Wednesday 17 February 2016

"ಮಧ್ವ ಲಾವಣಿ" - ರಚನೆ: ಡಾ||ಬನ್ನಂಜೆ ಗೋವಿಂದಾಚಾರ್ಯರು

ಈ ಸುಂದರವಾದ "ಮಧ್ವ-ಲಾವಣಿ"ಯನ್ನು ಆಚಾರ್ಯರು 30 ಶ್ಲೋಕಗಳಲ್ಲಿ ಮುಗಿಸಿಬಿಟ್ಟಿದ್ದಾರೆ...

ಒಂದು ವೇಳೆ 32 ಶ್ಲೋಕಗಳಾಗಿದ್ದಿದ್ದರೆ "ದ್ವಾತ್ರಿಂಶತ್ಗುಣಲಕ್ಷಣ"ಗಳ ಮೂಲಕ ಪರಿಪೂರ್ಣ ದೇಹಪ್ರಮಾಣ (Perfect Human Body) ಹೊಂದಿದ್ದಂತಹ ಶ್ರೀಮಧ್ವಾಚಾರ್ಯರಿಗೊಂದು ಪರಿಪೂರ್ಣ "ಲಾವಣಿ"ಯಾಗುತ್ತಿತ್ತು ಅಂದು ಕೊಂಡು ಮತ್ತೆ ಶ್ಲೋಕ ಸಂಖ್ಯೆಗಳ ಕಡೆ ಕಣ್ಣು ಹಾಯಿಸಿದೆ... ಆಚಾರ್ಯರೇ ಹೊಳೆಸಿದ್ದೇನೋ ಅನ್ನುವಂತೆ ನೋಡಿದರೆ ಶ್ಲೋಕದ ಕ್ರಮಸಂಖ್ಯೆ 21 ಎರಡುಬಾರಿ ಬಂದಿದೆ... ಮತ್ತೆ ಆಚಾರ್ಯರೆ ಬರೆದ ಪ್ರತಿ ನೋಡಿದರೆ ಅಲ್ಲೂ ಕ್ರಮಸಂಖ್ಯೆ 21 ಪುನರಾವರ್ತಿಯಾಗಿದೆ... ಆಗ ಲಾವಣಿಯ ಒಟ್ಟು ಶ್ಲೋಕಗಳು 31 ಆಯಿತು... ಲಾವಣಿಯ ಪಲ್ಲವಿ-ಅನುಪಲ್ಲವಿ ಶ್ಲೋಕ ಸೇರಿದರೆ ಸರಿಯಾಗಿ 32 ಶ್ಲೋಕಗಳಾಗುತ್ತವೆ...

ನನಗೆ ತಡೆಯಲಾರದ ಖುಷಿಯೋ ಖುಷಿ... ಅದನ್ನು ಹೀಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ....

"ಆಚಾರ್ಯರೆಂದರೆ ಶ್ರೀಬನ್ನಂಜೆ ಗೋವಿಂದಾಚಾರ್ಯರಯ್ಯಾ"....

🔹🔹🔹🔹🔹🔹🔹🔹🔹🔹🔹🔹🔹

ಕೇಳಿರಿ ಕೇಳಿರಿ ಚಂದದ ಕಥೆಯ
ಉಡುಪಿಯ ಕೃಷ್ಣನ ತಂದನ ಕಥೆಯ ||ಪಲ್ಲವಿ||
ಕೊಡಬೇಡಿ ಕೊಡಬೇಡಿ ಒಂದು ಚಿಕ್ಕಾಸು
ಹಾಳುಮಾಡದಿರಿ ಬಾಳಿನೊಂದೊಂದು ತಾಸು ||ಅನುಪಲ್ಲವಿ||

ದೇವರ ಆಣತಿ ತಲೆಯಲಿ ಹೊತ್ತು
ಅಂಜನೆಯುದರದಿ ಹುಟ್ಟಿತು ಕೂಸು |
ಬಾಲದ ಬೆಂಕಿಯ ರಿಂಗಣದಿಂದ
ಲಂಕಾ ಪಟ್ಟಣ ಸುಟ್ಟಿತು ಕೂಸು ||1||

ರಕ್ಕಸರೆಲ್ಲಾ ಬೆಕ್ಕಸ ಬೆರಗು
ರಾವಣನೆದೆಗೇ ಗುದ್ದಿತು ಕೂಸು |
ಕಪಿಗಳ ಕಿಲಕಿಲ ಕೇಳಿಸದಾಗ
ಗಂಧಮಾದನವನೆತ್ತಿತು ಕೂಸು ||2||

ಹಾರುವನಾ ಮನೆ-ಮಕ್ಕಳನುಳಿಸಲು
ಬಂಡಿ-ಅನ್ನವನು ಉಂಡಿತು ಕೂಸು |
ಅರಗಿನ ಮನೆಯನು ಬೆಂಕಿಯಲಿರಿಸಿ
ಪಾಂಚಾಲಿಯ ಕೈ ಹಿಡಿಯಿತು ಕೂಸು ||3||

ತನ್ನರಗಿಣಿಗೇ ಹೂವನು ತರಲು
ಮಣಿಮಂತನ ತಲೆ ಮಣಿಸಿತು ಕೂಸು |
ಏಳೂ - ಹನ್ನೊಂದೆದುರೆದುರಾಗಲು
ಕುರುಡನ ಮಕ್ಕಳ ಮುಗಿಸಿತು ಕೂಸು ||4||

ದೇವರ ಆಣತಿ ತಲೆಯಲಿ ಹೊತ್ತು
ಪಾಜಕದಲಿ ಮರು ಹುಟ್ಟಿತು ಕೂಸು |
ಬೆಂದ ಹುರುಳಿಯನು ಅಕ್ಕ ತಿನ್ನಿಸಲು
ಗಕ್ಕನೆ ಮುಕ್ಕಿತ್ತದನೂ ಕೂಸು ||5||

ಹಬ್ಬದ ಮನೆಯಲಿ ಕಣ್ಮರೆಯಾಗಿ
ಕಾನಂಗಿಯ ಗುಡಿಸೇರಿತು ಕೂಸು |
ಬನ್ನಂಜೆಯವನೂ ಜತೆಗೂಡಿರಲು
ಪನ್ನಂಗಶಯನನಿಗೆರಗಿತು ಕೂಸು ||6||

ಕುಂಜಾರಮ್ಮನ ಮುದ್ದಿನ ಕಂದ
ಆನಂದದ ಹೊಳೆ ಹರಿಸಿತು ಕೂಸು |
ನೇಯಂಪಳ್ಳಿಯ ದೇವಳದಲ್ಲಿ
ಶಿವಪುರಾಣಿಕನ ತಿದ್ದಿತು ಕೂಸು ||7||

ತಂದೆ ಮರೆತೊಂದು ಮರದ ಹೆಸರನ್ನು
ಥಟ್ಟನೇ ನೆನಪಿಸಿತು ದಿಟ್ಟ ಕೂಸು |
ಕಾಣುವ ಕಣ್ಣಿಗೆ ಸಂತಸವೀಯುತ
ಯಜ್ಞೋಪವೀತವ ಧರಿಸಿತು ಕೂಸು ||8||

ಮರೆಯಲಿ ಹೊಂಚುತ ಭುಸುಗುಡುತಿದ್ದ
ಘಟಸರ್ಪದ ತಲೆ ಚಚ್ಚಿತು ಕೂಸು |
ತೋಟದ ಮನೆಯಲಿ ಪಾಠವ ಕೇಳುತ
ಗುರುವಿಗೆ ಪಾಠವ ಕಲಿಸಿತು ಕೂಸು ||9||

ಲೋಕಕೆಲ್ಲ ತತ್ವಾಮೃತ ಹಂಚಲು
ಸಂನ್ಯಾಸಿಯಾಗಲು ಬಯಸಿತು ಕೂಸು |
ಅಚ್ಯುತ ಪ್ರಜ್ಞರ ಪುಣ್ಯದ ಪಾಕ
ದಂಡ-ಕಮಂಡಲು ಹಿಡಿಯಿತು ಕೂಸು ||10||

ಹದಿವರಯದಲೇ ಕಾವಿಯನುಟ್ಟು
ಗಂಗೆಯನುಡುಪಿಗೆ ಬರಿಸಿತು ಕೂಸು |
ವಾದಿಸಿಂಹನಾ ಶುಷ್ಕತರ್ಕಗಳ
ಮಗ್ಗುಲು ಮುರಿಯಿತು ಈ ಕೂಸು ||11||

ಭೌದ್ಧಕುಲಗುರು ಬುದ್ಧಿಸಾಗರನ
ಪೆದ್ದನಾಗಿಸಿತು ಗೆದ್ದು ಕೂಸು |
ಆನಂದತೀರ್ಥರೆಂಬಭಿಧಾನ ಪಡೆದು
ವೇದಾಂತ ರಾಜ್ಯವನಾಳಿತು ಕೂಸು ||12||

ಅನಂತಶಯನನ ಪದಗಳಿಗೆರಗಿ
ಸೂತ್ರ ಪ್ರವಚನ ಗೈಯುತ ಕೂಸು |
ತತ್ವಾಮೃತವನು ಎಲ್ಲರಿಗುಣಿಸುತ
ಶ್ರೀರಂಗನಾಥನಿಗೆರಗಿತು ಕೂಸು ||13||

ಸಹಸ್ರನಾಮಕೆ ನೂರರ್ಥವೆನ್ನುತ
ಕವಿಗಳಿಗಚ್ಚರಿ ಬರಿಸಿತು ಕೂಸು |
ಶ್ರೀಮದ್ಗೀತಾ ಭಾಷ್ಯವ ರಚಿಸಿ
ಬದರೀಶನ ಬಳಿ ಪಠಿಸಿತು ಕೂಸು ||14||

ಬಾದರಾಯಣನ ಕಾಣಲಿಕೆಂದು
ವ್ಯಾಸಾಶ್ರಮಕೇ ತೆರಳಿತು ಕೂಸು |
ನಾರಾಯಣನೇ ಹರಸುತಲಿತ್ತ
ಚಕ್ರಾಂಕಿತ ಶಿಲೆ ಪಡೆಯಿತು ಕೂಸು ||15||

ಬಾದರಾಯಣನ ನಾದಿನಾರಾಯಣನ
ಹರಕೆಯ ಹೊತ್ತು ಮರಳಿತು ಕೂಸು |
ಸಕಲ ಶಾಸ್ತ್ರಗಳ ಕಡೆದೂ ಕಡೆದೂ
ಸೂತ್ರಕೆ ಭಾಷ್ಯವ ರಚಿಸಿತು ಕೂಸು ||16||

ಕಾಲಿಗೆರಗಿದಾ ಶೋಭನ ಭಟ್ಟರ
ಪಾಲಿಗೆ ಕಲ್ಪದ್ರುಮವೀ ಕೂಸು |
ಅಚ್ಯುತಪ್ರಜ್ಞರ ಒಳಗಣ್ ತೆರೆಸಿ
ಚಕ್ರಶಂಖಗಳನೊತ್ತಿತು ಕೂಸು ||17||

ಹುಟ್ಟೂರಿನಿಂದ ಉಡುಪಿಗೆ ಬಂದ
ಕೃಷ್ಣನ ಕಡಲಿಂದೆತ್ತಿತು ಕೂಸು |
ತನಗೊಲಿದು ಬಂದನ ಆನಂದಕಂದನ
ಉಡುಪಿಯಲ್ಲಿ ನೆಲೆಗೊಳಿಸಿತು ಕೂಸು ||18||

ಈಶ್ವರ ದೇವನ ಅಗೆಯಲು ಹಚ್ಚಿ
ಕೆರೆಯಲಿ ನೀರನು ಹರಿಸಿತು ಕೂಸು |
ದೋಣಿಯೆ ಇಲ್ಲದ ಗಂಗೆಯ ದಾಟಿ
ಮುಸಲರ ನಾಡಿಗೆ ನಡೆಯಿತು ಕೂಸು ||19||

ಅಲ್ಲಾ ಎನ್ನುವ ಮುಲ್ಲಾಗಳಿಗೂ
ಎಲ್ಲಾ ಹರಿ - ಹೆಸರೆಂದಿತು ಕೂಸು |
ಮೆಚ್ಚಿದ ನವಾಬ ಜಹಗೀರಿತ್ತರೆ
ಮುಟ್ಟದೆ ಬದರಿಗೆ ತೆರಳಿತು ಕೂಸು ||20||

ಕಾಡಿನ ದರೋಡೆಕೋರರ ತಡೆಯಲು
ಉಪೇಂದ್ರತೀರ್ಥರ ಕಳಿಸಿತು ಕೂಸು |
ಹಸ್ತಿನ ಪುರದಲಿ ಮೈವೆತ್ತು ಬಂದು
ನಮಿಸಿದ ಗಂಗೆಯ ಹರಸಿತು ಕೂಸು ||21||

ಹತ್ತು ಮತ್ತೂ ಐದು ಜಟ್ಟಿ ಶಿಷ್ಯರನು
ಒಟ್ಟಿಗೇ ಜಾಡಿಸಿದ ಗಟ್ಟಿಗ ಕೂಸು |
ಹರಿಯಾಣತಿ ಬಲದಿಂದಲೆ ಭಾರತ-
ತಾತ್ಪರ್ಯನಿರ್ಣಯ ರಚಿಸಿತು ಕೂಸು ||21||

ಸಪಾದಲಕ್ಷಗ್ರಂಥವನೊಂದೇ
ವಾಕ್ಯದಿ ಖಂಡಿಸಿ ನಕ್ಕಿತು ಕೂಸು |
ಮದವೂರಿನ ಮದನೇಶ್ವರದಲಿ
ದೊರೆ ಜಯಸಿಂಹನ ಹರಸಿತು ಕೂಸು ||22||

ಕಾಲಡಿ ಕೆಂಪು ಉಗುರೂ ಕೆಂಪು
ತಂಪೋ ತಂಪು ಏಳಡಿ ಕೂಸು |
ಹದ್ದಿನ ಹರಡು ಮೊಣಗಾಲುರುಟು
ಆನೆಯ ಸೊಂಡಿಲೆ ತೊಡೆ ಗಡ ಕೂಸು ||23||

ಕಾವೀ ಸುತ್ತಿದ ಸೊಂಟವೆ ಸೊಗಸು
ಮೂರೂ ಲೋಕಕೆ ಒಡೆಯನು ಕೂಸು |
ಹೆಗಲಲುಣ್ಣೆಯ ಶಾಲು ಆಜಾನು ತೋಳು
ಚಂದಿರನ ನಾಚಿಸುವ ಚೆಲುಮೊಗದ ಕೂಸು ||24||

ಮೂರು ವಿಕ್ರಮದ ಪೆಜತ್ತಾಯರಿಗೆ
ಪರಮ‌ಾನುಗ್ರಹ ಮಾಡಿದ ಕೂಸು |
ಏಳೆಂಟು ದಿನದ ಹದವಾದ ವಾದದಲಿ
ಪಂಡಿತಾಚಾರ್ಯರನು ಗೆದ್ದ ಕೂಸು ||25||

ಪಂಡಿತರಿಗು ಪಂಡಿತ ಲಿಕುಚ ಪಂಡಿತರಿಂದ
ತತ್ವ ಪ್ರದೀಪವ ಬರೆಸಿತು ಕೂಸು |
ಅವರ ಕೋರಿಕೆಯಂತೆ ತಾನನುವ್ಯಾಖ್ಯಾನ
ನಮಗೆ ಕರುಣಿಸಿತು ಕರುಣಾಳು ಕೂಸು ||26||

ನಾಕು ಶಿಷ್ಯರ ಕೈಲಿ ನಾಕು ಅಧ್ಯಾಯಗಳ
ಒಟ್ಟಿಗೇ ಒರೆದು ಬರೆಯಿಸಿದ ಕೂಸು |
ತನ್ನ ಸೋದರಗೆ ತಪಸಿನಾಗರಗೆ
ಸಂನ್ಯಾಸ ದೀಕ್ಷೆಯನ್ನಿತ್ತ ಕೂಸು ||27||

ಎಲ್ಲರ ಮೀರಿಸಿ ಎತ್ತರಕೇರಿಸಿ
ತಾರದ ಗುಟ್ಟನ್ನರುಹಿತು ಕೂಸು |
ಒಟ್ಟು ಒಂಭತ್ತು ಯತಿಗಳಿಗೆ ಕೂಡಿ
ವೇದಾಂತ ರಾಜ್ಯವನಿತ್ತಿತು ಕೂಸು ||28||

ಹಸುರು ಕಾಳನ್ನು ಹಿಡಿದು ಜಪಿಸುತ್ತ
ಮೊಳಕೆ ಬರಿಸಿತು ಮಂತ್ರ ತಜ್ಞ ಕೂಸು |
ಗ್ರಹಣದಾ ಕತ್ತಲಲಿ ಕಾಲುಗುರ ಬೆಳಕಿಂದ
ಪಾಠ ಮಾಡಿದ ತೇಜಃಪುಂಜ ಕೂಸು ||29||

ಭಾರಿ ಬಂಡೆಯನು ಒಂದೇ ಕೈಲೆತ್ತಿ
ತುಂಗಭದ್ರೆಯ ತಡಿಯಲಿಟ್ಟ ಕೂಸು |
ಮರೆಯಲಿದ್ದು ನಮ ಹರಸುತಿರುವಂಥ
ಗೋವಿಂದವಿಟ್ಠಲನ ಮೋಕೆಯಾ ಕೂಸು ||30||

****

2 comments:

ಗೋ-ಕುಲ Go-Kula