Sunday 4 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 32: 01-26

 

ಅಧ್ಯಾಯ ಮೂವತ್ತೆರಡು [ಪಾಣ್ಡವಸ್ವರ್ಗ್ಗಾರೋಹಣಮ್]

 

̐

ತತಃ ಕುರುಕ್ಷೇತ್ರಮವಾಪ್ಯ ಕೃಷ್ಣೋ ದೀಕ್ಷಾಂ ಪ್ರಪೇದೇ ದ್ವಿಷಡಬ್ಧಸತ್ರೇ ।

ಸ ಏವ ಚ ವ್ಯಾಸಭೃಗೂದ್ವಹಾತ್ಮಾ ಚಕ್ರೇSತ್ರ ಸಾದಸ್ಯಮಜೋSಪ್ರಮೇಯಃ ॥ ೩೨.೦೧ ॥

 

 

ತದನಂತರ ಶ್ರೀಕೃಷ್ಣನು ಕುರುಕ್ಷೇತ್ರಕ್ಕೆ ಬಂದ, ಹನ್ನೆರಡುವರ್ಷದ ಯಾಗದಿ ದೀಕ್ಷೆ ಹೊಂದಿದ. ಉತ್ಪತ್ತಿರಹಿತನಾದ, ತಿಳಿಯಲಸಾಧ್ಯವಾದ ,

ಆ ಶ್ರೀಕೃಷ್ಣನೇ ವೇದವ್ಯಾಸ ಹಾಗೂ ಪರಶುರಾಮ ರೂಪದಿಂದ ಈ ಯಾಗದಲ್ಲಿ, ಸದಸ್ಯತ್ವ ವಹಿಸಿದ.

(ಯಾಗದ ನಿಯಾಮಕನಾಗಿ ನಿಂತ / ಯಾಗದ ವಿಧಿಯನ್ನು ಹೇಳುವವನಾದ.) 

 

ತತ್ರರ್ತ್ವಿಜೋ ದಕ್ಷಭೃಗುಪ್ರಧಾನಾಃ ಪಾರ್ತ್ಥಾ ಯದೂನಾಂ ಪ್ರವರೈಃ ಸಮೇತಾಃ ।

ಬ್ರಹ್ಮೇಶಶಕ್ರಪ್ರಮುಖಾಃ ಸುರಾಶ್ಚ ಚಕ್ರುಃ ಸುಸಾಚಿವ್ಯಮನನ್ತದಾಸಾಃ ॥ ೩೨.೦೨ ॥

 

ಆ ಯಾಗದಲ್ಲಿ ದಕ್ಷ, ಭೃಗು ಮೊದಲಾದವರು ಪುರೋಹಿತರಾದರು.

ಯಾದವ ಶ್ರೇಷ್ಠರೆಲ್ಲರಿಂದ ಕೂಡಿಕೊಂಡರು ಪಾಂಡವರು.

ಬ್ರಹ್ಮ-ರುದ್ರ-ಇಂದ್ರ ಮೊದಲಾದ ದೇವತಾ ಕಕ್ಷದವರು,

ಪರಮಾತ್ಮನ ಸೇವಕರಾಗಿ ಸಹಾಯವನ್ನು ಮಾಡಿದರು.

 

ಸರ್ವೇ ಚ ಜೀವಾ ವಸುಧಾತಳಸ್ಥಾ ಯೇSನ್ಯೇSನ್ತರಿಕ್ಷದ್ಯುಮುಖೋತ್ತರೇಷು ।

ವಸನ್ತಿ ನಾರಾಯಣಪಾದಸಂಶ್ರಯಾಸ್ತೇ ಚಾತ್ರ ಸರ್ವೇ ಮುಮುದುಃ ಸನಾಗಾಃ ॥ ೩೨.೦೩ ॥

 

ಭೂಮಿಯ ಮೇಲಿರುವ, ಅಂತರಿಕ್ಷ, ಸ್ವರ್ಗ, ಮೊದಲಾದ ಲೋಕಗಳಲ್ಲಿ ವಾಸಿಸುವ ಸಜ್ಜನರಾದ ಸಮಸ್ತ ಜೀವರು,

ಪರಲೋಕವಾಸಿ ನಾಗರೂ ಸೇರಿದಂತೆ ಎಲ್ಲಾ ಭಗವಂತನ ಪಾದ ಸೇವಕರು, ಎಲ್ಲರೂ ಯಾಗಕ್ಕೆ ಬಂದು ಸಂತೋಷಪಟ್ಟರು.

 

 

ಸುನಿರ್ಣ್ಣಯಸ್ತತ್ವವಿನಿರ್ಣ್ಣಯಾರ್ತ್ಥಿನಾಂ ತತ್ತ್ವಸ್ಯ ಚಾಭೂದಿಹ ವಾದಶೀಲಿನಾಮ್ ।

ಮಿಥೋ ವಿವಾದಾತ್ ಸುರಭೂಸುರಾಣಾಂ ವಾಕ್ಯಾದ್ಧರೇರ್ವ್ಯಾಸಭೃಗೂದ್ವಹಾತ್ಮನಃ ॥ ೩೨.೦೪ ॥

 

ದೇವತೆಗಳೂ ಹಾಗೂ ಋಷಿಗಳ ಪರಸ್ಪರ ವಿವಾದದಿಂದ,

ವಾದಕ್ಕಾಗಿ ಹೊರಟಿರುವ, ತತ್ವನಿರ್ಣಯದ ಬಯಕೆಯಿಂದ,

ನಡೆದ ಆ ಸಭೆಯಲ್ಲಿ ವೇದವ್ಯಾಸರು, ಹಾಗೂ ಪರಶುರಾಮ ದೇವರು,

ತಮ್ಮ ವಾಕ್ಯದಿಂದ ತತ್ವದ ಒಳ್ಳೆಯ  ನಿರ್ಣಯವನ್ನು ಕೊಡಮಾಡಿದರು.

 

ಧರ್ಮ್ಮಾರ್ತ್ಥಕಾಮಾನಖಿಲಾನವಾಪುಸ್ತದರ್ತ್ಥಿನೋ ಮುಕ್ತಿತಮಪೀಹ ಕೃಷ್ಣಾತ್ ।

ಯಥೇಷ್ಟಪಾನಾಶನವಾಸಸೋ ಜನಾ ವಿಚೇರುರತ್ರಾಮರಮಾನವಾದಯಃ ॥ ೩೨.೦೫ ॥

 

ಈ ಯಜ್ಞದಲ್ಲಿ ಎಲ್ಲರೂ ಶ್ರೀಕೃಷ್ಣನಿಂದ ಯಥೇಷ್ಟವಾಗಿ,

ಬಯಸಿದಂಥ ಪಾನ, ಅಶನ, ಭೋಜನ, ವಸ್ತ್ರವುಳ್ಳವರಾಗಿ,  

ಧರ್ಮ-ಅರ್ಥ-ಕಾಮ, ಮುಕ್ತಿ ಕೂಡಾ, ಕೃಷ್ಣಾನುಗ್ರಹದಿಂದ ಹೊಂದಿ ತಿರುಗಾಟ.

 

ಕ್ಷೇತ್ರಂ ತದಾಸೀದ್ಧರಿಲೋಕಸಮ್ಮಿತಂ ಯದೀಯುರತ್ರಾಖಿಲಸಜ್ಜನಾ ಯುತಿಮ್ ।

ನಾನಾಪ್ತಕಾಮಾಶ್ಚ ಯತೋ ಬಭೂವುರ್ನ್ನಿರ್ಯ್ಯತ್ನದೃಶ್ಯಶ್ಚ ಯತೋSತ್ರ ಕೇಶವಃ ॥ ೩೨.೦೬ ॥

 

ಯಾವ ಕಾರಣದಿಂದ ಈ ಯಾಗದ ಕಾಲದಲ್ಲಿ ಶ್ರೀಕೃಷ್ಣನು ಪ್ರಯತ್ನವಿಲ್ಲದೇ ಕಂಡನು ಅಲ್ಲಿ .

ಯಾವ ಕಾರಣದಿಂದ ಎಲ್ಲಾ ಸಜ್ಜನರೂ ಕೂಡಾ ಅಲ್ಲಿ ಒಟ್ಟಾಗಿದ್ದರು,

ಯಾವ ಕಾರಣದಿಂದ ಅಲ್ಲಿ ಬಯಕೆ ಈಡೇರಿಸಿಕೊಳ್ಳದಿರಲಿಲ್ಲ ಯಾರೂ,

ಆ ಎಲ್ಲಾ ಕಾರಣದಿಂದ ಈ ಕುರುಕ್ಷೇತ್ರವು, ಆಗಿಬಿಟ್ಟಿತು ವೈಕುಂಠ ಲೋಕಕ್ಕೆ ಸದೃಶವು.

 

ದ್ವಾದಶಾಬ್ದಂ ಮಹಾಸತ್ರಮೇವಮೇತಾದೃಶಂ ಹರಿಃ ।

ಸಮಾಪ್ಯಾವಭೃಥಸ್ನಾತಃ ಪೂಜಯಿತ್ವಾSಖಿಲಾನ್ ಜನಾನ್ ॥ ೩೨.೦೭ ॥

 

ಶ್ರೀಕೃಷ್ಣ ಪರಮಾತ್ಮನು ಈರೀತಿಯಾದ ವೈಭವದಿಂದ ಕೂಡಿದ,

ಹನ್ನೆರಡು ವರ್ಷ ನಡೆದ ಮಹಾಯಾಗವನ್ನು ಮುಗಿಸಿದ,

ಎಲ್ಲರನ್ನೂ ಸತ್ಕರಿಸಿ, ಅವಭೃಥಸ್ನಾನವನ್ನು ಮಾಡಿದ.

 

 

ಅನುಜಜ್ಞೇ ಕ್ರಮೇಣೈವ ವತ್ಸರೇಣ ಸಮಾಗತಾನ್ ।

ಸ್ವಕುಲಂ ಸಞ್ಜಿಹೀರ್ಷುಃ ಸ ವಿಪ್ರಶಾಪಮಜೀಜನತ್ ॥ ೩೨.೦೮ ॥

 

ಯಾಗ ಮುಗಿದ ನಂತರ ಅಲ್ಲಿ ನೆರೆದಿದ್ದ ಅಪಾರ ಸಂಖ್ಯೆಯ ಜನರೆಲ್ಲರನ್ನೂ,

ಶ್ರೀಕೃಷ್ಣ ಗೌರವದಿಂದ ಒಂದು ವರ್ಷದ ಅವಧಿಯಲ್ಲಿ ತೆರಳಲು ಅನುಜ್ಞೆಕೊಟ್ಟನು.

ತದನಂತರ ತನ್ನ ವಂಶವನ್ನು ಸಂಹಾರಮಾಡಲು ಇಚ್ಛಿಸಿದ ,

ಶ್ರೀಕೃಷ್ಣನು ಬ್ರಾಹ್ಮಣರ ಶಾಪವನ್ನು ಹುಟ್ಟಿಸಿ ಅದಕ್ಕೆ ಚಾಲನೆ ನೀಡಿದ.

 

(ಕೃಷ್ಣನ ಮಗನಾದ ಸಾಂಬನ ಹೊಟ್ಟೆಯಲ್ಲಿ ಹುಟ್ಟಿದ ಮುಸಲದಿಂದ ಯಾದವರ ನಾಶವಾಗಲಿದೆ ಎನ್ನುವ ವಿಪ್ರಶಾಪವಿತ್ತಲ್ಲಿ).

 

ಉಪದಿಶ್ಯ ಪರಂ ಜ್ಞಾನಮುದ್ಧವಾಯಾಮುಮಾಶ್ರಮಮ್ ।

ಬದರ್ಯ್ಯಾಖ್ಯಂ ಪ್ರಾಪಯಿತ್ವಾ ಸಪ್ತಮಾಬ್ದಂ ಶತೋತ್ತರಮ್ ॥ ೩೨.೦೯ ॥

 

ಪ್ರತೀಕ್ಷನ್ ಪಾಲಯಾಮಾಸ ಪಾರ್ತ್ಥೈಃ ಸಹ ಭುವಂ ಪ್ರಭುಃ ।

ಸಮಾರಬ್ಧಂ ಕಲಿಯುಗಂ ಯದಾ ದುರ್ಯ್ಯೋಧನೋSಪತತ್ ॥ ೩೨.೧೦ ॥

 

ಷಟ್-ತ್ರಿಂಶಾಬ್ದಂ ಪುನಃ ಕೃಷ್ಣಃ ಕೃತಮೇವಾನ್ವವರ್ತ್ತಯತ್ ।

ಕೃದಾದಪಿ ವಿಶೇಷೋSಯಂ ಯತ್ ಪುಣ್ಯಸ್ಯಾಧಿಕಂ ಫಲಮ್ ॥ ೩೨.೧೧ ॥

 

ಅಲ್ಪಮೇವ ಚ ಪಾಪಸ್ಯ ಕಾಲಾತ್ ಕೃಷ್ಣಾಜ್ಞಯಾ ತಥಾ ।

ಏವಂ ಸುಧಾರ್ಮ್ಮಿಕೇ ಲೋಕೇ ಹರಿಭಕ್ತಿಪರಾಯಣೇ ॥ ೩೨.೧೨ ॥

 

ನಷ್ಟೇಷು ಕಲಿಲಿಙ್ಗೇಷು ಯುಗವೃತ್ತಿಮಭೀಪ್ಸವಃ ।

ಬ್ರಹ್ಮರುದ್ರಾದಯೋ ದೇವಾಃ ಸ್ತುತ್ವಾ ಕೇಶವಮವ್ಯಯಮ್ ॥ ೩೨.೧೩ ॥

 

ಶ್ರೀಕೃಷ್ಣನು ಉದ್ಧವನಿಗೆ ಉತ್ಕೃಷ್ಟ ಜ್ಞಾನ ಉಪದೇಶಿಸಿದ, ಅವನನ್ನು ಬದರಿ ಎನ್ನುವ ಆಶ್ರಮಕ್ಕೆ ಕಳುಹಿಸಿದ.

ನೂರ ಏಳನೆಯ ವರ್ಷವನ್ನು ನಿರೀಕ್ಷಿಸುತ್ತಿದ್ದ,  (ಅವತಾರ ಸಮಾಪ್ತಿಯನ್ನು ಕಾಯುತ್ತಿದ್ದ) 

ಪಾಂಡವರ ಜೊತೆಗೆ ಭೂಮಿಯನ್ನಾಳಿದ.

 

 

ದುರ್ಯೋಧನನು ತೊಡೆಮುರಿದು ಬಿದ್ದಾಗಲೇ ಕಲಿಯುಗ ಆರಂಭವಾಗಿತ್ತು                         

ಆದರೂ ನಂತರದ ಮೂವತ್ತಾರು ವರ್ಷ ಕೃಷ್ಣನಿಂದ ಕಲಿಯುಗ ಕೃತಯುಗವಾಗಿತ್ತು .

 

ಈ ಕಲಿಯುಗವು ಕೃತಯುಗಕ್ಕಿಂತಲೂ ಕೂಡಾ ವಿಶೇಷವಾಗಿತ್ತು,

ಇಲ್ಲಿ ಮಾಡಿದ ಪುಣ್ಯಕ್ಕೆ ಅಧಿಕವಾಗಿರುವ ಫಲ ಪ್ರಾಪ್ತಿಯಾಗುತ್ತಿತ್ತು,

ಪಾಪಕ್ಕೆ ಅತ್ಯಂತ ಅಲ್ಪಫಲವಿತ್ತು, ಈರೀತಿ ದೈವಭಕ್ತಿಯಲ್ಲೇ ರತವಾಗಿತ್ತು.

ಲೋಕವೆಲ್ಲವೂ ಧರ್ಮದಿಂದ ಕೂಡಿರಲು, ಕಲಿಯುಗದ ಚಿಹ್ನೆಗಳೆಲ್ಲ ನಾಶವಾಗುತ್ತಿರಲು,

ದೈವಗಣ ಯುಗದ ಪ್ರವೃತ್ತಿಯ ಬಯಸಿರಲು

ಬ್ರಹ್ಮ-ರುದ್ರ ಮೊದಲಾದ ದೇವತೆಗಳೆಲ್ಲರೂ, ನಾಶವಿರದ ಕೇಶವನನ್ನು ಸ್ತೋತ್ರಮಾಡಿದರು.

 

ವ್ಯಜ್ಞಾಪಯನ್ ಸ್ವಲೋಕಾಪ್ತಿಮೋಮಿತ್ಯಾಹ ಸ ಚಾಚ್ಯುತಃ ।

ಪ್ರಾಚುರ್ಯ್ಯೇ ಸಜ್ಜನಸ್ಯ ಸ್ಯಾನ್ನ ಕಲೇರ್ವೃದ್ಧಿರಞ್ಜಸಾ ॥ ೩೨.೧೪ ॥

 

ಇತಿ ಸ್ವಕುಲಸಂಹೃತ್ಯೈ ಪ್ರಭಾಸಮನಯತ್ ಪ್ರಭುಃ ।

ಪುಣ್ಯಕ್ಷೇತ್ರೇSಪಿ ನ ಮೃತಿಃ ಸ್ವಗೃಹೇ ತ್ವತಿಧರ್ಮ್ಮದಾ ॥ ೩೨.೧೫ ॥

 

ಗತ್ಯೈವಾಲ್ಪಮಪಿ ಕ್ಷೇತ್ರಂ ಸ್ಯಾನ್ಮಹತ್ಫಲಮಿತ್ಯಜಃ ।

ಪ್ರಕಾಶಯಿತುಮೇವೈನಾನ್ ಪ್ರಭಾಸಾಯ ಕುಶಸ್ಥಲಾತ್ ॥ ೩೨.೧೬ ॥

 

ಅವರೆಲ್ಲರಿಂದ ‘ಶ್ರೀಕೃಷ್ಣ ಸ್ವಲೋಕಕ್ಕೆ ತೆರಳಬೇಕು’ ಎಂದು ಬೇಡಿಕೆ,

ಆ ಕೃಷ್ಣನೂ ‘ಹಾಗೇ ಆಗಲಿ’ ಎಂದು ಒಪ್ಪಿಕೊಂಡ ಅವರ ಕೋರಿಕೆ.

 

ಸಜ್ಜನರ ಬಹುಮತವಿರಲು ಕಲಿಯುಗದ ಅಭಿವೃದ್ಧಿಯು ಆಗಲಾರದು ಎಂದುಸರ್ವಸಮರ್ಥ ಕೃಷ್ಣನು ತನ್ನ ಕುಲದ ಸಂಹಾರಕ್ಕೆ ಯಾದವರನ್ನು ಪ್ರಭಾಸಕ್ಕೆ ಒಯ್ದದ್ದು.

 

ಪುಣ್ಯಕ್ಷೇತ್ರವಾದರೂ ಕೂಡಾ, ತನ್ನ ಮನೆಯಾಗಿದ್ದಲ್ಲಿ, ತನ್ನ ಊರಾಗಿದ್ದಲ್ಲಿ, ಅಲ್ಲಿ ಸತ್ತರೆ ಹೆಚ್ಚು ಪುಣ್ಯಪ್ರಾಪ್ತಿಯಾಗಲಾರದು. ಅದರಿಂದಾಗಿ ಚಿಕ್ಕದಾಗಿದ್ದರೂ ಕೂಡಾ, ಬೇರೆ ಕ್ಷೇತ್ರಕ್ಕೆ ಹೋಗಿ ಸಾಯುವುದು ಮಹಾಫಲದಾಯಕವಾದುದು.

ಇದನ್ನು ಎಲ್ಲಾ ಸಜ್ಜನರಿಗೂ ತೋರಿಸಲೆಂದೇ ಶ್ರೀಕೃಷ್ಣನು,

ಯಾದವರೆಲ್ಲರನ್ನು ದ್ವಾರಕೆಯಿಂದ ಪ್ರಭಾಸಕ್ಕೆ ಕೊಂಡೊಯ್ದುನು.

 

 

ನೀತ್ವಾ ದಾನಾದಿಸದ್ಧರ್ಮ್ಮಾಂಸ್ತೈರಕಾರಯದಚ್ಯುತಃ ।

ತೇ ತತಃ ಶಾಪದೋಷೇಣ ಕೃಷ್ಣೇನೈವ ವಿಮೋಹಿತಾಃ  ॥ ೩೨.೧೭ ॥

 

ಮೈರೇಯಮತ್ತಾ ಅನ್ಯೋನ್ಯಂ ನಿಪಾತ್ಯ ಸ್ವಾಂ ತನುಂ ಗತಾಃ ।

ತದ್ ದೃಷ್ಟ್ವಾ ಬಲದೇವೋSಪಿ ಯೋಗೇನ ಸ್ವತನುಂ ಯಯೌ ॥ ೩೨.೧೮ ॥

 

ದಾನ, ಯಜ್ಞ, ಮೊದಲಾದ ಅನೇಕ ಧರ್ಮಗಳನ್ನು ,

ಆ ಯಾದವರ ಕಡೆಯಿಂದ ಕೃಷ್ಣನು ಮಾಡಿಸಿದನು. 

ಅವರು ಶಾಪದೋಷದಿಂದಲೂ, ಕೃಷ್ಣನಿಂದಲೂ ಮೋಹಿತರಾಗಿದ್ದರು,                   

ಕುಡಿತದ ಮತ್ತಿನಲ್ಲಿ ಮೈಮರೆತು ಪರಸ್ಪರವಾಗಿ ಹೊಡೆದುಕೊಂಡರು .                  

ಒಬ್ಬರನೊಬ್ಬರು ಹೊಡೆದು ಬೀಳಿಸಿಕೊಂಡು,

ತಮ್ಮ ಅವತಾರ ಶರೀರವ ಕಳಚಿಕೊಂಡು, ಮೂಲಶರೀರವನ್ನು ಹೊಂದಿದರು.

ಅದನ್ನು ಕಂಡ ಬಲರಾಮದೇವರು ಕೂಡಾ ಧ್ಯಾನಯೋಗದಿಂದ ತಮ್ಮ ಶರೀರವನ್ನು ಬಿಟ್ಟು, ಮೂಲರೂಪವನ್ನು ಹೊಂದಿದರು.

 

ತತಃ ಪರೇಶೋSಗಣಿತಾನುಭಾವಃ ಸ್ವಸಾರಥಿಂ ಪಾಣ್ಡವಾನಾಂ ಸಕಾಶಮ್ ।

ಸ್ವಲೋಕಯಾನಪ್ರತಿವೇದನಾಯ ಸ್ವಸ್ಯಾನು ಚೈಷಾಂ ತ್ವರಯಾSಭ್ಯಯಾತಯತ್ ॥ ೩೨.೧೯ ॥

 

ಅಥಾSಸತಃ ಪಿಪ್ಪಲಮೂಲ ಈಶಿತುರೂರುಸ್ಥಿತಂ ಪಾದತಳಂ ಸುತಾಮ್ರಮ್ ।

ದೃಷ್ಟ್ವಾ ಜರಾ ನಾಮ ಸಸರ್ಜ ಶಲ್ಯಂ ಭಕ್ತೋSಪ್ಯಲಂ ರೋಹಿತಂ ಶಙ್ಕಮಾನಃ ॥ ೩೨.೨೦ ॥

 

ತದನಂತರ ಎಣೆಯಿರದ ಮಹಿಮೆಯಿರುವ ಶ್ರೀಕೃಷ್ಣನು ,

ತನ್ನ ಅನಂತರದಲ್ಲಿ ಪಾಂಡವರೂ ಕೂಡಾ ತೆರಳಬೇಕಾದ್ದನ್ನು,

ತಮ್ಮ ತಮ್ಮ ಲೋಕಗಳಿಗೆ  ಹೋಗುವ ವಿಷಯವನ್ನು ತಿಳಿಸಲೋಸುಗ,

ತನ್ನ ಸಾರಥಿ ದಾರುಕನನ್ನು ಶೀಘ್ರದಲ್ಲಿ ಪಾಂಡವರ ಬಳಿಗೆ ಕಳುಹಿಸಿದನಾಗ. 

 

ಸಾರಥಿ ತೆರಳಿದಮೇಲೆ ಅಶ್ವತ್ಥಮರದ ಬುಡದಲ್ಲಿ ತನ್ನ ತೊಡೆಯಮೇಲಿರಿಸಿದ,            

ತಾಮ್ರಕೆಂಪು ಬಣ್ಣದ  ಶ್ರೀಕೃಷ್ಣನ ಪಾದದ ತಳಭಾಗವನ್ನು ಕಂಡ ‘ಜರ’ ಎಂಬ ಬೇಡ,               

ಒಳ್ಳೆಯ ಭಗವದ್ಭಕ್ತನಾಗಿದ್ದರೂ ಕೂಡಾಅದನ್ನು ರೋಹಿತಮೃಗವೆಂದು ಭ್ರಮಿಸಿದ,

ಅದರ ಮೇಲೆ ಬಾಣ ಪ್ರಯೋಗ ಮಾಡಿದ.

 

ಅಚ್ಛೇದ್ಯಾಭೇದ್ಯದೇಹಸ್ಯ ಶಲ್ಯೇ ಪಾದಮುಪಸ್ಥಿತೇ ।

ಸಮೀಪಮಾಗತೋ ವ್ಯಾಧೋ ದೃಷ್ಟ್ವಾ ಭೀತೋSಪತದ್ ಭುವಿ ॥ ೩೨.೨೧ ॥

 

ಛೇಧಿಸಲು ಅಸಾಧ್ಯವಾಗಿರುವ, ಭೇಧಿಸಲಾಗದ ದೇಹವುಳ್ಳ ಪರಮಾತ್ಮನ ಪಾದ,

ಬಾಣ ಹೊಕ್ಕಿರಲು, ಅಲ್ಲಿಗೆ ಬಂದ ಆ ಬೇಡ ದೇವರ ಕಂಡು, ಭಯಗೊಂಡು, ನೆಲಕ್ಕೆ ಬಿದ್ದ. 

 

ವಿಪ್ರವಾಕ್ಯಂ ಮಾನಯಾನಃ ಕಾರಯಿತ್ವಾSಮುನಾ ಹರಿಃ ।

ಪಾಪಂ ಮಾಂ ಜಹಿ ದೇವೇತಿ ಯಾಚನ್ತಮನಯದ್ ದಿವಮ್ ॥ ೩೨.೨೨ ॥

 

ವಿಪ್ರರ ಮಾತನ್ನು ಗೌರವಿಸುವವನಾಗಿ ಬೇಡನ ಮೂಲಕ ಈ ಕೆಲಸವನ್ನು ಶ್ರೀಕೃಷ್ಣ ಮಾಡಿಸಿದ ,

‘ಓ, ದೇವನೇ, ಪಾಪಿಷ್ಠನಾಗಿರುವ ನನ್ನನ್ನು ಕೊಲ್ಲು’ ಎಂದು ಬೇಡಿಕೊಳ್ಳುತ್ತಿದ್ದ ಆ ಬೇಡ ,

ಕರುಣಾಳು ಭಗವಂತ ಅವನನ್ನು ಅನುಗ್ರಹಿಸಿ ಸ್ವರ್ಗಕ್ಕೆ ಕಳುಹಿಸಿದ.

 

ಪಾದಪ್ರಹಾರದೋಷೇಣ ತಂ ಭೃಗುಂ ವ್ಯಾಧತಾಂ ಗತಮ್ ।

ಪಶ್ಚಾತ್ತಾಪೇನ ಭಕ್ತ್ಯಾ ಚ ಸುಪ್ರೀತಸ್ತಚ್ಛರೀರಿಣಮ್ ॥ ೩೨.೨೩ ॥

 

ಸ್ವಾಜ್ಞಾಪ್ರಾಪ್ತವಿಮಾನೇನ ದಿವಂ ನಿನ್ಯೇ ಜನಾರ್ದ್ದನಃ ।

ನೀಚಾ ಯೋನಿರ್ನ್ನೀಚನೀಚಂ ಕರ್ಮ್ಮಾSಪ್ತಂ ನೀಚಕರ್ಮ್ಮತಃ ॥ ೩೨.೨೪ ॥

 

ಅದುಷ್ಟತ್ವಾತ್ತು ಮನಸೋ ಭಕ್ತಿಲೋಪೋ ನಚಾಪ್ಯಭೂತ್ ।

ಗೋರತ್ರಾಬುದ್ಧಿಪೂರ್ವಂ ನಾತಿದೋಷಕೃದಪ್ಯಭೂತ್ ॥ ೩೨.೨೫ ॥

 

ಹಿಂದೆ ತ್ರಿಮೂರ್ತಿಗಳಲ್ಲಿ ಯಾರು ಶ್ರೇಷ್ಠರು ಎಂದು ನಿರ್ಣಯ ಮಾಡುವಾಗ ,

ಸಿಟ್ಟಿನಿಂದ ತನ್ನ ಪಾದದಿಂದ ಹರಿಯ ಎದೆಗೆ ಒದ್ದಿದ್ದ ಭೃಗು ಮಹರ್ಷಿಯಾಗ ,

ಆ ದೋಷದಿಂದಾಗಿ ಬೇಡನಾಗಿ ಹುಟ್ಟಿ ಬಂದಿದ್ದ ಭೃಗು ಮಹರ್ಷಿ ಈಗ.

ಅವನ ಪಶ್ಚಾತಾಪದಿಂದಲೂಭಕ್ತಿಯಿಂದಲೂ ಪ್ರೀತನಾಗಿರುವ ಶ್ರೀಕೃಷ್ಣನು,

ತನ್ನ ಆಜ್ಞೆಯಿಂದ ಬಂದ ವಿಮಾನದಿಂದ ಸ್ವರ್ಗಕ್ಕೆ ಕಳುಹಿಸಿಕೊಟ್ಟನು.

 

ಭೃಗು ಮಹರ್ಷಿ ಈ ಹಿಂದೆ ಮಾಡಿರುವ ಕರ್ಮ-,

ಪರಮಾತ್ಮನ ಒದೆಯುವ ಅತ್ಯಂತ ನೀಚಕರ್ಮ. 

ಆ ನೀಚ ಕರ್ಮದಿಂದಾಗಿ ಅವನು ಹೊಂದಿರುವುದು ಬೇಡಶರೀರ. 

ಹೀಗಿದ್ದರೂ ಕೂಡಾ, ಭೃಗುವಿನ ಮನಸ್ಸು ಆಗಿರಲಿಲ್ಲ, ಭಕ್ತಿಹೀನ ಕಠೋರ.

ಅಲ್ಲದೇ ಅವನು ಇಲ್ಲಿ ಬುದ್ಧಿಪೂರ್ವಕವಾಗಿ ಬಾಣ ಬಿಟ್ಟಿರಲಿಲ್ಲ.

ಅದರಿಂದಾಗಿ  ಅವನಿಗೆ ಅತ್ಯಂತ ದೋಷ ಉಂಟಾಗಲಿಲ್ಲ. 

 

ತತೋ ವಿರಿಞ್ಚೇಶಪುರನ್ದರಾದ್ಯಾಃ ಪುನಃ ಸ್ತುವನ್ತೋSಭಿಯಯುಃ ಪ್ರಣಮ್ಯ ।

ಕೃಷ್ಣಂ ಸ ಚಾSಶ್ವೇವ ಯಯೌ ಸ್ವಲೋಕಂ ಸ್ವತೇಜಸಾ ಸರ್ವಮಿದಂ ಪ್ರಕಾಶಯನ್ ॥ ೩೨.೨೬ ॥

 

ತದನಂತರ ಬ್ರಹ್ಮರುದ್ರ ಇಂದ್ರಾದಿ ಎಲ್ಲಾ ದೇವತೆಗಳು,

ಸ್ತೋತ್ರಮಾಡುತ್ತಾ, ಕೃಷ್ಣಗೆ ಮಾಡಿದರು ನಮಸ್ಕಾರಗಳು.

ಕೃಷ್ಣನನ್ನು ಕುರಿತು ಬಂದು, ಅವನನ್ನು ಅನುಸರಿಸುತ್ತಾರೆ,

ಕೃಷ್ಣನು ತನ್ನ ಲೋಕಕ್ಕೆ ತೆರಳಿದ ಬೆಳಗುತ್ತಾ, ತೇಜಸ್ಸಿನ ಧಾರೆ.

No comments:

Post a Comment

ಗೋ-ಕುಲ Go-Kula