Sunday 7 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 63 - 66

ನಮೋ ಭಗವತೇ ತಸ್ಮೈ ವ್ಯಾಸಾಯಾಮಿತತೇಜಸೇ ।
ಯಸ್ಯ ಪ್ರಸಾದಾದ್ ವಕ್ಷ್ಯಾಮಿ ನಾರಾಯಣಕಥಾಮಿಮಾಮ್ ॥೨.೬೩॥

ಅಮಿತ ಶಕ್ತಿಯ ಷಡ್ಗುಣೈಶ್ವರ್ಯ ಸಂಪನ್ನ ವೇದವ್ಯಾಸರಿಗೆ ವಂದನೆ,
ಅವರ ಅನುಗ್ರಹದಿಂದ ಮಾಡುತ್ತಿದ್ದೇನೆ ನಾರಾಯಣ ಕಥೆಯ ನಿವೇದನೆ,
ಹೀಗೆಂದು ಆದಿಪರ್ವದಲ್ಲಿ ಸೂತಪುರಾಣಿಕರ ಅಂಬೋಣ,
ಸ್ಪಷ್ಟವಾಗುತ್ತದೆ ಇದರಿಂದ ಗ್ರಂಥಪ್ರತಿಪಾದ್ಯನವ ನಾರಾಯಣ.

ವಾಸುದೇವಸ್ತು ಭಗವಾನ್ ಕೀರ್ತಿತೋsತ್ರ ಸನಾತನಃ ।
ಪ್ರತಿಬಿಮ್ಬಮಿವಾsದರ್ಶೇ ಯಂ ಪಶ್ಯನ್ತ್ಯಾತ್ಮನಿ ಸ್ಥಿತಮ್ ॥೨.೬೪॥

ಮಹಾಭಾರತದಲ್ಲಿ ಷಡ್ಗುಣೈಶ್ವರ್ಯ ಸಂಪನ್ನ ಕೀರ್ತಿತನಾಗಿದ್ದಾನೆ ಸ್ವಾಮಿ,
ಅವನಲ್ಲವೇ ಎಲ್ಲರೊಳಗಿದ್ದು ಆಡಿಸುವ ಅಸಮಾನ್ಯ ಅಂತರ್ಯಾಮಿ,
ಅನಾದಿ ಕಾಲದಿಂದ ಜ್ಞಾನಿಗಳಿಂದ ಸ್ತುತಿಸಲ್ಪಡುವ ವೇದವೇದ್ಯ,
ಶ್ರೀಮನ್ನಾರಾಯಣನೇ ಮಹಾಭಾರತಕ್ಕೆ ಸರ್ವದಾ ಪ್ರತಿಪಾದ್ಯ.

ಮಹಾಭಾರತವದು ಸರ್ವಕಾಲಕ್ಕೂ ಪ್ರಸ್ತುತ,
ಜೀವ- ದೇವ -ಪ್ರಕೃತಿ- ಅದರಲ್ಲಿ ಪ್ರತಿಬಿಂಬಿತ,
ಮಹಾಭಾರತವೊಂದು ಅತ್ಯದ್ಭುತ ದರ್ಪಣ,
ಜ್ಞಾನದ ಕಣ್ಣಿಗೆ ಕಾಣುವ ಜೀವನದ ತೋರಣ.

ನಾಸ್ತಿ ನಾರಾಯಣಸಮಂ ನ ಭೂತಂ ನ ಭವಿಷ್ಯತಿ ।
ಏತೇನ ಸತ್ಯವಾಕ್ಯೇನ ಸರ್ವರ್ಥಾನ್ ಸಾಧಯಾಮ್ಯಹಮ್ ॥೨.೬೫॥

ಆದ್ಯನ್ತಯೋರಿತ್ಯವದತ್ ಸ ಯಸ್ಮಾದ್ ವ್ಯಾಸಾತ್ಮಕೋ ವಿಷ್ಣುರುದಾರಶಕ್ತಿಃ ।
ತಸ್ಮಾತ್ ಸಮಸ್ತಾ ಹರಿಸದ್ಗುಣಾನಾಂ ನಿರ್ಣೀತಯೇ ಭಾರತಗಾ ಕಥೈಷಾ॥೨.೬೬॥

ನಾರಾಯಣಗೆ ಸಮ ಈಗಿಲ್ಲ ಹಿಂದಿಲ್ಲ ಮುಂದೆ ಬರುವುದಿಲ್ಲ,
ಆ ಸತ್ಯವಾಕ್ಯದ ಸಮರ್ಥನೆಗೇ ಹೊರಟಿವೆ ಗ್ರಂಥದ ಪ್ರಮೇಯಗಳೆಲ್ಲ.

ಆದಿ ಮತ್ತು ಅಂತ್ಯ ಎರಡರಲ್ಲಿ,
ಸ್ಪಷ್ಟಪಡಿಸಿದ್ದಾರೆ ವೇದವ್ಯಾಸರಿಲ್ಲಿ,
ಸಮಸ್ತ ಶ್ರೀಮನ್ಮಹಾಭಾರತದ ದಿವ್ಯ ಕಥೆ,

ಶ್ರೀಹರಿಯ ಸದ್ಗುಣಗಳ ನಿರ್ಣಯ ಗಾಥೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula