Monday 8 February 2016

"ಪುರಂದರದಾಸರು" ಭಗವಂತನಿಗೆ ಹಾಡಿದ ಸುಪ್ರಭಾತ - ಭಾಗ 1

(ಸಂಗ್ರಹ: ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರ "ಪುರಂದರೋಪನಿಷತ್" ಪುಸ್ತಕದಿಂದ)

 ***************************

ಏಳಯ್ಯ ಬೆಳಗಾಯಿತು ||ಪಲ್ಲವಿ||
ಏಳು ನಾರಾಯಣನೆ 
ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಯೊಡೆಯ 
ವೇಂಕಟೇಶ ||ಅನುಪಲ್ಲವಿ||

ದಾಸರೆಲ್ಲರು ಬಂದು ಧೂಳಿ 
ದರುಶನಗೊಂಡು ಲೇಸಾಗಿ 
ತಾಳ - ದಂಡಿಗೆಯ ಪಿಡಿದು |
ಕೇಶವನೆ, ನಿಮ್ಮ ಸಿರಿನಾಮವನೆ
ಸ್ಮರಿಸುತಲಿ ವಾಸುದೇವನೆ, ಉದಯದಲಿ ಪಾಡುತಿಹರು ||1||

ಕಾಸಿದ್ದ ಹಾಲುಗಳ 
ಕಾವಡಿಯೊಳ್ಹೆಪ್ಪಿಟ್ಟು
ಲೇಸಾಗಿ ಕೆನೆ-ಮೊಸರು 
ಬೆಣ್ಣೆಯನೆ ಮೆದ್ದು |
ಶೇಷಶಯನನೆ, ಏಳು ಸಮುದ್ರ 
ಮಥನವ ಮಾಡು ದೇಶ ಕೆಂಪಾಯಿತೇಳಯ್ಯ ಹರಿಯೆ ||2||

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ ಸುರರು ತಂದಿಹರಯ್ಯ 
ಸುಜನರೊಡೆಯ |
ಅರವಿಂದಲೋಚನನೆ, ಕೋಳಿ 
ಕೂಗಿತು ಕೇಳು ಪುರಂದರ 
ವಿಠಲನೇ ಬೆಳಗಾಯಿತು ||3||
*********

ಈ ಹಾಡನ್ನು ಕೇಳಿದೊಡನೆಯೇ ನಮಗನ್ನಿಸುವುದು, ಇದೇನು ದೇವರಿಗೂ ನಮ್ಮ ಹಾಗೆ ಹಗಲು-ರಾತ್ರಿ, ಎಚ್ಚರ-ನಿದ್ರೆಗಳುಂಟೆ ? ಕತ್ತಲಿನ ಸ್ಪರ್ಶವೇ ಇಲ್ಲದವನಿಗೆ ರಾತ್ರಿ ಉಂಟೆ ? ಎಂದೂ ಮಲಗದವನಿಗೆ ಬೆಳಗಾಯಿತು ಏಳು ಅನ್ನುವುದುಂಟೆ ?...

ಆದರೂ ನಾವು ನಿತ್ಯ ಬೆಳಗಾತ ಎದ್ದು ಭಗವಂತನಿಗೆ ಸುಪ್ರಭಾತ ಹೇಳುತ್ತೇವೆ.. ಪ್ರತಿದಿನವೂ ರಾತ್ರಿ ಭಗವಂತನಿಗೆ ಜೋಗುಳ ಹಾಡಿ ಮಲಗಿಸುತ್ತೇವೆ...
ಇದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ...

ಪ್ರತಿದಿನ ಎಚ್ಚರವಾದ ಕೂಡಲೇ ಹೇಳುತ್ತೇವಲ್ಲ :

ಉತ್ತಿಷ್ಠೋತ್ತಿಷ್ಠ ಗೋವಿಂದ 
ಉತ್ತಿಷ್ಠ ಗರುಡ ಧ್ವಜ | 
ಉತ್ತಿಷ್ಠ ಕಮಲಾಕಾಂತ 
ತ್ರೈಲೋಕ್ಯಂ ಮಂಗಂಲಂ ಕುರು ||

ಎದ್ದೇಳು ಎದ್ದೇಳು ಓವೋ ಗೋವಿಂದನೇ, ನಿದ್ದೆಯಿಂದೆದ್ದೇಳು ಗರುಡಗಮನ,  ನಿದ್ದೆ ಸಾಕಿನ್ನೇಳು ಓವೋ ರಮೆಯರಸ...  ಮೂರು ಲೋಕಗಳಲ್ಲು ಮಂಗಳವ ಹರಿಸು...

ಹೀಗೆ ಇವೆಲ್ಲ ಭಗವಂತನನ್ನು ಕೊಂಡಾಡುವ ಭಕ್ತರ ಹೃದಯದಲ್ಲಿ ತೇಲಿಬಂದ ಪ್ರೀತಿ-ವಾತ್ಸಲ್ಯದ ತರಂಗಗಳು...

ಭಗವಂತನ ಕುರಿತಾಗಿ ಕೆಲವರದು ವಾತ್ಸಲ್ಯದ ಭಕ್ತಿ - ದೇವಕೀ ಮತ್ತು ವಸುದೇವರಂತೆ. ಮತ್ತೆ ಕೆಲವರದು ಶೃಂಗಾರದ ಭಕ್ತಿ - ಗೋಪಿಕಾ ಸ್ತ್ರೀಯರಂತೆ. ಹೀಗೆ ವಿವಿಧ ಭಕ್ತರ ವಿವಿಧ ಭಾವನೆಗಳಿಗೆ ನೆಲೆ ಭಗವಂತನೊಬ್ಬನೆ
-ಅವನೆ ತಂದೆ, ಅವನೆ ತಾಯಿ, ಅವನೆ ಗಂಡ, ಅವನೆ ಮಗು...
"ತ್ವಮೇವ ಮಾತಾಚ ಪಿತಾ ತ್ವಮೇವ,
ತ್ವಮೇವ ಬಂಧುಶ್ಚ ಸಖಾ ತ್ವಮೇವ.... "

ಎಲ್ಲ ಭಕ್ತರ ಹೃದಯದ ತೊಟ್ಟಿಲಲ್ಲಿ ಭಗವಂತ ಸದಾ ಇದ್ದಾನೆ. ಆದ್ದರಿಂದಲೇ ಬೆಳಗಾತ ಸುಪ್ರಭಾತ ಹಾಡಿ ಎಚ್ಚರಿಸುತ್ತೇವೆ.... ರಾತ್ರಿಯಲ್ಲಿ ಜೋಗುಳ ಪಾಡಿ ಮಲಗಿಸುತ್ತೇವೆ... ಇದು ಅವನಿಗಲ್ಲದಿದ್ದರೂ ನಮಗೆ ಒಳಬಗೆಯಲ್ಲಿ ಅವನ ಬಗೆಗೆ ಇರಬೇಕಾದ ಎಚ್ಚರ. ಭಗವಂತನ ಬಗೆಗೆ ನಾವು ಸದಾ ಎಚ್ಚರಾಗಿರಬೇಕು ಅನ್ನುವ ಎಚ್ಚರ....ಹಾಗಾದಾಗ ಮಾತ್ರ ನಮ್ಮ ಒಳಗೂ ಎಂದೂ ಇರುಳಿಲ್ಲದ ಬೆಳಕೋ ಬೆಳಕು.. ಅದೇ ಬೆಳಗೂ ಹೌದು...

ಶ್ರೀಪುರಂದರದಾಸರಂತ ಅನೇಕ ಅನುಭಾವಿಗಳು ಈ ವ್ಯವಹಾರದ ನುಡಿಗಟ್ಟುಗಳಿಂದಲೇ ಭಗವಂತನ ಜೊತೆ ಸಂಭಾಷಣೆ ನಡೆಸುತ್ತಾರೆ... ಅನೇಕ ದಾಸರು ಹೇಳಿದ ನುಡಿಗಳು - "ಓ ಭಗವಂತ ಈ ಭಕ್ತನನ್ನು ಮರೆಯಬೇಡ"...

 "ಓ ಭಗವಂತನೇ ನನ್ನತ್ತ ಕಣ್ತೆರೆದು ನೋಡು"....
"ಓ ಜ್ಞಾನ ಸ್ವರೂಪಿಯಾದ ಭಗವಂತನೆ, ನಿನಗೆ ನನ್ನ ನೆನಪಿರಲಿ (ಓಂ ಕ್ರತೋ ಸ್ಮರ ಕೃತಂ ಸ್ಮರ-ಇದು ವೇದ ಕಾಲದ ಒಬ್ಬ ಋಷಿಯ ಉದ್ಗಾರ)...
ನಾವು ಮಾತ್ರ ನೆನೆದರೆ ಸಾಲದ,  ಅವನೂ ನಮ್ಮನ್ನು ನೆನೆಯಬೇಕು, ನಮ್ಮತ್ತ ಕಣ್ತೆರೆಯಬೇಕು...

ಇದು ಒಬ್ಬ ಸಾತ್ವಿಕ ಭಕ್ತನ ತುಡಿತ... ಇಂಥ ಭಾವುಕಮನದ ಲೌಕಿಕ ಅಭಿವ್ಯಕ್ತಿಯ ಅಲೌಕಿಕ ಒಳಧ್ವನಿಯನ್ನು  ಭಗವಂತ ಓದುತ್ತಾನೆ ಎಂಬುದನ್ನು ಅವನ ಅಂತರಂಗ ಭಕ್ತರೂ ಓದಬಲ್ಲರು...

ದಾರ್ಶನಿಕರಾದ ಪುರಂದರದಾಸರೂ ಇಂಥದೇ ಒಂದು ಅಂತರಂಗದ ಸುಪ್ರಭಾತವನ್ನು ತಿರುಪತಿಯ ಬೆಟ್ಟದ ಮೇಲೆ, ಒಂದು ಬೆಳಗಿನ ಜಾವದಲ್ಲಿ ಶ್ರೀನಿವಾಸನ ಮುಂದೆ ನಿಂತು ಹಾಡಿದರು ... ದಾಸರಿಗೆ ಒಳಗಣ್ಣು ತೆರೆದಿತ್ತು, ಅದರಿಂದ ಒಳಗೂ ಹೊರಗೂ ಬೆಳಗಾಗಿತ್ತು, ಆಗ ತಮ್ಮ ಅಂತರ್ಯಾಮಿ ಬಿಂಬಮೂರ್ತಿಯನ್ನು ಕರೆದು ಮಾತನಾಡಿಸಿದ ಪರಿಯೇ - "ಏಳು ಬೆಳಗಾಯಿತು ! ಏಳು ನಾರಾಯಣ ಏಳು ಲಕ್ಷ್ಮೀರಮಣ ! ಏಳು ಶ್ರೀಗಿರಿಯೊಡೆಯ ವೇಂಕಟೇಶ !....

ನಮ್ಮ ಈ ಪಾಂಚಭೌತಿಕ ದೇಹದ ಒಳಗಿನ ಪಂಚಕೋಶಗಳ ಕೋಟೆಯೊಳಗಿರುವ ಜೀವನ ಕೊನೆಯ ಕೋಟೆಯಾದ ಆನಂದಮಯ ಕೋಶದಲ್ಲಿರುವ ರೂಪ "ನಾರಾಯಣ".
ನರರ ಸಮುದಾಯವೇ ನಾರ. ಅವರ ಹೃದಯ ಸಮುದ್ರದಲ್ಲಿ ನೆಲೆಸಿದವನು "ನಾರಾಯಣ"...
ಲಕ್ಷ್ಮೀರಮಣ ಅಂದರೆ, ಪದ್ಮಾವತಿಯ ರೂಪದಿಂದ ಧರೆಗಿಳಿದು ಬಂದ ಲಕ್ಷ್ಮಿಯನ್ನು ವರಿಸಲೆಂದೇ ಇಳೆಗಿಳಿದು ಬಂದ "ಶ್ರೀನಿವಾಸ"...

ಶ್ರೀಗಿರಿ ಅಂದರೆ ತಿರುಮಲೆ. ತಿರುಮಲೆಯ ಒಡೆಯನಾಗಿ ಶ್ರೀನಿವಾಸನಾಗಿ ಬೆಟ್ಟದ ಮೇಲೆ ನಿಂತ ಕರುಣಾಳುವೇ ಆ ನಾರಾಯಣ... ಆ ಬೆಟ್ಟಕ್ಕಿರುವ ಇನ್ನೊಂದು ಹೆಸರು ವೇಂಕಟಗಿರಿ. ಅದಕ್ಕೆಂದೇ ಅಲ್ಲಿ ನಿಂತ ಶ್ರೀನಿವಾಸ ವೇಂಕಟೇಶನಾದ...

ಇದರ ಅಧ್ಯಾತ್ಮದ ಮುಖದಲ್ಲೂ ಭಗವಂತ ಶ್ರೀಗಿರಿಯೊಡೆಯ...
ಶ್ರೀ ಅಂದರೆ ಪಂಚೇಂದ್ರಿಯಗಳು-
 "ತಾ ಏತಾಃ ಶೀರ್ಷನ್ ಶ್ರಿಯಃ ಶ್ರಿತಾಶ್ಚಕ್ಷುಃ ಶ್ರೋತ್ರಂ ಮನೋ ವಾಕ್ ಪ್ರಾಣಃ"

ಭಗವಂತನ ಪ್ರತೀಕಗಳನ್ನು ಕಾಣುವ ಕಣ್ಣು ಒಂದು ಸಂಪತ್ತು....
ಭಗವಂತನ ಮಹಿಮೆಯನ್ನು ಕೇಳುವ ಕವಿಯೊಂದು ಸಂಪತ್ತು....
ಭಗವಂತನಿಗೆ ಅರ್ಪಿಸಿದ ಸುಗಂಧವನ್ನು ಮೂಸುವ ಮೂಗೊಂದು ಸಂಪತ್ತು...
ಭಗವಂತನ ಗುಣಗಾನ ಮಾಡುವ ಬಾಯೊಂದು ಸಂಪತ್ತು...
ಭಗವಂತನ ಮಹಿಮೆಯನ್ನೆ ನಿರಂತರ ಚಿಂತಿಸುವ ಮನಸ್ಸೂ ಒಂದು ಸಂಪತ್ತು...
ಈ ಐದು ಸಂಪತ್ತುಗಳು ನಮ್ಮ ದೇಹದಲ್ಲೇ ಶಿರೋಭಾಗದಲ್ಲಿವೆ. ಈ ಶ್ರೀಮಂತಿಕೆಯನ್ನು ಹೊತ್ತ ಗಿರಿ ಎಂದರೆ ನಮ್ಮ ದೇಹದ ತುದಿಯಭಾಗ ಶಿರಸ್ಸು , ಅಲ್ಲಿ ಸಹಸ್ರಾರ ಚಕ್ರ ಇದೆ. ಆ ಚಕ್ರದಲ್ಲಿ ಪವಡಿಸಿದ ನಾರಾಯಣನೆ "ಶ್ರೀಗಿರಿಯೊಡೆಯ"....

ಈ ಸಾತ್ವಿಕ ಇಂದ್ರಿಯಗಳ ಸಂಪತ್ತೇ ಲಕ್ಷ್ಮಿಯ ವಾಸಸ್ಥಾನ, ಆ ಸಂಪತ್ತಿನ ರಮಣನಾದ ನಾರಾಯಣ, ಅಜ್ಞಾನದ ನಿದ್ರೆಯಿಂದ ನಮ್ಮನ್ನು ಎಬ್ಬಿಸಿ , ಎಚ್ಚರಗೊಳಿಸಿ, ಎತ್ತರಕ್ಕೆ ಕೊಂಡು ಹೋದಾಗ ಮಾತ್ರ ಸಹಸ್ರಾರದ ಕೊನೆಯ ಚಕ್ರದಲ್ಲಿ ನಮಗೆ ಅವನ ದರ್ಶನ...

ಆದ್ದರಿಂದ ಭಗವಂತ ನಮ್ಮ ಬಳಿಗೆ ವೇಂಕಟೇಶನಾಗಿ ಬರಬೇಕು...  "ವ"ಕಾರವೆಂಬ ಜ್ಞಾನ ಶಕ್ತಿಯಾಗಿ, "ಇ"ಕಾರವೆಂಬ ಇಚ್ಛಾಶಕ್ತಿಯಾಗಿ, "ಕಟ"  ವೈದಿಕ ಧಾತುವಿನ ಅರ್ಥದಂತೆ "ಪ್ರಕಟ"ಗೊಳ್ಳಬೇಕು....

ನಮ್ಮಲ್ಲಿ ಜ್ಞಾನಶಕ್ತಿ , ಇಚ್ಛಾಶಕ್ತಿಗಳ ಪೂರವನ್ನೇ ಹರಿಸಿ , ನಮ್ಮೊಳಗೆ ಸುಪ್ತವಾದ ಶಕ್ತಿಯನ್ನು ಪ್ರಕಟಗೊಳಿಸಿ, ನಮ್ಮ ವಾಂಛಿತ ಇಷ್ಟಾರ್ಥಗಳನ್ನು ಈಡೇರಿಸುವ ಈಶನಾಗಿ, ವೇಂಕಟೇಶನಾಗಿ ನಮ್ಮಲಿಗೆ ಬರಬೇಕು. ಇದು ಕನ್ನಡದ ವೇಂಕಟೇಶ ಸಂಸ್ಕೃತದ ವೇಂಕಟೇಶನಾದ ಪರಿ....

ದಾಸರೆಲ್ಲರು ಬಂದು ಧೂಳಿ ದರ್ಶನಗೊಂಡು...
ಎಲ್ಲ ಜೀವರ ಅಂತರ್ಯಾಮಿಯಾದ ನಾರಾಯಣ ವಿಶ್ವಕ್ಕೆಲ್ಲ ಸ್ವಾಮಿ ಅಂತ ಅರಿತವರೆಲ್ಲ ಹರಿದಾಸರು...

"ಮಮ ಸ್ವಾಮೀ ಹರಿರ್ನಿತ್ಯಂ ಸ್ವತಂತ್ರಃ ಪೂರ್ಣ ಷಡ್ಗುಣಃ " ಅಥವಾ "ಮಮಸ್ವಾಮೀ ಹರಿರ್ನಿತ್ಯಂ ಸರ್ವಸ್ಯ ಪತಿರೇವಚ"...

ಹೀಗೆಲ್ಲ ಉಪಾಸನೆ ಮಾಡುವವರು ದಾಸರು... ಇಂಥಾ ಭಕ್ತರು, ದಾಸರು ಭಗವಂತನ ಬಳಿಗೆ ಬಂದಾಗ, ಭಕ್ತ-ಭಗವಂತರ ನಡುವೆ ಇರುವ ಕತ್ತಲೆಲ್ಲ ಅಳಿದು ಎಲ್ಲೆಲ್ಲೂ ಬೆಳಕು...  ತಿರಮಲೆಯ ಶ್ರೀನಿವಾಸನ ದರ್ಶನಕೆ ಇಂಥಾ ದಾಸರೆಲ್ಲ ಬಂದದ್ದಾಯಿತು... ಮುಂದೆ "ಧೂಳೀದರ್ಶನ"ವಾಗಬೇಕು... ಧೂಳೀದರ್ಶನ ಎನ್ನುವುದು ಒಂದು ಮಹತ್ವದ ಸಾಂಕೇತಿಕ ಪದ ... ಮೇಲು ನೋಟಕ್ಕೆ ಕ್ಷೇತ್ರಕ್ಕೆ ಬಂದವರು ಮೈಯ ಧೂಳು ಮಾಸುವ ಮುನ್ನ , ಮೈತೊಳೆಯುವ ಮುನ್ನ ಭಗವಂತನನ್ನು ಕಾಣುವ ಆತುರದ ದರ್ಶನ...  ವಿಶ್ವ ದರ್ಶನವನ್ನೇ ಕೊಡುವ ಪದ ಇದು.. ವೃಂದಾವನದ ಗೋಪಿಕೆಯರಂತೆ , ಆತುರದಿಂದ "ಭಗವಂತನನ್ನು ಎಂದು ಕಂಡೇನು" ಎಂಬ ಭಕ್ತನ ದರ್ಶನಕಾತುರತೆಯೇ "ಧೂಳೀದರ್ಶನ"

ಅಧ್ಯಾತ್ಮದ ಹಿನ್ನೆಲೆಯಿಂದ ನೋಡಿದಾಗ ಇದು ಒಂದು ರಹಸ್ಯೋಪಾಸನೆ.. ಭಕ್ತ ಮತ್ತು ಅವನ ಅಂತರ್ಯಾಮಿಯ ಒಳಗಿನ ಒಡನಾಟ ಇದು...

 "ಓ ಭಗವಂತನೆ ನಾನು ನಿನ್ನ ಚರಣದಾಸ... ನನಗೆ ಕಾಣುವುದೆಲ್ಲ ನಿನ್ನ ಚರಣಧೂಳಿ ಮಾತ್ರ..  ಆ ಪಾದಧೂಳಿ ನನ್ನ ತಲೆಯ ಮೇಲೆ ಯಾವಾಗ ಬಿದ್ದೀತೋ ಎಂದು ಕಾತುರದಿ ಕಾಯುತ್ತಿರುವ ಅಂತರಂಗದ ಬಯಕೆಯೇ ಈ ಧೂಳೀದರ್ಶನ"....

ಇದೇ ಅಲ್ಲವೇ ನಾವು ದೊಡ್ಡವರ , ಜ್ಞಾನಿಗಳ ಬಳಿ ಮಾತನಾಡುವಾಗ ಮುಖಕ್ಕೆ ಮುಖ ಕೊಟ್ಟು ಮಾತನಾಡದೆ, ಅವರ ಮುಂದೆ ತಲೆ ಬಗ್ಗಿಸಿ ನಿಂತು ತೋರುವ ಸೌಜನ್ಯದ ಲಕ್ಷಣ...  ಆಗ ನಮಗಾಗುವುದು ಅವರ ಪಾದರಜೋದರ್ಶನ...

ಆದರೆ ಭಗವಂತನ ಪಾದಧೂಳಿ ಅಂದರೇನು ? ಆ ಪಾದಕ್ಕಂಟಿದ ಧೂಳು ಯಾವುದು ? ಪುರಂದರದಾಸರು ಅನುಭಾವಿಗಳು ಆ ಅನುಭಾವದ ಅರ್ಥ ಮಹತ್ತದ್ದೇ ಆಗಿರಬೇಕಲ್ಲವೇ ?... ಇದನ್ನು ನಾವು ಅರಿಯಬೇಕಾದರೆ ವೇದಕಾಲದ ಋಷಿಗಳ ಉದ್ಗಾರವನ್ನು ಗಮನಿಸಬೇಕು :-

ಇದಂ ವಿಷ್ಣುರ್ವಿಚಕ್ರಮೇ
ತ್ರೇಧಾ ನಿದಧೇ ಪದಮ್ |
ಸಮೂಳ್ಢ್ಹ ಮಸ್ಯ ಪಾಂಸುರೇ ||

(ಇದು ಋಗ್ವೇದದಲ್ಲಿ ಬಂದ ಮಂತ್ರ.
ಶ್ರೀ ವಿಷ್ಣುವು ಮೂರು ಹೆಜ್ಜೆಗಳನ್ನಿಟ್ಟ ,
ಇಟ್ಟು ಇದನ್ನೆಲ್ಲ ವ್ಯಾಪಿಸಿದ, ಇಡಿಯ ಬ್ರಹ್ಮಾಂಡ ಅವನ ಪಾದಧೂಳಿಯಲ್ಲಿ ಅಡಗಿದೆ)...
ಹೀಗೆ ಮೂರು ಹೆಜ್ಜೆಗಳನ್ನಿಟ್ಟು ಮೂರು ಲೋಕಗಳನ್ನು ವ್ಯಾಪಿಸಿ ಸರ್ವಗತನಾದ, ಮೂರು ಕಾಲಗಳನ್ನು ವ್ಯಾಪಿಸಿ ನಿತ್ಯ ತತ್ವವಾದ, ಮೂರು ವೇದಗಳನ್ನು ವ್ಯಾಪಿಸಿ ಸರ್ವ ವೇದ ಪ್ರತಿಪಾದ್ಯನಾದ ಭಗವಂತನ ಭಾವಚಿತ್ರವನ್ನು ನೀಡುವ ಈ ವೇದಮಂತ್ರ ಮೊದಲ ಭಾರಿಗೆ ಭಗವಂತನ ಧೂಳಡಗಿದ ಪಾದವನ್ನು ಉಲ್ಲೇಖಿಸುತ್ತದೆ.. ಇದೇ ಪುರಂದರದಾಸರಂಥ ಅನುಭಾವಿಗಳಿಗೆಲ್ಲ ಮೂಲಸ್ಫೂರ್ತಿಯಾಗಿದೆ....
ಏಕೆಂದರೆ "ಮಹತೋ ಮಹೀಯಾನ್" ಆದ ಭಗವಂತನ ಎದುರು ಈ ಅಖಿಲಾಂಡ ಕೋಟಿ ಬ್ರಹ್ಮಾಂಡ, ಅಂದರೆ ಲಕ್ಷೋಪ ಲಕ್ಷ ಜ್ಯೋತಿರ್ವರ್ಷಗಳ ದೂರದ ಅಂತರದಲ್ಲಿ ಒಂದನ್ನೊಂದು ಹೆಣೆದುಕೊಂಡಿರುವ ಬೃಹತ್ತಾದ ವಿಶ್ವಗೋಲ ಕೂಡ ಭಗವಂತನ ಪಾದದ ಕಿರುಬೆರಳ ಅಡಿಯಲ್ಲಿ ಅಂಟಿಕೊಂಡಿರುವ ಒಂದು ಧೂಳಿನ ಕಣವಾಯಿತು... ಹೀಗೆ ಮಹತೋ ಮಹೀಯಾನ್ ಆದ ಭಗವಂತನ ಭೂಮರೂಪದ ಮುಂದೆ ಇಡೀ ವಿಶ್ವದ ಕುಬ್ಜತೆಯ ದರ್ಶನವೆ ನಿಜವಾದ "ಧೂಳಿದರ್ಶನ".... ಅದಕ್ಕೆಂದೇ ಸುಪ್ರಭಾತದಲ್ಲಿ ದಾಸರು ನುಡಿದರು "ದಾಸರೆಲ್ಲರು ಬಂದು ಧೂಳಿದರ್ಶನಗೊಂಡು"  ಈ ಭ‌ೌಮದೃಷ್ಟಿಕೋನದಿಂದ ನೋಡಿದಾಗ ಬ್ರಹ್ಮಾದಿ ಸಕಲದೇವತೆಗಳೂ ಈ "ದಾಸವರ್ಗ"ದಲ್ಲಿ ಸೇರುತ್ತಾರೆ... ಬ್ರಹ್ಮಾದಿಗಳು ಕೂಡ ಭಗವಂತನ ಚರಣಧೂಳಿಯ ದರ್ಶನಪಡೆದು ಧನ್ಯರಾದ "ಮಹಾದಾಸರು"....

ಇನ್ನು ಮುಂದಿನ ಸಾಲು "ಲೇಸಾಗಿ ತಾಳ ದಂಡಿಗೆಯ ಪಿಡಿದು"... ಇದು ಒಬ್ಬ ಭಕ್ತ ತನ್ನನ್ನು ತಾನು ಭಗವಂತನಿಗೆ ಅರ್ಪಿಸಿಕೊಳ್ಳುವ ದೈಹಿಕ ಸಿದ್ಧತೆಯನ್ನು ಹೇಳುತ್ತದೆ... ಮೇಲು ನೋಟಕ್ಕೆ ದಾಸತ್ವದ ಸಂಕೇತವಾಗಿ, ಹರಿನಾಮ ಕೀರ್ತನೆಗೆ ಗಾನ ಪರಿಕರವಾಗಿ ಕೈಯಲ್ಲಿ ತಾಳ, ಅಂದರೆ ವೀಣೆ ಅಥವಾ ತಂಬೂರಿ ಬಗಲಲ್ಲಿ ದಂಡಿಗೆ, ತಾಳವಾದ್ಯ ಮತ್ತು ತತವಾದ್ಯ (ತಂತಿವಾದ್ಯ) ಅನ್ನುವಂತಿದೆ..

ಇದರ ಅಧ್ಯಾತ್ಮದ ಅರ್ಥ ನೋಡಿದಾಗ ಈ ದೇಹವೆ ಒಂದು ದಂಡಿಗೆ, ದೇವರು ನಿರ್ಮಿಸಿದ ವೀಣೆ... ಈ ವೀಣೆಗೆ ಕೈಯ ತಳವೆ ತಾಳವಾದ್ಯ...  ಕೈತಟ್ಟಿನ ತಾಳ ತಟ್ಟಿ ದೇಹವೆಂಬ ದಂಡಿಗೆ(ವೀಣೆ)ಯನ್ನು ನುಡಿಸಬೇಕು... ಹೀಗೆ ಹಾಡುವಾಗ ಕೈಯ ತಳವನ್ನೇ ತಾಳವಾದ್ಯವಾಗಿ ಬಳಸುತ್ತಿದ್ದ ಸಾಮವೇದದ ಒಂದು ಶಾಖೆಯವರನ್ನು  "ತಳವಾದ್ಯಕಾರರು" ಅಥವಾ "ತಳವಕಾರರು" ಎಂದು ಕರೆಯುತ್ತಾರೆ...

ಹೀಗೆ ವೈದಿಕವಾದ ದೈವೀವಾದ್ಯಗಳನ್ನು ಅಂದರೆ ಕೈಯೆಂಬ ತಾಳ, ಮೈಯೆಂಬ ವೀಣೆಯನ್ನು ಹಿಡಿದು ಭಗವಂತನ ಮುಂದೆ ನಿಂತಿದ್ದಾರೆ ದಾಸರು... ಈ ತಾಳ ಭಗವಂತನಿಗಾಗಿ ತಟ್ಟಬೇಕು... ಈ ವೀಣೆ ಭಗವಂತನ ಗುಣಗಳನ್ನು ಹಾಡಬೇಕು.. ಅದೂ ಕೂಡ "ಲೇಸಾಗಿ" ಅಂದರೆ ಲಯಬದ್ಧವಾಗಿ, ಶೃತಿಬದ್ಧವಾಗಿ, ಗುರೂಪದೇಶಕ್ಕೆ ಅನುಗುಣವಾಗಿ, ಶೃತಿ-ಪುರಾಣಗಳಿಗೆ ಸಮ್ಮತವಾಗಿ.... ಈ ದೇಹ ಭಗವಂತ ಕರುಣಿಸಿದ ವೀಣೆ, ಇದನ್ನು ಲೇಸಾಗಿ ಹಿಡಿಯುವುದು ಎಂದರೆ,  ಒಪ್ಪವಾಗಿ, ಚೆನ್ನಾಗಿ ರಕ್ಷಿಸಿಕೊಳ್ಳುವುದು ಆಗಷ್ಟೇ ಇದರಿಂದ ದೇವರ ಗುಣಗಾನ ಮಾಡಲು ಸಾಧ್ಯ.. ಇಲ್ಲದಿದ್ದರೆ ವಿರಕ್ತರಾದ ಸಾಧು-ಸಂತರಿಗೆ ಈ ದೇಹದ ಮಮತೆಯಾದರೂ ಏಕೆ ಬೇಕು ?... "ಶರೀರ ಮಾದ್ಯಂ ಖಲು ಧರ್ಮಸಾಧನಮ್"...

ಹೀಗೆ ಈ ಕಾಯ ಭಗವಂತನ ಪಾದಧೂಳಿಯಿಂದ ಶುದ್ಧವಾಗಿ, ಈ ವೀಣೆ ಭಗವಂತನನ್ನು ಹಾಡಲು ಸಿದ್ಧವಾದ ಮೇಲೆ... ಮುಂದಿನ ಮಾತು ಮನಸ್ಸಿನ ಶುದ್ಧಿ ಮತ್ತು ಸಿದ್ಧತೆಗೆ ಸಂಬಂಧಿಸಿದ್ದು...

"ಕೇಶವನೆ ನಿಮ್ಮ ಸಿರಿನಾಮವನು ಸ್ಮರಿಸುತಲಿ"...
ಇಲ್ಲಿ "ನಿಮ್ಮ" ಅನ್ನುವ ಬಹುವಚನ ಔಚಿತ್ಯಪೂರ್ಣವಾಗಿ ಬಂದಿದೆ... ಏಕೆಂದರೆ ಕೇಶವ ಎಂಬ ಸಂಬೋಧನೆ ಭಗವಂತನ ಅನಂತರೂಪಗಳ ಅನಂತ ನಾಮಗಳನ್ನು ಹೇಳುವ ಉದ್ದೇಶದಿಂದ ಕೂಡಿದೆ... ಭಗವಂತನ ಅನಂತ ಸಿರಿನಾಮಗಳ ಸ್ಮರಣೆಯಿಂದ ಮನಸ್ಸು ಸದಾ ಅವನಲ್ಲಿ ನೆಲೆಸಿರಲಿ, ಅದರಿಂದ ಅಂತರಂಗ ಪಾವನವಾಗಲಿ....ಎಂದು
ಒಬ್ಬ ಸಾಧಕನಿಗೆ ನಾಮಸ್ಮರಣೆಗಿಂತ ಮಿಗಿಲಾದ ಭಾಗ್ಯ - ಸಂಪತ್ತು ಬೇರೇನಿದೆ ? ಎಲ್ಲ ಐಹಿಕ ಸಂಪತ್ತನ್ನೂ ತೊರೆದು ಹರಿನಾಮದ ಸಿರಿಯನ್ನು ಗಳಿಸಿದ ಪುರಂದರದಾಸರು ಅದನ್ನು "ಸಿರಿನಾಮ" ಎಂದು ಕರೆದದ್ದು ತುಂಬಾ ಅರ್ಥಪೂರ್ಣ, ಸ್ವಾನುಭವ ಕೂಡ ಹೌದು... ಅದಕ್ಕೆಂದೇ ಅವರ ಇನ್ನೊಂದು ಹಾಡಲ್ಲಿ ಹಾಡಿದ್ದು -
"ನೀನ್ಯಾಕೋ ನಿನ್ನ ಹಂಗ್ಯಾಕೋ
ನಿನ್ನ ನಾಮದ ಬಲವೊಂದಿದ್ದರೆ ಸಾಕೋ"... ಎಂದು.
ಹರಿಯ ನಾಮಗಳೆ ನಿಜವಾದ ಸಿರಿ. ಅವುಗಳಿಂದ ವಾಚ್ಯನಾದವನೇ ನಿಜವಾದ "ಸಿರಿಯ ವಾಸ" ಅವನೇ "ಶ್ರೀನಿವಾಸ"....

"ಕಲೌ ಸಂಕೀರ್ತ್ಯ ಕೇಶವಮ್" ಎಂಬ ಪುರಾಣವಚನ ಪ್ರಾಯಃ ದಾಸರ ಮನದಲ್ಲಿ ಸುಳಿದು "ಕೇಶವನೆ , ನಿಮ್ಮ ಸಿರಿನಾಮವನೆ ಸ್ಮರಿಸುತಲಿ" ಎಂದು "ಕೇಶವನೆ" ಎಂಬ ನಾಮ ಸಂಬೋಧನೆಯಿಂದಲೇ ಶುರುವಾಗಿರಬೇಕು ಈ ಸೊಲ್ಲು...

ಅಷ್ಟೇ ಅಲ್ಲ , ಶಾಸ್ತ್ರಕಾರರ ಆಣತಿಯಂತೆ ಪ್ರಾತಃಕಾಲದಲ್ಲಿ ಸ್ಮರಿಸಬೇಕಾದ ಭಗವಂತನ ರೂಪ "ಕೇಶವ"....

ಪ್ರಾತಃ ಕಾಲೇ ಕೇಶವಂತು
ಗೋವಿಂದಂ ಸಂಗಮೇ ತಥಾ |
ಮಧ್ಯಾಹ್ನಾಧಿಪತಿಂ ವಿಷ್ಣುಂ
ಮಧುಘ್ನಮಪರಾಹ್ಣಕೇ |
ಸಾಯಂಕಾಲೇ ನೃಸಿಂಹಂತು
ಹೃಷೀಕೇಶಂ ಪ್ರದೋಷಕೇ ||

(ಪ್ರಭಾತದಲ್ಲಿ ಕೇಶವ, ಪೂರ್ವಾಹ್ಣದಲ್ಲಿ ಗೋವಿಂದ, ಮಧ್ಯಾಹ್ನದ ಒಡೆಯ ವಿಷ್ಣು , ಅಪರಾಹ್ಣದಲ್ಲಿ ಮಧುಸೂದನ, ಸಂಜೆಯಲ್ಲಿ ನರಸಿಂಹ, ರಾತ್ರಿಯಲ್ಲಿ ಹೃಷೀಕೇಶ)...

ಹೀಗೆ ಯಾವ ಹೊತ್ತಿನಲ್ಲಿ ಯಾವ ರೂಪವನ್ನು ಸ್ಮರಿಸಬೇಕು ಅನ್ನುವ ಶಾಸ್ತ್ರ ಸಂಪ್ರದಾಯವನ್ನು ನಮಗೆ ತಿಳಿಹೇಳಲೂ ಪುರಂದರದಾಸರು  "ಕೇಶವನೆ" ಎಂಬ ನಾಮವನ್ನು ಇಲ್ಲಿ ಸಂಬೋಧಿಸಿರಬಹುದು...

ಅಷ್ಟೇ ಅಲ್ಲ ಕೇಶವ ಶಬ್ದದ ಒಂದು ಅರ್ಥ ಹೀಗಿದೆ... ಕ=ಬ್ರಹ್ಮ, , ಈಶ=ರುದ್ರ,  ಇವರೀರ್ವರನ್ನೂ ಸೃಷ್ಟಿ-ಸಂಹಾರಗಳ ಕರ್ತವ್ಯಕ್ಕೆ ಹಚ್ಚಿ ನಿಯಂತ್ರಿಸುವವ "ಕೇಶವ"...
ಹಿಂದೆ ಹೇಳಿದ ಧೂಳಿದರ್ಶನದಲ್ಲಿ ಬ್ರಹ್ಮಾದಿ ದೇವತೆಗಳೂ "ದಾಸವರ್ಗಕ್ಕೆ" ಸೇರುತ್ತಾರೆ.. ಅದಕ್ಕೆ ಪೂರಕವಾಗಿಯೂ ಇಲ್ಲಿ ದಾಸರು "ಕೇಶವ" ಪದ ಬಳಸಿರಬಹುದು...

ಹೀಗೆ ಸಾಧಕ ಕಾಯ-ಮನಸ್ಸು -ವಾಕ್ಕುಗಳೆಂಬ ತ್ರಿಕರಣಗಳ ಮೂಲಕ ತನ್ನನ್ನು ಭಗವಂತನಿಗೆ ಅರ್ಪಿಸಿಕೊಳ್ಳುತ್ತಾನೆ...
                   (ಮುಂದುವರೆಯುವುದು...)
                                                   (Contributed by Shri B S Harish)

No comments:

Post a Comment

ಗೋ-ಕುಲ Go-Kula