Sunday 21 February 2016

ಜ್ಞಾನದ ದಾರಿ - ಗೀತೆಯ ಬೆಳಕು

ಜ್ಞಾನದ ದಾರಿಯಲ್ಲಿ ಸಾಗಬೇಕಿದ್ದರೆ ನಮ್ಮ ನಡತೆಯಲ್ಲಿ ನಾವು ಅನುಸರಿಸಬೇಕಾದ ಕೆಲವು ನೀತಿ ಸಂಹಿತೆ(Code of Conduct)ಗಳಿವೆ. ಅದನ್ನು ನಾವು ಅನುಸರಿಸಬೇಕು. ನಾವು ನಮ್ಮ ಜೀವನದಲ್ಲಿ ಅನುಸರಿಸಬೇಕಾದ ಇಪ್ಪತ್ತು ಗುಣ(Discipline)ಗಳನ್ನು ಶ್ರೀಕೃಷ್ಣ ಗೀತೆಯಲ್ಲಿ ನೀಡಿದ್ದಾನೆ. ಈ ಗುಣಗಳಲ್ಲಿ ಪ್ರತಿಯೊಂದನ್ನು ನಮ್ಮ ಜೀವನದಲ್ಲಿ ಎಷ್ಟು ಹೆಚ್ಚು ಅಳವಡಿಸಿಕೊಂಡೆವೋ ಅಷ್ಟು ನಾವು ಜ್ಞಾನ ದಾರಿಯಲ್ಲಿ ಸಾಗಬಹುದು. ಇಲ್ಲದಿದ್ದರೆ ನಾವು ಅಜ್ಞಾನದ ದಾರಿಯಲ್ಲಿ ಸಾಗಬೇಕಾಗುತ್ತದೆ ಎಂದು ಕೃಷ್ಣ ಎಚ್ಚರಿಸಿದ್ದಾನೆ.

ಅಮಾನಿತ್ವಮಡಂಭಿತ್ವಮಹಿಂಸಾ ಕ್ಷಾಂತಿರಾರ್ಜವಮ್ ।
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ   ॥೧೩-೭॥

ಇಂದ್ರಿಯಾರ್ಥೇಷು ವೈರಾಗ್ಯಮನಹಂಕಾರ ಏವ ಚ ।
ಜನ್ಮಮೃತ್ಯುಜರಾವ್ಯಾಧಿದುಃಖದೋಷಾನುದರ್ಶನಮ್  ॥೧೩-೮॥

ಅಸಕ್ತಿರನಭಿಷ್ವಂಗಃ ಪುತ್ರದಾರಗೃಹಾದಿಷು ।
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು   ॥೧೩-೯॥

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ ।
ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ   ॥೧೩-೧೦॥

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಮ್ ।
ಏತಜ್ ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋSನ್ಯಥಾ ॥೧೩-೧೧॥

(೧) ಅಮಾನಿತ್ವಮ್: ಜ್ಞಾನ ಗಳಿಸುವುದಕ್ಕಾಗಿ ನಾವು ಮಾನ-ಸಮ್ಮಾನದ ಬಯಕೆಯನ್ನು ಬಿಡಬೇಕು. ತನಗೆ ಸನ್ಮಾನವಾಗಬೇಕು, ಪ್ರಶಸ್ತಿ ಸಿಗಬೇಕು ಎನ್ನುವ ನಿರೀಕ್ಷೆಯಲ್ಲಿರುವವರಿಗೆ ಎಂದೂ ಜ್ಞಾನ ಸಿದ್ಧಿಯಾಗದು. ಅದಕ್ಕಾಗಿ ಪ್ರಚಾರಪ್ರಿಯತೆಯನ್ನು ನಾವು ಮೊದಲು ಬಿಡಬೇಕು. ಎಲ್ಲಾ ಪ್ರಚಾರಗಳಿಗೆ ತಿಲಾಂಜಲಿ ಕೊಟ್ಟು ಜ್ಞಾನದ ಬೆನ್ನು ಹತ್ತು. ಆಗ ಜ್ಞಾನ ದಕ್ಕುತ್ತದೆ. ಯಾರಾದರೂ ನಿನ್ನನ್ನು ಮೆಚ್ಚಿಕೊಂಡರೆ ಅದು ಅವರ ದೊಡ್ಡಸ್ತಿಕೆ. ಅಲ್ಲಿ ನಮ್ರತೆಯಿಂದಿರು.
(೨) ಅಡಂಭಿತ್ವಮ್ : ಎಲ್ಲರ ಮುಂದೆ ಸಣ್ಣವನಾಗಿ ಬದುಕಲು ಕಲಿ. ದೊಡ್ಡಸ್ತಿಕೆಯ ಪ್ರದರ್ಶನ ಬೇಡ. ಜ್ಞಾನ ಮಾರ್ಗದಲ್ಲಿ ಎಂದೂ ಪ್ರಾಮಾಣಿಕತೆಯಿಂದ ಅತ್ತ ಸರಿಯಬೇಡ. ಇಲ್ಲದ್ದನ್ನು ಇದೆ ಎಂದು ತೋರಿಸಲು ಹೋಗಬೇಡ.
(೩) ಅಹಿಂಸಾ : ಎಂದೂ ಇನ್ನೊಬ್ಬರನ್ನು ನೋಯಿಸಬೇಡ. ನಾವು ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದರೆ ಅದನ್ನು ಮರಳಿ ವಾಸಿ ಮಾಡುವ ಯಾವ ಔಷಧವೂ ಇಲ್ಲ. ಆದ್ದರಿಂದ ಎಂದೂ ಇನ್ನೊಬ್ಬರನ್ನು ಮುಖಭಂಗ(Insult) ಮಾಡಬೇಡ. ಇನ್ನೊಬ್ಬರಿಗೆ ತೊಂದರೆ ಕೊಡದೇ ಇರುವುದು ಅಹಿಂಸೆ.
(೪)  ಕ್ಷಾಂತಿಃ :  ಪ್ರತೀಕಾರ ಮಾಡದೇ ಇರುವುದು. ಒಬ್ಬರು ನಮಗೆ ಕೇಡು ಬಗೆದಾಗ ನಾವು ಅದಕ್ಕೆ ಪ್ರತಿಕೇಡು ಬಗೆಯಲು ಹೋಗಬಾರದು. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಒಂದು ವ್ಯವಸ್ಥೆ ಇದೆ. ಲೌಕಿಕವಾಗಿ ನೋಡಿದರೆ, ಯಾರಾದರು ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ಕೊಡುವ  ಜವಾಬ್ಧಾರಿ ಆರಕ್ಷಕ ಮತ್ತು ನ್ಯಾಯಾಂಗ ವ್ಯವಸ್ಥೆಯದೇ ಹೊರತು ನಮ್ಮದಲ್ಲ. ಒಂದು ವೇಳೆ ನಾವು ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಹೊರಟರೆ ಅದು ಕಾನೂನನ್ನು ಕೈಯಲ್ಲಿ ತೆಗೆದುಕೊಂಡ ಅಪರಾಧವಾಗುತ್ತದೆ. ಅದೇ ರೀತಿ ಭಗವಂತನ ರಾಜ್ಯದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲು ಪ್ರತ್ಯೇಕ ವ್ಯವಸ್ಥೆ ಇದೆ. ಆದ್ದರಿಂದ ನಿನಗೆ ಪ್ರತೀಕಾರ ತೆಗೆದುಕೊಳ್ಳುವುದಕ್ಕಾಗಲೀಶಾಪ ಹಾಕುವುದಕ್ಕಾಗಲೀ ಹಕ್ಕಿಲ್ಲ.
ಈ ಮೇಲಿನ ಗುಣಗಳಿಗೆ ಉತ್ತಮ ದೃಷ್ಟಾಂತ ಜಡಭರತ ಮತ್ತು ರೈಕ್ವ ಮುನಿ. ಇವರ ಜೀವನ ಚರಿತ್ರೆಯನ್ನು ಓದಿದರೆ ಅವರು ಈ ಗುಣವನ್ನು ತಮ್ಮ ಜೀವನದಲ್ಲಿ ಹೇಗೆ ಪಾಲಿಸಿದ್ದರು ಎನ್ನುವುದು ತಿಳಿಯುತ್ತದೆ.
(೫) ಆರ್ಜವಮ್ : ಮುಖವಾಡವಿಲ್ಲದ ಬದುಕು. ನೇರ ನಡೆ ನುಡಿ. ಒಳಗೊಂದು ಹೊರಗೊಂದು ಇಲ್ಲದ ಪ್ರಾಮಾಣಿಕ ಬದುಕು(Sincerity-Straightforwardness).
(೬) ಆಚಾರ್ಯೋಪಾಸನಮ್: ಆಚಾರ್ಯ ಎಂದರೆ ಯಾವುದು ಸರಿ ಯಾವುದು ತಪ್ಪು ಎಂದು ಚೆನ್ನಾಗಿ ತಿಳಿದು ಅದನ್ನು ಆಚರಣೆಗೆ ತರುವವರು. ತಾವು ಸತ್ಯವನ್ನು ಕಂಡು, ಸಮಾಜದ ಮುಂದೆ ಅದನ್ನು ನಡೆದು ತೋರಿಸುವವರು. ಅಂಥವರ ಸೇವೆ ಮಾಡು. ಜ್ಞಾನಿಗಳು ಸುಲಭವಾಗಿ ಸಿಗುವುದಿಲ್ಲ ಮತ್ತು ಅವರು ಸಾಮಾನ್ಯವಾಗಿ ಪರೀಕ್ಷಿಸದೆ ಜ್ಞಾನ ಧಾರೆ ಮಾಡುವುದಿಲ್ಲ. ಏನೇ ಆದರೂ ಜ್ಞಾನಿಗಳ ಬೆನ್ನುಬಿಡಬೇಡ. ನಿನ್ನಲ್ಲಿರುವ ಜ್ಞಾನ ತೃಷೆ ಗಾಢವಾಗಿದ್ದಲ್ಲಿ ಖಂಡಿತವಾಗಿ ಅವರು ಜ್ಞಾನ ಧಾರೆ ಮಾಡುತ್ತಾರೆ. ಜ್ಞಾನ ಬೇಕಿದ್ದರೆ ಜ್ಞಾನಿಗಳು ತೆರೆದುಕೊಳ್ಳುವ ತನಕ ಕಾಯಬೇಕು. ಇದಕ್ಕೆ ಉತ್ತಮ ದೃಷ್ಟಾಂತ ಶ್ವೇತಕೇತು ಮತ್ತು  ಪ್ರಶ್ನೋಪನಿಷತ್ತಿನಲ್ಲಿ ಬರುವ ಪಿಪ್ಪಲಾದರ ಕಥೆ.
(೭) ಶೌಚಮ್: ಶೌಚ ಎಂದರೆ ಶುಚಿತ್ವ. ಕನ್ನಡದಲ್ಲಿ ಶೌಚಮ್ ಎಂದರೆ ‘ಮಡಿ’. ನಾವು ಮಡಿ ಮಾಡುವುದನ್ನು ಬಿಟ್ಟು ಮಡಿಯಾಗುವುದನ್ನು ಕಲಿಯಬೇಕು. ಸ್ನಾನ ಮಾಡಿ ಒದ್ದೆ ಬಟ್ಟೆ ಉಟ್ಟು ಯಾರನ್ನೂ ಮುಟ್ಟದೆ ಇದ್ದರೆ ಮಡಿಯಾಗಲು ಸಾಧ್ಯವಿಲ್ಲ.  ಶುಚಿ ಎನ್ನುವುದು ಮೂಲಭೂತವಾಗಿ ಮನಸ್ಸಿಗೆ ಸಂಬಂಧಪಟ್ಟದ್ದು. ಅದಕ್ಕೆ ಪೂರಕವಾಗಿ ದೇಹ ಶುದ್ಧಿ. ಪ್ರಾಪಂಚಿಕ ವಿಚಾರವನ್ನು ಮರೆತು, ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು ಮಡಿ. ನಾವು ಕಾಯೇನ-ವಾಚಾ-ಮನಸಾ ಮಡಿಯಾಗಬೇಕು. ನಮ್ಮಲ್ಲಿ ಕೆಟ್ಟ ಯೋಚನೆ ಬಂದರೆ, ಕೆಟ್ಟ ಮಾತು ಬಾಯಲ್ಲಿ ಬಂದರೆ- ಆಗ  ನಾವು ಮೈಲಿಗೆ. ನಿಜವಾಗಿ ಕಾಯೇನ-ವಾಚಾ-ಮನಸಾ ಮಡಿಯಾಗಿರುವವ ಮೈಲಿಗೆಯವರೊಂದಿಗಿದ್ದರೆ  ಜೊತೆಗಿರುವವರೆಲ್ಲರೂ ಮಡಿಯಾಗಬಹುದು. ಇದನ್ನೇ ಹಿಂದೆ ‘ಪಂಕ್ತಿಪಾವನ’ ಎಂದು ಕರೆಯುತ್ತಿದ್ದರು. ಪೂರ್ಣ ಮಡಿಯಾಗಿರುವವ ಯಾವ ಪಂಕ್ತಿಯಲ್ಲಿ ಕುಳಿತನೋ ಆ ಪಂಕ್ತಿ ಮಡಿ. ಶಾಸ್ತ್ರ ಜ್ಞಾನವಿಲ್ಲದ ಮಡಿ ಮಡಿಯಲ್ಲ. ದೇವರ ಸ್ಮರಣೆ ಮನಸ್ಸಿನಲ್ಲಿ, ದೇವರ ನಾಮ ಬಾಯಿಯಲ್ಲಿ ಇದ್ದಾಗ ನಾವು ಮಡಿ.
ಮನಸ್ಸನ್ನು ಶುದ್ಧ ಮಾಡುವುದಕ್ಕೋಸ್ಕರ ಆಚಮನ ಮತ್ತು ಪ್ರಾಣಾಯಾಮ. “ಓ ಭಗವಂತಾನಿನ್ನ ಕಾರುಣ್ಯಧಾರೆಯಿಂದ ನನ್ನ ಸಹಸ್ರಾರದಿಂದ ಅಮೃತವನ್ನು ಕೆಳಕ್ಕೆ ಇಳಿಸಿ, ನನ್ನ ಇಡೀ ಮೈ ಪಾವನವಾಗುವಂತೆ ಮಾಡು. ನನ್ನೊಳಗಿನ ಎಲ್ಲಾ ಪಾಪಗಳೂ ಕೊಳೆಗಳೂ ಸುಟ್ಟು ತೊಳೆದುಹೋಗಲಿ” ಎನ್ನುವ ಅನುಸಂಧಾನದಿಂದಧ್ಯಾನಪೂರ್ವಕ, ಪಾಪಪುರುಷ ನಿರಸನ ಮಾಡಬೇಕು. ಇಲ್ಲಿ ನಮ್ಮ ತಲೆಯಿಂದ ಅಮೃತಧಾರೆ ಇಳಿದು ಬರುವುದನ್ನು ನಾವು ಅನುಭವಿಸಬೇಕು(Feel it). ಪ್ರಾಣಾಯಾಮದಿಂದ ನಮ್ಮೊಳಗಿನ ಎಲ್ಲಾ ಕೊಳೆ ಸುಟ್ಟು ಹೋಗುತ್ತದೆ. ನಮ್ಮ ಅಂಗಾಂಗದಲ್ಲಿ ಕೂತ ಭಗವಂತನ ಸ್ಮರಣೆಯೇ ಆಚಮನ. “ಓ ನೀರೇ, ನೀನು ಸುಖದ ಸೆಲೆ, ನೀನು ಸುಖದ ನೆಲೆ, ನಿನ್ನನ್ನು ಪ್ರೋಕ್ಷಿಸಿಕೊಳ್ಳುತ್ತಿದ್ದೇನೆ. ಆ ಭಗವಂತ ನನ್ನಲ್ಲಿ ಬಂದು ನೆಲೆಸುವಂತೆ ಮಾಡು” ಎಂದು ಪ್ರಾರ್ಥಿಸಿ ಪ್ರೋಕ್ಷಣೆಮಾಡಿಕೊಳ್ಳಬೇಕು. ಇದೆಲ್ಲವನ್ನೂ ನಾವು ತಿಳಿದು ಮಾಡಿದಾಗ ಮಾತ್ರ  ಮಡಿಯಾಗುತ್ತೇವೆ. ದೇವರನ್ನು ನೆನೆಯುವುದೇ ಮಡಿ. ದೇವರನ್ನು ಮರೆಯುವುದೇ ಮೈಲಿಗೆ. ಪುಂಡರೀಕಾಕ್ಷನ ಸ್ಮರಣೆ ಇಲ್ಲದೆ, ಅಂತರಂಗ ಶುದ್ಧಿ ಅಸಾಧ್ಯ.
(೮) ಸ್ಥೈರ್ಯಮ್ : ಮನಸ್ಸಿನ ಸ್ಥಿರತೆ(Conviction) ಸ್ಥೈರ್ಯ. ನಮಗೆ ನಮ್ಮದೇ ಆದ ಸ್ವಂತ ನಿರ್ಧಾರ ಬೇಕು. ಯಾರೋ ಹೇಳಿದಂತೆ ನಾವು ನಮ್ಮ ನಿರ್ಧಾರವನ್ನು ಬದಲಿಸಿಕೊಳ್ಳುತ್ತಾ  ಗೊಂದಲಕ್ಕೊಳಗಾಗಬಾರದು. ನಾವು ನಮ್ಮ ತಲೆಯಲ್ಲಿ ಚಿಂತಿಸಬಲ್ಲವರಾಗಬೇಕು. ನಮಗೆ ಯಾವುದಾದರೂ ಪ್ರಶ್ನೆ ಬಂದರೆ ಅದಕ್ಕೆ ಉತ್ತರವನ್ನು ಕಂಡುಕೊಳ್ಳುವ ಸಾಮರ್ಥ್ಯ ನಮ್ಮ ತಲೆಯಲ್ಲೇ ಇರುತ್ತದೆ. “ಎಲ್ಲಿ ಪ್ರಶ್ನೆ ಇದೆಯೋ ಅಲ್ಲೇ ಉತ್ತರವೂ ಇರುತ್ತದೆ”. ಶಾಸ್ತ್ರವನ್ನು ಚೆನ್ನಾಗಿ ಅಧ್ಯಾಯನ ಮಾಡಿ ನೀನೇ ನಿನ್ನ ಸಮಸ್ಯೆಗೆ ಉತ್ತರ ಕಂಡುಕೊಂಡು ದೃಢವಾಗಿ ಕೆಲಸ ಮಾಡು. ಯಾರ ಯಾರೋ ಮಾತನ್ನು ಕೇಳಿ ಗೊಂದಲಗೊಳ್ಳದೆ ಸ್ಥೈರ್ಯವನ್ನು ಸಾಧಿಸು.  
(೯) ಆತ್ಮವಿನಿಗ್ರಹಃ : ಇಂದ್ರಿಯ ನಿಯಂತ್ರಣ(Self Control). ನಮ್ಮ ಇಂದ್ರಿಯ ನಮ್ಮ ಹಿಡಿತದಲ್ಲಿರಬೇಕು. ಇಂದ್ರಿಯ ಹಿಡಿತಲ್ಲಿರಬೇಕಾದರೆ ನಾವು ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಮನಸ್ಸಿನ ಕೈಯಲ್ಲಿ ನೀನು ಮಂಗನಾಗಬೇಡ, ಮನಸ್ಸನ್ನು ನೀನು ನಿಯಂತ್ರಿಸು. ಇದಕ್ಕಾಗಿ ನಿನ್ನ ಮನಸ್ಸನ್ನು ದೇವರಲ್ಲಿ ನೆಲೆ ನಿಲ್ಲಿಸು. ಹೀಗೆ ಮನೋನಿಗ್ರಹದಿಂದ ಇಂದ್ರಿಯ ನಿಗ್ರಹ ಸಾಧಿಸು.
(೧೦) ಇಂದ್ರಿಯಾರ್ಥೇಷು ವೈರಾಗ್ಯ : ಇಂದ್ರಿಯಗಳನ್ನು ಹೊರಪ್ರಪಂಚದತ್ತ ಹರಿಯದಂತೆ ತಡೆದು ಮನಸ್ಸನ್ನು ಭಗವಂತನಲ್ಲಿ ನೆಲೆ ನಿಲ್ಲಿಸುವುದು. ಇದನ್ನು ಶಮ-ಧಮ ಎನ್ನುತ್ತಾರೆ. ಇಂದ್ರಿಯಗಳು ಲೌಕಿಕ ವಿಚಾರದತ್ತ ಹರಿಯದಂತೆ ಮಾಡುವುದು ಧಮ ಮತ್ತು ಅದನ್ನು ಭಗವಂತನತ್ತ ಹರಿಯುವಂತೆ ಮಾಡುವುದು ಶಮ. ಭಗವಂತನ ಬಗ್ಗೆ ತಿಳಿದಾಗ ಇಂದ್ರಿಯ ಇನ್ಯಾವುದರ ಕಡೆಗೂ ಹರಿಯುವುದಿಲ್ಲ. ಪ್ರಾಪಂಚಿಕವಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧದ ಬಗ್ಗೆ ವಿರಕ್ತಿ ತಾಳು. ಉದಾಹರಣೆಗೆ ನಾಲಿಗೆ ಚಪಲ. ನಮ್ಮಲ್ಲಿ ಕೆಲವರು ಮನೆಯಲ್ಲಿ ಯಾವ ರೀತಿ ಅಡಿಗೆ ಮಾಡಿದರೂ ಅಲ್ಲಿ ಅದು ಸರಿಯಾಗಿಲ್ಲ, ಇದು ಸರಿಯಾಗಿಲ್ಲ ಇತ್ಯಾದಿಯಾಗಿ ತಗಾದೆ ಎತ್ತುತ್ತಾರೆ. ಈ ರೀತಿಯ ಚಪಲವನ್ನು ಬಿಟ್ಟುಬಿಡು.  ಇಲ್ಲಿ ಬೇಕು ಬೇಡಗಳ ಆಯ್ಕೆ ಇಲ್ಲದೆ ಏನನ್ನು ಹಾಕಿದರೂ ಭಗವಂತನ ಪ್ರಸಾದ ಎಂದು ಸ್ವೀಕರಿಸುವುದನ್ನು ಕಲಿ. ಈ ರೀತಿ ಶಮ-ಧಮ ಸಾಧಿಸು. 
(೧೧) ಅನಹಂಕಾರ: ಇದು ಎಲ್ಲಾ ಗುಣಗಳಿಗಿಂತ ಶ್ರೇಷ್ಠ ಗುಣ. ನಮ್ಮಲ್ಲಿ ಯಾವ ಗುಣವಿದ್ದರೂ ಅದು ನಮ್ಮ ಅಹಂಕಾರದ ಮುಂದೆ ವ್ಯರ್ಥ. ಅಹಂಕಾರ(Ego) ನಮ್ಮಲ್ಲಿನ ಎಲ್ಲಾ ಗುಣವನ್ನು ನಾಶ ಮಾಡುತ್ತದೆ. ಅಹಂಕಾರವಿದ್ದೆಡೆ  ಉಳಿದ ಗುಣಗಳಿಗೆ ಅಸ್ತಿತ್ವವೇ ಇಲ್ಲ. ಆದ್ದರಿಂದ ಕೃಷ್ಣ ಅದನ್ನು ಇಲ್ಲಿ “ಏವ-ಚ” ಎಂದು ಒತ್ತಿ ಹೇಳಿದ್ದಾನೆ. ‘ನಾನು ವಿದ್ವಾಂಸ, ನಾನು ಅನುಷ್ಠಾನವಂತ, ನಾನು ಮಡಿ’ ಹೀಗೆ ನಮ್ಮನ್ನು ಅಹಂಕಾರ ಪ್ರತಿಯೊಂದು ವಿಚಾರದಲ್ಲೂ ಕಾಡುತ್ತದೆ. ಹೀಗೆ ನಾವು ಅಹಂಕಾರಪಟ್ಟರೆ ನಮ್ಮ ಅನುಷ್ಠಾನ-ಅನುಷ್ಠಾನವೇ ಆಗುವುದಿಲ್ಲ. ಎಲ್ಲಿ ಅಹಂಕಾರ ಕಾಡಿತೋ ಅಲ್ಲಿ ಸಾಧನೆ ವ್ಯರ್ಥವಾಗುತ್ತದೆ. ಎಲ್ಲಿ ಅಹಂಕಾರವಿರುತ್ತದೆ ಅಲ್ಲಿ ದೇವರಿರುವುದಿಲ್ಲ-ಅಂದರೆ ಅಹಂಕಾರದಿಂದಾಗಿ ನಾವು ದೇವರಿಂದ ದೂರ ಸರಿಯುತ್ತೇವೆ. ಈ ಕಾರಣದಿಂದ ‘ನಾನು ಮಾಡಿದೆ, ನನ್ನಿಂದಾಯ್ತು’ ಎಂದು ಬೀಗುವುದನ್ನು ಬಿಡು. ಭಗವಂತ ನನ್ನ ಕೈಯಿಂದ ಮಾಡಿಸಿದ ಎಂದು ಆತನಿಗೆ ಕೃತಜ್ಞತೆಯನ್ನು ತೋರು.
(೧೨) ಜನ್ಮ ಮೃತ್ಯು ಜರಾ ವ್ಯಾಧಿ ದುಃಖ ದೋಷ ಅನುದರ್ಶನಮ್:  ಜೀವನವನ್ನು ಒಳನೋಟದಿಂದ ನೋಡು. ಈ ಜೀವನ ಎನ್ನುವುದು ಹುಟ್ಟು ಸಾವು ಎನ್ನುವ ಎರಡು ದಡದ ನಡುವೆ ಹರಿಯುವ ಒಂದು ಪ್ರವಾಹ. ಈ ಪ್ರವಾಹದಲ್ಲಿ ವ್ಯಾಧಿ, ಮುಪ್ಪು, ದುಃಖ, ಶೋಕ ಎನ್ನುವ ಅಲೆಗಳ ಸರಮಾಲೆ. ಈ ನಮ್ಮ ಬದುಕಿನ ಉದ್ದೇಶವೇನುಭಗವಂತ ನಮ್ಮನ್ನು ಏಕೆ ಹುಟ್ಟಿಸಿದ, ಮಾನವ ಜನ್ಮವನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎನ್ನುವ ಅನುದರ್ಶನ ಮಾಡು. ಆಹಾರ ನಿದ್ರಾ ಭಯ ಮೈಥುನ ಇಷ್ಟೇ ಜೀವನವಲ್ಲ. ಇದನ್ನು ಪ್ರಾಣಿಗಳೂ ಅನುಭವಿಸುತ್ತವೆ. ಆದ್ದರಿಂದ ಶಾಸ್ತ್ರವನ್ನು ಓದಿ ಸತ್ಯಕ್ಕೆ ಅನುಗುಣವಾದ ಯಥಾರ್ಥ ದರ್ಶನವನ್ನು ಮಾಡಿಕೋ. ಕೇವಲ ಲೌಕಿಕ ಸುಖದ ನಿರೀಕ್ಷೆಯಲ್ಲಿ ಬದುಕುವುದನ್ನು ಬಿಟ್ಟು-ಸತ್ಯದ ಸಾಕ್ಷಾತ್ಕಾರಕ್ಕಾಗಿ, ಭಗವಂತನನ್ನು ಸೇರುವುದಕ್ಕಾಗಿ ಬದುಕು. ಎಲ್ಲಾ ಲೌಕಿಕ ಸುಖ, ಸಂಪತ್ತು ನಿಸ್ಸಾರ. ಇದರಿಂದಾಚೆಗಿನ ಸಾರವಾದ ಭಗವಂತನನ್ನು ತಿಳಿದು ಅದರತ್ತ ಹೆಜ್ಜೆಹಾಕು.
(೧೩) ಅಸಕ್ತಿಃ : ‘ಸಕ್ತಿ’ ಎಂದರೆ ಹಚ್ಚಿಕೊಳ್ಳುವುದು ಅಥವಾ ಅಂಟಿಸಿಕೊಳ್ಳುವುದು(Attachment).  ನಮ್ಮೆಲ್ಲಾ ದುಃಖಕ್ಕೂ ಮೂಲಕಾರಣ ‘ಸಕ್ತಿ’. ಆದ್ದರಿಂದ ಯಾವುದನ್ನೂ ಅಂಟಿಸಿಕೊಳ್ಳಬೇಡ. ಹುಟ್ಟುವಾಗ ನಾವು ಏನನ್ನೂ ತಂದಿಲ್ಲ, ಸಾಯುವಾಗ ಯಾವುದನ್ನೂ ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಲೌಕಿಕವಾದ ಈ ಸಕ್ತಿಯಿಂದ ದೂರ ನಿಲ್ಲು. ಬಂದದ್ದನ್ನು ಭಗವಂತನ ಪ್ರಸಾದವೆಂದು ಸ್ವೀಕರಿಸು, ಹೋದಾಗ ಭಗವಂತನ ಇಚ್ಛೆ ಎಂದು ಸಂತೋಷದಿಂದಿರು.
(೧೪) ಅನಭಿಷ್ವಂಗಃ ಪುತ್ರ ದಾರ ಗೃಹ ಆದಿಷು : ಅಭಿಷ್ವಂಗ ಎಂದರೆ ಅತಿಯಾಗಿ ಹಚ್ಚಿಕೊಳ್ಳುವುದು(Over attachment). ಮನೆ, ಹೆಂಡತಿ(ಗಂಡ/ಹೆಂಡತಿ) ಮಕ್ಕಳು ಇತ್ಯಾದಿಯನ್ನು ಅತಿಯಾಗಿ ಹಚ್ಚಿಕೊಳ್ಳಬೇಡ ಎನ್ನುತ್ತಾನೆ  ಕೃಷ್ಣ.  ಇಲ್ಲಿ ಮನೆ ಸಂಸಾರವನ್ನು ಹಚ್ಚಿಕೊಳ್ಳದೇ ಇರುವುದು ಎಂದರೆ ಎಲ್ಲವನ್ನೂ ತೊರೆದು ಕಾಡಿಗೆ ಹೋಗುವುದಲ್ಲ. ‘ಇದನ್ನು ಬಿಟ್ಟು ನಾನು ಇರಲಾರೆ’ ಎನ್ನುವ ಅಭಿಷ್ವಂಗ ಬಿಟ್ಟುಬಿಡುವುದು ಅಷ್ಟೆ. ಜೀವನದಲ್ಲಿ ಏನು ಬರುತ್ತದೋ ಅದನ್ನು ಸಾಕ್ಷೀಭೂತನಾಗಿ ನೋಡು. ಜೀವನವೇ ಒಂದು ನಾಟಕ, ಅದರಲ್ಲಿ ನೀನೇ ಪಾತ್ರಧಾರಿ , ನೀನೇ  ಪ್ರೇಕ್ಷಕ. ಭಗವಂತ ನಿರ್ದೇಶಕ. ಇಲ್ಲಿ ನನ್ನ ಮಕ್ಕಳೇ ನನ್ನ ಬದುಕು, ನನ್ನ ಪತಿ/ಪತ್ನಿ ನನ್ನ ಬದುಕು, ನನ್ನ ಸಂಪಾದನೆಯೇ ನನ್ನ ಬದುಕು, ಇದನ್ನು ಬಿಟ್ಟು ನನ್ನ ಅಸ್ತಿತ್ವವಿಲ್ಲ ಎನ್ನುವ ಅತಿಯಾದ ಅಭಿಷ್ವಂಗ ಬೇಡ. ಪ್ರೀತಿಸು-ಆದರೆ ಹಚ್ಚಿಕೊಂಡು ಕೊರಗಬೇಡ, ನಿರಾಶನಾಗಬೇಡ. ಈ ರೀತಿ ಬದುಕಲು ಕಲಿತಾಗ ಜೀವನ ಸುಂದರವಾಗಿರುತ್ತದೆ. ನಮ್ಮಿಂದ ನಮ್ಮ ಮಕ್ಕಳು ದೂರವಾದರೆ, ಹೆಂಡತಿ/ಗಂಡ ದೂರವಾದರೆ, ನಾವು ನಮ್ಮ ಸಂಪತ್ತನ್ನು(ಮನೆ, ಆಸ್ತಿ ಇತ್ಯಾದಿ) ಕಳೆದುಕೊಂಡರೆ ದುಃಖ-ನಿರಾಶೆಯಾಗುವುದಿಲ್ಲ. ಈ ರೀತಿ ಬದುಕಿದಾಗ  ಜೀವನದಲ್ಲಿ ಏನು ದುರಂತ ಬಂದರೂ ಅದು ನಮ್ಮ ಪಾಲಿನ ಪಾತ್ರಾಭಿನಯ ಎನ್ನುವ ಭಾವನೆಯಿಂದ ನಾವು ಅದನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ-ಆಘಾತವಾಗುವುದಿಲ್ಲ.
(೧೫) ನಿತ್ಯಮ್ ಚ ಸಮಚಿತ್ತತ್ವಮ್ ಇಷ್ಟ ಅನಿಷ್ಟ ಉಪಪತ್ತಿಷು : ಜೀವನದಲ್ಲಿ ಇಷ್ಟವಾದ ಘಟನೆ ನಡೆಯಬಹುದು, ಅನಿಷ್ಟವಾದ ಘಟನೆ ನಡೆಯಬಹುದು. ಇಷ್ಟ ಅನಿಷ್ಟಗಳು ಬಂದೊದಗಿದಾಗ ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳದೆ ಎಲ್ಲಾ ಸಮಯದಲ್ಲೂ ಸಮಚಿತ್ತತ್ವದಿಂದಿರಲು ಕಲಿ.  ನಾವು ಅನಿಷ್ಟ ಅಂದುಕೊಂಡಿದ್ದು ಅನಿಷ್ಟವಾಗಿರಬೇಕೆಂದಿಲ್ಲ ಅಥವಾ ನಾವು ಇಷ್ಟಪಟ್ಟದ್ದು ಒಳ್ಳೆಯದಾಗಿರಬೇಕೆಂದಿಲ್ಲ. ಆದ್ದರಿಂದ ಇಷ್ಟ-ಅನಿಷ್ಟ ಎಂದು ಲೇಪ ಹಚ್ಚದೆ ಬಂದಿದ್ದನ್ನು ‘ನಾಹಂ ಕರ್ತಾ ಹರಿಃ ಕರ್ತಾ’ ಎಂದು ಸ್ವೀಕರಿಸಲು ಕಲಿ. ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆ ಭಗವಂತ ನಮ್ಮ ತರಬೇತಿಗಾಗಿ ಸೃಷ್ಟಿಸಿರುವ ಪ್ರಾಯೋಗಿಕ(Practical)ಶಿಕ್ಷಣ. ಭಗವಂತ ನಮಗೆ ದುಃಖವನ್ನು ಕೊಟ್ಟು ನಮ್ಮನ್ನು ಜಾಣರನ್ನಾಗಿ ಮಾಡುತ್ತಾನೆ ಎನ್ನುವ ಸತ್ಯವನ್ನು ಅರಿತು ಬದುಕು.
(೧೬) ಮಯಿ ಚ ಅನನ್ಯಯೋಗೇನ ಭಕ್ತಿಃ ಅವ್ಯಭಿಚಾರಿಣೀ: ಭಗವಂತನಲ್ಲಿ ನಿರಂತರ ಪರಿಶುದ್ಧ ಭಕ್ತಿ  ಇರಲಿ. ಭಗವಂತ ಒಬ್ಬನೆ, ಆತನ ನಾಮ ಹಲವು. ಆತನಲ್ಲಿ ಅನನ್ಯವಾದ ಭಕ್ತಿಯನ್ನಿಡು. ಇಲ್ಲಿ ಏಕಭಕ್ತಿ ಬಹಳ ಮುಖ್ಯ. ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸುವುದು, ಒಂದು ದೇವತೆಯನ್ನು ಪೂಜಿಸಿದಾಗ ಇನ್ನೊಂದು ದೇವತೆ ಕೋಪಗೊಳ್ಳಬಹುದು ಎನ್ನುವ ಭಯದಿಂದ ಅನೇಕ ದೇವತಾ ಆರಾಧನೆ ಮಾಡುವುದನ್ನು  ಮಾಡಿದರೆ ಅದು ವ್ಯಭಿಚಾರವಾಗುತ್ತದೆ. ಆದ್ದರಿಂದ ಕೃಷ್ಣ ಇಲ್ಲಿ “ನಿನ್ನ ಭಕ್ತಿ ಅನನ್ಯವಾಗಿದ್ದು ಅವ್ಯಭಿಚಾರಿಣಿಯಾಗಿರಬೇಕು” ಎಂದು ಒತ್ತಿ ಹೇಳಿದ್ದಾನೆ. ಭಗವಂತ ಸರ್ವಸಮರ್ಥ, ಸರ್ವಶಕ್ತ, ಜಗತ್ಜನ್ಮಾದಿ ಕಾರಣ ಎನ್ನುವ ನಿಷ್ಠೆ ನಿನ್ನಲ್ಲಿರಲಿ. ದೇವರ ಮೇಲೆ ನಂಬಿಕೆ ಇಲ್ಲದೆ ಯಾವ ಶಾಸ್ತ್ರ ಓದಿ ಏನೂ ಉಪಯೋಗವಿಲ್ಲ. ಭಗವಂತನ ಮೇಲಿನ ಪೂರ್ಣ ನಂಬಿಕೆಯಿಂದ ಮಾತ್ರ ಜ್ಞಾನ ಸಾಧನೆ ಸಾಧ್ಯ
(೧೭) ವಿವಿಕ್ತ ದೇಶ ಸೇವಿತ್ವಮ್: ಸಾಧ್ಯವಾದಷ್ಟು ಅತಿ ಹೆಚ್ಚು ಸಾತ್ವಿಕ ಕಂಪನವಿರುವ ಕಡೆ, ಸಾತ್ವಿಕ ಜನರ ಜೊತೆಗೆ ವಾಸ ಮಾಡಲು ಪ್ರಯತ್ನಿಸು. ಪೂರ್ಣಪ್ರಮಾಣದಲ್ಲಿ ಅಖಂಡವಾದ ಸಾತ್ವಿಕ ಕಂಪನವಿರುವ ಸ್ಥಳ  ಪುಣ್ಯಕ್ಷೇತ್ರವೆನಿಸುತ್ತದೆ. ಅಂತಹ ಸ್ಥಳದಲ್ಲಿ ಒಳ್ಳೆಯದನ್ನು ಮಾತನಾಡುವ, ಒಳ್ಳೆಯ ಚಿಂತನೆ ಮಾಡುವ ಸಜ್ಜನರೊಂದಿಗೆ ವಾಸಮಾಡು. ಇದು ಸಾಧ್ಯವಾಗದೇ ಇದ್ದಲ್ಲಿ ಆದಷ್ಟು ಏಕಾಂತವಾಸವನ್ನು ಅಭ್ಯಾಸ ಮಾಡು. ನಾಲ್ಕು ಜನರೊಂದಿಗೆ ಸೇರಿ ಹಾಳು ಹರಟೆಯಲ್ಲಿ ನಿನ್ನ ಅಮೂಲ್ಯವಾದ ಜನ್ಮವನ್ನು ವ್ಯರ್ಥ ಮಾಡಿಕೊಳ್ಳಬೇಡ.   
(೧೮) ಅರತಿಃ ಜನ ಸಂಸದಿ: ಎಲ್ಲಿ ಬೇಡವಾದ ವಿಚಾರಕ್ಕಾಗಿ ಜನಜಂಗುಳಿ ಸೇರುತ್ತದೋ, ಅಂತಹ ಜನಜಂಗುಳಿಯಿಂದ ದೂರವಿರು.
(೧೯) ಅಧ್ಯಾತ್ಮ ಜ್ಞಾನ ನಿತ್ಯತ್ವಮ್ : ಅಧ್ಯಾತ್ಮದ ಅರಿವಿನಲ್ಲಿ ನಿರಂತರವಾಗಿರು. ಮೊದಲು ಪಿಂಡಾಂಡ-ಬ್ರಹ್ಮಾಂಡವನ್ನು ತಿಳಿಆನಂತರ ಇದನ್ನು ತಿಳಿಯುವ ಅಪೂರ್ವ ಮನಸ್ಸಿನ ವಿಸ್ಮಯದ ಬಗ್ಗೆ ತಿಳಿನಂತರ ‘ನಾನು’ ಎಂದರೆ ಏನು(Awareness of self) ಎನ್ನುವುದನ್ನು ತಿಳಿ. ಇದು ತಿಳಿದಮೇಲೆ ಈ ಆತ್ಮವನ್ನು ನಿಯಂತ್ರಿಸುವ ಪರಮಾತ್ಮನನ್ನು ತಿಳಿ. ಇದು ಅಧ್ಯಾತ್ಮಜ್ಞಾನ. ನಿನ್ನ ಅಧ್ಯಯನದ ಗುರಿ ಅಧ್ಯಾತ್ಮ ಜ್ಞಾನವಾಗಿರಲಿ.  

(೨೦) ತತ್ತ್ವಜ್ಞಾನ ಅರ್ಥ ದರ್ಶನಮ್: ಜಗತ್ತಿನ ಮೂಲಭೂತ ಸತ್ಯ ತಿಳಿಯುವುದಕ್ಕೆ ನಿನ್ನ ಅಧ್ಯಯನ ಮೀಸಲಿರಲಿ. ಮೇಲಿನ ಎಲ್ಲಾ ಗುಣಗಳಿಂದ ಎಲ್ಲಾ ಶಾಸ್ತ್ರಗಳಿಗೆ ವಿಷಯಭೂತನಾದ, ಎಲ್ಲಾ ಶಾಸ್ತ್ರಗಳಿಂದ ಪ್ರತಿಪಾಧ್ಯನಾದ ಭಗವಂತನ ಸಾಕ್ಷಾತ್ಕಾರ ಪಡೆ.

ಇಲ್ಲಿ ಹೇಳಿರುವ ಗುಣಗಳೇ ಜ್ಞಾನ ಮತ್ತು ಜ್ಞಾನ ಸಾಧನಗಳು. ಇದಕ್ಕಿಂತ ಬೇರೆಯಾಗಿರುವುದು ಅಜ್ಞಾನ ಮತ್ತು ಅಜ್ಞಾನದ ಗುರಿ.
(Contributed by Shri Prakash Shetty)

*****


Excerpts on the above Gita Shlokas from Acharyaru's book -

ಇವೆ ಜ್ಞಾನ  ಮತ್ತು ಜ್ಞಾನಸಾಧನಗಳು. ಅದಕ್ಕಿಂತ ಬೇರೆಯಾದದ್ದು ಅಜ್ಞಾನ ಮತ್ತು ಅಜ್ಞಾನದ ದಾರಿ. (ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು, ಭಗವಂತನ ನಲ್ನುಡಿ)

These are elements of knowledge and the means of knowledge. Anything else, is ignorance and its pathways. (Pujya Bannanje Govindacharyaru, Bhagavantana Nalnudi)

Here are the ślōkas in Devanagari / Roman for reference -



अमानित्वमदम्भित्वमहिंसा क्षान्तिरार्जवम् |
आचार्योपासनं शौचं स्थैर्यमात्मविनिग्रहः ||१३- ७||

amānitvamaḍambhitvamahinsā kṣāntirārjavam
ācāryōpāsanaṁ śaucaṁ sthairyamātmavinigrahaḥ 13-7

इन्द्रियार्थेषु वैराग्यमनहंकार एव च |
जन्ममृत्युजराव्याधिदुःखदोषानुदर्शनम् ||१३- ८||

indriyārthēṣu vairāgyamanahaṅkāra ēva ca
janmamr̥tyujarāvyādhiduḥkhadōṣānudarśanam 13-8

असक्तिरनभिष्वङ्गः पुत्रदारगृहादिषु |
नित्यं च समचित्तत्वमिष्टानिष्टोपपत्तिषु ||१३- ९||

asaktiranabhiṣvaṅgaḥ putradāragr̥hādiṣu
nityaṁ ca samacittatvamiṣṭāniṣṭōpapattiṣu 13-9

मयि चानन्ययोगेन भक्तिरव्यभिचारिणी |
विविक्तदेशसेवित्वमरतिर्जनसंसदि ||१३- १०||

mayi cānan'yayōgēna bhaktiravyabhicāriṇī
viviktadēśasēvitvamaratirjanasansadi 13-10

अध्यात्मज्ञाननित्यत्वं तत्त्वज्ञानार्थदर्शनम् |
एतज्ज्ञानमिति प्रोक्तमज्ञानं यदतोऽन्यथा ||१३- ११||

adhyātmajñānanityatvaṁ tattvajñānārthadarśanam

ētaj jñānamiti prōktamajñānaṁ yadatōSn'yathā 13-11

No comments:

Post a Comment

ಗೋ-ಕುಲ Go-Kula