Friday 5 February 2016

ಈರುಳ್ಳಿ ಬೆಳ್ಳುಳ್ಳಿ- ಭಾಗ 2 - ಪುರಾಣದಲ್ಲಿ ಬಂದ ರಾಹು-ಕೇತುಗಳ ಅರ್ಥ

ಈಗ ರಾಹು-ಕೇತುಗಳ ಕಥೆಗೆ ಬರೋಣ...

ಹೀಗೆ ಬದುಕಿನಲ್ಲಿ ಅತ್ಯಂತ ಉತ್ಕೃಷ್ಟವಾದ ಜ್ಞಾನಾಮೃತವನ್ನು ಗಳಿಸಬೇಕಾದರೆ, ನಮ್ಮ ದೇಹದಲ್ಲಿ ಕಿವಿ ಮತ್ತು ಕಣ್ಣುಗಳೆಂಬ ಎರಡು ಅತ್ಯಂತ ಮುಖ್ಯವಾದ   ಜ್ಞಾನೇಂದ್ರಿಯಗಳ ಅವಶ್ಯಕತೆ ಇದೆ... ಅದಕ್ಕೆಂದೇ ತತ್ವಾಭಿಮಾನಿ ದೇವತೆಗಳ ಕುರಿತು ವೇದಕಾಲದ ಋಷಿಗಳ ಪ್ರಾರ್ಥನೆ ಶುರವಾಗುವುದೇ ಕಿವಿ, ಕಣ್ಣುಗಳ ಕುರಿತಾಗಿ - "ಭದ್ರಂ ಕರ್ಣೇಭಿ ಶೃಣುಯಾಮ ದೇವಾಃ | ಭದ್ರಂ ಪಶ್ಯೇಮಾಕ್ಷಭಿರ್ಯ ಜತ್ರಾಃ.... " ಎಂದು.

ಕಣ್ಣಿನ ಅಭಿಮಾನಿ ದೇವತೆ ಸೂರ್ಯನಾದರೆ, ಕಿವಿಗೆ ಚಂದ್ರ ದೇವತೆ.. ಸೂರ್ಯನನ್ನು "ಮುಗಿಲ ಕಣ್ಣು" ಅಂತ ಕರೆಯುತ್ತಾರೆ.... ಏಕೆಂದರೆ ಆಕಾಶದಲ್ಲಿರುವ ಸೂರ್ಯಗ್ರಹಕ್ಕೂ ನಮ್ಮ ಕಣ್ಣಿಗೂ ಸೂರ್ಯನೇ ಅಭಿಮಾನಿ ದೇವತೆ. ಅದಕ್ಕೇ ಅಲ್ಲವೆ ಆಕಾಶದಲ್ಲಿ ಸೂರ್ಯೋದಯವಾದಾಗ ನಮ್ಮ ಕಣ್ಣು ತೆರೆಯುತ್ತದೆ, ಅಲ್ಲಿ ಸೂರ್ಯ ಮುಳುಗಿದಾಗ ನಮ್ಮ ಕಣ್ಣೂ ಮುಚ್ಚುತ್ತದೆ..

ಚಂದ್ರ ಕಿವಿಯ ದೇವತೆ ಹಾಗೂ ಮನಸ್ಸಿನ ದೇವತೆಯೂ ಹೌದು.. ಏಕೆಂದರೆ ಇವನು ಭಗವಂತನ ಮನಸ್ಸಿನಿಂದ ಹುಟ್ಟಿದವನಲ್ಲವೆ...
"ಚಂದ್ರಮಾ ಮನಸೋ ಜಾತಃ
ಚಕ್ಷುಃ ಸೂರ್ಯೋ ಅಜಾಯತ" (ಪುರುಷಸೂಕ್ತ)...

ಪೌರಾಣಿಕ ಕಥೆಯಲ್ಲಿ ಬರುವ ಸಮುದ್ರಮಥನದಲ್ಲಿ ಭಗವಂತ ಧನ್ವಂತರಿ ರೂಪದಿಂದ ತಂದುಕೊಟ್ಟ ಅಮೃತದ ಕೊಡವನ್ನು ಮೊಹಿನಿ ರೂಪದಿಂದ  ಅಮೃತವನ್ನು ಹಂಚುವಾಗ ಸ್ವರ್ಭಾನು ಎಂಬ ಅಸುರ ಸೂರ್ಯ ಚಂದ್ರರ ನಡುವೆ ಮಾರುವೇಷದಿಂದ ಬಂದು ಕುಳಿತು ಅಮೃತಪಾನ ಮಾಡುವಾಗ ಅವನನ್ನು  ಸೂರ್ಯ ಚಂದ್ರರು ಗುರುತಿಸುತ್ತಾರೆ... ಮೋಹಿನಿ ರೂಪದಲ್ಲಿದ್ದ ವಿಷ್ಣು ತನ್ನ ಚಕ್ರದಿಂದ
ಸ್ವರ್ಭಾನುವಿನ ಕುತ್ತಿಗೆ ಕತ್ತರಿಸುತ್ತಾನೆ...  ಅಮೃತಪಾನ ಮಾಡಿದ್ದರಿಂದ ಸ್ವರ್ಭಾನುವಿನ ದೇಹ ಎರಡು ಭಾಗವಾದರೂ ಬದುಕುಳಿದ... ಅವನ ದೇಹವಿಲ್ಲದ ರುಂಡಭಾಗವೇ ರಾಹು ಎಂಬ ಹೆಸರು ಪಡೆಯಿತು.. ರುಂಡವಿಲ್ಲದ ಮುಂಡಭಾಗ ಕೇತು ಎಂಬ ಹೆಸರು ಪಡೆಯಿತು... ಈ ಕಥೆಯೂ ಕೂಡ ಮೇಲೆ ಹೇಳಿದ ಪೌರಾಣಿಕ ಕಥೆಗಳಂತೆ ಆಧ್ಯಾತ್ಮಿಕ ಅರ್ಥವುಳ್ಳದ್ದು ಮತ್ತು ಮುಖ್ಯವಾಗಿ ನಭೋ ಮಂಡಲದ ಕಾಯಗಳೆನಿಸಿದ ಗ್ರಹಗೋಲಗಳಿಗೆ ಸಂಬಂಧಪಟ್ಟದ್ದೂ ಹೌದು..

ಈ ಕಥೆಯನ್ನು ಒಂದು ಸಾಂಕೇತಿವಾಗಿ ಇಟ್ಟುಕೊಂಡು ನೋಡಿದಾಗ... ಬಾಹ್ಯಾಕಾಶದಲ್ಲಿ ಗ್ರಹಗೋಲಗಳು ಸೂರ್ಯನ ಸುತ್ತ ಸುತ್ತುತ್ತಿವೆ..  (ಇಡೀ Solar System ಮತ್ತು ಸೂರ್ಯ ಕೂಡ ಧ್ರುವ ನಕ್ಷತ್ರದ ನಿಯಂತ್ರಣಕ್ಕೊಳಪಟ್ಟಿದೆ ಎಂಬುದು ಶಾಸ್ತ್ರಕಾರರ ನಂಬಿಕೆ)...

ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ ವಾಸ್ತವವಾಗಿ ನಭೋಮಂಡಲದಲ್ಲಿ ಸೂರ್ಯಗ್ರಹದ ಸುತ್ತ ಭೂಮಿ ಸುತ್ತುತ್ತಿದೆ, ಭೂಮಿಯ ಸುತ್ತ ಚಂದ್ರಗ್ರಹ ಸುತ್ತುತ್ತಿದೆ ಈ ಅಂಡಾಕಾರದ ಪರಿಕ್ರಮದ ಮಾರ್ಗವನ್ನು ಮಧ್ಯದಿಂದ ವಿಭಜಿಸುವ ಒಂದು ಸರಳರೇಖೆಯುಂಟು... ಆ ಸರಳ ರೇಖೆಯ ಎರಡು ತುದಿಗಳೇ ರಾಹು ಮತ್ತು ಕೇತು ಎಂಬ ಎರಡು ಬಿಂದುಗಳು... ಮೇಲಿನ ಕಥೆಯಲ್ಲಿ ವಿಷ್ಣು ಸ್ವರ್ಭಾನು ಎಂಬ ಅಸುರನನ್ನು ಕೊಂದಾಗ, ರುಂಡ (Head) ಇರುವ ಭಾಗ ಒಂದು ಬಿಂದು, ಮುಂಡ (Headless Body) ಇರುವ ಭಾಗ ಇನ್ನೊಂದು ಬಿಂದುವಾಗಿ ವಿಷ್ಣುವಿನ ಚಕ್ರ ಅಸುರನ ತಲೆ ಸೀಳಿದ ಸರಳ ರೇಖೆಯ ಎರಡು ತುದಿಗಳಲ್ಲಿ ಇರಿಸಲ್ಪಟ್ಟಿತು ಅನ್ನುವುದು ಸಂಕೇತವಾಗಿ ಕಥೆಯಲ್ಲಿ ಬಂದಿದೆ...

ಈ ಸರಳ ರೇಖೆಯನ್ನೇ ಮಧ್ಯಂತರ ರೇಖೆಯಾಗಿರಿಸಿಕೊಂಡು (Equatorial Point) ಎಂಬಂತೆ ನವಗ್ರಹಗಳು ಸೂರ್ಯನ ಸುತ್ತಲೂ ಸುತ್ತುವುದರ ಮತ್ತು ನಕ್ಷತ್ರ ಹಾಗೂ ರಾಶಿಗಳ ವಿಭಜನೆಗೆ ಈ ರೇಖೆ ಸಂಕೇತವಾಗಿದೆ...
ರಾಹು - ಕೇತುಗಳು ಸ್ವತಃ ಗ್ರಹಗಳಲ್ಲದಿದ್ದರೂ ಅವುಗಳ ಸಮಾನ ರೇಖೆಯಲ್ಲಿ ಒಮ್ಮೊಮ್ಮೆ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಹಾದು ಹೋದಾಗ "ಸೂರ್ಯಗ್ರಹಣ"ವಾಗುತ್ತದೆ..  ಅಥವಾ ಚಂದ್ರ ತಾನು ಭೂಮಿಯ ಸುತ್ತ ಸುತ್ತುವಾಗ ಸೂರ್ಯ ಮತ್ತು ಭೂಮಿಯೊಟ್ಟಿಗೆ ಸಮಾನಾಂತರ ರೇಖೆಯಲ್ಲಿ ಚಲಿಸುವಾಗ ಭೂಮಿಯ ಇನ್ನೊಂದು ಭಾಗದಲ್ಲಿ ಅಂದರೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಇರುವ ಸಮಾನಾಂತರ ರೇಖೆಯಲ್ಲಿ "ಚಂದ್ರಗ್ರಹಣ"ವಾಗುತ್ತದೆ ಈ ರಾಹು-ಕೇತುಗಳಿರುವ ಸಮಾನಾಂತರ ರೇಖೆಯಲ್ಲಿ ನಡೆಯುವುದೇ ಗ್ರಹಣಗಳೆಂಬ ಈ ನಭೋ ಮಂಡಲದ ಕೌತುಕಗಳು....  ಅದೇ ಸಾಂಕೇತಿಕವಾಗಿ ಗ್ರಹಣಗಳ ಸಂದರ್ಭದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ರಾಹು -ಕೇತುಗಳು ನುಂಗುತ್ತಾರೆ ಅಥವಾ    ಗ್ರಹಣಮಾಡುತ್ತಾರೆಯಾದ್ದರಿಂದ ರಾಹು ಕೇತುಗಳು ನವಗ್ರಹಗಳಲ್ಲಿ ಸೇರಿಸಲ್ಪಟ್ಟಿವೆ....

ರಾಹು-ಕೇತುಗಳು ಸಮಾನಾಂತರ ರೇಖೆಯಲ್ಲಿರುವುದರಿಂದಲೇ ಯಾವಾಗಲೂ ಗ್ರಹಣಗಳು ಸಂಭವಿಸುವುದು ಒಂದೋ ಹುಣ್ಣಿಮೆ ಅಥವಾ ಅಮಾವಾಸ್ಯೆಯಂದು ಮಾತ್ರ...

ಅಷ್ಟೇ ಅಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ರಾಶಿಗಳ ವಿಭಾಗದಲ್ಲೂ ರಾಹು ಕೇತುಗಳಿರುವ ಮನೆ ಸಮಾನಾಂತರವಾಗಿದ್ದು ನಮ್ಮ ಜಾತಕದಲ್ಲಿ ಕೂಡ ಆರು ರಾಶಿಗಳ ಅಂತರದಲ್ಲಿ ರಾಹು ಕೇತುಗಳು ಇರುತ್ತವೆ...

ಈಗ ಇದರ ಆಧ್ಯಾತ್ಮಿಕ ಅರ್ಥಕ್ಕೆ ಬರೋಣ, ಸೂರ್ಯ ಚಂದ್ರರು ಭೂಮಿಗೆ ಬೆಳಕು ನೀಡಿ ಉಷ್ಣ ಮತ್ತು ತಂಪನ್ನು ಹಾಯಿಸುವ ನಭೋಮಂಡಲದ ಎರಡು ಬೆಳಕಿನ ಶಕ್ತಿಕೇಂದ್ರಗಳು... ಬೆಳಕು ಎಂದರೆ ಜ್ಞಾನ, ಕತ್ತಲೇ ಅಜ್ಞಾನ.. ಬೆಳಕಿನಲ್ಲಿ ನಮ್ಮ ಚಟುವಟಿಕೆ, ಕತ್ತಲಲ್ಲಿ ನಿದ್ರೆ... ರಾಹು - ಕೇತುಗಳೆಂದರೆ ಅಂತಹ ಬೆಳಕಿನ ಕೇಂದ್ರವನ್ನೇ ಆವರಿಸಿ ನಮ್ಮನ್ನು ಅಂಧಕಾರಕ್ಕೆ ತಳ್ಳುವ ಶಕ್ತಿಗಳು ಅನ್ನುವುದನ್ನು ನಭೋಮಂಡಲದಲ್ಲಿ ಸೂರ್ಯ-ಚಂದ್ರರನ್ನೇ ಮರೆಮಾಚುವ ಗ್ರಹಣವೆಂಬ ಕೌತುಕದ ದೃಷ್ಟಾಂತದಿಂದಲೇ ನಾವು ತಿಳಿದಿದ್ದೇವೆ.

ಈಗ ಈ ಪಿಂಡಾಂಡದಲ್ಲಿ , ನಮ್ಮ ದೇಹದಲ್ಲಿ ಮೊದಲೇ ಹೇಳಿದಂತೆ ಕಣ್ಣು - ಕಿವಿಗಳೇ ನಮ್ಮ ಮನಸ್ಸಿಗೆ ಅರಿವನ್ನು ಮುಟ್ಟಿಸುವ ಪ್ರಧಾನವಾದ ಎರಡು ಜ್ಞಾನೇಂದ್ರಿಯಗಳು... ಇವುಗಳ ಅಭಿಮಾನಿ ದೇವತೆಗಳೂ ಕೂಡ ಸೂರ್ಯ-ಚಂದ್ರರೇ (ಈ ವಿಷಯವನ್ನು ಮೇಲೆ ಹೇಳಿಯಾಗಿದೆ) ...


ಒಂದು ವೇಳೆ ಸಮುದ್ರಮಥನದ ಕಥೆಯಂತೆ, ರಾಹು(ಸ್ವರ್ಭಾನು ಎಂಬ ಅಸುರ) ಸ್ವೀಕರಿಸಿದ ಅಮೃತ ಅವನ ಬಾಯಲ್ಲಿತ್ತು ಅದನ್ನು ನುಂಗುವುದರೊಳಗೆ ವಿಷ್ಣು ಚಕ್ರ ಅಸುರನ ತಲೆ ಹಾರಿಸಿತ್ತು, ಆಗ ಆ ರಾಕ್ಷಸನ ಬಾಯಿಂದ ಹೊರ ಚೆಲ್ಲಿದ ಅಮೃತದ ಬಿಂದುಗಳಿಂದ ಭೂಮಿಯ ಮೇಲೆ ಬೆಳ್ಳುಳ್ಳಿ-ಈರುಳ್ಳಿ ಎಂಬ ಎರಡು ಪದಾರ್ಥಗಳು ಹುಟ್ಟಿಕೊಂಡವು... ಆದರೆ ಅವು ರಾಕ್ಷಸನ ಬಾಯಿಂದ ಹೊರಬಿದ್ದ ಕಾರಣ ದುರ್ವಾಸನೆಯಿಂದ ಕೂಡಿದ್ದು ತಾಮಸ ಗುಣವನ್ನು ಕೊಡುವ ಆದರೂ ಅಮೃತದ ಪ್ರಭಾವದಿಂದ ನಮ್ಮ ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅಂಶಗಳಿಂದ ತುಂಬಿರುವ ಪದಾರ್ಥಗಳಾಗಿವೆ, ಎಂಬುದೇ ಸತ್ಯವಾಗಿದ್ದಲ್ಲಿ , ಇಂಥಹ (ಬೆಳ್ಳುಳ್ಳಿ-ಈರುಳ್ಳಿ) ಪದಾರ್ಥ ಸೇವನೆ ಬೇಕೋ ಬೇಡವೋ ಎಂಬುದು ಚರ್ಚೆಗೆ ವಿಷಯವಾಗಿದೆ...

No comments:

Post a Comment

ಗೋ-ಕುಲ Go-Kula