Tuesday 23 February 2016

Bhava Guccha 30

ಭಾವ ಗುಚ್ಛ  by “ತ್ರಿವೇಣಿ ತನಯ


ಅಧ್ಯಾತ್ಮದ ಗೀಳು

ಏನೇ ಬರಲಿ ಸಂಸಾರದೇಳು ಬೀಳು,
ತಪ್ಪದಿರಲಿ ಅಧ್ಯಾತ್ಮ ಚಿಂತನದ ಗೀಳು,
ಕೊಡುತಿರು ನಿನ್ನ ಸ್ಮರಣೆ ಮನಕೆ ಸತತ,
ಆಗದಿರಲಿ ಲೌಕಿಕ ಸೆಳೆತಗಳಿಗೆ ಮನಃಪಾತ.

ಮಾಯೆಯೆಂಬ ಮೋಸ

ಅದ್ಹೇಗೆ ಹೇಳುವರೋ ಜಗವೆಲ್ಲ ಮೋಸ,
ಅನುಭವದಿ ಇರುವುದ ಇಲ್ಲೆಂಬ ಪ್ರಯಾಸ,
ಮಿಥ್ಯವಲ್ಲವಿದು ಸತ್ಯ-ಆದರೂ ಅಲ್ಲ ಶಾಶ್ವತ,
ಬಿಡಿಬಿಡಿಸಿ ತಿಳಿಸುತಿದೆ ನಂದಿತೀರ್ಥರ ಮತ.

ಜಾತಿ -ನೀತಿ

ದುಂಬಿಯದು ನೋಡುವುದೆ ಹೂವಿನಾ ಜಾತಿ,
ಮಕರಂದ ಹೀರುವುದೇ ಅದರ ನಿರಂತರ ಗತಿ,
ಯಾರಾದರೇನು ಹೀರಿಕೊಳ್ಳುತ್ತಿರು ಜ್ಞಾನ,
ಸಾಕ್ಷಾತ್ಕಾರಕೆ ಅದುವೆ ಪ್ರಮುಖ ಸೋಪಾನ.

ಅಂತರ್ಯಾಮಿ

ಪ್ರತಿ ಜೀವಿಗಳಲ್ಲಿರುವ ಅಂತರ್ಯಾಮಿ ಕೇಶವ,
ಇದನರಿಯದ ಜೀವಿ ತಾನೊಂದು ಜೀವಂತ ಶವ,
ಅವರವರಲ್ಲಿ ನಿಂತು ಮಾಡಿಸುವ ಸಾಧನವ ತಾನು,
ಅವನ ವ್ಯಾಪಾರ ಒಪ್ಪಿ ಶರಣಾಗು ಪಾರಾಗುವಿ ನೀನು.

ಹಾವು ಏಣಿ ಆಟ

ಇಟ್ಟಿರುವೆ ಸಾವು-ಬದುಕುಗಳ ಹಾವು ಏಣಿಯಾಟ,
ನೆಟ್ಟಿರುವೆ ಜೀವಿಗಳ ಮನ-ಭ್ರಮೆ ವಾಂಛೆಗಳತ್ತ ನೋಟ,
ಪಾರಾಗುವುದೆಂತು ಕಳಚಿ ಭಾರೀ ಸೆಳೆತಗಳ ಕಾಟ,
ಮನತೊಳೆಯೆ ಕೊಳೆಕಳೆಯೆ ಬೀರು ಕಾರುಣ್ಯದಾ ನೋಟ.


(Contributed by Shri Govind Magal)

No comments:

Post a Comment

ಗೋ-ಕುಲ Go-Kula