Sunday, 28 February 2016

Bhava Guccha 33

ಭಾವ ಗುಚ್ಛ  by “ತ್ರಿವೇಣಿ ತನಯ

ಚಂಚಲ ಮನ

ಹಿಡಿವ ಸಾಹಸವ ಮಾಡದಿರು ಮನವನ್ನು,
ಹರಿಯ ಬಿಡದನು ಸೇರುವುದೊಂದು ತಾಣವನು,
ಅದು ನಿಂತಲ್ಲೇ ನಡೆವ ಹರಿವ್ಯಾಪಾರ ಗುರುತಿಸು,
ನಡೆದಿರುವುದೆಲ್ಲ ನಿನ್ನ ಪೂಜೆಯೆಂದರ್ಪಿಸು,

ವೈರಾಗ್ಯ -ತಾಳ್ಮೆ

ನಿರ್ಲಿಪ್ತನಾಗದೇ ಸುಮ್ಮನೇ ಬಂದೀತೇ ವೈರಾಗ್ಯ?
ಅಂಟದೇ ಬದುಕುತಿರು ಬಿಡದೇ ಸತಿಸುತರ ಭಾಗ್ಯ,
ಕರ್ತವ್ಯವೇ ಪೂಜೆಯೆನುತ ಬಂದದ್ದು ಒಪ್ಪಿಕೋ,
ತಾಳ್ಮೆಗಿಂತ ಅಧಿಕ ತಪವಿಲ್ಲ ಕೊಂಚ ತಾಳಿಕೋ.

ಬೇಕು -ಸಾಕು

ಜ್ಞಾನ- ಅದಕ್ಕೆ ಪೂರಕವಾದದ್ದು ಬೇಕು,
ಅದಲ್ಲದ ಲೋಕ ವಾರ್ತೆಯದು ಸಾಕು,
ಯಾರನ್ನೂ ನೋಯಿಸುವುದು ಬೇಡ,
ಆಗಲೆತ್ನಿಸೋಣ ಜ್ಞಾನನೇಯುವ ಜಾಡ,
ಯಾಕೆ ಬೇಡ ಅರ್ಥಹೀನ ಗೊಂದಲ,
ಎಲ್ಲರೂ ಇರಲೆತ್ನಿಸೋಣ ನಿರ್ಮಲ.

ಕರ್ಮ -ಮರ್ಮ

ಗಾಣದೆತ್ತಾಗದಿರು ಕರ್ಮಕ್ಕಾಗಿ ಅಲ್ಲ ಕರ್ಮ,
ಧ್ಯಾನಿಸಿ ಮಥಿಸಿ ಹಿರಿತತ್ವವ ತಿಳಿವುದೇ ಮರ್ಮ,
ಜೀವರಿಂದಾಗುವ ಸಕಲ ಕರ್ಮಕೂ ಅವನೇ ನಿಯಾಮಕ,
ಇದನರಿತು ಶರಣಾಗುವ ಜೀವನವದು ಸಾರ್ಥಕ.

ಪ್ರಾರಬ್ಧ

ಅರ್ಥವಾಗದು ಲೋಕದ ವಿಚಿತ್ರ ವ್ಯಾಪಾರ,
ಆಡಿಸುವ ಆಟವದು ಕಾಣದ ಸೂತ್ರಧಾರ,
ಒಬ್ಬರ ಸತ್ಯವದು ಇನ್ನೊಬ್ಬರಿಗೆ ಮಿಥ್ಯ ,
ಸಹಿಸಲೇಬೇಕು "ಪ್ರಾರಬ್ಧ"ವೀವ ಆತಿಥ್ಯ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula