ಭಾವ ಗುಚ್ಛ by “ತ್ರಿವೇಣಿ ತನಯ”
ಸ್ವಗತ
ಇತ್ತಿಲ್ಲ ಈ ಜನ್ಮಕೆ ಸಂಸ್ಕೃತ ಭಾಷೆ,
ಕುಂದಿಲ್ಲ ಸಜ್ಜನರಿಂದ ಜ್ಞಾನ ಹೀರುವ ತೃಷೆ,
ಅರಿತವರು ಹೇಳುವರು ಭಾಷೆ ಮುಖ್ಯವಲ್ಲ,
ಬೇಕೆ ಭಾಷೆ ನಾಲಿಗೆಗೆ ಸವಿಯಲು ಬೆಲ್ಲ,
ಬೇಡುವೆನಾತನ ತಪ್ಪಿಸದಿರು ಸಜ್ಜನರ ಸಂಗ,
ಆ ಮೂಲಕ ತೊಳೆಯುತಲಿರು ಎನ್ನಂತರಂಗ.
ಮುಖವಾಡದ ಆಟ
ಒಳಗೊಂದು ಹೊರಗೊಂದು ಯಾತರದೀ ಬದುಕು,
ಯಾರ ಮೆಚ್ಚಿಸಲೀ ಆಟ ಸಾಕಪ್ಪಾ ಸಾಕು,
ಯಾರಿದ್ದರೇನಂತೆ ಬದುಕೊಂದು ನಾಟಕ,
ಬಿಡುಗಡೆಯಿಲ್ಲ ಒಳ-ಹೊರಗು ಒಂದಾಗದನಕ.
ನೋಟಿನ -note
ಲೋಕದೊಳಗೆಲ್ಲಾ ನೋಟಿನದೇ ಆಟ,
ಸಾಕು ಭ್ರಮೆಯ ಧಾವಂತದಾ ಓಟ,
ಸ್ಮಶಾಣಗಳಲ್ಲಿಲ್ಲ ನೋಟಿಡುವ. ತಿಜೋರಿ,
ಒಪ್ಪರಾ ಯಮಭಟರು ನೋಟು ಹಂಚುವ ಪರಿ.
ಆತ್ಮಾವಲೋಕನ
ಮನಶುದ್ಧವಾಗದ ಸ್ನಾನವದ್ಯಾಕೆ,
ಚಿತ್ತ ನಿಲ್ಲದ ಪೂಜೆಯದ್ಯಾಕೆ,
ಎತ್ತರಕ್ಕೇರದ ಉಪವಾಸವ್ಯಾಕೆ,
ಪ್ರಸಾದವಲ್ಲದ ತುತ್ತು
ಅದ್ಯಾಕೆ,
ಸತ್ಕಾರ್ಯಕ್ಕಿಲ್ಲದ ವಿತ್ತವದ್ಯಾಕೆ ,
ಹೊತ್ಹೊತ್ತಿಗೆ ಹರಿಯೆನದ ಮರ್ತ್ಯ ಜನ್ಮವದ್ಯಾಕೆ.
ಭಾಷೆಯ ಸೋಲು
ಭಾವನೆಗಳ ಪದಗಳಲಿ ಹಿಡಿದಿಡುವುದು ಬಲು ಕಷ್ಟ,
ಸುಲಭವಲ್ಲ ಪ್ರಯಾಸಕರ ಸಾಹಸವಿದು ಅತಿಕ್ಲಿಷ್ಟ,
ನೀನೊಂದು ಭಾವದಿಂದ ಜೋಡಿಸುವೆ ಪದಗಳ ಸರ,
ಅರ್ಥೈಸುವುದು ಓದುವವನ ಮನಕನುಸಾರ.
(Contributed by Shri
Govind Magal)
No comments:
Post a Comment
ಗೋ-ಕುಲ Go-Kula