Thursday, 18 February 2016

Bhava Guccha 25

ಭಾವ ಗುಚ್ಛ  by “ತ್ರಿವೇಣಿ ತನಯ“


ಸ್ವಭಾವ -ಪ್ರಭಾವ

ಏನು ವಿಚಿತ್ರವೀ "ಸ್ವಭಾವ" "ಪ್ರಭಾವ"ಗಳ ಆಟ,
ಯಾವಾಗಲೂ "ಪ್ರಭಾವ"ಗಳದ್ದೇ ಮೇಲಾಟ,
ಒಮ್ಮೆ "ಪ್ರಭಾವ"ಮೀರಿ "ಸ್ವಭಾವ"ಗೆದ್ದಿತೋ ಜೀವ ಮುಕ್ತ,
"ಪ್ರಭಾವ"ವ ಸರಿಸಿ "ಸ್ವಭಾವ"ಪ್ರಕಟಿಸುವುದದು ಹರಿಚಿತ್ತ.

ಪ್ರಹ್ಲಾದ

ಬರೀ ಪುರಾಣದಲ್ಲಿಲ್ಲ ಹಿರಣ್ಯಕಶಿಪು-ಪ್ರಹ್ಲಾದ,
ಸಾತ್ವಿಕರೆಲ್ಲರ ಗುಣವದು ಪ್ರಕೃಷ್ಟ ಆಹ್ಲಾದ,
ಜೀವನ ಕಾಮನೆಗಳೇ ಹಿರಣ್ಯಕಶಿಪುವಿನ ಅವತಾರ,
ನರಸಿಂಹನಾದರೋ ಬಿಂಬಾವತಾರ,
ಒಳ ಹೊರಗೂ ಅವನದೇ ವ್ಯಾಪಾರ,
"ಪ್ರಹ್ಲಾದ" ಪ್ರಬಲನಾದಾಗ ಮಾತ್ರವೇ ನರಸಿಂಹಾವತಾರ.

ಮಥಿಸಿ ಏಳು -ಮೇಲೆ ಏಳು

ಏಳು ದಿನದ ಕತೆಯ ಕೇಳಿಸಿ,
ಏಳು ಸಮುದ್ರ ಮಥನ ಮಾಡಿಸಿ,
ಏಳ್ಹತ್ತರಾಕೆಯಿಂದ ಉಡುಗೆಗಳ ಕಳಚಿ,
ಹದಿನೆಂಟರ ನಂಟು ಕೊಡೋ ಅಗಲದಾ ನೆಂಟ.

ತ್ರಾಣ -ನಾರಾಯಣ

ಸಕಲ ಬ್ರಹ್ಮಾಂಡದೊಡೆಯ ನೀ ನಾರಾಯಣ,
ನಿನ್ನ ಪ್ರೀತಿಯ ಕೂಸು ಮುಖ್ಯಪ್ರಾಣ,
ಕೂಸಿದ್ದರೇ ಪ್ರಾಣ-ಕೂಸಿದ್ದರೇ ತ್ರಾಣ,
ಕೂಸು ಕೊಟ್ಟರೆ ಸುಜ್ಞಾನ ಕಳಚೀತು ಭವದಾವರಣ.

ಅಹಂ -ಖಾರ

ನಾನು ನನ್ನದೆಂಬ ಅಹಂಕಾರಕ್ಕೆ ಮಿತಿ ಉಂಟೆ?
"ಅಹಂ" ಬಿಡದಿರೆ ಸಂಸಾರ ನಿತ್ಯ ಕಗ್ಗಂಟೆ,
ಕಣ್ಮುಚ್ಚಿ ನೋಡಿದರೆ ಏನಿಲ್ಲ ಸಾರ,
ತೀರಿಸಲೇಬೇಕಲ್ಲ ಪ್ರಾರಬ್ಧ ಅಪಾರ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula