Showing posts with label Govind Magal Mahabharata Tatparya Nirnaya ಮಹಾಭಾರತ ತಾತ್ಪರ್ಯನಿರ್ಣಯ. Show all posts
Showing posts with label Govind Magal Mahabharata Tatparya Nirnaya ಮಹಾಭಾರತ ತಾತ್ಪರ್ಯನಿರ್ಣಯ. Show all posts

Sunday, 11 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 433-437

 

ಉಮಯಾ ನಿರ್ಮ್ಮಿತಾತ್ಮಾರ್ದ್ದಮುತ್ತರಂ ಹರನಿರ್ಮ್ಮಿತಮ್ ।

ಜ್ಞಾತ್ವೈವಾವದ್ಧ್ಯತಾಂ ಚೈವ ರಾಜ್ಯೇ ಬುದ್ಧಿಂ ಚಕಾರ ಸಃ ॥೨೨.೪೩೩॥

 

ನೋವಾಚ ಕಸ್ಯಚಿತ್ ತೇಷು ಸ್ವಾನುಭೂತಂ ಸುಯೋಧನಃ ।

ಪ್ರಭಾತಾಯಾಂ ತು ಶರ್ವರ್ಯ್ಯಾಂ ಪುನಃ ಕರ್ಣ್ಣೋ ವಚೋSಬ್ರವೀತ್ ॥೨೨.೪೩೪॥

ದುರ್ಯೋಧನ ತನ್ನರ್ಧ ದೇಹ ಪಾರ್ವತಿಯಿಂದ ನಿರ್ಮಿತ,

ಇನ್ನರ್ಧ ದೇಹ ಶಿವನಿಂದ ನಿರ್ಮಿತ ಎಂದು ತಾನರಿತ.

ತಿಳಿದ - ತನ್ನ ವಜ್ರಮಯ ದೇಹವು ಅದು ಪರಮ ಶಾಶ್ವತ,

ತನ್ನ ಅವಧ್ಯತ್ವವರಿತು ಹೊಂದಿದ ರಾಜ್ಯಭಾರದ ನಿಷ್ಠೆ ನಿಶ್ಚಿತ.

ರಾತ್ರಿ ನಡೆದ ಘಟನೆ ತನಗಾದ ಅನುಭವ,

ಯಾರಲ್ಲೂ ಹೇಳದೇ ಮೌನ ವಹಿಸಿದನವ.

ಮರುಬೆಳಿಗ್ಗೆ ದುರ್ಯೋಧನಗೆ ಕರ್ಣ ಹೇಳುವ.

 

ಭೃತ್ಯೈಸ್ತವೈವ ಪಾರ್ತ್ಥೈರ್ಯ್ಯನ್ಮೋಚಿತೋSಸಿ ಪರನ್ತಪ ।

ತೇನ ಮಾನ್ಯೋSಧಿಕಂ ಲೋಕೇ ಯದ್ ಭೃತ್ಯಾ ಏವ ತಾದೃಶಾಃ ।

ಕಿಮು ತ್ವಂ ರಾಜಶಾರ್ದ್ದೂಲ ತದುತ್ತಿಷ್ಠ ಸ್ಥಿರೋ ಭವ ॥೨೨.೪೩೫॥

ಅರಿಭಯಂಕರನೇ, ನಿನ್ನ ದಾಸರಿಂದಾಗಿರುವ ನಿನ್ನ ಬಿಡುಗಡೆಯಾಗಿದೆ ಮಾನ್ಯ,

ದಾಸರಷ್ಟು ಬಲಿಷ್ಠರಾಗಿರುವಾಗ ನೀನು ಬಲಾಢ್ಯ ಎಂಬುವುದು ಸರ್ವಮಾನ್ಯ.

ಆದ್ದರಿಂದ ಮಹಾರಾಜಾ ಮೇಲೇಳು,

ನಿನ್ನ ಕಾರ್ಯದಲ್ಲಿ ಸುಸ್ಥಿರವಾಗಿ ನಿಲ್ಲು.

 

ಯಾ ಚ ತೇSರ್ಜ್ಜುನಮಾಹಾತ್ಮ್ಯೇ ಶಙ್ಕಾ ಸಾ ವ್ಯೈತು ಮೇ ಶೃಣು ।

ಯಾವನ್ನೈವಾರ್ಜ್ಜುನಂ ಹನ್ಯಾಂ ಪಾದೌ ಪ್ರಕ್ಷಾಳಯೇ ಸ್ವಯಮ್ ॥೨೨.೪೩೬॥

ನಿನ್ನಲ್ಲಿನ ಅರ್ಜುನನ ಬಲದ ಭೀತಿ ಮತ್ತು ಅನುಮಾನ ನಾಶವಾಗಲಿ ಕುರುನಾಥ,

ಅರ್ಜುನನ ಕೊಲ್ಲುವವರೆಗೂ ನನ್ನ ಕಾಲುಗಳ ನಾನೇ ತೊಳೆದುಕೊಳ್ಳುವುದೆನ್ನ ಶಪಥ.

 

ಇತ್ಯುಕ್ತೋSವರಜೈಶ್ಚೈವ ಸರ್ವೈಃ ಶಕುನಿನಾ ತಥಾ ।

ಯಾಚಿತೋ ರಥಮಾರು‌ಹ್ಯ ಯಯೌ ನಾಗಪುರಂ ದ್ರುತಮ್ ॥೨೨.೪೩೭॥

ಹೀಗೆ ದುಶ್ಯಾಸನಾದಿಗಳು ಮತ್ತು ಶಕುನಿಯಿಂದ ಬಂದ ಹೇಳಿಕೆ ಮತ್ತು ಬೇಡಿಕೆ,

ದುರ್ಯೋಧನನನ್ನು ಸಂತೈಸಿ ಹೊರಡಲು ಅನುವು ಮಾಡಿತು ಹಸ್ತಿನಪುರಕ್ಕೆ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 421-432

 

ಸ ಪಾಣ್ಡವೈರ್ಮ್ಮೋಚಿತಃ ಸಾನುಜಶ್ಚ ಸಭಾರ್ಯ್ಯಕಃ ಕಿಞ್ಚಿದತೋSಪಗಮ್ಯ ।

ಸಮ್ಮೇಳನಾಯೋಪವಿಷ್ಟಶ್ಚ ತತ್ರ  ಸುಬ್ರೀಳಿತಃ ಸೂತಪುತ್ರಂ ದದರ್ಶ ॥೨೨.೪೨೧॥

ಪಾಂಡವರಿಂದ ಬಿಡುಗಡೆಯಾಗಿ ಬೀಳ್ಕೊಡಲ್ಪಟ್ಟ ದುರ್ಯೋಧನ,

ಅತ್ಯಂತ ಲಜ್ಜಿತನಾದವಗೆ ಕುದಿಯುತ್ತಿತ್ತು ಒಳಗೇ ಅವಮಾನ.

ತನ್ನ ತಮ್ಮಂದಿರು ಹೆಂಡಂದಿರೊಡನೆ ದ್ವೈತವನದ ಆಚೆಗೆ ಬಂದು ನಿಂದ,

ತನ್ನವರೆಲ್ಲಾ ಸೇರಲೆಂದು ಕಾದುಕುಳಿತವನು ಸೂತಪುತ್ರ ಕರ್ಣನ ನೋಡಿದ.

 

ಸ ಚಾSಹ ದಿಷ್ಟ್ಯಾ ಜಯಸಿ ರಾಜನ್ನಿತಿ ಸುಯೋಧನಮ್ ।

ಬ್ರೀಳಿತೋ ನೇತಿ ತಂ ಚೋಕ್ತ್ವಾ ಯಥಾವೃತ್ತಂ ಸುಯೋಧನಃ  ॥೨೨.೪೨೨॥

ಕರ್ಣನಾಗ ದುರ್ಯೋಧನನಿಗೆ 'ರಾಜಾ ದೇವರ ದಯೆದಿಂದ ಗಂಧರ್ವರ ಗೆದ್ದೆ 'ಎಂದ್ಹೇಳಿದ,

ನಾಚಿದ ದುರ್ಯೋಧನ ಇಲ್ಲವೆನ್ನುತ್ತಾ ನಡೆದ ವಿಷಯವನ್ನೆಲ್ಲಾ ಯಥಾವತ್ತಾಗಿ ವಿವರಿಸಿದ.

 

ಉಕ್ತ್ವಾ ಪ್ರಾಯೋಪವೇಶಂ ಚ ಚಕ್ರೇ ತತ್ರ ಸುದುಃಖಿತಃ ।

ಕರ್ಣ್ಣದುಃಶಾಸನಾಭ್ಯಾಂ ಚ ಸೌಬಲೇನ ಚ ದೇವಿನಾ ॥೨೨.೪೨೩॥

 

ಅನ್ಯೈಶ್ಚಯಾಚ್ಯಮಾನೋSಪಿ ನೈವೋತ್ತಸ್ಥೌ ಸಯೋಧನಃ ।

ತತೋ ನಿಶಾಯಾಂ ಪ್ರಾಪ್ತಾಯಾಂ ಸ್ವಪಕ್ಷೇ ಪ್ರವಿಷೀದತಿ ॥೨೨.೪೨೪॥

 

ಮನ್ತ್ರಯಿತ್ವಾSಸುರೈಃ ಕೃತ್ಯಾ ನಿರ್ಮ್ಮಿತಾ ಹೋಮಕರ್ಮ್ಮಣಾ ।

ಶುಕ್ರೇಣೋತ್ಪಾದಿತಾ ಕೃತ್ಯಾ ಸಾ ಪ್ರಸುಪ್ತೇಷು ಮನ್ತ್ರಿಷು ॥೨೨.೪೨೫॥

 

ಧಾರ್ತ್ತರಾಷ್ಟ್ರಂ ಸಮಾದಾಯ ಯಯೌ ಪಾತಾಳಮಾಶು ಚ ।

ಅಥ ಸಮ್ಬೋಧಯಾಮಾಸುರ್ದ್ದೈತ್ಯಾ ದುರ್ಯ್ಯೋಧನಂ ನೃಪಮ್ ॥೨೨.೪೨೬॥

ಎಲ್ಲವನ್ನೂ ಕರ್ಣನಿಗೆ ವಿವರಿಸಿ ಬಹಳವಾಗಿ ದುಃಖಿತನಾಗಿದ್ದ ದುರ್ಯೋಧನ,

ಅಲ್ಲಿಯೇ ಆಗಲೇ ಸಂಕಲ್ಪಿಸಿ ಕುಳಿತುಬಿಡುತ್ತಾನೆ ಆಮರಣಾಂತ ನಿರಶನ.

ಕರ್ಣ, ದುಶ್ಯಾಸನ, ಶಕುನಿ ಎಲ್ಲರೂ ಬೇಡಿದರೂ ಏಳಲಿಲ್ಲ ದುರ್ಯೋಧನ.

ಆನಂತರ ರಾತ್ರಿಯಾಗುತ್ತಿರಲು ದೈತ್ಯಪಕ್ಷ ಕಳೆಗುಂದುತ್ತಿರುವುದನ್ನು ನೋಡಿ,

ಹೋಮದಿಂದ ಕೃತ್ಯವ ಎಬ್ಬಿಸಿದರು ಅಸುರರು ಮಂತ್ರಾಲೋಚನೆ ಮಾಡಿ.

ಆ ಕೃತ್ಯವನ್ನು ಉತ್ಪಾದನೆ ಮಾಡಿದ್ದು ಅಸುರಗುರುವಾದ ಶುಕ್ರಾಚಾರ್ಯ,

ಎಲ್ಲ ಮಲಗಿರಲು ಅದು ಮಾಡಿತು ಕೌರವನ ಪಾತಾಳಕ್ಕೊಯ್ವ ಕಾರ್ಯ.

ಅಲ್ಲಿ ದೈತ್ಯರೆಲ್ಲರಿಂದ ದುರ್ಯೋಧನನಿಗೆ ಹರಿಯಿತು ಬೋಧನಾಧಾರ.

 

ತ್ವಂ ದಿವ್ಯಃ ಪುರುಷೋ ವೀರಃ ಸೃಷ್ಟೋSಸ್ಮಾಭಿಃ ಪ್ರತೋಷಿತಾತ್ ।

ತಪಸಾ ಶಙ್ಕರಾದ್ ವಜ್ರಕಾಯೋSವದ್ಧ್ಯಶ್ಚ ಸರ್ವದಾ ॥೨೨.೪೨೭॥

ದುರ್ಯೋಧನಾ, ನೀನು ಅಲೌಕಿಕ ಪುರುಷ; ಮಹಾವೀರ,

ನಿನ್ನನ್ನು ಸೃಷ್ಟಿಸಿದ್ದು ನಮ್ಮೆಲ್ಲರಿಂದ ಸಂತುಷ್ಟನಾದ ಶಂಕರ.

ನೀನು ವಜ್ರಕಾಯನಾದವ -ಅವಧ್ಯ,

ನಿನ್ನನ್ನು ಕೊಲ್ಲುವುದು ಅದು ಅಸಾಧ್ಯ.

 

ಅಸ್ಮಾಕಂ ಪಕ್ಷಭೂತಸ್ತ್ವಂ ದೇವಾನಾಂ ಚೈವ ಪಾಣ್ಡವಾಃ ।

ಇದಾನೀಂ ಸರ್ವದೇವಾನಾಂ ವರಾತ್ ತ್ವಂ ವಿಜಿತೋ ರಣೇ ॥೨೨.೪೨೮॥

ನೀನು ನಮ್ಮ ಪಕ್ಷ ;ಪಾಂಡವರು ದೇವತೆಗಳ ಪಕ್ಷ,

ನಿನಗೆ ಸೋಲು ತಂದಿಹುದು ದೇವತಾವರಕಟಾಕ್ಷ.

 

ವಯಂ ತಥಾ ಕರಿಷ್ಯಾಮೋ ಯಥಾ ಜ್ಯೇಷ್ಯಸಿ ಪಾಣ್ಡವಾನ್ ।

ಕೃಷ್ಣೇನ ನಿಹತಶ್ಚೈವ ನರಕಃ ಕರ್ಣ್ಣ ಆಸ್ಥಿತಃ ॥೨೨.೪೨೯॥

ನೀನು ಪಾಂಡವರನ್ನು ಗೆಲ್ಲುವಂತೆ ಮಾಡುತ್ತೇವೆ ನಾವು,

ಕರ್ಣನೊಳಗಿದೆ ಕೃಷ್ಣನಿಂದ ಸತ್ತ ನರಕಾಸುರನ ತಾವು.

 

ಸ ಚ ಕೃಷ್ಣಾರ್ಜ್ಜುನಾಭಾವಂ ಕರಿಷ್ಯತಿ ನ ಸಂಶಯಃ ।

ಭೀಷ್ಮಾದೀಂಶ್ಚ ವಯಂ ಸರ್ವಾನಾವಿಶಾಮ ಜಯಾಯ ತೇ ॥೨೨.೪೩೦॥

ಅವನು ಕೃಷ್ಣಾರ್ಜುನರನ್ನು ಮುಗಿಸುತ್ತಾನೆ :ಇದಕ್ಕೆ ಬೇಡ ಸಂಶಯ,

ಭೀಷ್ಮಾದಿಗಳಲ್ಲೂ ನಾವು ಪ್ರವೇಶಿಸುತ್ತೇವೆ ತರಲು ನಿನಗೆ ವಿಜಯ.

 

ತಪಸಾ ವರ್ದ್ಧಯಿಷ್ಯಾಮಸ್ತ್ವಾಂ ಕರ್ಣ್ಣಾದೀಂಶ್ಚ ಸರ್ವಶಃ ।

ತಸ್ಮಾದ್ ಗತ್ವಾ ಪಾಲಯಸ್ವ ರಾಜ್ಯಂ ರಾಜನ್ನಪೇತಭೀಃ ॥೨೨.೪೩೧॥

ನಿನ್ನನ್ನು ಕರ್ಣನನ್ನು ಬಲಿಷ್ಠರನ್ನಾಗಿ ಮಾಡುವುದು ನಮ್ಮ ತಪಸ್ಸಿನ ಕಾರ್ಯ,

ಹೀಗಾಗಿ ಅಳುಕದೇ ಹಿಂತಿರುಗಿ ಹೋಗಿ ಧೈರ್ಯದಿ ಮಾಡು ನಿನ್ನ ರಾಜ್ಯಭಾರ.

 

ಇದಂ ಕಸ್ಯಾಪಿ ನಾSಖ್ಯೇಯಂ ಸುಗುಪ್ತಂ ಭೂತಿವರ್ದ್ಧನಮ್ ।

ಇತ್ಯುಕ್ತ್ವಾ ಕೃತ್ಯಯಾ ಭೂಯಃ ಸ್ವಸ್ಥಾನೇ ಸ್ಥಾಪಿತೋ ನೃಪಃ ॥೨೨.೪೩೨॥

ಇದು ಅತ್ಯಂತ ಗುಟ್ಟು, ಶ್ರೇಯೋಭಿವೃದ್ಧಿಯ ಪಟ್ಟು : ಬಲು ಜೋಪಾನ,

ಗೌಪ್ಯವಾದ ದೈತ್ಯ ಬೋಧನಾನಂತರ ಕೃತ್ಯ ಸೇರಿಸಿತವನ ಸ್ವಸ್ಥಾನ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 415-420

 

ಸಮೀಪಮಾಗತ್ಯ ಪೃಥಾಸುತಾನಾಂ ಪರಿಭೂತಂ ವಃ ಕುಲಂ ಶಕ್ರಭೃತ್ಯೈಃ ।

ಧೃತಃ ಸಭಾರ್ಯ್ಯಃ ಸಾನುಜೋ ಧಾರ್ತ್ತರಾಷ್ಟ್ರಸ್ತಂ ಮೋಚಯಧ್ವಂ ಭ್ರಾತರಂ ಭಾರತಾಗ್ರ್ಯಾಃ ॥೨೨.೪೧೫॥

ಪಾಂಡವರ ಬಳಿ ಧಾವಿಸಿ ಬರುತ್ತಾರೆ ದುರ್ಯೋಧನನ ಮಂತ್ರಿಗಳು,

ಹೇಳುತ್ತಾರೆ -ಇಂದ್ರ ಭೃತ್ಯರಿಂದ ನಿಮ್ಮ ಕುಲಕ್ಕಾಗಿದೆ ಭಾರೀ ಸೋಲು.

ಇದು ನಿಮ್ಮ ವಂಶಕ್ಕಾಗಿರುವಂಥ ಬಹುದೊಡ್ಡ ಅವಮಾನ,

ಹೆಂಡಂದಿರು ತಮ್ಮಂದಿರೊಡನೆ ಸೆರೆಯಾಗಿದ್ದಾನೆ ದುರ್ಯೋಧನ.

ಭರತಕುಲಶ್ರೇಷ್ಠರೇ ಹೋಗಿ ಬಿಡಿಸಿಕೊಳ್ಳಿರಿ ನಿಮ್ಮ ಕುಲವನ್ನ.

 

ಇತ್ಯುಕ್ತ ಊಚೇ ಭೀಮಸೇನೋSಗ್ರಜಂ ಸ್ವಂ ಜಾನೇ ರಾಜನ್ ಯಾದೃಶೋSಯಂ ವಿಮರ್ದ್ದಃ ।

ಐಶ್ವರ್ಯ್ಯಂ ಸ್ವಂ ದರ್ಶಯನ್ ನಃ ಸಮಾಗಾದ್ ದುರ್ಯ್ಯೋಧನಸ್ತೇಜಸೋ ಭಙ್ಗಮಿಚ್ಛನ್ ॥೨೨.೪೧೬॥

ಇದನ್ನು ಕೇಳಿದ ಭೀಮಸೇನ ಹೇಳುತ್ತಾನೆ,

ರಾಜ, ಇದರ ಹಿಂದಿನ ಕಾರಣ ನಾನು ತಿಳಿದಿದ್ದೇನೆ.

ಇದು ಅವನ ಗತ್ತು ಐಶ್ವರ್ಯ ಅಧಿಕಾರದ ಪ್ರದರ್ಶನ,

ನಮ್ಮನ್ನವಮಾನಿಸಲೆಂದೇ ಬಂದಿರುವ ದುರ್ಯೋಧನ.

 

ವಿಜ್ಞಾಯ ತೇಷಾಂ ಮನ್ತ್ರಿತಂ ವಜ್ರಬಾಹುರೇತಚ್ಚಕ್ರೇ ನಾತ್ರ ನಃ ಕಾರ್ಯ್ಯಹಾನಿಃ ।

ದಿವ್ಯಂ ಜ್ಞಾನಂ ಸ್ವಾತ್ಮನೋ ದರ್ಶಯನ್ ಸ ಏತಾವದುಕ್ತ್ವಾ ವಿರರಾಮ ಭೀಮಃ ॥೨೨.೪೧೭॥

ಹೀಗಿದೆ ದುರ್ಯೋಧನಾದಿಗಳ ಕೆಟ್ಟ ಆಲೋಚನೆ,

ಇದ ತಿಳಿದ ಇಂದ್ರ ಮಾಡಬೇಕಾದ್ದನ್ನೇ ಮಾಡಿದ್ದಾನೆ.

ಈ ವಿಷಯದಲ್ಲಿ ನಮಗಾಗಿಲ್ಲ ಯಾವುದೇ ಕಾರ್ಯಹಾನಿ,

ಇದನ್ನು ವಿವರಿಸಿ ಸುಮ್ಮನಾದ ಭೀಮಸೇನ ದಿವ್ಯಜ್ಞಾನಿ.

 

ಏಕಾಹಯಜ್ಞೇ ದೀಕ್ಷಿತೇನೈವ ರಾಜ್ಞಾ ಸಮ್ಪ್ರೇಷಿತೋ ಭೀಮಸೇನೋSರ್ಜ್ಜುನಶ್ಚ ।

ಸಮಾದ್ರೇಯೌ ಚಿತ್ರಸೇನಂ ರಣೇ ತೌ ವಿಜಿತ್ಯ ದುರ್ಯ್ಯೋಧನಮಾಶ್ವಮುಞ್ಚತಾಮ್ ॥೨೨.೪೧೮॥

ಒಂದು ದಿನದ ಯಜ್ಞದಲ್ಲಿ ದೀಕ್ಷಿತನಾದ ಯುಧಿಷ್ಠಿರ ತಾನು,

ಭೀಮ, ಅರ್ಜುನ, ನಕುಲ ಸಷದೇವರನ್ನು ಕಳುಹಿಸಿದನು.

ಅವರು ಚಿತ್ರಸೇನನನ್ನು ಎದುರಿಸಿ ಗೆಲ್ಲುತ್ತಾರೆ,

ಸೆರೆಯಾದ ದುರ್ಯೋಧನಾದಿಗಳ ಬಿಡಿಸುತ್ತಾರೆ.

 

ಸ ಚಿತ್ರಸೇನೋ ವಾಸವೋಕ್ತಂ ಚ ಸರ್ವಂ ಕುಮನ್ತ್ರಿತಂ ಧಾರ್ತ್ತರಾಷ್ಟ್ರಸ್ಯ ಚಾSಹ ।

ಪಾರ್ತ್ಥಸ್ಯ ಭೀಮಸ್ಯ ಚ ತನ್ನಿಶಮ್ಯ ಸುಬ್ರೀಳಿತೋ ಧೃತರಾಷ್ಟ್ರಾತ್ಮಜೋSಭೂತ್ ॥೨೨.೪೧೯॥

ಚಿತ್ರಸೇನ;ಇಂದ್ರ ಹೇಳಿದ ದುರ್ಯೋಧನನ ದುರಾಲೋಚನೆಗಳ ಹೇಳುತ್ತಾನೆ,

ಭೀಮಾರ್ಜುನರು ಅದನ್ನು ಕೇಳಿಸಿಕೊಂಡಾಗ ದುರ್ಯೋಧನ ನಾಚಿಕೆ ಪಡುತ್ತಾನೆ.

 

ಸಮಾಪ್ಯ ಯಜ್ಞಂ ಚ ತತೋSಭಿಯಾತಂ ಸರ್ವೇ ಪ್ರಾಪುರ್ದ್ದರ್ಮ್ಮರಾಜಂ ಸ ಚಾSಶು ।

ಸಮ್ಪೂಜ್ಯ ತೂತ್ಸೃಜ್ಯ ಚ ಚಿತ್ರಸೇನಮೂಚೇ ಗಾನ್ಧಾರೇ ನ ಪುನಃ ಕಾರ್ಯ್ಯಮೀದೃಕ್ ॥೨೨.೪೨೦॥

ಯಜ್ಞ ಮುಗಿಸಿ ಬರುತ್ತಿದ್ದ ಧರ್ಮರಾಜನಲ್ಲಿಗೆ ಎಲ್ಲರೂ ಬಂದು ಸೇರುತ್ತಾರೆ,

ಧರ್ಮಜ ಚಿತ್ರಸೇನನ ಸತ್ಕರಿಸಿ ಕಳಿಸಿ,ಗಾಂಧಾರಿ ಪುತ್ರಗೆ ಕೊಟ್ಟ ಹಿತವಚನದ ಧಾರೆ.

Tuesday, 26 October 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 01-05

 ॥ ಓಂ ॥

                           ಮಹಾಭಾರತ ತಾತ್ಪರ್ಯ ನಿರ್ಣಯ- ಏಕವಿಂಶೋsಧ್ಯಾಯಃ ಪಾಣ್ಡವರಾಜ್ಯಲಾಭಃ]

                                                       ಪಾಣ್ಡವವನಪ್ರವೇಶಃ

ಜನಾರ್ದ್ದನಾಜ್ಞಯಾ ಮಯಃ ಸಮಸ್ತಕೌತುಕೋತ್ತರಾಮ್ ।

ಸಭಾಂ ವಿಧಾಯ ಭೂಭೃತೇ ದದೌ ಗದಾಂ ವೃಕೋದರೇ ॥೨೧.೦೧॥

ಶ್ರೀಕೃಷ್ಣನ ಆಜ್ಞೆಯನ್ನು ಸ್ವೀಕರಿಸಿದವನಾದ ಮಯಾಸುರ,

ಮಾಡಿದ ಸಭಾಭವನವಾಗಿತ್ತು ಅಚ್ಚರಿ ಉತ್ತಮತೆಗಳ ಆಗರ.

ಅಂತಹಾ ಅಪೂರ್ವ ಸಭಾಭವನವನ್ನು ಧರ್ಮರಾಜಗೆ ಕೊಟ್ಟ,

ಹಾಗೆಯೇ ಭೀಮಸೇನನಿಗಾಗಿ ಒಂದು ಗದೆಯನ್ನೂ ತಂದಿಟ್ಟ.

 

ಸ ವಾಯುಧಾರಿತಾಂ ಗದಾಂ ಹಿ ಯೌವನಾಶ್ವಭೂಭೃತಾ ।

ಪ್ರಸಾದತೋsಸ್ಯ ಲಮ್ಭಿತಾಮವಾಪ್ಯ ಮೋದಮಾಪ ಹ ॥೨೧.೦೨॥

ಮುಖ್ಯಪ್ರಾಣನ ದಯದಿಂದ ಆ ಗದೆಯ ಧರಿಸಿದ್ದ ಮುಚುಕುಂದ,

ಮಯನ ಮೂಲಕ ಮತ್ತೆ ಅದನ ಪಡೆದ ಭೀಮಗೆ ಆಯಿತು ಆನಂದ.

 

ಪುನಶ್ಚ ವತ್ಸರದ್ವಯಂ ಸಮುಷ್ಯ ಕೇಶವೋ ಯಯೌ ।

ಸಮರ್ಚ್ಚಿತಶ್ಚ ಪಾಣ್ಡವೈರ್ವಿಯೋಜನೇsಸ್ಯ ಚಾಕ್ಷಮೈಃ ॥೨೧.೦೩॥

ಖಾಂಡವವನ ದಹನದ ನಂತರದ ಎರಡು ವರುಷ,

ಶ್ರೀಕೃಷ್ಣ ಮಾಡಿಕೊಂಡಿದ್ದ ಇಂದ್ರಪ್ರಸ್ತದಲ್ಲಿಯೇ ವಾಸ.

ಕೃಷ್ಣ ವಿಯೋಗವನ್ನು ಸಹಿಸುವಲ್ಲಿ ಪಾಂಡವರು ಆಗಿದ್ದರೂ  ಅಸಮರ್ಥ,

ಅವರಿಂದ ಉತ್ತಮ ಪೂಜೆಗೊಂಡು ದ್ವಾರಕೆಗೆ ಹೊರಟ ಸರ್ವಸಮರ್ಥ.

 

ತತೋ ವಸನ್ ಸ್ವಪುರ್ಯ್ಯಜಃ ಕ್ವಚಿದ್ ರವಿಗ್ರಹೇ ಹರಿಃ ।

ಸದಾರಪುತ್ರಬಾನ್ಧವಃ ಸಮನ್ತಪಞ್ಚಕಂ ಯಯೌ ॥೨೧.೦೪॥

ಹುಟ್ಟೇ ಇರದ ಶ್ರೀಕೃಷ್ಣ ದ್ವಾರಕೆಯಲ್ಲಿದ್ದಾಗ ಒಂದು ಸೂರ್ಯಗ್ರಹಣದ ಸಮಯ,

ತನ್ನ ಅನೇಕ ಬಾಂಧವರು ಪತ್ನೀ ಪುತ್ರರೊಂದಿಗೆ ಕುರುಕ್ಷೇತ್ರಕ್ಕೆ ಬಂದ ಚಿನ್ಮಯ.

 

ಪೃಥಾಸುತಾಶ್ಚ ಸರ್ವಶಃ ಸದಾರಪುತ್ರಮಾತೃಕಾಃ ।

ಕ್ಷಿತೀಶ್ವರಾಶ್ಚ ಸರ್ವಶಃ ಪ್ರಿಯಾಪ್ರಿಯಾ ಹರೇಶ್ಚ ಯೇ ॥೨೧.೦೫॥

ಪೃಥೆಯ ಪುತ್ರರಾದ ಪಾಂಡವರೆಲ್ಲರೂ,

ಸಂಸಾರ ಸಮೇತರಾಗಿ ಅಲ್ಲಿಗೆ ಬಂದರು.

ಭಗವಂತನಿಗೆ ಪ್ರಿಯರು -ಅಪ್ರಿಯರು,

ಮತ್ತೆಲ್ಲಾ ರಾಜರುಗಳು ಅಲ್ಲಿಗೆ ಬಂದರು.

[Contributed by Shri Govind Magal]