ಭಾವ ಗುಚ್ಛ by “ತ್ರಿವೇಣಿ
ತನಯ“
ಪ್ರಾರ್ಥನೆ
ಸತ್ಕರ್ಮಗಳಲೇ ಅವಕಾಶ ಕೊಡು ಗಣಪ,
ಹರಿಚರಣಗಳಲಿ ಎನ್ನ ಮನವಿಡಲಿ ನಿನ್ನಪ್ಪ,
ಸುಜ್ಞಾನ ಮತಿಯಿತ್ತು ಸಲಹು ನೀ ಪವಮಾನ,
ಸುತ್ತುವಾಟವ ಮುಗಿಸಿ ನೀನೆತ್ತಿಕೋ ಗರುಡವಾಹನ.
ಆತ್ಮ ಶೋಧನೆ
ತಿಳಿಯಲೆತ್ನಿಸು ಮೊದಲು ನೀನಾರು,
ಎಲ್ಲಿದೆ ಯಾವುದಿದರ ಮೂಲಬೇರು,
ಎರೆಯುತಿರು ಅದಕೆ ಸಹಜ ಭಕ್ತಿಯ ನೀರು,
ಸಂಗ್ರಹ ಸತತವಿರಲಿ ಕ್ರಮಿಸಲು ಸಾಧನೆಯ ಏರು,
ಹಗುರಾಗುತಲಿರು ಕಳೆಯುತ ಕರ್ಮ ನೂರು,
ಲಕ್ಷ್ಯ ಮೇಲಿರಲಿ ನೋಡು ಅಲ್ಲಿದೆ ಬೆಳಕಿನೂರು.
ನಿಗ್ರಹ
ಆತ್ಮ ನಿಗ್ರಹವದು ಒಳಚರತ್ವದ ಸಂಭ್ರಮ,
ಆಗದಿರಲದು ಬಹಿರಂಗ ವ್ಯಾಪಾರಧಾಮ,
ಅನುಭವಕೆ ಎಲ್ಲವನೂ ಹೊರಗಿಂದ ನೋಡು,
ನಿಲ್ಲದಿರು ಅಲ್ಲೇ ನೆಲೆಯಾಗಿ-ಅಲ್ಲಿದಲ್ಲಿಗೆ ದೂಡು.
ನಾಟಕ
ಅನುಮಾನವೇ ಬೇಡ ಬದುಕೊಂದು ನಾಟಕ,
ಮರೆಯಲಿದ್ದು ಆಡಿಸುವ ಇದರ ನಿರ್ದೇಶಕ,
ನಿಷ್ಠೆಯಿಂದಲಿ ನಿರ್ವಹಿಸು ನಿನಗೊದಗಿದ ಪಾತ್ರ,
ಬಣ್ಣ ಕಳಚಿದ ಮೇಲೆ ಎಲ್ಲವೂ ಸುಸೂತ್ರ.
ಅಂತಃಶಕ್ತಿ
ಆಕಾಶ -ಆಕಾಶವಲ್ಲ ವಾಯು-ವಾಯುವಲ್ಲ,
ಅಗ್ನಿ-ಅಗ್ನಿಯಲ್ಲ ನೀರು ನೀರಲ್ಲ,
ಮಣ್ಣು ಮಣ್ಣಲ್ಲ ಯಾರೂ ಏನೂ ಅಲ್ಲ,
ಎಲ್ಲದರ ನಿಜ ಮೂಲ ಒಳಗಿದ್ದಾಡುವ ಮಾಲೋಲ,
ಯಾರಲ್ಲಿದೆ ಸ್ವಂತ ಶಕ್ತಿ ಎಲ್ಲವೂ ಅವನಿಂದಲೇ ಅಭಿವ್ಯಕ್ತಿ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula