ಭಾವ ಗುಚ್ಛ by “ತ್ರಿವೇಣಿ
ತನಯ“
ಕನಸು
ಹೊಂದಾಣಿಕೆ ಇರದ ಮನಗಳ ಮಧ್ಯೆ ಕಂದರ,
ಮುಖವಾಡದ ಬದುಕು ಅಸಹನೀಯ ದುರ್ಭರ,
ಅಹಮಿಕೆ ಕಳೆದ ವಿಶಾಲ ಮನವೆಷ್ಟು ಸೊಗಸು,
ಪ್ರೀತಿಯ ಸಹಬಾಳ್ವೆಯ ಕನಸಾದೀತೆ ನನಸು?
ಮಮಕಾರ
ನಾನು ನನ್ನದೆಂಬ ಮಮಕಾರ,
ಸಕಲ ನೋವುಗಳ ಮಹಾದ್ವಾರ,
ಒಮ್ಮೆ ತೊಲಗಿಸಲು ವ್ಯಾಮೋಹ,
ಸೊಗಸದು ನಿರ್ಲಿಪ್ತ ಬದುಕಿನ ಭಾವ.
ಸೀಮಿತ -ಅನಂತ
ಹರಿಯೇ ನೀ ಸರ್ವಶಕ್ತ ವ್ಯಾಪ್ತ ಅನಂತ,
ನನ್ನ ಮತಿಯಾದರೋ ಸೀಮಿತದೊಳು ಸೀಮಿತ,
ನಿನ್ನ ಎತ್ತರಕೆ ನಾನೇರಿ ಸೇರುವುದೆಂತು?
ನೀನೇ ಮನಕ್ಕಿಳಿದು "ನಿನ್ನರಿವು" ತೋರದ ಹೊರತು!
ಅರ್ಪಣೆ
ಅವಕೊಟ್ಟ ದೇಹ ಅವನಿಟ್ಟ ಜೀವ,
ಮಾಗಿಸುವ ಕೊಡುತ ನಲಿವು ಮತ್ತೆ ನೋವ,
ಪ್ರಕಟಗೊಳಿಸುತಿಹ ನಿನ್ನದೇ ಜೀವಸ್ವಭಾವ,
ಇದನರಿತು ಚರಿಸುತಿರೆ "ಸಮಯ"ಕ್ಕೊದಗುವ.
"ನಾನು"-ಅದೇನು?
ನಾನು ನಾನೆನುತ ನಾ ಮಾಡಿದ್ದು ಏನು?
ಏನೆಲ್ಲಾ ಆಗುತಿದೆ ತನ್ನಿಂದಲೇ ತಾನು!
ಉಣಬೇಕಲ್ಲವೇ ತಂದಿರುವ ಬುತ್ತಿ,
ಪರದೈವಕೆ ಮಣಿದು ಹಚ್ಚು ಭಕ್ತಿಯ ಬತ್ತಿ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula