Wednesday, 10 February 2016

Bhava Guccha 20

ಭಾವ ಗುಚ್ಛ  by “ತ್ರಿವೇಣಿ ತನಯ “

ಕುಲುಮೆ

ಬೇಕಾದಷ್ಟಿರಲಿ ನಷ್ಟ-ಬೆಂಬಿಡದ ಕಷ್ಟ,
ಕಷ್ಟಗಳ ಕಾವಿನಲೇ ಸುಡುವವು ಅನಿಷ್ಟ,
ಸಂಸಾರವೆಂಬುದೇ ಕರ್ಮ ಸುಡುವ ಕುಲುಮೆ,
ಸುಟ್ಟು ಶುದ್ಧವಾದಾಗಲಷ್ಟೇ ದೊರೆವುದವನ ಒಲುಮೆ.

ಅಂತ :ಸತ್ವ

ಭಗವಂತನದ್ದಲ್ಲದ ನಾಮವೊಂದಿಲ್ಲ,
ಭಗವಂತನದ್ದಲ್ಲದ ರೂಪವೊಂದಿಲ್ಲ,
ಯಾಕೆ ಅರ್ಥವಿಲ್ಲದ ಇರುಸುಮುರುಸು,
ಎಲ್ಲರಲಿ ಅವನ ಕಂಡು ಮನದಲ್ಲೇ ನಮಿಸು.

ಅನುಭವ

ಅನುಭವದಿಂದಲೇ ಪ್ರಿಯ ಅನುಭವದಿಂದಲೇ ಹೇಯ,
ಅನುಭವಗಳ ಕುಲುಮೆಯಲಿ ಬೇಯುತಿದೆ ಜೀವ,
ಕಾದಾಗಲೇ ಬಡಿಬಡಿದು ತೆಗೆದುಬಿಡು ಕೊಳೆಯ,
ಕಾರುಣ್ಯದಿ ಕಳೆದು ಕರ್ಮ ಸ್ಫುಟ ಮಾಡೆನ್ನ ಒಡೆಯ.

ಶಿಕ್ಷಣ

ಯಾರನ್ನೂ ಬಿಟ್ಟಿಲ್ಲ ಅಹಮಿಕೆಯ ಗೀಳು,
ಚಾಟಿ ಮಾತು ಬಂದಾಗ ತುಟಿಕಚ್ಚಿ ತಾಳು,
ಶಿಕ್ಷೆ ಅಲ್ಲವದು ನೋಡು ನಡೆದಿಹುದು ಶಿಕ್ಷಣ,
ಬೇಯಿಸಿ ಹದ ಮಾಡುತಿಹರು ಮನವಾಗಲು ಹೂರಣ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula