Sunday 7 February 2016

ಈರುಳ್ಳಿ ಬೆಳ್ಳುಳ್ಳಿ- ಭಾಗ 3 - ನಮ್ಮ ಆಹಾರ-ಗೀತೆಯಲ್ಲಿ ಕೃಷ್ಣನ ಮಾತು

ನಮ್ಮ ಪ್ರಾಚೀನ ಋಷಿಮುನಿಗಳು ನಮ್ಮ ಆಹಾರವನ್ನು ಸಾತ್ವಿಕ, ರಾಜಸ, ತಾಮಸ ಎಂದು ಮೂರು ಭಾಗವಾಗಿ ವಿಂಗಡಿಸಿದ್ದಾರೆ... ಮನುಷ್ಯರಲ್ಲೂ ಈ ಮೂರುತರದ ಜನರಿರುತ್ತಾರೆ - ಕೆಲವರು ಸಾತ್ವಿಕರು, ಕೆಲವರು ರಾಜಸರು, ಕೆಲವರು ತಾಮಸರು...

ಕೃಷ್ಣ ಗೀತೆಯಲ್ಲಿ ಹೇಳುವ ಮಾತು ಕೂಡ ಆಯಾಯ ಸ್ವಭಾವದ ಜನರಿಗೆ ಆಯಾಯ ಆಹಾರ ಪದಾರ್ಥಗಳು ಇಷ್ಟವಾಗುತ್ತವೆ ಅಂತ... "ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ"...

ಭಗವದ್ಗೀತೆಯ 17 ನೇ ಅಧ್ಯಾಯದ ಈ ಮೂರು ಶ್ಲೋಕಗಳಲ್ಲಿ ಕೃಷ್ಣ ತುಂಬ ಸುಂದರವಾಗಿ ಮೂರು ಸ್ವಭಾವದ ಜನರ ಮೂರು ತರಹದ ಆಹಾರದ ಅಭಿರುಚಿಯ ಬಗೆಗೆ ಸುಂದರವಾದ ವಿಶ್ಲೇಷಣೆ ಕೊಟ್ಟು ಹೇಳುತ್ತಾನೆ :

ಆಯುಃಸತ್ವ ಬಲಾರೋಗ್ಯ ಸುಖಪ್ರೀತಿವಿವರ್ಧನಾಃ |
ರಸ್ಯ‌ಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ವಿಕಪ್ರಿಯಾಃ ||8||

ಇವು ಸಾತ್ವಿಕರಿಗೆ ಮೆಚ್ಚಿಕೆಯಾದ ತಿನಿಸುಗಳು :- ಬದುಕು, ಒಳ್ಳೆಯತನ, ತ್ರಾಣ, ಆರೋಗ್ಯಗಳನ್ನು ಹೆಚ್ಚಿಸುವಂಥವು, ಬಹಳಕಾಲ ಮೆಚ್ಚಿಗೆಯಾಗುವಂಥವು, ತಿಂದಾಗ ಖುಷಿಯಾಗುವಂಥವು, ರುಚಿಯಾದಂಥವು, ಕಸುವಿರುವಂಥವು, ದೀರ್ಘಕಾಲ ಪರಿಣಾಮ ಬೀರುವಂಥವು, ಮತ್ತೆ ಮತ್ತೆ ಮನ ಸೆಳೆಯುವಂಥವು...

ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣ ರೂಕ್ಷ ವಿದಾಹಿನಃ |
ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ ||9||

ಇವು ರಾಜಸರಿಗೆ ಮೆಚ್ಚಿಗೆಯಾದ ತಿನಿಸುಗಳು :- ಅತಿಯಾದ ಖಾರ, ಹುಳಿ, ಉಪ್ಪು , ತುಂಬ ಬಿಸಿ, ಬಿರುಸು , ನೀರಸ ಮತ್ತು ಉರಿಬರಿಸುವಂಥವು, ದುಃಖ-ದುಮ್ಮಾನ ಮತ್ತು ಕಾಯಿಲೆ ಬರಿಸುವಂಥವು...

ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ |
ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಂ ||10||

ಇದು ತಾಮಸರಿಗೆ ಮೆಚ್ಚಿನ ತಿನಿಸು :- ಅಟ್ಟು ಜಾವ ಕಳೆದದ್ದು , (ಒಂದು ಜಾವ= ಒಂದು ದಿವಸದ ಎಂಟನೇ ಒಂದು ಭಾಗ, ಮೂರು ಗಂಟೆಗಳ ಕಾಲ), ರುಚಿ ಕಳೆದುಕೊಂಡದ್ದು , ಹಳಸಿದ್ದು , ತಂಗಳಾದದ್ದು , ಎಂಜಲು ಮತ್ತು ಕೊಳಕಾದದ್ದು...

ಹಾಗೇ, ಕೃಷ್ಣ ಹೇಳುವ ಮತ್ತೊಂದು ಮಾತೆಂದರೆ ಮನುಷ್ಯರಾಗಿ ಹುಟ್ಟಿದ ಮೇಲೆ ಬದುಕಿನಲ್ಲಿ ಬಿಡದೆ ಮಾಡಲೇಬೇಕಾದ ಮೂರು ಕ್ರಿಯೆಗಳು ಯಜ್ಞ-ದಾನ-ತಪಸ್ಸು..

ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ |
ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್||5||
(ಭಗವದ್ಗೀತೆ ‌ಅಧ್ಯಾಯ- ಹದಿನೆಂಟು)


ಯಜ್ಞ-ದಾನ-ತಪಗಳೆಂಬ ಕರ್ಮವನ್ನು ಬಿಡಲಾಗದು. ಅದನ್ನು ಮಾಡಲೇಬೇಕು. ಯಜ್ಞದಾನ ಮತ್ತು ತಪಸ್ಸು ಜ್ಞಾನಿಗಳನ್ನು ಪಾವನಗೊಳಿಸುತ್ತದೆ... ಶ್ರೇಷ್ಟವಾದ ಯಜ್ಞ - ದಾನ - ತಪದ ಬಗೆಗೂ ಕೃಷ್ಣ ಹೇಳುತ್ತಾನೆ... ಅದು ಸಾಧ್ಯವಾಗಬೇಕಾದರೆ ಸಾತ್ವಿಕ ಆಹಾರದ ಪದ್ಧತಿ ಅತ್ಯವಶ್ಯ.... ಅದಕ್ಕೆ ಬೇಕು ಪರಿಶುದ್ಧವಾದ ಮನಸ್ಸು , ಶುದ್ಧ ಮನಸ್ಥಿತಿಗೆ ಬೇಕು ಇಂದ್ರಿಯಗಳ ನಿಯಂತ್ರಣ... ಬೆಳ್ಳುಳ್ಳಿ ಈರುಳ್ಳಿಗಳ ಸೇವನೆಯಿಂದ ನಮ್ಮ ಮುಖ್ಯ ಜ್ಞಾನೇಂದ್ರಿಯಗಳಾದ ಕಣ್ಣು-ಕಿವಿಗಳಿಗೆ ಗ್ರಹಣ ಹಿಡಿದಂತಾಗಿ ರಾಹು-ಕೇತುಗಳು ಸೂರ್ಯ-ಚಂದ್ರರನ್ನು ಆವರಿಸುವಂತೆ, ಈರುಳ್ಳಿ-ಬೆಳ್ಳುಳ್ಳಿಯ ತಾಮಸ ಗುಣದ ಪ್ರಭಾವದಿಂದ   ನಮ್ಮ ಮನಸ್ಸು ಬೇಡವಾದ ಚಿಂತನೆಗಳತ್ತ ಹರಿಯುತ್ತದೆತಮೋಗುಣದ ಪ್ರವೃತ್ತಿ ಹೆಚ್ಚಾಗಿ ಸೆಕ್ಸೀ ಡ್ರೀಮ್ಗಳತ್ತ ಮನಸ್ಸು ಹರಿಯುತ್ತದೆ... ದೇಹದಲ್ಲಿರುವ ಕುಂಡಲಿನಿ ಶಕ್ತಿ ಕೆಳಮುಖವಾಗಿ ಹರಿಯುತ್ತಾ ಕೇವಲ ಸೆಕ್ಸನ್ನು ಉತ್ತೇಜಿಸುತ್ತಾ , ಉನ್ನತ  ಚಿಂತನೆಗಳಿಂದ ನಮ್ಮ ಮನಸ್ಸು ವಂಚಿತಗೊಂಡು ನೀರಸವಾದ ಬದುಕಿಗೆ ಕಾರಣವಾಗುತ್ತದೆ.  ಆದ್ದರಿಂದ ಇಂಥಹ ತಾಮಸ ಪದಾರ್ಥಗಳನ್ನು ಆಹಾರವಾಗಿ ಎಂದೂ ಬಳಸಬಾರದು...

No comments:

Post a Comment

ಗೋ-ಕುಲ Go-Kula