Sunday 21 February 2016

Bhava Guccha 28

ಭಾವ ಗುಚ್ಛ  by “ತ್ರಿವೇಣಿ ತನಯ


ನಿನ್ನ ನೆಲೆ

ಕಿತ್ತುಬಿಡು ಆರ್ಭಟಿಸೋ ಆರು ಕೊಳೆಗಳ ಕಳೆ,
ದೃಢಗೊಳಿಸು ನನ್ನೆದೆಯದು ನೀ ಕುಳಿತಿಹ ನೆಲೆ,
ಏನೇನೇ ಬರುತಿರಲಿ ಸಂಸಾರದ ಏರುಪೇರಿನ ಅಲೆ,
ಕಡೆಗಣಿಸದಿರು ಈ ಜೀವ ನಿನ್ನ ಪಾದ ಸೇರುವ ಎಸೆಳೆ.

ಅನುಸಂಧಾನ

ಯಜಮಾನರ ಭಾರೀ ಪೂಜೆ ನಡೆದಿತ್ತು,
ಮಂತ್ರಘೋಷ ಘಂಟಾನಾದ ಮೊಳಗಿತ್ತು,
ಹೊರಬಾಗಿಲಿಂದ ಕೂಗು ಬಂದಿತ್ತು ಅಮ್ಮಾ ಅನ್ನ ಹಾಕು,
ಉತ್ತರ-ನೈವೇದ್ಯವಾಗಿಲ್ಲ ಮುಂದ್ಹೆಜ್ಜೆ ಹಾಕು,
ಬಾಯಲ್ಲಿ ಹೇಳುವುದು ನಿತ್ಯ ಅನುಸಂಧಾನ!
ಹಸಿದವಗಿತ್ತು "ಕೃಷ್ಣಾರ್ಪಣ"ವೆಂದಾಗಲಿಲ್ಲವೇ ನಿಜಸಾಧನ?

ಅಂಬಿಗ .

ಬಾಳ ಭವಸಾಗರದ ಅಂಬಿಗನು ನೀನು,
ನಿನ್ನನ್ನೇ ನೆಚ್ಚಿಕಾದಿರುವ ಪಯಣಿಗನು ನಾನು,
ತಂಗಾಳಿ ಸುಳಿಗಾಳಿ ಬಿರುಗಾಳಿಗಳ ಭಾರೀ ಅಲೆ,
ಯೋಗಕ್ಷೇಮದ ಹೊಣೆಹೊತ್ತ ನೀನೇ ಸೇರಿಸು ನೆಲೆ.

ನಿತ್ಯ ಯಜ್ಞ .

ಉಸಿರಾಟವದು ತಿದಿಯಾಗದಿರಲಿ,
ಪ್ರಾಣ ಜಪಿಸುವ ಮಂತ್ರವೆಂಬರಿವಿರಲಿ,
ತಿನ್ನುವುದು ಉಣ್ಣುವುದು ಬರೀ ಊಟವಾಗದಿರಲಿ,
ವೈಶ್ವಾನರಗರ್ಪಿಸೋ ಚರುವು ಎಂಬರಿವಿರಲಿ,
ಬದುಕೆಂಬುದೊಂದು ಯಾಂತ್ರಿಕ ಓಟವಾಗದಿರಲಿ,
ಅವನಾಡಿಸುವ ಸಾಧನದಾಟ ಎಂಬ ನೋಟವಿರಲಿ.

ಪೀಕಲಾಟ .

ಕರ್ಮಾನುಷ್ಟಾನಗಳ ಆಚರಣೆ ಆಗುತಿದೆ ಪೀಕಲಾಟ,
ದೈವ-ಧರ್ಮ ಗುತ್ತಿಗೆ ಹಿಡಿದವರೊಂದಿಗೆ ಏಗುವುದು ಬಲು ಕಷ್ಟ,
ಪ್ರತಿ ಹಂತದಲ್ಲೂ ಅರ್ಥ ಅನುಸಂಧಾನಗಳ ತತ್ವಾರ,
ಎಲ್ಲರಲಿ ನಿಂತಾಡುವ ನೀನೇ ತೋರಬೇಕು ಪರಿಹಾರ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula