Sunday 4 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 32: 107-159

 

ಸ್ವರ್ಗ್ಗೋತ್ತಮಂ ದೇಶಮಪಶ್ಯದೇತಮಭ್ರಾನ್ತಚೇತಾಃ ಸ ಯುಧಿಷ್ಠಿರಸ್ತದಾ ।

ಆಹಾತ್ರ ಧರ್ಮ್ಮಃ ಪುನರಾತ್ಮಸದ್ಯಶಃ ಪ್ರಕಾಶಯನ್ ಪಾಣ್ಡುಸುತಾಭಿಧಂ ಸ್ವಮ್ ॥ ೩೨.೧೦೭ ॥

 

ಆಗ ಎಲ್ಲಾ ಭ್ರಾಂತಿಯನ್ನು ಕಳೆದುಕೊಂಡ ಯುಧಿಷ್ಠಿರ,

ಸ್ವರ್ಗದ ಉತ್ಕೃಷ್ಟವಾದ ದೇಶವನ್ನು ಕಂಡನು ಕಣ್ಣಾರ .

ಇದೇ ಸಮಯದಲ್ಲಿ ಯಮಧರ್ಮನು ತನ್ನ ಯಶಸ್ಸನ್ನು ಪ್ರಕಾಶಪಡಿಸತಕ್ಕವನಾದ,

ತನ್ನದೇ ಅವತಾರ ರೂಪವಾಗಿರುವ ಯುಧಿಷ್ಠಿರನಲ್ಲಿ ಈ ಮಾತನ್ನು ಹೇಳಿದ-

 

ಧರ್ಮ್ಮಾದ್ ವಿಶಿಷ್ಟಾ ಹಿ ಸದಾSನೃಶಂಸತಾ ದೃಷ್ಟಾ ಚ ಸಾ ತ್ವಯ್ಯಧಿಕಾ ತ್ರಿಶೋ ಮಯಾ ।

ಶಕ್ರೋSಪ್ಯುವಾಚೈನಮಿದಂ ಮೃಷಾ ತೇ ಪ್ರದರ್ಶಿತಂ ದ್ರೋಣಕೃತೇ ಮೃಷಾಗಿರಃ ॥ ೩೨.೧೦೮ ॥

 

ಕೃಚ್ಛ್ರಾದಿದಂ ತೇ ಕಥಿತಂ ನಚಾತಿವಿಸ್ರಮ್ಭ ಆಸೀತ್ ತವ ಕೃಷ್ಣವಾಕ್ಯೇ ।

ನಹ್ಯಾಜ್ಞಯಾ ವಾಸುದೇವಸ್ಯ ಕಿಞ್ಚಿತ್ ಪಾಪಂ ಭವೇತ್ ಸರ್ವವಿಧರ್ಮ್ಮೀಣೋSಪಿ ॥ ೩೨.೧೦೯ ॥

 

‘ಧರ್ಮಕ್ಕಿಂತಲೂ ಮಿಗಿಲಾದದ್ದು ದಯೆ. ಮೂರು ಸಂದರ್ಭಗಳಲ್ಲಿದೆ ಅದರ ಛಾಯೆ.

ನಿನ್ನಲ್ಲಿ ಅಧಿಕವಿರುವುದ ನಾನು ಕಂಡಿರುವೆ.

(ಯಕ್ಷಪ್ರಶ್ನೆ, ನಾಯಿ ರಥವೇರುವ ಪ್ರಸಂಗ ಮತ್ತು ನರಕ ದರ್ಶನ ಸಂದರ್ಭಗಳಲ್ಲಿ ಇವೆ)

ಆಗ ಇಂದ್ರನು ಯುಧಿಷ್ಠಿರನನ್ನು ಕುರಿತು ಹೇಳುತ್ತಾನೆ-

ನೀನು ದ್ರೋಣಗಾಗಿ ಸುಳ್ಳು ಹೇಳಿದ್ದಕ್ಕಾಗಿ ತೋರಿದೆ ಈ ನರಕವನ್ನೆ .

ನಿನ್ನಿಂದ ಆ ದ್ರೋಣನಿಗೆ ಹೇಳಬೇಕಾದ ಮಾತನ್ನು ಮನಸ್ಸಿಲ್ಲದ ಮನಸ್ಸಿನಿಂದ ಕಷ್ಟಪಟ್ಟು ಹೇಳಿದೆ.

ನಿನಗೆ ಶ್ರೀಕೃಷ್ಣನ ಮಾತಿನಲ್ಲಿ ಅತ್ಯಂತ ವಿಶ್ವಾಸವಿರಲಿಲ್ಲ, ಶ್ರೀಕೃಷ್ಣನ ಅಣತಿ ಇದ್ದ ಆ ಮಾತಲ್ಲಿ ಪಾಪವೆಲ್ಲಿದೆ?

 

ಬ್ರಹ್ಮಾಪರೋಕ್ಷ್ಯೇSಪಿ ವಿಕರ್ಮ್ಮ ಸೂಚಕಂ ಪ್ರಾರಬ್ಧಪಾಪಸ್ಯ ವಿಷಾಶನಂ ಯಥಾ ।

ಪಶ್ಯಾತ್ರ ಭೀಮಪ್ರಮುಖಾನ್ ಸುಖಸ್ಥಾನ್ ಸಮ್ಪೂಜ್ಯಮಾನಾಂಸ್ತ್ರಿದಶೈಃ ಸುರೂಪಾನ್ ॥ ೩೨.೧೧೦ ॥

 

 

ಕುತಃ ಪರಬ್ರಹ್ಮದೃಶಾಂ ಸುಶುದ್ಧಸತ್ಕರ್ಮ್ಮಣಾಂ ಕೃಷ್ಣಪರಾಯಣಾನಾಮ್ ।

ಪರೇಣ ಯೋಗೇನ ವಿಸೃಷ್ಟತನ್ವಾಂ ದುಃಖಂ ಭವೇದ್ ದೇವವರಾಧಿಪಾನಾಮ್ ॥ ೩೨.೧೧೧ ॥

 

ಬ್ರಹ್ಮಸಾಕ್ಷಾತ್ಕಾರದ ನಂತರವೂ, ಜ್ಞಾನವುಳ್ಳವರು ಮಾಡಿದ ಪಾಪಗಳು ವಿಷಪೂರಿತ ಭೋಜನದಂತೆ ಪ್ರಾರಬ್ಧ ಪಾಪವನ್ನು ಸೂಚಿಸುತ್ತವೆ.’

(ಹೇಗೆ ವಿಷವಾದ ಅನ್ನವನ್ನು ತಿಂದಾಗ ಅದು ಪರಿಣಾಮವನ್ನು ತೋರಿಯೇ ತೋರುತ್ತದೋ ಹಾಗೇ ಪ್ರಾರಬ್ಧಕರ್ಮದ ಕ್ರಿಯೆ.

ಶ್ರೀಕೃಷ್ಣನ ಮಾತಿನಲ್ಲಿ ವಿಶ್ವಾಸವಿಡದೇ ಮಾಡಿದ ಪಾಪದಿಂದ ಯುಧಿಷ್ಠಿರನಿಗೆ ನರಕ ದರ್ಶನವಾದ ಪ್ರಕ್ರಿಯೆ).

ಇಲ್ಲಿ ದೇವತೆಗಳಿಂದ ಗೌರವಕ್ಕೆ ಪಾತ್ರರಾದ, ಸುಖವಾಗಿರುವ, ಒಳ್ಳೆಯ ರೂಪವುಳ್ಳ ಭೀಮ ಮೊದಲಾದವರನ್ನು ನೋಡು.

ಪರಬ್ರಹ್ಮನನ್ನು ಕಂಡ, ಶುದ್ಧಕರ್ಮವನ್ನು ಹೊಂದಿದ, ಕೃಷ್ಣ ಭಕ್ತರಾದ, ಪರಮಾತ್ಮನ ಧ್ಯಾನದ ಜೊತೆಗೆ ಶರೀರಬಿಟ್ಟ, ದೇವತೆಗಳೇ ಆಗಿರುವ ಅವರಿಗೆಲ್ಲಿ ದುಃಖದ ಪಾಡು?

 

ಏತೇ ಹಿ ದೇವಪ್ರವರಾಃ ಪೃಥಿವ್ಯಾಂ ಜಾತಾ ಭುವೋ ಭಾರಜಿಹೀರ್ಷುಮೀಶಮ್ ।

ಪ್ರತೋಷ್ಯ ತದ್ಭಾವಿತಬುದ್ಧಿಕರ್ಮ್ಮಭಿಃ ಪುನಶ್ಚ ತೇನೈವ ಸಹಾSಪಿರೇ ದಿವಮ್ ॥ ೩೨.೧೧೨ ॥

 

ಇವರು ದೇವತಾಶ್ರೇಷ್ಠರಷ್ಟೇ? ಭೂಮಿಯ ಭಾರವನ್ನು ನಾಶಮಾಡಬೇಕೆಂದಿರುವ ನಾರಾಯಣನನ್ನು ಸಂತೋಷಗೊಳಿಸಿದ್ದಾರೆ, ಅವನು ಹೇಳಿದ ಮಾರ್ಗದಲ್ಲಿ, ಅವನಾಜ್ಞೆ ಮಾಡಿದ ಕರ್ಮ ಮಾಡಿ, ಅವನನ್ನು ಮೆಚ್ಚಿಸಿ, ಮತ್ತೆ ಅವನ ಜೊತೆ ಮೋಕ್ಷ ಹೊಂದಿದ್ದಾರೆ.

 

ನ ತೇ ನೃಪಾದ್ಯಾಪಿ ಹಿ ಮಾನುಷೋ ಗತೋ ಭಾವಸ್ತತೋ ದ್ವೇಷ್ಟಿ ಸುಯೋಧನಾದೀನ್ ।

ನಿಮಜ್ಜ್ಯ ತದ್ ವಿಷ್ಣುಪದೋದಕೇSತ್ರ ವಿಸೃಜ್ಯ ದೇಹಂ ಭಜ ದೇವಭಾವಮ್ ॥ ೩೨.೧೧೩ ॥

 

ಓ ರಾಜನೇ, ಈಗಲೂ ಕೂಡಾ ನಿನ್ನ ಮಾನುಷ ಸಂಸ್ಕಾರವು ಹೋಗಿಲ್ಲ.    

ಆ ಕಾರಣದಿಂದ ದುರ್ಯೋಧನ ಮೊದಲಾದವರ ಮೇಲಿದೆ ದ್ವೇಷಜಾಲ.

ಹೀಗಾಗಿ ಈ ಗಂಗಾನದಿಯಲ್ಲಿ ಸ್ನಾನಮಾಡು,

ಆ ದೇಹವನ್ನ ಬಿಟ್ಟು ದೇವತ್ವವನ್ನು ಹೊಂದು.

 

ಸುಯೋಧನಾದ್ಯಾ ಯದಿಮೇ ಸುಪಾಪಾ ಆರಬ್ಧಕರ್ಮ್ಮಕ್ಷಯಮಾಪ್ಯ ನಿತ್ಯೇ ।

ನಿಃಶೇಷಸೌಖ್ಯೋಜ್ಝಿತನಿತ್ಯದುಃಖೇSವಶಾಃ ಪತಿಷ್ಯನ್ತ್ಯಪುನರ್ನ್ನಿವೃತ್ತಾಃ ॥ ೩೨.೧೧೪ ॥

 

ಯಾವ ಕಾರಣದಿಂದ ದುರ್ಯೋಧನನೇ ಮೊದಲಾದವರು ಅತಿ ಪಾಪಿಷ್ಠರಾಗಿದ್ದಾರೆ, ಆದುದರಿಂದ ನಾಶವಾಗಿ ಹೋದ ಮೇಲೆ ಅವರ ಯಜ್ಞಾದಿಗಳ ಪುಣ್ಯಕರ್ಮದ ಆಸರೆ, ನಿತ್ಯ ಸುಖದ ಲವಲೇಶವಿಲ್ಲದ,ನಿತ್ಯ ದುಃಖದ ಅಂಧoತಮಸ್ಸಿನಲ್ಲಿ ಖಂಡಿತ ಬೀಳುತ್ತಾರೆ.

 

ದೇವಾಂಶಜಾ ಯೇ ತು ಸಮಸ್ತಶಸ್ತೇ ಸ್ವಮೂಲರೂಪಂ ಸಮವಾಪ್ಯ ಕಾಲೇ ।

ಸ್ವತಾರತಮ್ಯಾನುಸೃತಾಂ ವಿಮುಕ್ತಿಂ ಪ್ರಾಪ್ಸ್ಯನ್ತಿ ನಾತ್ರಾಪಿ ವಿಚಾರ್ಯ್ಯಮಸ್ತಿ ॥ ೩೨.೧೧೫ ॥

 

ಯಾರೆಲ್ಲಾ ದೇವತೆಗಳ ಅಂಶದಿಂದ ಹುಟ್ಟಿದ್ದಾರೆ,

ಅವರೆಲ್ಲಾ ಸಕಾಲದಲ್ಲಿ ತಮ್ಮ ಮೂಲ ಸೇರುತ್ತಾರೆ .

ತಮ್ಮ ಯೋಗ್ಯತೆಗೆ ತಕ್ಕ ವಿಮುಕ್ತಿಯನ್ನು ಹೊಂದುತ್ತಾರೆ.

ಈ ವಿಚಾರ ಯಾವುದೇ ಸಂದೇಹವಿರದ ಶಾಸ್ತ್ರಧಾರೆ.

 

ಇತ್ಯುಕ್ತ ಆಶ್ವೇವ ನಿಮಜ್ಜ್ಯ ಗಙ್ಗಾಂ  ಧರ್ಮ್ಮಾತ್ಮಜಸ್ತಂ ಪ್ರವಿಸೃಜ್ಯ ದೇಹಮ್ ।

ಸದ್ಯೋ ಬಭೌ ದೈವಮವಾಪ್ಯ ಕಾಯಂ ವಿಸೃಷ್ಟರೋಷಾದಿಸಮಸ್ತದೋಷಃ ॥ ೩೨.೧೧೬ ॥

 

ಈರೀತಿಯಾಗಿ ಹೇಳಲ್ಪಟ್ಟ ಯುಧಿಷ್ಠಿರನು ಕೂಡಲೇ ಗಂಗೆಯಲ್ಲಿ ಮುಳುಗಿದ,

ಭೌತಿಕ ದೇಹ ಬಿಟ್ಟು, ದುರ್ಯೋಧನನ ಮೇಲಿನ ರೋಷ, ಮಾತ್ಸರ್ಯ, ಮೊದಲಾದ ಎಲ್ಲಾ ದೋಷಗಳನ್ನು ಕಳೆದುಕೊಂಡ. ದೈವಿಕವಾಗಿರುವ ಶರೀರವನ್ನು ಹೊಂದಿದವನಾಗಿ ಯುಧಿಷ್ಠಿರ ಶೋಭಿಸಿದ.

 

ಸ ತು ಪ್ರಪಶ್ಯನ್ ಸ್ವಜನಂ ಸಮಸ್ತಂ ಸ್ವಮೂಲರೂಪಾತಿಸಮೀಪಸಂಸ್ಥಮ್ ।

ದದರ್ಶ ಭೀಮಂ ಚ ಮರುತ್ಸಮೀಪೇ ಮದ್ಧ್ಯೇ ಜ್ವಲನ್ತಂ ಮರುತಾಂ ಗಣಸ್ಯ ॥ ೩೨.೧೧೭ ॥

 

ಧರ್ಮರಾಜನು ತಮ್ಮ ಮೂಲರೂಪಭೂತರಾಗಿದ್ದ,

ದೇವತೆಗಳ ಸಮೀಪದಲ್ಲಿ ನಿಂತಿದ್ದ  ತಮ್ಮವರಾದ ಎಲ್ಲರನ್ನೂ ನೋಡಿದ.

ಮರುತ್ ದೇವತೆಗಳ ಸಮೂಹದ ಮಧ್ಯದಲ್ಲಿ,

ಹೊಳೆಯುತ್ತಿದ್ದ ಭೀಮನ ಕಂಡ ಮುಖ್ಯಪ್ರಾಣನ ಸಮೀಪದಲ್ಲಿ.

 

ದದರ್ಶ ಕೃಷ್ಣಾಮಪಿ ತತ್ಸಮೀಪೇ ಶ್ರಿಯಾ ಜ್ವಲನ್ತೀಂ ಸಮತೀತ್ಯ ಚಾನ್ಯಾಃ ।

ಸ್ಪ್ರಷ್ಟುಂ ಚ ಸಂಸ್ಕಾರವಶಾದಿಯೇಷ ನಿಷಿದ್ಧ್ಯ ತಂ ಪ್ರಾಹ ಸುರಾಧಿರಾಜಃ ॥ ೩೨.೧೧೮ ॥

 

 

ಅವನ ಸಮೀಪದಲ್ಲಿಯೇ ಕಾಂತಿಯಿಂದ, ಉಳಿದ ದೇವಿಯರ ಮೀರಿ ಹೊಳೆಯುತ್ತಿದ್ದ, ದ್ರೌಪದಿದೇವಿಯನ್ನೂ ಧರ್ಮರಾಜ ಕಂಡ. ಹಾಗೆ ಕಂಡು, ತನ್ನ ಸಂಸ್ಕಾರದ ಬಲದಿಂದ ಧರ್ಮಜ ಅವಳನ್ನು ಮುಟ್ಟಲು ಬಯಸಿದ.

ಆಗ ಅವನನ್ನು ತಡೆದು ಇಂದ್ರ  ಹೇಳಿದ -

 

ಏಷಾ ಹಿ ಸಾಕ್ಷಾಜ್ಜಗತಾಂ ಪ್ರಿಯಸ್ಯ ಪ್ರಾಣಾತ್ಮನೋ ಜೀವವರೇಶ್ವರಸ್ಯ ।

ಪ್ರಾಣಪ್ರಿಯಾ ಶ್ರೀರಿತಿ ನಾಮ ಯಸ್ಯಾಃ ಶಮಾತ್ಮಕೇSಸ್ಮಿನ್ ರಮತೇ ಯದೇಷಾ ॥ ೩೨.೧೧೯ ॥

 

ಇವಳು ಜಗತ್ತಿಗೇ ಅತ್ಯಂತ ಪ್ರಿಯನಾಗಿರುವ, ಮುಖ್ಯಪ್ರಾಣ ತಾನಾಗಿ ಉಸಿರನ್ನಾಡಿಸುವ, ಜೀವೋತ್ತಮನಾಗಿರುವ ಭೀಮಸೇನನ ಪ್ರಾಣಪ್ರಿಯ ಭಾರತೀದೇವಿಯಾಗಿದ್ದಾಳೆ. ಆನಂದಾತ್ಮಕನಾದ ಈ ಮುಖ್ಯಪ್ರಾಣನಲ್ಲಿ ಏಕೆ ಇವಳು ಅತ್ಯಂತ ಆಸಕ್ತಳಾಗಿದ್ದಾಳೆ,

ಆ ಕಾರಣದಿಂದಲೇ ಅವಳು ‘ಶ್ರೀಃ’ ಎಂದು ಹೆಸರು ಪಡೆದು ಪ್ರಸಿದ್ಧಳಾಗಿದ್ದಾಳೆ.

 

ಯುಷ್ಮಚ್ಚತುರ್ದ್ದೇಹಗತಸ್ಯ ವಾಯೋರ್ವಾಯುಪ್ರಿಯಾ ಭೀಮತನೋಸ್ತಥೈವ ।

ಭೋಗಾಯ ಸೃಷ್ಟಾ ಪುರುಷೋತ್ತಮೇನ ಯುಷ್ಮತ್ಪ್ರಿಯಾರ್ತ್ಥಂ ಭವತಾಂ ಚ ದಾರೈಃ ॥ ೩೨.೧೨೦ ॥

 

ಭೀಮಸೇನನ ಬಿಟ್ಟು ಉಳಿದ ನಾಲ್ಕು ಜನ ಯುಧಿಷ್ಠಿರ, ಅರ್ಜುನ, ನಕುಲ-ಸಹದೇವ,

ಅವರೊಳಗೆ ಇದ್ದು ಭೀಮಾತ್ಮಕನಾಗಿರುವ, ಮುಖ್ಯಪ್ರಾಣನಿಗೆ ಇವಳು ಸದಾಕಾಲ ಪ್ರಿಯ.

ನಾರಾಯಣನಿಂದ ನಿಮ್ಮ ಸುಖಕ್ಕಾಗಿ ,

ನಿಮ್ಮ ಹೆಂಡತಿಯರಿಂದ ಒಡಗೂಡಿಸೃಷ್ಟಿಸಲ್ಪಟ್ಟವಳಿವಳು ನಿಮ್ಮ ಭೋಗಕ್ಕಾಗಿ.

 

ಪ್ರೀತಿಸ್ತತೋ ಹ್ಯಭ್ಯಧಿಕಾ ಬಭೂವ ಭೀಮಸ್ಯ ಚಾಸ್ಯಾಸ್ತದನು ಸ್ಮ ಪಾರ್ತ್ಥೇ ।

ತತೋ ಭವತ್ಸ್ವೇವ ಯಥಾಕ್ರಮೇಣ ಗುಣಾನುಸಾರೇಣ ಸಮೀರಣಸ್ಯ ॥ ೩೨.೧೨೧ ॥

 

ಆಕಾರಣದಿಂದ ಭೀಮಸೇನನ ಮೇಲೂ, ಅವನಾದ ನಂತರ ಅರ್ಜುನನ ಮೇಲೂ ,

ಇವಳಿಗೆ ಆತ್ಯಂತಿಕವಾದ ಪ್ರೀತಿಯು ಉಂಟಾಯಿತು.

ಹೀಗೆ ಭೀಮಸೇನನ ನಂತರ ಕ್ರಮವಾಗಿ ಗುಣಾನುಸಾರವಾಗಿ ಮುಖ್ಯಪ್ರಾಣನ ಅನುಗ್ರಹದಿಂದ ನಿಮ್ಮಲ್ಲಿ ದ್ರೌಪದೀದೇವಿಗೆ ಪ್ರೀತಿ ಉಂಟಾಯಿತು.

 

ಇದಾ ಹಿ ಸಾ ಶುದ್ಧತನುಃ ಪ್ರಜಾತಾ ಶಚ್ಯಾದಿಯೋಗಾಪಗತಾಗ್ರ್ಯದೇಹಾ ।

ಯೂಯಂ ಚ ಸರ್ವೇ ಮರುತೋ ವಿಶೇಷಸಂಯೋಗಹೀನಾಃ ಸ್ವಶರೀರಸಂಸ್ಥಾಃ ॥ ೩೨.೧೨೨ ॥

 

ಈಗ ಇವಳು ಶಚಿಯೇ ಮೊದಲಾದ ದೇವಿಯರ ಸಂಬಂಧವಿಲ್ಲದ, ಶ್ರೇಷ್ಠ ದೇಹದಿಂದ ಇದ್ದಾಳೆ.

ನಿಮ್ಮೆಲ್ಲರಿಂದ ಕೂಡಾ ಹೀನವಾಗಿ ಹೋಗಿದೆ ಮುಖ್ಯಪ್ರಾಣನ ವಿಶೇಷ ಸಂಯೋಗದ ಕಳೆ.

 

ಸ್ಪರ್ಶೇsಪಿ ನಾಸ್ಯಾಃ ಪವಮಾನಪತ್ನ್ಯಾಃ ಸುಪೂತತಾSಲಂ ಭವತಾಮಿದಾನೀಮ್ ।

ನಚೋತ್ತರತ್ರಾಪಿ ಭವೇತ್ ಕಥಞ್ಚಿದ್ ದಿವೌಕಸಾಂ ಮಾನುಷದೇಹಿನೋ ಯಥಾ ॥ ೩೨.೧೨೩ ॥

 

ಈ ಭಾರತೀದೇವಿಯ ಮುಟ್ಟುವಿಕೆಯಲ್ಲಿ ಕೂಡಾ ನಿಮಗೆ ಈಗ ಪಾವಿತ್ರ್ಯ ಇಲ್ಲ. ಮುಂದೆಯೂ ಕೂಡಾ ಬರುವುದಿಲ್ಲ,

ಏಕೆಂದರೆ ಮನುಷ್ಯದೇಹಿಗಳು ಅಪವಿತ್ರರಾಗಿರುವುದರಿಂದ ದೇವತೆಗಳನ್ನು  ಮುಟ್ಟಲಾಗುವುದಿಲ್ಲ.  

 

ಇತೀರಿತಂ ತಂ ಪ್ರತಿಸನ್ನಿವೃತ್ತಂ ವಿನಾಶಯನ್ ಮಾನುಷವಾಸನಾಂ ಸ್ವಯಮ್ ।

ಸಮಾಶ್ಲಿಷಚ್ಛುದ್ಧತನುಃ ಸ್ತನೋತ್ಥೋ ಧರ್ಮ್ಮೋ ಹರೇಃ ಸೋSಭವದಾಶು ತತ್ಸಮಃ ॥ ೩೨.೧೨೪ ॥

 

ಈರೀತಿಯಾಗಿ ಇಂದ್ರನಿಂದ ಹೇಳಲ್ಪಟ್ಟ, ದ್ರೌಪದಿಯನ್ನು ಮುಟ್ಟುವ ವಿಷಯದಿಂದ ವಿಮುಖನಾದ ಯುಧಿಷ್ಠಿರ,

ಪರಮಾತ್ಮನ ಎದೆಯಿಂದ ಹುಟ್ಟಿದ ಯಮಧರ್ಮ ಧರ್ಮಜನ ಆಲಂಗಿಸಿಕೊಂಡ ನಾಶಪಡಿಸಲವನ ಮನುಷ್ಯ ಸಂಸ್ಕಾರ.

ಆಗ ಪರಮ ಶುದ್ಧವಾದ ಶರೀರವುಳ್ಳವನಾಗಿ ಮೂಲರೂಪಕ್ಕೆ ಸಮಾನನಾದ ಯುಧಿಷ್ಠಿರ.

 

ತತಸ್ತು ಪಾರ್ತ್ಥಾ ಅಖಿಲಾಃ ಸ್ವಮೂಲರೂಪೈಃ ಸಹೈವಾSವಿವಿಶುರ್ಮ್ಮುದಾSನ್ವಿತಾಃ ।

ಸ್ವೀಯಾನಿ ಧಾಮಾನಿ ತತೋSಪ್ಯನೂನಭೋಗಾಃ ಸದಾ ಸನ್ನ್ಯವಸಂಶ್ಚ ತತ್ರ  ॥ ೩೨.೧೨೫ ॥

 

ತದನಂತರ ಎಲ್ಲಾ ಪಾಂಡವರೂ ತಮ್ಮತಮ್ಮ ಮೂಲರೂಪದಿಂದ ಕೂಡಿಕೊಂಡೇ ಅತ್ಯಂತ ಸಂತಸದಿಂದ ತಮ್ಮತಮ್ಮ ಧಾಮಕ್ಕೆ ತೆರಳಿದರು.

ಅಲ್ಲಿಯೂ ಕೂಡಾ ತಮ್ಮ ಮೂಲರೂಪಕ್ಕಿಂತ ಕಡಿಮೆಯಿಲ್ಲದ ಭೋಗವನ್ನು ಅನುಭವಿಸುತ್ತಾ ವಾಸಮಾಡಿದರು.

 

ತತ್ರಾಪಿ ಕೃಷ್ಣೇನ ಸಮಾಗಮೋSಭೂತ್ ಪುರೇವ ತೇಷಾಮತಿತತ್ಪರಾಣಾಮ್ ।

ಚಿಕ್ರೀಡ ಏಭಿಃ ಸಹಿತಸ್ತಥೈವ ಕೃಷ್ಣೋSಪಿ ತದ್ವತ್ ಸರಥೋSರ್ಜ್ಜುನೇನ ॥ ೩೨.೧೨೬ ॥

 

 

ಸ್ವರ್ಗದಲ್ಲಿ ಕೂಡಾ ಪರಮಾತ್ಮನ ಅತ್ಯಂತ ಭಕ್ತರಾದ ಪಾಂಡವರಿಗೆ,

ಶ್ರೀಕೃಷ್ಣನ ಜೊತೆಗೆ ಸಮಾಗಮವಾದ ದೈವೀ ಪುರಸ್ಕಾರದ ಕೊಡುಗೆ.

ಅವರಿಂದ ಕೂಡಿದವನಾಗಿ ಶ್ರೀಕೃಷ್ಣನೂ ಕೂಡಾ ಕ್ರೀಡಿಸಿದನು.

ಹಾಗೆಯೇ ಅರ್ಜುನನೊಂದಿಗೆ ರಥದಲ್ಲಿ ಶ್ರೀಕೃಷ್ಣನು ವಿಹರಿಸಿದನು.

 

ಅನ್ಯೇ ತು ದೇವಾಂಶಭವಾಃ ಸಮಸ್ತಾಃ ಸ್ವಮೂಲರೂಪೈಕ್ಯಮವಾಪುರಾಶು ।

ಕರ್ಮ್ಮಕ್ಷಯಾದೇವ ಸುರೇತರಾಸ್ತು ಪುಣ್ಯಕ್ಷಯಂ ಪ್ರಾಪ್ಯ ಭುವಿ ಪ್ರಜಾತಾಃ ॥ ೩೨.೧೨೭ ॥

 

ಚತುಃಸಹಸ್ರಂ ತ್ರಿಶತೋತ್ತರಂ ತೇ ಸಂವತ್ಸರಾಣಾಮನುಭೂಯ ದಿವ್ಯಾನ್ ।

ಭೋಗಾನ್ ನರತ್ವೇSಪಿ ಸದೇಶ್ವರೋSಹಮಸಜ್ಜಗಚ್ಚೇತಿ ಧಿಯಾSSಪ್ನುವಂಸ್ತಮಃ ॥ ೩೨.೧೨೮ ॥

 

ದೇವತಾಂಶದಿಂದ ಹುಟ್ಟಿದ ದ್ರೋಣ, ಧೃಷ್ಟದ್ಯುಮ್ನ, ಮುಂತಾದ ಎಲ್ಲರೂ,

ಶೀಘ್ರದಲ್ಲಿ ತಮ್ಮ ಮೂಲರೂಪದೊಂದಿಗೆ ಐಕ್ಯವನ್ನು ಹೊಂದಿದರು.

ದುರ್ಯೋಧನನೇ ಮೊದಲಾಗಿರುವ ದೈತ್ಯರೆಲ್ಲರೂ ಕೂಡಾ,

ಅನುಸರಿಸಿ ತಮ್ಮ ಕೆಲ ಪುಣ್ಯಕರ್ಮಗಳ ಫಲಗಳ ಜಾಡ,

ಅಲೌಕಿಕವಾದ ಭೋಗಗಳನ್ನು ಅನುಭವಿಸಿ,

ನಾಲ್ಕುಸಾವಿರದ ಮುನ್ನೂರು ವರ್ಷ ವಾಸಿಸಿ,

ಬಳಿಕ, ಪುಣ್ಯನಾಶ ಹೊಂದುತ್ತಾರೆ,

ಭೂಮಿಯಲ್ಲಿ ಮತ್ತೆ ಹುಟ್ಟಿಬರುತ್ತಾರೆ.  ಮನುಷ್ಯರಾಗಿದ್ದಾಗಲೂ ‘ತಾನೇ ಈಶ್ವರನು,

ಈ ಜಗತ್ತು ಮಿಥ್ಯಾ’ ಎನ್ನುವ ಬುದ್ಧಿಯಿಂದ;

ನಡೆದುಕೊಂಡ ಅವರೆಲ್ಲರೂ ಅನ್ಧಂತಮಸ್ಸು ಹೊಂದುತ್ತಾರೆ (ಹೊಂದಿದರು) ಸಿದ್ಧಿಯಿಂದ.

 

ದುಃಖೇSಪಿ ತೇಷಾಮಿಹ ತಾರತಮ್ಯಂ ಕಲೇಃ ಪರಂ ದುಃಖಮಿಹಾಖಿಲಾಚ್ಚ ।

ಯಥಾ ವಿರಿಞ್ಚಸ್ಯ ಸುಖಂ ಪರಂ ಸ್ಯಾನ್ಮುಕ್ತೌ ಹರಿದ್ವೇಷಕೃತೋ ವಿಶೇಷಃ ॥ ೩೨.೧೨೯ ॥

 

ಅನ್ಧಂತಮಸ್ಸಿನಲ್ಲಿ ಕೂಡಾ ದುಃಖದಲ್ಲಿ ದೈತ್ಯರಿಗೆ ತಾರತಮ್ಯವಿದೆ.

ಕಲಿಗೆ ಎಲ್ಲಾ ದೈತ್ಯರಿಗಿಂತ ಅಧಿಕವಾದ ದುಃಖವು ಕಾದಿರುತ್ತದೆ.

ಯಾವರೀತಿ ಬ್ರಹ್ಮನಿಗೆ ಮುಕ್ತಿಯಲ್ಲಿ ಉತ್ಕೃಷ್ಟವಾದ ಸುಖವಿದೆ,

ಅದೇ ರೀತಿ ಇಲ್ಲಿ ಕಲಿಗೆ ದುಃಖ ಹೆಚ್ಚು ಅನುಭವಿಸಬೇಕಾದ ಕ್ರಮವಿದೆ.

ಯಾರ್ಯಾರಿಗೆ ಎಷ್ಟು ಹರಿದ್ವೇಷವಿದೆಯೋ ಅಷ್ಟೂ ದುಃಖವಾಗುತ್ತದೆ.

 

ಕೇಚಿತ್ ಪಿಶಾಚಾಸುರರಾಕ್ಷಸತ್ವಮವಾಪ್ಯ ವಿಷ್ಣೋರಪಿ ತತ್ಪರಾಣಾಮ್ ।

ದ್ವೇಷಾತ್ ತಮೋSನ್ಧಂ ತ್ವರಯಾ ಸಮಾಪ್ನುಯುರ್ದ್ದೇವಾಃ ಸ್ವಕಾಲೇ ನಿಜಯೋಗ್ಯಮುಕ್ತಿಮ್॥೩೨.೧೩೦॥

 

ಕೆಲವರು ಪಿಶಾಚ, ಅಸುರ, ರಾಕ್ಷಸರಾಗಿ, ವಿಷ್ಟುವಿಗೂ, ಅವನ ಭಕ್ತರ ದ್ವೇಷದಿಂದ ಶೀಘ್ರದಲ್ಲಿ ಅನ್ಧಂತಮಸ್ಸು ಹೊಂದಿದರು.

ದೇವತೆಗಳು ಸ್ವರೂಪಯೋಗ್ಯತಾ ಪೂರ್ತಿಕಾಲದಲ್ಲಿ ತಮಗೆ ಯೋಗ್ಯವಾಗಿರುವ ಮುಕ್ತಿಯನ್ನು ಹೊಂದುವರು.

 

ಚತುಃಸಹಸ್ರೇ ತ್ರಿಶತೋತ್ತರೇ ಗತೇ ಸಂವತ್ಸರಾಣಾಂ ತು ಕಲೌ ಪೃಥಿವ್ಯಾಮ್ ।

ಜಾತಃ ಪುನರ್ವಿಪ್ರತನುಃ ಸ ಭೀಮೋ ದೈತ್ಯೈರ್ನ್ನಿಗೂಢಂ ಹರಿತತ್ವಮಾಹ ॥ ೩೨.೧೩೧ ॥

 

ಕಲಿಯುಗದಲ್ಲಿ ಭೂಮಿಯಲ್ಲಿ ನಾಲ್ಕು ಸಾವಿರದ ಮುನ್ನೂರು ವರ್ಷಗಳು ಕಳೆದಮೇಲೆ,

ಭೀಮ ಮತ್ತೆ ಬ್ರಾಹ್ಮಣ ಶರೀರವ ಹೊಂದಿ, ದೈತ್ಯರಿಂದ ಮುಚ್ಚಲ್ಪಟ್ಟ ಪರಮಾತ್ಮನ ತತ್ವವ ಹೇಳಿದ ಲೀಲೆ.

 

ತದೈವ ಕೃಷ್ಣಾSಪಿ ಭುವಿ ಪ್ರಜಾತಾ ಪ್ರೀತ್ಯೈ ಹರೇರನ್ಧತಮಸ್ಯಪಾತಯತ್ ।

ಮಹಾಸುರಾನ್ ವಿಷ್ಣುಪರಾರ್ಜ್ಜುನಾದ್ಯಾಃ ಕೃತೇ ಪ್ರಜಾತಾ ಹರಿತೋಷಣಾಯ ।

ಪುನಶ್ಚ ತೇ ಸ್ಥಾನಮವಾಪ್ಯ ಸರ್ವೇ ಸ್ವೀಯಂ ಪರಾನ್ತೇ ತು ವಿಮುಕ್ತಿಮಾಪ್ನುಯುಃ ॥ ೩೨.೧೩೨ ॥

 

ಆಗಲೇ ದ್ರೌಪದಿ ಕೂಡಾ ಪರಮಾತ್ಮನ ಪ್ರೀತಿಗಾಗಿ ಭೂಮಿಯಲ್ಲಿ ಹುಟ್ಟಿ,

ಮಹತ್ತಾದ  ಅಸುರರನ್ನು ಅನ್ಧಂತಮಸ್ಸಿನಲ್ಲಿ ಬೀಳಿಸಿದಳು ಅವರ ಮೆಟ್ಟಿ.

ಪರಮಾತ್ಮನಲ್ಲಿಯೇ ಆಸಕ್ತರಾದ ಅರ್ಜುನಾದಿಗಳು ಭಗವಂತನ ಸಂತೋಷಕ್ಕೆ ಭೂಮಿಯಲ್ಲಿ ಅವತಾರ ಮಾಡಿದರು.

ಮತ್ತೆ ಅವರು ತಮ್ಮ ಸ್ಥಾನವನ್ನು ಹೊಂದಿ, ಕಡೆಯಲ್ಲಿ ತಮಗೆ ಯೋಗ್ಯವಾಗಿರುವ ವಿಮುಕ್ತಿಯನ್ನು ಹೊಂದುವರು.

 

ವಾಯುತ್ವಮಾಪ್ತಃ ಸಹನೂಮದಂಶೋ ಬ್ರಾಹ್ಮಂ ಪದಂ ಪ್ರಾಪ್ಯ ವೃಕೋದರಶ್ಚ ।

ವಾಗೀಶ್ವರಿತ್ವಂ ಗತಯೈವ ಕೃಷ್ಣಯಾ ಸಹೈವ ಮುಕ್ತಿಂ ಗಮಿತಾSಖಿಲೋತ್ತಮಾಮ್ ॥ ೩೨.೧೩೩ ॥

 

ಹನುಮಂತನ ಅಂಶದಿಂದ ಸಹಿತನಾದ ವಾಯುಪುತ್ರ ಭೀಮಸೇನ,

ವಾಯುತ್ವವನ್ನು ಹೊಂದಿ, ಮುಂದೆ ಪಡೆದ ಬ್ರಹ್ಮಪದವಿಯ ಸ್ಥಾನ.

ಸರಸ್ವತಿಯ ಸ್ಥಾನಕ್ಕೆ ಬಂದಿರುವ ದ್ರೌಪದಿ, ಜೊತೆಗೇ ಮುಕ್ತಿಯನ್ನು ಹೊಂದುವ ಹಾದಿ.

 

ಭುವಿ ದ್ಯುಲೋಕೇ ಚ ವಿರಿಞ್ಚತಾಯಾಂ ಮುಕ್ತೌ ಚ ತಾಭ್ಯಾಮಧಿಕಂ ಸಮಸ್ತಾತ್ ।

ಸನ್ತೋಷ್ಯತೇ ಪೂರ್ಣ್ಣಗುಣೋ ರಮೇಶಃ ಸದೈವ ನಿತ್ಯೋರ್ಜ್ಜಿತತದ್ರತಿಭ್ಯಾಮ್ ॥ ೩೨.೧೩೪ ॥

 

ಮುಖ್ಯಪ್ರಾಣ-ಭಾರತೀಯರ ಅವತಾರ ರೂಪದಲ್ಲಿಯೂ,

ಇಂದ್ರಾದಿ ಲೋಕದಲ್ಲಿಯೂ, ಬ್ರಹ್ಮದೇವರಾದಾಗ, ಮುಕ್ತಿಯಲ್ಲಿಯೂ

ಉತ್ಕೃಷ್ಟವಾದ ಭಕ್ತಿಯುಳ್ಳ ಅವರಿಂದ, ಪೂರ್ಣಗುಣನಾಗಿರುವ ಆ ಮುಕುಂದ,           

ಅದೇ ನಾರಾಯಣ ಪಡೆವ ಬಹಳ ಆನಂದ.

 

‘ಭೂಷನ್ ನ ಯೋSಧಿ ಬಭ್ರೂಷು ನಮ್ನತೇ’, ‘ಬಳಿತ್ಥಾ ತದ್ ವಪುಷೇ ಧಾಯಿ ದರ್ಶತಮ್’

‘ತಾಂ ಸು ತೇ ಕೀರ್ತ್ತಿಂ ಮಘವನ್ ಮಹಿತ್ವಾ’ ಇತ್ಯಾದಿಸೂಕ್ತಾನಿ ಚ ತತ್ಪ್ರಮಾಣಮ್ ॥ ೩೨.೧೩೫ ॥

 

ಅನ್ಯಾನಿ  ವಾಕ್ಯಾನಿ ಚ ವೈದಿಕಾನಿ ಸಪಞ್ಚರಾತ್ರೋಕ್ತಿಪುರಾಣಕಾನಿ ।

ಪೃಷ್ಟಶ್ಚ ಭೀಷ್ಮೋSತ್ರ ಯುಧಿಷ್ಠಿರೇಣೈತನ್ಮೋಕ್ಷಧರ್ಮ್ಮೇಷ್ವಪಿ ಕಿಞ್ಚಿದಾಹ ॥ ೩೨.೧೩೬ ॥

 

ಹಾಗೇ, ಪಂಚರಾತ್ರದಲ್ಲಿ  ಹೇಳಿರುವ ಅನೇಕ ಉಕ್ತಿಗಳು, ಪುರಾಣ ವಾಕ್ಯಗಳು, ಇವುಗಳಿಂದ ಕೂಡಿದ ವೇದದಲ್ಲಿ ಹೇಳಿದ ಉಳಿದ ಮಾತುಗಳೂ ಇದರ ಪ್ರಮಾಣಗಳು. ಯುಧಿಷ್ಠಿರ ಕೇಳಿದಾಗ ಭೀಷ್ಮರು ಹೇಳಿದ ಮೋಕ್ಷಧರ್ಮಪರ್ವದಲ್ಲಿ ಹೇಳಿದವುಗಳು.

 

ಏವಂ ಪ್ರಯಾತೇಷು ಸಕೇಶವೇಷು ಸ್ವಾನೇವ ಲೋಕಾನ್ ಯದುಪಾಣ್ಡವೇಷು ।

ಪರೀಕ್ಷಿದಾದ್ಯಾಸ್ತು ತದನ್ವಯೋತ್ಥಾ ವ್ಯಾಸಾನುಶಿಷ್ಟಾಃ ಪೃಥಿವೀಮರಕ್ಷನ್ ॥ ೩೨.೧೩೭ ॥

 

ಈರೀತಿಯಾಗಿ ಕೃಷ್ಣನಿಂದ ಕೂಡಿರುವ ಯಾದವರು ಹಾಗೂ ಪಾಂಡವರು ,

ತಮ್ಮ ಲೋಕ ಹೊಂದಲು ಅವರ ವಂಶಜರಾದ , ವ್ಯಾಸರಿಂದ ಶಿಕ್ಷಿತರಾದವರು,

ಪರೀಕ್ಷಿತರಾಜನೇ ಮೊದಲಾದವರು, ಭೂಮಿಯನ್ನು ಪಾಲನೆ ಮಾಡುತ್ತಿದ್ದರು.

 

ತೈಃ ಕ್ಷೇಮಕಾನ್ತೈರಿಹ ಭಾರತಾದಿಶಾಸ್ತ್ರಾಣಿ ಶೃಣ್ವದ್ಭಿರಶೇಷವಿದ್ಭಿಃ ।

ವ್ಯಾಸಪ್ರಭಾವಾಚ್ಚ ಕಲೌ ಚ ಧರ್ಮ್ಮೋ ಜ್ಞಾನಂ ಚ ಸುತ್ರಾತಮಗಾನ್ನ ನಾಶಮ್ ॥ ೩೨.೧೩೮ ॥

 

 

ಆ ಪಾಂಡವರ ವಂಶದಲ್ಲಿ ಬಂದ, ಕ್ಷೇಮಕನೇ ಕಡೆಯಾಗಿ ಇದ್ದ ,

ಆ ರಾಜರು, ಮಹಾಭಾರತ ಮೊದಲಾದ ಶಾಸ್ತ್ರ ಕೇಳುತ್ತಿದ್ದುದರಿಂದ,

ವೇದವ್ಯಾಸರ ಪ್ರಭಾವದಿಂದ, ಕಲಿಯುಗದಲ್ಲೂ ಧರ್ಮದ ನಾದ,

ಚೆನ್ನಾಗಿ ರಕ್ಷಿಸಲ್ಪಟ್ಟಿತ್ತು ಜ್ಞಾನ, ಹೊಂದಲಿಲ್ಲ ಅದು ಸರ್ವನಾಶನ.

 

ಸಂವತ್ಸರಾಣಾಂ ತು ಸಹಸ್ರಕೇ ಗತೇ ಪ್ರಾಪ್ತೇಷು ಚ ದ್ಯಾಮಖಿಲೇಷು ಸತ್ಸು ।

ದಗ್ಧಾಃ ಪುರಾ ಯೇ ತ್ರಿಪುರಂ ಘ್ನತೈವ ರುದ್ರೇಣ ಜಾತಾಃ ಪೃಥಿವೀತಳೇ ತೇ ॥ ೩೨.೧೩೯ ॥

 

ಧರ್ಮರಾಜನಿಂದ ಕ್ಷೇಮಕರಾಜನವರೆಗಿನ ಪಾಂಡವರ ಸಂತತಿ ,

ಸಾವಿರ ವರ್ಷ ದಾಟಿ, ಎಲ್ಲಾ ಸಜ್ಜನರೂ ಹೊಂದಿರಲು ಸ್ವರ್ಗದ ಗತಿ,

ಯಾವ ತ್ರಿಪುರಾಸುರರನ್ನು ಹಿಂದೆ ರುದ್ರದೇವರು,

ಸ್ವರ್ಣ,ಬೆಳ್ಳಿ ,ಕಬ್ಬಿಣ ಪಟ್ಟಣಗಳಲ್ಲಿ ಸುಟ್ಟಿದ್ದರು,

ಆ ಮೂರು ಪಟ್ಟಣದವರು ಭುವಿಯಲ್ಲಿ ಮತ್ತೆ ಹುಟ್ಟಿದರು.

 

ಅದರ್ಶನಂ ಸರ್ವಮುನೀನ್ದ್ರವೃನ್ದೈಃ ಸಹೈವ ಸಜ್ಜ್ಞಾನಮಹಾನಿದಾನೇ ।

ವ್ಯಾಸೇ ಪ್ರಯಾತೇSಪಿ ಸುತತ್ವವಿದ್ಯಾ ತತ್ಸಮ್ಪ್ರದಾಯಾದಪಿ ತೈರವಾಪ್ತಾ ॥ ೩೨.೧೪೦ ॥

 

ನಿರ್ದುಷ್ಟವಾಗಿರುವ ಜ್ಞಾನಕ್ಕೆ ಕಾರಣರಾಗಿರುವ ವೇದವ್ಯಾಸರು ,

ಎಲ್ಲಾ ಮುನಿ ಸಮೂಹಗಳಿಂದ ಕೂಡಿಕೊಂಡು ಕಾಣದಂತಾಗಿದ್ದರೂ,

ವೇದವ್ಯಾಸರ  ಸಂಪ್ರದಾಯದಿಂದ ಶೋಭನವಾದ ತತ್ವವಿದ್ಯೆಯನ್ನು ತ್ರಿಪುರಾಸುರರೂ ಹೊಂದಿದರು.

 

ಉತ್ಸಾದಿತತ್ವಾತ್ತು ದುರಾಗಮಾನಾಂ ತತ್ಸಂಪ್ರದಾಯಸ್ಯ ಚ ನಾಶಿತತ್ವಾತ್ ।

ಪ್ರಸಾರಿತತ್ವಾಚ್ಚ ಸದಾಗಮಾನಾಂ ಪಾಪಾ ಅಪಿ ಜ್ಞಾನಮವಾಪುರೇತತ್ ॥ ೩೨.೧೪೧ ॥

 

ಕೆಟ್ಟ ಶಾಸ್ತ್ರಗಳೆಲ್ಲದರ ನಾಶವಾಗಿತ್ತು, ಕೆಟ್ಟ ಸಂಪ್ರದಾಯಗಳೂ ನಾಶವಾಗಿತ್ತು.         

ಒಳ್ಳೆಯ ಆಗಮಗಳು ಎಲ್ಲೆಡೆ ಪಸರಿಸಿರಿರುವುದರಿಂದ ,

ಪಾಪಿಷ್ಠರೂ ಪಡೆದರು,ಒಳ್ಳೆಯ ತತ್ವಶಾಸ್ತ್ರವಿದ್ಯೆಯ ಗಂಧ.

 

ಶುನಾ ಪುರೋಢಾಶಮಿವಾವಲೀಢಂ ವೇದಶ್ರುತಿಂ ವಾSನ್ತ್ಯಜನೈರವಾಪ್ತಾಮ್ ।

ಅನನ್ತದುಃಖಾಪ್ತಿಸುಯೋಗ್ಯದೈತ್ಯೈರ್ವಿದ್ಯಾಮವಾಪ್ತಾಂ ತು ನ ಸೇಹಿರೇ ಸುರಾಃ ॥ ೩೨.೧೪೨ ॥

 

 

ನಾಯಿಯಿಂದ ನೆಕ್ಕಲ್ಪಟ್ಟ ಹವಿರ್ಭಾಗದಂತೆ, ದುಷ್ಟರಿಂದ ಹೊಂದಲ್ಪಟ್ಟಿರುವ ವೇದದ ಕಂತೆ.

ಈ ಸಂಪ್ರದಾಯವನ್ನು ಹೇಗೆ ಸಜ್ಜನರು ಸಹಿಸುವುದಿಲ್ಲವೋ,

ಹಾಗೇ ಎಣಿಯಿರದ ದುಃಖಕ್ಕೆ ಮಾತ್ರ  ಅವರು ಯೋಗ್ಯವೋ,

ತಾಮಸರಾಗಿರುವ ದೈತ್ಯರಿಂದ ಹೊಂದಲ್ಪಟ್ಟ ಈ ವಿದ್ಯ,

ಇದನ್ನು ಕಂಡು ಸಹಿಸಲಾಗಲಿಲ್ಲ ದೇವತಾ ವೃಂದದಿಂದ.

 

ನಾವಾಗ್ಗತಿಃ ಕ್ವಾಪಿ ಸುವೇದಿನಾಂ ಭವೇತ್ ಪ್ರಾಪ್ಯಂ ಸುಖಂ ನಿತ್ಯಮವಶ್ಯಮೇಭಿಃ ।

ಪ್ರಾಪ್ಯಂ ತಮೋSನ್ಧಂ ತ್ವಸುರೈರ್ನ್ನ ಮುಕ್ತಿಃ ಕದಾಚಿದಾಪ್ಯಾ ತದಚಿನ್ತಯನ್ ಸುರಾಃ ॥ ೩೨.೧೪೩ ॥

 

ತತ್ವಶಾಸ್ತ್ರವನ್ನು ಚೆನ್ನಾಗಿ ಬಲ್ಲವರಿಗೆ ಎಲ್ಲಿಯೂ ಅಧೋಗತಿಯು ಆಗಬಾರದು. ಖಂಡಿತವಾಗಿಯೂ ಒಳ್ಳೆಯ ಶಾಸ್ತ್ರವನ್ನು ಬಲ್ಲವರಿಂದ ಸುಖವು ಹೊಂದಲ್ಪಡಬಹುದು. ಹಾಗೆಯೇ ಅಸುರರಿಂದ ಅನ್ಧಂತಮಸ್ಸು ಹೊಂದಲ್ಪಡಬೇಕಾಗಿದೆ. ಅಪ್ಪಿತಪ್ಪಿಯೂ ಅಸುರರಿಗೆ ಮುಕ್ತಿಯು ದೊರಕದಂತೆ ಆಗಬೇಕಿದೆ.

ಆ ಕಾರಣದಿಂದ ಮಂಥನ, ದೇವತೆಗಳಿಂದ ಚಿಂತನ.

 

ಜ್ಞಾನಪ್ರದಾನಾಯ ಸತಾಂ ತದನ್ಯಜ್ಞಾನಪ್ರಣಾಶಾಯ ಚ ವಿಷ್ಣುನೈತೇ ।

ಕ್ಲ್-ಪ್ತಾಸ್ತತಸ್ತೇ ಸವಿರಿಞ್ಚಶರ್ವಾವಿಜ್ಞಾಪಯಾಮಾಸುರುಪೇತ್ಯ ವಿಷ್ಣುಮ್ ॥ ೩೨.೧೪೪ ॥

 

ಸಜ್ಜನರಿಗೆ ಅರಿವನ್ನು ಈಯಲಿಕ್ಕಾಗಿ, ದುರ್ಜನರ ಜ್ಞಾನ ನಾಶಮಾಡಲಿಕ್ಕಾಗಿ, ಸರ್ವೇಶ ನಾರಾಯಣನಿಂದ ಈ ದೇವತೆಗಳು ನಿಯಮಿತರಾಗಿದ್ದಾರೆ. ಆ ಕಾರಣಕ್ಕೆ ಬ್ರಹ್ಮರುದ್ರಾದಿ ದೇವತೆಗಳು ನಾರಾಯಣನ ಬೇಡಿಕೊಳ್ಳುತ್ತಾರೆ.

 

ಕ್ಷೀರೋದಧೇರುತ್ತರತೀರವಿಷ್ಠಿತೈರಭಿಷ್ಟುತಃ ಸುಷ್ಟುತಿಭಿಃ ಪುರುಷ್ಟುತಃ ।

ಪ್ರದಾಯ ತೇಷಾಮಭಯಂ ರಮಾಪತಿಃ ಕ್ಷಣಾದಭೂಚ್ಚಾರುತಮಾಕೃತಿಃ ಶಿಶುಃ ॥ ೩೨.೧೪೫ ॥

 

ಕ್ಷೀರಸಮುದ್ರದ ಉತ್ತರ ತೀರದಲ್ಲಿ ನಿಂತ ದೇವತೆಗಳಿಂದ,

ನಾರಾಯಣನ ಆರಾಧನೆಯಾಗುತ್ತದೆ ಒಳ್ಳೆಯ ಸ್ತೋತ್ರದಿಂದ.

ಸ್ತೋತ್ರಮಾಡಲ್ಪಟ್ಟ ಲಕ್ಷ್ಮೀಪತಿ ನಾರಾಯಣ ಅವರಿಗೆ ಅಭಯ ಕೊಟ್ಟ

ಕೂಡಲೇ ತಾನು ರಮಣೀಯವಾದ ಆಕೃತಿಯುಳ್ಳ ಮಗುವಾಗಿ ಬಿಟ್ಟ.

 

 

ಯಸ್ತ್ರೈಪುರಾಣಾಂ ಪ್ರಥಮೋSತ್ರ ಜಾತಃ ಶುದ್ಧೋದನೇತ್ಯೇವ ಜಿನೇತಿ ಚೋಕ್ತಃ ।

ಕ್ಷೇತ್ರೇ ಗಯಾಖ್ಯೇSಸ್ಯ ಶಿಶುಂ ಪ್ರಜಾತಂ ಸಮ್ಪ್ರಾಸ್ಯ ದೂರೇSತ್ರ ಬಭೂವ ವಿಷ್ಣುಃ ॥ ೩೨.೧೪೬ ॥

 

ಯಾರು ತ್ರಿಪುರಾಸುರರಲ್ಲಿ ಮೊದಲಿಗನೋ, ಅವನು ಈ ಭೂಮಿಯಲ್ಲಿ ಶುದ್ಧೋದನ ಎಂಬ ಹೆಸರಿನಿಂದ ಹುಟ್ಟಿ ‘ಜಿನ’ ಎಂದೂ ಕರೆಯಲ್ಪಟ್ಟನು.

ಗಯಾ ಎಂಬ ಕ್ಷೇತ್ರದಲ್ಲಿ, ಅವನಿಗೆ ಹುಟ್ಟಿದ ಮಗುವನ್ನು ದೂರಕ್ಕೆಸೆದು, ಆ ಮಗುವಿನ ಜಾಗದಲ್ಲಿ ನಾರಾಯಣನು ಮಗುವಿನ ರೂಪದಲ್ಲಿ ನಿಂತನು.

 

ಅಜಾನಮಾನಾಃ ಸ್ವಶಿಶುಂ ಗತಂ ತಂ ಶಿಶುಂ ಹರಿಂ ವೀಕ್ಷ್ಯ ನಿಜಂ ಸ್ಮ ಮೇನಿರೇ ।

ತೇಷಾಂ ತದಾ ವೈದಿಕಕರ್ಮ್ಮ ವೀಕ್ಷ್ಯ ಸಮ್ಪ್ರಾಹಸತ್ ತದ್ವಪುಷೈವ ಕೇಶವಃ  ॥ ೩೨.೧೪೭ ॥

 

ತಮ್ಮ ಮಗು ಎಲ್ಲಿಯೋ ಎಸೆಯಲ್ಪಟ್ಟಿದೆ ಎಂದು ತಿಳಿಯದಾಗಿದ್ದ ಅವರು,

ಮಗು ರೂಪದಲ್ಲಿದ್ದ ಪರಮಾತ್ಮನ ಕಂಡು, ಅದನ್ನೇ ತಮ್ಮ ಮಗುವೆಂದುಕೊಂಡರು.

ಆಗ ಆ ಮಗುವಿನ ಆಕೃತಿಯಲ್ಲಿದ್ದ ನಾರಾಯಣನು,

ಅವರ ವೈದಿಕ ಕರ್ಮವನ್ನು ನೋಡಿ, ಗಟ್ಟಿಯಾಗಿ ನಕ್ಕನು. 

 

ತಂ ಜಾತಮಾತ್ರಂ ಪ್ರಹಸನ್ತಮೀಕ್ಷ್ಯಸುವಿಸ್ಮಿತೈಃ ಪೃಷ್ಟ ಉವಾಚ ವಿಷ್ಣುಃ ।

ಬುದ್ಧೋSಹಮಿತ್ಯೇವ ಸುನಿತ್ಯಬೋಧಾಜ್ಜಗಾದ ಚೈಷಾಮಥ ಬುದ್ಧದರ್ಶನಮ್ ॥ ೩೨.೧೪೮ ॥

 

ಹುಟ್ಟಿದ ಕೂಡಲೇ ನಗುತ್ತಿರುವ ಆ ಮಗುವನ್ನು ಕಂಡು,

ಅವರಿಂದ ಕೇಳಲ್ಪಟ್ಟವನಾದ ವಿಷ್ಣುವು, ಅಚ್ಚರಿಗೊಂಡು,

ನಿತ್ಯವಾಗಿರುವ ಜ್ಞಾನವಿರುವುದರಿಂದ ನಾನು ‘ಬುದ್ಧ’ ಎಂದ.

ಅವರಿಗೆ ಇದು ‘ಬುದ್ಧನ ಶಾಸ್ತ್ರಾ’ ಎಂದೂ ಹೇಳಿದ.

 

ತಥಾSಪ್ಯವಿಶ್ವಾಸಮವೇಕ್ಷ್ಯ ತೇಷಾಂ ಸಸ್ಮಾರ ದೇವಾನಖಿಲಾನ್ ಜನಾರ್ದ್ದನಃ ।

ವಿಜ್ಞಾಯ ತೇ ತಸ್ಯ ಮನೋಗತಂ ನಿಜಾನ್  ಪ್ರಚಿಕ್ಷಿಪುರ್ಹೇತಿಗಣಾನಮುಷ್ಮಿನ್ ॥ ೩೨.೧೪೯ ॥

 

ಹೀಗೆ ಸ್ವಯಂ ದೇವರೇ ‘ನಾನು ಬುದ್ಧ, ಈ ಎಲ್ಲಾ ವೈದಿಕ ಕರ್ಮಗಳನ್ನು ಮಾಡಬೇಡಿ’ ಎಂದು ಹೇಳಿದಾಗ,

ಅವರಿಗೆ ವಿಶ್ವಾಸವೇ ಬರಲಿಲ್ಲ,ಅವರ ಅವಿಶ್ವಾಸವನ್ನು ಕಂಡು, ಶ್ರೀಹರಿ ಎಲ್ಲಾ ದೇವತೆಗಳನ್ನು ಸ್ಮರಿಸಿದಾಗ, ಆಗೆಲ್ಲಾ ದೇವತೆಗಳು ನಾರಾಯಣನ ಅಭಿಪ್ರಾಯ ತಿಳಿದರು,

ಈ ಬುದ್ಧನ ಮೇಲೆ ತಮ್ಮ ಆಯುಧಗಳನ್ನು ಎಸೆದರು.

 

ಸ ಜಾತಮಾತ್ರಃ ಶಿವಪೂರ್ವಕಾಣಾಂ ಶೂಲಾದಿಹೇತೀರಖಿಲಾ ನಿಗೀರ್ಯ್ಯ ।

ದೈತ್ಯಾತಿಮೋಹಾಯ ನಿಜಂ ಚ ಚಕ್ರಂ ಸ್ವಮುಕ್ತಮಾಶ್ವೇವ ವಶೀ ಸಮಗ್ರಹೀತ್ ॥ ೩೨.೧೫೦ ॥

 

ಈಗಷ್ಟೇ ಹುಟ್ಟಿರುವ ಮಗುವಿನ(ಬುದ್ಧನ)  ರೂಪದಲ್ಲಿದ್ದ ಆ ನಾರಾಯಣನು,

ಶಿವ ಮೊದಲಾದ ಎಲ್ಲಾ ದೇವತೆಗಳ,ಶೂಲ ಆಯುಧಗಳನ್ನೆಲ್ಲ ನುಂಗಿದನು.

ದೈತ್ಯರನ್ನು ಮೋಹಗೊಳಿಸುವ ಕಾರಣ, ವಿಷ್ಣುರೂಪದಿ ತಾನೇ ಬಿಟ್ಟ ತನ್ನ ಸುದರ್ಶನ,

ಚಕ್ರವ ಶೀಘ್ರದಿ ಹಿಡಕೊಂಡ ನಾರಾಯಣ.

 

ತದಾಸನತ್ವೇನ ವಿಧಾಯ ತಸ್ಮಿನ್ ಸಮಾಸ್ಥಿತಂ ದೇವಗಣಾಃ ಪ್ರಣಮ್ಯ ।

ಜಗ್ಮುಃ ಸ್ವಧಾಮಾನಿ ವಚಾಂಸಿ ಚಾಸ್ಯ ಸ್ವೀಚಕ್ರುರಾಶ್ವೇವ ಜಿನಾದಿದೈತ್ಯಾಃ ॥ ೩೨.೧೫೧ ॥

 

ಸುದರ್ಶನ ಚಕ್ರವನ್ನೇ ತನ್ನ ಆಸನವಾಗಿ ಮಾಡಿಕೊಂಡ ,

ಮಗು ರೂಪದ ಶ್ರೀಹರಿಗೆ ದೇವತೆಗಳೆಲ್ಲರ ದೀರ್ಘದಂಡ ,

ನಮಸ್ಕರಿಸಿ, ತಮ್ಮ ಧಾಮಕ್ಕೆ ತೆರಳಿದರು.

ಆ ಬುದ್ಧನ ಮಾತುಗಳನ್ನು ಜಿನ ಮುಂತಾದ ದೈತ್ಯರು ಕೂಡಲೇ ಸ್ವೀಕರಿಸಿದರು.

 

ತೇ ಜ್ಞಾನಧರ್ಮ್ಮಾವಪಹಾಯ ಪಾಪಾ ವಿಮೋಹಿತಾ ದೇವವರೇಣ ಸರ್ವೇ ।

ಜಗ್ಮುಸ್ತಮೋSನ್ಧಂ ಕ್ಷಣಿಕಂ ಸಮಸ್ತಂ ಜ್ಞಾನಂ ನಸಚ್ಛೇತಿ ದೃಢಂ ಸ್ಮರನ್ತಃ ॥ ೩೨.೧೫೨ ॥

 

ಪಾಪಿಷ್ಠರಾದ ಆ ಎಲ್ಲಾ ದೈತ್ಯರು, ನಾರಾಯಣನಿಂದ ದಾರಿ ತಪ್ಪಿದರು.

ಜ್ಞಾನ ಹಾಗೂ ಧರ್ಮವನ್ನು ಬಿಟ್ಟು, ಈ ಪ್ರಪಂಚ ಕ್ಷಣಿಕವೆಂದೂ,

ಈ ಪ್ರಪಂಚದಲ್ಲಿ ಕೇವಲ  ಜ್ಞಾನ ಮಾತ್ರ ಇರುವುದು  ಎಂದೂ,

ಈ ಪ್ರಪಂಚ ಅಸತ್ಯ, ಶೂನ್ಯ, ಎಂದೂ ಗಟ್ಟಿಯಾಗಿ ಸ್ಮರಣೆ ಮಾಡುತ್ತಲೇ,

ಅನ್ಧಂತಮಸ್ಸನ್ನು ಹೊಂದಿದ ಲೀಲೆ.

 

ನಾರಾಯಣೋSಪ್ಯಾಪ್ಯ ಸುರೇನ್ದ್ರವೃನ್ದಂ ವೃತ್ತಂ ಚ ತೇಷಾಮಖಿಲಂ ನಿಗದ್ಯ ।

ಪೃಷ್ಟಶ್ಚ ತೈರಾಹ ನಿಜಂ ಹೃದಿಸ್ಥಂ ಬೌದ್ಧಾಗಮಾರ್ತ್ಥಂ ಸೃತಿಬನ್ಧಮೋಚನಮ್ ॥ ೩೨.೧೫೩ ॥

 

ಬುದ್ಧರೂಪಿಯಾದ ನಾರಾಯಣ ದೇವ ,  ಕೂಡಾ ಹೊಂದಿದ ದೇವತಾ ಸಮೂಹವ.

ಆ ದೇವತೆಗಳಿಗೆ ಎಲ್ಲಾ ವೃತ್ತಾಂತವನ್ನು ಹೇಳಿದ,

ಬುದ್ಧಶಾಸ್ತ್ರದ ಕುರಿತು ಕೇಳಲ್ಪಟ್ಟವನಾದ ಅವರಿಂದ.

ತನ್ನ ಹೃದಯದಲ್ಲಿ ಇರುವ, ತಾನೇ ರಚನೆ ಮಾಡಿದ,

ಸಂಸಾರ ಬಂಧನ ಬಿಡುಗಡೆ ಮಾಡುವ ಬೌದ್ಧಾಗಮನದ ,

ನಿಜಾರ್ಥವನ್ನು  ಅವರಿಗೆ ಬಿಡಿಸಿ ವಿವರವಾಗಿ ಹೇಳಿದ.

 

ಕ್ಷಣಾದಯಂ ಕ್ಷಣಿಕಾಸ್ತದ್ವಿಶೇಷಾ ಯತಃ ಪ್ರಯಾನ್ತ್ಯೇವ ನಿಸರ್ಗ್ಗತೋSಖಿಲಾಃ ।

ತತಃ ಸ್ಥಿರತ್ವೇSಪಿ ವಿಶೇಷಸಂಶ್ರಯಾದುಕ್ತಂ ಕ್ಷಣಸ್ಥಾಯಿ ಮಯಾ ಸಮಸ್ತಮ್ ॥ ೩೨.೧೫೪ ॥

 

ತದ್ವಾನ್ ವಿಶೇಷಶ್ಚ ಯತೋ ನ ಭಿನ್ನೌ ಸದಾ ಸ್ವನಿರ್ವಾಹಕಶಕ್ತಿಯುಕ್ತೌ ।

ಅತಃ ಕ್ಷಣಸ್ಥಾಯಿ ಸಮಸ್ತಮೇತತ್ ಸ್ಥಿರಾತ್ಮಕಂ ಚೇತಿ ಹಿ ನಾಸ್ತಿ ಭೇದಃ  ॥ ೩೨.೧೫೫ ॥

 

ಈ ಇಡೀ ಪ್ರಪಂಚವಿದೆ ' ಕ್ಷಣ ' ದಿಂದ, ಕಾಲ ಕೂಡಾ ‘ಕ್ಷಣ’ ಎಂದೇ ಇರುವುದರಿಂದ,

ಅದರ ವಿಶೇಷಗಳೆಲ್ಲವೂ ಕೂಡಾ ಕ್ಷಣಿಕಗಳು, ಯಾಕಾಗಿ ಸ್ವಾಭಾವಿಕವಿವೆ ಎಲ್ಲಾ ಕ್ಷಣಗಳು.

ಆ ಕಾರಣದಿಂದ ಕಾಲ ಒಂದೇ ಆದರೂ ‘ವಿಶೇಷ’ ಎಂದಿರುವುದರಿಂದ ,

ಅದು ನನ್ನಿಂದ ‘ಎಲ್ಲವೂ ಕೂಡಾ ಕ್ಷಣಿಕವಾದದ್ದು’ ಎಂದ್ಹೇಳಿದೆ ಎಂದ.

 

‘ಕ್ಷಣ’ ಈ ಪ್ರಪಂಚವನ್ನು ಒಳಗೊಂಡಿದೆ. ಅನಾದಿ ಕಾಲವೂ ಕೂಡಾ ಕ್ಷಣವೇ ಆಗಿದೆ. ‘ವಿಶೇಷ’ಎನ್ನುವ ಸಾಮರ್ಥ್ಯವಿರುವುದರಿಂದ,

ವಸ್ತುವಿನ ಗುಣ ವಸ್ತುಗಳದು ಒಂದೇ ಬಂಧ. ಆದರೂ ಭಿನ್ನವಾಗಿ ಹೇಳುವ ಸಾಮರ್ಥ್ಯ, ನಮಗೆಲ್ಲರಿಗೂ ಒದಗಿ ಬಂದಿರುವ ಅರ್ಥ.

 

[ತಾತ್ಪರ್ಯ: ರೂಪ ಬೇರೆ ಅಲ್ಲ, ಮಡಿಕೆ ಬೇರೆ ಅಲ್ಲ. ಮಡಿಕೆಯೇ ರೂಪ, ರೂಪವೇ ಮಡಿಕೆ. ಬಣ್ಣ ಮತ್ತು ಬಟ್ಟೆ ಎರಡೂ ಒಂದೇ. ಬಿಳಿ ಬಣ್ಣವೇ ಬಟ್ಟೆ, ಬಟ್ಟೆಯೇ ಬಿಳಿ ಬಣ್ಣ. ಇವೆರಡರ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಆದರೂ ಕೂಡಾ ‘ಬಿಳಿಯ ಬಣ್ಣದ ಬಟ್ಟೆ’ ಎಂದು ನಾವು ಹೇಳುತ್ತೇವೆ. ಏಕೆಂದರೆ ‘ವಿಶೇಷ’ ಎನ್ನುವುದನ್ನು ನಾವು ಒಪ್ಪಬೇಕಾಗುತ್ತದೆ. ವಸ್ತುತಃ ಭೇದವಿಲ್ಲ, ಆದರೆ ಭೇದದ ವ್ಯವಹಾರವನ್ನು ತಂದುಕೊಡುತ್ತದೆ. ಅದನ್ನೇ ‘ವಿಶೇಷ’ ಎಂದು ಕರೆಯುತ್ತಾರೆ. ಇದೇ ರೀತಿ ಕ್ಷಣವೂ ಕೂಡಾ. ಕಲ್ಪವೂ ಒಂದು ಕ್ಷಣವೇ. ಒಂದು ಕ್ಷಣಕ್ಕೂ ಒಂದು ಕಲ್ಪಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಆದರೆ ನಾವು ವ್ಯವಹಾರಕ್ಕಾಗಿ ಈ ಕ್ಷಣ ಕಳೆದುಹೋಯಿತು ಎನ್ನುತ್ತೇವೆ. ಅಂದರೆ ಕ್ರಿಯೆಯನ್ನು ಮಾಧ್ಯಮದಲ್ಲಿಟ್ಟುಕೊಂಡು ಕಾಲವನ್ನು ಅಳೆಯುತ್ತೇವೆ. ಕಾಲಕ್ಕೆ ವಸ್ತುತಃ ಅಳತೆ ಇಲ್ಲ. ಅದು ಯಾವಾಗಲೂ ಇರುತ್ತದೆ. ಸೂರ್ಯನ ಹುಟ್ಟನ್ನು ನೋಡಿಕೊಂಡು ನಾವು ‘ಬೆಳಗಾಯಿತು’ ಎನ್ನುತ್ತೇವೆ. ಸೂರ್ಯ ಕಾಣದಾದಾಗ ‘ರಾತ್ರಿಯಾಯಿತು’ ಎನ್ನುತ್ತೇವೆ.  ಇರುಳು  ಮತ್ತು ಬೆಳಗುಗಳನ್ನು ನಾವು ಸೂರ್ಯನ ಕ್ರಿಯೆಯಿಂದ ಕಾಣುತ್ತೇವೆ. ಇದು ನಮ್ಮ ಮಾನದಂಡ. ಅದನ್ನು ‘ವಿಶೇಷ’ ಎಂದು ಕರೆಯುತ್ತೇವೆ. ವಸ್ತುತಃ ಮಹಾಕಾಲಕ್ಕೂ ಕ್ಷಣಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಜಗತ್ತಿನಲ್ಲಿ ಬಹಳ ಕಾಲ ಬದುಕಿದವನೂ ಕೂಡಾ ಕ್ಷಣಕಾಲ ಬದುಕಿದವನೇ. ದೇವರ ಪ್ರಕಾರ ಕಾಲ ಎಂದರೆ ಒಂದು ಕ್ಷಣವೂ ಹೌದು, ಒಂದು ಕಲ್ಪವೂ ಹೌದು. ಅವನಿಗೆ ಯಾವ ವ್ಯತ್ಯಾಸವೂ ಇರುವುದಿಲ್ಲ. ಈ ಕಾರಣದಿಂದ ಇದೆಲ್ಲವನ್ನೂ ಬುದ್ಧ ಕ್ಷಣಿಕ ಎಂದು ಹೇಳಿದ. ಇದನ್ನು ಆ ದೈತ್ಯರು ‘ಕ್ಷಣದಲ್ಲಿ ಮಾತ್ರ ಇರುತ್ತದೆ ಮತ್ತೆ ನಾಶವಾಗುತ್ತದೆ’ ಎಂಬ ಅರ್ಥದಲ್ಲಿ, ಅಂದರೆ ‘ಮಿಥ್ಯಾ’ ಎಂದುಕೊಂಡರು. ಈ ‘ವಿಶೇಷ’ ಎನ್ನುವುದು ದೊಡ್ಡ ಪರಿಕಲ್ಪನೆ. ಗುಣ ಹಾಗೂ ಗುಣಿ, ಅವುಗಳ ನಡುವೆ ಯಾವ ಸಂಬಂಧ ಇದೇ ಎಂದು ತಿಳಿಯುವುದೇ ಬಹಳ ಕಷ್ಟ. ಅದನ್ನು ಬೇರೆಯವರು ಅರ್ಥೈಸಲು ವಿಫಲರಾಗಿದ್ದಾರೆ, ಆದರೆ ಆಚಾರ್ಯ ಮಧ್ವರು ವಸ್ತು ಹಾಗೂ ಗುಣ ಅವುಗಳ ನಡುವೆ ಸರಿಯಾದ ಸಂಬಂಧ ಏನು ಎನ್ನುವುದನ್ನು ವಿವೇಚನೆ ಮಾಡಿ ಹೇಳಿದ್ದಾರೆ.]

 

ಜ್ಞೋSಹಂ ಸದೈಕಃ ಪರಮೋ ಮಯೈತತ್ ಸದಾSನನೀಯಂ ಹಿ ಯತೋSಸ್ವತನ್ತ್ರಮ್ ।

ಜ್ಞಾನಾತ್ಮಕಂ ವಿಶ್ವಮತೋ ಮಯೋಕ್ತಂ ಜಡಸ್ವರೂಪಂ ಚ ಕಿಮು ಸ್ಮ ಚೇತನಮ್ ॥ ೩೨.೧೫೬ ॥

 

‘ಜ್ಞಾ’ ಎಂದರೆ ಎಲ್ಲವನ್ನೂ ಬಲ್ಲ, ಜ್ಞಾನ ಸ್ವರೂಪನಾದ ನಾನು ಮಲ್ಲ.

ಇಂತಹ ‘ಜ್ಞಾ’ ಎನಿಸಿಕೊಂಡಿರುವ ನನ್ನಿಂದ, ಯಾವಾಗಲೂ  ಅಸ್ವತಂತ್ರ ಪ್ರಪಂಚಕ್ಕೆ ಚಲನೆಯ ಚೆಂದ.

ಅಂದರೆ  ‘ಜ್ಞಾ’ ಆದ ನನ್ನಿಂದ ಅದು ಕ್ರಿಯೆಯನ್ನು ಹೊಂದುತ್ತದೆ.

ಇದೇ ನನ್ನಿಂದ ಜ್ಞಾನಂ-ಜ್ಞಾನಂ ಎಂದು ಹೇಳಲ್ಪಟ್ಟಿದೆ .

(ಇಡೀ ಪ್ರಪಂಚಕ್ಕೆ ಜ್ಞಾನ ಮಾತ್ರ ಎಂದು ಹೇಳಿದೆ)

ಅದನ್ನು ಅವರು ತಪ್ಪಾಗಿ ದೃಷ್ಟಿ-ಸೃಷ್ಟಿ, ಭೌತಿಕ ವಸ್ತು ಇಲ್ಲಾ ಎಂದು ಗ್ರಹಿಸಿದರು.

ಜಡ ಬೇರೆ, ಚೇತನ ಬೇರೆ ;ಆದರೆ ನಾನು ಹೇಳಿದ ‘ಜ್ಞಾನ’ ಎನ್ನುವುದನ್ನು ಅವರು ,

ಪ್ರಪಂಚ ಎಂದರೆ ಕೇವಲ ‘ಜ್ಞಾನ’, ಅದನ್ನು ಬಿಟ್ಟು ಇನ್ನೇನೂ ಇಲ್ಲಾ, ಎಂಬರ್ಥದಲ್ಲಿ ತಪ್ಪಾಗಿ ಗ್ರಹಿಸಿದರು.

 

ಶಂಶೀಲಕೋSಹಂ ಯತ ಏವ ಚೋಚ್ಚಃ ಶೂನಾಮಕಸ್ತದ್ಧಿ ಮಯಾ ನಿಧೇಯಮ್ ।

ಶೂನ್ಯಾಭಿದಂ ದೋಷವಿರುದ್ಧರೂಪೋ ದೋಷೋಜ್ಝಿತೋSನ್ಯಸ್ತ್ವಖಿಲಾದನಾಮಾ ॥ ೩೨.೧೫೭ ॥

 

ಏನೈವ ಸಾದ್ಯಂ ತ್ವಸದೇವ ನಾಮತಸ್ತ್ವಭಾವ ಏನೈವ ಭವೇದ್ ಯತಸ್ತತ್ ।

ಇತ್ಯಾದಿ ಬೋದ್ಧವ್ಯಮಿದಂ ಸಮಸ್ತಂ ಮಯೋದಿತಂ ಕ್ವಾಪಿ ನ ಹೇಯಮಸ್ತಿ ॥ ೩೨.೧೫೮ ॥

 

‘ಶಂ’ ಎಂದರೆ ಆನಂದಾತ್ಮಕ, ‘ಉ’ ಎಂದರೆ ಉಚ್ಚ ಎಂದರ್ಥ.

ಹಾಗಾಗಿ ನನ್ನ ಹೆಸರು ‘ಶೂ’, ಇಂತಹ ನನ್ನಿಂದ ನಿಯಂತ್ರಣದ ಆಟ.

ಅದರಿಂದಾಗಿ ‘ಶೂನ್ಯ’ ಎನ್ನುವುದು ನನ್ನ ಹೆಸರಾಗಿದೆ .

(ಶೂ ಅನ್ನುವುದು ನನ್ನ ಹೆಸರು, ನನ್ನಿಂದ ಈ ಪ್ರಪಂಚ ನಿಯಂತ್ರಿತವಾಗಿದೆ) .

ಅದರಿಂದಾಗಿ ಶೂನ್ಯಂ-ಶೂನ್ಯಂ ಎಂದು ಹೇಳಿರುವುದು.

ಅದನ್ನು ಅವರು ಆಕಾಶ ಎನ್ನುವ ಅರ್ಥದಲ್ಲಿ ಗ್ರಹಿಸಿರುವುದು.

 

ಅದರಿಂದ ಇಂತಹ ನಿರ್ದುಷ್ಟನಾಗಿರುವ ನಾರಾಯಣನಿಂದ ಕೂಡಿದೆಯಾದ್ದರಿಂದಾಗಿ ‘ಅಸತ್’.

(‘ಅ’ ಎಂದರೆ ನಾರಾಯಣ, ಅವನಿಂದಾಗಿ ಈ ಪ್ರಪಂಚ ಅಸ್ತಿತ್ವವನ್ನು ಪಡೆದಿದೆ.ಅದಕ್ಕೆ ಇದು ಅಸತ್).

ಇದೇ ರೀತಿಯಾಗಿ ಇದನ್ನು ತಿಳಿಯಬೇಕಾಗಿದೆ.

ನಾನು ಹೇಳಿರುವುದರಲ್ಲಿ ಬಿಡಬೇಕಾದದ್ದು ಇಲ್ಲವಾಗಿದೆ.

ಆದರೆ ಇದೆಲ್ಲವನ್ನೂ ಅವರು ತಪ್ಪಾಗಿ ತಿಳಿದಿದ್ದಾರೆ.

(ಹೀಗೆ ಬುದ್ಧ  ದೇವತೆಗಳಿಗೆ ತಿಳಿಸಿದ ತನ್ನ ಶಾಸ್ತ್ರಮೂಲಾರ್ಥ ಧಾರೆ).

 

ಇತ್ಯಾದಿ ದೇವಾನ್ ಪ್ರತಿಬೋಧಯಂಶ್ಚ ದೇವೈಃ ಸಹೋವಾಸ ಸ ಬುದ್ಧದೇವಃ ।

ಗತ್ವಾ ಸ್ವಧಾಮಾಪ್ಯಪರೇಣ ರೂಪೇಣಾSಸ್ತೇ ಪೃಥಕ್ ಚೈಕತನುರ್ಯ್ಯಥೇಷ್ಟಮ್ ॥ ೩೨.೧೫೯ ॥

 

ಇವೇ ಮೊದಲಾಗಿ ದೇವತೆಗಳಿಗೆ ಬೋಧನೆ ಮಾಡುತ್ತಾ,

ದೇವತೆಗಳ ಜೊತೆಗೆ ಬುದ್ಧದೇವನು ತಾನು ವಾಸಮಾಡುತ್ತಾ,

ಹಾಗೂ ಬೇರೆ ರೂಪದಿಂದ ಸ್ವಧಾಮಕ್ಕೆ ತೆರಳಿದನು.

ಹೀಗೆ ಭಗವಂತ ಬುದ್ಧ, ಮೂಲರೂಪದಿ ಇರುವನು.

ಏಕೀಭೂತನಾಗಿ ತನ್ನ ಇಚ್ಛಾನುಸಾರ ಇರುವವನು.

No comments:

Post a Comment

ಗೋ-ಕುಲ Go-Kula