Saturday 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 30: 101-140

 

ಮಣಲೂರಂ ಕ್ರಮಾತ್ ಪ್ರಾಪ್ತಸ್ತತ್ರೈನಂ ಬಭ್ರುವಾಹನಃ ।

ಅಭ್ಯಯಾದರ್ಘ್ಯಪಾದ್ಯಾದ್ಯೈಸ್ತಮಾಹ ವಿಜಯಃ ಸುತಮ್ ॥ ೩೦.೧೦೧ ॥

 

ದಿಗ್ವಿಜಯದ ಕ್ರಮದಲ್ಲಿ ಸಂಚರಿಸುತ್ತಾ ಮಣಲೂರ ಪ್ರದೇಶಕ್ಕೆ ಬಂದ ಅರ್ಜುನ. ಅಲ್ಲಿ ಅವನ ಎದಿರುಗೊಂಡ ಅರ್ಜುನನಿಂದ ಚಿತ್ರಾಂಗದೆಯಲ್ಲಿ ಹುಟ್ಟಿದ ಬಭ್ರುವಾಹನ. ಅವನನ್ನು ಅರ್ಘ್ಯ, ಪಾದ್ಯಾದಿಗಳಿಂದ, ಪೂಜಿಸಲೆಂದು ಬಭ್ರುವಾಹನ ಬಂದ.ಆಗ ಅರ್ಜುನ ಅವನಿಗೆ ಹೀಗೆ ಹೇಳಿದ-

 

ಯೋದ್ಧುಕಾಮೋSರ್ಘ್ಯಮಾದಾಯ ತ್ವಯಾSದ್ಯಾಭಿಗತೋ ಹ್ಯಹಮ್ ।

ನ ಪ್ರೀಯೇ ಪೌರುಷಂ ಧಿಕ್ ತೇ ಯನ್ಮೇದ್ಧ್ಯಾಶ್ವೋ ನ ವಾರಿತಃ ॥ ೩೦.೧೦೨ ॥

 

ನಾನು ಯುದ್ಧಮಾಡಲು ಬಯಸಿ ಬಂದಿರುವೆ,

ನೀನು ನನ್ನನ್ನು ಅರ್ಘ್ಯದಿಂದ ಸ್ವಾಗತಿಸುತ್ತಿರುವೆ.

ನಿನ್ನ ಬಗೆಗೆ ನನಗೆ ಅಸಂತೋಷವೇ ಇದೆ.

ನೀನ್ಯಾಕೆ ಅಶ್ವಮೇಧ ಕುದುರೆ ತಡೆಯದಾದೆ.

ಆ ಕಾರಣಕ್ಕೆ ನಿನ್ನ ಪೌರುಷಕ್ಕೆ ಧಿಕ್ಕಾರವಿದೆ.

 

ತದಾSಪಿ ಪಿತೃಭಕ್ತ್ಯೈನಮಯುದ್ಧ್ಯನ್ತಮುಲೂಪಿಕಾ ।

ಪ್ರಾಹ ಯುದ್ಧ್ಯಸ್ವ ಯತ್ ಪ್ರೀತ್ಯೈ ಗುರೋಃ ಕಾರ್ಯ್ಯಮಸಂಶಯಮ್ ॥ ೩೦.೧೦೩ ॥

 

ಆಗಲೂ, ತಂದೆಯ ಮೇಲಿನ ಭಕ್ತಿಯಿಂದ ಯುದ್ಧ ಮಾಡದಿದ್ದ ಬಭ್ರುವಾಹನನಿಗೆ,

ಅವನ ತಾಯಿ ನಾಗಕನ್ನಿಕೆ ಉಲೂಪಿ ತಿಳಿಸಿ ಹೇಳುತ್ತಾಳೆ ನಡೆಯಬೇಕಾದ ಬಗೆ.

‘ನಿನ್ನ ಅಪ್ಪಗೆ ಆಗಬೇಕಿದ್ದರೆ ಸಂತೋಷ , ನೀನು ಯುದ್ಧ ಮಾಡುವುದೇ ಸರಿ ಕೆಲಸ’.

 

ಪ್ರೀಣನಾಯೈವ ಯುದ್ಧ್ಯಸ್ವ ಪಿತ್ರೇ ಸನ್ದರ್ಶಯನ್ ಬಲಮ್ ।

ಇತ್ಯುಕ್ತೋ ಯುಯುಧೇ ಪಿತ್ರಾ ಬಲಂ ಸರ್ವಂ ಪ್ರದರ್ಶಯನ್ ॥ ೩೦.೧೦೪ ॥

 

‘ನಿನ್ನ ತಂದೆಯನ್ನು ಪ್ರೀತಿಗೊಳಿಸಲೆಂದೇ, ನಿನ್ನ ಬಲ ತೋರಿಸಬೇಕು ಯುದ್ಧದಿಂದೇ’.

ಹೀಗೆ ಹೇಳಲ್ಪಟ್ಟ ಬಭ್ರುವಾಹನ,

ಮಾಡುತ್ತಾ ತನ್ನೆಲ್ಲಾ ಬಲಪ್ರದರ್ಶನ,ಆರಂಭಿಸಿದ ತಂದೆಯೊಂದಿಗೆ ಕದನ.

 

ಅರ್ಜ್ಜುನಸ್ತು ಸುತಸ್ನೇಹಾನ್ಮನ್ದಂ ಯೋಧಯತಿ ಸ್ಮಯನ್ ।

ಸ ತು ಸರ್ವಾಯುಧಕ್ಷೇಪೇSಪ್ಯವಿಕಾರಂ ಧನಞ್ಜಯಮ್  ॥ ೩೦.೧೦೫ ॥

 

ದೃಷ್ಟ್ವಾ ಬಾಲ್ಯಾತ್ ಪರೀಕ್ಷಾಯೈ ಮನ್ತ್ರಪೂತಂ ಮಹಾಶರಮ್ ।

ಚಿಕ್ಷೇಪ ಪಿತ್ರೇ ದೈವೇನ ತೇನೈನಂ ಮೋಹ ಆವಿಶತ್ ॥ ೩೦.೧೦೬ ॥

 

ಅರ್ಜುನನಿಗಾದರೋ, ಮಗನ ಮೇಲೆ ಪ್ರೀತಿ,

ನಗುತ್ತಾ, ಅನುಸರಿಸಿದ ನಿಧಾನಯುದ್ಧ ಗತಿ.

ಬಭ್ರುವಾಹನ ಯಾವುದೇ ಅಸ್ತ್ರವನ್ನು ಎಸೆದರೂ ಕೂಡಾ,

ಆಗಲಿಲ್ಲ ಧನಂಜಯನಿಗೆ ಯಾವುದೇ ರೀತಿಯ ಬಾಧ .

ಇದನ್ನು ಕಂಡ ಬಭ್ರುವಾಹನನಿಗೆ ಬಾಲಿಷತನ ,

ಪರೀಕ್ಷೆಗಾಗಿ ಬಿಟ್ಟ ಮಂತ್ರಿತವಾದ ದೊಡ್ಡ ಬಾಣ.

ಇದು ದೇವಸಂಕಲ್ಪಕ್ಕೆ ಅನುಗುಣವಾಗಿ ನಡೆಯಿತು,

ಆ ಅಸ್ತ್ರವು ಅರ್ಜುನನನ್ನು ಮೂರ್ಛೆಗೊಳಿಸಿತು.

 

ಮೂರ್ಚ್ಛಿತಂ ತಂ ಗುರುಂ ದೃಷ್ಟ್ವಾ ತದ್ಭಕ್ತ್ಯಾ ಭೃಶದುಃಖಿತಃ ।

ಪ್ರಾಯೋಪವಿಷ್ಟಸ್ತನ್ಮಾತಾ ವಿಲಲಾಪಾತಿದುಃಖಿತಾ ॥ ೩೦.೧೦೭ ॥

 

ಎಚ್ಚರತಪ್ಪಿ ಬಿದ್ದ ತಂದೆಯನ್ನು ಕಂಡ, ತಂದೆಯಮೇಲಿನ ಪ್ರೀತಿ ಭಕ್ತಿಯಿಂದ,

ಅತ್ಯಂತ ದುಃಖಕ್ಕೀಡಾದ ಬಭ್ರುವಾಹನ, ಕುಳಿತ ಆರಂಭಿಸಿ ಆಮರಣ ನಿರಶನ.

ತಾಯಿ ಚಿತ್ರಾಂಗದೆ ದುಃಖಿತಳಾಗಿ ರೋದನ.

 

ವಿಜಗರ್ಹ ತದೋಲೂಪೀಂ ಧಿಗ್ ಜಗತ್ತ್ರಯಪೂಜಿತಮ್ ।

ಅಜೀಘನೋ ಮೇ ಭರ್ತ್ತಾರಂ ಪುತ್ರೇಣೈವಾವಿಜಾನತಾ ॥ ೩೦.೧೦೮॥

 

ಚಿತ್ರಾಂಗದೆ ಉಲೂಪಿಯನ್ನು ಬೈಯ್ಯುತ್ತಾಳೆ. ‘ಮೂರ್ಲೋಕಪೂಜಿತ ನನ್ನ ಗಂಡನನ್ನು,

ಏನೂ ಅರಿಯದ ಮಗ ಬಭ್ರುವಾಹನನಿಂದ, ಕೊಲ್ಲಿಸಿದೆಯಲ್ಲ ಎಂದು ಧಿಕ್ಕರಿಸುತ್ತಾಳೆ.’

 

ಲೋಕವೀರಂ ಪತಿಂ ಹಿತ್ವಾ ನ ಮೇ ಕಾರ್ಯ್ಯಂ ಸುತೇನ ಚ ।

ಪತಿಲೋಕಮಹಂ ಯಾಸ್ಯೇ ತೃಪ್ತಾ ಭವ ಕಲಿಪ್ರಿಯೇ ॥ ೩೦.೧೦೯ ॥

 

‘ಲೋಕದಲ್ಲಿಯೇ ವೀರನಾಗಿರುವ ನನ್ನ ಗಂಡನನ್ನು ಬಿಟ್ಟು,

ಮಗನಿಂದ ನನಗೆ ಯಾವುದೇ ಪ್ರಯೋಜನ ಇಲ್ಲ ಒಂದಿಷ್ಟು.

ನಾನು ಗಂಡನನ್ನು ಅನುಸರಿಸಿ ಅವನ ಜೊತೆಗೇ ಹೊರಟುಬಿಡುತ್ತೇನೆ.

ಜಗಳ ಹಚ್ಚುವುದರಲ್ಲಿ ಪ್ರಿಯಳಾದವಳೇ, ತೃಪ್ತಳಾಗು'- ಎಂಬ ಮಾತಿನ ಮೊನೆ.

 

ಇತ್ಯುಕ್ತ್ವಾ ಮರಣಾಯೈವ ತಾಂ ವಿನಿಶ್ಚಿತಮಾನಸಾಮ್ ।

ಧರಾಯಾಂ ವಿಲುಠನ್ತೀಂ ಚ ದೃಷ್ಟ್ವಾ ಭುಜಗನನ್ದಿನೀ ॥ ೩೦.೧೧೦ ॥

 

ನಾಗಲೋಕಾತ್ ಸಮಾದಾಯ ವಿಶಲ್ಯಕರಣೀಂ ಕ್ಷಣಾತ್ ।

ಉತ್ಥಾಪಯಾಮಾಸ ಪತಿಂ ತ್ರಿಲೋಕಾತಿರಥಂ ತಯಾ ॥ ೩೦.೧೧೧ ॥

 

ಈರೀತಿ ಹೇಳಿ, ಸಾಯಬೇಕೆಂದು ಮನಸ್ಸನ್ನು ಗಟ್ಟಿಮಾಡಿಕೊಂಡು ,

ನೆಲದಲ್ಲಿ ಹೊರಳಾಡುತ್ತಿರುವ ಚಿತ್ರಾಂಗದೆಯ ಉಲೂಪಿ ಕಂಡು ,

ಕ್ಷಣದಲ್ಲಿ, ನಾಗಲೋಕದಿಂದ ವಿಶಲ್ಯಕರಣಿಯನ್ನು ತರುತ್ತಾಳೆ,

ಮೂರುಲೋಕದಲ್ಲಿಯೇ ಅತ್ಯಂತ ವೀರನಾದ ಗಂಡನ ಎಬ್ಬಿಸುತ್ತಾಳೆ.

 

ಪ್ರಹಸ್ಯೋವಾಚ ಚ ತದಾ ಶ್ರುತಂ ವಾಕ್ಯಂ ಪುರಾ ಮಯಾ ।

ಸುರಲೋಕೇ ಸುರೈಃ ಪ್ರೋಕ್ತಂ ಭೀಷ್ಮಾದ್ಯಾ ನಾತಿಧರ್ಮ್ಮತಃ ॥ ೩೦.೧೧೨ ॥

 

ಯದ್ಧತಾಸ್ತೇನ ದೋಷೇಣ ಪಾರ್ತ್ಥಸ್ತೇನಾತಿವೇದನಾಮ್ ।

ರಣೇ ವ್ರಜೇದಿತಿ ನ ತತ್ ಪರತಃ ಸ್ಯಾದಿತಿ ಹ್ಯಹಮ್ ॥ ೩೦.೧೧೩ ॥

 

ವಚನಾದೇವ ದೇವಾನಾಂ ಯುದ್ಧ್ಯೇತ್ಯಾತ್ಮಜಮಬ್ರವಮ್ ।

ದೇವಾನಾಮೇವ ಸಙ್ಕಲ್ಪಾನ್ಮೂರ್ಚ್ಛಿತಶ್ಚಾರ್ಜ್ಜುನೋSಭವತ್ ॥ ೩೦.೧೧೪ ॥

 

ಏಕೆ ಈ ಘಟನೆ ನಡೆಯಿತು ಎನ್ನುವುದನ್ನು ಉಲೂಪಿಕೆಯು ನಕ್ಕು ಹೇಳುತ್ತಾಳೆ-,

‘ಹಿಂದೆ ತನ್ನಿಂದ ದೇವಲೋಕದಲ್ಲಿ ಕೇಳಲ್ಪಟ್ಟ ದೇವತೆಗಳ ಮಾತನ್ನು ಉಚ್ಚರಿಸುತ್ತಾಳೆ.

“ಭೀಷ್ಮಾಚಾರ್ಯರೇ ಮೊದಲಾದವರೆಲ್ಲರು, ಧರ್ಮದಿಂದ ಸಾಯಿಸಲ್ಪಡಲಿಲ್ಲ,

(ಬಲವಿದ್ದರೂ ಕೂಡಾ ನೇರವಾಗಿ ಅರ್ಜುನನ ಬಲದಿಂದ ಅವರು ಸಾಯಿಸಲ್ಪಡಲಿಲ್ಲ). 

ಆ ಕಾರಣದಿಂದ ಬಂದೊದಗುವ ದೋಷ , ಅರ್ಜುನನಿಗೆ ಆತ್ಯಂತಿಕ ನೋವಿನ ಕ್ಲೇಷ,

ಯುದ್ಧದಲ್ಲಿ ಹೊಂದುವ ದೇವತಾಪಾಶ.”

ಈ ವಿಷಯವನ್ನು ನಾನು ಮೊದಲೇ ತಿಳಿದಿದ್ದೆ, ಪಾರ್ಥಗೆ ಇನ್ನೊಬ್ಬರಿಂದ ನೋವಾಗದಿರಲೆಂದೆ,

ಯುದ್ಧಮಾಡೆಂದು ಮಗನಾದ ಬಭ್ರುವಾಹನನಿಗೆ ಹೇಳಿದ್ದು.

ದೇವತೆಗಳ ಸಂಕಲ್ಪದಂತೆಯೇ ಅರ್ಜುನನು ಮೂರ್ಛೆಹೊಂದಿದ್ದು.

 

ಭುಕ್ತದೋಷಫಲಶ್ಚಾಯಂ ಪುನರ್ಭೋಕ್ಷ್ಯತಿ ನಾನ್ಯತಃ ।

ಅನ್ಯೇನ ಪಾತಿತಸ್ಯಾಸ್ಯ ಯಶೋ ನಶ್ಯೇತ್ ತ್ರಿಲೋಕಗಮ್ ॥ ೩೦.೧೧೫ ॥

 

 

ದೋಷದಿಂದ ಬಂದ ನೋವು ಇದೀಗ ಸ್ವೀಕೃತವಾಗಿದೆ.

ಹಾಗಾಗಿ ಇನ್ನೊಬ್ಬರಿಂದ ಮತ್ತೆ ಈ  ದುಃಖ ಬಾರದಾಗಿದೆ.

ಮಗನಲ್ಲದೇ ಬೇರೊಬ್ಬರು ಇವನನ್ನು ಬೀಳಿಸಿದ್ದರೆ, ಇವನ ಯಶಸ್ಸು, ಕೀರ್ತಿ, ನಾಶವಾಗುತ್ತಿತ್ತು.

(ಗುರುವನ್ನು/ತಂದೆಯನ್ನು ಶಿಷ್ಯ/ಮಗ ಸೋಲಿಸಿದರೆ, ಅದರಿಂದವರಿಗೆ ಕೀರ್ತಿ, ಸಂತಸದ ಹೊತ್ತು).

 

ನಾರ್ಜ್ಜುನಸ್ಯ ಯಶೋ ನಶ್ಯೇದಿತಿ ದೈವೈರಿದಂ ಕೃತಮ್ ।

ಇತ್ಯುಕ್ತಃ ಪ್ರೀತಿಮಾಪೇದೇ ಪುತ್ರಭಾರ್ಯ್ಯಾಯುತೋSರ್ಜ್ಜುನಃ ॥ ೩೦.೧೧೬ ॥

 

ಅರ್ಜುನನ ಕೀರ್ತಿ ನಾಶವಾಗಬಾರದೆಂದು, ದೇವತೆಗಳಿಂದಲೇ ಮಾಡಲ್ಪಟ್ಟಿದ್ದು ಇದು.  ಈರೀತಿಯಾಗಿ ಉಲೂಪಿಯಿಂದ ಹೇಳಲ್ಪಟ್ಟ ಅರ್ಜುನನು,ಹೆಂಡತಿ ಮಗನೊಡಗೂಡಿ ಬಲು ಸಂತೋಷ ಹೊಂದಿದನು.

 

ಯಜ್ಞಾರ್ತ್ಥಂ ತಾವಥಾSಹೂಯ ಪೂಜಿತಃ ಪ್ರಯಯೌ ತತಃ ।

ದ್ವಾರಕಾಯಾಃ ಸಮೀಪಸ್ಥಂ ಪ್ರದ್ಯುಮ್ನಾದ್ಯಾಃ ಸುತಾ ಹರೇಃ ॥ ೩೦.೧೧೭ ॥

 

ಪ್ರಸಹ್ಯಾಶ್ವಮಪಾಜಹ್ರುರಾಹ್ವಯನ್ತೋSರ್ಜ್ಜುನಂ ಯುಧೇ ।

ಸುಭದ್ರಾಹರಣಂ ಮಾರ್ಷ್ಟುಂ ನೀತೇSಶ್ವೇ ತೈರ್ದ್ಧನಞ್ಜಯಃ ॥ ೩೦.೧೧೮ ॥

 

ಗೌರವಾದ್ ವಾಸುದೇವಸ್ಯ ಮಾತುಲಸ್ಯ ಚ ಕೇವಲಮ್ ।

ಮಾತುಲಾಯಬ್ರವೀದಶ್ವಂ ಹೃತಂ ಪೌತ್ರೈರಬನ್ಧುವತ್ ॥ ೩೦.೧೧೯ ॥

 

ಚಿತ್ರಾಂಗದೆ ಮತ್ತು ಬಭ್ರುವಾಹನನನ್ನು ಅರ್ಜುನ ,

ಯಾಗಕ್ಕೆ ಕರೆದು, ಸತ್ಕೃತನಾಗಿ  ಮುನ್ನಡೆಸಿದ ಯಾನ .

ಅರ್ಜುನ ದ್ವಾರಕೆಯ ಸಮೀಪದಲ್ಲಿರುವಾಗ, ಅವನ ಮೇಲೆ ನಡೆಯಿತು ಆಕ್ರಮಣವಾಗ,

ಪ್ರದ್ಯುಮ್ನನೇ ಮೊದಲಾದ ಶ್ರೀಕೃಷ್ಣನ ಪುತ್ರರು, ಅರ್ಜುನನ ಯುದ್ಧಕ್ಕೆ ಕರೆದು, ಕುದುರೆ ಅಪಹರಿಸಿದರು.

ಹಿಂದೆ ಅರ್ಜುನ ಸುಭದ್ರೆಯನ್ನು ಅಪಹರಿಸಿದ್ದಾಗ ಬಂದಿತ್ತು ಅಪಕೀರ್ತಿ,

ಅದರ ಪರಿಹಾರಕ್ಕಾಗಿ ಅವರು ಅರ್ಜುನನ ಯುದ್ಧಕ್ಕೆ ಆಹ್ವಾನಿಸಿದ ರೀತಿ.

ಹೀಗೆ ಅವರಿಂದ ಆಯಿತು ಯಜ್ಞ ಕುದುರೆಯ ಅಪಹಾರ,

ಅರ್ಜುನಗೆ ಕೃಷ್ಣ ಹಾಗೂ ಮಾವನ ಮೇಲೆ ಗೌರವ ಅಪಾರ.

ಅರ್ಜುನ ಮಾವನಿಗೆ ದೂರುಕೊಡುತ್ತಾನೆ. ‘ನಿನ್ನ ಮೊಮ್ಮಕ್ಕಳು ಶತ್ರುವಿನ ಕುದುರೆಯಂತೆ ನಮ್ಮ ಯಾಗದ ಕುದುರೆಯನ್ನು ಅಪಹರಿಸಿದ್ದಾರೆ’ ಎಂದು ಹೇಳುತ್ತಾನೆ.

 

ಸ ನಿರ್ಭತ್ಸ್ಯ ಕುಮಾರಾಂಸ್ತಾನ್ ಮೇದ್ಧ್ಯಮಶ್ವಮಮೋಚಯತ್ ।

ಮಾತುಲಂ ಸ ಪ್ರಣಮ್ಯಾಥ ಯಜ್ಞಾರ್ತ್ಥಂ ತಾನ್ ನಿಮನ್ತ್ರ್ಯ ಚ ॥ ೩೦.೧೨೦ ॥

 

ಗಚ್ಛನ್ ಗಜಾಹ್ವಯಂ ದೂತಮಗ್ರತೋSಯಾಪಯನ್ನೃಪೇ ।

ಸಕೃಷ್ಣಃ ಸಹಸೋದರ್ಯ್ಯಃ ಶ್ರುತ್ವಾSಸೌ ಪ್ರಾಪ್ತಮರ್ಜ್ಜುನಮ್ । ॥ ೩೦.೧೨೧ ॥

 

ಪ್ರೀತೋ ಬಾಷ್ಪಾಭಿಪೂರ್ಣ್ಣಾಕ್ಷೋ ಭ್ರಾತೃಸ್ನೇಹಾದಭಾಷತ ।

ವಾಸುದೇವ ನ ಪಶ್ಯಾಮಿ ದುರ್ಲ್ಲಕ್ಷಣಮಜಾರ್ಜ್ಜುನೇ ॥ ೩೦.೧೨೨ ॥

 

ಕೇನ ದುರ್ಲ್ಲಕ್ಷಣೇನಾಯಂ ಬಹುದುಃಖಿ ಪ್ರವಾಸಗಃ ।

ಪೃಷ್ಟಸ್ತಂ ಕೇಶವಃ ಪ್ರಾಹ ಭ್ರಾತಾ ತೇ ದೀರ್ಘಪಿಣ್ಡಿಕಃ  ॥ ೩೦.೧೨೩ ॥

 

ತೇನಾಯಂ ದುಃಖಬಹುಲ ಇತ್ಯುಕ್ತ್ವಾ ಪುನರೇವ ಚ ।

ವದನ್ತಮೇವ ಪಾಞ್ಚಾಲೀ ಕಟಾಕ್ಷೇಣ ನ್ಯವಾರಯತ್ ॥ ೩೦.೧೨೪ ॥

 

ವಸುದೇವನು ಆ ಪ್ರದ್ಯುಮ್ನಾದಿಗಳನ್ನು ಬೈಯ್ಯುತ್ತಾನೆ,

ಅಶ್ವಮೇಧದ ಕುದುರೆಯನ್ನು ಬಿಡುಗಡೆ ಮಾಡಿಸುತ್ತಾನೆ.

ಅರ್ಜುನನು ವಸುದೇವನನ್ನು ನಮಸ್ಕರಿಸಿದ,

ಎಲ್ಲರೂ ಬಂದು ಯಜ್ಞ ಚೆಂದಗಾಣಿಸಿ ಎಂದ.

ಆಹ್ವಾನಮಾಡಿದವ ಹಸ್ತಿನಾವತಿಗೆ ತೆರಳಿದ,

ಮೊದಲು ಧರ್ಮರಾಜನಿಗೆ ದೂತನ ಕಳಿಸಿದ.

ತನ್ನ ತಮ್ಮಂದಿರಿಂದ,  ಶ್ರೀಕೃಷ್ಣನಿಂದ ಕೂಡಿಕೊಂಡ ಯುಧಿಷ್ಠಿರ,

ಅರ್ಜುನ ಬಂದದ್ದ ಕೇಳಿದವನಿಗೆ, ಪ್ರೀತಿ ಆನಂದಭಾಷ್ಪದ ಧಾರ.

ಯುಧಿಷ್ಠಿರ ಪ್ರೀತಿಯಿಂದ ಶ್ರೀಕೃಷ್ಣನನ್ನು ಕುರಿತು ಹೀಗೆ ಹೇಳುತ್ತಾನೆ-,

‘ವಾಸುದೇವಾ, ಅರ್ಜುನನಲ್ಲಿ ಯಾವ ದುರ್ಲಕ್ಷಣವನ್ನೂ ಕಾಣೆ.

ಯಾವ ದುರ್ಲಕ್ಷಣದಿಂದಾಗಿ  ಅರ್ಜುನಗೆ ಯಾವಾಗಲೂ ಪ್ರವಾಸ ಮತ್ತು ದುಃಖ?,

ಕೇಶವ-‘ನಿನ್ನ ತಮ್ಮನ ಕಾಲಹಿಮ್ಮಡಿ ಧೀರ್ಘವಾಗಿದ್ದರಿಂದ ಅವನಿಗೆ ದುಃಖ.

ಮತ್ತೆ ಇನ್ನಷ್ಟು ದುರ್ಲಕ್ಷಣವನ್ನು ಹೇಳಲಿಚ್ಛಿಸುತ್ತಿರುವ ಕೇಶವನನ್ನು ,

ದ್ರೌಪದಿ ಬೇಡವೆಂದು ತಡೆಯುತ್ತಾಳೆ. ಮಾಡುತ್ತಾ ಕಡೆಗಣ್ಣಿನ ಸಂಜ್ಞೆಯನ್ನು .

 

 

ಸಮಸ್ತಲಕ್ಷಣಾಭಿಜ್ಞಾಃ ಕೃಷ್ಣಃ ಸತ್ಯಾ ವೃಕೋದರಃ ।

ಕೃಷ್ಣಾ ಚ ಪಞ್ಚಮೋ ನಾಸ್ತಿ ವಿದ್ಯಾ ಶುದ್ಧೇಯಮಞ್ಜಸಾ ॥ ೩೦.೧೨೫ ॥

 

ಪರಮಾತ್ಮ(ಶ್ರೀಕೃಷ್ಣ,), ಲಕ್ಷ್ಮೀದೇವಿ(ಸತ್ಯಭಾಮೆ), ಮುಖ್ಯಪ್ರಾಣ(ಭೀಮಸೇನ), ಭಾರತೀದೇವಿ(ದ್ರೌಪದಿ) ಇವರು ಮಾತ್ರ ಎಲ್ಲಾ ಲಕ್ಷಣಗಳನ್ನು ಸಮಸ್ತವಾಗಿ ಅರಿತವರು.

ಇವರಲ್ಲದೇ ಇನ್ನು ಐದನೆಯವರು ಇಲ್ಲವೇ ಇಲ್ಲ, ಈ ವಿದ್ಯೆಯು ಅತ್ಯಂತ ಪವಿತ್ರವಾಗಿದ್ದು ಅದನ್ನು ತಿಳಿದಿಲ್ಲ ಯಾರೂ.

 

ಪ್ರಸಙ್ಗಾತ್ ಪ್ರಾಪ್ತುಮಿಚ್ಛೇತ್ ತಾಂ ವಿದ್ಯಾಶೀಲೋ ಯುಧಿಷ್ಠಿರಃ ।

ಇತಿ ಲೋಭಾತ್ ತು ಪಾಞ್ಚಾಲೀ ವಾಸುದೇವಂ ನ್ಯವಾರಯತ್ ॥ ೩೦.೧೨೬ ॥

 

ವಿದ್ಯೆಯನ್ನು ತಿಳಿಯಬೇಕು ಎಂಬ ಬಯಕೆಯಿಂದ ,

ವಿದ್ಯಾಗ್ರಹಣ ಸ್ವಭಾವವಿರುವ ಯುಧಿಷ್ಠಿರನಿಂದ ,

   ಪ್ರಸಂಗಲ್ಲಿ ಆ ವಿಶಿಷ್ಟ ವಿದ್ಯೆಯನ್ನು ಹೊಂದಬಯಸಬಹುದು,

ಎಂಬ ಲೋಭಾತಿಶಯದಿಂದ ದ್ರೌಪದಿಯು ಶ್ರೀಕೃಷ್ಣನನ್ನು ತಡೆದದ್ದು.

 

ತದ್ಗೌರವಾದ್ ವಾಸುದೇವೋ ನೋತ್ತರಂ ಪ್ರತ್ಯಭಾಷತ ।

ವಿಸ್ಮಾರಯಾಮಾಸ ಚ ತಂ ಪ್ರಬ್ರುವಾಣಃ ಕಥಾನ್ತರಮ್ ॥ ೩೦.೧೨೭ ॥

 

ದ್ರೌಪದಿಯ ಮೇಲಿನ ಗೌರವದಿಂದ, ಶ್ರೀಕೃಷ್ಣ ಲಕ್ಷಣದ ಕುರಿತು ಮುಂದಿದ್ದ,

ವಿಷಯವನ್ನು ನುಡಿಯದೇ ಬೇರೊಂದ, ಕಥೆಯನ್ನು ಹೇಳುತ್ತಾ ಅದನ್ನು ಮರೆಸಿದ.

 

ಉದರಸ್ಯ ಕಿಞ್ಚಿದಾಧಿಕ್ಯಂ ವೃಷಣಾಧಿಕ್ಯಮೇವ ಚ ।

ಸವ್ಯಬಾಹೋಸ್ತಥಾSSಧಿಕ್ಯಂ ದುರ್ಲ್ಲಕ್ಷಣಮತೋSರ್ಜ್ಜುನೇ  ॥ ೩೦.೧೨೮ ॥

 

ದೀರ್ಘಪಿಂಡಿಕತ್ವ, ಸ್ವಲ್ಪ ಡೊಳ್ಳು ಹೊಟ್ಟೆ, ವೃಷಣಾಧಿಕ್ಯ,

ಎಡಗೈಯು ಸ್ವಲ್ಪ ಬಲಗೈಕ್ಕಿಂತ ಉದ್ದದಲ್ಲಿ, ಇರುವ ಆಧಿಕ್ಯ,

ಇವು ಅರ್ಜುನನಲ್ಲಿದ್ದ ಇತರ ದುರ್ಲಕ್ಷಣಗಳ ಹೇಳದ ಲೆಕ್ಕ.

 

ನೈವೋಕ್ತಂ ವಾಸುದೇವೇನ ದೃಶ್ಯಮಾನಮಪಿ ಸ್ಫುಟಮ್ ।

ಜ್ಞಾನಾನನ್ದಹ್ರಾಸಕರಾ ಹ್ಯೇತೇ ದೋಷಾಃ ಸದಾತನಾಃ ॥ ೩೦.೧೨೯ ॥

 

ಸ್ಫುಟವಾಗಿ ಇದು ಕಂಡರೂ ಕೂಡಾ, ಅದನ್ನು ಶ್ರೀಕೃಷ್ಣ ಹೇಳದಂತೆ  ಇದ್ದ.

ಈ ಲಕ್ಷ್ಮಣ ಮತ್ತು ದೋಷಗಳಿಂದ , ಕಡಿಮೆಯಾಗುತ್ತವೆ ಜ್ಞಾನ ಮತ್ತು ಆನಂದ.

 

ಸಮಸ್ತಜೀವರಾಶೌ ತದ್ ದುಷ್ಟಲಕ್ಷಣವರ್ಜ್ಜಿತೌ ।

ಪೂರ್ಣ್ಣಚಿತ್ಸುಖಶಕ್ತ್ಯಾದೇರ್ಯ್ಯೋಗ್ಯೌ ಕೃಷ್ಣಾ ಚ ಮಾರುತಿಃ ॥ ೩೦.೧೩೦ ॥

 

ಅನಾದಿದುಃಖಹೀನತ್ವೇ ಸುಖಾಧಿಕ್ಯೇ ಚ ಲಕ್ಷಣಮ್ ।

ರುಗ್ಮಿಣೀಸತ್ಯಭಾಮಾದಿರೂಪಾಯಾಃ ಶ್ರಿಯ ಏವ ತು ॥ ೩೦.೧೩೧ ॥

 

ಮುಖ್ಯಂ ತತೋSಪಿ ಮುಖ್ಯಂ ತು ಸ್ವಾತನ್ತ್ರ್ಯಾದೇರಶೇಷತಃ ।

ಗುಣರಾಶೇಃ ಪರಂ ಲಿಙ್ಗಂ ನಿತ್ಯಂ ವ್ಯಾಸಾದಿರೂಪಿಣಃ ।

ವಿಷ್ಣೋರೇವ ನಚಾನ್ಯಸ್ಯ ಸ ಹ್ಯೇಕಃ ಪೂರ್ಣ್ಣಸದ್ಗುಣಃ ॥ ೩೦.೧೩೨ ॥

 

ಸಮಸ್ತ ಜೀವರಾಶಿಗಳಲ್ಲಿ ದುರ್ಲಕ್ಷಣ ಇಲ್ಲದೇ ಇರುವವರು ,

ಪರಿಪೂರ್ಣ ಜ್ಞಾನ, ಸುಖ, ಶಕ್ತಿ, ಎಲ್ಲದರಲ್ಲಿ ಯೋಗ್ಯರಾದವರು,

ಭಾರತೀದೇವಿ-ಮುಖ್ಯಪ್ರಾಣ  ಇವರಿಬ್ಬರೇ ಅದಕ್ಕೆ ಬಾಧ್ಯರು.

ಜೀವಸಮುದಾಯಕ್ಕಿಂತ ಮೇಲೆ, ಅನಾದಿಯಾದ ದುಃಖಹೀನತ್ವ, ಸುಖಾಧಿಕ್ಯ ಲಕ್ಷಣಗಳು;

ರುಗ್ಮಿಣೀ-ಸತ್ಯಭಾಮಾದಿ ಸ್ವರೂಪಿಣಿಯಾದ ಶ್ರೀಲಕ್ಷ್ಮಿದೇವಿಯಲ್ಲಿ ಸದಾ ಇದ್ದೇ ಇರುವಂಥ ಲಕ್ಷಣಗಳು.

ಲಕ್ಷ್ಮೀದೇವಿಗಿಂತಲೂ ಅತಿಮುಖ್ಯವಾಗಿ, ಸ್ವತಂತ್ರ,ನಿತ್ಯ, ಸರ್ವೋತ್ಕೃಷ್ಟ ಲಕ್ಷಣಗಳ ಭಂಡಾರ,

ವೇದವ್ಯಾಸಾದಿ ಅನೇಕ ಸ್ವರೂಪವುಳ್ಳ ಶ್ರೀವಿಷ್ಣುವೊಬ್ಬನೇ ಪರಿಪೂರ್ಣ,ಸ್ವತಂತ್ರ, ಗುಣಸಾಗರ. 

 

ಸಾಶ್ವೇSರ್ಜ್ಜುನೇ ಯಜ್ಞವಾಟಂ ಪ್ರವಿಷ್ಟೇSಸ್ಯ ಸಹೋದರಾಃ ।

ಪೂಜಿತಾಃ ಪೂಜಯಾಮಾಸುರ್ಮ್ಮುದಿತಾಃ ಸಹಕೇಶವಾಃ ॥ ೩೦.೧೩೩ ॥

 

ಯಜ್ಞಾಶ್ವದೊಂದಿಗೆ ಅರ್ಜುನನು ಯಜ್ಞ ಶಾಲೆಯನ್ನು ಪ್ರವೇಶಿಸಲು

ಕೃಷ್ಣಸಹಿತ ಅವನ  ಸಹೋದರರು ಬಹಳ ಸಂತೋಷಗೊಂಡವನ ಸತ್ಕರಿಸಲು,

ಮತ್ತು ತಾವೆಲ್ಲರೂ ಕೂಡಾ ಅವನಿಂದ ಸತ್ಕೃತರಾದ ಸಂತಸದ ಕ್ಷಣಗಳು.

 

ತತಃ ಸ ಯಜ್ಞೋ ಯದುವೀರರಕ್ಷಿತೋ ವ್ಯಾಸೋಪದಿಷ್ಟೋ ಮುನಿಭಿಃ ಪ್ರವರ್ತ್ತಿತಃ ।

ಅಶೋಭತಾಲಂ ಸಕಲೈರ್ನ್ನೃಪೈಶ್ಚ ಸಮಾಗತೈರ್ವಿಪ್ರವರೈಶ್ಚ ಜುಷ್ಟಃ ॥ ೩೦.೧೩೪ ॥

 

ಆ ಯಜ್ಞ ಯದುವೀರ ಶ್ರೀಕೃಷ್ಣನಿಂದ ರಕ್ಷಿಸಲ್ಪಟ್ಟದ್ದಾಗಿ,

ವ್ಯಾಸರ ಉಪದೇಶ , ಮುನಿಗಳಿಂದ ಪ್ರವರ್ತಿತವಾಗಿ,

ಬಂದಿರುವ ಎಲ್ಲಾ ರಾಜರಿಂದ, ಆಗಮಿಸಿದ ಋಷಿಶ್ರೇಷ್ಠರಿಂದ,

ಸೇವಿಸಲ್ಪಟ್ಟಿತ್ತು ಬಲು ಶೋಭೆಯಿಂದ.

 

ಸ ಕೃಷ್ಣಯುಗ್ಮೇನ ಚ ಭಾರ್ಗ್ಗವೇಣ ತ್ರಿಧಾ ವಿಭಕ್ತೇನ ಪರೇಣ ಪುಂಸಾ ।

ಅಧಿಷ್ಠಿತೋSಶೋಭತ ವಿಶ್ವಮೇತದ್ ವಿಶ್ವಾದಿರೂಪೇಣ ಯಥೈವ ತೇನ ॥ ೩೦.೧೩೫ ॥

 

ವಿಶ್ವ-ತೈಜಸ-ಪ್ರಾಜ್ಞ ಎನ್ನುವ ಮೂರು ಅವಸ್ಥಾ ಪ್ರೇರಕವಾದ ಭಗವಂತನ ರೂಪಗಳಿಂದ,

ಈ ಜಗತ್ತಿಗೆ ಹೇಗೆ ಶೋಭೆಯೋ ಹಾಗೇ, ವೇದವ್ಯಾಸ, ಯಾದವನಂದನ ಮತ್ತು ಪರಶುರಾಮರಿಂದ,

ಮೂರು ರೀತಿಯ ಭಗವದ್ರೂಪಗಳಿಂದ ಯುಕ್ತವಾದ ಆ ಅಶ್ವಮೇಧಯಾಗ, ಕಂಗೊಳಿಸಿತು ಶೋಭೆಯಿಂದ.

 

ಯಥಾ ವಿರಿಞ್ಚಸ್ಯ ಪುರಾSಸ್ಯ ಯಜ್ಞೋ ಯಥೈವ ಶಕ್ರಸ್ಯ ಶತಕ್ರತುತ್ವೇ ।

ತಥೈವ ಸೋSಭೂದ್ ವಿಧಿಶರ್ವಶಕ್ರಪೂರ್ವೈಃ ಸುರೈರಾವಿರಲಙ್ಕೃತೋSಧಿಕಮ್ ॥ ೩೦.೧೩೬ ॥

 

ಯಾವರೀತಿ ಮೊದಲು ಚತುರ್ಮುಖನ ಯಜ್ಞವು ಶೋಭಿಸಿತ್ತೋ,

ಯಾವ ರೀತಿ ಇಂದ್ರನ ನೂರನೇ ಅಶ್ವಮೇಧ ಯಜ್ಞವು ಶೋಭಿಸಿತ್ತೋ,

ಅದೇ ರೀತಿ, ಬ್ರಹ್ಮ, ರುದ್ರಾದಿಗಳಿಂದ ಅಲಂಕೃತವಾಗಿ,

ಈ ಯಜ್ಞವೂ ಕೂಡಾ ಶೋಭಿಸಿತು ವೈಭವಯುತವಾಗಿ.

 

ನ ದೇವಗನ್ಧರ್ವಮುನಿಸ್ವಧರ್ಮ್ಮಮರ್ತ್ತ್ಯಾದಿಕೇಷ್ವಾಸ ಸ ಯೋSತ್ರ ನಾSಸ ।

ಸ್ವಲಙ್ಕೃತೈರ್ನ್ನಾಕಿಜನೈಃ ಸಕಾನ್ತೈರರೂರುಚನ್ನಾಕವದೇವ ಲೋಕಃ ॥ ೩೦.೧೩೭ ॥

 

ದೇವತೆಗಳೂ,ಮುನಿಗಳೂ, ಗಂಧರ್ವರೂ, ತಮ್ಮ ಧರ್ಮನಿರತ ಮನುಷ್ಯೋತ್ತಮರೂ, ಮೊದಲಾದವರೆಲ್ಲರ ಅಪೂರ್ವ ಆಗಮನ,

ಪತ್ನೀಸಮೇತರಾಗಿರುವ ದೇವತೆಗಳಿಂದ ಕೂಡಿಕೊಂಡ, ಆ ಯಜ್ಞಸ್ಥಳವು ಆಗಿತ್ತು ಇನ್ನೊಂದು ಸ್ವರ್ಗದಂತೆ ಶೋಭಾಯಮಾನ.

 

ತತ್ರೈವ ತತ್ವಾನಿ ಸಸಂಶಯಾನಿ ನಿಸ್ಸಂಶಯಾನ್ಯಾಸುರಲಂ ವಿವಾದೇ ।

ಪರಸ್ಪರೋತ್ಥೇ ಹರಿಣಾ ತ್ರಿರೂಪಿಣಾ ಸಂಸ್ಥಾಪಿತಾನ್ಯಗ್ರ್ಯವಚೋಭಿರುಚ್ಚೈಃ ॥ ೩೦.೧೩೮ ॥

 

ಆ ಯಜ್ಞಶಾಲೆಯಲ್ಲಿ ಸಂಶಯಯುಕ್ತವಾದ ತತ್ವಗಳಿಗೆ ,

ದೊರಕಿತು ನಿಸ್ಸಂಶಯವಾದ ಪರಿಹಾರದ ತತ್ವದೀವಿಗೆ.

ಯಜ್ಞಶಾಲೆಯಲ್ಲಿ ಎದುರಾದ ತತ್ವಗಳ ಪರಸ್ಪರ ವಿವಾದಗಳಿಗೆ,

ಮೂರು ರೂಪಗಳಿಂದ ನಿಂತ ಭಗವಂತನೇ ನಿರ್ಣಯ ಕೊಟ್ಟ ಬಗೆ.

 

ಪ್ರಗೀತಗನ್ಧರ್ವವರಃ ಪ್ರನೃತ್ತಸದಪ್ಸರಾಃ ಸನ್ತತವಾದಿವಿಪ್ರಃ ।

ವಿವೇಚಯದ್ದೇವನೃಪೌಘ ಏಕೋ ರರಾಜ ರಾಜಾSಖಿಲಸತ್ಕ್ರತೂನಾಮ್ ॥ ೩೦.೧೩೯ ॥

 

ಗಂಧರ್ವರೆಲ್ಲರೂ ಚೆನ್ನಾಗಿ ಹಾಡಿದರು. ಅಪ್ಸರೆಯರು ಚೆಲುನಾಟ್ಯ ಮಾಡಿದರು.

ಬ್ರಾಹ್ಮಣರು ತತ್ವವಾದದಲ್ಲಿ ತೊಡಗಿದ್ದರು. ಇವರು ದೇವತೆಗಳು, ಇವರು ಮನುಷ್ಯರು ಎಂಬ ತಾರತಮ್ಯ,

ಆ ಒಂದೇ ಯಜ್ಞದಲ್ಲಿತ್ತು ವಿವೇಚನೆಯ ಸ್ಪಷ್ಟವಾದ ಪಾರಮ್ಯ.

ಎಲ್ಲಾ ಯಜ್ಞಗಳಲ್ಲೇ  ಶ್ರೇಷ್ಠವಾಗಿತ್ತು, ಪಾಂಡವರ ಯಜ್ಞ ಹಾಗೆ ಶೋಭಿಸಿತು.

 

ಸಮಸ್ತದೇವ್ಯಃ ಸಹವಾಸುದೇವ್ಯಃ ಸ್ವಲಙ್ಕೃತಾಃ ಫುಲ್ಲಮುಖಾರವಿನ್ದಾಃ ।

ವಿಚೇರುರತ್ರೈವ ಸಹಾಪ್ಸರೋಭಿರ್ನ್ನಿಷೇದುರಪ್ಯಚ್ಯುತಸತ್ಕಥಾರಮಾಃ ॥ ೩೦.೧೪೦ ॥

 

ಚೆನ್ನಾಗಿ ಅಲಂಕೃತರಾದ, ಅರಳುದಾವರೆಯ ಮುಖದ,

ಶ್ರೀಕೃಷ್ಣನ ಭಾರ್ಯೆರಿಂದಕೂಡಿದ ,ದೇವತೆಗಳ ಮಡದಿಯರು (ಸಮಸ್ತ ದೇವಿಯರು),

ಅಪ್ಸರೆಯರ ಕೂಡಿ, ಹರಿಕಥೆಯಲ್ಲಿ ರತರಾಗಿ ಕುಳಿತರು.

No comments:

Post a Comment

ಗೋ-ಕುಲ Go-Kula