಯ ಸೂತ್ರ... ಇದನ್ನೆಲ್ಲ ಪಾಲಿಸುವುದನ್ನು ನಾವು ಬಿಟ್ಟೆವು, ನಮ್ಮ ದೇಹದಲ್ಲಿ ಎಲ್ಲ ರೋಗಗಳು ಮನೆಮಾಡಲು ಅವಕಾಶ ಮಾಡಿಕೊಟ್ಟೆವು...
ಅಲೆಕ್ಸಿಸ್ ಕಾರೆಲ್" ನೋಬೆಲ್ ಪ್ರಶಸ್ತಿ ವಿಜೇತ ಖ್ಯಾತ ವೈದ್ಯ ಹೇಳಿದ ಮಾತು - "15 ದಿನದಲ್ಲಿ ಒಂದು ದಿನವಾದರೂ ನಿರ್ಜಲ ಉಪವಾಸ ಮಾಡಿದರೆ, ಪ್ರಾಯಃ ಎಂದೂ ಡಾಕ್ಟರ್ ಬಳಿ ಹೋಗುವ ಅವಶ್ಯಕತೆ ಬದುಕಿನಲ್ಲಿ ಬರುವುದಿಲ್ಲ " ಎಂದು...

ನಮ್ಮ ಹಿಂದಿನವರು ಹೇಳಿದರು ಅವಕಾಶಗಳಿಲ್ಲದೆ ಹಬ್ಬ ಆಚರಿಸುವುದನ್ನು ಬಿಟ್ಟರೂ ಪರವಾಗಿಲ್ಲ ....ಹರಿದಿನದ ಆಚರಣೆ ಎಂದೂ ಮರೆಯಬಾರದು ಅಂತ...
ಕೇವಲ ಈ ಮೂರು ದಿನಗಳ ಆಹಾರ ನಿಯಂತ್ರಣದಿಂದ ಇಡೀ ಜೀವಮಾನದಲ್ಲಿ ಒಮ್ಮೆಯೂ ಡಾಕ್ಟರ್ ಬಳಿ ಹೋಗುವ ಪ್ರಸಂಗ ಬಾರದಂತೆ ಆರೋಗ್ಯವಂತರಾಗಿ ಬದುಕಲು ಇದಕ್ಕಿಂತ ಸುಲಭದ ದಾರಿ ಮತ್ತಾವುದಿದೆ ಹೇಳಿ...


ಆದರೂ ನಾವು ಆಹಾರ ನಿಯಂತ್ರಣದ ಪದ್ಧತಿಯನ್ನು ಅಳವಡಿಸಿಕೊಳ್ಳುದಿಲ್ಲ... ಡಾಕ್ಟರ್ಗೆ ಲಕ್ಷ ಕೊಟ್ಟರೂ ಪರವಾಗಿಲ್ಲ , ಉಪವಾಸದ ಬಗೆಗೆ ನಮ್ಮ ಲಕ್ಷ್ಯ ಇಲ್ಲ ಎನ್ನುವಂತಾಗಿದೆ ನಮ್ಮ ಇಂದಿನ ಯಾಂತ್ರಿಕ ಬದುಕು...