Sunday 21 February 2016

ಪುರಂದರದಾಸರು ಭಗವಂತನಿಗಾಗಿ ಹಾಡಿದ ಸುಪ್ರಭಾತ - ಭಾಗ-5

ಪುರಂದರದಾಸರು, ಒಳಬಗೆಯಲ್ಲಿ ಭಗವಂತನ ಮಾನಸ ಪೂಜೆಯ ವಿಧಾನವನ್ನು ಹಾಡಿನ ಮುಂದಿನ ಸಾಲುಗಳಲ್ಲಿ ನೆನಪಿಸಿಕೊಳ್ಳುತ್ತಾರೆ...

"ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿಹರಯ್ಯ ಸುಜನರೊಡೆಯ
ಅರವಿಂದಲೋಚನನೆ ಕೋಳಿ ಕೂಗಿತು ಕೇಳು
ಪುರಂದರ ವಿಠಲನೆ ಬೆಳಗಾಯಿತು"

ಇದು ದಾಸರು ತಮ್ಮ ಒಳಬಗೆಯಲ್ಲಿ ಕಂಡು ಆಡಿದ ಮಾತುಗಳು... ಹೊರಗೆ ತಿರುಪತಿಯ ಬೆಟ್ಟದಲ್ಲಿ ಪೂಜೆಗೆಂದು ದೇವತೆಗಳು ಬಂದು ನಿಂತಿದ್ದಾರೋ ಇಲ್ಲವೋ ಗೊತ್ತಿಲ್ಲ... ಆದರೆ, ದಾಸರ ಬಗೆಯ ಬೆಟ್ಟದಲ್ಲಿ ಮಾತ್ರ ಖಂಡಿತ ಬಂದು ನಿಂತಿದ್ದಾರೆ...

"ಅರಳಿ ಗಮಗಮಿಸುವ ಮಲ್ಲಿಗೆ , ಜಾಜಿ ಮುಂತಾದ ಕಂಪು ಸೂಸುವ ಹೂವುಗಳನ್ನು ತಂದು ನಿನ್ನ ಪೂಜೆಗೆಂದು ಸುರರು ನಿಂತಿದ್ದಾರೆ ಓ ಶ್ರೀನಿವಾಸನೇ" ಅನ್ನುತ್ತಾರೆ ದಾಸರು..

ವಿಶೇಷವಾಗಿ ಸುಗಂಧಯುಕ್ತವಾದ ಬಿಳಿಯ ಹೂವುಗಳು ವಿಷ್ಣುವಿನ ಆರಾಧನೆಗೆ ವಿಹಿತವಾದಂತವು ಎಂದು ಶಾಸ್ತ್ರಗಳು ಹೇಳುತ್ತವೆ.... ಅದಕೆಂದೆ ದಾಸರು ಇಲ್ಲಿ "ಪರಿಮಳದ ಪುಷ್ಪಗಳ " ಎಂಬ ವಿಶೇಷವನ್ನಿತ್ತು, ಮಲ್ಲಿಗೆ, ಜಾಜಿ ಮುಂತಾದ ಬಿಳಿಯ ಹೂಗಳನ್ನೇ ಉಲ್ಲೇಖಿಸಿದ್ದಾರೆ...

ಪೂಜೆಗೆ ಬಳಸುವ ಹೂವುಗಳಲ್ಲಿರುವ ಬೇರೆ ಬೇರೆ ದೇವತೆಗಳ ಸನ್ನಿಧಾನವನ್ನು ಒಂದು ಮಂತ್ರ ಹೀಗೆ ಹೇಳುತ್ತದೆ :

"ಪಾರಿಜಾತಸ್ಯ ಪುಷ್ಪೇಷು
ಆಂಜನೇಯಸ್ತದಾಜ್ಞೇಯಾ |
ಸೌಗಂಧಿಕೇ ಭೀಮಸೇನಃ
ಶ್ವೇತ ಪುಷ್ಪೇಷು ಶಂಕರಃ |
ಪುನ್ನಾಗ ಪುಷ್ಪೇ ಗರುಡಃ.....

ಪಾರಿಜಾತ ಪುಷ್ಪದಲ್ಲಿ ಆಂಜನೇಯನಿದ್ದಾನೆ...

ಕಲ್ಹಾರ (ಸೌಗಂಧಿಕ) ಪುಷ್ಪದಲ್ಲಿ ಭೀಮಸೇನನಿದ್ದಾನೆ...

ಪುನ್ನಾಗ ಪುಷ್ಪದಲ್ಲಿ ಗರುಡನಿದ್ದಾನೆ...

ಬಿಳಿಯ ಹೂಗಳಲ್ಲೆಲ್ಲ ಶಂಕರನಿದ್ದಾನೆ...

ಅದರಿಂದ ಬಿಳಿಯ ಪರಿಮಳದ ಪುಷ್ಪಗಳ ಸುರರು ತಂದಿಹರಯ್ಯ...

ಅದೂ ಕೂಡ ಅರಳಿದ ಪುಷ್ಪಗಳು, ಏಕೆಂದರೆ, ಅರಳಿದಾಗ ಮಾತ್ರವೆ ಹೂವಿನ ಕಂಪು, ಚೆಲುವು ಪೂರ್ಣಪ್ರಮಾಣದಲ್ಲಿ ಅಭಿವ್ಯಕ್ತಗೊಳ್ಳುವುದು....

ಆಧ್ಯಾತ್ಮದ ನಮ್ಮ ಮಾನಸ ಪೂಜೆಯಲ್ಲಾಗುವಾಗ  ಈ ಹೂಗಳೆಂದರೆ ಏನು ?
ಮಹಾಭಾರತದ ಒಂದು ಮಾತು ಇದಕ್ಕೆ ಪುಷ್ಟಿಕೊಡುತ್ತದೆ...

"ಭಾವಾಷ್ಟ ಪುಷ್ಪವಿಧಿನಾ ಹರಿಮರ್ಚಯಾಮಿ"...

ನಮ್ಮ ಬಗೆಯ ಸಾತ್ವಿಕ ಭಾವಗಳೆ ಹೂವುಗಳು. ಇಂಥ ಎಂಟು ಬಗೆಯ ಹೂವುಗಳಿಂದ ಭಗವಂತನನ್ನು ಆರಾಧಿಸಬೇಕು ಅನ್ನುತ್ತದೆ ಮಹಾಭಾರತ...

ಹೂವುಗಳಿಗೆ ಇನ್ನೊಂದು ಹೆಸರು "ಸುಮನಸ್" ಅಂತ.. ನಮ್ಮ ಮನಸ್ಸು ಸುಮನಸ್ ಆದಾಗ, ಮನದ ಎಂಟು ಬಗೆಯ ಸದ್ಭಾವಗಳೇ ಆ ಎಂಟು ಹೂವುಗಳಾಗುತ್ತವೆ....

ಅಹಿಂಸಾ ಪ್ರಥಮಂ ಪುಷ್ಪಂ
ಪುಷ್ಪಂ ಇಂದ್ರಿಯ ನಿಗ್ರಹಃ |
ಸರ್ವಭೂತದಯಾ ಪುಷ್ಪಂ
ಕ್ಷಮಾ ಪುಷ್ಪಂ ವಿಶಿಷ್ಯತೇ |
ಜ್ಞಾನ ಪುಷ್ಪಂ ತಪಃ ಪುಷ್ಪಂ
ಧ್ಯಾನ ಪುಷ್ಪಂ ಚ ಸಪ್ತಮಮ್ |
ಸತ್ಯಂ ಚೈವಾಷ್ಟಮಂ ಪುಷ್ಪಂ
ಏಭಿಸ್ತುಷ್ಯತಿ ಕೇಶವಃ ||

ಅಹಿಂಸೆಯೇ ಮೊದಲ ಹೂವು. ಕಾಯದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಪರರಿಗೆ ಕೇಡು ಬಗೆಯದಿರುವುದೇ ಅಹಿಂಸೆ...

ಇಂದ್ರಿಯನಿಗ್ರಹ ಎರಡನೆಯ ಹೂವು...

ಕೆಟ್ಟ ವಿಷಯಗಳತ್ತ ನಮ್ಮ ಇಂದ್ರಿಯಗಳು ಸುಳಿಯದಂತೆ ನಿಯಂತ್ರಣಗೊಳಿಸುವುದು...

ಎಲ್ಲ ಪ್ರಾಣಿ-ಪಕ್ಷಿಗಳತ್ತ ತೋರುವ ದಯೆಯೇ ಮೂರನೆಯ ಹೂವು...

ಅಂದರೆ, ಭಗವಂತನ ಸೃಷ್ಟಿಯ ಒಂದು ಸಣ್ಣ ಕೀಟವನ್ನೂ ಅನುಕಂಪೆಯಿಂದ ಕಾಣುವುದೇ "ಸರ್ವಭೂತದಯಾ"...

"ಕ್ಷಮಾ" ಗುಣವೇ ನಾಲ್ಕನೇ ಹೂವು....

 ನಮಗೆ ಕೇಡು ಬಗೆದವರ ಮೇಲೂ ಸೇಡು ಬಗೆಯದ ದಿವ್ಯ ಸಹನೆಯೇ ಕ್ಷಮೆ... ಇದೇ ಹಿರಿಯ ಹೂವು....

ಭಗವಂತನ ಬಗೆಗೆ ಆಳವಾಗಿ ಅರಿಯಬೇಕೆಂಬ ಅಧ್ಯಾತ್ಮದ ಅರಿವೇ

"ಜ್ಞಾನವೆಂಬ" ಐದನೆಯ ಹೂವು....

ತಾತ್ವಿಕ ಸಂಗತಿಗಳನ್ನು ಮನನ ಮಾಡುತ್ತಾ ಆಳವಾದ ಚಿಂತನೆಗೆ ನಿರಂತರ ತೊಡಗಿಕೊಳ್ಳುವುದೇ "ತಪಸ್ಸೆಂಬ" ಆರನೆಯ ಹೂವು....

ಭಗವಂತನಲ್ಲಿ ನಿರಂತರ ಮನಸ್ಸನ್ನು ನೆಲೆಗೊಳಿಸುವುದೇ "ಧ್ಯಾನವೆಂಬ" ಏಳನೇ ಹೂವು....

ನಿಜವನ್ನರಿತು ನಿಜವನ್ನೇ ಆಡುವ, ನುಡಿದಂತೆ ನಡೆವ, ನಡೆದಂತೆ ನುಡಿವ ದೀಕ್ಷೆಯೇ (Talk the Walk and Walk the Talk ಅಂತಾರಲ್ಲ ಹಾಗೆ.... )   "ಸತ್ಯವೆಂಬ" ಎಂಟನೆಯ ಹೂವು...

ಇಂಥ ಹೂವುಗಳ ಅರ್ಚನೆಯಿಂದ (ಕೇಶವ) ಭಗವಂತ ಸಂತುಷ್ಟನಾಗುತ್ತಾನೆ.... ಇವೇ ಎಂಟು ಭಾವಗಳು ನಮ್ಮ ಮನಸ್ಸು ಸತ್ಯ ಪ್ರಚುರವಾದಾಗ ಅರಳುವ ಹೂವುಗಳು ಅಥವಾ  ಅಧ್ಯಾತ್ಮದ ಮಲ್ಲಿಗೆ, ಮಂದಾರ, ಜಾಜಿ, ಪಾರಿಜಾತ, ನಂದಿಬೆಟ್ಟಲು, ಪುನ್ನಾಗ, ಕಮಲ, ಕಲ್ಹಾರಗಳು...

ಸತ್ವದ ಗುಣ ಬೆಳಕು, ಪ್ರಕಾಶ ಅದಕೆಂದೆ ಬಿಳಿಯ ಹೂವುಗಳು... ಭಕ್ತಿಯ ಕಂಪು ತುಂಬಿದ ಪರಿಮಳದ ಹೂವುಗಳು... ಇಂಥಾ ಸದ್ಭಾವದ ಬದುಕೇ ಭಗವಂತನಿಗೆ ನಾವು ಮಾಡಬೇಕಾದ "ಪುಷ್ಪಾರ್ಚನೆ"....

ಇಂಥಾ ಅಧ್ಯಾತ್ಮದ ಸತ್ಪಥದಲ್ಲಿ ನಮ್ಮನ್ನು ಸಾಧನೆಯತ್ತ ಕೊಂಡಯ್ಯಲು ನಮ್ಮ ಇಂದ್ರಿಯಗಳಲ್ಲಿದ್ದು ಇಂಥಾ ಪುಷ್ಪಗಳನ್ನು ಹಿಡಿದು ನಿಂತ ಸುರರೇ ತತ್ವಾಭಿಮಾನಿ ದೇವತೆಗಳು ಮತ್ತು ಜೀವ ಕಲೆಯ ಅಭಿಮಾನಿಯಾದ ಮುಖ್ಯ ಪ್ರಾಣದೇವರು...

ಆದ್ದರಿಂದಲೇ, ದಾಸರು ಹಾಡಿದರು "ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ ಸುರರು ತಂದಿಹರಯ್ಯ "..

"ನಾನು ಮಾಡುತ್ತೇನೆ" ಎನ್ನುವುದು ಅಹಂಕಾರದ ಮಾತು "ಸುರರು ನನ್ನಿಂದ ಮಾಡಿಸುತ್ತಿದ್ದಾರೆ" ಎನ್ನುವುದು ಸಾತ್ವಿಕ ಉಪಾಸನೆ... ಸುರರು ನನ್ನೊಳಗಿದ್ದು ನನಗಾಗಿ ದೇವರಿಗೆ ಹೂವಿನ ಪೂಜೆ ಸಲ್ಲಿಸುತ್ತಿದ್ದಾರೆ, ತನ್ಮೂಲಕ ನನ್ನಿಂದ ಪೂಜೆ ಮಾಡಿಸುತ್ತಿದ್ದಾರೆ" ಎಂಬ ಅರಿವು ಇರಬೇಕು...

ಸರ್ವೇಂದ್ರಿಯಾಭಿಮಾನಿಸ್ಥ ಮುಖ್ಯಪ್ರಾಣಸ್ಥ ವಿಷ್ಣುನಾ |
ಪ್ರೇರಿತಃ ಶ್ರೀಶತುಷ್ಟ್ಯರ್ಥಂ ಕರಿಷ್ಯೇ ಕರ್ಮ ಚಾಖಿಲಮ್ ||

(ಇಂದ್ರಿಯಾಭಿಮಾನಿಗಳ ಒಳಗೆ ಮುಖ್ಯಪ್ರಾಣ ನಿಯಾಮಕನಾಗಿದ್ದಾನೆ. ಅವನೊಳಗೆ ಅವನಿಗೂ ನಿಯಾಮಕನಾಗಿ ನಾರಾಯಣನಿದ್ದಾನೆ. ಅವನ ಪ್ರೇರಣೆಯಿಂದಲೆ, ಅವನು ಪ್ರೀತನಾಗಲಿ ಎಂದೆ, ಅವರೆಲ್ಲ ಪ್ರೇರಿಸಿದಂತೆ ನಾನು ಕರ್ಮಗಳನ್ನು ಮಾಡುತ್ತೇನೆ...) ಈ ಅನುಸಂಧಾನವನ್ನು ದಾಸರು ತೋರಿಸಿಕೊಟ್ಟಿದ್ದಾರೆ....

ಮತ್ತೆ ದಾಸರು ಭಗವಂತನನ್ನು ಇಲ್ಲಿ "ಸುಜನರೊಡೆಯ" ಅಂತ ಕರೆದಿದ್ದಾರೆ.. ಇದರ ಉದ್ದೇಶವೇನು ? ವಾಸ್ತವವಾಗಿ ಸುಜನರಿಗೂ, ದುರ್ಜನರಿಗೂ ಅವನೇ ಒಡೆಯ..

ಯಾರ ಮನಸ್ಸು "ಸುಮನಸ್ಸೋ" ಅವರು ಸುಜನರು. ಯಾರ ಮನಸ್ಸಿನಲ್ಲಿ ಹೊಲಸು ತುಂಬಿದೆಯೋ ಅವರು ದುರ್ಜನರು..  
ಮನಸ್ಸಿನಲ್ಲಿ ಕೊಳೆ ತುಂಬಿರುವಾಗ ಅವರ ಭಾವ ಸದ್ಭಾವ ಆಗಲಾರದು.. ಅಂಥವರು ಭಾವ ಪುಷ್ಪಗಳಿಂದ ಪೂಜಿಸಲಾರರು.. ದುರ್ಭಾವದ ಪೂಜೆಯನ್ನು ದೇವರು ಸ್ವೀಕರಿಸುವುದಿಲ್ಲ... ಆದ್ದರಿಂದ ಭಗವಂತ ಸುಮನಸರ ಒಡೆಯ. "ಸುಜನರೊಡೆಯ"...

"ಅರವಿಂದಲೋಚನನೆ, ಕೋಳಿ ಕೂಗಿತು ಕೇಳು ಪುರಂದರವಿಠಲನೇ ಬೆಳಗಾಯಿತು"...

ಅಂತರಂಗದಲ್ಲಿ ಭಗವಂತನ ರೂಪವನ್ನು ಭಾವ ಪುಷ್ಪಗಳಿಂದ ಅರ್ಚಿಸಿದ ದಾಸರು ಪಾದಾದಿಕೇಶಾಂತ ಭಗವಂತನ ದರ್ಶನದ ಬಯಕೆಯಿಂದ, ಮೆಲ್ಲನೆ ತಲೆಯೆತ್ತಿ ಕಣ್ಣೆತ್ತಿ ನೋಡುತ್ತಾರೆ...

ಭಕ್ತನ ಮೇಲಣ ಮಮತೆಯಿಂದ ಭಗವಂತ ಅರಳಿನಿಂತ ತನ್ನ ತಾವರೆಗಣ್ಣುಗಳಿಂದ ಭಕ್ತನ ಮೇಲೆ ಬೀರಿದ ಕೃಪಾದೃಷ್ಟಿ ದಾಸರಿಗೆ ಅಭಯರಕ್ಷೆಯಾಗಿ ಗೋಚರವಾಗುತ್ತದೆ... 
ಆಗ ದಾಸರು ನುಡಿದ ಸಾಲುಗಳಿವು...

ಭಗವಂತ ಅರವಿಂದಲೋಚನ. ಅಂದರೆ ತಾವರೆಗಣ್ಣಿನ ಸುಂದರ ಮೂರ್ತಿ... ಉಪನಿಷತ್ತು ಕೂಡ ಹೀಗೇ ಹೇಳಿತು - "ತಸ್ಯ ಯಥಾ ಕಪ್ಯಾಸಂ ಪುಂಡರೀಕಮೇವಮಕ್ಷಿಣೀ".... ಅಂದರೆ, ನೀರಿನಲ್ಲಿ ಬೇರುಬಿಟ್ಟ ಹಸಿ ತಾವರೆಯೆಸಳಿನಂತೆ ಅವನ ಕಣ್ಣುಗಳು ರಸಸ್ಯಂದಿಯಾಗಿ ಸುಂದರವಾಗಿವೆ...

"ಅರವಿಂದ ರಾತ್ರಿಯ ಹೊತ್ತು ಮೊಗ್ಗಾಗಿ ಮುಚ್ಚಿಕೊಂಡು ಸೂರ್ಯೋದಯವಾದಾಗ ಅರಳಿಕೊಳ್ಳುತ್ತದೆ... ಭಗವಂತನೂ ಅರವಿಂದಲೋಚನ ಎಂದ ಮೇಲೆ  ಭಕ್ತರ ಬಗೆಯೊಳಗೆ ಜ್ಞಾನಸೂರ್ಯನ ಉದಯವಾಗಲೇ ಬೇಕಲ್ಲವೆ... ಹೀಗೆ "ಅರವಿಂದಲೋಚನ" ಎನ್ನುವುದು ಭಗವಂತನ ದೃಷ್ಟಿಯಲ್ಲಿ ತುಂಬಿದ ಕೃಪಾರಸ ಪೂರವನ್ನೂ , ಅನುಗ್ರಹೋನ್ಮುಖತೆಯನ್ನೂ ಸೂಚಿಸುವ ಪದ....

ಮುಂದೆ, ವಾತ್ಸಲ್ಯದ ಮಾತುಗಳಿಂದ ಮುದ್ದು ಮಕ್ಕಳನ್ನು ಮಮತಾ ಮಯಿ ತಾಯಿ ತಟ್ಟಿ ಎಬ್ಬಿಸುವಂತೆ ದಾಸರೂ ತನ್ನ ಹೃದಯ ತೊಟ್ಟಿಲಲ್ಲಿ ಮಲಗಿದ ಅಪ್ರಾಕೃತ ಶಿಶು "ಪ್ರಾಜ್ಞರೂಪೀ" ಭಗವಂತನನ್ನು ಏಳುವಂತೆ ರಮಿಸುತ್ತಾರೆ  - "ಕೋಳಿ ಕೂಗಿತು ಕೇಳು"....

ಹೊರಗಿನ ಅರ್ಥ ಸ್ಪಷ್ಟ... ಬೆಳಗಾಯಿತು ಎಂದು ಕೋಳಿಗೂ ತಿಳಿದಿದೆ... ಮನುಷ್ಯನಿಗೆ ತಿಳಿಯೋದು ಬೇಡವೆ ?
ಒಳಗೆ ಬೆಳಕಾದಾಗ ಒಳಗೂ ಕೋಳಿ ಕೂಗುತ್ತದೆ. ಒಳಬಗೆಯಲ್ಲಿ , ಹೃದಯದಲ್ಲಿ ಭಗವಂತ ನೆಲೆಸಿದ್ದಾನೆ. ಪ್ರಾಜ್ಞ ರೂಪದಿಂದ ಜೀವನಿಗೆ ನಿದ್ರೆ ಬರಿಸಿ ಪವಡಿಸಿದ್ದಾನೆ... ಜ್ಞಾನೋದಯವಾದಾಗ ಬೆಳಕು ಹರಿಯ ತೊಡಗಿದೆ... ಭ್ರೂಮಧ್ಯದ ಆಜ್ಞಾಚಕ್ರದಲ್ಲಿ ಉಷೆಯ ಕೆಂಪು ಮೂಡಿದೆ. ಹೃದಯದ ಅನಾಹತ ಚಕ್ರದಲ್ಲಿ ಅನಾಹತಧ್ವನಿಯ ಕೋಳಿ ಕೂಗುತ್ತಿದೆ... ಅದೇ Non-vibrative Sound... ಮೂಲಾಧಾರದಿಂದ ಹೊರಟ

ಧ್ವನಿ 'ಪರಾ' ಆಗಿ, 'ಪಶ್ಯಂತಿ' ಆಗಿ , ಹೃದಯ ಮಧ್ಯದಲ್ಲಿ 'ಮಧ್ಯಮಾ' ಆಗಿ ನಿನದಿಸುವ ನಾದ... ಈ ಅನಾಹತದ ನಾದ ಪುರಂದರದಾಸರಿಗೆ ಕೇಳಿಸಿತು. ಈ ಅಂತರ್ನಾದದ ಅನುಭವದ ಸಂತೋಷವನ್ನು ಅವರು ಭಗವಂತನ ಮುಂದೆ ತೋಡಿಕೊಳ್ಳುತ್ತಾರೆ : "ಕೋಳಿ ಕೂಗಿತು ಕೇಳು"....

ಆದ್ದರಿಂದ ಇನ್ನು ಸಹಸ್ರಾರದಲ್ಲಿ ಸೂರ್ಯೋದಯಕ್ಕೆ ಹೆಚ್ಚು ಹೊತ್ತು ಕಾಯಬೇಕಾಗಿಲ್ಲ.... ಅದೂ ಆಗಿಯೇ ಬಿಟ್ಟಿತು :  

"ಪುರಂದರ ವಿಠಲನೆ ಬೆಳಗಾಯಿತು"...

ಪುರಂದರದಾಸರಿಗೊಲಿದ ವಿಠ್ಠಲನೆ ಪುರಂದರವಿಠಲ... 'ಪುರ' ಎಂದರೆ ದೇಹ ಕೂಡ ಹೌದು. ದೇಹ ಬಂಧನವನ್ನು ಕಳಚುವುದರಿಂದ ಪುರಂದರನಾದ ವಿಠ್ಠಲನೇ  "ಪುರಂದರ ವಿಠ್ಠಲ". ಗುರು ವ್ಯಾಸತೀರ್ಥರು ದಾಸರಿಗೆ ಕೊಟ್ಟ ಪವಿತ್ರ ಮುದ್ರಿಕೆ ಇದು...

"ವಿಠ್ಠಲ" ಭಗವಂತನ ಪ್ರತ್ಯೇಕ ರೂಪವಲ್ಲ , ಶ್ರೀನಿವಾಸನೂ ಒಂದು ಅವತಾರವಲ್ಲ... ಕೃಷ್ಣನೇ ವಿಠ್ಠಲ, ಕೃಷ್ಣನೇ ಶ್ರೀನಿವಾಸ. ಪಂಢರಪುರದ ಶ್ರೀನಿವಾಸನೇ ವಿಠ್ಠಲ.  ತಿರುಪತಿಯ ವಿಠ್ಠಲನೇ ಶ್ರೀನಿವಾಸ...

ಇದು ಕೃಷ್ಣಾವತಾರದ ರೂಪವೇ ಎಂದು ಸೂಚಿಸುವುದಕ್ಕಾಗಿಯೇ ಈ ಹಾಡಿನ ಮೊದಲನೆಯ ಸೊಲ್ಲಿನಲ್ಲಿ "ವಾಸುದೇವನೆ" ಎಂಬ ಸಂಬೋಧನೆ ಬಂದಿದೆ... ವಸುದೇವ ತನಯನಾದ ಶ್ರೀಕೃಷ್ಣನೇ ವೇಂಗಡದ ಶ್ರೀನಿವಾಸ ಎನ್ನುವುದು ಇಲ್ಲಿ ಸ್ಪಷ್ಟ... ಹಾಗೇ ಬಾಲಕೃಷ್ಣನ ಲೀಲೆಯನ್ನು ನೆನಪಿಸಲು ಬಂದ ಇನ್ನೊಂದು ಸಾಲು "ಲೇಸಾಗಿ ಕೆನೆಮೊಸರು ಬೆಣ್ಣೆಯನೆ ಮೆದ್ದು"...

ವಿಠ್ಠಲ ಎನ್ನುವುದು ಕೃಷ್ಣನಿಗೆ ಅನುಭಾವಿಗಳಿಟ್ಟ ಹೆಸರು... ಮಹಾರಾಷ್ಟ್ರದಲ್ಲಿ ಇವನು ಪ್ರೀತಿಯ "ವಿಟ್ಟೂ", "ವಿಠೋಬ" ಆದರೆ ಕನ್ನಡ ದಾಸರ ಕೈಯಲ್ಲಿ ವಿಠಲ ಆದ....
ಸಂಸ್ಕೃತ ಪಂಡಿತರ ಕೈಯಲ್ಲಿ "ವೇಂಗಡ" "ವೇಂಕಟ" ಆದಂತೆ, ವಿಠಲ "ವಿಠ್ಠಲ"ನಾದ...

ವಿದ್ ಅಂದರೆ "ಜ್ಞಾನ"... ಜ್ಞಾನದ ಸ್ಥಲವೆ, ಹೃದಯ ಮಂದಿರವೆ "ವಿತ್ ಸ್ಥಲ" - ವಿಠ್ಠಲ... ಹೃದಯ ಮಂದಿರದಲ್ಲಿ ನೆಲೆಸಿರುವ ಭಗವಂತನೆ ನಿಜವಾದ "ವಿಠ್ಠಲ"... ಇದು ಅನುಭಾವದ ನೆಲೆಯಲ್ಲಿ ಗೋಚರವಾಗುವ ಅರ್ಥ...

"ಅರವಿಂದಲೋಚನನೆ , ಕೋಳಿ ಕೂಗಿತು ಕೇಳು....." - ಇನ್ನೊಂದು ನೆಲೆಯಿಂದ ನೋಡಿದಾಗ ಹೃದಯರಂಗದಲ್ಲಿರುವ ವಿಠ್ಠಲನೆ ಪ್ರಾಜ್ಞ. ಲೋಚನದಲ್ಲಿರುವ ವಿಶ್ವನೆ ಅರವಿಂದಲೋಚನ... ದಾಸರಿಗೆ ಅಪರೋಕ್ಷಾನುಭೂತಿಯ ಕೊನೆಯ ಸೂರ್ಯೋದಯದ ಪ್ರಾರ್ಥನೆಯ ಜತೆಗೆ, ನಮ್ಮ ಬದುಕಿನ ಅಸ್ಥಿರತೆಯ ಎಚ್ಚರ - ಕಾಲ ಮೀರುವ ಮುನ್ನ ಭಗವಂತನ ದರ್ಶನದ ಬಗೆಗಿನ ಕಾತರವೂ ಈ ಕೊನೆಯ ಸಾಲುಗಳಲ್ಲಿ ತುಂಬಿದೆ..

ಕಾಲಪುರುಷನ ಕೋಳಿ ಕೂಗುತಿದೆ. ಆ ಕರೆಗೆ ಪ್ರತಿಯೊಬ್ಬ ಜೀವನೂ ಓಗೊಡಲೇಬೇಕು.. ಆದ್ದರಿಂದ ಓ "ಪುರಂದರವಿಠ್ಠಲನೇ" ನೀನು ಬೇಗನೇ ಎದ್ದು ಬರಬೇಕು. ಈ ದೇಹ ಬಿದ್ದು ಹೋಗುವ ಮುನ್ನ ನಿನ್ನ ಅರಿವಿನ ಬೆಳಕಾಗಬೇಕು.... ಆದ್ದರಿಂದಲೇ ಭಕ್ತನಿಗೆ ಸುಪ್ರಭಾತದ ಬಗೆಗೆ ಅಷ್ಟೊಂದು ಕಾತರ.. ಪುರಂದರದಾಸರಿಗೆ ಆ ಭಯವಿಲ್ಲ...  ಕೋಳಿ ಕೂಗುವ ಮುನ್ನ ಅವರಿಗೆ ಬೆಳಗಾಯಿತು.. ಆ ಸಂತಸದಲ್ಲೇ ಅವರು ಹಾಡಿದರು...

ಏಳಯ್ಯ ಬೆಳಗಾಯಿತು
ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಯೊಡೆಯ ವೇಂಕಟೇಶ...

ಹೀಗೆ ಅಧ್ಯಾತ್ಮದ ಅನೇಕ ಮಜಲುಗಳಲ್ಲಿ ತನ್ನನ್ನು ತೆರೆದುಕೊಳ್ಳುವ, ಹೃದಯವನ್ನು ಮುಟ್ಟುವ, ಆತ್ಮಸಾಕ್ಷಿಯನ್ನು ತಟ್ಟಿ ಎಬ್ಬಿಸುವ ಈ ಸುಪ್ರಭಾತದ ಹಾಡು ಪುರಂದರದಾಸರ
ಅನುಭಾವಗೀತೆಗಳ ಸಾಲಿನಲ್ಲಿ ಒಂದು ಅನರ್ಘ್ಯ ಮಾಣಿಕ್ಯ....ಅದಕೆಂದೇ ಗುರುಗಳಾದ ಶ್ರೀವ್ಯಾಸತೀರ್ಥರು ಪುರಂದರದಾಸರ ಹಾಡುಗಳನ್ನು "ಕನ್ನಡದ ಉಪನಿಷತ್ತುಗಳು" ಎಂದೇ ಕರೆದರು... ಅಂದರೆ, ಅನುಭಾವದ ಆಳ ಮಾತ್ರ ಪುರಂದರದಾಸರದ್ದು , ನುಡಿಸಿದ್ದು ಪುರಂದರ ವಿಠಲ... ದಾಸರು ಏನನ್ನು ಯೋಚಿಸಿ ಹಾಡಿದರೋ ಅದಷ್ಟೇ ಇದರ ಅರ್ಥವಾಗ ಬೇಕಾಗಿಯೂ ಇಲ್ಲ. ಯಾರ ಅನುಭಾವಕ್ಕೆ ಎಂಥ ಭಾವ ಸ್ಫುರಿಸಿತೋ ಅದೆಲ್ಲವೂ ಅದರದರೇ ಭಾವ.. ಅದರದೇ ಪ್ರಭಾವ..  ಅನುಭಾವದ ರೀತಿಯೇ ಹಾಗೆ. ಏಕೆಂದರೆ ಈ ಹಾಡೇ ಒಂದು ದೈವೀ ಸ್ಫುರಣೆ, ಆರ್ಷದರ್ಶನ. ಅದರಿಂದಲೇ ಉಪನಿಷತ್ತು...

🙏🌸🙏🌸🙏🌸🙏🌸🙏🌸🙏


[Contributed by Shri Harish BS]

No comments:

Post a Comment

ಗೋ-ಕುಲ Go-Kula