Thursday 4 February 2016

Bhava Guccha 17

ಭಾವ ಗುಚ್ಛ by “ತ್ರಿವೇಣಿ ತನಯ”

ಪರಶಕ್ತಿಯ ಆಟ

ಏನಿದು ವಿಚಿತ್ರ ಸೋಜಿಗ ಪರಶಕ್ತಿಯ ಆಟ,
ಅಶ್ವತ್ಥಾಮನಿಂದ ಪಾಂಡವಸಂತತಿಯ ನಿರ್ನಾಮದ ಆರ್ಭಟ,
ಶುಕನಾಗಿ ಬಂದು ಪರೀಕ್ಷಿತಗೆ ಭಾಗವತದ ಉಪದೇಶ,
ಸ್ಪಷ್ಟವಾಯಿತಲ್ಲ ಎಲ್ಲರಂತರ್ಯಾಮಿ ಅವನೇ ಸರ್ವೇಶ .

ನಿಮಿತ್ತ

ಸತಿ ಸುತ ಬಂಧು ಮಿತ್ರರು ದೇಹನಿಮಿತ್ತ ,
"ತ್ರಾಸ"ದಲಿ ತೂಗುತ್ತ ಈಯುವುದನೇ ಇತ್ತ ,
ಬಡಿಯುತ್ತ ಕಡೆಯುತ್ತ ಶುದ್ಧಿ ಮಾಡುತಲಿರು ಚಿತ್ತ,
ಅವನ ಕಾರುಣ್ಯವಿರದಿರೇ ಲೆಕ್ಕವಾಗದು ಚುಕ್ತ .

ನಿತ್ಯ ಪಾಠ

ಅರಿತು ನೋಡಲು ಜೀವನದ ಪ್ರತಿಕ್ಷಣವೂ ಪಾಠ,
ನಿರ್ಮತ್ಸರ ಮನವಷ್ಟೇ ಹರಿಸೀತು ಅದರತ್ತ ನೋಟ,
ಅಹಂ ಮಮಕಾರಗಳ ದೂರವಿಟ್ಟ ಮನವೆಷ್ಟು ಸರಳ,
ಅಂಥ ಸ್ಥಿತಿ ತಲುಪಿದ ಜೀವನವೆಷ್ಟು ನಿರಾಳ.

ಪರಂಪರೆ

ಎನಿತು ದಿವ್ಯ ಭವ್ಯ ನಮ್ಮ ಯತಿ ದಾಸ ಪರಂಪರೆ,
ಜೀವನದುದ್ದಕ್ಕೂ ನಡೆ-ನುಡಿಗಳಿಂದ ಎರೆದ ಜ್ಞಾನಧಾರೆ,
ಓದುತಾ ಕೇಳುತಾ ತಿಳಿದು ಮಸ್ತಕಕ್ಕಿಳಿದದ್ದೆಷ್ಟು,
ಜೀವಸ್ವಭಾವದ ಯೋಗ್ಯತೆಯ ಪಾತ್ರೆಯಷ್ಟು!!!

ಎಂಟರ ನಂಟು

ಎಂಟು ಗೇಣಿನ ದೇಹ ಎಂಟರಂದು ಹುಟ್ಟಿದವನ ಆಲಯ,
ನೆಂಟ ತಾನಿರೇ ಜೀವನ ಇರದಿರೆ ಮರುಕ್ಷಣವೇ ಲಯ,
ಅಂಟುತಂಟುತಾ ಕಟ್ಟಿಕೊಳ್ಳದಿರು ಕರ್ಮಗಳ ಗಂಟು,
ನಿರ್ಮೋಹ ನಿರ್ಲಿಪ್ತ ನಡೆಯಿರೆ ದೊರಕೀತು ಹದಿನೆಂಟು.

(Contributed by Shri Govind Magal)


No comments:

Post a Comment

ಗೋ-ಕುಲ Go-Kula